ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್ ಟ್ರಂಪ್ ತಿರಸ್ಕರಿಸಿ ‘ಯುಎಸ್‌ಎ ಟುಡೆ’ ಕರೆ

Last Updated 30 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಎಎಫ್‌ಪಿ): ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಅಪಾಯಕಾರಿ ಪುಡಾರಿ ಎಂದು ಅಮೆರಿಕದ ಪ್ರಮುಖ ಪತ್ರಿಕೆ ‘ಯುಎಸ್‌ಎ ಟುಡೆ’ ಟೀಕಿಸಿದ್ದು, ಅವರಿಗೆ ಮತ ನೀಡದಂತೆ ಓದುಗರಿಗೆ ಸೂಚಿಸಿದೆ.

ಸಂಪ್ರದಾಯವನ್ನು ಮುರಿದು ಇದೇ ಮೊದಲ ಬಾರಿ ಪತ್ರಿಕೆ ಓದುಗರಿಗೆ ಈ ರೀತಿ ಸೂಚಿಸಿದೆ. 34 ವರ್ಷಗಳ ಇತಿಹಾಸದಲ್ಲಿ ಹಿಂದೆಂದೂ ಯುಎಸ್‌ಎ ಟುಡೆ ಅಧ್ಯಕ್ಷೀಯ ಅಭ್ಯರ್ಥಿಗಳ ವಿರುದ್ಧ ನಿರ್ಣಯ ಕೈಗೊಂಡಿರಲಿಲ್ಲ. ಆದರೆ ಈ ಬಾರಿ, ಟ್ರಂಪ್‌ ಅಧ್ಯಕ್ಷರಾಗಲು ಅನರ್ಹರು ಎಂದು ಪತ್ರಿಕೆಯ ಸಂಪಾದಕ ಮಂಡಳಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ.

‘15 ತಿಂಗಳ ಹಿಂದೆ ಅಧ್ಯಕ್ಷೀ ಅಭ್ಯರ್ಥಿ ಆಕಾಂಕ್ಷಿ ಸ್ಥಾನಕ್ಕೆ ಘೋಷಣೆಯಾದ ನಂತರ ಈ ವಾರ ನಡೆದ ಸಂವಾದದವರೆಗೂ ತಾವು ಅಧ್ಯಕ್ಷ ಸ್ಥಾನಕ್ಕೆ ಅನರ್ಹರು ಎಂಬುದನ್ನು ಟ್ರಂಪ್ ನಿರೂಪಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗುವವರಲ್ಲಿ ಇರಬೇಕಾದ ಮನೋಧರ್ಮ, ಜ್ಞಾನ, ದೃಢತೆಯು ತಮ್ಮಲ್ಲಿಲ್ಲ. ಹಾಗೂ ಪ್ರಾಮಾಣಿಕತೆಯ ಕೊರತೆಯೂ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಪತ್ರಿಕೆ ಹೇಳಿದೆ.
ಡೊನಾಲ್ಡ್‌ ಟ್ರಂಪ್ ಯಾಕೆ ಅನರ್ಹರು ಎಂಬ ಎಂಟು ಅಂಶಗಳನ್ನೊಳಗೊಂಡ ಪಟ್ಟಿಯನ್ನೂ ಪತ್ರಿಕೆ ಬಿಡುಗಡೆ ಮಾಡಿದೆ.

ಮಾಜಿ ಭುವನ ಸುಂದರಿ ವಿರುದ್ಧ ಟೀಕೆ
ಮಾಜಿ ಭುವನ ಸುಂದರಿ ಅಲಿಸಿಯಾ ಮಚಾದೊ ಅವರನ್ನು ಟೀಕಿಸಿ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿರುವುದು ಚರ್ಚೆಗೆ ಗುರಿಯಾಗಿದೆ. ತಮ್ಮ ಪ್ರಚಾರದಲ್ಲಿ ಮಚಾದೊ ಅವರನ್ನು ದುರ್ಬಳಕೆ ಮಾಡಿಕೊಳ್ಳಲು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘ಪ್ರಚಾರದಲ್ಲಿ ಬಳಸಿಕೊಳ್ಳಬಹುದು ಎಂಬ ಉದ್ದೇಶದಿಂದ ಅಲಿಸಿಯಾ ಮಚಾದೊ ಅವರಿಗೆ (ಆಕೆಯ ಸೆಕ್ಸ್ ಟೇಪ್ ಮತ್ತು ಇತಿಹಾಸ ಪರೀಕ್ಷಿಸಿ) ಅಮೆರಿಕದ ನಾಗರಿಕತ್ವ ಪಡೆಯಲು ಹಿಲರಿ ನೆರವಾಗಿದ್ದಾರೆಯೇ?’ ಎಂದು ಪ್ರಶ್ನಿಸಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

‘ಏಕಪಕ್ಷೀಯ ಸಂವಾದ’: ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಜೊತೆ ನಡೆದ ಮೊದಲ ಅಧ್ಯಕ್ಷೀಯ ಸಂವಾದ ‘ಏಕಪಕ್ಷೀಯ ಒಪ್ಪಂದ’ ಆಗಿತ್ತು ಎಂದು ಡೊನಾಲ್ಡ್ ಟ್ರಂಪ್ ಟೀಕಿಸಿದರು. ಸಂವಾದದಲ್ಲಿ ಹಿಲರಿ ಜಯಗಳಿಸಿದ್ದಾರೆ ಎಂದು ವಿಶ್ಲೇಷಕರು ಹೇಳಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ನ್ಯೂಹ್ಯಾಂಪ್‌ಶೈರ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರತಿಯೊಂದಕ್ಕೂ ನಾನು ಟಿವಿ ನಿರೂಪಕನ ಜೊತೆ ವಾದಿಸಬೇಕಾಗುತ್ತಿತ್ತು. ಅದೊಂದು ‘ಏಕಪಕ್ಷೀಯ ಒಪ್ಪಂದ’ ಆಗಿತ್ತು. ಇಂಥ ವ್ಯವಸ್ಥೆಯಲ್ಲಿ ನಾವಿದ್ದೇವೆ. ಆದರೆ ಇದು ಬದಲಾಗಲಿದೆ. ನ. 8ರ ಬಗ್ಗೆ ನೆನಪಿಡಿ’ ಎಂದರು. ಚುನಾವಣೆಯಲ್ಲಿ ಜಯಿಸಲು ಮುಂದಿನ 40 ದಿನ ಕಠಿಣ ಪರಿಶ್ರಮಪಡುವುದಾಗಿಯೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT