ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿಯಲ್ಲಿ ಕಂಡ ನಮ್ಮೂರ ತಾಯಂದಿರು

Last Updated 2 ಅಕ್ಟೋಬರ್ 2016, 4:38 IST
ಅಕ್ಷರ ಗಾತ್ರ

ಧೀಮಂತರ ಪ್ರವಚನಗಳಿಂದ ನಾನು ಗಾಂಧಿಯನ್ನು ತಿಳಿಯಲಿಲ್ಲ. ನನ್ನ ತಾಯಿಯ ಮೂಲಕ ಗಾಂಧಿಯನ್ನು ಅರ್ಥಮಾಡಿಕೊಂಡಿರುವೆ. ತಾಯ ಎದೆ ಹಾಲ ಕುಡಿದವರಿಗೆ ತಾಯಿಯನ್ನು ಪರಿಚಯಿಸಬೇಕಾದ ಅಗತ್ಯವಿರುವುದಿಲ್ಲ. ನನಗೆ ನನ್ನ ತಾಯಿ ಬೇರೆ ಅಲ್ಲ, ಗಾಂಧೀಜಿ ಬೇರೆ ಅಲ್ಲ, ಹಾಗೆಯೆ ಭಾರತ ಮಾತೆ ಬೇರೆ ಅಲ್ಲ.

ತಾಯಿಯನ್ನು ಅರ್ಥಮಾಡಿಕೊಂಡರೆ ನನಗೆ ನನ್ನ ದೇಶವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುವುದಿಲ್ಲ. ಹಾಗೆಯೇ ಗಾಂಧಿಯನ್ನು ಕೂಡ. ತಾಯ್ತನಕ್ಕೂ ಸ್ತ್ರೀತ್ವಕ್ಕೂ ಗಾಂಧಿಗೂ ಆಳವಾದ ಸಂವೇದನೆಯ ಬೇರುಗಳಿವೆ. ನಾನು ಗಾಂಧಿಯನ್ನು ಖುದ್ದಾಗಿ ಕಂಡವನಲ್ಲ. ಯಾರೂ ದೇವರನ್ನು ಕಂಡವರಿಲ್ಲ. ಗಾಂಧೀಜಿ ಎಲ್ಲ ಒಳ್ಳೆಯತನದಲ್ಲಿ, ಅಂತಃಕರಣದಲ್ಲಿ ಸದಾ ದೇವರನ್ನು ಕಾಣುತ್ತಿದ್ದರು.

ದೇವರಿಗಾಗಿ ನಾವು ಮಾಡಬೇಕಾದ್ದು ಏನೂ ಇಲ್ಲ. ದೇವರನ್ನು ಸಾಮಾನ್ಯ ಮನುಷ್ಯರ ಸೇವೆಯಲ್ಲಿ ಕಾಣುವುದೇ ನಿಜವಾದ ತ್ಯಾಗ, ಭಕ್ತಿ ಎಂದು ಗಾಂಧಿ ಯಾವತ್ತೂ ಹೇಳುತ್ತಿದ್ದರು. ಗಾಂಧಿಯನ್ನೇ ದೇವರಂತೆ ಕಂಡ ಜನಕೋಟಿ ಅಪಾರವಾಗಿದೆ. ಜಗತ್ತಿನ ಯಾವ ದೇವಮಾನವರಿಗೂ ಮಿಗಿಲಾಗಿ ಗಾಂಧಿಯ ಪ್ರತಿಮೆಗಳು ದೇಶದ ಎಲ್ಲೆಡೆ ಸ್ಥಾಪಿಸಿವೆ. ಗಾಂಧಿಯನ್ನು ಭೇಟಿ ಆಗದೆಯೂ ಸದಾ ಗಾಂಧಿಯನ್ನು ಕಾಣುತ್ತಲೇ ಇರಬಹುದು.

ನನ್ನ ತಾತ ಗಾಂಧಿಯನ್ನು ಮುಟ್ಟಿಬಂದಿದ್ದ. ಅದನ್ನು ಆತ ಬದುಕಿರುವ ತನಕ ಜನಗಳಿಗೆ ಹೇಳಿ ಹೇಳಿ ಇಡೀ ಊರಿಗೇ ಅದು ಬಾಯಿಪಾಠವಾಗಿತ್ತು. ‘ಗಾಂಧಿ ನನ್ನನ್ನು ಮುಟ್ಟಿಸಿಕೊಂಡರು’ ಎಂಬುದು ನನ್ನ ತಾತನ ಪರಮ ಗಳಿಗೆಯಾಗಿತ್ತು. ಭಾಗಶಃ ಗಾಂಧಿ ನನ್ನ ಆತ್ಮವನ್ನು ಮುಟ್ಟಿರಬಹುದು. ನನ್ನ ತಾಯಿ ಕೂಡ ಗಾಂಧಿಯನ್ನು ಕಂಡವಳಾಗಿರಲಿಲ್ಲ. ಆದರೆ ಗಾಂಧೀಜಿಯ ಅನೇಕ ನಡತೆಗಳು ಅವಳ ಬಾಳಿನ ಒಂದೊಂದು ಹೆಜ್ಜೆಯಲ್ಲಿ ವ್ಯಕ್ತವಾಗುತ್ತಿದ್ದವು.

ದೇವರ ಪಟಗಳ ನಡುವೆ ಗಾಂಧಿಯ ಪೋಟೋವನ್ನು ನನ್ನ ತಾತ ತಂದಿಟ್ಟಿದ್ದ. ದಲಿತರು ಗಾಂಧೀಯನ್ನು ಎಷ್ಟು ಮುಟ್ಟಿಸಿಕೊಂಡರೊ ಏನೊ... ಆದರೆ, ಗಾಂಧೀಜಿ ಅಸ್ಪೃಶ್ಯರ ಆಂದೋಲನದ ಮೂಲಕ 1915ರ ಹೊತ್ತಿಗಾಗಲೇ ದೇಶಾದ್ಯಂತ ಜಾತಿವಿನಾಶಕ್ಕೆ ಮಿಡಿದಿದ್ದರು. ಅದಕ್ಕೂ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಜನಾಂಗಭೇದದ ಬಗ್ಗೆ ಚಳವಳಿ ಮಾಡಿ ಸೆರೆಮನೆ ಕಂಡಿದ್ದರು. ಮಾನವ ಹಿಂಸೆಯ ವಿರುದ್ಧ ಅಹಿಂಸಾತ್ಮಕ ಹೋರಾಟಕ್ಕೆ ತೊಡಗಿದ್ದರು. ಗಾಂಧೀಜಿ ಒಮ್ಮೆಗೇ ಸ್ವಾತಂತ್ರ್ಯ ಚಳವಳಿ ಪ್ರವೇಶಿಸಲಿಲ್ಲ.

ಶತಮಾನಗಳಿಂದ ಜಡ್ಡುಗಟ್ಟಿದ್ದ ಭಾರತೀಯ ಸಮಾಜಗಳನ್ನು ಸುಧಾರಿಸಲು ಮೊದಲು ಮುಂದಾದರು. ಒಂದೆಡೆ ಬ್ರಿಟಿಷರ ವಿರುದ್ಧದ ಆಂದೋಲನ, ಇನ್ನೊಂದೆಡೆ ದೇಶದ ಒಳಗಿನ ಜಾತಿಗಳ ಕತ್ತಲಿನ ವಿರುದ್ಧದ ಚಳವಳಿ; ಈ ಎರಡನ್ನೂ ಗಾಂಧೀಜಿ ಸಮನಾಗಿ ನಿರ್ವಹಿಸಿದರು. 

ಗಾಂಧೀಜಿಯ ಇಡೀ ಚಳವಳಿಗೆ ಮಾತೃತ್ವದ ಹಂಗಿದೆ. ಸ್ತ್ರೀ ಸಂವೇದನೆಯ ಬಲವಿದೆ. ದಿಕ್ಕೆಟ್ಟ ಮಹಿಳೆಯರ ಅಸಹಾಯಕತೆಯ, ಅಹಿಂಸೆಯ, ಶಾಂತಿಯ ಆತ್ಯಂತಿಕ ಗುಣವಿದೆ. ಮಾತೃ ಮಮಕಾರದ ಜಾತ್ಯತೀತ ಭಾರತವನ್ನು ಗಾಂಧೀಜಿ ಬಹಳ ಆರ್ದ್ರವಾಗಿ ಭಾವಿಸಿದ್ದರು. ಜಾತಿ, ಧರ್ಮ, ಸ್ವಾತಂತ್ರ್ಯ ಇವು ಮೂರು ಕೂಡ ರಾಜಕಾರಣದಲ್ಲಿ ಹೇಗೆ ಜಾತ್ಯತೀತಗೊಳ್ಳಬೇಕು ಎಂಬುದನ್ನು ಗಾಂಧೀಜಿ ವಿಶಾಲವಾಗಿ ಭಾವಿಸಿದ್ದರು.

ಗಾಂಧೀಜಿಯ ವ್ಯಕ್ತಿತ್ವ ರೂಪುಗೊಂಡಿರುವುದು ಭಾರತದ ಹಳ್ಳಿಗಾಡಿನ ತಾಯಂದಿರ ವೇದನೆಯ ಮೂಲಕ, ಹೀಗಾಗಿಯೇ ನಾನು ನನ್ನ ತಾಯಿಯ ಮೂಲಕ ಗಾಂಧಿಯನ್ನು ಸಲೀಸಲಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿರುವುದು. ಹಿಂಸೆಗೆ ಪ್ರತಿ ಹಿಂಸೆಯನ್ನು ಭಾಗಶಃ ಜಗತ್ತಿನ ಯಾವ ಮಹಿಳೆಯರೂ ರೂಪಿಸಲಿಲ್ಲ. ಹಿಂಸೆಗೆ ಅಹಿಂಸೆಯೇ ಪರಮೋಚ್ಛ ಪ್ರತಿಭಟನೆ ಎಂಬುದನ್ನು ದಮನಿತ ಮಹಿಳೆಯರು ವಿಶೇಷವಾಗಿ ತೋರಿದ್ದಾರೆ.

ಇವತ್ತಿಗೂ ಮಹಿಳೆಯರು ತಮ್ಮ ಕೌಟುಂಬಿಕ ಹಿಂಸೆಗಳಿಗೆ ಅಹಿಂಸೆಯ ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ. ಗಾಂಧೀಜಿಗೆ ಅಹಿಂಸೆಯ ಮಹಾದರ್ಶನ ಮಹಿಳೆಯರಿಂದಲೇ ಆಗಿರಬೇಕು. ಪುರುಷಾಧಿಪತ್ಯದ ಯಾವ ಅಹಂಕಾರಗಳು ಗಾಂಧಿಯಲ್ಲಿ ಇರಲಿಲ್ಲ. ಪುರುಷರ ಪ್ರತಿಭಟನೆಯ ಯಾವ ಕ್ರಮಗಳನ್ನೂ ಅವರು ತಮ್ಮ ಚಳವಳಿಗಳಲ್ಲಿ ಅಳವಡಿಸಿಕೊಳ್ಳಲಿಲ್ಲ. ಅಹಿಂಸೆಯನ್ನು ಜೈನ ಧರ್ಮ ಪ್ರತಿಪಾದಿಸುವ ದಾರಿ ಬೇರೆ. ಗಾಂಧೀಜಿಗೆ ಅದರ ಪ್ರಭಾವ ಆಗಿರಬಹುದು.

ಕರುಣೆಯ ದಾರಿಯ ಮಹಾವೀರನಿಗೂ ದಿಕ್ಕೆಟ್ಟ ಮಹಿಳೆಯರ ಅಹಿಂಸೆಯ ಬದುಕೇ ದಾರಿತೋರಿರಬಹುದು. ಇಷ್ಟೊಂದು ಕ್ರೂರ ಜಾತಿ ವ್ಯವಸ್ಥೆಯ ಭಾರತದಲ್ಲಿ ಅಹಿಂಸೆಯ ದೀಪಗಳು ಸದಾ ಉರಿಯುತ್ತಲೇ ಕತ್ತಲೆಯನ್ನು ಅಳಿಸುವ ಯತ್ನವನ್ನು ಮಾಡುತ್ತಲೇ ಇವೆ. ಅಹಿಂಸೆಯ ದೀಪದಂತೆ ನಮ್ಮೂರ ಹೆಂಗಸರು ಯಾವತ್ತೂ ಬೆಳಕನ್ನು ಬೀರುತ್ತಲೇ ಇದ್ದರು. ಆ ಬಗೆಯನ್ನು ಬಿಡಿಸಿ ಹೇಳುವೆ.

ನನ್ನ ತಾಯಿಯನ್ನು ನಾನು ತೀರಾ ಹತ್ತಿರದಿಂದ ಕಂಡಿದ್ದರಿಂದ ಆಕೆಯ ಅನುಭವಗಳ ಮೂಲಕವೇ ಇದನ್ನು ನಿವೇದಿಸಬೇಕು. ನನ್ನ ತಂದೆ ಕುಡಿದು ಬಂದು ತಾಯಿಗೆ ಹಿಂಸೆಕೊಡುತ್ತಿದ್ದ. ಮನೆಯಲ್ಲಿ ಏನೇನೋ ಸಣ್ಣ ಸಣ್ಣ ವಿಷಯಗಳಿಗೆ ಯಾವಾಗಲೂ ಜಗಳ ಇದ್ದೇ ಇರುತ್ತಿತ್ತು. ಮನೆಯವರಿಗೆಲ್ಲ ಕಿರುಕುಳ ಕೊಡುವುದರಲ್ಲಿ ತಂದೆಗೆ ಆನಂದವಾಗುತ್ತಿತ್ತು. ಮನೆಯ ಒಬ್ಬೊಬ್ಬರೂ ಒಂದು ದಿಕ್ಕಾಗಿರುತ್ತಿದ್ದರು.

ನನ್ನ ತಾಯಿ ಹಿಂಸೆ ತಾಳಲಾರದೆ ನಲುಗಿದಾಗ ಆಕೆ ಮೊದಲು ಮಾಡುತ್ತಿದ್ದ ಪ್ರತಿಭಟನೆ ಎಂದರೆ ಎಲ್ಲರ ಜೊತೆ ಮಾತುಬಿಡುತ್ತಿದ್ದಳು. ಇದನ್ನು ‘ಮುನಿಸಿಕೊಂಡಿದ್ದಾಳೆ’ ಎಂದು ಮನೆಯವರು ಅರ್ಥಮಾಡಿಕೊಳ್ಳುತ್ತಿದ್ದರು. ಅಂದರೆ ಮೌನವ್ರತಕ್ಕೆ ತಾಯಿ ಮುಂದಾಗುತ್ತಿದ್ದಳು. ಭಾರತೀಯ ಸ್ತ್ರೀ ಸಂವೇದನೆಯಲ್ಲಿ ‘ಮೌನ’ದ ಅರ್ಥದ ವ್ಯಾಪ್ತಿಯೂ ವಿಶಾಲವಾದುದು. ಈ ಮೌನ ಬಹಳ ಕಾಲದಿಂದಲೂ ಪರಂಪರೆಗಳಲ್ಲಿ ಹೆಪ್ಪುಗಟ್ಟಿಕೊಂಡೇ ಬಂದಿದೆ.

ನನ್ನ ತಾಯಿಯ ಮೌನದಿಂದಾಗಿ ಇಡೀ ಮನೆ ತಣ್ಣಗಾಗಿ ಹೋಗುತ್ತಿತ್ತು. ತಾಯಿ ಯಾರು ಕರೆದರೂ ಮಾತನಾಡುತ್ತಿರಲಿಲ್ಲ. ತನಗೆ ನ್ಯಾಯ ಸಿಗುವ ತನಕ ತಾನು ಹೀಗೆಯೇ ಎಂದು ಹಟ ಮಾಡಿದರೆ ತಂದೆ ಮತ್ತೆ ಹಿಂಸಿಸುತ್ತಿದ್ದ. ತಾಯಿ ಆಗ ಮಾತನ್ನು ಬಿಟ್ಟ ಹಾಗೆಯೇ ಊಟವನ್ನೂ ಬಿಡುತ್ತಿದ್ದಳು. ಎಷ್ಟೋ ಬಾರಿ ಇಡೀ ಮನೆಯೇ ಉಪವಾಸ ಬೀಳುತ್ತಿತ್ತು. ತಾಯಿ ಮುಂದುವರಿದು ಮನೆಯ ಯಾವ ಕೆಲಸಗಳನ್ನೂ ಮಾಡದೆ ಒಂದು ಮೂಲೆಯಲ್ಲಿ ಅಸಹಕಾರ ತೋರಿ ಕೂತುಬಿಡುತ್ತಿದ್ದಳು.

ಮಾತು ಬಿಡುವುದು, ಊಟ ಬಿಡುವುದು, ಮನೆಯ ಎಲ್ಲ ಕೆಲಸಗಳನ್ನು ಬಿಡುವುದು ಅಸಹಕಾರ ಚಳವಳಿಯಲ್ಲದೇ ಮತ್ತೇನು? ಈ ಚಳುವಳಿಯನ್ನು ತಾಯಿ ಏಕಾಂಗಿಯಾಗಿ ಆದರೆ ದಟ್ಟವಾಗಿ ಮಾಡುತ್ತಿದ್ದಳು. ತಂದೆ ಹೊಡೆದಂತೆಲ್ಲ ಅವಳು ಗಟ್ಟಿಯಾಗಿ ವಿರೋಧಿಸುತ್ತಿದ್ದಳು. ಎಂದೆಂದೂ ತಾಯಿ ಹಿಂಸೆಗೆ ಇಳಿಯುತ್ತಿರಲಿಲ್ಲ; ಆದರೆ ಅವಳು ಹೆಚ್ಚು ಹೆಚ್ಚು ಎಲ್ಲರ ಹಿಂಸೆಯನ್ನು ಸಹಿಸಿ ಸಹಿಸಿ ತಾನೇ ಸಹಿಷ್ಣುವಾಗಿರುತ್ತಿದ್ದಳು.

ಮನೆಯಲ್ಲಿ ಅತ್ತೆ ಮಾವಂದಿರ ಕಾಟವನ್ನು ಸಹಿಸುತ್ತಿದ್ದಳು. ಕೂಡು ಕುಟುಂಬಗಳಲ್ಲಿ ಇದರ ಹಿಂಸೆ ಇನ್ನೂ ತೀವ್ರವಾಗಿರುತ್ತದೆ. ತಾಯಂದಿರ ಇಂತಹ ಅಸಹಕಾರ ಚಳವಳಿಯನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಲೇ ಇಲ್ಲ. ಗಾಂಧಿಯ ಹೋರಾಟವನ್ನು ತೀವ್ರವಾಗಿ ಗ್ರಹಿಸಿದರೆ ಅವರ ಹೋರಾಟದ ಒಂದೊಂದು ಹೆಜ್ಜೆಯಲ್ಲೂ ನನ್ನ ತಾಯಿಯಂತಹುದೇ ಹೆಂಗಸರ ಕುರುಹುಗಳು ಕಾಣುತ್ತವೆ.

ಇಂತಹ ದಿಕ್ಕೆಟ್ಟ ಭಾರತೀಯ ಮಹಿಳೆಯರ ನರಕ ಗಾಂಧೀಜಿ ಅವರಿಗೆ ತಿಳಿದಿತ್ತು. ‘ಹಿಂಸೆ ಮಹಾ ಪಾಪ’ ಎಂದು ಧರ್ಮ ಹೇಳುವುದೇನೋ ಸರಿ. ಆದರೆ ಯಾವ ತಪ್ಪೂ ಮಾಡದೆ ಹಿಂಸೆಯನ್ನು ಸಹಿಸಿಕೊಂಡೇ ಮನುಷ್ಯ ಸಂಬಂಧಗಳನ್ನು ಉಳಿಸಿಕೊಳ್ಳುವ ಪರಿಗೆ ಯಾವ ಅರ್ಥವನ್ನು ನೀಡುವುದು? ಭಾರತೀಯ ಮಹಿಳೆಯರು ಹಿಂಸೆಯನ್ನು ಸಹಿಸಿಕೊಂಡೇ ಅಹಿಂಸಾವಾದಿಗಳಾಗಿದ್ದಾರೆ. ದಲಿತರು ಈ ದಾರಿಯಲ್ಲಿ ಬಹಳ ದೂರ ಸಾಗಿದ್ದಾರೆ. ಸತ್ಯಾಗ್ರಹ, ಅಸಹಕಾರ, ಅಹಿಂಸೆಯ ಮಾರ್ಗಗಳು ಮಹಿಳೆಯರವು.

ನನ್ನ ತಾಯಿ ಇದೇ ಹಾದಿಯಲ್ಲಿ ಸಾಗಿಬಂದಿದ್ದಳು.  ಅವಳನ್ನು ಹೆತ್ತವರು; ಅವರ ಮುತ್ತಜ್ಜಿಯರು ಕೂಡ ಅದೇ ಪಾಲನೆಯನ್ನು ಮಾಡಿದ್ದರು. ಈ ಗುಣಗಳು ಗಾಂಧಿಯಲ್ಲಿ ಲೀನವಾಗಿದ್ದವು. ಹೀಗಾಗಿಯೇ ಗಾಂಧೀಜಿಯ ವ್ಯಕ್ತಿತ್ವದಲ್ಲಿ ಯಾರು ಬೇಕಾದರೂ ಅವರವರ ತಾಯಂದಿರನ್ನು ಕಾಣಬಹುದು. ಹಾಗೆಯೇ ಭಾರತಮಾತೆಯನ್ನೂ ಕಾಣಬಹುದು.

ಭಾಗಶಃ ಭಾರತವನ್ನು ಕಾಣಲು ಗಾಂಧೀಜಿಗಿಂತ ಮಿಗಿಲಾದವರು ಬೇರೆ ಯಾರೂ ಇಲ್ಲ ಎನಿಸುತ್ತದೆ. ಗಾಂಧೀಜಿಯ ಬಳಿ ಇದ್ದದ್ದು ತಾಯಂದಿರ ಇಂತಹ ಆಯುಧಗಳೇ. ಮೌನವೂ ಒಂದು ದೊಡ್ಡ ಪ್ರತಿಭಟನೆ. ಉಪವಾಸವೂ ಒಂದು ಪ್ರತಿಭಟನೆ. ಶಾಂತಿಯೂ ಒಂದು ಪ್ರತಿಭಟನೆ. ಅಸಹಕಾರವೂ ಒಂದು ದಿವ್ಯ ಪ್ರತಿರೋಧ. ಕ್ರಾಂತಿಗಳನ್ನು ಹತ್ತಿಕ್ಕುವ ಯಾವ ಯಾವ ಕ್ರಮಗಳು ಬ್ರಿಟಿಷ್ ಸಾಮ್ರಾಜ್ಯದ ಮುಂದೆ ಇದ್ದವೋ ಅವಕ್ಕೆಲ್ಲ ಗಾಂಧೀಜಿ ಅವಕಾಶವನ್ನೇ ಕೊಡಲಿಲ್ಲ.

ಒಂದೆಡೆ ದೇಶದ ಆಂತರಿಕ ಗಾಯಗಳಿಗೆ ಮದ್ದು ಎರೆಯುವ ಕಾಯಕದಲ್ಲಿ ತೊಡಗಿರುವಂತೆಯೇ ಪರಕೀಯರ ಆಳ್ವಿಕೆಯನ್ನು ಗಾಂಧಿ ವಿರೋಧಿಸುತ್ತಿದ್ದರು. ಮಹಿಳೆಯರ ಪ್ರತಿರೋಧದ ಗುಣ ಇದು. ಅಂತರಂಗವೂ ಶುದ್ಧಿಯಾಗಿರಬೇಕು, ಬಹಿರಂಗವೂ ಶುದ್ಧಿಯಾಗಿರಬೇಕು ಎಂಬುದು ಭಾರತೀಯ ಮಹಿಳೆಯರ ಗುಣ. ಇದರಿಂದಾಗಿಯೇ ಸಾವಿರಾರು ವರ್ಷಗಳಿಂದ ‘ಕುಟುಂಬ’ ಎಂಬ ಭಾರತೀಯ ವ್ಯವಸ್ಥೆ ಉಳಿದಿರುವುದು.

ಕುಟುಂಬ ಸರಿಯಾಗಿದ್ದರೆ; ಅದರ ನೆರೆಹೊರೆ ಸರಿಯಾಗಿದ್ದರೆ; ಆ ಸಮಾಜಗಳಲ್ಲಿ ‘ತಾಯ್ತನ’ ಎಂಬುದು ಜಾರಿಯಲ್ಲಿದ್ದರೆ ಮಾನವ ಸಂಬಂಧಗಳ ಒಪ್ಪಂದಗಳು ಸರಿಯಾಗಿರುತ್ತವೆ. ಗಾಂಧೀಜಿ ‘ಭಾರತ’ ಎಂಬ ಒಂದು ಕುಟುಂಬದ ತಾಯಿಯ ಹಾಗೆಯೇ ಇದ್ದರು. ಆದ್ದರಿಂದಲೇ ದಲಿತರಾಗಲಿ, ಮುಸಲ್ಮಾನರಾಗಲಿ ಪ್ರತ್ಯೇಕತೆಯನ್ನು ಬಯಸಬಾರದು ಎಂದು ಕೊನೆ ತನಕ ಅವರು ಹೋರಾಡಿದ್ದುದು. ‘ಭಾರತ’ ಎಂಬ ಒಂದು ಸಮಷ್ಟಿ ಪ್ರಜ್ಞೆ ಗಾಂಧಿಯ ಮೂಲಕ ವ್ಯಕ್ತವಾಗಿತ್ತು.

ಪಾಪಗಳು ಯಾರ ಪಾಲಿನವು? ಇವುಗಳಲ್ಲಿ ಪುರುಷರ ಪಾಪವೆಷ್ಟು? ಮಹಿಳೆಯರ ಪಾಲೆಷ್ಟು? ಗಾಂಧೀಜಿ ಹೇಳಿದ ‘ಏಳು ಪಾಪಗಳು’ (ಸಪ್ತ ಮಹಾಪಾತಕಗಳು) ಬಹಳಷ್ಟು ಪುರುಷ ವ್ಯವಸ್ಥೆಗೆ ಸಂಬಂಧಪಟ್ಟಂತಿದೆ. ಗಾಂಧೀಜಿ ದೇಹದಲ್ಲಿ ಗಂಡಸಾಗಿದ್ದರೂ ಭಾವದಲ್ಲಿ ಆತ್ಯಂತಿಕ ತಾಯಿಯೇ ಆಗಿದ್ದರು. ನನ್ನ ತಾಯಿ ಗಾಂಧೀವಾದಿಯಾಗಿರಲಿಲ್ಲ.

ಸ್ವತಃ ಅವಳಲ್ಲೇ ಗಾಂಧೀವಾದವಿತ್ತು. ಗಾಂಧೀಜಿ ನನ್ನ ತಾಯಿಯಂತವರಿಂದಲೇ ಅಹಿಂಸೆಯ ತತ್ವವನ್ನು ಜಗತ್ತಿಗೆ ಸಾರಿದ್ದರು. ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಹೋರಾಟದ ಶಕ್ತಿ ಮಹಿಳೆಯರದು. ಹಾಗಾಗಿ ಜಗತ್ತಿನ ಮೊದಲ ಸ್ತ್ರೀ ಸಂವೇದಿ ಸ್ವಾತಂತ್ರ್ಯ ಕ್ರಾಂತಿ, ಚಳವಳಿ ಎಂದರೆ ಅದು ಸ್ತ್ರೀಯರ ಅಹಿಂಸೆಯ ಸತ್ಯಾಗ್ರಹವೇ ಆಗಿದೆ.

ಸ್ವಾತಂತ್ರ್ಯದ ಹಿಂದಿನ ಈ ಅಹಿಂಸೆಯ ಗುಣ ಬಹಳ ದೊಡ್ಡದು. ನಾವು ಸದಾ ಇದನ್ನು ಮರೆಯುತ್ತಾ ಬಂದಿದ್ದೇವೆ. ಮನೆ ಮನೆಗಳ ತಾಯಂದಿರ ಈ ಕೌಟುಂಬಿಕ ಕಿಚ್ಚಿನ ಪ್ರತಿರೋಧವನ್ನು ಗಾಂಧೀಜಿ ಜಾಗತಿಕವಾಗಿ ವಿಸ್ತರಿಸಿದ್ದರು. ಸ್ವಾತಂತ್ರ್ಯ ಬೇಕಿದ್ದುದು ಮೂಲತಃ ಮಹಿಳೆಯರಿಗೆ. ಆ ಸ್ವಾತಂತ್ರ್ಯವನ್ನು ಪಡೆಯಲು ಮನೆ ಮನೆಗಳಲ್ಲಿ ಗಂಡಸರ ಮುಂದೆ ನಿತ್ಯವೂ ಸ್ವಾತಂತ್ರ್ಯ ಚಳವಳಿ ಶತಮಾನಗಳಿಂದ ನಡೆದೇ ಇತ್ತು.

ವಿಪರ್ಯಾಸ ಎಂದರೆ ಆ ಸ್ವಾತಂತ್ರ್ಯವು ಕುಟಂಬ ಎಂಬ ಪಂಜರದಲ್ಲೇ ಸಿಲುಕಿದೆ. ದೇಶಕ್ಕೆ ಗಾಂಧೀಜಿ ಸ್ವಾತಂತ್ರ್ಯವನ್ನು ತಂದುಕೊಡಲು ಸ್ತ್ರೀಶಕ್ತಿಯನ್ನೇ ದೊಡ್ಡ ‘ಪ್ರಮಾಣ’ವನ್ನಾಗಿ ಬಳಸಿದರು. ಈಗಲೂ ನಮ್ಮ ಕುಟುಂಬಗಳು ಪುರುಷರ ಆಳ್ವಿಕೆಯಲ್ಲೇ ಇವೆ. ಅವುಗಳಿಗೆ ಸಮಾನ ಸ್ವಾತಂತ್ರ್ಯ ಸಿಕ್ಕಿಯೇ ಇಲ್ಲ.

ನನ್ನ ತಂದೆಯ ಹಿಂಸೆಗೆ ನಲುಗಿ ನನ್ನ ತಾಯಿ ಆತ್ಮಹತ್ಯೆಗೂ ಯತ್ನಿಸುತ್ತಿದ್ದಳು. ಅದು ಕೂಡ ಕ್ರೂರಿ ಒಬ್ಬನನ್ನು ಮನುಷ್ಯನನ್ನಾಗಿಸಲು ಅವಳು ಕಂಡುಕೊಂಡಿದ್ದ ವಿಪರ್ಯಾಸದ ದಾರಿ. ಗಾಂಧೀಜಿ ಇದನ್ನು ಆಮರಣಾಂತ ಉಪವಾಸವಾಗಿ ಪರಿವರ್ತಿಸಿಕೊಂಡಿದ್ದರು. ತ್ಯಾಗ, ಬಲಿದಾನದ ಮಾತುಗಳು ಇದಕ್ಕೆ ಹೊಂದುತ್ತವೇನೋ, ಬ್ರಿಟಿಷ್ ಸಾಮ್ರಾಜ್ಯದ ಮದ್ದುಗುಂಡುಗಳು ಅನೇಕ ವೇಳೆ ಮೌನವಹಿಸಬೇಕಾದ್ದರಲ್ಲಿ ಮಹಿಳೆಯರ ಪಾಲೂ ಇದೆ.

ಅದನ್ನು ಗಾಂಧೀಜಿ ಯಾವತ್ತೋ ತನ್ನ ಹೋರಾಟಗಳಲ್ಲಿ ಅಂತರ್ಗತ ಮಾಡಿಕೊಂಡಿದ್ದರು. ಹಿಂಸೆಯಿಂದಾದ ದುಃಖವನ್ನು ಪ್ರತಿಫಲಿಸುವ ಹೆಂಗಸರ ಮುಖಗಳನ್ನು ಕಣ್ಣ ಮುಂದೆ ತಂದುಕೊಳ್ಳಿ. ಗಾಂಧೀಜಿ ಅಮರಣಾಂತ ಉಪವಾಸಕ್ಕೆ ತಲೆ ತಗ್ಗಿಸಿ ಕೂತ ಸ್ಥಿತಿಯನ್ನು ಅವಲೋಕಿಸಿ. ಹೀಗೆ ಬೇರೆ ಯಾರೂ ಕೂಡ ಸ್ವಾತಂತ್ರ್ಯಕ್ಕಾಗಿ ದುಃಖಿಸಿರಲಿಲ್ಲ. ನಮ್ಮೂರ ತಾಯಂದಿರ ದುಃಖವು ಬದುಕಿನ ಹೋರಾಟವೇ ಆಗಿತ್ತು.

ಬುದ್ಧ ಗುರು ದುಃಖದ ಜಾಡು ತೋಡಿ ತೋರಿದ್ದ. ಮಹಾವೀರ ಅಹಿಂಸೆಯ ಅಂತರ್ಜಲವನ್ನು ನೀಡಿದ್ದ. ಇವೆರಡೂ ಭಾರತೀಯ ಮಹಿಳೆಯರ ಒಡಲಕಿಚ್ಚಿನ ಮಳೆಯೇ ಆಗಿದ್ದವು. ಗಾಂಧೀಜಿ ಈ ಮಳೆಯಲ್ಲಿ ತೋಯ್ದುಹೋಗಿದ್ದರು. ವಿಪರ್ಯಾಸ ಎಂದರೆ, ಈ ಕಿಚ್ಚಿನ ಮಳೆಗೆ ಭಾರತೀಯ ಪುರುಷ ಪರಂಪರೆಗಳು ಹೇಗೆ ಕೊಡೆಹಿಡಿದುಕೊಂಡವು...? ದುಃಖವಿಲ್ಲದ ಬಾಳಿಗೆ ಅಹಿಂಸೆಯೇ ದಾರಿ ಎಂದು ಮಹಿಳೆಯರು ತಿಳಿದಿದ್ದರು. ದುಃಖಕ್ಕೆ ಅಹಿಂಸೆಯೇ ವಿಮುಕ್ತಿಯ ಮಾರ್ಗ ಎಂದು ಭಾರತೀಯ ಪರಂಪರೆಗಳು ಬೋಧಿಸಿದ್ದವು.

ಗಾಂಧೀಜಿ ಇವುಗಳನ್ನೆಲ್ಲ ಹೀರಿಕೊಂಡು ಅಧ್ಯಾತ್ಮದ ಧಾಟಿಯಲ್ಲಿ ಸ್ವಾತಂತ್ರ್ಯದ ದಂಗೆಯನ್ನು ರೂಪಿಸಿದರು. ಗಾಂಧಿಯಲ್ಲಿ ಪುರುಷರ ಗುಣವನ್ನು ಕಾಣಲಾರೆ. ತಾಯಂದಿರ ಅಸಹಾಯಕತೆಯು ದುರ್ಬಲವಾದುದಲ್ಲ. ಹಿಂಸೆಯನ್ನು ಎಸುಗುವುದು ಪೌರುಷವಲ್ಲ. ಹಿಂಸೆಯನ್ನು ಸಹಿಸಿಕೊಳ್ಳುವ ಮಹಿಳೆಯರ ಅಹಿಂಸೆಯು ಎಲ್ಲ ಶಕ್ತಿಗಳಿಗಿಂತಲೂ ದೊಡ್ಡ ಶಕ್ತಿ. ಸಹನೆ ದೌರ್ಬಲ್ಯವಲ್ಲ, ಅದು ಸಹಿಷ್ಣುತೆ, ತಾಳಿಕೆ, ಹಾಗೆಯೇ ಹಿಂಸಿಸುವವರನ್ನು ಅಹಿಂಸೆಯ ಮಾನವತೆಗೆ ಕರೆದುಕೊಳ್ಳುವ ಪರಿ.

ಪರಕೀಯರ ಆಕ್ರಮಣಗಳನ್ನು ಗಾಂಧೀಜಿ ಇದೇ ಬಗೆಯಲ್ಲಿ ಎದುರಿಸಿದ್ದುದು. ಸತ್ಯಾಗ್ರಹ ಎಂದರೆ ಇದೇ ನಡವಳಿಕೆ. ದಂಡಿಸುವವರಿಗಿಂತಲೂ ಬಲಿಷ್ಠರು ದಂಡನೆಯನ್ನು ಒಪ್ಪಿಕೊಳ್ಳುವವರು. ಮಹಿಳೆಯರು ಮತ್ತು ಅಸ್ಪೃಶ್ಯರು ಈ ವಿಚಾರದಲ್ಲಿ ಒಂದೇ. ಗಾಂಧೀಜಿ ಮಹಿಳೆಯರನ್ನು, ದಲಿತರನ್ನು ಬಹಳ ಅಂತಃಕರಣದಲ್ಲಿ ಭಾವಿಸಿದ್ದರು.ಜನಸಾಮಾನ್ಯರ ಈ ಶಕ್ತಿಯೇ ಗಾಂಧೀಜಿ ಅವರನ್ನು ಮಹಾತ್ಮನನ್ನಾಗಿಸಿದ್ದು. ಹಾಗೆಯೇ ಬ್ರಿಟಿಷ್ ಸಾಮ್ರಾಜ್ಯವನ್ನು ಮಣಿಸಿದ್ದು.

ಕುಟುಂಬ ಮತ್ತು ಸಮಾಜದ ಒಳಗಿನ ಅನೇಕ ದಾರಿಗಳಲ್ಲಿ ಈಗಲೂ ಅನೇಕ ಮಹಿಳೆಯರಿಗೆ ಪ್ರವೇಶವೇ ಇಲ್ಲ. ಮಹಾತ್ಮನ ಮೂಲಕ ನಮಗೆ ಸ್ವಾತಂತ್ರ್ಯ ಸಿಕ್ಕಿರುವುದರಲ್ಲಿ ಮಹಿಳೆಯರ ಪಾಲು ಇದೆ ಎಂಬುದೇ ಇನ್ನೂ ಗೊತ್ತಾಗಿಲ್ಲ. ಹೆಂಗಸರು ಮನೆಯ ಮೂಲೆಯಲ್ಲಿ ಇರತಕ್ಕದ್ದು ಎಂಬ ಆದೇಶ ಜಾರಿಯಲ್ಲಿರುವ ಭಾರತದಲ್ಲಿ ಗಾಂಧೀಜಿ ಮಹಿಳೆಯರ ಅಪರಾವತಾರದಂತೆ ಬ್ರಿಟಿಷರ ಮುಂದೆ ಎದ್ದು ನಿಂತದ್ದು ಪವಾಡವೇ ಸರಿ.

ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿರಲಿಲ್ಲ ನಿಜ; ಆದರೆ ಸ್ತ್ರೀ ಸಂವೇದನೆಯೇ ಗಾಂಧೀಜಿಯಲ್ಲಿ ಆತ್ಯಂತಿಕವಾಗಿ ಮಡುಗಟ್ಟಿತ್ತು. ಸ್ತ್ರೀ ಮೌಲ್ಯಗಳ ಮೂಲಕ ಜಗತ್ತಿನಲ್ಲಿ ಮೌನವಾದ ಅಹಿಂಸೆಯ ಕ್ರಾಂತಿಯನ್ನು ಮಾಡಬಹುದು ಎಂಬುದನ್ನು ಗಾಂಧೀಜಿ ತೋರಿಸಿಕೊಟ್ಟರು.

ನಮ್ಮ ತಾಯಂದಿರ ಅಹಿಂಸೆಯನ್ನು, ಶಾಂತಿಯನ್ನು, ಸಹನೆಯನ್ನು, ಪ್ರತಿರೋಧವನ್ನು ನಾವು ಪಾಲಿಸಲು ಇನ್ನಾದರೂ ಮುಂದಾಗಬೇಕು. ಮಾತೃಸಂವೇದನೆಯ ಜಾನಪದವೇ ಗಾಂಧೀಜಿಯ ವ್ಯಕ್ತಿತ್ವದಲ್ಲಿ ಲೀನವಾಗಿತ್ತು. ಆ ಮಟ್ಟಿಗೆ ಗಾಂಧಿಯ ಸ್ವಾತಂತ್ರ್ಯ ಚಳವಳಿಯೇ ಒಂದು ಗಾಂಧಿ ಜಾನಪದ! ಹಳೆಯ ಜಾನಪದವನ್ನು ಹುಡುಕುವ ಬದಲು ಈ ಜಾನಪದವನ್ನು ಮನಗಾಣಬೇಕು. ‘ಅಂಬೇಡ್ಕರ್ ಜಾನಪದ’ ಮತ್ತೊಂದು ಮಾರ್ಗ. ಅದನ್ನಿಲ್ಲಿ ವಿವರಿಸಲಾರೆ. ಅಂಬೇಡ್ಕರ್ ಅವರ ಸಂವಿಧಾನವು ಗಾಂಧಿ ಮತ್ತು ಅಂಬೇಡ್ಕರ್ ಜಾನಪದಗಳ ಸಂಗಮ ಸಂಹಿತೆ ಎಂದೇ ನಾವು ತಿಳಿಯಬಹುದು.

ಗಾಂಧೀಜಿಯ ಮಾತೃತ್ವ ಬಹಳ ದೊಡ್ಡದು. ಗಾಂಧಿಯನ್ನು ‘ರಾಷ್ಟ್ರಪಿತ’ ಎನ್ನಬಾರದಿತ್ತು. ಅವರನ್ನು ‘ರಾಷ್ಟ್ರಮಾತೆ’ ಎಂದು ಕರೆದಿದ್ದರೆ ಯಾವ ಲಿಂಗಾಪಮಾನವೂ ಆಗುತ್ತಿರಲಿಲ್ಲ. ಹಾಗೆಯೇ ನಮ್ಮದು ‘ಗಾಂಧೀ ದೇಶ’. ‘ಭಾರತಮಾತೆ’ ಎಂಬುದು ಸ್ತ್ರೀವಾದ ಸೂಚಕ. ಗಾಂಧಿಯಲ್ಲಿ ತುಂಬಿದ್ದುದು ತಾಯ್ತನದ ಗುಣಗಳೇ. ಮುಂದುವರಿದು ‘ಹಿಂದೂ’ ದೇಶದ ತಕರಾರುಗಳ ನಡುವೆ ಹೇಳುವುದಾದರೆ, ಭಾರತವನ್ನು ‘ಗಾಂಧಿಸ್ತಾನ್’ ಎಂದು ಮರುನಾಮಕರಣ ಮಾಡಿ, ಗಾಂಧಿಯ ಹೆಸರಿನ ದೇಶವನ್ನು ನಮ್ಮ ಭಾವನೆಗಳಲ್ಲಿ ಬೆಸುಗೆ ಮಾಡಿಕೊಳ್ಳಬಹುದಿತ್ತು.

ನಾನು ಜರ್ಮನಿ ದೇಶದಲ್ಲಿ ಲೇಖಕನಾಗಿ ಮಾತನಾಡಿದಾಗ, ಅಲ್ಲಿನ ವೇದಿಕೆಗಳಲ್ಲಿ ‘ಈತ ಗಾಂಧಿ ದೇಶದವನು’ ಎಂದು ಪರಿಚಯಿಸುತ್ತಿದ್ದರು. ಹಿಟ್ಲರ್ ಇದ್ದ ಕಾಲದಲ್ಲೇ ಗಾಂಧೀಜಿ ಅಹಿಂಸೆಯನ್ನು ಯಹೂದಿಗಳಿಗೂ ಹೇಳಿದ್ದರು. ಗಾಂಧೀಜಿಯ ಅಹಿಂಸೆಯ ವಿಚಾರಗಳನ್ನು ನಮ್ಮೂರ ತಾಯಂದಿರ ದಿಕ್ಕೆಟ್ಟ ಅಸಹಾಯಕತೆಯಲ್ಲಿ ಅಲ್ಲಿ ನಿವೇದಿಸುವಾಗ, ಆ ಸಭೆಗಳಲ್ಲಿ ಇರುತ್ತಿದ್ದ ಯಹೂದಿ ತಾಯಂದಿರು ನನ್ನನ್ನು ಅಪ್ಪಿಕೊಳ್ಳುತ್ತಿದ್ದರು. ಅವರ ಕಣ್ಣುಗಳಲ್ಲಿನ ಪ್ರಾಂಜಲತೆಯಲ್ಲಿ ಆ ಕ್ಷಣಕ್ಕೆ ನನ್ನ ತಾಯಿಯೂ ಗಾಂಧಿಯೂ ಪ್ರತಿಫಲಿಸಿದಂತಾಗುತ್ತಿತ್ತು.

ಒಂದು ವೇಳೆ ನಾನು ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಮಹಿಳೆಯರ ಮುಂದೆ ಗಾಂಧೀಜಿಯ ವಿಚಾರಗಳನ್ನು ಮುಟ್ಟಿಸಿದರೆ ಹೇಗಿರಬಹುದು ಎಂದು ಎಷ್ಟೋ ಬಾರಿ ಕಲ್ಪಿಸಿಕೊಂಡಿದ್ದೇನೆ. ಭಯೋತ್ಪಾದನೆಗೆ ಇರಬಹುದಾದ ಈ ಕಾಲದ ಪರ್ಯಾಯ ದಾರಿ ಗಾಂಧಿ ಮಾರ್ಗವೇ. ಇದನ್ನು ಯೋಚಿಸುವುದೇ ಕಷ್ಟ. ಅಶೋಕ ಯುದ್ಧಗಳಿಗೆ ಬೌದ್ಧ ಶಾಂತಿಯನ್ನು ಸಾರಿದ. ಈ ಕಾಲದ ವಿಶ್ವಸಂಸ್ಥೆಯ ಶಾಂತಿ ಸಂದೇಶದಲ್ಲಿ ಗಾಂಧೀಜಿಯ ಆಶಯಗಳಿವೆ.

ನಮ್ಮೂರ ತಾಯಂದಿರ ಮೂಲಕ ಈ ಬರಹವನ್ನು ಆರಂಭಿಸಿದ್ದೆ. ನಮ್ಮ ತಾಯಂದಿರು ಅವರವರ ಕೇರಿಗಳಲ್ಲಿ ಅಹಿಂಸೆಯ ತೊಟ್ಟಿಲು ಕಟ್ಟಿಯೇ ನಮ್ಮನ್ನೆಲ್ಲ ಬೆಳೆಸಿರುವುದು.ಆ ಅಹಿಂಸೆಯ ಜೋಗುಳವನ್ನು ನಾವು ಮರೆಯಬಹುದೇ? ಜಗತ್ತಿಗೆ ಆ ಜೋಗುಳವನ್ನು ನಾವೇ ಸಾರಬೇಕಲ್ಲವೇ? ಇಪ್ಪತ್ತನೇ ಶತಮಾನದ ಭಾರತೀಯ ಜನಪದಗಳಿಗೆ ದಕ್ಕಿದ ಜಾತ್ಯತೀತ ‘ಅಹಿಂಸಾ ಜಾನಪದ’ ಎಂದರೆ ಅದು ‘ಗಾಂಧಿ ಜಾನಪದ’. ನಮ್ಮ ರಾಷ್ಟ್ರೀಯ ಜಾನಪದವೂ ಇದೇ ಆಗಬೇಕು. ಹಾಗೆಯೇ ವಿಶ್ವದ ಜಾನಪದವೂ ಇದೇ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT