ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಸ್ಥಾನಕ್ಕೇರಿದ ಅಶ್ವಿನ್‌

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ದುಬೈ: ಭಾರತದ ಆಲ್‌ರೌಂಡರ್‌ ರವಿಚಂದ್ರನ್‌ ಅಶ್ವಿನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮಂಗಳವಾರ ಬಿಡುಗಡೆ ಮಾಡಿರುವ ನೂತನ  ಟೆಸ್ಟ್‌ ಬೌಲರ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಫ್‌ ಸ್ಪಿನ್ನರ್‌ ಅಶ್ವಿನ್‌ 225 ರನ್‌ ನೀಡಿ 10 ವಿಕೆಟ್‌ ಉರುಳಿಸಿದ್ದರು. ಈ ಮೂಲಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಸಾಧನೆಯೊಂದಿಗೆ ಅವರು ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್‌ಸನ್‌ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.

ದಕ್ಷಿಣ ಆಫ್ರಿಕಾದ ವೇಗಿ ಡೇಲ್‌ ಸ್ಟೇಯ್ನ್‌ ಅವರು ಈ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಅವರ ಖಾತೆಯಲ್ಲಿ 878 ಪಾಯಿಂಟ್ಸ್‌ ಇವೆ.
ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಅಶ್ವಿನ್‌ ಉತ್ತಮ ಸಾಮರ್ಥ್ಯ ತೋರಿದರೆ  ಸ್ಟೇಯ್ನ್‌ ಅವರನ್ನು ಹಿಂದಿಕ್ಕುವ ಸಾಧ್ಯತೆ ಇದೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಶ್ವಿನ್‌ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಮೂರರಿಂದ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದು ಆಸ್ಟ್ರೇಲಿಯಾದ ನಾಯಕ ಸ್ಟೀವನ್‌ ಸ್ಮಿತ್‌ (906) ಮೊದಲ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ನ ಎರಡೂ ಇನಿಂಗ್ಸ್‌ ಗಳಲ್ಲಿ ಅರ್ಧಶತಕ ಗಳಿಸಿದ್ದ ಚೇತೇಶ್ವರ ಪೂಜಾರ ಮತ್ತು ಮುರಳಿ ವಿಜಯ್‌ ಅವರು ಕ್ರಮವಾಗಿ ಜಂಟಿ 16 ಮತ್ತು 20ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆ.ಎಲ್‌. ರಾಹುಲ್‌ ಅವರು ಐದು ಸ್ಥಾನ ಬಡ್ತಿ ಹೊಂದಿದ್ದು 57ನೇ ಸ್ಥಾನ ಪಡೆದಿದ್ದಾರೆ. ರೋಹಿತ್‌ ಶರ್ಮಾ 54ರಿಂದ 52ನೇ ಸ್ಥಾನಕ್ಕೆ ಏರಿದ್ದಾರೆ.

ಭಾರತಕ್ಕೆ ಅಗ್ರಸ್ಥಾನಕ್ಕೇರುವ ಅವಕಾಶ: ನ್ಯೂಜಿಲೆಂಡ್‌ ವಿರುದ್ಧದ 500ನೇ ಟೆಸ್ಟ್‌ ಪಂದ್ಯದಲ್ಲಿ ಸ್ಮರಣೀಯ ಗೆಲುವು ಗಳಿಸಿರುವ ಭಾರತ ತಂಡಕ್ಕೆ ಟೆಸ್ಟ್‌   ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಕೂಡಿ ಬಂದಿದೆ.

ಶುಕ್ರವಾರದಿಂದ ಕೋಲ್ಕತ್ತದ ಈಡನ್‌ ಗಾರ್ಡನ್‌ನಲ್ಲಿ ಆರಂಭವಾಗುವ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಸಾರಥ್ಯದ ತಂಡ ಗೆಲುವಿನ ತೋರಣ ಕಟ್ಟಿದರೆ ಅಗ್ರಪಟ್ಟಕ್ಕೇರಲಿದೆ. 111 ಪಾಯಿಂಟ್ಸ್‌ ಗಳಿಸಿರುವ ಪಾಕಿಸ್ತಾನ ತಂಡ ಸದ್ಯ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT