ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ವರ್ಷಗಳ ತಪಸ್ಸು, ಯಶಸ್ಸು...

Last Updated 9 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಾಗ ಭಾರತದ ಕ್ರೀಡಾಪ್ರೇಮಿಗಳಿಂದ ಇಷ್ಟೊಂದು ಪ್ರೀತಿ ಮತ್ತು ಗೌರವ ಲಭಿಸುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈಗ ಎಲ್ಲಿಯೇ ಹೋದರೂ ಜನ ಗುರುತಿಸುತ್ತಾರೆ. ಅಕ್ಕರೆಯಿಂದ ಮಾತನಾಡುತ್ತಾರೆ. ನೀವು ಭಾರತದ ಹೆಮ್ಮೆ ಎಂದು ಹೇಳುತ್ತಾರೆ. ಇದರಿಂದ ನನ್ನಲ್ಲಿನ ಹುಮಸ್ಸು ಹೆಚ್ಚಾಗಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ಪದಕ ಗೆಲ್ಲುವ ಉತ್ಸಾಹ ಮೂಡಿದೆ’.

ಹೀಗೆ ಹೇಳುತ್ತಿದ್ದ ಕುಸ್ತಿ ಪಟು ಸಾಕ್ಷಿ ಮಲಿಕ್‌ ಅವರ ಮೊಗದಲ್ಲಿ ಆತ್ಮವಿಶ್ವಾಸ ಎದ್ದುಕಾಣುತ್ತಿತ್ತು. ರಿಯೊ ಒಲಿಂಪಿಕ್ಸ್‌ನ ಬಳಿಕ ಭಾರತದ ಕ್ರೀಡಾಪ್ರೇಮಿಗಳು ತೋರಿದ ಅಪಾರ ಪ್ರೀತಿಯ ಬಗ್ಗೆ ಅವರಲ್ಲಿ ಧನ್ಯತಾ ಭಾವವಿತ್ತು.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸಾಕ್ಷಿ ಮಲಿಕ್‌ ಹೋದವಾರ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

*ನಿಮ್ಮಲ್ಲಿ ಕುಸ್ತಿ ಬಗ್ಗೆ ಆಸಕ್ತಿ ಶುರುವಾಗಿದ್ದು ಹೇಗೆ?
ಹರಿಯಾಣದಲ್ಲಿ ಕುಸ್ತಿ ಯಾವಾಗಲೂ ಪ್ರಸಿದ್ಧ ಕ್ರೀಡೆಯೇ. ನಾನು ಸ್ಪರ್ಧಾತ್ಮಕ ಕುಸ್ತಿ ಪ್ರವೇಶಿಸುವ ವೇಳೆಗೆ ಸುಶೀಲ್‌ ಕುಮಾರ್ ಅವರು ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ನಂತರದ ಒಲಿಂಪಿಕ್ಸ್‌ನಲ್ಲಿ ಯೋಗೇಶ್ವರ್‌ ದತ್‌ ಕೂಡ ಪದಕ ಗೆದ್ದಿದ್ದರು.  ಅವರು ಪದಕ ಗೆದ್ದ ಎರಡೂ ಪಂದ್ಯಗಳನ್ನು ನೋಡಿದ್ದೇನೆ. ನಾನೂ ಅವರಂತೆಯೇ ಸಾಧನೆ ಮಾಡಬೇಕೆಂದುಕೊಂಡು ಕನಸು ಕಂಡಿದ್ದೆ. ನನ್ನ ಆಸೆ ರಿಯೊದಲ್ಲಿ ಈಡೇರಿತು.

*ವೃತ್ತಿಪರ ಬಾಕ್ಸಿಂಗ್ ಆಡಲು ಆರಂಭಿಸಿ ಆರು ವರ್ಷಗಳಷ್ಟೇ ಕಳೆದಿವೆ. ಕಡಿಮೆ ಅವಧಿಯಲ್ಲಿ ಒಲಿಂಪಿಕ್ಸ್‌ನಂಥ ದೊಡ್ಡ ಕೂಟದಲ್ಲಿ ಪದಕ ಜಯಿಸಲು ಸಾಧ್ಯವಾಗಿದ್ದು ಹೇಗೆ?
2010ರಲ್ಲಿ ಮೊದಲ ಬಾರಿಗೆ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದೆ. ಆಗ ಈ ಸಾಧನೆ ಮಾಡಲು ಅದರ ಹಿಂದಿನ ಆರು ವರ್ಷ ಸತತ ಪ್ರಯತ್ನ ಪಟ್ಟಿದ್ದೆ. ಆದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು  12 ವರ್ಷಬೇಕಾಯಿತು.

*ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕೆಲ ದಿನಗಳಲ್ಲಿಯೇ ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಕೂಡ ಲಭಿಸಿತು. ಇದರ ಬಗ್ಗೆ ಹೇಳಿ?
ಪದಕ ಲಭಿಸಿದ್ದು ನನ್ನ ಶ್ರಮ ಮತ್ತು 12 ವರ್ಷಗಳ ಕಠಿಣ ಪ್ರಯತ್ನದಿಂದ. ಆದರೆ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಸಿಕ್ಕಿದ್ದು ಅದೃಷ್ಟದಿಂದ. ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸಾಮಾನ್ಯವಾಗಿ ಮೊದಲು ಅರ್ಜುನ ಪ್ರಶಸ್ತಿ ಕೊಡುತ್ತಾರೆ. ಆದರೆ ನನಗೆ ಮೊದಲೇ ಖೇಲ್‌ ರತ್ನ ಗೌರವ ಲಭಿಸಿದ್ದು ವಿಶೇಷ.

*ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದಕ್ಕಿಂತ ಮೊದಲು ಹಾಗೂ ಪದಕ ಜಯಿಸಿದ ಬಳಿಕ ನಿಮ್ಮಲ್ಲಿ ಆದ ಬದಲಾವಣೆಗಳೇನು?
ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಜಯಿಸಿದ್ದು ದೊಡ್ಡ ಸಾಧನೆ ಎನಿಸಿರಲಿಲ್ಲ.   ಆದ್ದರಿಂದ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕೆನ್ನುವ ಆಸೆ ಇತ್ತು.   ಈ ಕ್ರೀಡಾಕೂಟದಲ್ಲಿ ಪದಕ ಪಡೆದಾಗ ವಿಶೇಷ ಗೌರವ ಲಭಿಸುತ್ತದೆ. ಅದು ಯಾವ ರೀತಿಯ ಗೌರವ ಎನ್ನುವುದನ್ನು ಎರಡು ತಿಂಗಳಲ್ಲಿ ಅನುಭವಿಸಿದ್ದೇನೆ.

*ಈಗ ನಿಮ್ಮ ಮುಂದಿರುವ ಸವಾಲುಗಳೇನು?
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕ ಜವಾಬ್ದಾರಿ ಹೆಚ್ಚಿದೆ. ವಿಶ್ವ ಚಾಂಪಿಯನ್‌ಷಿಪ್‌ ಸೇರಿದಂತೆ ಮುಂಬರುವ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಎತ್ತರದ ಸಾಧನೆ ಮಾಡಬೇಕೆಂದು ಜನ ನನ್ನಿಂದ ನಿರೀಕ್ಷೆ ಮಾಡುತ್ತಿದ್ದಾರೆ. ಆದ್ದರಿಂದ ಮೂರು ತಿಂಗಳಲ್ಲಿ ನಡೆಯಲಿರುವ ವಿಶ್ವ ಕುಸ್ತಿ ಲೀಗ್ ಟೂರ್ನಿಗೆ ಅಭ್ಯಾಸ ನಡೆಸುತ್ತಿದ್ದೇನೆ.

*ನೀವು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕ ಭಾರತದ ಮಹಿಳಾ ಕುಸ್ತಿಯಲ್ಲಿ ಏನಾದರೂ ಬದಲಾವಣೆ ಆಗಿದೆ ಎನಿಸುತ್ತದೆಯೇ?
ಒಲಿಂಪಿಕ್ಸ್‌ನಲ್ಲಿ  ಪದಕ ಗೆಲ್ಲುವುದಕ್ಕೂ ಮೊದಲೇ ಭಾರತದ ಮಹಿಳಾ ಕುಸ್ತಿಯಲ್ಲಿ ಅನೇಕ ಬದಲಾವಣೆಗಳಾಗುತ್ತಿದ್ದವು.
ಗೀತಾ ಪೊಗೆಟ್‌ ಮತ್ತು ಬಬಿತಾ ಕುಮಾರಿ  ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪದಕ ಜಯಿಸಿದ್ದ ಅವಧಿಯಲ್ಲಿ ಹೊಸ ಪೀಳಿಗೆಯ ಹುಡುಗಿಯರಿಗೆ ಕುಸ್ತಿ ಬಗ್ಗೆ ಹೆಚ್ಚು ಆಸಕ್ತಿ ಬಂದಿದೆ. ಈ ಸಂಖ್ಯೆ ಉತ್ತರ ಭಾರತದಲ್ಲಿ ಹೆಚ್ಚಿದೆ. ಈಗಲೂ ಸಾಕಷ್ಟು ಮಹಿಳೆಯರು  ಕುಸ್ತಿ ಕಲಿಯಬೇಕು ಎಂದು ನನ್ನ ಬಳಿ ತಮ್ಮ ಆಸೆ ಹೇಳಿಕೊಂಡಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ  ಅಕಾಡೆಮಿ ಆರಂಭಿಸಿ ಮಹಿಳಾ ಕುಸ್ತಿಪಟುಗಳ ಸಂಖ್ಯೆ ಹೆಚ್ಚಿಸುತ್ತೇನೆ.

*ಅನೇಕ ಕ್ರೀಡಾಪಟುಗಳು ತಮಗೆ ಬಂದ ಹಣವನ್ನು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸುತ್ತಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ್ದರಿಂದ ನಿಮಗೂ ಹಣ ಲಭಿಸಿದೆ. ಇದರಿಂದ ಏನು ಮಾಡುವ ಯೋಚನೆಯಿದೆ?
ಹಣದ ಬಗ್ಗೆ ಯೋಚನೆ ಮಾಡಲು ಹೋಗಿಲ್ಲ. ಇದಕ್ಕಿಂತ ಹೆಚ್ಚಾಗಿ ಭಾರತದ ಪ್ರತಿಯೊಬ್ಬರಿಂದಲೂ ತುಂಬಾ ಪ್ರೀತಿ ಮತ್ತು ಗೌರವ ಸಿಕ್ಕಿದೆ. ಪದಕ ಗೆಲ್ಲಲು ಪಟ್ಟ 12 ವರ್ಷಗಳ ಶ್ರಮಕ್ಕೆ ಈಗ ಬೆಲೆ ಲಭಿಸಿದೆ.  ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕೆನ್ನುವ ಆಸೆ ಇಟ್ಟುಕೊಂಡ ಮಹಿಳಾ ಕ್ರೀಡಾಪಟುಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ನನ್ನ ಅಕಾಡೆಮಿಯ ಮೂಲಕ ಬೆಂಬಲವಾಗಿ ನಿಲ್ಲಬೇಕೆನ್ನುವ ಆಸೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT