ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಎದುರಾಗಲಿದೆ ನೀರಿನ ಬಿಕ್ಕಟ್ಟು

ಐಐಎಸ್‌ಸಿ ಸಂಶೋಧಕರ ಅಧ್ಯಯನದಿಂದ ಬಹಿರಂಗ
Last Updated 1 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರ ಶೀಘ್ರದಲ್ಲಿ ನೀರಿನ ಕೊರತೆ ವಿಷಮಸ್ಥಿತಿ ತಲುಪಲಿದೆ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನೀರಿಗಾಗಿ ಹಾಹಾಕಾರ ಶುರುವಾಗಲಿದೆ’ ಎಂಬ ಅಂಶ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಂಶೋಧಕರ ಅಧ್ಯಯನದಿಂದ  ಬೆಳಕಿಗೆ ಬಂದಿದೆ.

‘ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದೆ. ಪರಿಸ್ಥಿತಿ ಹೀಗಿದ್ದರೂ ನಗರದಲ್ಲಿ ನೀರಿನ ಸೋರಿಕೆ ತಡೆಯುವ ಪ್ರಯತ್ನಗಳು ನಡೆಯುತ್ತಿಲ್ಲ. ಜನರು ನೀರನ್ನು ವಿವೇಚನೆ ರಹಿತವಾಗಿ ಬಳಸುತ್ತಿದ್ದಾರೆ. ಇದು ನಗರದಲ್ಲಿ ನೀರಿನ ತೀವ್ರ ಅಭಾವಕ್ಕೆ ಕಾರಣವಾಗಲಿದೆ’ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

‘ಈ ವರ್ಷ ಜುಲೈ ತಿಂಗಳಲ್ಲಿ ನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದರೂ ನೀರಿನ ಬಿಕ್ಕಟ್ಟು ಮಾತ್ರ ತಪ್ಪುವುದಿಲ್ಲ. ಇದಕ್ಕೆ ಮಂಡಳಿ ಸರಿಯಾದ ಯೋಜನೆ ರೂಪಿಸದಿರುವುದು ಮತ್ತು  ಇರುವ ನಿಯಮಗಳನ್ನು ಪರಿಣಾಮಕಾರಿ ಜಾರಿಗೊಳಿಸದಿರುವುದೇ ಕಾರಣ’ ಎನ್ನುತ್್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಟಿ.ವಿ. ರಾಮಚಂದ್ರ.

‘ನಗರದಲ್ಲಿ 9.15 ಲಕ್ಷ ಜನರು ನೀರಿನ ಸಂಪರ್ಕ ಪಡೆದಿದ್ದಾರೆ. ಮಂಡಳಿ ಅಂದಾಜಿನ ಪ್ರಕಾರ ಸುಮಾರು 1.4 ಲಕ್ಷ ಜನರು ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಬೇಕಾಗಿತ್ತು. ಆದರೆ ಕೇವಲ 62 ಸಾವಿರ ಮನೆಗಳಲ್ಲಿ ಮಾತ್ರ ಈ ವ್ಯವಸ್ಥೆ ಇದೆ ’ ಎಂದು  ಹೇಳಿದರು.

‘ನಗರದಲ್ಲಿ ವಾರ್ಷಿಕ 750–800 ಮಿ.ಮಿ ಮಳೆ ಆಗುತ್ತದೆ. ಇಲ್ಲಿನ ಕೆರೆಗಳಲ್ಲಿ  ಕೇವಲ 35 ಟಿಎಂಸಿ ಅಡಿ ನೀರು ಮಾತ್ರ ಶೇಖರವಾಗುತ್ತದೆ. ಇದರಲ್ಲಿ ಶೇ 90ರಷ್ಟು ಚರಂಡಿ ನೀರು ಇರುತ್ತದೆ’

‘ಜಲ ಮಂಡಳಿ ಪ್ರತಿದಿನ 1,400 ಎಂಎಲ್‌ಡಿ ನೀರನ್ನು ನಗರಕ್ಕೆ ಪೂರೈಸುತ್ತದೆ. ಇದರಲ್ಲಿ ಸುಮಾರು 100 ಎಂಎಲ್‌ಡಿ ನೀರು ಲೆಕ್ಕಕ್ಕೆ ಸಿಗದೆ ಪೋಲಾಗುತ್ತಿದೆ. ಬೆಂಗಳೂರಿಗರು ಬಳಸುವ ಶೇ 70ರಷ್ಟು ನೀರು ವ್ಯರ್ಥವಾಗಿ ಚರಂಡಿಗೆ ಸೇರುತ್ತಿದೆ. ದಿನವೊಂದಕ್ಕೆ 15 ಟಿಎಂಸಿ ಅಡಿ ಚರಂಡಿ ನೀರು ಉತ್ಪಾದನೆ ಆಗುತ್ತದೆ’ ಎಂದು ಅಧ್ಯಯನ ಬಹಿರಂಗಪಡಿಸಿದೆ.

ಕೆರೆಗಳ ನೀರಿನ ಗುಣಮಟ್ಟದ ಕುರಿತಾಗಿಯೂ ಸಂಶೋಧಕರು ಅಧ್ಯಯನ ನಡೆಸಿದ್ದು, ‘ಶೇ 79ರಷ್ಟು ನಗರದ ಕೆರೆಗಳು ‘ಇ’ ವರ್ಗಕ್ಕೆ (ವ್ಯವಸಾಯ, ಕೈಗಾರಿಕೆ, ತ್ಯಾಜ್ಯದ ನಿಯಂತ್ರಿತ ವಿಲೇವಾರಿಗೆ ಬಳಸುವುದು) ಸೇರುತ್ತವೆ. ಬಾಕಿ ಉಳಿದ ಶೇ 29ರಷ್ಟು ಕೆರೆಗಳು ವರ್ಗ ‘ಡಿ’ ಮತ್ತು ‘ಇ’ಗೆ (ವನ್ಯಜೀವಿ ಮತ್ತು ಮೀನುಗಾರಿಕೆಗೆ ಬಳಸುವ) ಸೇರುತ್ತವೆ’ ಎಂದರು.

‘ಅಲ್ಲದೆ, ನಗರದಲ್ಲಿ ಶೇ 88ರಷ್ಟು ಹಸಿರು ನಾಶವಾಗಿದೆ. ಶೇ 79ರಷ್ಟು ನೀರಿನ ಮೂಲಗಳು ಮರೆಯಾಗಿವೆ. 1970 ರಿಂದ 2006ರವರೆಗೆ ಶೇ 92.5ರಷ್ಟು ಕಾಂಕ್ರೀಟ್‌ ನೆಲೆಗಳು ವೃದ್ಧಿಸಿವೆ’ ಎಂಬ ಬಗ್ಗೆಯೂ ಅಧ್ಯಯನ ವರದಿ ಬೆಳಕು ಚೆಲ್ಲುತ್ತದೆ.  

ನ್ಯಾಯೋಚಿತ ಬಳಕೆಯೇ ಪರಿಹಾರ: ‘ನ್ಯಾಯೋಚಿತವಾಗಿ ನೀರಿನ ಬಳಕೆ ಮಾಡದಿದ್ದರೆ, ಎಲ್ಲಾ ಮನೆಗಳಲ್ಲಿಯೂ ಮಳೆನೀರು ಸಂಗ್ರಹ ಕಟ್ಟುನಿಟ್ಟಾಗಿ ಜಾರಿಯಾಗದಿದ್ದರೆ, ಕೆರೆಗಳ ಒಳ ಸಂಪರ್ಕ ಮತ್ತು ತೂಬುಗಳ ಪುನರ್‌ಸ್ಥಾಪನೆ ಮಾಡದ ಹೊರತು ನೀರಿನ ಬಿಕ್ಕಟ್ಟು ನಗರವನ್ನು ಕಾಡಲಿದೆ’ ಎಂದು ಪ್ರೊ. ರಾಮಚಂದ್ರ ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT