ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ವಸ್ಥಗೊಂಡ ಆನೆ: ಚಿಕಿತ್ಸೆಗೆ ಸಿಗದ ಸ್ಪಂದನೆ

ಕ್ರೇನ್‌ ಬಳಸಿ ಮೇಲಕ್ಕೆ ಎತ್ತಿದ ಅಧಿಕಾರಿಗಳು, ತೀವ್ರ ನಿಗಾ
Last Updated 25 ಅಕ್ಟೋಬರ್ 2016, 11:30 IST
ಅಕ್ಷರ ಗಾತ್ರ

ರಾಮನಗರ: ಮಂಚನಬೆಲೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿರುವ ಕಾಡಾನೆ ಸಿದ್ದನ ದೇಹಸ್ಥಿತಿ ಬಿಗಡಾಯಿಸಿದ್ದು, ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ತೀವ್ರ ಅಸ್ವಸ್ಥಗೊಂಡ ಆನೆಯನ್ನು ಸೋಮವಾರ ಕ್ರೇನ್‌ ಬಳಸಿ ಮೇಲೆತ್ತಲಾಯಿತು.

ಕಾರ್ಯಾಚರಣೆ ವೇಳೆ ನೀಡಲಾದ ಮತ್ತು ಬರಿಸುವ ಔಷಧ ಹಾಗೂ ರೋಗ ನಿರೋಧಕ ಔಷಧಗಳ ವಾಸನೆಯಿಂದ ಕಂಗೆಟ್ಟ ಆನೆ ಕಳೆದ ಎರಡು ದಿನಗಳಿಂದ ಆಹಾರ ತೆಗೆದುಕೊಳ್ಳುವುದನ್ನು ಬಹುಪಾಲು ನಿಲ್ಲಿಸಿತ್ತು. ಇದರಿಂದ ದೇಹ ನಿತ್ರಾಣಗೊಂಡು ಸೋಮವಾರ ಬೆಳಿಗ್ಗೆ ಪಕ್ಕದ ರಾಗಿ ಹೊಲದಲ್ಲಿ ಅಂಗಾತ ಮಲಗಿಕೊಂಡಿತು.

ಆನೆಗೆ ಗ್ಲುಕೋಸ್‌ ನೀಡಿ ಅದರಲ್ಲಿ ಚೈತನ್ಯ ತರುವ ಪ್ರಯತ್ನವನ್ನು ವೈಲ್ಡ್‌ಲೈಫ್‌ ಎಸ್‌ಒಎಸ್ ಸಂಸ್ಥೆಯ ವೈದ್ಯರಾದ ಅರುಣ್‌ ಷಾ ಹಾಗೂ ಇಳಯರಾಜ್‌ ಅವರನ್ನು ಒಳಗೊಂಡ ತಂಡವು ಮಾಡಿತು. ಆದರೆ ಅದಕ್ಕೂ ಸಿದ್ದ ಅಷ್ಟಾಗಿ ಸ್ಪಂದಿಸಲಿಲ್ಲ. ಹೀಗಾಗಿ ಕಡೆಗೆ ಕ್ರೇನ್‌ ಬಳಸಿ ಆನೆಯನ್ನು ಮೇಲಕ್ಕೆ ಎತ್ತಿ ನಿಲ್ಲಿಸಲಾಯಿತು. ಕೆಲ ಹೊತ್ತಿನ ಬಳಿಕ ಸುಧಾರಿಸಿಕೊಂಡಂತೆ ಕಂಡುಬಂದ ಆನೆಯು ಬಳಿಕ ಕೊಂಚ ಹುಲ್ಲು ತಿಂದು ಸಮಾಧಾನಪಟ್ಟು ಕೊಂಡಿತು.

ವೈದ್ಯರ ಸಲಹೆಯಂತೆ ಆನೆಗೆ ಸದ್ಯ ಹಸಿರು ಹುಲ್ಲು, ಜೋಳ, ಕಬ್ಬು, ಮುದ್ದೆ ಮೊದಲಾದ ಸತ್ವಯುತ ಆಹಾರವನ್ನು ಇಲಾಖೆಯ ಸಿಬ್ಬಂದಿ ನೀಡುತ್ತಿದ್ದಾರೆ. ಟ್ಯಾಂಕರ್‌ನಲ್ಲಿ ನೀರು ತಂದು ಮೈಮೇಲೆ ಸುರಿಯಲಾಗುತ್ತಿದೆ. ಆದರೆ ಬಹುಪಾಲು ಆಹಾರವನ್ನು ಆನೆ ಅಗಿದು ಉಗಿಯುತ್ತಿದೆ. ಭಾನುವಾರ ವಾಂತಿ ಸಹ ಮಾಡಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆನೆಯ ದೇಹಶಕ್ತಿ ಕುಗ್ಗಿದ್ದು, ಅದರ ಸ್ಪಂದನೆಯ ಮೇಲೆಯೇ ಇಡೀ ಚಿಕಿತ್ಸೆ ಅವಲಂಬಿತವಾಗಿದೆ. ಗ್ಲುಕೋಸ್‌ ಮತ್ತಿತರ ಔಷಧಗಳನ್ನೂ ತಕ್ಕ ಪ್ರಮಾಣದಲ್ಲಿ ನೀಡಲಾಗುತ್ತಿದೆ’ ಎಂದು ವೈದ್ಯರು ವಿವರಿಸಿದರು.

‘ಎರಡು ದಿನಗಳಿಂದ ಆಹಾರ ನಿರಾಕರಿಸಿದ ಕಾರಣ ಆನೆಯು ನಿತ್ರಾಣಗೊಂಡು ಹೊಲದಲ್ಲಿ ಬಿದ್ದುಕೊಂಡಿತ್ತು. ಸೋಮವಾರ ಮಧ್ಯಾಹ್ನ ಕ್ರೇನ್‌ ಬಳಸಿಕೊಂಡು ಸಿದ್ದನನ್ನು ಮೇಲಕ್ಕೆ ಎತ್ತಿ ನಿಲ್ಲಿಸಲಾಯಿತು. ಸಂಜೆಯ ವೇಳೆಗೆ ಅದು ಸುಧಾರಿಸಿಕೊಂಡಿದ್ದು, ಸ್ವಲ್ಪ ಸ್ವಲ್ಪವೇ ಆಹಾರ ತೆಗೆದುಕೊಳ್ಳುತ್ತಿದೆ’ ಎಂದು ಮಾಗಡಿ ವಲಯ ಅರಣ್ಯಾಧಿಕಾರಿ ದಾಳೇಶ್‌ ವಿವರಿಸಿದರು.

ಸಿಸಿಎಫ್‌ (ಆನೆ ಪ್ರಾಜೆಕ್ಟ್‌) ದಿಲೀಪ್‌ಕುಮಾರ್ ದಾಸ್ ಸಹಿತ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಆನೆ ಚಿಕಿತ್ಸೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಕೈಸೇರದ ವರದಿ:  ಆನೆಯ ಬಲಗಾಲಿನ ಎಕ್ಸ್‌ರೇ ವರದಿ ಇನ್ನಷ್ಟೇ ಅಧಿಕಾರಿಗಳ ಕೈಸೇರಬೇಕಿದೆ. ಮೂಳೆ ಮುರಿದಿರುವುದು ಈಗಾಗಲೇ ಸ್ಪಷ್ಟವಾಗಿದೆ. ಆದರೆ ಆನೆಯಂತಹ ದೈತ್ಯ ಜೀವಿಗಳಿಗೆ ಶಸ್ತ್ರಚಿಕಿತ್ಸೆ ಸುಲಭದ ಮಾತಲ್ಲ. ಮಾಡಿದರೂ ಅದರ ಕಾಲು ಮೊದಲಿನಂತೆ ಆಗದು ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT