ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಲರಿ, ಟ್ರಂಪ್ ಚರ್ಚೆಯಲ್ಲಿ ಕಂಡಿದ್ದು ಕೇಳಿದ್ದು

Last Updated 19 ಅಕ್ಟೋಬರ್ 2016, 3:07 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಅಧ್ಯಕ್ಷೀಯ ಸಂವಾದದಲ್ಲಿ ಘನಗಂಭೀರ ವಿಷಯ ಮಂಥನ ನಡೆಯುವುದಿಲ್ಲ. ದೇಶದ ಎದುರಿರುವ ಸಮಸ್ಯೆಗಳನ್ನು ಆಳವಾಗಿ ಚರ್ಚಿಸುವ ವೇದಿಕೆಯೂ ಅದಲ್ಲ. ಮುಖ್ಯವಾಗಿ ಇಬ್ಬರು ಅಭ್ಯರ್ಥಿಗಳು ಹಿಂದೆ ನೀಡಿದ್ದ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಾ, ಎದುರಾಳಿಯನ್ನು ಕೆಣಕಿ, ಪ್ರಶ್ನೆಗಳ ಮೂಲಕ ಇಕ್ಕಟ್ಟಿಗೆ ಸಿಲುಕಿಸಲು ನೋಡುತ್ತಾರೆ. ಟ್ರಂಪ್ ಅವರ ಜಗಳಗಂಟತನ ಚುನಾವಣಾ ಪ್ರಚಾರ ಸಭೆಗಳಲ್ಲೇ ಜಾಹೀರಾದದ್ದರಿಂದ, ಈ ಬಾರಿಯ ಅಧ್ಯಕ್ಷೀಯ ಸಂವಾದ ಬಹು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಇದುವರೆಗೆ ತಮ್ಮ ತಮ್ಮ ಪಕ್ಷದ ವೇದಿಕೆಯಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದ ಅಭ್ಯರ್ಥಿಗಳು ಮುಖಕ್ಕೆ ಮುಖ ಒಡ್ದಿನಿಂತಾಗ ಹೇಗೆ ಪ್ರತಿಕ್ರಿಯಿಸಬಹುದು, ಮಾತು ಯಾವ ದಿಕ್ಕಿಗೆ ಹೊರಳಬಹುದು ಎಂಬ ಕುತೂಹಲ ಸಹಜವಾಗಿಯೇ ಇತ್ತು. ಹಾಗಾಗಿಯೇ ಡೊನಾಲ್ಡ್ ಟ್ರಂಪ್ ಮತ್ತು ಹಿಲರಿ ಕ್ಲಿಂಟನ್ ನಡುವಿನ ಚರ್ಚೆಯನ್ನು ಹಿಂದೆಂದಿಗಿಂತ ಅತಿಹೆಚ್ಚಿನ ಸಂಖ್ಯೆಯಲ್ಲಿ, ಸುಮಾರು 84 ದಶಲಕ್ಷ ಮಂದಿ ವೀಕ್ಷಿಸಿದರು.

ದೇಶದ ಅಭ್ಯುದಯ ಸಾಧಿಸುವುದು ಹೇಗೆ? ಅಮೆರಿಕದ ಮುಂದಿನ ನಡೆ ಹೇಗಿರಬೇಕು? ಭದ್ರತೆಯ ವಿಷಯದಲ್ಲಿ ಇಡಬೇಕಾದ ಹೆಜ್ಜೆಗಳು ಏನು? ಎಂಬ ಮೂರು ಮುಖ್ಯ ವಿಷಯಗಳನ್ನು ಮೊದಲ ಸಂವಾದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಮೊದಲ ಸಂವಾದದಲ್ಲಿ ಹಿಲರಿ ಸಾಧಿಸಲು ಹೊರಟ ಸಂಗತಿಗಳು ಮೂರು, ಟ್ರಂಪ್ ಶ್ರೀಮಂತ ಉದ್ಯಮಿ, ಅವರಿಗೆ ಬಡತನದ ಅರಿವಿಲ್ಲ. ಮಹಿಳೆಯರ ಬಗ್ಗೆ ಗೌರವವಿಲ್ಲ. ಮಾತಿನಲ್ಲೇ ಜನರನ್ನು ಒಡೆಯುವ, ದ್ವೇಷ ಬಿತ್ತುವ ಟ್ರಂಪ್, ಅಧಿಕಾರ ಹಿಡಿದರೆ ಸರ್ವಾಧಿಕಾರಿಯಾಗಬಹುದು. ಇದನ್ನು ಹಿಲರಿ ಉದ್ವೇಗಕ್ಕೆ ಒಳಗಾಗದೇ ಅಚ್ಚುಕಟ್ಟಾಗಿ ಮಾಡಿದರು. ಟ್ರಂಪ್ ಶ್ರೀಮಂತ ಉದ್ಯಮಿಯ ಮಗ, ತಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು ಎನ್ನುವುದನ್ನು ಚಾಣಾಕ್ಷತನದಿಂದ ಹಿಲರಿ ಮಾತಿನಲ್ಲಿ ತಂದರು. ಟ್ರಂಪ್ ಉದ್ಯಮ ಆರಂಭಿಸುವಾಗ ಬಂಡವಾಳವಾಗಿ 14 ದಶಲಕ್ಷ ಡಾಲರ್ ಇತ್ತು. ಹಾಗಾಗಿ ಶ್ರೀಮಂತರಿಗೆ ಅನುಕೂಲವಾಗುವಂತಹ ಯೋಜನೆ ರೂಪಿಸಿದರೆ ಎಲ್ಲವೂ ಸರಿಹೋಗುತ್ತದೆ, ಎಲ್ಲರಿಗೂ ಅನುಕೂಲವಾಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ನನಗೆ ಬಡವರ, ಮಧ್ಯಮ ವರ್ಗದವರ ಬವಣೆಗಳ ಅರಿವಿದೆ. ಬಡ ವರ್ಗವನ್ನು ಮೇಲೆತ್ತಬೇಕಾದರೆ ಮುಖ್ಯವಾಗಿ ಅವರು ವಿದ್ಯಾವಂತರಾಗಲು ಯೋಜನೆ ರೂಪಿಸಬೇಕು. ಕೌಶಲ ಹೆಚ್ಚಿಸಲು ತರಬೇತಿ ನೀಡಬೇಕು. ಆ ಮೂಲಕವಷ್ಟೇ ಅವರು ತಮ್ಮ ಕಾಲಿನ ಮೇಲೆ ನಿಂತುಕೊಳ್ಳಬಹುದು ಎಂಬ ವಾದವನ್ನು ಹಿಲರಿ ಮಂಡಿಸಿದರು. ಮಹಿಳೆಯರಿಗೆ ಸಮಾನ ವೇತನ ದೊರೆಯುವಂತಾಗಬೇಕು. ಉದ್ಯೋಗ ಸೃಷ್ಟಿಗೆ, ಸಣ್ಣ ಉದ್ಯಮಗಳನ್ನು ಪ್ರೋತ್ಸಾಹ ನೀಡಿ ಬೆಳೆಸಬೇಕು. ಸಂಸ್ಥೆಗಳು ತನ್ನ ನೌಕರರೊಂದಿಗೆ ಲಾಭ ಹಂಚಿಕೆ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂಬುದನ್ನು ಮಾತಿನಲ್ಲಿ ತಂದರು. ಮಹಿಳೆಯರ ಬಗ್ಗೆ ಟ್ರಂಪ್ ಅವರು ಹಿಂದೆ ನೀಡಿದ್ದ ಹಗುರ ಹೇಳಿಕೆಗಳನ್ನು ಪ್ರಸ್ತಾಪಿಸಿ, ಟ್ರಂಪ್ ಅವರನ್ನು ಜನರ ಕಣ್ಣಲ್ಲಿ ಇನ್ನಷ್ಟು ಕುಗ್ಗಿಸುವ ಪ್ರಯತ್ನ ಮಾಡಿದರು.

ಟ್ರಂಪ್, ಒಬಾಮ ಅವಧಿಯ ಲೋಪಗಳು, ಹಿಲರಿ ಅವರಿಗಿರುವ ಇಚ್ಛಾಶಕ್ತಿಯ ಕೊರತೆ, ತೆಗೆದುಕೊಂಡ ತಪ್ಪು ನಿರ್ಧಾರಗಳ ಬಗ್ಗೆ ಹಿಲರಿ ಅವರನ್ನು ಪ್ರಶ್ನಿಸಿ ಪೇಚಿಗೆ ಸಿಲುಕಿಸಿದರು. ‘1975ರಲ್ಲಿ ನನ್ನ ತಂದೆ ಒಂದು ಸಣ್ಣ ಮೊತ್ತವನ್ನು ನನಗೆ ಸಾಲದ ರೂಪದಲ್ಲಿ ನೀಡಿದ್ದರು. ಇಷ್ಟು ವರ್ಷದಲ್ಲಿ ಅದನ್ನು ಹಲವು ಪಟ್ಟು ಬೆಳೆಸಿದ್ದೇನೆ. ವಿವಿಧ ದೇಶಗಳಲ್ಲಿ ನನ್ನ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ದೇಶ ಈಗ ಸಂಕಷ್ಟದಲ್ಲಿದೆ. ಚೀನಾವನ್ನು ಹೇಗೆ ಎದುರಿಸಬೇಕು ಎನ್ನುವ ಬಗ್ಗೆ ನಮ್ಮನ್ನು ಆಳುವವರು ಚಿಂತಿಸಿಲ್ಲ. ಮುಖ್ಯವಾಗಿ ಅಮೆರಿಕದ ವಾಣಿಜ್ಯಿಕ ಒಪ್ಪಂದಗಳನ್ನು ಪುನರ್ ಪರಿಶೀಲಿಸಬೇಕಿದೆ’ ಎಂದು ಟ್ರಂಪ್ ವಾದಿಸಿದರು. ನಿರುದ್ಯೋಗದ ಪ್ರಮಾಣ ಕುಗ್ಗಿದ್ದರೂ, ತಲಾವಾರು ಆದಾಯದಲ್ಲಿ ಹೆಚ್ಚಿಗೆ ಆಗಿದ್ದರೂ, ಇಂದಿಗೂ ಶೇಕಡ 50ರಷ್ಟು ಅಮೆರಿಕನ್ನರು, ತಿಂಗಳ ಸಂಬಳವನ್ನು ಎದುರು ನೋಡುತ್ತಾ ಬದುಕುವ ಸ್ಥಿತಿ ಇದೆ. ಅಮೆರಿಕದ ಉದ್ಯೋಗಗಳು ಇತರ ದೇಶಗಳ ಪಾಲಾಗುತ್ತಿವೆ. ಉದ್ಯಮಿಗಳು ಮೆಕ್ಸಿಕೋದತ್ತ ನೋಡುತ್ತಿದ್ದಾರೆ. ಚೀನಾ ಉತ್ಪನ್ನಗಳು ಅಮೆರಿಕದ ಮಾರುಕಟ್ಟೆಯಲ್ಲಿ ತುಂಬಿಕೊಂಡಿವೆ. ಇಲ್ಲಿಂದ ಹಣವನ್ನು ದೋಚಿ, ಚೀನಾ ತನ್ನ ದೇಶ ಅಭಿವೃದ್ಧಿಪಡಿಸಿಕೊಳ್ಳುತ್ತಿದೆ. ಹಲವು ಉದ್ಯಮಗಳು ಅಮೆರಿಕ ತೊರೆಯುತ್ತಿವೆ. ಮಿಶಿಗನ್ ಮತ್ತು ಓಹಿಯೋದಲ್ಲಿದ್ದ ಸಣ್ಣಪುಟ್ಟ ಉದ್ದಿಮೆಗಳು ಬಾಗಿಲು ಮುಚ್ಚಿವೆ. ಹಾಗಾಗಿ ನಮ್ಮ ನೌಕರಿಯನ್ನು ನಾವು ನಮ್ಮಲ್ಲೇ ಉಳಿಸಿಕೊಳ್ಳಬೇಕು. ಉದ್ಯಮಗಳು ದೇಶ ತೊರೆಯದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನಾನು ತೆರಿಗೆಯನ್ನು ಶೇಕಡ 35 ರಿಂದ 15 ಕ್ಕೆ ಇಳಿಸುವ ಯೋಜನೆ ಹೊಂದಿದ್ದೇನೆ ಎಂದು ಟ್ರಂಪ್ ಪ್ರಸ್ತಾಪಿಸಿದರು.

ಒಬಾಮ ಎಂಟು ವರ್ಷಗಳ ಹಿಂದೆ ಅಧ್ಯಕ್ಷೀಯ ಚುನಾವಣಾ ಕಣದಲ್ಲಿದ್ದಾಗ ಅವರ ಹುಟ್ಟಿದ ಸ್ಥಳದ ಬಗ್ಗೆ ಪ್ರಶ್ನೆ ಎದ್ದಿತ್ತು. ಅವರು ಅಮೆರಿಕದ ನಾಗರಿಕರೆ ಅಥವಾ ವಲಸಿಗರೆ ಎಂಬ ಪ್ರಶ್ನೆ ಮೂಡಿತ್ತು. ರಿಪಬ್ಲಿಕನ್ನರ ಜೊತೆ ಟ್ರಂಪ್, ಆ ವರ್ಷ ಒಬಾಮ ಅವರನ್ನು ಇದೇ ಪ್ರಶ್ನೆಯ ಮೂಲಕ ಕೆಣಕಿದ್ದರು. ಚುನಾವಣೆಯುದ್ದಕ್ಕೂ ಒಬಾಮ ತಾನು ಅಮೆರಿಕನ್ ಎನ್ನುವುದನ್ನು ಹಲವು ಬಾರಿ ಹೇಳಬೇಕಾಗಿ ಬಂದಿತ್ತು. ಕೊನೆಗೆ ತಮ್ಮ ಮಾತು ಸಮರ್ಥಿಸಿಕೊಳ್ಳಲು ಜನ್ಮ ಪ್ರಮಾಣಪತ್ರವನ್ನು ಬಿಡುಗಡೆಗೊಳಿಸಿದ್ದರು. ಈ ವರ್ಷ ಟ್ರಂಪ್ ಅದೇ ಪ್ರಶ್ನೆಯನ್ನು ಪುನಃ ಎತ್ತಿದ್ದರು. ಒಂದು ಹಂತದಲ್ಲಿ ಒಬಾಮ ಅಮೆರಿಕದ ನಾಗರಿಕ ಎಂದು ಒಪ್ಪಿಕೊಂಡರೂ, ‘ನನ್ನಿಂದಾಗಿಯೇ ಒಬಾಮ ಜನ್ಮ ಪ್ರಮಾಣಪತ್ರ ಬಿಡುಗಡೆ ಮಾಡುವಂತಾಗಿದ್ದು. ಅದು ನನಗೆ ಸಿಕ್ಕ ಜಯ’ ಎಂಬಂತೆ ಬಿಂಬಿಸಿಕೊಂಡರು. ಹಿಲರಿ ಅದೇ ಮಾತನ್ನು ಬಳಸಿ ಟ್ರಂಪ್ ಜನಾಂಗೀಯ ದ್ವೇಷಿ ಎಂದು ಸಾಧಿಸಿದರು. ‘ಟ್ರಂಪ್ ವಿಚಿತ್ರ ಸ್ವಭಾವದ ವ್ಯಕ್ತಿ ಎಂಬುದು ಚುನಾವಣಾ ಪ್ರಚಾರದ ವೇಳೆ ಎಲ್ಲರ ಅರಿವಿಗೂ ಬಂದಿದೆ’ ಎಂದು ಹಿಲರಿ ಕೆಣಕಿದರೆ, ‘ನನ್ನ ಬಹುದೊಡ್ಡ ಆಸ್ತಿ ಎಂದರೆ ಅದು ನನ್ನ ಸ್ವಭಾವ, ಒಳಗೊಂದು ಹೊರಗೊಂದು, ಆಡುವುದೊಂದು, ಮಾಡುವುದೊಂದು ನನ್ನ ವ್ಯಕ್ತಿತ್ವದಲ್ಲಿಲ್ಲ’ ಎಂದು ಟ್ರಂಪ್ ಮಾರುತ್ತರ ಕೊಟ್ಟರು. ಆದರೆ ಹಿಲರಿ ಮುಂದೆ ಟ್ರಂಪ್ ಹೆಚ್ಚು ಅಂಕ ಗಳಿಸಲಿಲ್ಲ.

ಮಧ್ಯೆ ಮಧ್ಯೆ ಮಾತಿಗೆ ಅಡ್ಡಿಪಡಿಸುತ್ತಾ, ಉದ್ವೇಗ ತೋರ್ಪಡಿಸಿದ್ದು ಟ್ರಂಪ್ ಅವರಿಗೆ ಮುಳುವಾಯಿತು. ಪದೇ ಪದೇ ನೀರು ಕುಡಿಯುತ್ತಿದ್ದ ಟ್ರಂಪ್, ಬಳಲಿದಂತೆ ಕಂಡರು. ಕೇವಲ ಹಿಲರಿ ಅವರ ಇ-ಮೇಲ್ ಪ್ರಕರಣವಷ್ಟೇ ಟ್ರಂಪ್ ಅವರಿಗೆ ಕೊಂಚ ಮುನ್ನಡೆ ನೀಡಿತು. ಹಿಂದೆ ಈ ತೆರೆನಾದ ಡಿಬೇಟ್‌ಗಳಲ್ಲಿ ಭಾಗವಹಿಸಿ ಅನುಭವ ಹೊಂದಿದ್ದ ಹಿಲರಿ, ಚರ್ಚೆಯ ವೇದಿಕೆಯನ್ನು ಚೆನ್ನಾಗಿ ಬಳಸಿಕೊಂಡರು.

ಎರಡನೆಯ ಟೌನ್ ಹಾಲ್ ಮಾದರಿಯ ಚರ್ಚೆಯಲ್ಲಿ ಟ್ರಂಪ್ ಹೆಚ್ಚು ಆತ್ಮವಿಶ್ವಾಸ ತುಂಬಿಕೊಂಡೇ ವೇದಿಕೆಗೆ ಬಂದಿದ್ದರು. ಎರಡು ದಿನಗಳ ಹಿಂದಷ್ಟೇ ಟ್ರಂಪ್, 12 ವರ್ಷಗಳ ಹಿಂದೆ ಅಸಭ್ಯವಾಗಿ ಮಾತನಾಡಿದ್ದ ವಿಡಿಯೋ ಬಿಡುಗಡೆಗೊಂಡು ಚರ್ಚೆಗೊಳಗಾಗಿದ್ದರಿಂದ ಟ್ರಂಪ್ ಪ್ರತಿಕ್ರಿಯೆ ಕುತೂಹಲ ಮೂಡಿಸಿತ್ತು. ಆದರೆ ಟ್ರಂಪ್ ಅಳುಕನ್ನು ತೋರಿಸಿಕೊಳ್ಳಲಿಲ್ಲ, ಪ್ರಕರಣದ ಬಗ್ಗೆ ಕ್ಷಮೆ ಕೇಳಿ, ದೇಶದ ಮುಂದಿರುವ ದೊಡ್ಡ ಗಂಡಾಂತರ ಐಎಸ್ ಸಂಘಟನೆ ಎಂದು ವಿಷಯವನ್ನು ಬೇರೆಡೆ ತಿರುಗಿಸಿದರು. ಹಿಲರಿ ಚರ್ಚೆಯುದ್ದಕ್ಕೂ ಹೆಚ್ಚು ವಿನಯ ಪ್ರದರ್ಶಿಸಲು ನೋಡಿದರು. ಪ್ರಶ್ನಿಸಿದವರನ್ನು ಒಪ್ಪಿಸುವ ದಾಟಿಯಲ್ಲಿ ತಮ್ಮ ಉತ್ತರ ನೀಡಿದರು. ಟ್ರಂಪ್ ಇದಮಿತ್ಥಂ ಎಂಬಂತೆ ಉತ್ತರಿಸುವ ತಂತ್ರ ಉಪಯೋಗಿಸಿದರು. ಇ-ಮೇಲ್ ಹಗರಣವನ್ನು ಪ್ರಸ್ತಾಪಿಸಿ, ಹಿಲರಿ ಮಂಕಾಗುವಂತೆ ಮಾಡಿದರು.

ಇಂತಹ ಸಂವಾದಗಳಲ್ಲಿ ಕೇವಲ ಮಾತಷ್ಟೇ ಮುಖ್ಯವಾಗುವುದಿಲ್ಲ ಎಂಬುದನ್ನು ಹಿಂದೆ ಉಲ್ಲೇಖಿಸಿದ್ದೆ. ಈ ಚರ್ಚೆಯಲ್ಲೂ ಅದೇ ಆಯಿತು. ಹಿಲರಿ ಮಾತನಾಡುವ ವೇಳೆಯಲ್ಲಿ ಟ್ರಂಪ್ ಒಂದೆಡೆ ನಿಲ್ಲದೇ, ಆಚೀಚೆ ಹೆಜ್ಜೆ ಹಾಕುತ್ತಿದ್ದರು. ‘ಹಿಲರಿ ಮಾತನಾಡುವಾಗ ವೀಕ್ಷಕರ ಗಮನವನ್ನು ತನ್ನತ್ತ ಸೆಳೆದುಕೊಳ್ಳಲು ಟ್ರಂಪ್ ಹೀಗೆ ಮಾಡಿದರು’ ಎಂದು ತಜ್ಞರು ವ್ಯಾಖ್ಯಾನಿಸಿದರು. ವೇದಿಕೆಯ ಮೇಲೆ ಮಾತನಾಡುತ್ತಾ ಟ್ರಂಪ್ ಒಂದು ಸುತ್ತು ಬಂದದ್ದನ್ನು ‘ಸಿಂಹದ ಚಲನೆ’ ಎಂದು ಕರೆದರು!

ಟ್ರಂಪ್, ಎರಡನೇ ಚರ್ಚೆಯಲ್ಲಿ ಹಿಲರಿ ಅವರನ್ನು ಹಿಂದಿಕ್ಕಿದರು. ಒಟ್ಟಿನಲ್ಲಿ, ಚಾಣಾಕ್ಷ ಉದ್ಯಮಿ ಎಂಬುದು ಮರೆಯಾಗಿ ಜಗಳಗಂಟ ಟ್ರಂಪ್, ಮತದಾರರ ಮನದಲ್ಲಿ ಉಳಿಯಬೇಕು ಎಂಬುದು ಹಿಲರಿ ತಂಡದ ಗುರಿಯಾಗಿತ್ತು. ಅನುಭವವಿದ್ದರೂ ಅಧಿಕಾರವಿದ್ದಷ್ಟು ದಿನ ಏನನ್ನೂ ಮಾಡಲಿಲ್ಲ ಎನ್ನುವುದನ್ನು ಸಾಧಿಸಬೇಕು ಎಂಬುದು ಟ್ರಂಪ್ ತಂಡದ ತಂತ್ರವಾಗಿತ್ತು. ಇಬ್ಬರೂ ಅದನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ಯಶಸ್ವಿಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT