ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್) :ಅಭಿಪ್ರಾಯಗಳು

Last Updated 7 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ತಾಕತ್ತು ಪ್ರದರ್ಶನ
ಇಪ್ಪತ್ತು ವರ್ಷಗಳ ಹಿಂದೆಯೇ ಸರ್ಜಿಕಲ್‌ ಸ್ಟ್ರೈಕ್‌ (ನಿರ್ದಿಷ್ಟ ದಾಳಿ) ನಡೆಯಬೇಕಿತ್ತು. ಧೈರ್ಯ, ಬದ್ಧತೆ ಕೊರತೆಯಿಂದಾಗಿ ರಾಷ್ಟ್ರ ಸಾಕಷ್ಟು ನೋವು ಅನುಭವಿಸಿದೆ. ಇದೀಗ ಈ ದಾಳಿ ನಡೆಸುವ ಮೂಲಕ ಇಡೀ ಪ್ರಪಂಚಕ್ಕೆ ನಮ್ಮ ಸೇನೆಯ ತಾಕತ್ತು ಏನೆಂಬುದು ಅರಿವಾಗಿದೆ. ಶತ್ರುಗಳಿಗೂ ಎಚ್ಚರಿಕೆ ರವಾನೆಯಾಗಿ ನಡುಕ ಶುರುವಾಗಿದೆ.

ಸತ್ತರೆ ಸ್ವರ್ಗ ಸಿಗಲಿದೆ ಎಂದು ಮನಸ್ಸು ಪರಿವರ್ತಿಸಿ ಪಾಕಿಸ್ತಾನದ ಸೇನೆಯೇ ಸ್ಥಳೀಯರನ್ನು ಉಗ್ರ ಚಟುವಟಿಕೆಗೆ ಬಳಸಿಕೊಳ್ಳುತ್ತಿದೆ. ಮಾದಕ ವಸ್ತುಗಳನ್ನು ಪೂರೈಸಲಾಗುತ್ತದೆ. ಉಗ್ರರಿಗೆ ಪಾಕ್‌ ಆಕ್ರಮಿತಿ ಕಾಶ್ಮೀರದಲ್ಲಿ (ಪಿಒಕೆ) ಅಡಗುದಾಣ ಕಲ್ಪಿಸುವವರೂ ಇದ್ದಾರೆ. ಭಾರತದ ಮೇಲೆ ಸೇಡು ತೀರಿಸಿಕೊಳ್ಳಿ ಎಂದು ಚೀನಾ ಆರ್ಥಿಕ ಸಹಾಯ ಒದಗಿಸುತ್ತಿದೆ.

ಅಬೊಟ್ಟಾಬಾದ್‌ನಲ್ಲಿ ಅಮೆರಿಕವು ಅಲ್‌ಖೈದಾ ಮುಖ್ಯಸ್ಥ ಬಿನ್‌ ಲಾಡೆನ್‌ ವಿರುದ್ಧ ಇಂತಹುದೇ ಕಾರ್ಯಾಚರಣೆ ನಡೆಸಿತ್ತು. ಭಾರತ ನಡೆಸಿದ ನಿರ್ದಿಷ್ಟ ದಾಳಿ ಸಂಪೂರ್ಣ ಯಶಸ್ವಿಯಾಗಿದೆ. ರಹಸ್ಯ ಬಯಲಾದರೆ ಪ್ರತಿದಾಳಿಯೂ ನಡೆಯುತ್ತದೆ. ನಮ್ಮೆಲ್ಲಾ ಪ್ರಯತ್ನಗಳು ವಿಫಲವಾಗಬಹುದು. ಆದರೆ ಯೋಜನಾಬದ್ಧ ದಾಳಿಯಿಂದ ಭಾರತೀಯ ಸೇನೆಯ ಮೇಲಿದ್ದ ಭಾವನೆ ಬದಲಾಗಿ ಹೋಗಿದೆ. ಪ್ರಪಂಚದಲ್ಲೇ ಇದೊಂದು ಅಪರೂಪದ ಕಾರ್ಯಾಚರಣೆ.
–ಕೆ.ಜಿ.ಉತ್ತಯ್ಯ, ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌, ಮಡಿಕೇರಿ

***
ಮೂಲವ್ಯಾಧಿಗೆ ಶಸ್ತ್ರಚಿಕಿತ್ಸೆ

ಭಾರತೀಯ ಸೇನಾಪಡೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ನಾಶ ಮಾಡುವ ಮೂಲಕ ಪಾಕಿಸ್ತಾನದ ಮೂಲವ್ಯಾಧಿಗೆ ಶಸ್ತ್ರಚಿಕಿತ್ಸೆ ನಡೆಸಿದೆ. ತಾನು ಪ್ರೋತ್ಸಾಹಿಸಿದ ಉಗ್ರರನ್ನು ಸದೆಬಡಿದ ಭಾರತವನ್ನು ಏನೂ ಮಾಡಲು ಸಾಧ್ಯವಾಗಲಿಲ್ಲ ಎಂಬ ಹತಾಶೆಗೆ ಪಾಕಿಸ್ತಾನ ಒಳಗಾಗಿದೆ. ರಾಜಕಾರಣಿಗಳು, ಅಧಿಕಾರಿಗಳ ರೀತಿಯಲ್ಲಿ ಸೇನಾಧಿಕಾರಿಗಳು ಸುಳ್ಳು ಹೇಳಿಕೆ ಕೊಡುವುದಿಲ್ಲ.

ಅವರಿಗೆ ಯಾರನ್ನೂ ಮೆಚ್ಚಿಸುವ ಅಗತ್ಯವೂ ಇರುವುದಿಲ್ಲ. ಕಾರ್ಯಾಚರಣೆಯ ಬಗ್ಗೆ ಸೇನಾಧಿಕಾರಿಯೇ ಮಾಹಿತಿ ನೀಡಿದ್ದರೂ ಪಾಕಿಸ್ತಾನ ಸುಳ್ಳೆಂದು ವಾದಿಸುತ್ತಿದೆ. ಈಗ ಪಾಕಿಸ್ತಾನಕ್ಕೆ ಸುಳ್ಳು ಹೇಳುವುದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ.

ಕಾರ್ಯಾಚರಣೆ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಹ ರಾಜಕೀಯ ಕಾರಣಕ್ಕೂ ಹೇಳಿಕೆ ಕೊಟ್ಟಿಲ್ಲ. ಪಾಕಿಸ್ತಾನಕ್ಕೆ ಹೇಗೆ ಬುದ್ಧಿ ಕಲಿಸಲು ಸಾಧ್ಯವೋ ಅದನ್ನು ಮಾಡಿ ಮುಗಿಸಿದ್ದಾರೆ. ವಿಯೆಟ್ನಾಂ, ನೇಪಾಳ, ಭೂತಾನ್‌ ಜತೆಗೆ ಭಾರತ ಸ್ನೇಹಹಸ್ತ ಚಾಚಿರುವುದು ಚೀನಾಕ್ಕೆ ನುಂಗಲಾರದ ತುತ್ತಾಗಿದೆ. ಇದಕ್ಕಾಗಿ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿದೆ. ನಿರ್ದಿಷ್ಟ ದಾಳಿಯಿಂದ ಪಾಕಿಸ್ತಾನ ಭಯಗೊಂಡಿದ್ದು ಯುದ್ಧ ನಡೆಸುವ ಸ್ಥಿತಿಯಲ್ಲಿ ಇಲ್ಲ.

ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಯಾರ ಮಾತನ್ನೂ ಕೇಳದೆ ಸ್ವಂತಬುದ್ಧಿ ಬಳಸುತ್ತಿದ್ದರು. ಕಠಿಣ, ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ಷಣಾ ಖಾತೆಯನ್ನು ತನ್ನ ಬಳಿಯೇ ಇರಿಸಿಕೊಳ್ಳುತ್ತಿದ್ದರು. ಇಂದು ಭಾರತ ಅಂತಹ ಪರಿಸ್ಥಿತಿಗೆ ತೆರೆದುಕೊಂಡಿರುವುದು ಶ್ಲಾಘನೀಯ ವಿಚಾರ.
–ಬಿ.ಎ.ನಂಜಪ್ಪ, ನಿವೃತ್ತ ಮೇಜರ್‌, ಹಾಕತ್ತೂರು, ಕೊಡಗು ಜಿಲ್ಲೆ

***
ಮತ್ತಿನಿಂದ ಜಿಗಿದಾಡದಿರಿ

ಈಗ ಭಾರತ ಪಾಕಿಸ್ತಾನಕ್ಕೆ ನೀಡಿರುವುದು ಬಹು ಚಿಕ್ಕ ಮರುಪೆಟ್ಟು. ಹೀಗಾಗಿ ಅದು ಅಷ್ಟು ಪ್ರಯೋಜನಕಾರಿಯಾಗದು. ಪಾಕಿಸ್ತಾನ ಹೆದರಲಿಕ್ಕಿಲ್ಲ. ಚಕಿತ ಮಾತ್ರ ಆಗಿದೆ.

ಸತ್ತವರಲ್ಲಿ ಭಯೋತ್ಪಾದಕರು, ಮತಾಂಧರು, ಬೇರೆ ದೇಶದವರೂ ಇರಬಹುದು. ಪಾಕಿಸ್ತಾನದ ಜನ ಹಾಗೂ ಸೈನಿಕರಿಗೆ ಅಷ್ಟು ಧಕ್ಕೆಯಾಗಿಲ್ಲ. ಆದರೂ ಅವರ ಗಡಿ ದಾಟಿ ಕೈಗೊಂಡ ಈ ಕಾರ್ಯವೇ ಅವರಿಗಾದ ಆಘಾತ.

ನಾವು ಆಧುನಿಕ ತಾಂತ್ರಿಕತೆಯಲ್ಲಿ ಮೂರ್ನಾಲ್ಕು ದಶಕಗಳಷ್ಟು ಹಿಂದೆ ಉಳಿದಿದ್ದೇವೆ. ಮಾನಸಿಕವಾಗಿ, ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ನಮ್ಮನ್ನು ನಾವು ಸಮರ್ಥಿಸಿಕೊಳ್ಳುವ, ಆಕ್ರಮಣಕಾರಿಯಾಗುವ, ಪರಿಸ್ಥಿತಿ ನಿಯಂತ್ರಿಸುವ, ಕಠಿಣ ಶ್ರಮ ವಹಿಸುವ ವಿಚಾರದಲ್ಲಿ ಸಡಿಲವಾಗಿದ್ದೇವೆ. ಇದೀಗ ಸರ್ಕಾರ ಮೊದಲ ಬಾರಿಗೆ ಇದರ ಅರಿವು ಮಾಡಿಕೊಟ್ಟು ನಮ್ಮನ್ನು ಜಾಗೃತಗೊಳಿಸಿದೆ. ನಮ್ಮ ಅಳುಕು ಮನೋವೃತ್ತಿಯನ್ನು ಈ ನಿರ್ದಿಷ್ಟ ದಾಳಿ ಬಡಿದೆಬ್ಬಿಸಿದೆ.

ನಾವು ಅತಿ ಭಾವುಕರು, ಆತ್ಮಸ್ತುತಿ ಪ್ರಿಯರು. ಇಷ್ಟಿದ್ದಿದ್ದನ್ನು ಅಷ್ಟು ಮಾಡಿ ನೋಡುವುದು ನಮಗೆ ಮುದ. ಹಾಗೆ ತೋರಿಸುವುದಂತೂ ಮಾಧ್ಯಮಗಳ ಜೀವಾಳ. ಅದರ ಮೇಲೆಯೇ ಅವುಗಳ ಗಳಿಕೆ ಕೂಡ. ನಾವು ಹಗ್ಗ ಹೆಣೆಯುವವರಲ್ಲ. ಕೂದಲು ಸೀಳುವವರು. ಈಗಿನ ಈ ಚಿಕ್ಕ, ಚೆನ್ನಾಗಿ ಹೆಣೆದ, ಉತ್ತಮವಾಗಿ ನಿಯೋಜಿಸಿ, ಕ್ರಿಯೆಗಿಳಿಸಿದ ದಾಳಿ ಅಭಿನಂದನೀಯ. ಆದರೆ ಅದನ್ನು ಮದಿರೆಯಾಗಿಸಿ ಕುಡಿದು ಮತ್ತಾಗಿ ಜಿಗಿದಾಡುವುದು ಬುದ್ಧಿಗೇಡಿತನ, ಅಲ್ಪಸಂತುಷ್ಟಿಯ ಮೌಢ್ಯ.

ಪಾಕಿಸ್ತಾನವು ನಮ್ಮ ದೇಶದಲ್ಲಿ ತನ್ನ ಸೈನಿಕರನ್ನು ಕಳುಹಿಸಿ ಹಾವಳಿ ಮಾಡುವುದಿಲ್ಲ. ಅಂತಹ ಕೆಲಸ ಮಾಡಲು ಅವರ ಹತ್ತಿರ ಸಾಕಷ್ಟು ನಾಗರಿಕ ಮತಾಂಧರು, ಭಯೋತ್ಪಾದಕರು, ಪರದೇಶೀಯರು ಇದ್ದಾರೆ. ನಮ್ಮಲ್ಲೂ ಅಂಥವರಿರಬಹುದು. ಆದರೂ ಕಡಿಮೆ! ಅಷ್ಟಾದರೂ ಅಂಥವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಅವರನ್ನು ಕಬಳಿಸುವ ಪ್ರವೃತ್ತಿಯೇ ನಮ್ಮದಾಗಿರಲಿಲ್ಲ.

ನಮ್ಮ ರಕ್ತ, ಮನಸ್ಸು, ಹೃದಯ, ಸಂಸ್ಕೃತಿಗಳೆಲ್ಲ ಮಹಾಭಾರತದ ಧರ್ಮಯುದ್ಧದಲ್ಲೇ ಮುಳುಗು ಹಾಕುತ್ತಿವೆ. ಕೃಷ್ಣನಂಥ ಯುಕ್ತಿವಂತನಿದ್ದೂ, ಚಾಣಾಕ್ಷನಂಥ ದಾರ್ಶನಿಕನಿದ್ದೂ ಇಂಥ ಸ್ಥಿತಿ! ಕೂಟಯುದ್ಧದಿಂದ ಖೊಟ್ಟಿಯಾಗಿಯೋ, ಯುಕ್ತಿಯಿಂದಲೋ, ಕಡಿಮೆ ಸಾವು ನೋವುಗಳನ್ನು ಸಹಿಸಿ ಎದುರಾಳಿಯನ್ನು ಸೋಲಿಸುವ ಯುದ್ಧನೀತಿ ನಮ್ಮ ವೈಚಾರಿಕರಿಗೆ, ನಾಯಕರಿಗೆ ಹೊಳೆಯಲೇ ಇಲ್ಲ.

ಸಾವುನೋವುಗಳಲ್ಲೇ ಅದ್ದಿಕೊಳ್ಳುವ ‘ವೀರಮರಣ’ಕ್ಕೆ ನಾವು ಶರಣು ಬಯಸುವವರು. ಅಂಥ ಆಶಯ ನಮ್ಮದು. ಇಂಥ ಮನಸ್ಥಿತಿಯ ನಡುವೆ ನಡೆದಿರುವ ಈ ದಾಳಿ ಹೊಸ ಸಮರನೀತಿಗೆ ನಾಂದಿಯಾದೀತೇ? ನಮ್ಮ ಮನೋಭಾವ ಹೊಸ ಯುಗಕ್ಕೆ ತಕ್ಕಂತೆ ಬದಲಾಗಬಹುದೇ?
–ಎಸ್‌.ಸಿ.ಸರದೇಶಪಾಂಡೆ, ನಿವೃತ್ತ ಲೆಫ್ಟಿನೆಂಟ್‌ ಜನರಲ್‌, ಧಾರವಾಡ

***
ಅನಗತ್ಯ ಪ್ರಚಾರ

ವಾಸ್ತವದಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ನಡೆದೇ ಇಲ್ಲ. ಗಡಿಯಲ್ಲಿ ನಡೆಯುವ ಸಹಜ ಗುಂಡಿನ ಚಕಮಕಿಯನ್ನೇ ಸರ್ಜಿಕಲ್‌ ಸ್ಟ್ರೈಕ್‌ ಎಂಬ ಹೆಸರಿಟ್ಟು ಅದಕ್ಕೆ ಅನಗತ್ಯವಾಗಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಇಂಥ ಸಂಗತಿಗಳಿಗೆ ವಿರೋಧ ಪಕ್ಷವಾದ ಕಾಂಗ್ರೆಸ್‌, ಅಂತರರಾಷ್ಟ್ರೀಯ ಸಮುದಾಯ, ಪಾಕಿಸ್ತಾನ ಕೇಳುತ್ತಿರುವಂತೆ ಸಾಕ್ಷ್ಯ ನೀಡುವುದೂ ಅಸಾಧ್ಯ. ಆದರೆ ಇಲ್ಲಿ ಉದ್ಭವಿಸಿರುವ ಪ್ರಶ್ನೆ ಎಂದರೆ, ಸರ್ಕಾರ ಅಷ್ಟೊಂದು ಆಕ್ರಮಣಶೀಲವಾಗಿ, ಅಸಹನೆಯಿಂದ ಇಂಥ ಕಾರ್ಯ ನಡೆಸಿದ್ದಾದರೂ ಏಕೆ?

ಕಾಶ್ಮೀರದಲ್ಲಿನ ಅನಿಶ್ಚಿತತೆಯಲ್ಲಿ ಇದಕ್ಕೆ ಉತ್ತರ ಅಡಗಿದೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಈ ಸತ್ಯ ಸಂಗತಿಯನ್ನು ಭಾರತದ ನಾಗರಿಕರು ಹಾಗೂ ಅಂತರರಾಷ್ಟ್ರೀಯ ಸಮುದಾಯದಿಂದ ಮುಚ್ಚಿಡುವ ಪ್ರಯತ್ನ ನಡೆಸುತ್ತಿರುವ ಸರ್ಕಾರ, ಸರ್ಜಿಕಲ್ ಸ್ಟ್ರೈಕ್‌ ನೆಪವೊಡ್ಡಿದೆ.

ಕಾಶ್ಮೀರದಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಬಗೆಹರಿಯದ ಬಿಕ್ಕಟ್ಟನ್ನು ದಮನಗೊಳಿಸಲು ಈ ನಡೆ; ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಡೆಯಲಿದ್ದ ಚರ್ಚೆಯಲ್ಲಿ ಭಾರತ ಮುಜುಗರ ಅನುಭವಿಸದಿರಲು, ಒಂದು ವಾರದ ಒಳಗಾಗಿ ಸಾಮಾನ್ಯ ಸ್ಥಿತಿ ಮರುಸ್ಥಾಪಿಸಲಾಗುವುದು ಎಂದು ಸೆ. 12ರಂದು ಹೇಳಲಾಗಿತ್ತು.

ಆ ಗಡುವೂ ಮೀರಿತ್ತು. ಹೀಗಾಗಿ ಅಂತರರಾಷ್ಟ್ರೀಯ ವಲಯದಲ್ಲಿ ಭಾರತ ಸರ್ಕಾರದ ಮಾನ ಕಾಪಾಡಿಕೊಳ್ಳುವ ತೀವ್ರ ಅಗತ್ಯವಿತ್ತು. ಸೆ. 20ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಿತು. ಇದಕ್ಕೂ ಎರಡು ದಿನ ಮೊದಲು ಸೆ. 18ರಂದು ಉರಿ ದಾಳಿ ಘಟನೆ ಜರುಗಿತು. ಹಾಗೆಯೇ ಸೆ. 29ರಂದು ಸರ್ಜಿಕಲ್‌ ಸ್ಟ್ರೈಕ್‌ ನಡೆದಿದೆ ಎಂದು ಸರ್ಕಾರ ಘೋಷಿಸಿತು. ಹೀಗಾಗಿ ಈ ಮೂರೂ ಘಟನೆಗಳು ಗತಿಸಿರುವುದು ಆಕಸ್ಮಿಕವೇ ಅಥವಾ ಪೂರ್ವ ನಿಯೋಜಿತವೇ  ಎಂಬುದನ್ನು ನಾಗರಿಕರು ಅರ್ಥ ಮಾಡಿಕೊಳ್ಳಬೇಕಿದೆ.

ಕಾಶ್ಮೀರದ ಜನರ ಜೀವದ ಮೌಲ್ಯವನ್ನು ಅರಿತು, ಅವರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಸರ್ಕಾರವು ದೇಶದ ನಾಗರಿಕರು ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರದಲ್ಲಿ ತನ್ನ ಗೌರವ ಕಾಪಾಡಿಕೊಳ್ಳಬಹುದಾಗಿದೆ. ಇದೊಂದೇ ಈ ಸಮಸ್ಯೆಗೆ ಇರುವ ದೀರ್ಘಕಾಲಿಕ ಪರಿಹಾರ. ಕಾಶ್ಮೀರದ ಜನರ ಆಶೋತ್ತರಗಳಿಗೆ ಸರಿಯಾಗಿ ಸ್ಪಂದಿಸುವ ಮೂಲಕ ಶಾಂತಿ ನೆಲೆಸುವಂತೆ ಮಾಡುವುದು ಸರ್ಕಾರದ ಕೈಯಲ್ಲಿದೆ.
–ಮುಷ್ತಾಕ್‌ ಅಹ್ಮದ್‌, ಸಹಾಯಕ ಪ್ರಾಧ್ಯಾಪಕ, ಸಾಮಾಜಿಕ ಪ್ರತ್ಯೇಕತೆ ಹಾಗೂ ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ, ನ್ಯಾಷನಲ್‌ ಲಾ ಸ್ಕೂಲ್ ಆಫ್‌ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT