ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಿಝೋಫ್ರೀನಿಯಾ, ಖಿನ್ನತೆ ಶಮನಕ್ಕೆ ಯೋಗ ಪರಿಣಾಮಕಾರಿ

Last Updated 2 ನವೆಂಬರ್ 2016, 15:47 IST
ಅಕ್ಷರ ಗಾತ್ರ

ಬೆಂಗಳೂರು: ಛಿದ್ರ ಮನಸ್ಕತೆ ಅಥವಾ ಸ್ಕಿಝೋಫ್ರೀನಿಯಾದಿಂದ ಬಳಲುವ ರೋಗಿಗಳ ಚಿಕಿತ್ಸೆಯಲ್ಲಿ ಯೋಗದ ಬಳಕೆಯಿಂದ ರೋಗದ ಇಳಿಮುಖ ಆಗಿರುವುದು ಮಾತ್ರವಲ್ಲದೆ, ಜೀವನ ಮಟ್ಟವು ಸುಧಾರಿಸಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆಯ (ನಿಮ್ಹಾನ್ಸ್‌) ವಿಜ್ಞಾನಿಗಳು ನಡೆಸಿರುವ ಸಂಶೋಧನೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಸ್ಕಿಝೋಫ್ರೀನಿಯಾ ಅಲ್ಲದೆ ಖಿನ್ನತೆಯ ಶಮನಕ್ಕೂ ಯೋಗ ಪರಿಣಾಮಕಾರಿ.
ಈ  ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನಿಮ್ಹಾನ್ಸ್‌ನ ಸೈಕಿಯಾಟ್ರಿ ವಿಭಾಗದ ಡಾ. ಶಿವರಾಮ ವಾರಂಬಳ್ಳಿ, ‘ಸ್ಕಿಝೋಫ್ರೀನಿಯಾದ ಚಿಕಿತ್ಸೆಗೆ ಯೋಗ ಪರಿಣಾಮಕಾರಿ ಹಾಗೂ ಪ್ರಮುಖ ಅಂಶವಾಗಿದೆ. ಯೋಗದ ಬಳಕೆಯಿಂದ ರೋಗಿಗಳಲ್ಲಿ ಹಲವು ಆಯಾಮಗಳಲ್ಲಿ ಸುಧಾರಣೆ ಕಂಡು ಬಂದಿದೆ. ರೋಗ ಲಕ್ಷಣ, ಕಾರ್ಯ ನಿರ್ವಹಣಾ ಕ್ಷಮತೆ ಮತ್ತು ಜೀವನ ಗುಣಮಟ್ಟದಲ್ಲಿ ಗಮನಾರ್ಹ ಬದಲಾವಣೆ ಆಗಿದೆ’ ಎಂದು ತಿಳಿಸಿದರು.

ಸರಳ ವ್ಯಾಯಾಮ ಮಾಡುವವರಿಗಿಂತ ಯೋಗ ಮಾಡುವ ರೋಗಿಗಳ ಸ್ಥಿತಿ ಉತ್ತಮವಾಗಿದೆ. ನಿಮ್ಹಾನ್ಸ್‌ನಲ್ಲಿ ಎರಡು ಅಧ್ಯಯನಗಳು ಬೆಳಕು ಚೆಲ್ಲಿವೆ.

ಮೊದಲ ಅಧ್ಯಯನ ದೊರೈಸ್ವಾಮಿ ಮತ್ತು ತಂಡ ನಡೆಸಿತ್ತು. ಈ ಅಧ್ಯಯನದ ಉದ್ದೇಶ, ರೋಗದ ಶಮನಕ್ಕಾಗಿ(ಆ್ಯಂಟಿ ಸೈಕೋಟಿಕ್‌) ಔಷಧವನ್ನು ಕೊಟ್ಟರೂ ಸ್ಕಿಝೋಫ್ರೀನಿಯಾದ ಚಿಕಿತ್ಸೆ ಪರಿಣಾಮಕಾರಿ ಎನಿಸಿರಲಿಲ್ಲ. ಅಂತಹ 61 ಮಂದಿ ರೋಗಿಗಳನ್ನು ಅಧ್ಯಯನಕ್ಕೆ ಬಳಸಿ ಕೆಲವರಿಗೆ ಸರಳ ವ್ಯಾಯಾಮ, ಇನ್ನು ಕೆಲವರಿಗೆ ಯೋಗ ಥೆರಪಿ ನೀಡಲಾಯಿತು.  ನಾಲ್ಕು ತಿಂಗಳ ಅಧ್ಯಯನದಲ್ಲಿ ಯೋಗ ಮಾಡಿದವರ ಸ್ಥಿತಿ ಉತ್ತಮಗೊಂಡಿತ್ತು ಎಂದು ವಾರಂಬಳ್ಳಿ ತಿಳಿಸಿದರು.

ಸ್ಕಿಝೋಫ್ರೀನಿಯಾ ಎಂದರೇನು?

ಸ್ಕಿಝೋಫ್ರೀನಿಯಾ ಎಂದರೆ ಒಂದು ಬಗೆಯ ಮಿದುಳಿನ ಕಾಯಿಲೆ. ಇಂತಹ ವ್ಯಕ್ತಿಗಳು ಅಪಸಾಮಾನ್ಯ ಸಾಮಾಜಿಕ ವರ್ತನೆ ಹೊಂದಿರುತ್ತಾರೆ. ವಾಸ್ತವ ಏನು ಎಂಬುದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗದು. ಅಪನಂಬಿಕೆ, ಅಸ್ಪಷ್ಟ ಅಥವಾ ಗೊಂದಲದಿಂದ ಕೂಡಿದ ಚಿಂತನೆ, ಎಲ್ಲೋ ಏನೋ ಸದ್ದು ಕೇಳುತ್ತಿದೆ ಎಂಬ ಭ್ರಾಂತಿಯಲ್ಲಿ ಇರುತ್ತಾರೆ. ಚೈತನ್ಯಯುತ ನಡವಳಿಕೆಯ ಲವಲೇಶ ಇರುವುದಿಲ್ಲ.

ಹೇಗೆ ಬರುತ್ತದೆ?

* ಮಿದುಳಿನ ಜೈವಿಕ ರಾಸಾಯನಿಕ ಕಾಯಿಲೆ. ಮಿದುಳು ವಿಪರೀತ ನ್ಯೂರೋಟ್ರಾನ್ಸ್‌ಮಿಟರ್‌ ಅಥವಾ ಡೊಪಮೈನ್‌ ಉತ್ಪಾದಿಸುತ್ತದೆ.
* ಅಧಿಕ ನ್ಯೂರೋ ಟ್ರಾನ್ಸ್‌ಮಿಟರ್‌ನಿಂದಾಗಿ ಅತ್ಯಧಿಕ ಸಂವೇದನಾ ಪ್ರಚೋದನೆ ಮತ್ತು ನರಕೋಶಗಳಲ್ಲಿ ಭಾರಿ ಪ್ರಮಾಣದ ಉದ್ರೇಕ ಸೃಷ್ಟಿ ಆಗುತ್ತದೆ. ಇದರಿಂದ ಒಮ್ಮೆಗೆ ಬಹುಯೋಚನೆಗಳು ಹೊಮ್ಮುತ್ತವೆ. ಗ್ರಹಿಕೆಯಲ್ಲೂ ವ್ಯತ್ಯಯ ಉಂಟಾಗುತ್ತದೆ.
* ಮನಸ್ಸಿಗೆ ಆಗುವ ಆಳವಾದ ಘಾಸಿಯಿಂದಲೂ ತುತ್ತಾಗುತ್ತದೆ ಉದಾ; ಕುಟುಂಬದ ಸದಸ್ಯನ ಸಾವಿನಿಂದ, ಆರ್ಥಿಕ ನಷ್ಟ, ಪ್ರೇಮ ವೈಫಲ್ಯ, ಉದ್ಯೋಗ ಕಳೆದುಕೊಳ್ಳುವುದು ಇತ್ಯಾದಿ.
*  ವಂಶವಾಹಿಯಿಂದಲೂ ಬರುವ ಸಾಧ್ಯತೆ.

ಯಾವ ಆಸನಗಳು ಉಪಯುಕ್ತ

 ಭುಜಂಗಾಸನ

ಶಲಭಾಸನ

 ವಕ್ರಾಸನ

 ಮತ್ಸ್ಯಾಸನ

 ಧ್ಯಾನ

‘ಓಂ’ ಪಠಿಸಿದರೆ ಮನಸ್ಸು ಶಾಂತ

‘ಓಂ’ ಅನ್ನು ನಿರಂತರವಾಗಿ ಪಠಿಸುವುದರಿಂದ ಕಿವಿಯಲ್ಲಿ ಒಂದು ಬಗೆಯ ಕಂಪನ ಉಂಟಾಗುತ್ತದೆ. ಈ ಕಂಪನವು ದೇಹದಲ್ಲಿರುವ ವೆಗಸ್‌ ಎಂಬ ನರವನ್ನು ಪ್ರಚೋದಿಸುತ್ತದೆ. ಇದು ಮಿದುಳಿನಲ್ಲಿರುವ  ಕೋಪ, ಬೇಜಾರು ಮುಂತಾದ  ಸಂವೇದನೆಗಳನ್ನು ಪ್ರಚೋದಿಸುವ  ಭಾಗವನ್ನು ತಣಿಸುತ್ತದೆ.  ಎಂಆರ್‌ಐ( ಮ್ಯಾಗ್ನೆಟಿಕ್‌ ರಿಸೊನಾನ್ಸ್ ಇಮೇಜಿಂಗ್‌) ಸ್ಕ್ಯಾನಿಂಗ್‌ ಮೂಲಕ ಇದು ನಿರೂಪಿತಗೊಂಡಿದೆ ಎಂದು ಡಾ|| ಶಿವರಾಮ ತಿಳಿಸಿದರು.

‘ಯೋಗ, ಧ್ಯಾನವನ್ನು ಧರ್ಮದ ಭಾಗ ಎಂದು ತಿಳಿಯಬಾರದು. ಇದರ ಪ್ರಯೋಜನ ಅಪಾರ’
ಡಾ. ಶಿವರಾಮ ವಾರಂಬಳ್ಳಿ
ಮನೋವಿಜ್ಞಾನಿ, ನಿಮ್ಹಾನ್ಸ್‌

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT