ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆಗೆ ‘ಅರಿಹಂತ್‌’ ಸೇರ್ಪಡೆ

Last Updated 18 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯವಾಗಿ ನಿರ್ಮಿಸಲಾದ  ಮೊದಲ ಅಣ್ವಸ್ತ್ರ ಜಲಾಂತರ್ಗಾಮಿ ‘ಐಎನ್‌ಎಸ್‌ ಅರಿಹಂತ್‌’ ರಹಸ್ಯವಾಗಿ ತನ್ನ ಕಾರ್ಯಾಚರಣೆ ಆರಂಭಿಸಿದೆ.

ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿರುವ ಈ ಜಲಾಂತರ್ಗಾಮಿ ಅಣ್ವಸ್ತ್ರಗಳನ್ನು ಸಿಡಿಸುವ ಸಾಮರ್ಥ್ಯ ಹೊಂದಿದೆ. ಆಗಸ್ಟ್‌ 25ರಂದು ವಿಶಾಖಪಟ್ಟಣದಲ್ಲಿ ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ, ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಿರುವ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ರಕ್ಷಣಾ ಸಚಿವಾಲಯ ಮತ್ತು ನೌಕಾಪಡೆ ಈ ಕುರಿತ ವರದಿಗಳನ್ನು ದೃಢಪಡಿಸಿಲ್ಲ ಅಥವಾ ತಳ್ಳಿ ಹಾಕಿಲ್ಲ.

‘ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ವೈಸ್‌ ಆಡ್ಮಿರಲ್‌ ಜಿ.ಎಸ್‌. ಪಬ್ಬಿ ತಿಳಿಸಿದ್ದಾರೆ. ‘ಐಎನ್‌ಎಸ್‌ ಅರಿಹಂತ್‌’ ಸೇರ್ಪಡೆಯಿಂದ  ಭೂಮಿ, ಆಕಾಶ ಮತ್ತು ಸಮುದ್ರದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವನ್ನು ಭಾರತ ಹೊಂದಿದಂತಾಗಿದೆ.

ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್‌ ಕಲಾಂ ಅವರ ಹೆಸರು ಇರಿಸಲಾಗಿರುವ ‘ಕೆ’ ಸರಣಿಯ ಕ್ಷಿಪಣಿಗಳನ್ನು ಈ ಜಲಾಂತರ್ಗಾಮಿ ಹೊಂದಿದೆ.

‘ಕೆ–15’ ಕ್ಷಿಪಣಿಗಳು 750 ಕಿಲೋ ಮೀಟರ್‌  ಮತ್ತು ‘ಕೆ–4’ ಕ್ಷಿಪಣಿಗಳು 3,500 ಕಿಲೋ ಮೀಟರ್‌ ದೂರವರೆಗೆ ಸಾಗಬಲ್ಲವು. ‘ಕೆ–5’ ಕ್ಷಿಪಣಿಗಳು ಇನ್ನೂ ಹೆಚ್ಚಿನ ಸಾಮರ್ಥ್ಯ ಹೊಂದಿವೆ. ಆದರೆ, ಈ ವಿವಿಧ ಮಾದರಿಯ ಕ್ಷಿಪಣಿಗಳನ್ನು ಅಳವಡಿಸಿರುವುದನ್ನು ನೌಕಾಪಡೆ ದೃಢಪಡಿಸಿಲ್ಲ.

2013ರ ಜನವರಿಯಲ್ಲಿ  ಈ ಕ್ಷಿಪಣಿಗಳ ಸಾಮರ್ಥ್ಯದ ಬಗ್ಗೆ ನೀರಿನ ಒಳಗೆ  ಪರೀಕ್ಷೆ ಕೈಗೊಳ್ಳಲಾಗಿತ್ತು. ಜಲಾಂತರ್ಗಾಮಿಯಿಂದ ಕನಿಷ್ಠ ಮೂರು  ಬಾರಿ ಕ್ಷಿಪಣಿಗಳನ್ನು ಸಿಡಿಸುವ ಪರೀಕ್ಷೆ ಕೈಗೊಳ್ಳುವುದು ಕಡ್ಡಾಯವಾಗಿದೆ. ಕಳೆದ ವರ್ಷ ಪರಿಸರ ಖಾತೆ ಹೊಂದಿದ್ದ ಪ್ರಕಾಶ್‌ ಜಾವಡೇಕರ್‌ ಅವರು ನಿಕೋಬಾರ್‌ನ ತಿಲಾಂಚಂಗ್‌ ದ್ವೀಪದಲ್ಲಿ ನೀರಿನ ಒಳಗೆ ಕ್ಷಿಪಣಿಗಳನ್ನು ಸಿಡಿಸುವ ಪರೀಕ್ಷೆಗೆ ನೌಕಾಪಡೆಗೆ ಅನುಮತಿ ನೀಡಿದ್ದರು. ಈ  ಪರೀಕ್ಷೆ ಬಳಿಕ ಸರ್ಕಾರ ಮೌನವಹಿಸಿತ್ತು.

ಆದರೆ, ಜಲಾಂತರ್ಗಾಮಿಯ ಖಂಡಾಂತರ ಕ್ಷಿಪಣಿಗಳ ಕಡ್ಡಾಯ ಪ್ರಯೋಗ ಇನ್ನೂ ಪೂರ್ಣಗೊಳ್ಳದ ಕಾರಣ  ‘ಅರಿಹಂತ್‌’ ಇನ್ನೂ ಕಾರ್ಯಾಚರಣೆಗೆ ನಿಯೋಜಿಸಲು ಸಿದ್ಧವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಅಣು ಸಾಮರ್ಥ್ಯದ ಎರಡನೇ ಜಲಾಂತರ್ಗಾಮಿ ‘ಐಎನ್‌ಎಸ್‌ ಅರಿಧಾನ್‌’ ಇನ್ನೂ ನಿರ್ಮಾಣ ಹಂತದಲ್ಲಿದೆ. ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌ ಮತ್ತು ಚೀನಾ ಮಾತ್ರ ಅಣು ಸಾಮರ್ಥ್ಯದ ಜಲಾಂತರ್ಗಾಮಿಗಳನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT