ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಃಖ ಸಾಗರದಲ್ಲಿ ನೌಕೆ

ಬೆಳದಿಂಗಳು
Last Updated 19 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಒಂದು ಹಳೆಯ ಸೂಫಿ ಸಾಮಿತಿಯಿದೆ. ಇದು ನೀರು ಮತ್ತು ದೋಣಿಯನ್ನು ಸಂಕೇತವಾಗಿಟ್ಟುಕೊಂಡ ದೃಷ್ಟಾಂತ. ದೋಣಿ ತೇಲುವುದಕ್ಕೆ ನೀರು ಹೆಚ್ಚಿದ್ದಷ್ಟೂ ಒಳ್ಳೆಯದೇ.ಆದರೆ ಅದೇ ನೀರು ದೋಣಿಯೊಳಕ್ಕೆ ನುಗ್ಗಲಾರಂಭಿಸಿದರೆ ಅದರಂಥ ಅಪಾಯ ಮತ್ತೊಂದಿಲ್ಲ. ಮನುಷ್ಯನ ಹೃದಯವೂ ಹೀಗೆಯೇ. ಅದು ನೋವು, ಕಷ್ಟಗಳ ಮೇಲೆ ತೇಲುತ್ತಾ ಇರುತ್ತದೆ. ಒಂದೊಮ್ಮೆ ಅವೆಲ್ಲವೂ ದೋಣಿಯೊಳಕ್ಕೆ ನುಗ್ಗಿದರೆ ಬದುಕಿನಲ್ಲಿ ವ್ಯಾಕುಲತೆ ತುಂಬಿಕೊಳ್ಳುತ್ತದೆ.

ನೋವು ಮತ್ತು ಕಷ್ಟ ಕಾರ್ಪಣ್ಯಗಳ ಸಾಗರದಲ್ಲಿ ಸದಾ ತೇಲುತ್ತಿರುವುದು ಹೇಗೆ? ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ಬಗೆಯ ಉತ್ತರಗಳನ್ನು ಕಂಡುಕೊಳ್ಳುತ್ತಾರೆ. ಹೊಟ್ಟೆ ಪಾಡಿಗಾಗಿ ನಿತ್ಯ ಮಾಡುವ ಕೆಲಸದಲ್ಲೇ ಕೆಲವರಿಗೆ ಈ ಸಮಾಧಾನ ಸಿಗಬಹುದು. ದುಡಿಮೆಯ ತೃಪ್ತಿ ಎನ್ನುವ ಅಂಶ ನಮ್ಮೆಲ್ಲರ ಮೇಲೂ ಪರಿಣಾಮ ಬೀರಿರುತ್ತದೆ.

ಅಂದರೆ ನಾವು ಮಾಡುವ ದುಡಿಮೆಯನ್ನು ಪ್ರೀತಿ ಮತ್ತು ಶ್ರದ್ಧೆಯಿಂದ ಮಾಡಿದಾಗ ಅದೊಂದು ಬಗೆಯ ತೃಪ್ತಿಯನ್ನು ನೀಡುತ್ತದೆ. ಅಂಗಡಿಯಲ್ಲಿರುವ ಮಾರಾಟಗಾರ ತನ್ನ ಗಿರಾಕಿಯನ್ನು ಮೆಚ್ಚಿಸಿದಾಗ ದೊರೆಯುವ ಸಂತೋಷವಿದು.

ಉಪಾಹಾರಗೃಹದ ಸರ್ವರ್ ತನ್ನ ಅತಿಥಿಗೆ ನೀಡುವ ಸೇವೆಯಲ್ಲಿ ಕಾಣುವ ತೃಪ್ತಿ ಇದು. ಇದನ್ನು ಯಾವ ಕೆಲಸಕ್ಕೆ ಬೇಕಾದರೂ ಅನ್ವಯಿಸಿ ನೋಡಬಹುದು. ಸರ್ಕಾರಿ ಅಧಿಕಾರಿಯೊಬ್ಬ ಜನಸಾಮಾನ್ಯನಿಗೆ ನೀಡುವ ತನ್ನ ಸೇವೆಯಲ್ಲಿ ಈ ತೃಪ್ತಿಯನ್ನು ಕಾಣಬಹುದು. ಶಿಕ್ಷಕ ಬೋಧನೆಯಲ್ಲಿ, ಬರಹಗಾರ ಬರವಣಿಗೆಯಲ್ಲಿ ಇದೇ ತೃಪ್ತಿಯನ್ನು ಕಾಣುತ್ತಾನೆ.

ಈ ತೃಪ್ತಿಯನ್ನು ಕಂಡುಕೊಳ್ಳುವುದಕ್ಕೆ ಬಹಳ ಮುಖ್ಯವಾದ ಒಂದು ಅಂಶ ನಮ್ಮಲ್ಲಿರಬೇಕಾಗುತ್ತದೆ. ನಾವು ಮಾಡುವ ಕೆಲಸವನ್ನು ಪ್ರೀತಿಸುವುದು. ಅರ್ಥಾತ್ ಕೆಲಸವನ್ನು ಪ್ರೀತಿಯಿಂದ ಮಾಡುವುದು. ಹಾಗಾದಾಗ ಶ್ರದ್ಧೆ ಅದರ ಅವಿಭಾಜ್ಯ ಅಂಗವಾಗುತ್ತದೆ.

ಕೊಲಂಬಿಯಾದ ಮಹಾ ಕಥೆಗಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸ್ ಪುಟ್ಟ ಮಕ್ಕಳ ಕವಿತೆಯ ಬಗ್ಗೆ ಹೇಳುತ್ತಾ ಉಲ್ಲೇಖಿಸಿದ ಪುಟಾಣಿ ಕವಯಿತ್ರಿಯೊಬ್ಬಳ ಸಾಲು ಹೀಗಿದೆ– ‘ನಾನು ದೊಡ್ಡವಳಾದಾಗ ನರ್ಸ್ ಆಗ ಬಯಸುವೆ. ನನ್ನ ರೋಗಿಗಳು ಸಾಯುವಾಗ ಅವರೊಂದಿಗೆ ನಾನೂ ಸಾಯುತ್ತೇನೆ’.

ಈ ಕವಿತೆಯ ಸಾಲುಗಳನ್ನು ಸರಳವಾಗಿ ಅರ್ಥ ಮಾಡಿಕೊಂಡರೆ ಅದರಲ್ಲಿ ಅಡಗಿರುವ ಹುರುಳೇನೆಂದು ತಿಳಿಯುತ್ತದೆ. ಅರ್ಪಣಾ ಮನೋಭಾವದಿಂದ ದುಡಿಯುವುದು ಎಂಬ ಮಾತನ್ನು ನಾವು ಬಹಳ ಆಲಂಕಾರಿಕವಾಗಿ ಅಥವಾ ಸುಮ್ಮನೆ ಹೇಳಿಕೆಯೆಂಬಂತೆ ಬಳಸುತ್ತಿರುತ್ತೇವೆ. ವಾಸ್ತವದಲ್ಲಿ ಅದು ಕರ್ಮಯೋಗದ ಮಾರ್ಗ ಎಂದು ನಮಗನ್ನಿಸುವುದೇ ಇಲ್ಲ. ಹೀಗೆ ಅನ್ನಿಸಿಬಿಡುವುದೂ ಒಂದು ರೀತಿ ಅಪಾಯವೇ. ಅರ್ಪಣಾ ಮನೋಭಾವವನ್ನೇ ಒಂದು ಮಾರುಕಟ್ಟೆಯ ಸಲಕರಣೆಯಾಗಿಸುವ ಸ್ವಾರ್ಥ ನಮ್ಮನ್ನು ಆವರಿಸಿಕೊಳ್ಳಬಹುದು.

ಶ್ರದ್ಧೆಯಿಂದ ಏನನ್ನಾದರೂ ಮಾಡಬಹುದು ಎಂಬುದಕ್ಕೆ ಮತ್ತೊಂದು ಉತ್ತಮ ಉದಾಹರಣೆಯೆಂದರೆ ಶಿವನಿಗೆ ತನ್ನ ಆಹಾರವನ್ನೇ ನೈವೇದ್ಯ ನೀಡುತ್ತಿದ್ದ ಕಣ್ಣಪ್ಪನ ಕಥನ.ಕಣ್ಣನ್ನು ಕಿತ್ತು ಇಡುವಾಗಲೂ ಅವನಲ್ಲಿ ಇದ್ದದ್ದು ಅದೇ ಶ್ರದ್ಧೆ.

ಶ್ರೀನಿವಾಸ ಪಗಡೆಯಾಡಲು ಬಂದು ಕುಳಿತ ಕಥನವೂ ಇಂಥದ್ದೇ ತಾನೇ. ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುವುದೂ ನಮ್ಮನ್ನು ನಾವು ಅರಿಯುವುದಕ್ಕೆ ಅಥವಾ ಸೂಫಿ ಸಾಮಿತಿ ಹೇಳಿದಂತೆ ದುಃಖ ಸಾಗರದಲ್ಲಿ ತೇಲುತ್ತಲೇ ದುಃಖವೆಂಬ ಜಲವು ನಮ್ಮ ದೋಣಿಯೊಳಕ್ಕೆ ಬಾರದಂತೆ ನೋಡಿಕೊಳ್ಳುವುದಕ್ಕೆ ನಮಗೆ ಶಕ್ತಿ ನೀಡುವ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT