ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಯ ವೇದಿಕೆಯಲ್ಲಿ ನಟನೆಗೂ ಅವಕಾಶವಿದೆ!

Last Updated 18 ಅಕ್ಟೋಬರ್ 2016, 2:53 IST
ಅಕ್ಷರ ಗಾತ್ರ

ಕೆಲವೊಮ್ಮೆ ಚರ್ಚೆಯ ವೇದಿಕೆ ನಾಟಕರಂಗವಾಗಿ ಬದಲಾಗುವುದೂ ಇದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ, ಅಭ್ಯರ್ಥಿ ತನ್ನ ನಾಯಕತ್ವ ಗುಣವನ್ನು ಒರೆಗೆ ಹಚ್ಚಬೇಕಾಗುತ್ತದೆ. ಮುಖ್ಯವಾಗಿ, ಅಭ್ಯರ್ಥಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬಲ್ಲ ಸಾಮರ್ಥ್ಯ, ಮನೋಧರ್ಮ ಉಳ್ಳವನೇ ಎಂದು ಮತದಾರ ಗಮನಿಸುತ್ತಾನೆ. ಆ ಲಕ್ಷಣಗಳು ಕಂಡರೆ ಆತನ ಪರ ಪಟ್ಟಾಗಿ ನಿಲ್ಲುತ್ತಾನೆ. ನಾಯಕತ್ವದ ಯಾವ ಲಕ್ಷಣವೂ ತೋರದೇ, ತಾಸುಗಟ್ಟಲೆ ಮಾತನಾಡಿದರೆ, ಭರವಸೆಯಷ್ಟೇ ನೀಡಿದರೆ, ಮಾತು ಮತವಾಗಿ ಪರಿವರ್ತನೆಯಾಗುವುದಿಲ್ಲ. ಅದು ಪ್ರಾಥಮಿಕ ಹಂತದ ಚುನಾವಣೆಯಲ್ಲೂ ನಿಜ, ಸಾರ್ವತ್ರಿಕ ಚುನಾವಣೆಯ ಮಟ್ಟಿಗೂ ದಿಟ.

ಸಾಮಾನ್ಯವಾಗಿ ಅಧ್ಯಕ್ಷೀಯ ಚರ್ಚೆಯ ವಿಷಯ ಬಂದಾಗ, ರಾಜಕೀಯ ತಜ್ಞರು 1980ರಲ್ಲಿ ನಡೆದ ರೇಗನ್ ಮತ್ತು ಬುಷ್ ನಡುವಿನ ಚರ್ಚೆಯನ್ನು ಪ್ರಸ್ತಾಪಿಸುತ್ತಾರೆ. 1980ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಪಕ್ಷದೊಳಗೆ ಪೈಪೋಟಿಯಿತ್ತು. ರೊನಾಲ್ಡ್ ರೇಗನ್ ಮತ್ತು ಜಾರ್ಜ್ ಬುಷ್ ಸೀನಿಯರ್ ನಡುವೆ ಸ್ಪರ್ಧೆಯಿತ್ತು. ಉಳಿದಂತೆ ವಿವಿಧ ರಾಜ್ಯಗಳ ಸೆನೆಟರ್‌ಗಳೂ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಪ್ರಾಥಮಿಕ ಹಂತದ ಚುನಾವಣೆ ಆರಂಭವಾದಾಗ. ‘ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜಿಮ್ಮಿ ಕಾರ್ಟರ್ ಜನಪ್ರಿಯತೆ ಕುಗ್ಗಿದೆ. ಈ ಬಾರಿ ನಮ್ಮದೇ ಸರ್ಕಾರ’ ಎಂದು ಬುಷ್ ಭಾಷಣ ಮಾಡುತ್ತಿದ್ದರು.

1976ರಲ್ಲಿ ಪಕ್ಷದ ಟಿಕೇಟ್ ತಪ್ಪಿಸಿಕೊಂಡಿದ್ದ ರೇಗನ್, 80ರಲ್ಲಿ ಶತಾಯಗತಾಯ ಅಭ್ಯರ್ಥಿಯಾಗಬೇಕು ಎಂದು ಪ್ರಯತ್ನಿಸುತ್ತಿದ್ದರು. ಆದರೆ ಪತ್ರಿಕೆಗಳು ‘ಬುಷ್ ಜನಪ್ರಿಯತೆ ಏರುತ್ತಿದೆ. ರೇಗನ್ ಪ್ರಾಥಮಿಕ ಹಂತದ ಚುನಾವಣೆಯಲ್ಲಿ ಹಿಂದೆ ಬೀಳುತ್ತಿದ್ದಾರೆ. ಹಾಗಾಗಿ ಕೆಲವು ದಿನಗಳಲ್ಲೇ ರೇಗನ್ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಗಬಹುದು’ ಎಂದು ಬರೆದಿದ್ದವು. ರಿಪಬ್ಲಿಕನ್ ಪಕ್ಷದ ಏಳು ಅಭ್ಯರ್ಥಿಗಳ ನಡುವೆ ಸಂವಾದ ಕೂಡ ನಡೆಯುತ್ತಿತ್ತು. ಉಳಿದ ನಾಲ್ವರು ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದರು. ರೇಗನ್ ಮತ್ತು ಬುಷ್, ಉಳಿದ ನಾಲ್ವರನ್ನು ಪಕ್ಕಕ್ಕೆ ತಳ್ಳಿ, ಹಣಾಹಣಿಯನ್ನು ಇಬ್ಬರ ನಡುವಿನ ಸ್ಪರ್ಧೆಯಾಗಿಸಲು ಒಂದು ಪ್ರತ್ಯೇಕ ಚರ್ಚೆ ಏರ್ಪಡಲಿ ಎಂದು ಬಯಸಿದ್ದರು. ಇಬ್ಬರ ನಡುವಿನ ಚರ್ಚೆಯಲ್ಲಿ ರೇಗನ್ ಅವರನ್ನು ಸೋಲಿಸಿದರೆ, ಅವರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ. ಪಕ್ಷದಿಂದ ಉಮೇದುವಾರಿಕೆ ತನಗೇ ಖಾತ್ರಿ ಎಂಬುದು ಬುಷ್ ಲೆಕ್ಕಾಚಾರವಾಗಿತ್ತು. ನಟನೆಯ ಹಿನ್ನಲೆಯಿಂದ ಬಂದಿದ್ದ ರೇಗನ್, ತಮ್ಮ ನಟನಾ ಸಾಮರ್ಥ್ಯ ಬಳಸಿ, ಚರ್ಚೆಯ ಸಂದರ್ಭದಲ್ಲಿ ಜನರ ಮನಗೆಲ್ಲಲು ಯೋಜನೆ ರೂಪಿಸಿದ್ದರು.

ಪತ್ರಿಕೆಯೊಂದರ ಸಂಪಾದಕರಾಗಿದ್ದ ಜಾನ್ ಬ್ರೀನ್, ಚರ್ಚೆಯ ನಿರ್ವಾಹಕ ಎಂದು ತೀರ್ಮಾನಿಸಲಾಯಿತು. ಇತರ ಅಭ್ಯರ್ಥಿಗಳನ್ನು ಚರ್ಚೆಯಿಂದ ಕೈಬಿಡುವುದರಿಂದ ಚುನಾವಣಾ ನಿಯಮ ಉಲ್ಲಂಘನೆ ಆಗದಿರಲೆಂದು, ಅದನ್ನೊಂದು ಖಾಸಗಿ ಚರ್ಚೆಯಾಗಿ ಪರಿವರ್ತಿಸಿ, ರೇಗನ್ ತಾವೇ ಹಣ ಸಂದಾಯ ಮಾಡಿದರು. ಆದರೆ ಚರ್ಚೆಯ ದಿನ ಹತ್ತಿರವಾಗುತ್ತಿದ್ದಂತೆ ಇತರ ಅಭ್ಯರ್ಥಿಗಳು ತಮ್ಮನ್ನೂ ಚರ್ಚೆಯಲ್ಲಿ ಸೇರಿಸಿಕೊಳ್ಳಿ ಎಂದು ರೇಗನ್ ಹಿಂದೆಬಿದ್ದರು. ರೇಗನ್ ಮನಸ್ಸು ಬದಲಾಯಿಸಿದರು. ಎಲ್ಲರನ್ನೂ ಚರ್ಚೆಗೆ ಆಹ್ವಾನಿಸಿದರು. ಆದರೆ ಬುಷ್ ಅದಕ್ಕೆ ಒಪ್ಪಲಿಲ್ಲ. ಚರ್ಚೆಯ ದಿನ, ಸಾವಿರಾರು ಜನ ರೇಗನ್-ಬುಷ್ ನಡುವಿನ ಸಂವಾದ ವೀಕ್ಷಿಸಲು ಆಗಮಿಸಿದ್ದರು. ಎಲ್ಲ ಅಭ್ಯರ್ಥಿಗಳೂ ಚರ್ಚೆಯಲ್ಲಿ ಪಾಲ್ಗೊಳ್ಳುವುದಾದರೆ, ತಾವು ಭಾಗವಹಿಸುವುದಿಲ್ಲ ಎಂದು ಬುಷ್ ಹಟ ಹಿಡಿದರು. ಸಂಧಾನ ಸಫಲವಾಗಲಿಲ್ಲ. ಕೊನೆಗೆ ರೇಗನ್ ತಮ್ಮ ‘ಯೋಜನೆ’ಯಂತೆಯೇ ನಡೆದುಕೊಂಡರು. ಬುಷ್ ಮಾತಿಗೆ ಒಪ್ಪಿ, ವೇದಿಕೆಗೆ ಇಬ್ಬರೂ ನಡೆದು ಬಂದರು.

ವೇದಿಕೆಯ ಮೇಲೆ ಎರಡು ಆಸನಗಳನ್ನಷ್ಟೇ ಇಡಲಾಗಿತ್ತು. ಬುಷ್ ಮತ್ತು ರೇಗನ್ ತಮಗೆ ನಿಗದಿಯಾಗಿದ್ದ ಆಸನದಲ್ಲಿ ಕುಳಿತರು. ನಿರ್ವಾಹಕ ಜಾನ್ ಬ್ರೀನ್, ಇಬ್ಬರ ಎದುರಿಗೆ ವೀಕ್ಷಕರ ಮಧ್ಯೆ ತಮ್ಮ ಆಸನದಲ್ಲಿ ಕುಳಿತರು. ಇನ್ನೇನು ಚರ್ಚೆ ಆರಂಭವಾಗಬೇಕು ಎನ್ನುವಷ್ಟರಲ್ಲಿ, ನಾಟಕೀಯ ಸನ್ನಿವೇಶ ಸೃಷ್ಟಿಯಾಯಿತು. ಸಭಾಂಗಣಕ್ಕೆ ಆಗಮಿಸಿದ್ದ, ಇತರ ಅಭ್ಯರ್ಥಿಗಳು ವೇದಿಕೆ ಏರಿಬಂದು, ಬುಷ್-ರೇಗನ್ ಹಿಂದೆ ನಿಂತರು. ಜನ ‘Give them Chair' ಎಂದು ಕಿರುಚಲಾರಂಭಿಸಿದರು. ಇದರಿಂದ ವಿಚಲಿತರಾದ ಜಾನ್ ಬ್ರೀನ್, ಮೈಕ್‌ಗಳನ್ನು ಸ್ವಿಚ್ ಆಫ್ ಮಾಡುವಂತೆ ಆದೇಶಿಸಿ, ಉಳಿದ ಅಭ್ಯರ್ಥಿಗಳನ್ನು ವೇದಿಕೆಯಿಂದ ಕಳುಹಿಸಲು ಮುಂದಾದರು. ಆ ನಾಲ್ಕು ಅಭ್ಯರ್ಥಿಗಳು ವೇದಿಕೆಯಿಂದ ಇಳಿಯಲು ಒಲ್ಲೆ ಎಂದರು.

ಅಷ್ಟರಲ್ಲೇ, ರೇಗನ್ ಮೈಕು ಹಿಡಿದು ಗಟ್ಟಿ ದನಿಯಲ್ಲಿ, ‘I am the sponsor and I suppose I should have some right’ ಎಂದರು. ‘ಆ ಐದು ಜನರನ್ನು ಹೊರಗೆ ಕಳುಹಿಸುವುದು ಸರಿಯಲ್ಲ. ನಾವೆಲ್ಲರೂ ಒಂದೇ ಪಕ್ಷದವರು. ಒಗ್ಗಟ್ಟಿನಿಂದ ಇರಬೇಕು’ ಎಂದು ಮಾತು ಬೆಳೆಸಿದರು. ತಮ್ಮ ಅನುಕೂಲಕ್ಕೆ ಸಂದರ್ಭವನ್ನು ರೇಗನ್ ಬಳಸಿಕೊಳ್ಳುತ್ತಿದ್ದಾರೆ ಎಂದರಿತ ನಿರ್ವಾಹಕ ಕೂಡಲೇ ಮೈಕ್ ಸ್ವಿಚ್ ಆಫ್ ಮಾಡುವಂತೆ ಆದೇಶಿಸಿದರು. ಆಗ ಸಿಟ್ಟಿಗೆದ್ದ ರೇಗನ್ ‘I am paying for this microphone Mr Green!’ ಎಂದು ಅಬ್ಬರಿಸಿಯೇ ಬಿಟ್ಟರು. ಬುಷ್ ಏನಾಗುತ್ತಿದೆ ಎಂದು ತಿಳಿಯದೇ ಬೆಪ್ಪು ನಗೆ ಬೀರುತ್ತಾ ಕುಳಿತೇ ಇದ್ದರು. ಉಳಿದ ನಾಲ್ಕು ಅಭ್ಯರ್ಥಿಗಳನ್ನು ಚರ್ಚೆಯಿಂದ ಹೊರಗಿಡಲು ಹಟ ಹಿಡಿದ ಬುಷ್ ಜನರ ಕಣ್ಣಿನಲ್ಲಿ ಸಣ್ಣವರಾಗಿ ಕಂಡರೆ, ರೇಗನ್ ಎಲ್ಲರ ಕಣ್ಣುಗಳಲ್ಲಿ ಹೀರೊ ಆಗಿ ಬದಲಾಗಿದ್ದರು.

ನಂತರವಂತೂ ರೇಗನ್ ಕ್ಯಾಂಪ್, ಬುಷ್ ಒಬ್ಬ ದುರ್ಬಲ ವ್ಯಕ್ತಿ ಎಂದೇ ಬಿಂಬಿಸಿಕೊಂಡು ಬಂತು. ಆದರೆ ‘ದುರ್ಬಲ ವ್ಯಕ್ತಿ’ ಎಂಬ ವಿಷಯ ದೊಡ್ಡಮಟ್ಟದಲ್ಲಿ ಚರ್ಚೆಗೆ ಕಾರಣವಾಗಲಿದೆ, ತಮಗೆ ಹಾನಿಯಾಗಲಿದೆ ಎಂದು ಬುಷ್ ಊಹಿಸಿರಲಿಲ್ಲ. ‘ನ್ಯೂಸ್ ವೀಕ್’ ಪತ್ರಿಕೆ ಅದೇ ಸಂದರ್ಭದಲ್ಲಿ, ತನ್ನ ಸಂಚಿಕೆಗೆ ಬುಷ್ ಮುಖಪುಟ ಬಳಸಿ, ‘Fighting the Wimp Factor’ ಎಂದು ಒಕ್ಕಣೆ ನೀಡಿತು. ‘ಶ್ವೇತಭವನದಲ್ಲಿ ಕುಳಿತು ಕಠಿಣ ನಿಲುವು ತಳೆಯಲು ಬುಷ್ ಅವರಿಗೆ ಸಾಧ್ಯವಾಗಲಾರದು. ಅವರೊಬ್ಬ ಅಪ್ರಯೋಜಕ’ ಎಂದು ಬರೆಯಿತು. ಹಾಗೆ ನೋಡಿದರೆ, ಬುಷ್ ಮೃದುಭಾಷಿ ಎನ್ನುವುದನ್ನು ಬಿಟ್ಟರೆ, ಅವರನ್ನು ‘ದುರ್ಬಲ’ ಎನ್ನಲು ಕಾರಣಗಳೇ ಇರಲಿಲ್ಲ. ಹಲವು ಸಾಹಸಗಳನ್ನು ಅವರು ಮಾಡಿದ್ದರು. ಬುಷ್ ಎರಡನೇ ವಿಶ್ವಸಮರದಲ್ಲಿ, ಯುದ್ಧ ವಿಮಾನದ ಪೈಲಟ್ ಆಗಿದ್ದರು. ಒಮ್ಮೆ ವಿಮಾನದ ಮೇಲೆ ದಾಳಿಯಾದಾಗ, ತಾವೂ ಬಾಂಬ್ ದಾಳಿ ನಡೆಸಿ, ಪ್ಯಾರಾಚೂಟ್ ಮೂಲಕ ಸುರಕ್ಷಿತ ಸ್ಥಳದಲ್ಲಿ ಇಳಿದಿದ್ದರು. ಜೊತೆಗೆ ಅಮೆರಿಕದ ಗೂಢಚರ ಸಂಸ್ಥೆ ಸಿಐಎನಲ್ಲಿ ಬುಷ್ ಕೆಲಸ ಮಾಡಿದ್ದರು. ಚೀನಾಕ್ಕೆ ಅಮೆರಿಕದ ರಾಯಭಾರಿಯಾಗಿದ್ದರು. ಹೀಗಿದ್ದೂ ಅವರ ಮೆದುಧ್ವನಿ, ನಾಜೂಕಿನ ನಡೆ ಅವರಿಗೆ ದುರ್ಬಲ ಎಂಬ ಹಣೆಪಟ್ಟಿ ನೀಡಿತ್ತು.

ಇದನ್ನು ಅಳಿಸಿ ಹಾಕಲು, ಬುಷ್ ಪರ ಚುನಾವಣಾ ತಂತ್ರಗಾರಿಕೆ ಹೊಣೆ ಹೊತ್ತಿದ್ದ ತಂಡ ಪ್ರಯತ್ನಿಸಿತು. ಬುಷ್ ಅವರನ್ನು ‘ಸಧೃಡ’ ಎಂದು ಬಿಂಬಿಸಲು, ಅವರು ಜಾಗ್ ಮಾಡುತ್ತಿರುವ, ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ಛಾಯಾಚಿತ್ರಗಳನ್ನು ಜಾಹೀರಾತಿನ ಮೂಲಕ, ಪತ್ರಿಕೆಗಳ ಮೂಲಕ ಬಿಡುಗಡೆ ಮಾಡಿತು. ಯಾವುದೂ ಸಹಾಯಕವಾಗಲಿಲ್ಲ. ರೇಗನ್ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾದರು, ಆ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದು ಶ್ವೇತಭವನ ಹೊಕ್ಕರು. ಇದು ಎಲ್ಲ ಚುನಾವಣೆಗಳಲ್ಲೂ ಸಾಮಾನ್ಯವಾಗಿ ಆಗುತ್ತದೆ. ರಿಪಬ್ಲಿಕನ್ ಮತದಾರರು ಅಧ್ಯಕ್ಷ ಅಭ್ಯರ್ಥಿ ಸದೃಢವಾಗಿರಬೇಕು, ಕಠಿಣ ನಿಲುವುಗಳನ್ನು ತಳೆಯುವ ಸಾಮರ್ಥ್ಯ ಇರಬೇಕು ಎಂದು ಬಯಸುತ್ತಾರೆ. ಡೆಮಾಕ್ರಟಿಕ್ ಪಕ್ಷದ ಮತದಾರರು, ಅಭ್ಯರ್ಥಿಯಲ್ಲಿ ಹುರುಪನ್ನು ನಿರೀಕ್ಷಿಸುತ್ತಾರೆ. 2008ರಲ್ಲಿ ರಾಜಕೀಯ ವಿಶ್ಲೇಷಕ ಜೇಮ್ಸ್ ಕಾರ್ವಿಲ್, ‘ಒಬಾಮ ಅವರಿಗೆ ಹೋಲಿಸಿದರೆ ಹಿಲರಿ ಅವರಲ್ಲೇ ಪುರುಷತ್ವದ ಲಕ್ಷಣಗಳು ಹೆಚ್ಚಿವೆ’ ಎಂದಿದ್ದರು. ಈ ಬಾರಿ ಟ್ರಂಪ್, ಹಿಲರಿಗಿಂತ ಸದೃಢ ಎಂದು ತೋರಿಸುವ ಕಸರತ್ತು ನಡೆಯಿತು. ಟ್ರಂಪ್ ಬೆಂಬಲಿಗರು ಧರಿಸುವ ಟೀಶರ್ಟ್ ಮೇಲೂ ಅದುಮೂಡಿತು. ‘Donald Trump: Finally Someone with guts’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT