ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಪಾಕ್‌ ನಡುವಣ ಸ್ನೇಹ‘ಸಿಂಧು’

Last Updated 2 ಅಕ್ಟೋಬರ್ 2016, 4:39 IST
ಅಕ್ಷರ ಗಾತ್ರ

ಪಂಪನ ‘ಆದಿಪುರಾಣ’ದಲ್ಲಿ ಒಂದು ಪ್ರಸಂಗ ಬರುತ್ತದೆ. ಭರತ–ಬಾಹುಬಲಿಯವರು ಯುದ್ಧಕ್ಕೆ ಸನ್ನದ್ಧರಾಗಿ ನಿಂತಿದ್ದಾರೆ. ಅವರ ಹಿಂದೆ ಅಪಾರ ಸೈನ್ಯವಿದೆ. ಅಣ್ಣ ತಮ್ಮಂದಿರ ನಡುವೆ ಇನ್ನೇನು ಯುದ್ಧ ಆರಂಭವಾಗಬೇಕು – ಆಗ  ಚಾಣಾಕ್ಷರಾದ ಮಂತ್ರಿಗಳು ಉಪಾಯವೊಂದನ್ನು ಹೂಡುತ್ತಾರೆ.

ಎರಡೂ ಕಡೆಗಳಲ್ಲಿ ಸಂಭವಿಸಬಹುದಾದ ಅಪಾರ ಪ್ರಮಾಣದ ಸಾವುನೋವುಗಳನ್ನು ತಪ್ಪಿಸಲು, ವಜ್ರದೇಹಿಗಳಾದ ಇವರಿಬ್ಬರ ನಡುವೆಯೇ ಯುದ್ಧ ನಡೆಯುವಂತೆ ಏರ್ಪಾಡು ಮಾಡುತ್ತಾರೆ. ಅದರಂತೆ, ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ದ ನಡೆಯುತ್ತದೆ. ಇದರಲ್ಲಿ ಆಜಾನುಬಾಹುವಾದ ಬಾಹುಬಲಿ, ಅಣ್ಣನಾದ ಭರತನನ್ನು ಸೋಲಿಸುತ್ತಾನೆ.

ಈಗ ವರ್ತಮಾನದಲ್ಲಿ ಇಂತಹದೇ ಸನ್ನಿವೇಶವೊಂದು ಎದುರಾಗಿದೆ. ನೆರೆಯ ಪುಟ್ಟ ದೇಶ ಪಾಕಿಸ್ತಾನ, ಬಾಹುಬಲಿಯಂತಹ ಬಲಿಷ್ಠ  ಭಾರತದೆದುರು ಮಲೆತು ನಿಂತು ಪರೋಕ್ಷ ಯುದ್ಧದಲ್ಲಿ ತೊಡಗಿಕೊಂಡಿದೆ. ಮಾತಿನಲ್ಲೇ ಪಂಥಾಹ್ವಾನ ನೀಡುತ್ತಿದೆ. ಭಾರತ ಇದನ್ನು ಸಂಯಮದಿಂದ ಎದುರಿಸುತ್ತಿದೆ.

ಇದು ಖಂಡಾಂತರ ಕ್ಷಿಪಣಿಗಳ ಕಾಲ; ಅಣುಯುಗ. ಕೇವಲ ಒಂದು ಗುಂಡಿ ಅದುಮುವ ಮೂಲಕ ಜಗತ್ತಿನ ಯಾವುದೋ ತುದಿಯಲ್ಲಿರುವ ನಿರ್ದಿಷ್ಟ ಜಾಗವನ್ನು ಕುಳಿತಲ್ಲೇ ಬೂದಿ ಮಾಡಬಲ್ಲ ತಾಂತ್ರಿಕತೆಯೀಗ ಮನುಷ್ಯನ ಬತ್ತಳಿಕೆಯಲ್ಲಿದೆ. ಹಾಗಾಗಿ ಈಗ ಸಂಯಮದ ಬಗ್ಗೆಯೇ ಹೆಚ್ಚು ಮಾತಾಡಬೇಕಾಗಿದೆ. ಅದರಲ್ಲೂ ಭಯೋತ್ಪಾದನೆಯ ಟಂಕಶಾಲೆಯಂತಿರುವ ಪಾಕಿಸ್ತಾನದ ವಿರುದ್ಧದ ಪ್ರತಿ ನಡೆಯೂ ಹಗ್ಗದ ಮೇಲಿನ ನಡಿಗೆಯೇ. ಭಾರತವೀಗ ಪಂಚತಂತ್ರದ ಜಾಣ್ಮೆಯಡಿ ಜಲಯುದ್ಧಕ್ಕೆ ಮುಂದಾಗಿದೆ.

ತನ್ನ ನೆಲದಲ್ಲಿ ಹರಿಯುವ ಸಿಂಧು ನದಿಯ ತನ್ನ ಪಾಲಿನ ಸಂಪೂರ್ಣ ನೀರನ್ನು ಬಳಸಿಕೊಳ್ಳುವ ಬಗ್ಗೆ ಭಾರತವೀಗ ತಜ್ಞರ ಸಲಹೆ ಪಡೆಯುತ್ತಿದೆ. 1950ರಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಪ್ರಧಾನಿ ಅಯೂಬ್ ಖಾನ್ ನಡುವೆ ನಡೆದ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಭಾರತ ಮುಂದಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಾದ ‘ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದ’ವನ್ನು ಉಲ್ಲಂಘಿಸುತ್ತಿಲ್ಲ. ಬದಲಾಗಿ ತನ್ನ ಪಾಲಿನ ನೀರಿನ ಹಕ್ಕನ್ನು ಪೂರ್ತಿಯಾಗಿ ಬಳಸಿಕೊಳ್ಳುವ ನಿರ್ಧಾರ ಮಾಡುತ್ತಿದೆ. ಭಾರತವೇನಾದರೂ ಈ ಕಠಿಣ ನಿರ್ಧಾರ ತೆಗೆದುಕೊಂಡರೆ ಪಾಕಿಸ್ತಾನ ಹೆಚ್ಚೂಕಡಿಮೆ ಬರಡಾಗಲಿದೆ.

ಏಕೆಂದರೆ, ಪಾಕಿಸ್ತಾನಕ್ಕೆ ತನ್ನ ದೇಶದಲ್ಲಿ ಹುಟ್ಟಿ ಹರಿಯುವ ಪ್ರಮುಖ ನದಿಗಳಿಲ್ಲ. ಭಾರತದಲ್ಲಿ ಹುಟ್ಟಿ ಅಥವಾ ಭಾರತದ ಮುಖಾಂತರ ಹರಿದುಬರುವ ನದಿಗಳೇ ಆ ದೇಶದ ಜೀವದಾಯಿನಿಗಳು. ಅಲ್ಲಿಯ ಕೃಷಿ, ಕೈಗಾರಿಕೆ, ಮೀನುಗಾರಿಕೆ, ಜಲವಿದ್ಯುತ್ ಯೋಜನೆಗಳು, ಕುಡಿಯುವ ನೀರಿನ ಮೂಲ –ಎಲ್ಲವೂ ಭಾರತದಿಂದ ಹರಿದುಬರುವ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿದೆ. ಈ ನದಿಗಳೇ ಅವರ ಅರ್ಥಿಕತೆಯ ಬೆನ್ನೆಲುಬು.

ಭಾರತದ ಮೂಲಕ ಪಾಕಿಸ್ತಾನಕ್ಕೆ ಹರಿದು ಹೋಗುವ ಪ್ರಮುಖ ನದಿಗಳು ಆರು. ಇವನ್ನು ಪೂರ್ವದ ನದಿಗಳು ಮತ್ತು ಪಶ್ಚಿಮದ ನದಿಗಳು ಎಂದು ವಿಂಗಡಣೆ ಮಾಡಲಾಗಿದೆ. ಬಿಯಾಸ್, ರಾವಿ ಮತ್ತು ಸಟ್ಲೇಜ್ ಪೂರ್ವದ ನದಿಗಳು. ಇವು ನಮ್ಮ ಪಂಜಾಬ್ ರಾಜ್ಯದ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸುತ್ತವೆ.

ನೀವು ಮನಾಲಿಗೆ ಹೋಗಿದ್ದರೆ, ಅಲ್ಲಿ ನಗರದಂಚಿನಲ್ಲೇ ಹರಿಯುವ ಬಿಯಾಸ್ ನದಿಯನ್ನು ನೋಡಿರುತ್ತೀರಿ. ಅದರ ದಂಡೆಯುದ್ದಕ್ಕೂ ನಳನಳಿಸುತ್ತಿರುವ ಸೇಬು ತೋಟಗಳು ನೋಡುಗರ ಮನವನ್ನು ಸೂರೆಗೊಳ್ಳುತ್ತವೆ. ಚಂಡಿಗಡದಲ್ಲೂ ಬಿಯಾಸ್ ನದಿ ನೋಡಲು ಸಿಗುತ್ತದೆ. ಪೂರ್ವದ ಈ ಮೂರೂ ನದಿಗಳ ಮೇಲಿನ ಸಂಪೂರ್ಣ ಹಕ್ಕು ಭಾರತದ್ದು. ಅದನ್ನು ಹೇಗೆ ಬೇಕಾದರೂ ಭಾರತ ಬಳಸಿಕೊಳ್ಳಬಹುದು.

ಸಿಂಧು, ಚಿನಾಬ್ ಮತ್ತು ಝೇಲಂ ನದಿಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹುಟ್ಟಿ ಪಾಕಿಸ್ತಾನಕ್ಕೆ ಸೇರುತ್ತವೆ. ಇವು ಪಶ್ಚಿಮದ ನದಿಗಳು. ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಪ್ರಕಾರ – ನದಿಯ ಒಡೆತನ ಪಾಕಿಸ್ತಾನಕ್ಕೆ ಸೇರಿದ್ದರೂ ಅದರ ಮೇಲೆ ಭಾರತಕ್ಕೆ ಸಿಂಹಪಾಲಿದೆ. ಹಾಗಿದ್ದರೂ ತನ್ನ ಹಕ್ಕಿನ ನೀರನ್ನು ಭಾರತ ಇದುವರೆಗೂ ಸಂಪೂರ್ಣ ಬಳಕೆ ಮಾಡಿಕೊಂಡಿರಲಿಲ್ಲ. ಅದು ಯಾವುದೇ ನಿಯಂತ್ರಣವಿಲ್ಲದೆ ಪಾಕ್‌ನೆಡೆಗೆ ಹರಿದುಹೋಗುತ್ತಿತ್ತು. ಬದಲಾದ ಸನ್ನಿವೇಶದಲ್ಲಿ ಭಾರತವೀಗ ತನ್ನ ಹಕ್ಕಿನ ನೀರನ್ನು ಬಳಸಿಕೊಳ್ಳಲು ಮುಂದಾಗಿದೆ. ಅದು ಈಗ ಚರ್ಚೆಯಲ್ಲಿರುವ ಸಂಗತಿ.

1960ರಲ್ಲಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಯೂಬ್ ಖಾನ್, ವಿಶ್ವಸಂಸ್ಥೆಯ ನೇತೃತ್ವದಲ್ಲಿ ‘ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದ’ಕ್ಕೆ ಸಹಿ ಮಾಡಿದ್ದರು.ಪ್ರಮುಖ ನದಿಗಳಿಲ್ಲದ ಪಾಕಿಸ್ತಾನಕ್ಕೆ ಭವಿಷ್ಯದಲ್ಲಿ ನೀರಿನ ಕೊರತೆಯಾಗಬಾರದೆಂಬ ದೂರದರ್ಶಿತ್ವದಲ್ಲಿ ಮಾಡಿಕೊಂಡ ಒಪ್ಪಂದ ಆಗಿತ್ತದು. ಇದರ ಪ್ರಕಾರ ಭಾರತಕ್ಕೆ 9.12 ಲಕ್ಷ ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಹಕ್ಕಿದೆ.

ಆ ಹಕ್ಕನ್ನು ಮತ್ತೆ 4.2 ಲಕ್ಷಕ್ಕೆ ವಿಸ್ತರಿಸಲೂಬಹುದು. ಆದರೆ ಭಾರತ ಕೇವಲ 8 ಲಕ್ಷ ಎಕರೆಗೆ ಮಾತ್ರ ನೀರಾವರಿ ಸೌಕರ್ಯವನ್ನು ಮಾಡಿಕೊಂಡಿದೆ. ಹಾಗೆಯೇ ಈ ಮೂರು ನದಿ ನೀರನ್ನು ಬಳಸಿಕೊಂಡು 18,600 ಮೆಗಾವಾಟ್ ವಿದ್ಯುತ್ ಉತ್ಪಾದಿಸಿಕೊಳ್ಳಬಹುದು. ಆದರೆ ಈಗ ಕೇವಲ 3,034 ಮೆಗಾವಾಟ್ ವಿದ್ಯುತ್ ಮಾತ್ರ ಉತ್ಪಾದಿಸಲಾಗುತ್ತಿದೆ.

ದೆಹಲಿಯಲ್ಲಿ ರಾಜಕಾರಣ ಮಾಡಿದ ಎಲ್ಲ ಸರ್ಕಾರಗಳು ‘ಕಾಶ್ಮೀರ ಅಖಂಡ ಭಾರತದ ಅವಿಭಾಜ್ಯ ಅಂಗ’ ಎನ್ನುತ್ತಲೇ ಬಂದಿವೆ. ಆದರೆ, ಅಲ್ಲಿಯ ಜನರ ಆಶೋತ್ತರಗಳೇನು ಎಂಬುದರ ಬಗ್ಗೆ ಯಾವ ಸರ್ಕಾರವೂ ಹೆಚ್ಚಿನ ಮಹತ್ವ ಕೊಡಲಿಲ್ಲ. ಜಮ್ಮು–ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಕುರಿತಂತೆ ಯಾವ ಸರ್ಕಾರವೂ ನೀಡಬೇಕಾದಷ್ಟು ಆದ್ಯತೆಯನ್ನು ಕೊಟ್ಟಿಲ್ಲ. ಪ್ರಾಥಮಿಕ ಅಗತ್ಯಗಳಾದ ನೀರು ಮತ್ತು ರಸ್ತೆಯ ವ್ಯವಸ್ಥೆಯನ್ನೂ ಮಾಡಿಲ್ಲ. ಕೃಷಿಗೆ ಉತ್ತೇಜನ ನೀಡಿಲ್ಲ.

ಕರಕುಶಲ ಕಲೆಗಳಿಗೆ ಪ್ರೋತ್ಸಾಹ ನೀಡಿಲ್ಲ. ಹಾಗಾಗಿ ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಿಕೊಂಡಿರುವ ಆ ರಾಜ್ಯಗಳಲ್ಲಿ ಪ್ರತ್ಯೇಕತೆಯ ಕೂಗು ಬಲವಾಗಿ ಕೇಳಿ ಬರುತ್ತಿದೆ.ಅವರನ್ನು ದೇಶದ ಮುಖ್ಯಧಾರೆಯಲ್ಲಿ ಸೇರಿಸಿಕೊಳ್ಳಲು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಅಲ್ಲಿನ ಯುವಕರಿಗೆ ಉದ್ಯೋಗಗಳನ್ನು ಕಲ್ಪಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದೇ ಉತ್ತಮ ಮಾರ್ಗ.

ಈಗ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಸದ್ವಿನಿಯೋಗ ಮಾಡಿಕೊಂಡರೆ, ಬಹುಶಃ ಜಮ್ಮು–ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳು ಭಾರತದ ಮುಖ್ಯಧಾರೆಯೊಳಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಒಂದು ಪ್ರೇರಣೆ ಆಗಬಹುದೇನೊ? ಆದರೆ ಹಿಮಾಲಯ ವಲಯದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಒಂದು ಎಚ್ಚರಿಕೆಯನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು.

ಭಾರತದ ಇತರೆಡೆಗಳಲ್ಲಿನ ಪರ್ವತಗಳಿಗೆ, ಅದರಲ್ಲೂ ಪಶ್ಚಿಮಘಟ್ಟಗಳಿಗೆ ಹೋಲಿಸಿದರೆ ಹಿಮಾಲಯವಿನ್ನೂ ಎಳಸು. ಅದರ ಧಾರಣಾಶಕ್ತಿ ಅತ್ಯಂತ ದುರ್ಬಲವಾದುದು.2013ರಲ್ಲಿ ಉತ್ತರಾಖಂಡದಲ್ಲಾದ ಮೇಘಸ್ಪೋಟ ಮತ್ತು ಭೂಕುಸಿತಕ್ಕೆ ಅಲ್ಲಿ ಎಗ್ಗಿಲ್ಲದೆ ಕಟ್ಟಿದ ಅಣೆಕಟ್ಟುಗಳು ಮತ್ತು ಜಲವಿದ್ಯುತ್ ಯೋಜನೆಗಳೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಾಗಾಗಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಾಗ ಯಾವ ರೀತಿಯ ಅಭಿವೃದ್ಧಿ ನಮಗೆ ಬೇಕು? ಪರಿಸರಕ್ಕೆ, ಜೀವಜಾಲಕ್ಕೆ ತೊಂದರೆಯಾಗದಂತೆ ಮನುಷ್ಯ ಮನುಷ್ಯನಾಗಿ ಬದುಕಲು ಬೇಕಾದ ಅನುಕೂಲತೆಗಳೇನು ಎಂದು ಪ್ರಶ್ನಿಸಿಕೊಂಡರೆ ಬಹುಶಃ ನಮ್ಮ ಅಭಿವೃದ್ಧಿಯ ಮಾನದಂಡ ಅರ್ಥವಾಗಬಹುದು.

ಭಾರತವೀಗ ಜಲಯುದ್ಧಕ್ಕೆ ಸನ್ನದ್ಧವಾಗಿ ನಿಂತಿದೆ. ಈ ನೆಪದಲ್ಲಾದರೂ ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದರೆ ಒಳ್ಳೆಯದು. ಆದರೆ, ಯಾವುದೇ ಅಭಿವೃದ್ಧಿ ಚಟುವಟಿಕೆಯ ಕೇಂದ್ರದಲ್ಲಿ ಮಾನವೀಯತೆ ಪ್ರಧಾನವಾಗಿರಬೇಕೇ ಹೊರತು, ದ್ವೇಷಸಾಧನೆ ಅಲ್ಲ ಎನ್ನುವುದನ್ನೂ ನಾವು ಗಮನದಲ್ಲಿ ಇರಿಸಿಕೊಳ್ಳಬೇಕಿದೆ. ಈ ಸಂಘರ್ಷ ಮನುಷ್ಯ–ಮನುಷ್ಯರ ನಡುವಿನದು ಮಾತ್ರವಲ್ಲ, ಮನುಷ್ಯ ಮತ್ತು ಪ್ರಕೃತಿಯ ನಡುವಿನದೂ ಹೌದು.

ಹಾರ್ನ್ಬಿಲ್ ಉತ್ಸವದಿಂದ ಸಿಂಧು ಉತ್ಸವದ ತನಕ
ಐದು ಸಾವಿರ ವರ್ಷಗಳಷ್ಟು ಪುರಾತನವಾದ ಸಿಂಧು ಕೊಳ್ಳದ ನಾಗರೀಕತೆ, ಸಿಂಧು ನದಿಯ ತಟದಲ್ಲಿ ಅರಳಿತ್ತು ಮತ್ತು ಭಾರತಕ್ಕೆ ಆ ಹೆಸರು ಬರಲು ಕಾರಣವಾಗಿತ್ತು ಎಂಬುದನ್ನು ಚರಿತ್ರೆಯಲ್ಲಿ ಓದಿದ್ದೇವೆ. ಆದರೆ ಆ ನದಿ ಮತ್ತು ನಾಗರೀಕತೆಯ ಪಳೆಯುಳಿಕೆಗಳು ಇಂದು ಪಾಕಿಸ್ತಾನದ ನಕ್ಷೆಯಲ್ಲಿವೆ.

‘ಗಂಗೇಚಾ ಯಮುನೇ ಚೈವಾ ಗೋಧಾವರಿ ಸರಸ್ವತಿ, ನರ್ಮದೇ, ಸಿಂಧು, ಕಾವೇರಿ ಜಲಸ್ಮಿನ್ ಸನ್ನಿಧಿಂಕರ’ – ಎಂದು ಭಾರತೀಯರು ಪರಮ ಪವಿತ್ರವಾದುದೆಂದು ಪೂಜಿಸುವ, ನಮ್ಮ  ಭಾವಕೋಶದಲ್ಲಿ ಸೇರಿಹೋಗಿರುವ, ನಮ್ಮ ರಾಷ್ಟ್ರಗೀತೆಯಲ್ಲಿ ಉಲ್ಲೇಖಿತವಾಗಿ ನಮ್ಮವಳಾಗಿದ್ದ ಸಿಂಧು ಭಾರತದಲ್ಲಿಯೂ ಸ್ವಲ್ಪ ದೂರ ಹರಿಯುವುದು ಬಹುಜನರಿಗೆ ತಿಳಿದಿಲ್ಲ.

ಕುತೂಹಲಕ್ಕಾಗಿ ಸಿಂಧುವಿನ ಬಗ್ಗೆ ಒಂದಷ್ಟು ವಿಷಯ ಸಂಗ್ರಹಿಸುತ್ತಿದ್ದಂತೆ ‘ಆಕೆಯನ್ನೊಮ್ಮೆ ನೋಡಬೇಕು. ಬೊಗಸೆಯಲ್ಲಿ ತುಂಬಿಕೊಳ್ಳಬೇಕು’ ಎಂಬ ಆಸೆ ಹೆಚ್ಚಾಗತೊಡಗಿತು. ಅದಕ್ಕಾಗಿಯೇ ಕಾಶ್ಮೀರ ಪ್ರವಾಸ ಕೈಗೊಂಡಾಗ ‘ಸಿಂಧು ಉತ್ಸವ’ ನಡೆಯುವ ಸಮಯವನ್ನೇ ಆಯ್ದುಕೊಂಡೆ. ನದಿ ದಂಡೆಯ ಮೇಲೆಲ್ಲ ಅಡ್ಡಾಡಿ ನನ್ನ ಬಯಕೆಯನ್ನು ತೀರಿಸಿಕೊಂಡೆ.

ಹಿಮಾಲಯದ ತಪ್ಪಲಿನ ರಾಜ್ಯಗಳ ಎರಡು ಬೃಹತ್ ನದಿಗಳಾದ ಸಿಂಧು ಮತ್ತು ಬ್ರಹ್ಮಪುತ್ರಾ ನದಿಗಳ ಉಗಮಸ್ಥಾನ ಈಗ ಚೀನಾದಲ್ಲಿರುವ ಭಾರತೀಯ ಶ್ರದ್ಧಾಕೇಂದ್ರವಾದ ಮಾನಸ ಸರೋವರ. ಸಟ್ಲೇಜ್ ನದಿ ಕೂಡಾ ಇಲ್ಲಿಯೇ ಹುಟ್ಟುತ್ತದೆ. ಬ್ರಹ್ಮಪುತ್ರಾ ನದಿ ಟಿಬೇಟ್‌ನಲ್ಲಿ ಅರುಣಾಚಲ, ಅಸ್ಸಾಂ ಮೂಲಕ ಹರಿಯುತ್ತಾ ಬಾಂಗ್ಲಾದೇಶವನ್ನು ಹಸನುಗೊಳಿಸುತ್ತಾ ಬಂಗಾಲಕೊಲ್ಲಿಯನ್ನು ಸೇರುತ್ತದೆ.

ಸಿಂಧು ಕಾರಕೋರಂ ಹಿಮ ಪರ್ವತಗಳೆದೆಯಲ್ಲಿ ಬಾಗಿ ಬಳುಕುತ್ತಾ ಜಮ್ಮು–ಕಾಶ್ಮೀರದ ಲೇಹ್ ಮೂಲಕ ಭಾರತವನ್ನು ಪ್ರವೇಶಿಸಿ, ನಂತರದಲ್ಲಿ ಪಾಕಿಸ್ತಾನವನ್ನು ಸಮೃದ್ಧಗೊಳಿಸುತ್ತಾ ಅರಬ್ಬಿಸಮುದ್ರ ಸೇರುತ್ತದೆ. ವೇದದಲ್ಲಿ ಉಲ್ಲೇಖಿತವಾದ ಇನ್ನೆರಡು ನದಿಗಳಾದ ಗಂಗೆ–ಯಮುನೆ ಭಾರತದಲ್ಲೇ ಹುಟ್ಟಿ ಹರಿಯುತ್ತಾ ಬಂಗಾಳಕೊಲ್ಲಿ ಸೇರುತ್ತವೆ. ಕಾವೇರಿಯ ಕಥೆ ನಮಗೆಲ್ಲಾ ಗೊತ್ತಿದೆ. ಆದರೆ ಭಾರತದ ಏಕೈಕ ಗಂಡು ನದಿಯೆಂದು ಕರೆಯಲಾಗುವ ಬ್ರಹ್ಮಪುತ್ರಾ ನದಿಯನ್ನು ವೇದಗಳಲ್ಲಿ ಯಾಕೆ ಉಲ್ಲೇಖಿಸಿಲ್ಲ? ಅಂದರೆ ನಿಜಾರ್ಥದಲ್ಲಿ ಸ್ತ್ರೀತ್ವಕ್ಕೆ ಮನ್ನಣೆಯಿದ್ದ ಕಾಲ ಅದಾಗಿರಬಹುದೆ?

ಈಗ ಸುದ್ದಿಯಲ್ಲಿರುವ ಸಿಂಧು, ಜಗತ್ತಿನ ಅತೀ ಉದ್ದದ ನದಿಗಳಲ್ಲಿ ಮುಖ್ಯವಾದುದು. ಇದರ ಉದ್ದ 3200 ಕಿಮೀ. ಇದರ ಉಗಮ ಸ್ಥಳ ಸಮುದ್ರಮಟ್ಟದಿಂದ ಹದಿನೆಂಟು ಸಾವಿರ ಎತ್ತರದಲ್ಲಿದೆ. ಭಾರತದಲ್ಲಿ ಮುನ್ನೂರು ಕಿ.ಮೀ. ಹರಿದು ಪಾಕಿಸ್ತಾನಕ್ಕೆ ಅಡಿಯಿಡುತ್ತದೆ.  ಅದು ಚೀನಾದಿಂದ ಹರಿದುಬಂದು ಭರತ ಭೂಮಿಗೆ ಮೊದಲ ಅಡಿಯಿಡುವುದೇ ಹನ್ನೊಂದೂವರೆ ಸಾವಿರ ಎತ್ತರದಲ್ಲಿರುವ ಜಮ್ಮು–ಕಾಶ್ಮೀರದ ಲೇಹ್‌ನಲ್ಲಿ.

ಚಿಕ್ಕ ತೊರೆಯಂತೆ ಹರಿಯುವ ಸಿಂಧು ಬಹುಕಾಲ ಅನಾಮಿಕಳಂತೆ ಉಳಿದು, ನನ್ನಂತವರಿಗೆಲ್ಲ ‘ಸಿಂಧು ಭಾರತದಲ್ಲಿ ಹರಿಯುತ್ತಿದ್ದಾಳೆಯೇ?’ ಎಂದು ಪ್ರಶ್ನಿಸುವ ಹಾಗಾಗಿತ್ತು.ಆದರೆ ಲಾಲ್‌ಕೃಷ್ಣ ಅಡ್ವಾಣಿ ಎಂಬ ರಾಜಕಾರಣಿ ಮತ್ತು ತರುಣ್ ವಿಜಯ್ ಎಂಬ ಪತ್ರಕರ್ತನ ಕನಸಿನ ಫಲವಾಗಿ ಲೇಹ್‌ನಲ್ಲಿ ‘ಸಿಂಧು ಉತ್ಸವ’ ಎಂಬ ಮೂರು ದಿನಗಳ ಅದ್ದೂರಿ ಕಾರ್ಯಕ್ರಮ 1997ರಿಂದ ಆಯೋಜನೆಗೊಳ್ಳುತ್ತಿದೆ. ಈ ಮೂಲಕ ಸಿಂಧು ನಮ್ಮವಳು, ನಮ್ಮ ಹೆಮ್ಮೆಯ ಪ್ರತೀಕ, ಭಾರತದ ಭಾವೈಕ್ಯತೆಯ ಸಂಕೇತ ಎಂಬ ನಿಟ್ಟಿನಲ್ಲಿ ದೇಶದಾದ್ಯಂತ ಬಂದ ಜನರು ಈ ಉತ್ಸವದಲ್ಲಿ ಪಾಲುಗೊಳ್ಳುತ್ತಿದ್ದಾರೆ.

ನಾನು ಪಾಲ್ಗೊಂಡ ಸಿಂಧು ಉತ್ಸವದಲ್ಲಿ ಜಮ್ಮು–ಕಾಶ್ಮೀರ ಭಾಗದ ಬಹುತೇಕ ಜಾನಪದ ನೃತ್ಯಗಳು ಪ್ರದರ್ಶನಗೊಂಡವು. ಭಾವುಕರು ಸಿಂಧು ಜಲವನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡು ಭಾವುಕರಾಗುತ್ತಿದ್ದರು. ಮಹಿಳೆಯರು ಆಕೆಯ ಮಡಿಲಿಗೆ ಬಾಗಿನಗಳನ್ನು ಅರ್ಪಿಸುತ್ತಿದ್ದರು. ಆಸ್ತಿಕರು ನದಿ ದಂಡೆಯಲ್ಲಿ ಕುಳಿತು ಹೋಮಹವನಗಳನ್ನು ನಡೆಸುತ್ತಿದ್ದರು. ಆದರೆ ಇವೆಲ್ಲವೂ ಸೈನ್ಯದ ಸರ್ಪಗಾವಲಿನಲ್ಲಿ ನಡೆಯುತ್ತಿದ್ದವು ಎಂಬುದು ಗಮನಿಸತಕ್ಕ ಅಂಶ. ಆ ಉತ್ಸವದಲ್ಲಿ ಕರ್ನಾಟಕದಿಂದ ಬಂದ 175 ಪ್ರತಿನಿಧಿಗಳನ್ನು ಕಂಡು ನನಗೆ ತುಂಬಾ ಸಂತೋಷವಾಯಿತು.

ಲೇಹ್‌ನಿಂದ 35 ಕಿ.ಮೀ. ದೂರದಲ್ಲಿ ಕಾರ್ಗಿಲ್‌ಗಿಂತ ಸ್ವಲ್ಪ ಹಿಂದೆ ‘ನಿಮ್ಮು’ ಎಂಬ ಚಿಕ್ಕ ಊರು ಸಿಗುತ್ತದೆ. ಅಲ್ಲಿ ‘ಮ್ಯಾಗ್ನಟಿಕ್ ಹಿಲ್’ ಪಕ್ಕ ಸಿಂಧುಕೊಳ್ಳವನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಅಲೌಕಿಕ ಅನುಭವ.

ಆಪ್ಘಾನಿಸ್ತಾನದಲ್ಲಿರುವ ‘ಹಿಂದು ಕುಶ್’ ಪರ್ವತವನ್ನು ನೋಡಬೇಕೆನ್ನುವುದು ನನ್ನ ಹೆಬ್ಬಯಕೆಗಳಲ್ಲೊಂದು. ಅದರ ಮಿನಿಯೇಚರನ್ನು ಇಲ್ಲಿ ಕಂಡಂತೆ ಭಾಸವಾಯ್ತು. ಅಲ್ಲಿಯೇ ಸ್ವಲ್ಪ ಮುಂದಕ್ಕೆ ಝೆನ್ಸಂಕಾರ್ ಮತ್ತು ಸಿಂಧು ನದಿಗಳ ಸಂಗಮವಾಗುತ್ತದೆ. ಅಚ್ಚ ನೀಲಿ ಬಣ್ಣದ ಸಿಂಧು ಮತ್ತು ಬೂದಿ ಬಣ್ಣದ ಝೆನ್ಸಂಕಾರ್ ಸಂಗಮದ ದೃಶ್ಯವನ್ನು ಪದಗಳಲ್ಲಿ ವರ್ಣಿಸಲು ಬಾರದು.

ಅದು ಅನುಭವವೇದ್ಯವಾದುದು. ಆದರೆ ಇಲ್ಲೊಂದು ಅಚ್ಚರಿಯ ವಿಷಯವಿದೆ. ನಾವು ನದಿಯನ್ನು ಸ್ತ್ರೀಯಾಗಿ ಕಲ್ಪಿಸಿಕೊಳ್ಳುತ್ತೇವೆ.ದೇವತೆಯಾಗಿ ಆರಾಧಿಸುತ್ತೇವೆ. ಎಲ್ಲಾ ನದಿಗಳಿಗೂ ನಾವು ಮಂದಿರವನ್ನು ಕಟ್ಟಿದ್ದೇವೆ. ಗಂಗೆ–ಯಮುನೆ, ನಂದಾದೇವಿ ಪರ್ವತ ಮಾತೆಯ ಗುಡಿಯನ್ನೂ ನೋಡಿದ್ದೇನೆ. ಆದರೆ ಸಿಂಧು ನದಿಗೆ ಎಲ್ಲಿಯೂ ಗುಡಿಯಿದ್ದದ್ದನ್ನು ನಾನು ನೋಡಿಲ್ಲ, ಕೇಳಿಲ್ಲ.

ಲೇಹ್‌ನಲ್ಲಿ ನಡೆಯುವ ‘ಸಿಂಧು ಉತ್ಸವ’, ನಾಗಲ್ಯಾಂಡ್‌ನಲ್ಲಿ ನಡೆಯುವ ಈಶಾನ್ಯ ರಾಜ್ಯಗಳ ಸಾಂಸ್ಕೃತಿಕ ಮೇಳ ‘ಹಾರ್ನ್ ಬಿಲ್ ಉತ್ಸವ’ – ಇವುಗಳು ಸಾಂಸ್ಕೃತಿಕವಾಗಿ ಅಲ್ಲಿನ ಜನತೆಯನ್ನು ಭಾರತದ ಇನ್ನಿತರ ಭಾಗದೊಡನೆ ಬೆಸೆಯುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT