ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚು ಮಾಡಲಾಗದ ಹಣದಿಂದ ಏನೆಲ್ಲ ಸಾಧ್ಯ?

‘ದ್ರವ್ಯಭೂಪರ’ ಕಸವೂ ಆಗದ ರಸವೂ ಆಗದ ಸಂಪತ್ತು ಹಾಗೆಯೇ ವ್ಯರ್ಥವಾಗಿ ಹೋಗುತ್ತದೆ
Last Updated 21 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ದುಂದು ವೆಚ್ಚ ಮಾಡದೆ, ಸ್ವಂತ ಮನೆಯಲ್ಲಿ, ಸರಳವಾಗಿ ಬದುಕುತ್ತಿರುವ ನಾಲ್ಕು ಮಂದಿಯ (ತಾಯಿತಂದೆ, ಮಕ್ಕಳು) ಒಂದು ಕುಟುಂಬದ ಒಂದು ತಿಂಗಳ ಬದುಕಿನ ವೆಚ್ಚ ಎಷ್ಟಾಗಬಹುದು ಎಂದು ಲೆಕ್ಕ ಹಾಕೋಣ. ಆಹಾರ, ಪಾನೀಯ, ನೀರು, ವಿದ್ಯುತ್‌, ಗ್ಯಾಸ್ ಸಿಲಿಂಡರ್, ಫೋನು ಈ ಎಲ್ಲಾ ವೆಚ್ಚಗಳು ಸೇರಿ ಹದಿನೈದು ಸಾವಿರ ರೂಪಾಯಿ ಎಂದಿಟ್ಟುಕೊಳ್ಳೋಣ.

ಮಕ್ಕಳು ಶಾಲೆ ಕಾಲೇಜಿಗೆ ಹೋಗುವವರಾದರೆ ಅವರ ಸಾರಿಗೆ ವೆಚ್ಚ ಅಥವಾ ಕಾರು ಇಟ್ಟುಕೊಂಡಿರುವ ಕುಟುಂಬವಾದರೆ ಪೆಟ್ರೋಲ್ ವೆಚ್ಚ ಒಟ್ಟು ಐದು ಸಾವಿರ ರೂಪಾಯಿ ಎಂದಿಟ್ಟುಕೊಳ್ಳೋಣ. ಬಾಡಿಗೆ ಮನೆಯಲ್ಲಿ ವಾಸಿಸುವುದಾದರೆ ತಿಂಗಳ ಬಾಡಿಗೆ ಎಂಟು ಸಾವಿರ ರೂಪಾಯಿ ಸೇರಿಸೋಣ. ಮಕ್ಕಳ ಸಮವಸ್ತ್ರ, ಮನೆ ಮಂದಿಯ ಉಡುಪುತೊಡುಪು ಎಲ್ಲಾ ಸೇರಿ ವರ್ಷಕ್ಕೆ ನಲುವತ್ತು ಸಾವಿರ ಎನ್ನೋಣ. ಪ್ರಜೆಗಳು ಎಪಿಎಲ್, ಬಿಪಿಎಲ್ ಇತ್ಯಾದಿ ಯಾವ ವರ್ಗದವರು ಎಂಬ ವಿಚಾರ ಇಲ್ಲಿ ಬೇಡ. ಇವರು ವಾಸವಾಗಿರುವುದು ಬಹುಮಹಡಿ ಕಟ್ಟಡದಲ್ಲಿಯಾಗಲಿ, ಒಂದು ಸಾಧಾರಣ ಮನೆಯಲ್ಲಿಯಾಗಲಿ, ನಾವು ಮಾಡಿರುವ  ಈ ಅಂದಾಜು ಜೀವನ ವೆಚ್ಚದಲ್ಲಿ ವ್ಯತ್ಯಾಸವಾಗುವುದಿಲ್ಲ. ಯಾರೇ ಆಗಲಿ, ತುಸು ಅಧಿಕ ಖರ್ಚು ಮಾಡುವವರಾದರೆ ತಿಂಗಳಿಗೆ ₹ 50 ಸಾವಿರದಿಂದ  60 ಸಾವಿರ ಬೇಕಾಗಬಹುದು.

ಇರಲಿ. ಈ ಕುಟುಂಬದ ತಿಂಗಳ ವರಮಾನ ಒಂದು ಲಕ್ಷ ರೂಪಾಯಿ ಎಂದಿಟ್ಟುಕೊಂಡರೆ, ಸುಮಾರು ಈ ಕುಟುಂಬ ₹ 20 ಸಾವಿರದಿಂದ 30  ಸಾವಿರವನ್ನು ಉಳಿತಾಯ ಮಾಡುತ್ತಿದೆ ಎಂದು ತಿಳಿಯೋಣ. ಇದರಲ್ಲಿ ಇನ್ಶೂರೆನ್ಸ್ ಪ್ರೀಮಿಯಮ್ ಕೂಡ ಸೇರುತ್ತದೆ. ಈ ಕುಟುಂಬದ ಒಟ್ಟು ಗಳಿಕೆ ತಿಂಗಳಿಗೆ ಎರಡು ಲಕ್ಷ ರೂಪಾಯಿ ದಾಟತೊಡಗಿತು ಎಂದುಕೊಂಡರೆ, ಅಷ್ಟರಲ್ಲಿ ಈ ಮನೆಗೆ ಈ ಕಾಲದ ಅಗತ್ಯ ಪರಿಕರಗಳಾದ ಫ್ರಿಜ್, ಟೀವಿ, ವಾಶಿಂಗ್ ಮೆಶೀನ್ ಮತ್ತಂಥದೇ ಇತರ ಪರಿಕರಗಳು ಬಂದಿರುತ್ತವೆ.

ಅಷ್ಟರಲ್ಲಿ ಬ್ಯಾಂಕ್ ಸಾಲದಲ್ಲಿ ಕಾರು ಕೂಡ ಬಂದಿರುತ್ತದೆ. ವರಮಾನದ ಮೊತ್ತ ಇನ್ನೂ ಏರತೊಡಗಿದಾಗ ಉಳಿತಾಯ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಒಂದಷ್ಟು ಬಗೆಬಗೆಯ ಉಡುಪುತೊಡುಪು, ಅದನ್ನಿರಿಸಲು ವಾರ್ಡ್‌ರೋಬ್, ಕಪಾಟು, ಡಿನ್ನರ್ ಸೆಟ್ ಇತ್ಯಾದಿಯಲ್ಲದೆ, ಆಕರ್ಷಕ ಮೇಜು, ಕುರ್ಚಿ, ಸೋಫಾ ಕಪಾಟು ಮತ್ತಿತರ ಸಾಧನಗಳು ಬಂದಿರುತ್ತವೆ ಎನ್ನಬಹುದು. ಕಾರಿನ ಲೋನು ಕೂಡ ತೀರಿರುವುದರಿಂದ ನಿಜವಾದ ಆಧುನಿಕ ಐಷಾರಾಮದ ಜೀವನ ಆರಂಭವಾಗಿರುತ್ತದೆ.

ಆನಂತರದ ಬದುಕು ಏನು ಮತ್ತು ಹೇಗೆ? ಉದಾಹರಣೆಗಾಗಿ, ಈ ಕುಟುಂಬ ನಿಯಮಿತ ವರಮಾನವಲ್ಲದೆ, ಇತರ ಸಹಜ ಅಥವಾ ಅಸಹಜ ವಿಧಾನಗಳಿಂದ ಹಣ ಸಂಪಾದಿಸುತ್ತಿರುವ ಸರ್ಕಾರಿ ಅಧಿಕಾರಿ, ಎಮ್ಮೆಲ್ಲೇ, ಎಂಪೀ, ಮಂತ್ರಿ, ದೊಡ್ಡ ಸಂಪಾದನೆಯ ವ್ಯಾಪಾರಿ, ಉದ್ಯಮಿ, ಕಂಟ್ರಾಕ್ಟರ್ ಇತ್ಯಾದಿಯಲ್ಲಿ ಯಾವುದಾದರೂ ಒಂದು ಆಗಿರಬಹುದು ಎಂದುಕೊಂಡರೆ, ನಿಯಮಿತವಾಗಿ ಮತ್ತು ಅನಿಯಮಿತವಾಗಿ ವರ್ಷಕ್ಕೆ ಒಂದು ಕೋಟಿ, ಎರಡು ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚು ಮತ್ತು ಇನ್ನೂ ಹೆಚ್ಚು ಸಂಪಾದನೆ ಮಾಡಿದರೆ, ಹಣದ ರಾಶಿ ಬೆಳೆಬೆಳೆದು ಹಣವನ್ನು ಖರ್ಚು ಮಾಡಲು ದಾರಿ ಕಾಣಿಸದಿರುವಂಥ ಪರಿಸ್ಥಿತಿಯಲ್ಲಿ ‘ಈ ದ್ರವ್ಯ ಸಂಪಾದಕರು’ ಏನು ಮಾಡುತ್ತಾರೆ? ಒಂದಷ್ಟು ನಿವೇಶನಗಳು ಕೆಲವು ಫ್ಲಾಟುಗಳು, ಸ್ವರ್ಣಾಭರಣಗಳು ಇತ್ಯಾದಿಗಳನ್ನು ಕೊಂಡುಕೊಳ್ಳುತ್ತಾರೆ. ವಾಸ್ತು ಸ್ಪೆಶಲಿಸ್ಟನ ಸಲಹೆಯಂತೆ, ಮನೆಯ ರೂಪಾಂತರ ಕೂಡ ನಡೆದು ಅದರ ವಿನ್ಯಾಸ, ಎತ್ತರ, ಮತ್ತು ವಿಸ್ತಾರ ಹೆಚ್ಚಾಗುವ ಸಂಭವ ಇರುತ್ತದೆ. ಈ ಎಲ್ಲ ಪ್ರಗತಿ ಅಥವಾ ವಿಗತಿಯ ಜೊತೆಗೆ ಗತಿಗೆಡುತ್ತಿರುವ ಆರೋಗ್ಯವನ್ನು ಉಳಿಸುವ ವೆಚ್ಚಗಳು ಕೂಡ ಇರುತ್ತವೆ.

‘ದ್ರವ್ಯ ಸಂಪಾದಕರ’ ಬಳಿಯಿರುವ ಹಣದ ಮೊತ್ತ ಹಿಗ್ಗುತ್ತಾ ಬಹಳ ದೊಡ್ಡದಾದಾಗ ಕೇಜಿಗಟ್ಟಳೆ ಹಳದಿ ಲೋಹ, ಇನ್ನೊಂದು ನಿವೇಶನ, ಮೂರ್ನಾಲ್ಕು ಅನಗತ್ಯ ಫ್ಲಾಟು, ಕೋಟಿ ಬೆಲೆಯ ಮೂರು– ನಾಲ್ಕು ಕಾರು ಇತ್ಯಾದಿ ಖರೀದಿಸಿದ ನಂತರವೂ ಖರ್ಚು ಮಾಡಲಾಗದ ಹಣ ಉಳಿದಿರುತ್ತದಲ್ಲ? ಆಗ ಕೆಲವರು ದೇವಾಲಯಗಳಿಗೆ ಹೋಗಿ ದೇವರು ಒಡ್ಡಿ ಕುಳಿತಿರುವ ಉಡಿಗೆ ಒಂದಷ್ಟು ಹಣ, ಬಂಗಾರದ ಏನೇನೋ ಸುರಿಯುತ್ತಾರೆ. ಅಜ್ಞಾನದ ಕತ್ತಲಲ್ಲಿ ದೇವರು  ಕಾಣದಿದ್ದರೂ ದೇವರ ತಲೆ ಮೇಲೆ ಚಿನ್ನದ ಕಿರೀಟ ಇರಿಸುತ್ತಾರೆ.

ಕೆಲವರು ಏನೂ ಕಾಣಲರಿಯದೆ, ಏನೇನೋ ಮಾಡಲು ಲೋಕ ಸಂಚಾರ ಮಾಡುತ್ತಾರೆ. ದೇವರಿಗೇಕಪ್ಪಾ ಬಂಗಾರ ಮತ್ತು ಹಣ ಎಂಬ ಪ್ರಶ್ನೆ ಯಾರ ಮನಸ್ಸಿನಲ್ಲಿಯೂ ಮೂಡುವುದಿಲ್ಲ ಯಾಕೆ? ದೇವರಿಗೆ ಒಳ್ಳೆಯದು ಮಾಡಬೇಕು ಎಂಬ ಮನಸ್ಸು ಇದ್ದರೆ, ಅದಕ್ಕೇಕೆ ದೇವರಿಗೆ ಬೇಕು ಮರ್ತ್ಯಲೋಕದ, ಅದರಲ್ಲೂ ಮುಖ್ಯವಾಗಿ ಬಡವರ ಮತ್ತು ವ್ಯಾಧಿಗ್ರಸ್ತರ ಹಣ? ಮರ್ತ್ಯರ ಹಣದಿಂದ ದೇವರನ್ನು ಸಾಕಲು ಸಾಧ್ಯವೆ? ಅಥವಾ ಜನ ಕೊಟ್ಟ ಹಣದಿಂದ ದೇವರಿಂದ ಜಗತ್ತನ್ನು ಉದ್ಧರಿಸುವುದಕ್ಕಾದೀತೆ? ಇವತ್ತು ದೇವರ ಬಳಿ ಜನರು ಸುರಿದು ರಾಶಿಯಾಗಿರುವ ಹಣ ಕೋಟ್ಯಂತರ ಇದೆ. ಈ ಹಣವನ್ನು ದೇವರು ತಿನ್ನಲಾರ; ಯಾವ ವಿಧದಲ್ಲಿಯೂ ಖರ್ಚು ಮಾಡಲಾರ. ಅಷ್ಟು ದೊಡ್ಡ ಮೊತ್ತದ ಹಣವನ್ನು ಸರ್ಪಗಾವಲಿಟ್ಟು ಕಾಪಿಟ್ಟುಕೊಳ್ಳುವ ಮಂದಿ ಕೂಡ ತಿನ್ನಲಾರರು. ಕದ್ದು ತಿನ್ನಲು ಅವಕಾಶ ಸಿಕ್ಕಿದರೆ ಸ್ವಲ್ಪ ಹಣವನ್ನು ತಿನ್ನಬಹುದು. ಆದರೆ ಅವರಿಂದ ಆ ದೊಡ್ಡ ಮೊತ್ತದ ಒಂದು ಸಣ್ಣ ಭಾಗವನ್ನಷ್ಟೇ ಪೋಲು ಮಾಡಲು ಸಾಧ್ಯ. 

ಆನಂತರ ಏನಾಗುತ್ತದೆ? ದೇವರಿಗೆ ಎಂದೂ ಮುಪ್ಪು ಬರುವುದಿಲ್ಲ. ದೇವರ ಬಳಿ ಗುಡ್ಡದಂತಿರುವ ಸಂಪತ್ತು, ಹಣ, ಸ್ವರ್ಣ, ಭೂಮಿ ಇತ್ಯಾದಿ ಯಾವ ರೂಪದಲ್ಲೇ ಇರಲಿ, ಅದು ಯಾವ ಬಳಕೆಗೂ ಬರದ ವ್ಯರ್ಥ ಸಂಪತ್ತಾಗಿರುತ್ತದೆ. ಇಂಥ ಸಂಪತ್ತು ನಮ್ಮ ದೇಶದಲ್ಲಿ ಕೋಟಿ ಕೋಟಿ ಇದೆ. ಇದು ಒಂದರ್ಥದಲ್ಲಿ ನಿರಂತರವಾಗಿ ಕೊಳೆಯುತ್ತಿರುತ್ತದೆ. ಅದರ ಜೊತೆಗೇ ಕೊಳ್ಳೆ ಕೂಡ ನಡೆಯುತ್ತಿರುತ್ತದೆ.

ನಗರದಲ್ಲಿ ರಾಶಿಬೀಳುವ ಕಸದ ರಾಶಿಯಂತೆ ಹಣ ಚಿನ್ನ ಕೊಳೆಯುವುದಿಲ್ಲ ಎಂದು ಆಸ್ತಿಕರು ಸಮಾಧಾನಪಟ್ಟುಕೊಳ್ಳಬಹುದು. ಆದರೆ ‘ದ್ರವ್ಯಭೂಪ’ರು ತಮ್ಮ ‘ಬಳಿ ಇರುವ’ ಮತ್ತು ‘ಬಳಿ ಇದ್ದರೂ ಅದೇ ಹೊತ್ತು ಎಲ್ಲೋ ಇರುವ’ ಈ ಹಣವನ್ನು ಭೂಲೋಕದ ಮೂಲೆ ಮುರುಕುಗಳಲ್ಲಿ ಸಂದಿಗೊಂದಿಗಳಲ್ಲಿ ಅಡಗಿಸಿಡುತ್ತಾರೆ. ಅದು ಕಸದಂತೆ ಅಲ್ಲಿಯೇ ಇರುತ್ತದೆ; ಇವರ ಉಸಿರು ಇಲ್ಲಿ ನಿಲ್ಲುತ್ತದೆ.

ದ್ರವ್ಯಭೂಪರೆಲ್ಲ ಒಟ್ಟಿಗೇ ಸಾಯುವುದಿಲ್ಲ. ಒಬ್ಬೊಬ್ಬರಾಗಿ ಸಾಯುತ್ತಾರೆ. ಕಸವೂ ಆಗದ ರಸವೂ ಆಗದ ಅವರ ಸಂಪತ್ತು ಅವರ ಸಾವಿನಲ್ಲಿ ಸಾಯುತ್ತದೆ. ಕೆಲವರು ತಮ್ಮಿಂದ ಬಳಸಲಾಗದ ಹಣವನ್ನು ನೆನೆದುಕೊಂಡು ವ್ಯಗ್ರರಾಗಿ ಸಾಯುತ್ತಾರೆ. ಅವರಿಂದ ಸಾವನ್ನು ಸ್ವಾಭಾವಿಕವಾಗಿ ಸ್ವೀಕರಿಸಲಾಗುವುದಿಲ್ಲ. ಇನ್ನು ಕೆಲವು ಮಂದಿ ಹಲವು ಕೋಟಿಗಳೊಡೆಯರು, ಅದನ್ನು ಸಂಪಾದಿಸಿದ ಕಾರಣಕ್ಕೇ ಜೈಲಿನಲ್ಲಿ ಕೊಳೆಯಬೇಕಾಗಿ ಬಂದರೂ, ತಮ್ಮ ಮಕ್ಕಳ ಮದುವೆಗೆ ಐದು ಕೋಟಿ ಹತ್ತು ಕೋಟಿ ಖರ್ಚು ಮಾಡುತ್ತಾರೆ. ಇಷ್ಟೇ ಅಲ್ಲ, ತಮ್ಮ ಜನ್ಮದಿನಕ್ಕೆ, ಮಕ್ಕಳ ಜನ್ಮದಿನಕ್ಕೆ, ವಿವಿಧ ಪೂಜೆ ಪುನಸ್ಕಾರ, ಹೋಮ ನೇಮಗಳಿಗೆ ಕೂಡ ಇದೇ ರೀತಿ ರಾಶಿ ರಾಶಿ ಹಣ ಸುರಿಯುತ್ತಾರೆ. ಇದೆಲ್ಲ ಬದುಕಿಗೆ ಅಗತ್ಯವಾದ ಸ್ವಾಭಾವಿಕವಾದ ಖರ್ಚು ಅಲ್ಲ. ಇದು ಹಣವನ್ನು ಕಸವಾಗಿಸಿ ತಿಪ್ಪೆಗೆಸೆಯುವುದು ಎಂದು ತಿಳಿಯಬಹುದು.

ಎಪ್ಪತ್ತು ವರ್ಷ ಪ್ರಾಯ  ತಲುಪಿದ ಬಳಿಕ, ಕೋಟ್ಯಂತರ ರೂಪಾಯಿ ಹಣ ಮತ್ತು ಸಂಪತ್ತು ಹೊಂದಿದ್ದು ಅದನ್ನು ಹೇಗೆ ವಿಲೇವಾರಿ ಮಾಡಬೇಕೆಂದು ತಿಳಿಯದ ಪ್ರಜೆಗಳು ತೊಂಬತ್ತು-ನೂರು ವರ್ಷಗಳವರೆಗೆ ಐಷಾರಾಮದಿಂದಲೂ ಆರೋಗ್ಯ ಮತ್ತು ತೃಪ್ತಿ ಸಂತೋಷ ಸಮಾಧಾನದಿಂದಲೂ ಒಳ್ಳೆಯ ಬದುಕು ನಡೆಸಲು ಎಷ್ಟು ಹಣ ಬೇಕೆಂದು ಲೆಕ್ಕ ಹಾಕಿ ಅದಕ್ಕಾಗಿ ಒಂದು ಅಥವಾ ಎರಡು ಕೋಟಿ (ಅಥವಾ ಅಗತ್ಯವಿರುವಷ್ಟು) ಹಣ ತಮ್ಮ ಬಳಿ ಇರಿಸಿಕೊಂಡು ಉಳಿದ ಹಣವನ್ನು ಸರ್ಕಾರಕ್ಕೆ ನೀಡಬಹುದು.

ನಮ್ಮ ದೇಶದಲ್ಲಿ, ಪ್ರಸ್ತುತ ‘ಇರುವ ಮತ್ತು ಅದೇ ಹೊತ್ತು ಇದ್ದೂ ಇಲ್ಲದಿರುವ’ ಆಡಳಿತದ ಮತ್ತು ಅಂಥ ಆಳ್ವಿಕೆಗೊಳಗಾಗಿರುವ ಜನರ ಸ್ಥಿತಿ ಗತಿ ಏನು ಹೇಗೆ ಎನ್ನುವುದು ಪರದೇಶಗಳಿಗೆ ನಿಖರವಾಗಿ ಗೊತ್ತಿಲ್ಲದಿರಬಹುದು. ಆದರೆ ಈ ದೇಶದೊಳಗೆ ಪ್ರಜೆಗಳಿಗೆಲ್ಲ ಗೊತ್ತಿದೆ.

‘ಚುನಾವಣೆ’ ಎಂಬ, ಪ್ರಜಾಪ್ರಭುತ್ವಕ್ಕೆ ಅನಿವಾರ್ಯವಾಗಿರುವ ಪ್ರಹಸನದಲ್ಲಿ ಈ ಕಡೆ ಒಂದು ಕೋಟಿ ಚೆಲ್ಲಿ ಆ ಕಡೆಯಿಂದ ಹತ್ತು ಕೋಟಿ ಕದಿಯುವ ವ್ಯವಹಾರದಲ್ಲಿ ನಡೆಯುವ ಕಾಂಚಾಣ ನರ್ತನದಲ್ಲಿ ಪೋಲಾಗುವ ಅಪಾರ ಮೊತ್ತದ ಹಣ, ಮದುವೆ ಮುಂಜಿಗಳಿಗೆ ರಾಜಕಾರಣಿಗಳು, ಉದ್ಯಮಿಗಳು ಮಾತ್ರವಲ್ಲ, ಹಣ ಇರುವ ಎಲ್ಲರೂ  ಮಾಡುವ ದುಂದು ವೆಚ್ಚ, ಭ್ರಷ್ಟರಾದ ಕಂಟ್ರಾಕ್ಟರುಗಳು, ಎಂಜಿನಿಯರುಗಳು ಮತ್ತು ಮಂತ್ರಿಗಳ ಕೂಟದಿಂದ ಮುರಿದು ಬೀಳುವ ಬಡವರ ಮನೆಗಳು ಮತ್ತು ಇತರ ಕಟ್ಟಡಗಳ (ಮುಖ್ಯವಾಗಿ ಸರ್ಕಾರದ ಶಾಲೆಗಳ ಕಟ್ಟಡಗಳ) ನಿರ್ಮಾಣದಲ್ಲಿ  ಪುಸ್ತಕ ವಿತರಣೆ, ಸಮವಸ್ತ್ರ ವಿತರಣೆ ಮುಂತಾದುದರೆಡೆಯಲ್ಲಿ ಇಕ್ಕುವವರೇ ಮುಕ್ಕುವ ಹಣ, ಕೆಟ್ಟ ರಸ್ತೆಗಳ ನಿರ್ಮಾಣದಲ್ಲಿ ಮಣ್ಣುಪಾಲಾಗುವ ಹಣ-ಒಟ್ಟಿನಲ್ಲಿ ಹಣ ತಿನ್ನುವ ಮಂದಿಗೆ ಕೈಯಿಟ್ಟಲ್ಲಿ ಹಣ; ಕಾಲಿಟ್ಟಲ್ಲಿ ಹಣ! ಆಹಾರದಲ್ಲಿ ಕಲಬೆರಕೆ, ಔಷಧಗಳಲ್ಲಿ ಕಲಬೆರಕೆ, ಬಡ ಮಕ್ಕಳಿಗೆ ಉಚಿತವಾಗಿ ನೀಡುವ ಎಲ್ಲದರಲ್ಲೂ ಜಿರಲೆಗಳಂತೆ ಒಳಗಿಂದಲೇ ಕೊರೆದು ನುಂಗುವ ಕರಾಮತ್ತು- ಒಟ್ಟಿನಲ್ಲಿ ಆಡಳಿತ ಎಂಬ ಭ್ರಷ್ಟಾಚಾರ, ಅದರಾಚೆಗೆ ರೈತರ ಆತ್ಮಹತ್ಯೆ, ಸಮಾಜಕ್ಕೆ, ದೇಶಕ್ಕೆ ಒಳ್ಳೆಯದು ಮಾಡಬೇಕೆಂಬ ಉದ್ದೇಶದಿಂದ ಸರ್ಕಾರಿ ಅಧಿಕಾರಿಗಳಾದವರಿಗೆ ನಾನಾ ಬಗೆ ಪೀಡೆ, ಜನರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣವನ್ನು ನೀಡದಿರುವುದು, ದುಷ್ಟ ಪೊಲೀಸರಿಗೆ ಸನ್ಮಾನ, ಒಳ್ಳೆಯ ಪೊಲೀಸರಿಗೆ ಅವಮಾನ. ದೇಶವನ್ನು ಕಾಯುವ ಯೋಧರ ಕಡೆಗೂ ಉಪೇಕ್ಷೆ-ಅನ್ಯಾಯಗಳ ಪಟ್ಟಿ ಕೊನೆಯಾಗುವಂಥದಲ್ಲ!

ಬ್ರಿಟಿಷರ ಆಡಳಿತ ಜನರನ್ನು ಕೇವಲ ಕುರಿಗಳು ಎಂಬಂತೆ ನೋಡುತ್ತಿತ್ತು. ನಮ್ಮ ಪ್ರಜಾಪ್ರಭುತ್ವ ಕೂಡ ಜನರನ್ನು ವೋಟು ಹಾಕುವ ಕುರಿಗಳೆಂದೇ ಪರಿಗಣಿಸುತ್ತದೆ. ಪೊಲೀಸರನ್ನು ಬ್ರಿಟಿಷ್ ಅಧಿಕಾರಿಗಳು ತಮ್ಮ ಆಡಳಿತದ ‘ರಕ್ಷಕರು’ ಎಂಬ ರೂಪದಲ್ಲಿ ನೋಡುತ್ತಿದ್ದರು. ಇವತ್ತು ಈಗಲೂ ನಮ್ಮ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳು, ಮಂತ್ರಿಗಳು ಮತ್ತು ಪ್ರಜಾಪ್ರತಿನಿಧಿಗಳು ಪೊಲೀಸರನ್ನು ತಮ್ಮ ಗುಲಾಮರು ಎಂದೇ ತಿಳಿಯುತ್ತಾರೆ.

ಮಹಾ ಸಿರಿವಂತರು ಸ್ವದೇಶದಲ್ಲಿ ಹುಚ್ಚಾಪಟ್ಟೆ ಖರ್ಚು ಮಾಡುವ ಹಣವನ್ನು ಮತ್ತು ಯಾರಿಗೂ ತಿಳಿಯದ ಜಗತ್ತಿನ ಮೂಲೆ ಮೂಲೆಗಳಲ್ಲಿ ಬಚ್ಚಿಟ್ಟ ಹಣವನ್ನು ತಾವಾಗಿ ಸರ್ಕಾರಕ್ಕೆ ನೀಡಿದರೆ, ಪೊಲೀಸರನ್ನು ನಮ್ಮ ನಿಜವಾದ ರಕ್ಷಕರಾಗಿಸಬಹುದು. ಯಾವ ಆಘಾತಕ್ಕೂ ಜಗ್ಗದ ನಲುಗದ ಶಾಲೆ, ಆಸ್ಪತ್ರೆ, ಸೇತುವೆ, ರಸ್ತೆ, ವಿದ್ಯುತ್, ಟೆಲಿಫೋನು ತಂತಿಗಳನ್ನು ನಿರ್ಮಿಸಬಹುದು.

ಭಾರತ ದೇಶದ ಶಕ್ತಿ ಇರುವುದು ಕೃಷಿಯಲ್ಲಿ ಮತ್ತು ಯಥೇಚ್ಛವಾಗಿ ಸುರಿಯುವ ಮಳೆಯಲ್ಲಿ. ಆದ್ದರಿಂದ ಭಾರತ ಯಾವತ್ತೂ ಕೃಷಿ ಮರೆತ ವೆನೆಜ಼ುವೆಲದ ಹಾಗೆ ಆಗುವುದಿಲ್ಲ. ಆದರೆ ಮಳೆ ‘ಹೆಚ್ಚು ಸುರಿದಾಗಲೂ ಅನಾಹುತ, ಕಡಿಮೆ ಸುರಿದಾಗಲೂ ಅನಾಹುತ’ ಎಂಬ ಸ್ಥಿತಿಯನ್ನು ಖರ್ಚು ಮಾಡಲಾಗದ ಹಣವನ್ನು ಖರ್ಚು ಮಾಡಿ ಬದಲಾಯಿಸಲು ಸಾಧ್ಯವಿದೆ.

ದೇಶದುದ್ದಗಲಕ್ಕೆ ಊರೂರುಗಳಲ್ಲಿ ಕೆರೆಗಳನ್ನು ನಿರ್ಮಿಸಿ ಆಕಾಶದಿಂದ ಸುರಿಯುವ ಕೋಟಿ ಕೋಟಿ ಗ್ಯಾಲನ್ ನೀರನ್ನು ಅವುಗಳಲ್ಲಿ ತುಂಬಿಸಿ ಇರಿಸಿದರೆ, ಬರಗಾಲ ಬಂದರೂ ನೀರು ಎಲ್ಲಾ ಕಡೆ ಇರುತ್ತದೆ. ಕುಡಿಯುವ ನೀರು ಎಲ್ಲಿಯೂ ‘ಇಲ್ಲ’ ಎಂದಾಗುವುದಿಲ್ಲ. ನದಿ ಕೆರೆಗಳ ನೀರು ಕೂಡ ಕಲುಷಿತವಾಗದೆ ಸ್ವಚ್ಛವಾಗಿರುತ್ತದೆ. ಬರಗಾಲದಲ್ಲಿ ಕೂಡ ಜನರಿಗೆ ಮತ್ತು ಜಾನುವಾರಿಗೆ ನೀರಿಲ್ಲದಾಗುವುದಿಲ್ಲ. ಖರ್ಚು ಮಾಡಲಾಗದ ಹಣದಿಂದ ಧರ್ಮಗಳ, ಅಭ್ಯುತ್ಥಾನ ಅಥವಾ ಶುದ್ಧೀಕರಣ ಎಂದಿಗೂ ಆಗದು. ಆದರೆ ದೇಶದ ಉದ್ಧಾರ, ಸಾಮಾಜಿಕ ಪರಿವರ್ತನೆ ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT