ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಆರೋಗ್ಯ; ಇರಲಿ ಎಚ್ಚರ

ಮಾನಸಿಕ ಆರೋಗ್ಯ ಸಪ್ತಾಹ ಅಕ್ಟೋಬರ್‌ 4-10
Last Updated 30 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ದೇಹದ ಗಾಯಗಳಿಗೆ ಪ್ರಥಮ ಚಿಕಿತ್ಸೆ ನೀಡುವಂತೆಯೇ ಮನಸ್ಸಿನ ನೋವುಗಳಿಗೂ ಪ್ರಥಮ ಚಿಕಿತ್ಸೆ ನೀಡಬೇಕಾದ ಅಗತ್ಯದ ಬಗ್ಗೆ ಮನೋವೈದ್ಯಕೀಯ ಜಗತ್ತು ಚಿಂತನೆ ನಡೆಸುತ್ತಿದೆ. ಮಾನಸಿಕ ಆರೋಗ್ಯಕ್ಕೆ ನಾವು ಇಷ್ಟು ಮಹತ್ವ ನೀಡುವುದು ಏಕೆ? ಎಂಬ ಪ್ರಶ್ನೆ ಎದುರು ನಿಲ್ಲುತ್ತದಷ್ಟೆ.

ಇಬ್ಬರು ಸ್ನೇಹಿತರು, ಅಕ್ಕಪಕ್ಕದ ಮನೆಯವರು, ಒಂದೇ ರೀತಿಯ ವಿದ್ಯಾಭ್ಯಾಸ-ಉದ್ಯೋಗದ ಹಿನ್ನೆಲೆ, ಇಬ್ಬರೂ ಒಂದು ರಾತ್ರಿ ಹಠಾತ್ತನೆ ಎದೆ ನೋವೆಂದು ಆಸ್ಪತ್ರೆಗೆ ಬರುತ್ತಾರೆ. ಒಬ್ಬನಿಗೆ ‘ಹೃದಯಾಘಾತ’ ವೆಂದು ತತ್‌ಕ್ಷಣ ಚಿಕಿತ್ಸೆ ನೀಡಲಾಗುತ್ತದೆ. ಇನ್ನೊಬ್ಬನಿಗೆ ‘ಬರೀ ಟೆನ್ಷನ್ ಮಾಡಿಕೊಂಡಿದ್ದೀರಿ’ ಎಂದು ಮನೆಗೆ ಕಳುಹಿಸಲಾಗುತ್ತದೆ !

ಈ ಇಬ್ಬರು ಒಂದೇ ರೀತಿಯ ಹಿನ್ನೆಲೆಯ, ಒಂದೇ ಉದ್ಯೋಗ ಮಾಡುತ್ತಿರುವ, ಒಂದೇ ವಯಸ್ಸಿನವರು. ಒಂದೇ ರೀತಿಯ ‘ಆರೋಗ್ಯದ ಸಮಸ್ಯೆ’ ಯಿಂದ ಆಸ್ಪತ್ರೆಗೆ ಬಂದವರು. ಆದರೆ ಒಬ್ಬನಿಗೆ ಮಾತ್ರ ಸರಿಯಾದ ಚಿಕಿತ್ಸೆ ದೊರೆತದ್ದು. ಏಕೆಂದರೆ ಒಬ್ಬನಿಗೆ ಇದ್ದುದ್ದು ಹೃದಯದ ಕಾಯಿಲೆ.

ಇನ್ನೊಬ್ಬನಿಗೆ ಇದ್ದದ್ದು ಮಾನಸಿಕ ಕಾಯಿಲೆ. ಚಿಕಿತ್ಸೆಯ ಗುಣಮಟ್ಟದಲ್ಲಿ ಇರುವ ವ್ಯತ್ಯಾಸ ಮಾನಸಿಕ ಕಾಯಿಲೆಗಳಿಂದ ಜನರು ಏಕೆ ನರಳುತ್ತಾರೆ, ಏಕೆ ಸಾವಿಗೆ ತುತ್ತಾಗುತ್ತಾರೆ ಎಂಬುದರ ಕಾರಣಗಳಲ್ಲಿ ಪ್ರಮುಖವಾದದ್ದು.

‘ಮುಂದುವರಿದ’ ಎಂದುಕೊಳ್ಳುವ ರಾಷ್ಟ್ರಗಳಲ್ಲಿಯೂ ‘ಆಯುಷ್ಯ ನಿರೀಕ್ಷೆಯ ಅಂತರ’ - Life expectancy gap - ಸುಮಾರು  20 ವರ್ಷಗಳಷ್ಟು. ಅಂದರೆ  80 ವರ್ಷ ಜೀವಿಸಬೇಕಾದ ವ್ಯಕ್ತಿಗೆ ಮಾನಸಿಕ ಕಾಯಿಲೆ ಬಂದರೆ ಸರಿಯಾದ ಚಿಕಿತ್ಸೆ ಸಿಗದಿರುವ ಕಾರಣಕ್ಕಾಗಿ  60ವರ್ಷಗಳಷ್ಟೇ ಜೀವಿಸುತ್ತಾನೆ. ಇದಲ್ಲದೇ ಪರೋಕ್ಷವಾಗಿ, ಮಾನಸಿಕ ಕಾಯಿಲೆ ‘ಆತ್ಮಹತ್ಯೆ’ಯ ಮೂಲಕವೂ ಸಾವು ತರಬಹುದು.

ಇದು ಆಯುಷ್ಯದ ಬಗೆಗಿನ, ಸಾವಿನ ಬಗೆಗಿನ ಮಾತು. ಇನ್ನು ಜೀವನದ ಗುಣಮಟ್ಟದ ಬಗೆಗೆ ನೋಡೋಣ. ಇದನ್ನು ಅಳೆಯಲು ವಿಶ್ವ ಆರೋಗ್ಯ ಸಂಸ್ಥೆ DALY - Disability Adjusted life Years ಎಂಬ ಅಂಕಿ ಅಂಶವನ್ನು ಉಪಯೋಗಿಸುತ್ತದೆ.

ಅಂದರೆ ಇದು ನಮ್ಮ ಜೀವನದ ಗುಣಮಟ್ಟವನ್ನು, ನಮ್ಮ ಸಾಮರ್ಥ್ಯವನ್ನು ಅಳೆಯುತ್ತದೆ. ಖಿನ್ನತೆಗೆ ಒಳಗಾದ, ಮಾನಸಿಕ ಕಾಯಿಲೆಗಳಿಗೆ ಒಳಗಾದ ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಳ್ಳದ, ಸೌಲಭ್ಯಗಳು ಲಭ್ಯವಿರದ ಕಾರಣಗಳಿಂದ ಬೇರೆ ಕಾಯಿಲೆಗಳಿಗೆ ಹೋಲಿಸಿದರೆ, ಕಡಿಮೆ  ಗುಣಮಟ್ಟದ ಜೀವನವನ್ನು ಸವೆಸುತ್ತಾರೆ.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಂತೂ, ಮಾನಸಿಕ ಆರೋಗ್ಯ ಕ್ಷೇತ್ರ ಸಂಪನ್ಮೂಲಗಳ ಕೊರತೆಯಿಂದ ನರಳುತ್ತಿದೆ. ಸುಮಾರು  1.50.000 ಮನೋವೈದ್ಯರ ಅಗತ್ಯವಿರುವ ಕಡೆ ನಮ್ಮಲ್ಲಿ ಇರುವುದು ಕೇವಲ 3,000ವಷ್ಟೇ! ಒಮ್ಮೆ ಪ್ರಸಿದ್ಧ ಮನೋವೈದ್ಯನೊಬ್ಬನನ್ನು ಬಿ.ಬಿ.ಸಿ. ಸಂದರ್ಶಿಸುತ್ತಿತ್ತು.

ಸಂದರ್ಶನಕಾರ ಹೇಳಿದ: ‘ನೋಡಿ ನಿಮಗೆ ತುಂಬಾ ಕಡಿಮೆ ಸಮಯ ಇದೆ. ಒಂದೇ ವಾಕ್ಯದಲ್ಲಿ ಮನೋವೈದ್ಯಕೀಯದ ಇಂದಿನ ಸ್ಥಿತಿಯ ಬಗ್ಗೆ ಹೇಳಿ’. ಮನೋವೈದ್ಯನೆಂದ: ‘ಉತ್ತಮವಾಗಿದೆ (Good)’  ಅಂತ.

ಸಂದರ್ಶಕ ಹೇಳಿದ: ’ಅಯ್ಯೋ ಇಷ್ಟು ಕಡಿಮೆ? ಇನ್ನೊಂದ್ಸಲ ಹೇಳಿ’. ಅದಕ್ಕೆ ಮನೋವೈದ್ಯ ಹೇಳಿದ:  ‘ಉತ್ತಮವಾಗಿಲ್ಲ (not good)’ ಅಂತ!. ಸಂದರ್ಶಕ ಹೇಳಿದ: ‘ಪರವಾಗಿಲ್ಲ ಸರ್, ಇನ್ನೊಂದುಚೂರು ಉದ್ದ ಆಗಲಿ . ಆಗ ಮನೋವೈದ್ಯ ಹೇಳಿದ್ದು ಏನು? ‘ಎಷ್ಟು ಆಗಬೇಕೋ ಅಷ್ಟು ಉತ್ತಮವಾಗಿಲ್ಲ! (not good enough)’ ಅಂತ!!

ಹಾಗಾಗಿ ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ಪರಿಕಲ್ಪನೆಯೇ ಬದಲಾಗಬೇಕಾದ ತುರ್ತು ಅಗತ್ಯವಿದೆ. ಮಾನಸಿಕ ಆರೋಗ್ಯವನ್ನು ಆರೋಗ್ಯದ ‘ಹೊರಗೆ’ ವಿಶೇಷವಾಗಿ, ಬಹು ಸಮಯ ವಿಚಿತ್ರವಾಗಿ ನೋಡುವುದರ ಬದಲು ಮಾನಸಿಕ ಆರೋಗ್ಯವನ್ನು ‘ದೇಹ’ದ ಒಂದು ಭಾಗವಾಗಿಯೇ ನೋಡಲೇಬೇಕಾದ ಆವಶ್ಯಕತೆಯಿದೆ.

ಅದು ಸಂಶೋಧನೆಗಳಿಂದ ನಿರೂಪಿಸಲ್ಪಟ್ಟಿರುವ ಅಂಶವೂ ಹೌದು. ‘ಮನಸ್ಸು’ ಎಂಬುದು ಮೆದುಳಿನ ಒಂದು ಭಾಗವೇ ಆಗಿದೆ. ಮಾನಸಿಕ ಕಾಯಿಲೆಗಳು ಮೆದುಳಿಗೆ ಸಂಬಂಧಿಸಿದ ಇತರ ಕಾಯಿಲೆಗಳಂತೆಯೇ. ಆದರೆ ಅವು ಅಭಿವ್ಯಕ್ತವಾಗುವ ರೀತಿ ನಡವಳಿಕೆಯಲ್ಲಿ, ವ್ಯಕ್ತಿಯ ಭಾವನೆಗಳಲ್ಲಿ ಕಾಣುತ್ತವೆ.

ಮೆದುಳು ದೇಹದ ಎಲ್ಲ ಭಾಗಗಳನ್ನೂ ನಿಯಂತ್ರಿಸುವುದರಿಂದ ಯಾವುದೇ ಭಾಗದ ತೊಂದರೆಯಲ್ಲಿಯೂ, ಆ ಭಾಗದಲ್ಲಿಯೇ ತೊಂದರೆ ಕಾಣದಿದ್ದರೆ ಮೆದುಳಿನ ಭಾವನೆ-ಯೋಚನೆಗಳಲ್ಲಿ ಸಮಸ್ಯೆಗಳಿರಲು ಸಾಧ್ಯವಿದೆ.

ಅಂದರೆ ಎದೆನೋವು ಬಂದಾಕ್ಷಣ ‘ಇಸಿಜಿ’ ಮಾಡಿ, ಅದು ‘ನಾರ್ಮಲ್’ ಎಂದಾದರೆ, ಎದೆನೋವಿಗೆ ಚಿಕಿತ್ಸೆಯೇ ಬೇಡವೆಂದು ಅರ್ಥವಲ್ಲ. ಬದಲಿಗೆ ಎದೆನೋವಿನ ಮೂಲ ಮೆದುಳು-ಮನಸ್ಸಿನ ಯೋಚನೆಗಳಲ್ಲಿರಬಹುದು ಎಂಬುದನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಿದೆ. ಅದರ ಪ್ರಥಮ ಚಿಕತ್ಸೆಯೂ ತತ್‌ಕ್ಷಣವೇ ಜರುಗಬೇಕು.

ಹಾಗಾಗದೆ ಅದನ್ನು ನಿರ್ಲಕ್ಷಿಸಿ, ಹಾಗೇ ಮುಂದುವರಿದರೆ, ಆ ಒತ್ತಡ ಮುಂದೊಂದು ದಿನ ದೇಹದ ಹಲವು ಕಾಯಿಲೆಗಳಿಗೂ, ಆತ್ಮಹತ್ಯೆಗೂ ದಾರಿಯಾಗಬಹುದು.

30 ವರ್ಷಗಳಷ್ಟು ಹಿಂದೆ ಜಗತ್ತಿನ ರಾಷ್ಟ್ರಗಳೆಲ್ಲವೂ ‘ಆಲ್ಮ-ಆಟಾ’ ದಲ್ಲಿ ಸೇರಿ ಒಂದು ಮಹತ್ವದ ಘೋಷಣೆ ಮಾಡಿದ್ದವು. ಅದೆಂದರೆ ’Health for all by 2000’ - 2000ದ ವೇಳೆಗೆ ‘ಎಲ್ಲರಿಗೂ ಆರೋಗ್ಯ’ ಎಂಬುದು.

ಇದರ ಅಂಗವಾಗಿ ಒಂದಿಷ್ಟು ಗುರಿಗಳನ್ನೂ ಗೊತ್ತು ಮಾಡಿದ್ದವು.  2000ಮುಗಿದು 16 ವರ್ಷಗಳೇ ಕಳೆದರೂ ಆ ಗುರಿಗಳ ಹತ್ತಿರವಿನ್ನೂ ನಮಗೆ ತಲುಪಲಾಗಿಲ್ಲ. ಆದರೆ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಪರ ಬದಲಾವಣೆಗಳನ್ನು ನಾವು ಮಾಡಿದ್ದೇವೆ.

ಹಲವು ಕಾಯಿಲೆಗಳನ್ನು ‘ಗುಣಮುಖ’ ದ ಹಂತಕ್ಕೆ ತಲುಪಿಸಿದ್ದೇವೆ, ಇನ್ನು ಬಹಳಷ್ಟನ್ನು ‘ನಿಯಂತ್ರಣ’ ಎಂಬ ತಲೆಬರಹದಡಿ ಸಾಗಿಸಿದ್ದೇವೆ. ಆದರೆ ಆತ್ಮಹತ್ಯೆ ಇನ್ನೂ ಏರುತ್ತಲೇ ಇದೆ.

ಅಮೆರಿಕೆಯಂತ ಸೌಲಭ್ಯಗಳಿರುವ, ಕಡಿಮೆ ಜನಸಂಖ್ಯೆಯ (ಭಾರತಕ್ಕೆ ಹೋಲಿಸಿದರೆ) ರಾಷ್ಟ್ರದಲ್ಲಿ ಪ್ರತಿ  15 ನಿಮಿಷಗಳಿಗೊಮ್ಮೆ ಒಂದು, ಅಂದರೆ ಪ್ರತಿ ವರ್ಷ 38,000 ಜನರು ಆತ್ಮಹತ್ಯೆಯಿಂದ ಮೃತಪಡುತ್ತಾರೆ!

ಮಾನಸಿಕವಾದ ಒತ್ತಡ-ನೋವು ಉಂಟಾದಾಗ ‘ಪ್ರಥಮ ಚಿಕಿತ್ಸೆ’ ಯ ಅಗತ್ಯವನ್ನು ನಾವು ಮನಗಾಣಬೇಕು. ನೋವಿನಲ್ಲಿರುವ ವ್ಯಕ್ತಿಗಳಿಗೆ ಸ್ಪಂದಿಸುವುದು, ಮಾತನಾಡುವ ಅವಕಾಶ ನೀಡುವುದು, ಸಾಮಾಜಿಕ ಬೆಂಬಲ ಇವು ‘ಪ್ರಥಮ ಚಿಕಿತ್ಸೆ’ ಯ ಮುಖ್ಯ ಅಂಶಗಳು.

ಮಾನಸಿಕ ಆರೋಗ್ಯವಿಲ್ಲದೆ ಆರೋಗ್ಯವಿಲ್ಲ ಎಂಬ ಮಾತು ಇಂದು ಒತ್ತಡಕ್ಕೂ - ಇತರ ದೈಹಿಕ ಕಾಯಿಲೆಗಳಿಗೂ ನಿರೂಪಿಸಿರುವ ಸಂಬಂಧದಿಂದ ದೃಢಪಟ್ಟಿದೆ. ಆದರೂ ಮಾನಸಿಕ ಆರೋಗ್ಯವನ್ನು ಗಂಭೀರವಾಗಿ ಸಮಾಜ ಪರಿಗಣಿಸುತ್ತಿಲ್ಲ.
-ಡಾ. ಕೆ.ಎಸ್. ಪವಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT