ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಫಾಯಿಯಲ್ಲಿ ಪಿಎಚ್‌.ಡಿ! ಚನ್ನಮ್ಮ

ವ್ಯಕ್ತಿ
Last Updated 2 ಅಕ್ಟೋಬರ್ 2016, 4:52 IST
ಅಕ್ಷರ ಗಾತ್ರ

ಹಾವೇರಿ ಜಿಲ್ಲೆಯ ಹೊಸರಿತ್ತಿ ಎಂದೊಡನೆ ನೆನಪಾಗುವುದು ‘ಹಳ್ಳಿಕೇರಿ’ ಎಂಬ ಪದ. ಸ್ವಾತಂತ್ರ್ಯ ಹೋರಾಟದ ಇತಿಹಾಸ­ದಲ್ಲಿ ಚಿರಸ್ಥಾಯಿಯಾದ ಈ ಊರು ‘ಹಳ್ಳಿಕೇರಿ’ ಮನೆತ­ನವೊಂದ­ರಿಂದಲೇ 10ಕ್ಕೂ ಹೆಚ್ಚು ಸ್ವಾತಂತ್ರ್ಯ ಯೋಧರನ್ನು ದೇಶಕ್ಕೆ ಕೊಟ್ಟಿದೆ. ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನ­ರಾಗಿರುವ ಚನ್ನಮ್ಮ ಹಳ್ಳಿಕೇರಿ ಕೂಡ ಇದೇ ಊರಿನ ಮಗಳು.

ಜನವರಿ 2, 1931ರಲ್ಲಿ ಚನ್ನಬಸಪ್ಪ–ಗೌರಮ್ಮ ದಂಪತಿಯ ಎರಡನೇ ಮಗಳಾಗಿ ಜನಿಸಿದ ಚನ್ನಮ್ಮ ಸ್ವಾತಂತ್ರ್ಯ ಹೋರಾಟ­ಗಾರ್ತಿ, ಸಮಾಜ ಸೇವಕಿ, ಗಾಂಧಿ ತತ್ವ ಪರಿಪಾಲಕಿ, ಇವೆಲ್ಲದರ ಜೊತೆಗೆ ಭೂದಾನ ಚಳವಳಿಯ ನೇತಾರ ಆಚಾರ್ಯ ವಿನೋಬಾ ಭಾವೆಯವರ ಕಟ್ಟಾ ಅನುಯಾಯಿ.

ಆ ಹೊತ್ತಿಗಾಗಲೇ ಹೊಸರಿತ್ತಿಯು ಸ್ವಾತಂತ್ರ್ಯ ಹೋರಾ­ಟದ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಅಜ್ಜ ಹಳ್ಳಿಕೇರಿ ಗುದ್ಲೆಪ್ಪ (ಚನ್ನಮ್ಮ ಅವರ ಅಜ್ಜ ಚನ್ನಪ್ಪ ಅವರ ಕಾಕಾನ ಮಗ) ಹಾಗೂ ವೆಂಕಟೇಶ ಮಾಗಡಿ ಅವರು ಅಲ್ಲಿ ಗಾಂಧಿ ಆಶ್ರಮ ಸ್ಥಾಪಿ­ಸಿದ್ದರು. ತಂದೆಯೊಂದಿಗೆ ಅಲ್ಲಿಗೆ ತೆರಳುತ್ತಿದ್ದ ಬಾಲಕಿ ಚನ್ನಮ್ಮಗೆ ಆಶ್ರಮದಲ್ಲಿ ಇರುತ್ತಿದ್ದ ಮೈಲಾರ ಮಹಾದೇವ, ವೆಂಕಟೇಶ ಮಾಗಡಿ, ಪ್ರಭುಜೀ ಸವಣೂರ, ರಮಾನಂದ ಮನ್ನಂಗಿ, ಹಳ್ಳಿ­ಕೇರಿ ಗುದ್ಲೆಪ್ಪ ಮುಂತಾ­ದವರು ಪ್ರೇರಣೆ­ಯಾದರು. ಅವರೊಂದಿಗೆ ನಿತ್ಯ ಪ್ರಾರ್ಥನೆಯಲ್ಲಿ ಭಾಗಿಯಾಗಿ ಕೈಮುಗಿದ ಆ ಪುಟ್ಟ ಕೈಗಳು ಬದುಕಿ­ನುದ್ದಕ್ಕೂ ಸಮಾಜ ಸೇವೆಗೆ ಮುಡಿಪಾದವು.

ಗಾಂಧೀಜಿ ದರ್ಶನ, ಆಶ್ರಮದ ಒಡನಾಟ, ಅಲ್ಲಿ ನಡೆಯುವ ನಿತ್ಯದ ಪ್ರಾರ್ಥನೆ, ಅಸ್ಪೃಶ್ಯತೆ ನಿವಾರಣಾ ಕಾರ್ಯಕ್ರಮಗಳು, ಗ್ರಾಮ ಸ್ವಚ್ಛತೆ,  ಖಾದಿ ಉತ್ಪಾದನೆ... ಇಂಥ ಪರಿಸರದಲ್ಲಿಯೇ ಬೆಳೆದ ಚನ್ನಮ್ಮ, ಒಂದು ವರ್ಷದ ಕೂಸಾಗಿದ್ದಾಗಲೇ ತಾಯಿಯೊಂದಿಗೆ ಜೈಲು ಕಂಡು ಬಂದವರು!
‘ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು’ ಎಂದು ಬಾಲಗಂಗಾಧರನಾಥ ತಿಲಕರು ನೀಡಿದ ಕರೆಗೆ ಓಗೊಟ್ಟ ಚನ್ನಮ್ಮ ಅವರ ತಂದೆ ಚನ್ನಬಸಪ್ಪ ಸ್ವಾತಂತ್ರ್ಯ ಹೋರಾಟಕ್ಕೆ ಧುಮು­ಕಿದರು. ಹೊಸರಿತ್ತಿ ಸುತ್ತಮುತ್ತಲಿನ ಯುವಕರನ್ನು ಸಂಘಟಿಸಿದರು.

ಈ ಹೋರಾಟದಲ್ಲಿ ತಾಯಿ ಗೌರಮ್ಮ ಕೂಡ ಭಾಗಿ­ಯಾದರು. ಬ್ರಿಟಿಷ್‌ ಸರ್ಕಾರ ಹೋರಾಟಗಾರರನ್ನು ಬಂಧಿಸಿದಾಗ ಗೌರಮ್ಮ ಹಸುಗೂಸು ಚನ್ನಮ್ಮನನ್ನೂ ಬಗಲಿನಲ್ಲಿ ಎತ್ತಿಕೊಂಡು ಬೆಳಗಾವಿ ಜೈಲು ಸೇರಿದರು! ತಂದೆ– ತಾಯಿ ಇಬ್ಬರೂ ಜೈಲಿನಿಂದ ಹೊರಬಂದಾಗ ಅವರ ಕಿರಾಣಿ ಅಂಗಡಿ, ಮನೆ ಹಾಳಾಗಿದ್ದವು.

ತುತ್ತು ಅನ್ನಕ್ಕೂ ಪಡಿಪಾಟಲು ಪಡುವ ಸ್ಥಿತಿ ಬಂದಿತ್ತು. ಹೊಲದಲ್ಲಿ ಕೂಲಿ ಮಾಡಿ ಉಂಡರೆ, ಚರಕದಲ್ಲಿ ನೂತು ಲಡಿ ಮಾಡಿ, ನೇಯ್ದ ಬಟ್ಟೆ ಮೈಗಾಗುತ್ತಿತ್ತು. ಇಂಥ ಹೊತ್ತಿನಲ್ಲಿ ಎಲ್ಲಿಯ ಶಾಲೆ? ಅಣ್ಣ ಬಸಪ್ಪ ವಾರಾನ್ನ ಮಾಡಿ­ಕೊಂಡು ಪರ ಊರಿನಲ್ಲಿ ಓದಿದರೆ, ಅಕ್ಕ ಬಸವಣ್ಣೆಮ್ಮ ಶಾಲೆಗೆ ಹೋಗಲಿಲ್ಲ. ಓದುವ ಆಸೆ ಇದ್ದರೂ ಚನ್ನಮ್ಮಗೆ ನಾಲ್ಕನೇ ತರಗತಿ ಕೂಡ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹೊಟ್ಟೆಯ ಸಂಕಟದ ಈ ಹೊತ್ತಿನಲ್ಲಿಯೇ ಚನ್ನಮ್ಮ ಅವರು ನಾಟಕ ಕಂಪನಿ ಸೇರುವ ನಿರ್ಧಾರ ಮಾಡಿದ್ದರಂತೆ!

ಆ ಬಳಿಕ ಹೊಸರಿತ್ತಿಯ ಕಸ್ತೂರಬಾ ಕೇಂದ್ರದಲ್ಲಿ 12ನೇ ವಯ­ಸ್ಸಿಗೇ ಗ್ರಾಮ ಸೇವಿಕಾ (ಗ್ರಾಮಸೇವಕಿ) ಆಗಿ ಕೆಲಸಕ್ಕೆ ಸೇರಿ­ದರು. ಅಲ್ಲಿಂದ ಅವರ ಗ್ರಾಮ ಸೇವೆಯ ಪಯಣ ಆರಂಭ­ವಾಯಿತು. ಮೂರು ವರ್ಷದ ಬಳಿಕ ಹುಬ್ಬಳ್ಳಿಯ ಅಮರಗೋಳ, ಹಿರೇಕುಂಬಿ, ಅರಸೀಕೆರೆಯ ಕಸ್ತೂರಬಾ ಕೇಂದ್ರಗಳಲ್ಲಿ ಇದ್ದುಕೊಂಡು ಹಲವು ವರ್ಷಗಳ ಕಾಲ ಸಮಾಜ ಸೇವೆ ಮಾಡಿದರು. ಗ್ರಾಮ ಸೇವಿಕಾ ಎಂದರೆ ಅಪ್ಪಟ ಕಷ್ಟಸಹಿಷ್ಣು ಬದುಕೇ ಆಗಿದ್ದಿತು.

ಕಷ್ಟಪಟ್ಟು ದುಡಿಯಬೇಕು. ದುಡಿದದ್ದನ್ನು ಇಲ್ಲದವರೊಂದಿಗೆ ಹಂಚಿ ಉಣ್ಣಬೇಕು ಎಂಬುದೇ ಅಲ್ಲಿನ ಧ್ಯೇಯ. ಈ ನಡುವೆ ಗದುಗಿನ ಆಸ್ಪತ್ರೆಯಲ್ಲಿ ದಾದಿಯಾಗಿ ಕಾರ್ಯನಿರ್ವಹಿಸಿದರು. ಅರಸೀಕೆರೆಯಿಂದ ವಾಪಸ್‌ ಹೊಸರಿತ್ತಿಗೆ ಬಂದು ನೆಲೆಸಿದಾಗ, 1957ರಲ್ಲಿ ಆಗಿದ್ದು ಆಚಾರ್ಯ ವಿನೋಬಾ ದರ್ಶನ. ಅದು ಭೂದಾನ ಯಜ್ಞದ ಹೊತ್ತು.

ಹಾವನೂರಿಗೆ ಬಂದ ವಿನೋಬಾಜಿ ಅವರನ್ನು ಕಾಣ­ಲೆಂದು ಹೋದವರು, ಭೂದಾನ ಚಳವಳಿಯ ಪಾದಯಾತ್ರೆ ಸೇರಿಕೊಂಡರು. ಉತ್ತರ ಭಾರತದ ವಿವಿಧೆಡೆ ಸಂಚರಿ­ಸಿದರು. ಬಳಿಕ ಮೀರಾತಾಯಿ ಕೊಪ್ಪೀಕರ್‌, ಭಾಗೀ­ರಥಿ, ಲಕ್ಷ್ಮಿ ಹಾಗೂ ಚನ್ನಮ್ಮ ಅವರನ್ನು ಒಳಗೊಂಡ ಮಹಿಳಾ ಪಡೆ ಕರ್ನಾಟಕದಲ್ಲಿ ಸಜ್ಜಾಯಿತು. ನಾಲ್ವರೂ ಬಟ್ಟೆ–ಬರೆ, ಚರಕ, ಹಂಜಿ, ಕಂದೀಲು ಹಿಡಿದು ಹಳ್ಳಿಹಳ್ಳಿ ಪ್ರವಾಸ ಕೈಗೊಂಡರು. ಭೂಮಿ ಎಲ್ಲರಿಗೂ ಸೇರಿದುದು; ಬಡವರಿಗೂ ಭೂಮಿ ಹಂಚಿ ಎಂಬ ಘೋಷಣೆ ಪ್ರಚುರಪಡಿಸುತ್ತ ಹೊರಟರು.

ಈ ಪಯಣದಲ್ಲಿ ಭಿಕ್ಷಾಟನೆ ಮಾಡಿ ಹೊಟ್ಟೆ­ ತುಂಬಿಸಿ­ಕೊಂಡರು. ಗುಡಿ–ಮಸೀದಿಗಳಲ್ಲಿ ಮಲಗಿದರು. ಖಾದಿ, ಗಾಂಧಿ ಆದರ್ಶಗಳು, ಸ್ವಚ್ಛತೆ ಬಗ್ಗೆ ಅರಿವು ಮೂಡಿ­ಸುತ್ತ ಬಸವಣ್ಣ ಹಾಗೂ ಅಕ್ಕಮಹಾದೇವಿಯ ವಚನಗಳ ಮಹತ್ವ ತಿಳಿಸುತ್ತ ಸಾಗಿದರು. ಹೇಳಿದಷ್ಟು ಸುಲಭವಾಗಿರಲಿಲ್ಲ ಈ ಕಾರ್ಯ.

ಮದುವೆಯನ್ನು ನಿರಾಕರಿಸಿ, ದೇಶಸೇವೆಗೆ ತಮ್ಮ ಬದುಕನ್ನು ಮುಡಿಪಾ­ಗಿಟ್ಟ ಹೆಣ್ಣು ಮಕ್ಕಳಿಗೆ ಧೈರ್ಯವೇ ದೊಡ್ಡದಾಗಿತ್ತು. ವಿನೋಬಾ ಅವರ ಸಂದೇಶದ ಮೇರೆಗೆ 12 ವರ್ಷಗಳ ಪಾದಯಾತ್ರೆ ಸಂಕಲ್ಪ ಮಾಡಿದ ಈ ತಂಡ, ವಿವಿಧ ರಾಜ್ಯಗಳ ಮಹಿಳೆಯ­ರೊಂದಿಗೆ ಆರು ತಿಂಗಳ ಕಾಲ ರಾಜ್ಯದ ಉದ್ದಗಲಕ್ಕೂ ಸಂಚರಿಸಿತು.

ಚನ್ನಮ್ಮ ಅವರು ಮಹಾರಾಷ್ಟ್ರದ ಪವನಾರದ ಬ್ರಹ್ಮ­ವಿದ್ಯಾಮಂದಿರದ ಆಶ್ರಮ ಸೇರಿದಾಗ ಅವರಿಗೆ 28 ವರ್ಷ ವಯಸ್ಸು! ಸಾಮೂಹಿಕ ಸ್ವಚ್ಛತಾ ಕಾರ್ಯಪಡೆಯ ಮುಂದಾ­­­ಳತ್ವ, ಗಾಂಧಿ, ವಿನೋಬಾ ತತ್ವಗಳು ಹಾಗೂ ಸರ್ವೋ­­ದಯ ಸಂದೇಶ ಪ್ರಚಾರಕ್ಕಾಗಿ 16 ದೇಶಗಳಲ್ಲಿ ಪ್ರವಾಸ ಮಾಡಿದ, ಗ್ರಾಮ ನೈರ್ಮಲ್ಯ, ಅಸ್ಪೃಶ್ಯತೆ ನಿವಾರಣೆ, ಅಹಿಂಸೆ, ಮಹಿಳಾ ಸಬಲೀಕರಣ, ಮದ್ಯಪಾನ ವಿರೋಧಿ ನೀತಿ, ಖಾದಿ ಬಳಕೆ ಪ್ರಚುರಪಡಿಸುತ್ತ ದೀನ–ದಲಿತರ ಉದ್ಧಾ­ರ­­ಕ್ಕಾಗಿ ಬದುಕನ್ನು ಮುಡಿಪಾಗಿಟ್ಟ ಚನ್ನಮ್ಮ ಅವರಿಗೆ ಈಗಲೂ ಆಶ್ರಮವೇ ಎಲ್ಲ.

ಅವರ ಪ್ರಕಾರ, ಅದು ವಿನೋಬಾಜಿ ಮಹಿಳೆಯರಿಗಾಗಿ ನಿರ್ಮಿ­ಸಿದ ಜೀವನ­ಕೇಂದ್ರ.‘ಮುಂದಿನ ಯುಗವು ಸ್ತ್ರೀಯ­ರದೇ ಆಗಿದೆ. ಮಹಿ­ಳೆಯು ಪುರುಷರ ಆಶ್ರಯದಲ್ಲಿರದೆ ಕೇವಲ ಅವರ ಸಹಾ­ಯ­­ವನ್ನು ಮಾತ್ರ ತೆಗೆದುಕೊಳ್ಳುವಂತಿ­ರ­ಬೇಕು. ಕರ್ತ­ವ್ಯ­­ವನ್ನು ಮಹಿಳೆಯರೇ ಮಾಡಲಿ, ಆದರೆ ನಾನೇ ಮಾಡಿ­­­ದೆನೆಂಬ ಭಾವನೆ ಬೇಡ. ಹಾಗಂದುಕೊಂಡರೆ ನೇತಾ­ರ­­­ರಾ­ಗು­ತ್ತಾರೆ. ಅದ­ರಲ್ಲಿ ಬ್ರಹ್ಮವಿದ್ಯೆ ಇಲ್ಲ. ನಾನು ಏನೂ ಮಾಡಿಲ್ಲ ಎಂಬ ಭಾವನೆ ಬಂದರೆ ಮಾತ್ರ ಬ್ರಹ್ಮವಿದ್ಯೆ’ ಎನ್ನುತ್ತಾರೆ ಚನ್ನಮ್ಮ.

‘ಏನು ಓದಿದ್ದೀರಿ?’ ಎಂದು ಬಸ್ಸಿನಲ್ಲಿ ಸಹ ಪ್ರಯಾಣಿಕ­ನೊಬ್ಬನ ಪ್ರಶ್ನೆಗೆ ಉತ್ತರವಾಗಿ ಚನ್ನಮ್ಮ ಹಳ್ಳಿಕೇರಿ ಹೇಳಿದ್ದು ‘ನನ್ನದು ಸಫಾಯಿಯಲ್ಲಿ ಪಿಎಚ್‌.ಡಿ!’. ಉತ್ತರ ಕೇಳಿ ದಂಗಾದ ಆತ­ನಿಗೆ ಚನ್ನಮ್ಮ ವಿವರಿಸಿದ್ದು ಹೀಗೆ. ‘ನಮ್ಮ ದೇಶದಲ್ಲಿ ಎಲ್ಲಿ ನೋಡಿ­ದಲ್ಲಿ ಹೊಲಸೇ ಹೊಲಸು. ಸ್ವಚ್ಛತೆಯ ವಿಷಯದಲ್ಲಿ ಪಿಎಚ್‌.ಡಿ ಮಾಡಿ, ಆ ಜ್ಞಾನವನ್ನು ಕಾರ್ಯರೂಪಕ್ಕೆ ತಂದರೆ ನಮ್ಮ ದೇಶ ಸ್ವಚ್ಛ ಸುಂದರವಾಗಿ ಕಾಣುತ್ತದೆ. ಅದಕ್ಕಾಗಿಯೇ ನಾನು ಆ ಸಫಾಯಿಯಲ್ಲಿಯೇ ಪಿಎಚ್.ಡಿ ತೆಗೆದುಕೊಂಡಿದ್ದೇನೆ’.

‘ನಾಲ್ಕನೇ ತರಗತಿ ಪಾಸು ಮಾಡಲಾಗದಿದ್ದರೂ ಹಿಂದಿ­ಯಲ್ಲಿ ಅಸ್ಖಲಿತವಾಗಿ ಮಾತನಾಡುತ್ತಾರೆ, ಬರೆಯುತ್ತಾರೆ. ಅವರ ಬದುಕು ಪಿಎಚ್‌.ಡಿ ಅಧ್ಯಯನ ಮಾಡುವಷ್ಟು ದೊಡ್ಡ­­ದಾ­ಗಿದೆ’ ಎನ್ನುತ್ತಾರೆ ಚನ್ನಮ್ಮ ಅವರ ಸೋದರ ಡಾ. ರುದ್ರಪ್ಪ ಹಳ್ಳಿಕೇರಿ.

ಚನ್ನಮ್ಮ ಅವರ ಇಬ್ಬರು ಕಿರಿಯ ಸೋದರರಾದ ಡಾ. ಗುದ್ಲೆಪ್ಪ, ಡಾ. ರುದ್ರಪ್ಪ ಧಾರವಾಡದಲ್ಲಿಯೇ ನೆಲೆಸಿದ್ದು, ಅವರಿಗೆ ಅಕ್ಕನ ಕಷ್ಟದ ಬದುಕು ಗೊತ್ತಿದೆ. ‘ಇಲ್ಲಿಗೇ ಬಂದು ಬಿಡು’ ಎಂಬ ಅವರ ಒತ್ತಾಯ ಫಲಿಸಲಿಲ್ಲ. ಸ್ವಾತಂತ್ರ್ಯ ಹೋರಾಟದ ಭಾಗವಾಗಿಯೇ ಇದ್ದ ತಮ್ಮ ಕುಟುಂಬ, ಆಶ್ರಮದಲ್ಲಿರುವ ಅಕ್ಕ, ಅವರ ಸಾಧನೆಯ ಬಗೆಗಿನ ಹೆಮ್ಮೆ ಅವರೊಂದಿಗಿದೆ. ಅದು ನಮ್ಮ ಹೆಮ್ಮೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT