ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾಖ್ ಪದ್ಧತಿ: ಪ್ರಶ್ನೆ ಬದಲಾಗಿದ್ದೇಕೆ?

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಪ್ರತಿ ವಿಷಯವನ್ನೂ, ಸಮಸ್ಯೆಯನ್ನೂ ನಾವೇಕೆ ಗೋಜುಗೋಜಲಾಗಿಸಿ, ಸಮರ್ಪಕ ಉತ್ತರ ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿಯನ್ನು ನಿರ್ಮಿಸುತ್ತಿದ್ದೇವೆ?

ಈ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ಉತ್ತರಾಖಂಡದ ಶಾಯರಾ ಬಾನು ಎಂಬ ಮಹಿಳೆ, ಒಟ್ಟಿಗೇ ಮೂರು ಬಾರಿ ತಲಾಖ್ ಹೇಳಿ ಮುಸ್ಲಿಂ ಪುರುಷನೊಬ್ಬನು ವಿಚ್ಛೇದನ ಪಡೆಯುವುದು ಭಾರತೀಯ ಸಂವಿಧಾನವು ತನಗಿತ್ತಿರುವ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು, ಆ ಬಗೆಯ ವಿಚ್ಛೇದನ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು.

ಈ ವಿಷಯದ ಬಗ್ಗೆ ತನ್ನ ನಿಲುವನ್ನು ತಿಳಿಸಲು ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿತು; ಕೇಂದ್ರ ಸರ್ಕಾರವು ‘ಆ ಬಗೆಯ ವಿಚ್ಛೇದನವು ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವುದರಿಂದ ಆ ಪ್ರಕಾರವನ್ನು ಒಪ್ಪುವುದು ಸಾಧ್ಯವಿಲ್ಲ’ ಎಂದು ಕೋರ್ಟ್‌ಗೆ ತಿಳಿಸಿತು.

ಈ ವಿಷಯದ ಬಗ್ಗೆ ಇನ್ನೂ ಕೋರ್ಟ್ ತನ್ನ ತೀರ್ಪನ್ನು ಕೊಟ್ಟಿಲ್ಲ. ಅಷ್ಟರ ಒಳಗೇ, ಈ ತಲಾಖ್ ಪ್ರಶ್ನೆ  ಏಕರೂಪ ನಾಗರಿಕ ಸಂಹಿತೆಯನ್ನು ಕುರಿತ ಪ್ರಶ್ನೆಯಾಗಿ ಹೇಗೆ ಮತ್ತು ಏಕೆ ಬದಲಾಯಿತು?

ಸದನವು ಸೂಚಿಸುವ ಮೊದಲೇ ಕೇಂದ್ರ ಕಾನೂನು ಆಯೋಗ 16 ಪ್ರಶ್ನೆಗಳುಳ್ಳ ಒಂದು ಪ್ರಶ್ನಾವಳಿಯನ್ನು ತಯಾರಿಸಿ, ಅದನ್ನು ಜನಾಭಿಪ್ರಾಯಕ್ಕಾಗಿ ಸಾರ್ವಜನಿಕರ ಮುಂದಿಡುತ್ತದೆ. ಕಾರಣವೇನು? ಪ್ರಶ್ನಾವಳಿಯ ಸ್ವರೂಪ ಹೇಗಿದೆಯೆಂದರೆ, ಅದರ ಒಂದು ಮುಖ್ಯ ಪ್ರಶ್ನೆ ‘ಸಂವಿಧಾನದ 44ನೇ ವಿಧಿಯ ಬಗ್ಗೆ (ನಿಮಗೆ) ತಿಳಿದಿದೆಯೆ?’.

ಈ ವಿಧಿ ಗೊತ್ತಿಲ್ಲದಿದ್ದರೂ ಸಂವಿಧಾನದ ವಿಧಿ ಎಂದ ಕೂಡಲೇ ಸಾಮಾನ್ಯ ಜನರು ಅದನ್ನು ಗೌರವಿಸುತ್ತಾರೆ. ಆದರೆ, ಆ ಪ್ರಶ್ನೆ ಮುಚ್ಚಿಡುವುದು ‘ಈ 44ನೇ ವಿಧಿ ಒಂದು ಮಾರ್ಗಸೂಚಿಯ ಭಾಗ ಅಷ್ಟೆ (Directive Principle), ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದಿಲ್ಲ’ ಎಂಬ ಅತಿ ಮುಖ್ಯ ಅಂಶವನ್ನು. ಈಗ ಸುಪ್ರೀಂ ಕೋರ್ಟ್ ಮುಂದೆ ಇರುವುದು ಮತ್ತು ನಾವು ಚರ್ಚಿಸಬೇಕಾದದ್ದು ತಲಾಖ್ ಕ್ರಮವೇ ಹೊರತು  ಏಕರೂಪ ನಾಗರಿಕ ಸಂಹಿತೆ ಕುರಿತ ಇಷ್ಟಾನಿಷ್ಟಗಳಲ್ಲ.

ನಾಗರಿಕ ಸಂಹಿತೆ ಎಂಬುದು ಒಂದು ವ್ಯಾಪಕ ಕ್ಷೇತ್ರ. ಅದು ಭಾರತದ ಎಲ್ಲಾ ಪ್ರಜೆಗಳಿಗೆ ಸಂಬಂಧಿಸಿದ ವಿವಾಹ, ವಿಚ್ಛೇದನ, ಆಸ್ತಿಯ ಹಕ್ಕು, ಪಿತ್ರಾರ್ಜಿತ ಆಸ್ತಿಯ ಹಂಚಿಕೆ, ದತ್ತು ಸ್ವೀಕಾರ, ಪೋಷಣೆ ಇತ್ಯಾದಿ ಅನೇಕ ವಿಷಯಗಳನ್ನು ಒಳಗೊಳ್ಳುತ್ತದೆ ಮತ್ತು ಈ ಪಟ್ಟಿಯಲ್ಲಿರುವ ಪ್ರತಿ ವಿಷಯದ ಬಗ್ಗೆಯೂ  ಭಾರತದಲ್ಲಿರುವ ಹಿಂದೂ, ಕ್ರಿಶ್ಚಿಯನ್, ಜೈನ, ಸಿಖ್, ಆದಿವಾಸಿಗಳು ಮುಂತಾದ ಭಿನ್ನ ಧಾರ್ಮಿಕ- ಸಾಂಸ್ಕೃತಿಕ ಸಮುದಾಯಗಳ ನಡುವೆ ಅಗಾಧ ಭಿನ್ನತೆಗಳಿವೆ. 

ಉದಾಹರಣೆಗೆ: ಆಸ್ತಿಯ ಹಕ್ಕು ಮಾತೃಮೂಲೀಯ ತುಳುವ ಸಮುದಾಯದಲ್ಲಿ ಇಂದಿಗೂ ತಾಯಿಯಿಂದ ಮಗಳಿಗೆ ಬರುತ್ತದೆ ಮತ್ತು ಮದುವೆಯ ನಂತರ ತನ್ನ ತವರಿನ ಸಂಬಂಧವನ್ನೆಲ್ಲಾ ಕಡಿದುಕೊಂಡು ಗಂಡನ ಮನೆಯಲ್ಲಿ ಹೆಂಡತಿ ಇರಬೇಕಿಲ್ಲ.

‘ಇಂಡಿಯನ್ ಡಿವೋರ್ಸ್ ಆ್ಯಕ್ಟ್, 1969’ರ ಪ್ರಕಾರ, ಪರಸ್ಪರ ಸಮ್ಮತಿಯಿದ್ದರೂ ವಿಚ್ಛೇದನ ಪಡೆಯಲು ಸಾಂಪ್ರದಾಯಿಕ ಕ್ಯಾಥೊಲಿಕ್ ಚರ್ಚ್‌ಗೆ ಸೇರಿದ ಕ್ರಿಶ್ಚಿಯನ್ನರಾದರೆ ಅನೇಕ ವರ್ಷಗಳ ಕಾಲ ಕಾಯಬೇಕು, ಭಾರತೀಯ ಕ್ರಿಶ್ಚಿಯನ್ನರು ಎರಡು ವರ್ಷ ಬೇರೆಯಾಗಿರಬೇಕು, ಹಿಂದೂಗಳಾದರೆ ಒಂದು ವರ್ಷ ಬೇರೆಯಾಗಿರಬೇಕು. ಹಿಂದೂಗಳಲ್ಲಿ ವಿವಾಹವು ಒಂದು ಧಾರ್ಮಿಕ ಕ್ರಿಯೆಯಾದರೆ, ಮುಸ್ಲಿಮರಲ್ಲಿ ಅದು ಸಾಮಾಜಿಕ ಕರಾರು (social contract), ಕ್ರಿಶ್ಚಿಯನ್ನರಿಗೆ ಅದು ಎರಡೂ ಅಹುದು.

ಪಾರ್ಸಿ ಸಮುದಾಯಕ್ಕೆ ಇವೆಲ್ಲಕ್ಕಿಂತ ಬೇರೆಯೇ ಆದ ವಿವಾಹ ಮತ್ತು ಆಸ್ತಿಯ ಹಕ್ಕು ಹಾಗೂ ಇವುಗಳನ್ನು ಕುರಿತ ಶಾಸನಗಳಿವೆ. ಮುಸ್ಲಿಂ ಸಮುದಾಯದಲ್ಲಿ ಬಹುಪತ್ನಿತ್ವವಿದ್ದರೆ, ಹಿಂದೂ, ಜೈನ, ಬೌದ್ಧ, ಆದಿವಾಸಿ  ಮುಂತಾದ ಸಮುದಾಯಗಳಲ್ಲಿ ದ್ವಿಪತ್ನಿತ್ವವಿದೆ.

ಇಷ್ಟು ಭಿನ್ನತೆಗಳಿರುವ ಕಾರಣದಿಂದಲೇ ಸ್ವಾತಂತ್ರ್ಯಾನಂತರ ಸಂವಿಧಾನ ರಚನೆಯ ಸಂದರ್ಭದಲ್ಲಿ,  ಹಿಂದೂ- ಮುಸ್ಲಿಂ- ಕ್ರಿಶ್ಚಿಯನ್ ಸದಸ್ಯರು ಒಟ್ಟಾಗಿಯೇ ‘ಏಕರೂಪ  ನಾಗರಿಕ ಸಂಹಿತೆ’ಯನ್ನು ವಿರೋಧಿಸಿದರು. ಆದರೆ, ಕೆ.ಎಂ. ಮುನ್ಷಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್, ಬಿ.ಆರ್.ಅಂಬೇಡ್ಕರ್ ಮುಂತಾದವರ ಆಗ್ರಹದಿಂದ, ಸಂವಿಧಾನದ ‘ಮಾರ್ಗದರ್ಶಿ ಸೂತ್ರಗಳು’ ಎಂಬ ಭಾಗದಲ್ಲಿ 44ನೇ ವಿಧಿಯಾಗಿ ‘ಕೇಂದ್ರ ಸರ್ಕಾರವು ಸರ್ವ ಪ್ರಜೆಗಳಿಗೂ ಏಕರೂಪ ನಾಗರಿಕ ಸಂಹಿತೆಯನ್ನು  ರೂಪಿಸಲು ಪ್ರಯತ್ನಿಸಬೇಕು’ ಎಂಬುದನ್ನು ಕೂಡ ಸೇರಿಸಿತ್ತು.

ಈಗ ಸುಪ್ರೀಂ ಕೋರ್ಟ್‌ನ ಮುಂದಿರುವುದು ಏಕರೂಪ ನಾಗರಿಕ ಸಂಹಿತೆಯಲ್ಲ, ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿರುವಂತೆ ಇಡಿಯಾಗಿ ತಲಾಖ್ ಸಂಗತಿಯೂ ಅಲ್ಲ, ತಲಾಖ್ ಪ್ರಕ್ರಿಯೆ. ಎಂದರೆ, ಒಟ್ಟಿಗೆ ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಖ್ ಎಂದು ಹೇಳಿ ಪುರುಷನು ವಿಚ್ಛೇದನ ಪಡೆದರೆ (ಮುಸ್ಲಿಂ ಸ್ತ್ರೀಗೆ ತಲಾಖ್ ಹೇಳುವ ಅಧಿಕಾರವಿಲ್ಲ), ಆ ವಿಚ್ಛೇದನ ನ್ಯಾಯಸಮ್ಮತವೇ ಎಂಬ ಅಂಶ.

ಈ ಬಗೆಯ ವಿಚ್ಛೇದನ ಕ್ರಮದಿಂದ ಸ್ತ್ರೀ ಪುರುಷರಿಬ್ಬರಿಗೂ ಅನ್ಯಾಯವಾಗುತ್ತದೆ.  ಮದುವೆಯಾಗಿ ನಾಲ್ಕೈದು ವರ್ಷಗಳಾದ ನಂತರ ಮತ್ತು ಎರಡು-ಮೂರು ಮಕ್ಕಳಿರುವ ಸ್ತ್ರೀ ಈ ಬಗೆಯ ವಿಚ್ಛೇದನ ಕ್ರಮದಿಂದ ಇದ್ದಕ್ಕಿದ್ದಂತೆ ತನ್ನ ಸ್ಥಾನ-ಮಾನ ಎಲ್ಲವನ್ನೂ ಕಳೆದುಕೊಂಡು, ಜೊತೆಗೆ ಚಿಕ್ಕ ಮಕ್ಕಳ ಪೋಷಣೆಯ ಭಾರವನ್ನೂ ಹೊತ್ತು ಬೀದಿಗೆ ಬೀಳುತ್ತಾಳೆ. ಹೆಚ್ಚಿನ ವಿಚ್ಛೇದಿತ ಮುಸ್ಲಿಂ ಸ್ತ್ರೀಯರು ಅನಕ್ಷರಸ್ಥ ಬಡವರಾಗಿರುತ್ತಾರೆ.

ವಿಚ್ಛೇದನದ ನಂತರ ಅಂತಹವರು ಎಲ್ಲಿಗೆ ಹೋಗಬೇಕು?  ಹಾಗೆಯೇ, ಈ ಕ್ರಮದಿಂದ ತನ್ನ ಯಾವುದೋ ಕೋಪದ ಅಥವಾ ಖಿನ್ನತೆಯ ಕ್ಷಣದಲ್ಲಿ ಹೆಂಡತಿಗೆ ತಲಾಖ್ ಹೇಳುವ ಪತಿ ಆನಂತರ ಆ ಕಾರ್ಯಕ್ಕಾಗಿ ಮರುಗಬಹುದು, ಪಶ್ಚಾತ್ತಾಪಪಡಬಹುದು. ಆದರೆ ಈಗ ಭಾರತದಲ್ಲಿರುವಂತೆ, ಒಮ್ಮೆ ತಲಾಖ್ ಹೇಳಿದ ನಂತರ ಮತ್ತೆ ಆ ದಂಪತಿ ಒಂದಾಗುವುದು ಸಾಧ್ಯವೇ ಇಲ್ಲ.  (ಸಾರಾ ಅಬೂಬಕ್ಕರ್ ಅವರ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ಇದೇ ಬಗೆಯ ದಾರುಣ ಪರಿಸ್ಥಿತಿಯನ್ನು ಹೃದಯಂಗಮವಾಗಿ ಚಿತ್ರಿಸುತ್ತದೆ).

ರಕ್ತಮಾಂಸಗಳಿಂದ ಕೂಡಿದ ವ್ಯಕ್ತಿಯೊಬ್ಬನ ಮೂರು ಪದಗಳಿಗೆ ಇಡೀ ಕುಟುಂಬವನ್ನೇ ಹಾಳುಮಾಡುವ ಶಕ್ತಿಯಿರಬಾರದು ಎಂಬುದನ್ನು 20ನೆಯ ಶತಮಾನದಿಂದಲೇ ಸಾಹಿತಿಗಳು ಮತ್ತು ಸಮಾಜ ಸುಧಾರಕರು ಪ್ರತಿಪಾದಿಸುತ್ತಲೇ ಇದ್ದಾರೆ.

ಭಾರತೀಯ ಮುಸ್ಲಿಂ ಮಹಿಳಾ ಆಂದೋಳನ್ (ಬಿ.ಎಮ್.ಎಮ್.ಎ) ಎಂಬ ಸಂಸ್ಥೆ ಈ ಬಗೆಯ, ಒಟ್ಟಿಗೇ ಮೂರು ಬಾರಿ ತಲಾಖ್ ಹೇಳಿ ಆಗುವ ವಿಚ್ಛೇದನದ ವಿರುದ್ಧ 50 ಸಾವಿರ ಮುಸ್ಲಿಂ ಮಹಿಳೆಯರ ಹಸ್ತಾಕ್ಷರವನ್ನು ಪಡೆದು ಅದನ್ನು ಕೋರ್ಟ್‌ಗೆ ಕೊಟ್ಟಿದೆ. ಮುಸ್ಲಿಂ ಮಹಿಳೆಯರೂ ಭಾರತದ ಪ್ರಜೆಗಳೇ ಆದುದರಿಂದ ಸಂವಿಧಾನವು ನೀಡಿರುವ ‘ಸಮಾನತೆಯ ಹಕ್ಕು’ ಅವರಿಗೂ ದೊರಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT