ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ

ಅಂತರರಾಷ್ಟ್ರೀಯ ವ್ಯಾಪಾರ ಮುನ್ನೋಟ ತಗ್ಗಿಸಿದ ಡಬ್ಲ್ಯುಟಿಒ
Last Updated 27 ಸೆಪ್ಟೆಂಬರ್ 2016, 19:51 IST
ಅಕ್ಷರ ಗಾತ್ರ

ಜಿನಿವಾ: ಅಂತರರಾಷ್ಟ್ರೀಯ ವಹಿವಾಟಿನ ಪ್ರಗತಿಯು ಎಂಟು ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು  ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ) ತನ್ನ ಮುನ್ನೋಟದಲ್ಲಿ ತಿಳಿಸಿದೆ.

ಈ ವರದಿಯು, 2014ರ ಡಿಸೆಂಬರ್‌ನಿಂದಲೂ ಋಣಾತ್ಮಕ ಮಟ್ಟದಲ್ಲಿರುವ ಭಾರತದ ವಿದೇಶಿ ವ್ಯಾಪಾರದ ಮೇಲೆ   ಮತ್ತಷ್ಟು ಪ್ರತಿಕೂಲ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

2016ನೇ ವರ್ಷಕ್ಕೆ ಈ ಮೊದಲು ನೀಡಿದ್ದ ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟಿನ ಪ್ರಗತಿಯ ಮುನ್ನೋಟವನ್ನು ಶೇ 2.8 ರಿಂದ ಶೇ 1.7ಕ್ಕೆ ತಗ್ಗಿಸಿದೆ. ಇದು 2008ರ  ಜಾಗತಿಕ ಆರ್ಥಿಕ ಹಿಂಜರಿತದ ನಂತರದ ಅತಿ ಕನಿಷ್ಠ ಮಟ್ಟದ ಪ್ರಗತಿಯಾಗಿದೆ.

2016ರಲ್ಲಿ ಅಂತರರಾಷ್ಟ್ರೀಯ ವ್ಯಾಪಾರವು ಶೇ 3.9ರಷ್ಟು ಪ್ರಗತಿ ಕಾಣಲಿದೆ ಎಂದು 2015ರ ಸೆಪ್ಟೆಂಬರ್‌ನಲ್ಲಿ ಅಂದಾಜು ಮಾಡಲಾಗಿತ್ತು. ಆ ನಂತರ 2016ರ ಏಪ್ರಿಲ್‌ನಲ್ಲಿ ನೀಡಿದ ವರದಿಯಲ್ಲಿ ಪ್ರಗತಿಯ ಪ್ರಮಾಣವನ್ನು ಶೇ 1.1 ರಷ್ಟು ತಗ್ಗಿಸುವ ಮೂಲಕ ಶೇ 2.8ರಷ್ಟು ಪ್ರಗತಿ ಕಾಣಲಿದೆ ಎಂದು ತಿಳಿಸಿತ್ತು.

ಆದರೆ ಈಗ ಬಿಡುಗಡೆ ಮಾಡಿರುವ ಪರಿಷ್ಕೃತ ವರದಿಯಲ್ಲಿ ಕೇವಲ ಶೇ 1.7ರಷ್ಟು ಪ್ರಗತಿ  ಕಾಣಲಿದೆ ಎಂದು ತಿಳಿಸಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಚೀನಾ, ಬ್ರೆಜಿಲ್‌ನಂತಹ ದೇಶಗಳ ಆರ್ಥಿ ವೃದ್ಧಿ ದರ (ಜಿಡಿಪಿ) ಮತ್ತು ವಿದೇಶಿ ವ್ಯಾಪಾರವು ಇಳಿಕೆ ಕಾಣುತ್ತಿರುವುದಷ್ಟೇ ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟು ಇಳಿಮುಖವಾಗಲು ಕಾರಣವಲ್ಲ.

ಬದಲಾಗಿ, 2014–15ರಲ್ಲಿ ಅತ್ಯುತ್ತಮ ಆಮದು ಪ್ರಗತಿ ಸಾಧಿಸಿದ್ದ ಉತ್ತರ ಅಮೆರಿಕ ದೇಶದ ಜಿಡಿಪಿ ಮತ್ತು ವ್ಯಾಪಾರವು ಆ ನಂತರ ಇಳಿಕೆ ಕಾಣುತ್ತಿದೆ. ಇದೂ ಸಹ ಪ್ರಭಾವ ಬೀರಿದೆ ಎಂದು ಡಬ್ಲ್ಯುಟಿಒ ಅಭಿಪ್ರಾಯಪಟ್ಟಿದೆ.

ಅಂತರರಾಷ್ಟ್ರೀಯ ವ್ಯಾಪಾರವು ಜಾಗತೀಕರಣಕ್ಕೆ ವಿರುದ್ಧವಾಗಿ ಪ್ರಗತಿ ಕಾಣುತ್ತಿರುವುದು ಆತಂಕಕ್ಕೆ ಎಡೆಮಾಡಿದೆ. ಪರಿಸ್ಥಿತಿ ಇನ್ನಷ್ಟು ಹದಗೆಡದೇ ಇರುವಂತೆ  ಎಚ್ಚರಿಕೆ ವಹಿಸಬೇಕಿದೆ.

ಇಲ್ಲವಾದರೆ ವ್ಯಾಪಾರದ ದೃಷ್ಟಿಯಿಂದಷ್ಟೇ ಅಲ್ಲದೆ, ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿಯೂ ಸಮಸ್ಯೆ ಎದುರಿಸಬೇಕಾಗುತ್ತದೆ  ಎಂದು ಡಬ್ಲ್ಯುಟಿಒ ಪ್ರಧಾನ ನಿರ್ದೇಶಕ ರಾಬರ್ಟೊ ಅಜಿವೆಡೊ ಅವರು ಎಚ್ಚರಿಕೆ ನೀಡಿದ್ದಾರೆ.

ಪರಿಷ್ಕೃತ ಮುನ್ನೋಟದಂತೆ 15 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವ್ಯಾಪಾರ ಪ್ರಗತಿ ಮತ್ತು ವಿಶ್ವದ ಜಿಡಿಪಿಯ ಅನುಪಾತವು 1:1ಕ್ಕಿಂತಲೂ ಕೆಳಕ್ಕೆ ಕುಸಿಯಲಿದೆ.

ಇದು ಅತ್ಯಂತ ನಿರಾಶಾದಾಯಕವಾದ ಸಂಗತಿವಾಗಿದೆ. ಅಲ್ಲದೆ, ವ್ಯಾಪಾರ ಮತ್ತು ಜಿಡಿಪಿ ಪ್ರಗತಿ ವ್ಯವಸ್ಥೆಗಳ ನಡುವೆ ಇರುವ ಸಂಬಂಧ ದುರ್ಬಲವಾಗಿರುವುದನ್ನೂ ತೋರಿಸುತ್ತಿದೆ ಎಂದಿದ್ದಾರೆ.

ವ್ಯಾಪಾರ ಮುನ್ನೋಟ
2017-1.8%
2016-1.7%

* ಅಂತರರಾಷ್ಟ್ರೀಯ ವ್ಯಾಪಾರವು ನಾಟಕೀಯ  ರೀತಿಯಲ್ಲಿ ಇಳಿಕೆ ಕಾಣುತ್ತಿರುವುದು ಎಲ್ಲಾ ದೇಶಗಳಿಗೂ ಎಚ್ಚರಿಕೆ ಸಂದೇಶವಾಗಿದೆ.
-ರಾಬರ್ಟೊ ಅಜಿವೆಡೊ, ಪ್ರಧಾನ ನಿರ್ದೇಶಕ, ಡಬ್ಲ್ಯುಟಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT