ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆತ್ತರು– ನೀರು ಜತೆಯಾಗಿ ಹರಿಯದು

ಸಿಂಧೂ ನದಿ ನೀರು ಹಂಚಿಕೆ: ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಸ್ಪಷ್ಟ ಸಂದೇಶ
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಮತ್ತು ಪಾಕಿಸ್ತಾನ ನಡುವೆ 56 ವರ್ಷಗಳ ಹಿಂದೆ ಆಗಿರುವ ಸಿಂಧೂ ನದಿ ನೀರು ಒಪ್ಪಂದ ಪುನರ್‌ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ರಕ್ತ ಮತ್ತು ನೀರು ಜತೆಯಾಗಿ ಹರಿಯಲು ಸಾಧ್ಯವಿಲ್ಲ’ ಎಂದರು.

ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ತಾನ ಮೂಲದ ಉಗ್ರರು ಇತ್ತೀಚೆಗೆ ನಡೆಸಿದ ದಾಳಿಯಿಂದಾಗಿ ಎರಡೂ ದೇಶಗಳ ನಡುವಣ ಸಂಬಂಧ ಹದಗೆಟ್ಟಿದೆ. ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ನೀರು ಹಂಚಿಕೆ ಒಪ್ಪಂದವನ್ನು ಪ್ರಧಾನಿ ಮರುಪರಿಶೀಲಿಸಲು ನಿರ್ಧರಿಸಿದ್ದರು.

ಭಾರತದ ಮೂಲಕ ಹರಿದು ಪಾಕಿಸ್ತಾನಕ್ಕೆ ಹೋಗುವ ಮತ್ತು ಆ ದೇಶದ ನಿಯಂತ್ರಣದಲ್ಲಿರುವ ಝೇಲಂ, ಚಿನಾಬ್‌ ಮತ್ತು ಸಿಂಧೂ ನದಿಗಳಲ್ಲಿನ ಭಾರತದ ಪಾಲಿನ ಸಂಪೂರ್ಣ ನೀರನ್ನು ಬಳಸಿಕೊಳ್ಳಲು ಸಭೆ ನಿರ್ಧರಿಸಿದೆ.

ಒಪ್ಪಂದದ ವಿವರಗಳನ್ನು ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ಸೂಚಿಸಲು ಅಂತರ ಸಚಿವಾಲಯ ಕಾರ್ಯಪಡೆ ರಚಿಸಲು ಪ್ರಧಾನಿ ಸೂಚಿಸಿದ್ದಾರೆ. ಇದನ್ನು ತುರ್ತಾಗಿ ನಡೆಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಂಧೂ ನದಿ ನೀರು ಆಯೋಗ ಈವರೆಗೆ 112 ಸಭೆಗಳನ್ನು ನಡೆಸಿದೆ. ಆದರೆ ಭಯೋತ್ಪಾದನೆಯಿಂದ ಮುಕ್ತವಾಗಿರುವ ವಾತಾವರಣದಲ್ಲಿ ಮಾತ್ರ ಆಯೋಗದ ಸಭೆ ನಡೆಯಲು ಸಾಧ್ಯ ಎಂದೂ ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.

ಮೂರೂ ನದಿಗಳ ನೀರನ್ನು ಜಲವಿದ್ಯುತ್‌, ನೀರಾವರಿ ಮತ್ತು ಸಂಗ್ರಹದ ಮೂಲಕ ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಅದರ ಜತೆಗೆ, 1987ರಲ್ಲಿ ಏಕಪಕ್ಷೀಯವಾಗಿ ಸ್ಥಗಿತಗೊಳಿಸಲಾದ ತುಲ್‌ಬುಲ್‌ ಜಲಸಾರಿಗೆ ಯೋಜನೆಯನ್ನು ಪುನರಾರಂಭಿಸುವ ಬಗ್ಗೆಯೂ ಯೋಚನೆ ಮಾಡಲು ನಿರ್ಧರಿಸಲಾಗಿದೆ. ಝೇಲಂ ನದಿಗೆ ಅಣೆಕಟ್ಟೆ ಕಟ್ಟಿ ವುಲ್ಲಾರ್‌ ಸರೋವರದಲ್ಲಿ ನೀರು ನಿಲ್ಲಿಸಿ ಜಲಸಾರಿಗೆಗೆ ಬಳಸುವುದು ಇದರ ಉದ್ದೇಶ.

ಸಿಂಧೂ ನದಿ ನೀರು ಒಪ್ಪಂದದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ಯಾಯವಾಗಿದೆ ಎಂಬ ಕೊರಗು ಅಲ್ಲಿನ ಜನರಲ್ಲಿ ಹಿಂದಿನಿಂದಲೂ ಇದೆ. ಹಾಗಾಗಿ ನೀರಾವರಿಗೆ ಲಭ್ಯ ಇರುವ ಗರಿಷ್ಠ ನೀರು ಬಳಸಿಕೊಳ್ಳುವ ನಿರ್ಧಾರ ಕಾಶ್ಮೀರದ ಜನರಿಗೆ ಖುಷಿ ಕೊಡಲಿದೆ.

ಒಪ್ಪಂದದ ವಿವರ:  ಪ್ರಧಾನಿ ಜವಾಹರಲಾಲ್‌ ನೆಹರೂ ಮತ್ತು ಪಾಕಿಸ್ತಾನ ಅಧ್ಯಕ್ಷ ಅಯೂಬ್ ಖಾನ್‌ 1960ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದ ಪ್ರಕಾರ, ಬಿಯಾಸ್, ರಾವಿ ಮತ್ತು ಸಟ್ಲೇಜ್‌ ನದಿಗಳ ನಿಯಂತ್ರಣ ಭಾರತಕ್ಕೆ ದೊರೆತರೆ, ಸಿಂಧೂ, ಜೇಲಂ ಮತ್ತು ಚಿನಾಬ್‌ ನದಿಗಳ ನಿಯಂತ್ರಣ ಪಾಕಿಸ್ತಾನದ ಪಾಲಾಯಿತು.

ನದಿ ಹರಿವಿನ ಮೇಲ್ಭಾಗದ ಪ್ರದೇಶವಾಗಿರುವ ಭಾರತ ನೀರು ಹಂಚಿಕೆಗೆ ಸಂಬಂಧಿಸಿ ಪಾಕಿಸ್ತಾನ ಜತೆ ಉದಾರವಾಗಿಯೇ ನಡೆದುಕೊಂಡಿದೆ.  ಆದರೆ ಉರಿ ದಾಳಿಯ ನಂತರ ಪರಿಸ್ಥಿತಿ ಬದಲಾಗಿದೆ.

ಒಪ್ಪಂದ ಯಾವ ರೀತಿ ಅನುಷ್ಠಾನಗೊಳ್ಳಬೇಕು ಎಂಬುದನ್ನು ಮರುಪರಿಶೀಲನೆಗೆ ಒಳಪಡಿಸುವುದಕ್ಕೆ ಇದು ಸಕಾಲ ಎಂದು ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

ಪಾಕ್‌ ಭಯೋತ್ಪಾದಕ ದೇಶ ಎಂದು ಘೋಷಿಸಿ: ಕಾಂಗ್ರೆಸ್‌ ಆಗ್ರಹ: ಪಾಕಿಸ್ತಾನವನ್ನು ‘ಭಯೋತ್ಪಾದಕ ದೇಶ’ ಎಂದು ಘೋಷಿಸುವುದಕ್ಕಾಗಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಭಾರತ ವಿಫಲವಾಗಿದೆ ಎಂದು ಕೇಂದ್ರ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್‌, ನೆರೆಯ ಪುಂಡ ದೇಶದ ವಿರುದ್ಧ ಸಂಪೂರ್ಣ ಆರ್ಥಿಕ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದೆ.

‘ಅಸಾಧಾರಣ ಸನ್ನಿವೇಶಗಳಲ್ಲಿ ಅಸಾಧಾರಣ ನಿರ್ಧಾರ ಕೈಗೊಳ್ಳುವುದು ಅಗತ್ಯ. ನೆನಪಿಡಿ, ಸೇನಾ ಸಂಯಮ ಎಂಬುದಕ್ಕೆ ಗುರಿರಹಿತ ನೀತಿ ಸಂವಾದಿಯಾದ ಅಲ್ಲ’ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ.

ಪಾಕಿಸ್ತಾನದ ಜತೆ ವಿದೂರ ಸಂಬಂಧ ಹೊಂದಿರುವ ಮತ್ತು ಆರ್ಥಿಕ ನೆರವು ನೀಡುತ್ತಿರುವ ದೇಶಗಳ ಮೇಲೂ ಭಾರತ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಚೀನಾ ಪಾತ್ರ ಏನು:  ಸಿಂಧೂ ನದಿ ನೀರು ಒಪ್ಪಂದದಲ್ಲಿ ಚೀನಾಕ್ಕೆ ಯಾವುದೇ ಪಾತ್ರ ಇಲ್ಲ. ಚೀನಾದಲ್ಲಿ ಹುಟ್ಟಿ ಅಸ್ಸಾಂ ಮೂಲಕ ಹರಿಯುವ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಿಸುವ ಕೆಲಸವನ್ನು ಚೀನಾ ಈಗಾಗಲೇ ಆರಂಭಿಸಿದೆ. ಈ ನದಿ ನೀರನ್ನು ಭಾರತ ಮತ್ತು ಚೀನಾ ಹಂಚಿಕೊಳ್ಳುತ್ತಿವೆ ಎಂದು ಮೂಲಗಳು ಹೇಳಿವೆ.

ಪಾಕ್‌ ತಕರಾರು:  ಕಿಶನ್‌ಗಂಗಾ ಜಲವಿದ್ಯುತ್‌ ಯೋಜನೆಗೆ 2010ರಲ್ಲಿ ಪಾಕಿಸ್ತಾನ ತಕರಾರು ತೆಗೆದು ಅಂತರ ರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ದೂರು ನೀಡಿತ್ತು. ನ್ಯಾಯಾಲಯ 2013ರಲ್ಲಿ ಭಾರತದ ಪರವಾಗಿ ತೀರ್ಪು ನೀಡಿತ್ತು.

ತುರ್ತು ವಿಚಾರಣೆಗೆ ನಕಾರ
ಭಾರತ ಮತ್ತು ಪಾಕಿಸ್ತಾನಗಳ ನಡುವೆ ಆಗಿರುವ ಸಿಂಧೂ ನದಿ ನೀರಿನ ಒಪ್ಪಂದಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

‘ಈ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಾದ ಅಗತ್ಯ ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವ ಪೀಠ ಹೇಳಿದೆ.

ಈ ಒಪ್ಪಂದ ಅಸಾಂವಿಧಾನಿಕ ಎಂದು ಘೋಷಿಸುವಂತೆ ವಕೀಲ ಎಂ.ಎಲ್. ಶರ್ಮ ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಪಾಕಿಸ್ತಾನ ಮೇಲೆ ಜಲ ಒತ್ತಡ
* ಜಲ ಸಂಪನ್ಮೂಲ, ವಿದೇಶಾಂಗ ವ್ಯವಹಾರ, ಇಂಧನ ಮತ್ತು ಹಣಕಾಸು ಸಚಿವಾಲಯದ ಪ್ರತಿನಿಧಿಗಳಿರುವ ಅಂತರ ಸಚಿವಾಲಯ ಸಮಿತಿ ರಚನೆ

* ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪಶ್ಚಿಮದ ನದಿಗಳಲ್ಲಿ (ಸಿಂಧೂ, ಚಿನಾಬ್‌ ಮತ್ತು ಝೇಲಂ) ಭಾರತಕ್ಕಿರುವ ಪಾಲಿನ ಪರಿಶೀಲನೆ ಸಮಿತಿಯ ಕೆಲಸ

* ಚಿನಾಬ್‌ ನದಿಗೆ ಮೂರು ಅಣೆಕಟ್ಟೆ (ಪಕಲ್‌ ದುಲ್‌, ಸವಾಲ್‌ಕೋಟ್‌ ಮತ್ತು ಬರ್ಸರ್‌) ನಿರ್ಮಾಣದ ಬಗ್ಗೆ ಪರಿಶೀಲನೆ

* ನೀರಾವರಿ ಉದ್ದೇಶಕ್ಕೆ ಬಳಸಬಹುದಾದ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹ

* 9.12 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ಹಕ್ಕು ಭಾರತಕ್ಕೆ ಇದೆ. ಮತ್ತೆ 4.2 ಲಕ್ಷ ಎಕರೆಗೆ ವಿಸ್ತರಿಸಲು ಅವಕಾಶ ಇದೆ

* ಈಗ 8 ಲಕ್ಷ ಎಕರೆಗೆ ಮಾತ್ರ ನೀರು  ಒದಗಿಸಲಾಗುತ್ತಿದೆ

* 18,600 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಭಾರತದ ಹಕ್ಕು

* 3,034 ಮೆಗಾವಾಟ್‌ ಈಗಿನ ಉತ್ಪಾದನೆ

* 2,526 ಮೆಗಾವಾಟ್‌ ವಿದ್ಯುತ್‌ ಯೋಜನೆಗಳು ನಿರ್ಮಾಣ ಹಂತದಲ್ಲಿ

* 5,846 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಯೋಜನೆಗಳು ಅನುಮೋದನೆ ಹಂತದಲ್ಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT