ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿಗೂ ಜನಪ್ರಿಯ ಆಕಾಶವಾಣಿ ಸಂಗೀತ

Last Updated 9 ಅಕ್ಟೋಬರ್ 2016, 5:06 IST
ಅಕ್ಷರ ಗಾತ್ರ

‘ಕರ್ನಾಟಕ ಗಾನಕಲಾ ಪರಿಷತ್ತು’ ಆಯೋಜಿಸಿರುವ ಸಂಗೀತ ಸಮ್ಮೇಳನ ಅ.12ರಿಂದ 16ರವರೆಗೆ ಬೆಂಗಳೂರಿನ ಎನ್‌.ಆರ್‌. ಕಾಲೊನಿಯಲ್ಲಿರುವ ಶ್ರೀರಾಮಮಂದಿರದಲ್ಲಿ ನಡೆಯಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಡಾ. ಕೆ. ವಾಗೀಶ್‌ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರು. ಅವರಿಗೆ ‘ಗಾನಕಲಾಭೂಷಣ’ ಬಿರುದು ಸಲ್ಲಲಿದೆ. ಆಕಾಶವಾಣಿಯ ಅತ್ಯುನ್ನತ ಹುದ್ದೆಯಲ್ಲಿರುವ ಡಾ. ಕೃಷ್ಣಯ್ಯ ವಾಗೀಶ್‌ – ಕರ್ನಾಟಕ ಶಾಸ್ತ್ರೀಯ ಗಾಯನದಲ್ಲಿ ‘ಗಟ್ಟಿ ಕುಳ’. ಶಾಸ್ತ್ರೀಯ ಸಂಗೀತದ ಶ್ರೀಮಂತ ಪರಂಪರೆ ಇರುವ ‘ಟೈಗರ್‌ ವರದಾಚಾರ್‌ ಸ್ಕೂಲ್‌ ಆಫ್‌ ಮ್ಯೂಸಿಕ್‌’ನಲ್ಲಿ ಪಳಗಿರುವ ಅವರು, ಖ್ಯಾತ ಪಿಟೀಲು ವಾದಕ ವಿದ್ವಾನ್‌ ಟಿ.ಎನ್‌. ಕೃಷ್ಣನ್‌ ಮಾರ್ಗದರ್ಶನದಲ್ಲಿ ‘ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ಮಂತ್ರ, ತಂತ್ರ, ಯಂತ್ರ ಮತ್ತು ಆಗಮ ಆಯಾಮಗಳು’ ಎಂಬ ಪ್ರೌಢಪ್ರಬಂಧ ಬರೆದು ದೆಹಲಿ ವಿವಿಯಿಂದ ಡಾಕ್ಟರೇಟ್‌ ಪದವಿ ಪಡೆದವರು. ಆಕಾಶವಾಣಿಯಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಡೆಪ್ಯುಟಿ ಡೈರೆಕ್ಟರ್‌ ಜನರಲ್‌ ಆಗಿ ಸೇವೆ ಸಲ್ಲಿಸಿದವರು. ಪ್ರಸ್ತುತ ಅವರಿಗೆ, ‘ಕರ್ನಾಟಕ ಗಾನಕಲಾ ಪರಿಷತ್‌’ನ ಪ್ರತಿಷ್ಠಿತ ‘ಗಾನಕಲಾಭೂಷಣ’ ಗೌರವ. ಈ ಹಿನ್ನೆಲೆಯಲ್ಲಿ ‘ಮುಕ್ತಛಂದ’ ಪುರವಣಿಯೊಂದಿಗೆ ಅವರು ಮಾತನಾಡಿದ್ದಾರೆ.

ಶಾಸ್ತ್ರೀಯ ಸಂಗೀತ ಉಳಿಸಿ ಬೆಳೆಸುವಲ್ಲಿ ಆಕಾಶವಾಣಿ ಪಾತ್ರ ದೊಡ್ಡದು. ದೃಶ್ಯ ಮಾಧ್ಯಮಗಳ ಪ್ರಭಾವದಿಂದ ಬಾನುಲಿ ಮೂಲಕ ಸಂಗೀತ ಕೇಳುವವರ ಸಂಖ್ಯೆ ಕಡಿಮೆಯಾಗಿದೆ ಎಂಬುದು ಸಾಮಾನ್ಯ ಅಭಿಪ್ರಾಯ. ನಿಮ್ಮ ಅನಿಸಿಕೆ ಏನು?
ಸಂಗೀತ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಬಾನುಲಿಯ ಕೊಡುಗೆ ಅಪಾರ. ಆಕಾಶವಾಣಿ ಕೇಳುಗರ ಸಂಖ್ಯೆ ಕಡಿಮೆಯಾಗಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಈಗಲೂ ಕೂಡ ಸಂಗೀತವನ್ನು ಸೀರಿಯಸ್‌ ಆಗಿ ಕೇಳುವ ಅಸಂಖ್ಯಾತ ಕೇಳುಗರು ಇದ್ದಾರೆ. ಶಾಸ್ತ್ರೀಯ ಸಂಗೀತವನ್ನು ವಿಶ್ವದಾದ್ಯಂತ ಅತಿ ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ‘ರಾಗಮ್‌’ ಎಂಬ ಹೊಸ ಕಾರ್ಯಕ್ರಮ ಆರಂಭಿಸಿದ್ದೇವೆ. ಇದು ವಿಶೇಷವಾಗಿ ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ದಿನದ 24 ಗಂಟೆಯೂ ನಿರಂತರವಾಗಿ ಪ್ರಸಾರ ಮಾಡುವ ವಾಹಿನಿ. ತಿರುಚ್ಚಿಯಲ್ಲಿ ಕಳೆದ ಜನವರಿ 26ರಂದು ವಾಹಿನಿ ಆರಂಭವಾಗಿದ್ದು, ವಿಶ್ವದಾದ್ಯಂತ ಕೇಳುಗರನ್ನು ತಲುಪುತ್ತಿದೆ. ಸಂಗೀತಕ್ಕಾಗಿಯೇ ಬೆಂಗಳೂರಿನಿಂದ ಪ್ರಸಾರವಾಗುವ ‘ಅಮೃತವರ್ಷಿಣಿ’ ಹೇಗೆ ಜನಪ್ರಿಯವಾಗಿದೆಯೋ ಅದೇ ರೀತಿ ‘ರಾಗಮ್‌’ ಕೂಡ ಕಡಿಮೆ ಅವಧಿಯಲ್ಲಿ ಜನಪ್ರಿಯವಾಗಿದೆ.

ಆಕಾಶವಾಣಿ ಎಂದರೆ ಸಂಗೀತಗಾರರಿಗೆ ಇಂದಿಗೂ ಏನೋ ಆಕರ್ಷಣೆ. ಇದು ಏಕೆ ಮತ್ತು ಹೇಗೆ?
ಆಕಾಶವಾಣಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವುದು ಈಗಲೂ ಪ್ರತಿಷ್ಠೆಯ ಪ್ರಶ್ನೆ. ಆಕಾಶವಾಣಿ ಗ್ರೇಡ್‌ ಪಡೆಯುವುದು ಕೂಡ ಹಾಗೆಯೇ. ಬಾನುಲಿ ಸಂಗೀತ ಸ್ಪರ್ಧೆ ಪ್ರತೀ ವರ್ಷ ನಡೆಯುತ್ತದೆ. ಬಹಳಷ್ಟು ಮಂದಿ ಯುವ ಕಲಾವಿದರು ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಕಳೆದ ಸೆ. 24ರಂದು ‘ಆಕಾಶವಾಣಿ ಸಂಗೀತ ಸಮ್ಮೇಳನ’ ದೇಶದ ವಿವಿಧ ಬಾನುಲಿ ಕೇಂದ್ರಗಳಲ್ಲಿ ನಡೆಯಿತು. ನೂರಾರು ಯುವ ಕಲಾವಿದರು ಹಾಡಿದರು.

ದೃಶ್ಯಮಾಧ್ಯಮಗಳು ಎಷ್ಟೇ ಬಂದರೂ ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ಹಾಡಿದರೆ ಅದರ ಪ್ರತಿಷ್ಠೆಯೇ ಬೇರೆ ಎಂಬ ಮನೋಭಾವನೆ ಈಗಲೂ ಸಂಗೀತಗಾರರಲ್ಲಿದೆ. ಹಿರಿಯ ಕಲಾವಿದರ ಸಾಧನೆ, ಪರಿಶ್ರಮಗಳಿಗೆ ಮನ್ನಣೆ ನೀಡುವ ಸಲುವಾಗಿ ‘ರಾಷ್ಟ್ರೀಯ ಕಲಾವಿದರು’ ಎಂಬ ಬಿರುದನ್ನು ನೀಡಲಾಗುತ್ತಿದೆ. ಎಂ.ಎಸ್. ಸುಬ್ಬುಲಕ್ಷ್ಮಿ, ಡಿ.ಕೆ. ಪಟ್ಟಮ್ಮಾಳ್‌ ಸೇರಿದಂತೆ 22 ಕಲಾವಿದರಿಗೆ ಈ ಗೌರವ ದೊರೆತಿದೆ. ಸದ್ಯದಲ್ಲೇ ದೇಶದ ಒಟ್ಟು 52 ಹಿರಿಯ ಕಲಾವಿದರಿಗೆ ಈ ಬಿರುದು ನೀಡಬೇಕು ಎಂದು ಪ್ರಸಾರಭಾರತಿ ತೀರ್ಮಾನಿಸಿದೆ.

ಹಳೆಯ ತಲೆಮಾರಿನ ಸಂಗೀತಗಾರರ ಸಂಗೀತ ಉಳಿಕೆಗೆ ಏನಾದರೂ ಪ್ರಯತ್ನ ಮಾಡಿದ್ದೀರಾ?
ಆಕಾಶವಾಣಿ ‘ಮ್ಯೂಸಿಕ್‌ ಆರ್ಕೈವ್ಸ್‌’ ರೂಪಿಸಿದ್ದೇವೆ. ಇಲ್ಲಿ ಸಂಗೀತ ದಿಗ್ಗಜರ ಕಾರ್ಯಕ್ರಮವನ್ನು ಸೀಡಿ ರೂಪದಲ್ಲಿ ಸಂರಕ್ಷಿಸಿದ್ದೇವೆ. ಈಗಲೂ ಕೂಡ ಚೌಡಯ್ಯನವರ ಪಿಟೀಲಿನಲ್ಲಿ ರಾಗ ತೋಡಿ ಕೇಳಬೇಕು, ಶಂಕರಾಭರಣ ಕೇಳಬೇಕು, ಅರಿಯಾಕುಡಿ ಅವರ ಗಾಯನ ಕೇಳಬೇಕು ಅಂತ ಅಪೇಕ್ಷೆ ಪಡುವವರಿದ್ದಾರೆ. ಅಂಥವರಿಗಾಗಿಯೇ ಸಂಗೀತ ಸೀಡಿ ಲಭ್ಯ.

ವಿಜ್ಞಾನದಲ್ಲಿ ಪದವಿ ಪಡೆದ ನೀವು ಸುಮಾರು ಆರು ವರ್ಷ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡಿದವರು. ನಿಮಗೆ  ಆಕಾಶವಾಣಿ ಜತೆ ಸಂಬಂಧ ಬೆಸೆದದ್ದು ಹೇಗೆ? ಆಕಾಶವಾಣಿಯ ಅತ್ಯುನ್ನತ ಸ್ಥಾನದಲ್ಲಿ ನೀವಿದ್ದೀರಿ. ಇದು ಹೇಗೆ ಸಾಧ್ಯವಾಯಿತು?
ಮೈಸೂರಿನಲ್ಲಿ ವಿಜ್ಞಾನ ಪದವಿ ಪಡೆದ ಬಳಿಕ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು. ಆದರೂ ಸಂಗೀತದೊಂದಿಗೆ ನಿರಂತರ ಒಡನಾಟದಲ್ಲಿದ್ದೆ. ಆಗಲೇ  ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ಹಾಡುವ ಅವಕಾಶ ಸಿಕ್ಕಿತು. ಹಾಡು ಮುಗಿಸಿ ಹೊರಗೆ ಬಂದಾಗ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾಗಿದ್ದ ವೈ.ಎಸ್‌.ಕೆ ರಾವ್‌ ಎದುರಾದರು. ಅವರು ‘ಆಕಾಶವಾಣಿಯಲ್ಲಿ ಹುದ್ದೆಗೆ ಆಹ್ವಾನಿಸಿದ್ದಾರೆ; ಅಪ್ಲೈ ಮಾಡು’ ಎಂದರು. 1979ರಲ್ಲಿ ಅರ್ಜಿ ಹಾಕಿದೆ. 1980ರಲ್ಲಿ ದೆಹಲಿ ಆಕಾಶವಾಣಿ ಸೇರಿದೆ. ಅಲ್ಲಿ 22 ವರ್ಷ ಕೆಲಸ ಮಾಡಿದೆ. ಬಳಿಕ 1980ರಿಂದ 2002ರವರೆಗೆ ತಿರುಚ್ಚಿ ಆಕಾಶವಾಣಿ ನಿಲಯ ನಿರ್ದೇಶಕನಾದೆ. ಅಲ್ಲಿಂದ ಮತ್ತೆ ದೆಹಲಿಗೆ ವರ್ಗವಾಗಿ ಆಕಾಶವಾಣಿಯ ಉಪ ಮಹಾನಿರ್ದೇಶಕ (ಡೆಪ್ಯುಟಿ ಡೈರೆಕ್ಟರ್‌ ಜನರಲ್‌) ನಾದೆ. ಸುಮಾರು 34 ವರ್ಷ ಸೇವೆ ಸಲ್ಲಿಸಿದೆ. ಸದ್ಯ ಆಕಾಶವಾಣಿಯ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ.

‘ಕರ್ನಾಟಕ ಗಾನ ಕಲಾಪರಿಷತ್ತು’ ಸಂಗೀತದ ಅತ್ಯಂತ ಪ್ರತಿಷ್ಠಿತ ಸಂಸ್ಥೆ. ಇದೀಗ 47ನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನ ನಡೆಸುತ್ತಿದೆ. ನೀವು ಈ ಸಮ್ಮೇಳನದ ಅಧ್ಯಕ್ಷರಾಗಿ ‘ಗಾನಕಲಾಭೂಷಣ’ ಬಿರುದಿಗೂ ಭಾಜನರಾಗಲಿದ್ದೀರಿ. ಪರಿಷತ್ತಿನೊಂದಿಗೆ ನಿಮ್ಮ ಒಡನಾಟ ಯಾವ ಬಗೆಯದು?
ಗಾನಕಲಾ ಪರಿಷತ್ತು ಸಂಗೀತದ ಬೆಳವಣಿಗೆಗೆ ಶ್ರಮಿಸುವ ಸಂಗೀತಗಾರರೇ ಕಟ್ಟಿ ಬೆಳೆಸಿದ ಸಂಸ್ಥೆ. 45 ವರ್ಷಗಳ ಹಿಂದೆ ಪರಿಷತ್ತು ಏರ್ಪಡಿಸಿದ ಸಂಗೀತ ಸ್ಪರ್ಧೆಯೊಂದರಲ್ಲಿ ದೇವರನಾಮ ಮತ್ತು ‘ರಾಗ–ತಾನ–ಪಲ್ಲವಿ’ ವಿಭಾಗದಲ್ಲಿ ನನಗೆ ಪ್ರಥಮ ಬಹುಮಾನ ಬಂದಿತ್ತು. ಆಗ ಒಂದು ತಂಬೂರಿಯನ್ನು ಬಹುಮಾನವಾಗಿ ನೀಡಿದ್ದರು. ಆಮೇಲೆ ನಿರಂತರ ಒಡನಾಟ ಇತ್ತು. ದೆಹಲಿ, ತಿರುಚ್ಚಿ ಎಂದು ರಾಜ್ಯದ ಹೊರಗೇ ಬಹಳ ವರ್ಷ ಕಳೆಯಬೇಕಾಗಿ ಬಂತು. ಆದರೂ ಈಗ 45 ವರ್ಷಗಳ ನಂತರ ಇದೇ ಸಂಸ್ಥೆಯಲ್ಲಿ ಸಂಗೀತ ಸಮ್ಮೇಳನದ ಅಧ್ಯಕ್ಷ ಪಟ್ಟ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಪರಿಷತ್ತು ಉದಯೋನ್ಮುಖ ಮತ್ತು ಹಿರಿಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. 

ಪಟ್ಟಾಭಿರಾಮರಿಗೆ ‘ಗಾನಕಲಾಶ್ರೀ’
ಮೈಸೂರು ಮೂಲದ ಪಟ್ಟಾಭಿರಾಮ ಪಂಡಿತ್‌ ಸಂಗೀತದ ಕುಟುಂಬಕ್ಕೆ ಸೇರಿದವರು. ತಾಯಿ ಎಂ.ಎಸ್‌. ನಾಗರತ್ನ ಅವರ ಬಳಿ ಮೂರು ವರ್ಷದ ಮಗುವಿರುವಾಗಲೇ ಸಂಗೀತ ಕಲಿಯಲಾರಂಭಿಸಿದರು. ಬಳಿಕ ವಲ್ಲಭಂ ಕಲ್ಯಾಣ ಸುಂದರಂ ಹಾಗೂ ಎಸ್‌. ರಾಮನಾಥನ್‌ ಬಳಿ ಅಭ್ಯಾಸ ಮಾಡಿದರು.

ಸಂಗೀತದ ಉನ್ನತ ಮಾರ್ಗದರ್ಶನವನ್ನು ವಿದ್ವಾಂಸರಾದ ಕೆ.ವಿ. ನಾರಾಯಣಸ್ವಾಮಿ ಹಾಗೂ ಪದ್ಮಾ ನಾರಾಯಣಸ್ವಾಮಿ ಅವರ ಬಳಿ 13 ವರ್ಷಗಳ ಕಾಲ ನಿರಂತರವಾಗಿ ಪಡೆದರು. ಕರ್ನಾಟಕ ಸಂಗೀತವನ್ನು ಕಲಿತವರು. ಪಟ್ಟಾಭಿರಾಮ ಪಂಡಿತ್‌ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿದ್ದಾರೆ. ಅವರು ಆಕಾಶವಾಣಿಯ ‘ಎ’ ಗ್ರೇಡ್‌ ಕಲಾವಿದರು.

‘ನಾದಚಿಂತಾಮಣಿ’, ‘ಬಿಸ್ಮಿಲ್ಲಾಖಾನ್‌ ರಾಷ್ಟ್ರೀಯ ಯುವ ಪುರಸ್ಕಾರ’ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಪಡೆದಿರುವ ಅವರಿಗೆ ಇದೀಗ ಗಾನಕಲಾ ಪರಿಷತ್‌ನ ‘ಯುವ ಸಂಗೀತ ಸಮ್ಮೇಳನ’ದ ಅಧ್ಯಕ್ಷತೆ ಮತ್ತು ‘ಗಾನಕಲಾಶ್ರೀ’ ಬಿರುದಿನ ಗೌರವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT