ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೌವನದ ಹಾಯಿಪಟವ ಮಡಿಸಿಡುವಿರೇಕೆ?

Last Updated 2 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ತರಗತಿಯಲ್ಲಿ ಹಾಜರಾತಿ ಗುರುತು ಹಾಕುವಾಗ ಹೆಸರು ಕರೆದ ಬಳಿಕ ಕೈ ನಿಲ್ಲುತ್ತದೆ, ಕತ್ತೆತ್ತಿ ಕೇಳುತ್ತೇನೆ, ‘ಏಕೆ, ...... ಬಂದಿಲ್ಲವೆ?’ ‘ಇಲ್ಲ ಸರ್...ಇನ್ನು ಮುಂದೆ ಬರುವುದಿಲ್ಲ ......... ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂಬ ಉತ್ತರ. ‘ಅಯ್ಯೋ, ಏನೆಂದು ಗುರುತು ಹಾಕಲಿ?’ ಎಂದುಕೊಳ್ಳುತ್ತೇನೆ. ಒಂದು ಅಡ್ಡಗೆರೆ ಎಳೆದು ಸುಮ್ಮನಾಗುತ್ತೇನೆ. ಆದರೆ ಪಾಪಪ್ರಜ್ಞೆ ಕಾಡುತ್ತದೆ. 

19–20 ಸಾಯುವ ವಯಸ್ಸೆ? ಸಾವನ್ನು ಆಹ್ವಾನಿಸುವ ವಯಸ್ಸೆ? ಸಾವು ಬದುಕಿನ ಎಲ್ಲ ಸಮಸ್ಯೆಗೆ ಪರಿಹಾರವೆ? ಶಿಕ್ಷಕನಾಗಿ ನಾನೇಕೆ ವಿದ್ಯಾರ್ಥಿಯ ಭಾವನಾತ್ಮಕ ಸೋಲನ್ನು ಗುರುತಿಸಲು ವಿಫಲನಾದೆ? ದೋಷವೆಲ್ಲಿದೆ? ಪರಿಹಾರವೇನು? ನೂರಾರು ಪ್ರಶ್ನೆಗಳು ಒಮ್ಮೆಗೇ ಉದ್ಭವಿಸಿ ನಿರುತ್ತರನಾಗುತ್ತೇನೆ.

ದಿನಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ, ವಾಹಿನಿಗಳ ಸುದ್ದಿಯಲ್ಲೂ ಕಾಣುತ್ತೇವೆ, ಆತ್ಮಹತ್ಯೆಯ ವಿವಿಧ ಅವತಾರಗಳು ಬಣ್ಣ ಬಣ್ಣವಾಗಿ ಚಿತ್ರಿಸಲ್ಪಡುತ್ತವೆ. ಸೀರಿಯಲ್‌ಗಳಲ್ಲಿ, ಸಿನಿಮಾಗಳಲ್ಲಿ ಕೂಡ ಇವುಗಳ ‘ಕಲಾತ್ಮಕ’ ದೃಶ್ಯಗಳಿವೆ. ಮಾಧ್ಯಮಗಳ ಈ ರಂಜನೀಯ ಚಿತ್ರಣವೂ ಯುವಜನರ ಆತ್ಮಹತ್ಯೆಗೆ ಕಾರಣವಾಗಿರಬಹುದೆ ಎಂಬ ಸಂದೇಹ ಕಾಡುತ್ತದೆ.

ಶಿಕ್ಷಕನಾದವನು ಪಾಠಮಾಡಲಷ್ಟೇ ತನ್ನ ವೃತ್ತಿಯನ್ನು ಪರಿಗಣಿಸದೆ ವಿದ್ಯಾರ್ಥಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅವರ ನಡವಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಕೂಡಲೇ ಅವರನ್ನು ವಿಚಾರಿಸಿ (ವಿಚಾರಣೆ ನಡೆಸಿ ಅಲ್ಲ!) ಕಾರಣ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳ ನಡೆ-ನುಡಿಗಳಲ್ಲಿ ಬದಲಾವಣೆ ಕಂಡಕೂಡಲೆ ಅಧ್ಯಾಪಕ ಎಚ್ಚೆತ್ತುಕೊಳ್ಳಬೇಕು. ತರಗತಿಗಳಿಂದ ಗೈರುಹಾಜರಾಗುವುದು ಇದರ ಮೊದಲ ಲಕ್ಷಣ.

ತಕ್ಷಣ ಕರೆಸಿ ವಿಚಾರಿಸಿ, ಆವಶ್ಯಕತೆಯಿದ್ದಲ್ಲಿ ಪೋಷಕರನ್ನು ಕರೆಸಿ ಮಾತಾಡಬೇಕು. ಅವನ ಆಹಾರ, ವಿಹಾರಗಳು ಸಹಜವಾಗಿದೆಯೊ, ನಿದ್ರೆ ಮಾಡುತ್ತಿದ್ದಾನೆಯೊ, ದೇಹದ ತೂಕದಲ್ಲಿ ಹಠಾತ್ ವ್ಯತ್ಯಾಸಗಳಾಗುತ್ತಿವೆಯೊ  ಇವೆಲ್ಲ ವಿವಿಧ ಮಾಪಕಗಳು. ಸಾಮಾನ್ಯವಾಗಿ ಪುಟ್ಟ ಮಕ್ಕಳಾಗಿದ್ದಾಗ ತೋರಿದ ಆಸಕ್ತಿ, ಕಕ್ಕುಲಾತಿಗಳನ್ನು ಹರೆಯದ ಮಕ್ಕಳಿಗೆ ನೀಡಲು ಪೋಷಕರು ಮರೆಯುತ್ತಾರೆ ಅಥವಾ ಕಡೆಗಣಿಸುತ್ತಾರೆ.

ಆದರೆ ಶಿಕ್ಷಕನಾದವನು ತಿಳಿದಿರಬೇಕು; ಹರೆಯ ಬಂದರೂ ಅವರು ಮಕ್ಕಳೇ, ಮೀಸೆ ಬಂದ ಮಕ್ಕಳು! ಅವರು, ಪ್ರೀತಿ, ವಿಶ್ವಾಸ, ಒತ್ತಾಸೆ, ಪ್ರಶಂಸೆಗಳನ್ನು ನಿರೀಕ್ಷಿಸುತ್ತಿರುತ್ತಾರೆ. ಕಲಿಕೆಯಲ್ಲಿ ಹಿಂದುಳಿದವನು ಕಬಡ್ಡಿಯಲ್ಲಿ ಮುಂದಾಗಿರಬಹುದು. ಅವನನ್ನು ಖಂಡಿಸದೆ, ಬೆನ್ನುತಟ್ಟಿ ಪ್ರೋತ್ಸಾಹಿಸಿ ಓದಿನಲ್ಲೂ ಅವನನ್ನು ಮುಂದೆ ತರಲು ಪ್ರಯತ್ನಿಸಬೇಕು.

ಅದು ನಿಜವಾದ ಶಿಕ್ಷಣ, ಶಿಕ್ಷಕ. ಸಹಜವಾದ ಇನ್ನುಳಿದ ಹಲವು ತೊಂದರೆಗಳು ಮಕ್ಕಳಿಗೆ ಇರಬಹುದು. ಅದನ್ನು ಗಮನಿಸುವ ತಾಳ್ಮೆ ಅಧ್ಯಾಪಕನಿಗಿರಬೇಕು. ನಾನು ಪಾಠ ಕಲಿಸುತ್ತಿದ್ದ ತರಗತಿಯಲ್ಲಿ ಒಬ್ಬ ಹುಡುಗನಿದ್ದ, ಅವನಿಗೆ ಉಗ್ಗು. ಅದು ಮೊದಲಿಗೆ ನನಗೂ ತಿಳಿದಿರಲಿಲ್ಲ. ಆದರೆ ಯಾವಾಗ ಓದಲು ಹೇಳಿದರೂ ಅವನು ಪಕ್ಕದವನಿಗೆ ಓದಲು ಹೇಳಿ, ತಾನು ತಲೆ ತಗ್ಗಿಸಿ ಕುಳಿತುಕೊಳ್ಳುತ್ತಿದ್ದ.

ಒಮ್ಮೆ ನಾನು ಪುಸಲಾಯಿಸಿದೆ, ಹೆದರುತ್ತಲೇ ಓದಲು ನಿಂತ, ಕೆಲವೇ ಪದಗಳನ್ನು ಓದುತ್ತಿದ್ದಂತೆ ಅವನ ಸಮಸ್ಯೆ ನನಗರಿವಾಯಿತು. ಅವನ ಬಳಿ ಸಾರಿ ನಿಂತು ಉಗ್ಗುತ್ತಿದ್ದ ಪದಗಳನ್ನು ಪುನರುಚ್ಚರಿಸಲು ಸಹಾಯ ಮಾಡತೊಡಗಿದೆ. ಆ ಪುಟ ಓದಿ, ಬೆವರೊರೆಸಿ ಕುಳಿತ.

ನಾನೊಂದು ಮೆಚ್ಚುಗೆಯ ನಗೆ ಬೀರಿ ಉಳಿದ ವಿದ್ಯಾರ್ಥಿಗಳತ್ತ ನೋಡಿದೆ, ಇಡೀ ತರಗತಿ ಕರತಾಡನ ಮಾಡಿ ಅವನನ್ನು ಅಭಿನಂದಿಸಿತು. ದಿನದ ತರಗತಿಗಳು ಮುಗಿದ ಬಳಿಕ ಆ ವಿದ್ಯಾರ್ಥಿ ನನ್ನ ಬಳಿ ಬಂದು ಹೇಳಿದ, ‘ಸಾರ್, ನಾನು ಈ ಹಿಂದಿನ ತರಗತಿಗಳಲ್ಲಿ ಓದಲು ಪ್ರಯತ್ನಿಸಿ ಉಗ್ಗಿದಾಗೆಲ್ಲ ಅಧ್ಯಾಪಕರು,  ‘‘ನೀನು ಕುಳಿತುಕೊ, ಪಕ್ಕದವನು ಓದಲಿ’’ ಎಂದುಬಿಡುತ್ತಿದ್ದರು.

ನಾನು ಕುಗ್ಗಿಹೋಗಿದ್ದೆ. ಆದರೆ ಇಂದು ನನಗೆ ತುಂಬ ಸಂತೋಷವಾಗಿದೆ’  ಎಂದ. ನಮ್ಮಿಬ್ಬರ ಕಣ್ಣಾಲಿಗಳು ತುಂಬಿಬಂದಿದ್ದವು. ಕೃತಜ್ಞತೆಯಿಂದ ಅವನ ಕಣ್ತುಂಬಿದ್ದರೆ, ಸಾರ್ಥಕಭಾವದಿಂದ ನನ್ನ ಕಣ್ಣು ಹನಿಗೂಡಿತ್ತು. ಅಧ್ಯಾಪನದ ಶ್ರೇಷ್ಠ ಕ್ಷಣಗಳು ಬಡ್ತಿ, ವೇತನ ಹೆಚ್ಚಳ ಬಂದಾಗಿನದಲ್ಲ, ಅವು ಇಂತಹ ಸುಂದರ ಮಾನುಷಕ್ಷಣಗಳು.

ಶಿಕ್ಷಣದ ಉದ್ದೇಶ ಮನುಷ್ಯನ ಆತ್ಮಗೌರವವನ್ನು ಹೆಚ್ಚಿಸುವುದೇ ಹೊರತು ಅವನಲ್ಲಿ ಮಾಹಿತಿ ತುಂಬುವುದಲ್ಲ, ಒತ್ತಡ ಉಂಟುಮಾಡುವುದಲ್ಲ. ನಮ್ಮ ಕಲಿಕೆಯ ದಿನಗಳನ್ನು ನೆನಪಿಸಿಕೊಂಡಾಗ ನಮಗೆ ಪಾಠ ಕಲಿಸಿದ ಅನೇಕ ಅಧ್ಯಾಪಕರ ಪೈಕಿ ನಮಗೆ ತಕ್ಷಣ ಮನಸ್ಸಿಗೆ ಬರುವವರು ಯಾರು? ಯಾರು ನಮಗೆ ಹೆಚ್ಚು ಪ್ರೀತಿ ತೋರಿದವರೊ ಅವರು, ಯಾರು ಕಾಳಜಿ ತೋರಿದವರೋ ಅವರು!

ಯುವ ವಿದ್ಯಾರ್ಥಿಗಳ ವಯೋಮಾನದ ಸೂಕ್ಷ್ಮತೆಯನ್ನು ಅರಿತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಬೇಕು. ಅಂದರೆ ಅವರು ಮಾಡಿದ್ದನ್ನೆಲ್ಲ ಒಪ್ಪಬೇಕು ಎಂದಲ್ಲ. ಆದರೆ ಹದಿಹರೆಯದವರ ಮೈಯೊಳಗೆ ಹರಿಯುತ್ತಿರುವ ಹಲವು ಹಾರ್ಮೋನುಗಳ ಅಲ್ಲೋಲಕಲ್ಲೋಲವನ್ನು ಗುರುತಿಸುವ, ಗೌರವಿಸುವ ವಿವೇಕ ಶಿಕ್ಷಕನಿಗಿರಬೇಕು.

ಅವರ ಮನಸ್ಸು ಮತ್ತು ದೇಹಗಳು ಅತಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಅನೇಕ ಗೊಂದಲಗಳಿರುತ್ತವೆ, ಸರಿ-ತಪ್ಪು ವಿವೇಚನೆಯಿದ್ದರೂ ಮನಸ್ಸು ಬೇಡಿದ್ದನ್ನು ಮಾಡಿಬಿಡುವ ಉತ್ಸಾಹವಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಒಂದು ಬಗೆಯ ವಿಷಾದವೂ ಅಲ್ಲಿ ಕಾಡುಕತ್ತಿರುತ್ತದೆ. ಯುವಜನರಲ್ಲಿ ಕಾಣಬರುವ ಖಿನ್ನತೆ ಮತ್ತು ಇತರೆ ಸಣ್ಣ ಮನೋಕಾಯಿಲೆಗಳನ್ನು ಹೆಚ್ಚಾಗಿ ಆಪ್ತಸಲಹೆಯಿಂದಲೇ ಪರಿಹರಿಸಬಹುದು.

ಇನ್ನು ಹಲವು ಗಂಭೀರ ಸಮಸ್ಯೆಗಳಿಗೆ ಸೂಕ್ತ ವೈದ್ಯಕೀಯ ಪರಿಹಾರೋಪಾಯಗಳನ್ನು ಸೂಚಿಸಬೇಕು. ಇದು ಕೇವಲ ಗಂಟೆ, ಗಂಟುಗಳನ್ನೆಣಿಸುವ ಅಧ್ಯಾಪಕರಿಂದ ಸಾಧ್ಯವಾಗುವುದಿಲ್ಲ. ಅದಕ್ಕೆ ತನ್ನ ವೃತ್ತಿಯನ್ನು ಪ್ರೀತಿಸುವ ‘ಮೇಷ್ಟ್ರು’ ಬೇಕು.

ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆ, ಯು.ಜಿ.ಸಿ. ನಿಯಮಾವಳಿಗಳು ಪ್ರತಿ ಕಾಲೇಜಿನಲ್ಲೂ ಒಂದು ಆಪ್ತಸಲಹಾ ವಿಭಾಗವಿರಬೇಕೆಂದು ಸೂಚಿಸುತ್ತದೆ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದೆ ಎಂಬುದನ್ನು ಆಯಾ ಶಿಕ್ಷಣಸಂಸ್ಥೆಗಳ ಮುಖ್ಯಸ್ಥರೇ ಗಮನಿಸಬೇಕು. ಯಾವುದೋ ಒಂದು ಕೊಠಡಿಗೆ ‘ಆಪ್ತಸಲಹಾ ಕೇಂದ್ರ’ ಎಂದು ಬೋರ್ಡು ತಗುಲಿಸಿ ಇಲಾಖೆಯ ಅಧಿಕಾರಿಗಳ ಭೇಟಿಯ ಬಳಿಕ ಅದನ್ನು ಬಿಚ್ಚಿಟ್ಟ ಪ್ರಸಂಗಗಳೂ ಇವೆ.

ನಿಯಮಾವಳಿಗಳಿಗೆ ಕೊರತೆಯಿಲ್ಲ, ಆದರೆ ಅದನ್ನು ಪಾಲಿಸುವ ಪ್ರಾಮಾಣಿಕ ಸಂಸ್ಥೆಗಳು, ಶಿಕ್ಷಕರು ಕಡಿಮೆ. ಶಿಕ್ಷಕವೃತ್ತಿಗೆ ಬರುವವರು, ಶಿಕ್ಷಕರಾಗಿರುವವರು ಇತ್ತ ಗಮನ ಹರಿಸಬೇಕು. ಆತ್ಮಹತ್ಯೆ ಎಂಬುದು ಕೇವಲ ಒಂದು ಘಟನೆ ಅಲ್ಲ, ಅದೊಂದು ಆಕಸ್ಮಿಕವೂ ಅಲ್ಲ. ಅದು ಅನೇಕ ಕಾರಣಗಳ ಪರಿಣಾಮ ಮೊತ್ತ.

ಯೌವನ ಜೀವನದ ಸಂಧಿಕಾಲ. ಜೊತೆಗೆ ವ್ಯಕ್ತಿ ತನ್ನ ಅಸ್ಮಿತೆಯನ್ನು ಕಂಡುಕೊಳ್ಳುವ ಕಾಲ. ಭಾವನಾತ್ಮಕ ಜಗತ್ತಿನಲ್ಲಿ ಅದು ಅಲ್ಲೋಲಕಲ್ಲೋಲದ ಪರ್ವ. ಜೀವ ಬದುಕಿನ ದಡ ಬಿಟ್ಟು ವಿಶಾಲವಾದ ಜಗತ್ತಿಗೆ ಹಾಯಿಪಟ ಬಿಚ್ಚಿ ಪಯಣಿಸುವ ಪರ್ವ ಅದು.

ಈ ಸಮಯದಲ್ಲಿ ಸರಿಯಾದ ದಿಕ್ಸೂಚಿ ಬೇಕು. ಅದನ್ನು ಒದಗಿಸುವುದು ಪೋಷಕರ, ಶಿಕ್ಷಕರ ಜವಾಬ್ದಾರಿ. ನೂರಾರು ವಿದ್ಯಾರ್ಥಿಗಳಿರುವ ತರಗತಿಗಳಲ್ಲಿ ದಿಕ್ಕೆಟ್ಟ ಹಡಗನ್ನು ಗುರುತಿಸುವುದು ಬಲು ಕಷ್ಟ. ಯುವಜನರನ್ನು ಅಭಿನಂದಿಸಬೇಕಾದ ಕೈಗಳೇ ಅವರಿಗೆ ಅಂತಿಮ ವಿದಾಯ ಹೇಳುವ ಉಪಕರಣಗಳಾದಾಗ ಕಣ್ಣಾಲಿಗಳು ತುಂಬಿಬರುತ್ತವೆ.

ಸುಂದರ ಬದುಕು ಎದುರಿಗಿರುವಾಗ ಜೀವನದ ಕ್ಷಣಿಕ ಸಂಕಟಕ್ಕೆ ಸಾವೆಂಬ ಶಾಶ್ವತ ಪರಿಹಾರ ಕಂಡುಕೊಳ್ಳುವುದು ದೌರ್ಬಲ್ಯದ ಲಕ್ಷಣವಲ್ಲವೆ? ರಣರಂಗವನ್ನು ಬಿಟ್ಟೋಡುವವರನ್ನು ರಣಹೇಡಿ ಎನ್ನುತ್ತೇವೆ. ಈಗ ಬದುಕನ್ನೇ ಬಿಟ್ಟೋಡುವವರನ್ನು ಏನೆನ್ನಬೇಕು? 20ರ ಆನುಪಾಸಿನ ಮನದ ಅಂಚಿನಲ್ಲಿ ಸಾವು ಕದ ತಟ್ಟಿದರೆ ದಿಟ್ಟತನದಿಂದ ಹೇಳಬೇಕು, ‘ಅಕಾಲದಲ್ಲಿ ಬಂದಿದ್ದೀಯ, ಹಲವಾರು ವರ್ಷ ಕಳೆದು ಬಾ ಗೆಳೆಯ, ಸಂತೋಷದಿಂದ ನಿನ್ನೊಂದಿಗೆ ಬರುತ್ತೇನೆ’ ಎಂದು.

ಹೌದು, ನಾವು ಕರೆದಾಗ ಮಾತ್ರ ಸಾವು ನಮ್ಮ ಬಳಿ ಸುಳಿಯಲಿ. ಬದುಕಿನ ಮೊತ್ತ ಚುಕ್ತವಾಗದೆ ಲೆಕ್ಕ ಮುಗಿಯದು. ಖಾತೆ ತೆರೆಯದೆ ವಾಪಸಾಗುವುದು ಶೋಭೆಯಲ್ಲ. ಸುಂದರವಾದ ಬದುಕು ನಮ್ಮನ್ನು ಕೈ ಬೀಸಿ ಕರೆಯುವಾಗ ಎಲ್ಲೋ ಕತ್ತಲ ಮೂಲೆಯಿಂದ ಕರೆಯುವ ಸಾವಿನ ಕರೆಗೆ ಓಗೊಡಬಾರದು.

ಅಕಸ್ಮಾತ್ ಅಂತಹ ಕರೆ ಬಲವಾದಾಗ ಆತ್ಮೀಯರನ್ನು ಸಂಪರ್ಕಿಸಬೇಕು ದುಃಖ–ಸಂಕಟಗಳನ್ನು ಹಂಚಿಕೊಳ್ಳಬೇಕು. ಆತ್ಮಸಖನ ಹೆಗಲಿಗೆ ತಲೆಯಾನಿಸಿ ಕಣ್ಣೀರು ಹರಿಸುವುದೂ ಬದುಕಿನ ಒಂದು ಅನುಭವವೇ ಹೊರತು ಅವಮಾನವಲ್ಲ. ಮಹಾತ್ಮರು ಕೂಡ ಸಂಶಯ, ತಿರಸ್ಕಾರ, ದುಃಖ, ಅವಮಾನಗಳನ್ನು ದಾಟಿಯೇ ಮಹಾತ್ಮರಾದದ್ದು ಎಂದು. ಕಷ್ಟ ದೊಡ್ಡದಲ್ಲ.

ಎಲ್ಲದಕ್ಕಿಂತ ದೊಡ್ಡವನು ಮಾನವ ಏಕೆಂದರೆ ಅವನೊಳಗಿರುವ ಅನಂತಶಕ್ತಿ ಅನೂಹ್ಯವಾದದ್ದು. ಹೊಸಿಲು ದಾಟಲು ಆಗದೆ ಅತ್ತ ಮಗುವೇ ಮುಂದೆ ಎತ್ತರ ಜಿಗಿತದ ವಿಶ್ವಚಾಂಪಿಯನ್ ಆಗುತ್ತಾನೆ! ಜೀವನದ ಪ್ರತಿಯೊಂದು ಹಂತದಲ್ಲೂ ಅಂತರಂಗದ ಶಕ್ತಿಯ ವಿಕಾಸ ಮತ್ತು ಆವಿಷ್ಕಾರಕ್ಕೆ ಅವಕಾಶವಿದೆ. ಅನಂತ ಸಾಧ್ಯತೆಗಳ ಆಗರವೇ ಮಾನವ.

ಈ ಸಾಧ್ಯತೆಗಳ ಅನ್ವೇಷಣೆಯ ಪಯಣ, ಕೌತುಕದ ವಿಸ್ಮಯದ ಹಾದಿಯೇ ಬದುಕು. ನಾವೇನಾಗಿದ್ದೆವೊ ಅದು ಚರಿತ್ರೆ, ಗತ; ನಾವೇನಾಗಿದ್ದೀವೊ ಅದು ಸಾಧಿತ, ಮಿತ; ನಾವೇನಾಗುತ್ತೇವೊ ಅದು ಸಾಧ್ಯತೆ, ಬದುಕು. ಇದನ್ನು ಧಿಕ್ಕರಿಸುವ ಪ್ರಯತ್ನ ಬೇಡ. ಬದುಕಿನ ನಂದನವನದ ನವಕುಸುಮಗಳಾಗಬೇಕಾದ ಯುವಜನರೇ, ನಿಮ್ಮ ಯೌವನದ ಹಾಯಿಪಟವ ಮಡಿಸಿಡುವಿರೇಕೆ? ಬೇಡ, ಬೇಡವೆನ್ನಿ ಸಾವಿಗೆ, ಶರಣು ಬನ್ನಿ ಹಿರಿಯ ಬಾಳಿಗೆ.

**
-ರಘು ವಿ.
(ಲೇಖಕರು ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT