ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿ ಕ್ವಾರ್ಟರ್‌ಗೆ ಸೌರಭ್‌ ವರ್ಮಾ

Last Updated 12 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಚೀನಾ, ತೈಪೆ : ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಸೌರಭ್‌ ವರ್ಮಾ ಅವರು ಇಲ್ಲಿ ನಡೆಯುತ್ತಿರುವ ಚೀನಾ ತೈಪೆ ಮಾಸ್ಟರ್ಸ್‌ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ  ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ಸೌರಭ್‌ 11–6, 8–11, 12–10, 11–3ರಲ್ಲಿ  ಜಪಾನ್‌ನ ಹಾಶಿರು  ಶಿಮೊನೊ ಅವರನ್ನು ಪರಾಭವಗೊಳಿಸಿದರು.

ಇದಕ್ಕೂ ಮೊದಲು ನಡೆದಿದ್ದ ಪ್ರಥಮ ಸುತ್ತಿನ ಹಣಾಹಣಿಯಲ್ಲಿ ರಾಷ್ಟ್ರೀಯ ಚಾಂಪಿಯನ್‌ ಸೌರಭ್‌ 12–10, 11–3, 11–5, ಚೀನಾ ತೈಪೆಯ ಯಿ ಹ್ಸಿಯಾಂಗ್‌ ಯಾಂಗ್‌ ಅವರನ್ನು ಪರಾಭವಗೊಳಿಸಿದ್ದರು.

ಈ ವರ್ಷ ನಡೆದ ಬೆಲ್ಜಿಯಂ ಮತ್ತು  ಪೋಲೆಂಡ್‌ ಓಪನ್‌ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ್ದ ಸೌರಭ್‌ ಜಪಾನ್‌ನ  ಹಾಶಿರು ವಿರುದ್ಧ ಅಮೋಘ ಆಟ ಆಡಿದರು.

ಶಿಮೊನೊ ಇಲ್ಲಿ  ಏಳನೇ ಶ್ರೇಯಾಂಕ ಹೊಂದಿದ್ದರು. ಇದನ್ನು ಅರಿತಿದ್ದ ಭಾರತದ ಆಟಗಾರ  ಮೊದಲ ಗೇಮ್‌ನ ಶುರುವಿನಿಂದಲೇ ಚುರುಕಿನ ಆಟಕ್ಕೆ ಒತ್ತು ನೀಡಿದರು.

ಇನ್ನೊಂದೆಡೆ ಜಪಾನ್‌ನ ಆಟಗಾರ ಕೂಡ ಗುಣಮಟ್ಟದ ಆಟಕ್ಕೆ ಒತ್ತು ನೀಡಿದರು. ಹೀಗಾಗಿ ಒಂದು ಹಂತದಲ್ಲಿ ಉಭಯ ಆಟಗಾರರು  6–6ರಲ್ಲಿ ಸಮಬಲ ಹೊಂದಿದ್ದರು.
ಆ ಬಳಿಕ ಅಂಗಳದಲ್ಲಿ ಮಿಂಚು ಹರಿಸಿದ ಸೌರಭ್‌ ಗೇಮ್‌ ಗೆದ್ದು ಮುನ್ನಡೆ ಪಡೆದರು. ಎರಡನೇ ಗೇಮ್‌ನಲ್ಲಿ ಹಾಶಿರು ತಿರುಗೇಟು ನೀಡಿದರು.

ಇದರಿಂದ ಕಿಂಚಿತ್ತೂ ವಿಶ್ವಾಸ ಕಳೆದುಕೊಳ್ಳದ ಸೌರಭ್‌ ನಂತರದ ಎರಡೂ ಗೇಮ್‌ಗಳಲ್ಲೂ ಪಾರಮ್ಯ ಸಾಧಿಸಿ  41ನೇ ನಿಮಿಷದಲ್ಲಿ ಗೆಲುವಿನ ತೋರಣ ಕಟ್ಟಿದರು.
ಸೌರಭ್‌ ಅವರು 16ರ ಘಟ್ಟದ ಹಣಾಹಣಿಯಲ್ಲಿ ಜಪಾನ್‌ನ  ರ್‍ಯೊಟಾರೊ  ಮರೌವೊ ವಿರುದ್ಧ ಆಡಲಿದ್ದಾರೆ.

ಸೌರಭ್‌ ಅವರ ಕಿರಿಯ ಸಹೋದರ ರಾಷ್ಟ್ರೀಯ ಚಾಂಪಿಯನ್‌ ಸಮೀರ್‌ ವರ್ಮಾ ಎರಡನೇ ಸುತ್ತಿನಲ್ಲಿ  10–12, 11–6, 3–11, 4–11ರಲ್ಲಿ ಚೀನಾ ತೈಪೆಯ ಚಿಯಾ ಹಂಗ್‌ ಲು ವಿರುದ್ಧ ಸೋಲು ಕಂಡರು. ಸಮೀರ್‌ ಅವರು ಮೊದಲ ಸುತ್ತಿನಲ್ಲಿ ‘ಬೈ’ ಪಡೆದಿದ್ದರು.
ಇನ್ನೊಂದು ಪಂದ್ಯದಲ್ಲಿ ಜೈಸ್ವಾಲ್‌ 7–11, 14–15, 11–4, 2–11ರಲ್ಲಿ ಚೀನಾ ತೈಪೆಯ ಶಿಹ್‌ ಕುಯೆ ಚುನ್ ವಿರುದ್ಧ ಶರಣಾದರು.
ರಾಹುಲ್‌ ಚೌಧರಿ ಅವರೂ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT