ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೋಶಿ ಫಾರ್ಮ್‌’ ಎಂಬ ಕೃಷಿ ಪಾಠಶಾಲೆ

ಹೊಸ ಹೆಜ್ಜೆ-24
Last Updated 17 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ಇವ್ರು ನಮ್ಮ ಅಪ್ಪಾರು ಕೃಷ್ಣಾಚಾರ್‌ ಗಂಡಮಾಲಿ. 94 ಇಯರ್ಸ್‌, ನೋ ಬಿ.ಪಿ; ನೋ ಶುಗರ್‌. ಕಣ್ಣು, ಮಾತು ಸ್ಪಷ್ಟ. ಈ ಪಂಚವಟಿ ಕೆಳಗೆ ಕೂತು ಹೋಗಿಲ್ಲ ಅಂದ್ರೆ ಅವರಿಗೆ ಸಮಾಧಾನ ಇರಲ್ಲ...’ ಜೋಶಿ ಫಾರ್ಮ್‌ಹೌಸ್‌ನಲ್ಲಿರುವ ‘ಪಂಚವಟಿ’ ಹತ್ತಿರದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ತಂದೆಯವರ ಕುರಿತು ಡಾ. ಪಾಂಡುರಂಗ ಗಂಡಮಾಲಿ  ಅವರು ಹೀಗೆ ಮಾತು ಶುರುವಿಟ್ಟರು.

ಹುಬ್ಬಳ್ಳಿಯ ನವನಗರದಿಂದ ಮುಂದೆ ಗಾಮನಗಟ್ಟಿ ರಸ್ತೆಯಲ್ಲಿ ಸಾಗಿ ಎಡಕ್ಕೆ ಇರುವ ರಸ್ತೆ ಸೀದಾ ಜೋಶಿ ಫಾರ್ಮ್‌ಗೆ ಕರೆದೊಯ್ಯಲಿದೆ. 21 ಎಕರೆ ಕ್ಷೇತ್ರದಲ್ಲಿ ವ್ಯಾಪಿಸಿರುವ ಜೋಶಿ ಫಾರ್ಮ್‌ ಹೌಸ್ ರೂವಾರಿ ಡಾ. ಪಾಂಡುರಂಗ ಗಂಡಮಾಲಿ. ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಇವರ ಫಾರ್ಮ್‌ ಹೌಸ್‌ ಅಪೂರ್ವ ಔಷಧಿ ಸಸ್ಯಗಳ ಆಗರವೂ ಆಗಿದೆ.

ಮಧುನಾಶಿನಿ, ನೆಲ್ಲಿ, ಬ್ರಾಹ್ಮಿ, ಅರಳೆ ಕಾಯಿ, ಹಿಪ್ಪಲಿ, ತಾರೆಕಾಯಿ, ಅಮೃತಬಳ್ಳಿ, ಸರ್ಪಗಂಧ, ರಾಮಫಲ... ಒಂದಲ್ಲ; ಎರಡಲ್ಲ ಫಾರ್ಮ್‌ನ ಮೂಲೆ ಮೂಲೆ ಔಷಧಿ ಸಸ್ಯಗಳ ಆಗರ. ಕೇವಲ ಔಷಧಿ ಸಸ್ಯಗಳಲ್ಲದೆ ಮಾವು, ಸೀತಾಫಲ, ಪೇರಲೆ, ಬಾಳೆ, ಹಲಸು, ಸಪೋಟಾ, ಪಪ್ಪಾಯಿ, ತೆಂಗು, ಸೇವಂತಿಗೆ, ಸೋಯಾಬಿನ್‌, ಹುಣಸೆ  ಹೀಗೆ ಬಹು ಬೆಳೆಯ ಬೇಸಾಯ ಇಲ್ಲಿದೆ. ಹೆಚ್ಚಿನ ಜಾಗದಲ್ಲಿ ಮಾವಿನ ಮರಗಳಿದ್ದು, ಅವುಗಳ ನಡುವೆ ಮಿಶ್ರಬೆಳೆಯಾಗಿ ಸೋಯಾಬಿನ್‌, ಸೇವಂತಿಗೆ ಹೂವು ಹಾಕಲಾಗಿದೆ. ಜೊತೆಗೆ ಮಾವಿನ ಮರಗಳ ನಡುವೆ ಜಾಗ ಪಡೆದಿರುವ ಬೆಟ್ಟದ ನೆಲ್ಲಿ ಗಿಡಗಳು ಉತ್ತಮ ಫಸಲು ನೀಡುತ್ತಿವೆ.

ಸಾವಯವ ಪದ್ಧತಿಯಲ್ಲಿ ತೋಟ ಮಾಡುವ ಸಂಬಂಧ ಅವರ ತೋಟದಲ್ಲಿ ಮನೆಯ ಪಕ್ಕದಲ್ಲೇ ಕೊಟ್ಟಿಗೆಯಿದೆ. ಸೆಗಣಿ ಹಾಗೂ ಗೋಮೂತ್ರವನ್ನು ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಅದಕ್ಕಾಗಿಯೇ ಸಿಮೆಂಟಿನ ಎಂಟು ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಅದರೊಳಗೆ ಕೈ ಹಾಕಿ ಬೊಗಸೆಯಷ್ಟು ಗೊಬ್ಬರ ಮೊಗೆದು ಎರೆಹುಳಗಳ ದರ್ಶನ ಮಾಡಿಸಿದರು ಡಾ.ಗಂಡಮಾಲಿ.

‘ಇಷ್ಟು ಎರೆಹುಳು ಗೊಬ್ಬರವನ್ನೂ ನಮ್ಮ ಹೊಲ, ತೋಟಕ್ಕೇ ಬಳಸ್ತೇವೆ. ಇದು ನೋಡಿ. ಅಜೋಲಾ. ಪಶುಗಳಿಗೆ ಆಹಾರವಾಗಿ ಬಳಸ್ತೇವೆ’ ಎನ್ನುತ್ತಾ ಎರೆಹುಳು ಗೊಬ್ಬರ ತೊಟ್ಟಿಯ ಪಕ್ಕದಲ್ಲೇ ನಿರ್ಮಿಸಲಾದ ನಾಲ್ಕು ಅಜೋಲಾ ತೊಟ್ಟಿಗಳನ್ನು ತೋರಿಸಿದರು.

ನಮ್ಮ ತೋಟದಲ್ಲಿ ಬೆಳೆದ ಬಾಳೆಗೊನೆ ನೋಡಿ ಎನ್ನುತ್ತಾ ಮನೆಯ ಕೋಣೆಯೊಂದರಲ್ಲಿ ಮುಚ್ಚಿಟ್ಟ ಗೋಣಿ ಚೀಲವನ್ನು ಸರಿಸಿದರು. ಅಬ್ಬಾ ಅನ್ನಿಸುವಂತಿತ್ತು ಜಿ–9 ತಳಿಯ ಬಾಳೆ. ಕಲ್ಲು ಮಿಶ್ರಿತ ಮಣ್ಣಿನಲ್ಲಿ ಎರೆಹುಳು ಗೊಬ್ಬರ ಉಂಡ ಪಾಲಾಕ್‌ ಸೊಪ್ಪು ಆರೋಗ್ಯವಾಗಿ ಬೆಳೆದು ಹಸಿರು ಚೆಲ್ಲುತ್ತಿತ್ತು. ಅಲ್ಲೇ ಪಕ್ಕದಲ್ಲಿ ಕುಂಬಳಕಾಯಿ ಬಳ್ಳಿ ಮನಸೋಇಚ್ಛೆ ಹಬ್ಬಿಕೊಂಡಿತ್ತು. ಹೊಲದ ಬದಿಯ ಏರಿಯಲ್ಲಿ ಅಪರೂಪದ ಕೆಂಪು ಹುಣಸೆ ಮರದಲ್ಲಿ ಅಲ್ಲಲ್ಲಿ ಹುಣಸೆಕಾಯಿ ನೇತಾಡುತ್ತಿದ್ದವು. ಹಲಸು ನೆಟ್ಟಿ ಎರಡೇ ವರ್ಷಕ್ಕೆ ನೆಲಕ್ಕೆ ತಾಗಿಕೊಂಡು ಬುಡದಲ್ಲಿ ಬಿಟ್ಟ ಹಣ್ಣುಗಳನ್ನು ಕೊಯ್ದ ನಿಶಾನೆ ಉಳಿದುಕೊಂಡಿತ್ತು. ಇಷ್ಟೆಲ್ಲದರ ನಡುವೆ ಆಕರ್ಷಿಸುತ್ತಿರುವುದೇ ‘ಪಂಚವಟಿ’.

ಉತ್ತಮ ಆರೋಗ್ಯಕ್ಕಾಗಿ ಪ್ರದಕ್ಷಿಣಿ ಹಾಕಲು  ಪಂಚವಟಿಯನ್ನು ಶಾಸ್ತ್ರಬದ್ಧವಾಗಿ ನಿರ್ಮಿಸಲಾಗಿದೆ. ಪೂರ್ವಕ್ಕೆ ಔದುಂಬರ (ಅತ್ತಿಗಿಡ), ಪಶ್ಚಿಮಕ್ಕೆ ಶಮಿ (ಬನ್ನಿಗಿಡ), ಉತ್ತರಕ್ಕೆ ಅಶ್ವತ್ಥ (ಆಲ), ದಕ್ಷಿಣಕ್ಕೆ ಬೇವಿನ ಮರ, ನಡುವೆ ಬಿಲ್ವ ಮರಗಳಿವೆ. ಈ ಪಂಚವಟಿಗೆ ಮಕ್ಕಳಿಲ್ಲದವರು, ಆಸ್ತಮಾ ಇದ್ದವರು, ಕಣ್ಣಿನ ಸಮಸ್ಯೆ ಇದ್ದವರು ಪ್ರದಕ್ಷಿಣೆ ಹಾಕಲು ಬರುತ್ತಾರೆ ಎಂದು ಡಾ. ಪಾಂಡುರಂಗ ಗಂಡಮಾಲಿ ತಿಳಿಸಿದರು.

ಫಾರ್ಮ್‌ ನೋಡಲು ಬರುವವರನ್ನು ಅಷ್ಟೇ ಆದರವಾಗಿ ಸತ್ಕರಿಸುವ ಡಾ.ಗಂಡಮಾಲಿ ಅವರು, ಭೇಟಿಯಾಗುವವರಿಗೆ ಕೊಡುಗೆಯಾಗಿ ಔಷಧಿ ಸಸ್ಯಗಳನ್ನೋ, ತುಳಸಿ ಗಿಡಗಳನ್ನೋ ನೀಡುವ ಪರಿಪಾಠವಿಟ್ಟುಕೊಂಡಿದ್ದಾರೆ.

ತೋಟ ನಿರ್ಮಿಸಿ 45 ವರ್ಷ ಕಳೆದಿದ್ದು, ಒಂದಿಲ್ಲೊಂದು ಕೃಷಿ ಪ್ರಯೋಗ ನಡೆಸುತ್ತಲೇ ಇದ್ದಾರೆ. ಇಳಿವಯಸ್ಸಿನಲ್ಲೂ ಲವಲವಿಕೆಯಿಂದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೆ ಅವರ ಪತ್ನಿ ಕೂಡ ಸಾಥ್‌ ನೀಡಿದ್ದಾರೆ. ಮನೆಯ ಪಕ್ಕದಲ್ಲಿರುವ ಸಭಾಂಗಣದಲ್ಲಿ ಯೋಗ ತರಗತಿಯನ್ನು ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ತೋಟಗಾರಿಕೆ ಕೃಷಿ, ಔಷಧಿಸಸ್ಯ ಕುರಿತು ಕೇಳಿ ಬಂದವರಿಗೆ ಇಲ್ಲ ಎನ್ನದೇ ಡಾ.ಗಂಡಮಾಲಿ ಮನಬಿಚ್ಚಿ ಪ್ರೀತಿಯಿಂದ ಅನುಭವ ಹಂಚಿಕೊಳ್ಳುತ್ತಾರೆ. ಸಂಪರ್ಕ: ಡಾ.ಪಾಂಡುರಂಗ ಗಂಡಮಾಲಿ (9343107903).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT