ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ ಅಂತ್ಯದೊಳಗೆ ಕೆರೆ ಒತ್ತುವರಿ ವರದಿ ಸಲ್ಲಿಕೆ

Last Updated 26 ಅಕ್ಟೋಬರ್ 2016, 20:21 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿನ ಕೆರೆ ಒತ್ತುವರಿಗೆ ಸಂಬಂಧಿಸಿದ ವರದಿಯನ್ನು ಡಿಸೆಂಬರ್‌ ಅಂತ್ಯದ ಒಳಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೆರೆ ಒತ್ತುವರಿ ತೆರವು ಸದನ ಸಮಿತಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು.

‘ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಕೆರೆ, ಕಟ್ಟೆ, ಕುಂಟೆ ಒತ್ತುವರಿ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿಯ ಸಂಪೂರ್ಣ ಅಂಕಿಅಂಶ ಸಂಗ್ರಹಿಸಲಾಗಿದೆ. ಕರಡು ವರದಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.

‘ಮೊದಲು ಕೆರೆ ಒತ್ತುವರಿ ವರದಿ ಸಲ್ಲಿಸಲಾಗುವುದು. ಕಟ್ಟೆ, ಕುಂಟೆ ಮತ್ತು ರಾಜಕಾಲುವೆ ಒತ್ತುವರಿ ವರದಿಯನ್ನು 3–4 ತಿಂಗಳ ಬಳಿಕ ಸಲ್ಲಿಸಲಾಗುವುದು. ಸಮಗ್ರ ಸರ್ವೆಯ ಬಳಿಕವಷ್ಟೇ ಶೇ 100ರಷ್ಟು ನಿಖರ ಮಾಹಿತಿ ಪಡೆಯಲು ಸಾಧ್ಯ’ ಎಂದೂ ಅವರು ತಿಳಿಸಿದರು. ಸಮಿತಿ ರಚನೆಗೊಂಡು ಗುರುವಾರಕ್ಕೆ (ಅ. 27) ಎರಡು ವರ್ಷ ತುಂಬುತ್ತದೆ.

ಸಮಿತಿಯ ಎಲ್ಲ ಸದಸ್ಯರ ಸತತ ಪರಿಶ್ರಮದ ಫಲವಾಗಿ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ. ಸಮಿತಿ ಐತಿಹಾಸಿಕ ವರದಿ ನೀಡಲಿದೆ ಎಂದೂ  ವಿವರಿಸಿದರು. ಕೆರೆ ಒತ್ತುವರಿ, ಕಟ್ಟೆ ಮತ್ತು ಕುಂಟೆ ಒತ್ತುವರಿ ಹಾಗೂ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಪ್ರತ್ಯೇಕ ವರದಿ ಸಿದ್ಧಪಡಿಸಲಾಗುತ್ತಿದೆ. ಕಂದಾಯ ಇಲಾಖೆಯ ಇಬ್ಬರು ನೋಡಲ್‌ ಅಧಿಕಾರಿಗಳು ಈ ಕಾರ್ಯಕ್ಕೆ ಸಮಿತಿ ಜೊತೆ ಕೆಲಸ ಮಾಡಿದ್ದಾರೆ. ಪ್ರತಿಯೊಂದನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುವುದು ಎಂದರು.

ಒತ್ತುವರಿ ಮಾಡಿಕೊಂಡವರ ಮಾಹಿತಿ ಜೊತೆಗೆ ಒತ್ತುವರಿಗೆ ನೆರವು ನೀಡಿದ ಅಧಿಕಾರಿಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗುವುದು. ಜೊತೆಗೆ ಒತ್ತುವರಿ ಮಾಡಿಕೊಂಡವರ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದೂ ಶಿಫಾರಸು ಮಾಡಲಾಗುವುದು. ಸಮಿತಿಯ ಸದಸ್ಯರ ವೈಯಕ್ತಿಕ ಅಭಿಪ್ರಾಯದ ಜೊತೆಗೆ  ಒಟ್ಟಾಭಿಪ್ರಾಯವನ್ನು ವರದಿಯಲ್ಲಿ ತಿಳಿಸಲಾಗುವುದು ಎಂದರು.

ಪುನಶ್ಚೇತನಕ್ಕೆ ಕ್ರಮ
‘ರಾಜ್ಯದಲ್ಲಿ 83 ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿವೆ. ಈ ಉದ್ದಿಮೆಗಳ ಸದ್ಯದ ಸ್ಥಿತಿಗತಿ ಕುರಿತು ಚರ್ಚಿಸಲು ಗುರುವಾರ ಪ್ರಧಾನ ಕಾರ್ಯದರ್ಶಿ (ಸಾರ್ವಜನಿಕ ಉದ್ದಿಮೆಗಳು) ರೇಣುಕಾ ಚಿದಂಬರಂ ಅವರನ್ನು ಕಚೇರಿಗೆ ಬರುವಂತೆ ಸೂಚಿಸಿದ್ದೇನೆ. ಕಳೆದ ಮೂರು ವರ್ಷಗಳಿಂದ ಕೆಲವು ಉದ್ದಿಮೆಗಳು ನಷ್ಟದಲ್ಲಿವೆ. ನಷ್ಟಕ್ಕೆ ಕಾರಣವೇನು ಎನ್ನುವುದನ್ನು ಅಧ್ಯಯನ ಮಾಡಿ ಪುನಶ್ಚೇತನಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇನೆ’ ಎಂದು ಕೋಳಿವಾಡ ತಿಳಿಸಿದರು.

***
ಗೂಗಲ್‌ ಮತ್ತು ಕಂದಾಯ ಇಲಾಖೆ ನಕ್ಷೆ ನೆರವಿನಿಂದ ಒತ್ತುವರಿ ಪ್ರದೇಶ ಗುರುತಿಸಲಾಗಿದೆ. ಅಂಕಿಅಂಶ ಶೇ 95ರಷ್ಟು ನಿಖರವಾಗಿದೆ
-ಕೆ.ಬಿ. ಕೋಳಿವಾಡ,ಅಧ್ಯಕ್ಷರು,
ಕೆರೆ ಒತ್ತುವರಿ ತೆರವು ಸದನ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT