ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್‌ನಲ್ಲಿ ಕನ್ನಡಿಗರ ಸವಾಲು

Last Updated 6 ನವೆಂಬರ್ 2016, 19:30 IST
ಅಕ್ಷರ ಗಾತ್ರ

ದಶಕಗಳ ನಂತರ ಉತ್ತರ ಕರ್ನಾಟಕದ ಕುಸ್ತಿಯಲ್ಲಿ ಹೊಸ ಬೆಳಕು ಮೂಡಿದೆ. ಮಹತ್ವದ ಅಂತರರಾಷ್ಟ್ರೀಯ ಸ್ಪರ್ಧೆಗೆ ಈ ಭಾಗದಿಂದ ಇಬ್ಬರು ಪೈಲ್ವಾನರನ್ನು ಕಳುಹಿಸಿಕೊಟ್ಟ ಕೃತಾರ್ಥ ಭಾವ ಇಲ್ಲಿನ ಕುಸ್ತಿ ಕ್ಷೇತ್ರದವರನ್ನು ರೋಮಾಂಚನಗೊಳಿಸಿದೆ. ಸಿಂಗಪುರದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಬಾಗಲಕೋಟೆ ಜಿಲ್ಲೆ ಮುಧೋಳದ ಸಂದೀಪ ಕಾಟೆ ಮತ್ತು ಧಾರವಾಡ ತಾಲ್ಲೂಕು ಶಿಂಗನಹಳ್ಳಿಯ ರಫೀಕ್ ಹೊಳಿ ಉತ್ತರ ಕರ್ನಾಟಕದ ಗರಡಿಗಳಲ್ಲೇ ಪಟ್ಟುಗಳನ್ನು ಹಾಕಿ ಬೆಳೆದವರು.

ತಲಾ ಮೂರು ಬಾರಿ ಅಂತರರಾಷ್ಟ್ರೀಯ ಸ್ಪರ್ಧೆಗಳಿಗಾಗಿ ಭಾರತದ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದ್ದ ಇವರಿಬ್ಬರ ಪೈಕಿ ರಫೀಕ್‌ಗೆ ಕಳೆದ ಬಾರಿ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ಗೆ ಬಾಗಿಲು ತೆರೆದಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಸ್ಪರ್ಧೆಗೆ ಹೋಗಲಾಗಲಿಲ್ಲ. ಈ ಬಾರಿ ಫ್ರೀ ಸ್ಟೈಲ್ ಕುಸ್ತಿಯ 74 ಕೆಜಿ ವಿಭಾಗದಲ್ಲಿ ಸಂದೀಪ ಕಾಟೆ ಮತ್ತು 71 ಕೆಜಿ ವಿಭಾಗದಲ್ಲಿ ರಫೀಕ್ ಪಾಲ್ಗೊಳ್ಳುತ್ತಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಮುಕ್ತ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಅನುಭವ ಇರುವ ರಫೀಕ್ ಮಹತ್ವದ ಕನಸು ಹೊತ್ತುಕೊಂಡು ಸಿಂಗಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದೇ ಮೊದಲ ಬಾರಿ ಮಹತ್ವದ ಚಾಂಪಿಯನ್‌ಷಿಪ್‌ಗೆ ತೆರಳಿರುವ ಸಂದೀಪ ಭರವಸೆಯ ಮೂಟೆಯನ್ನೇ ಹೊತ್ತುಕೊಂಡಿದ್ದಾರೆ.
1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಂ.ಆರ್.ಪಾಟೀಲ, 1974ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ತಂದುಕೊಟ್ಟ ಬೆಳಗಾವಿ ಜಿಲ್ಲೆ ಮೋದಗಿಯ ಶಿವಾಜಿ ಶಿಂಗಳೆ, 1973ರಲ್ಲಿ ಶ್ರೀಲಂಕಾದಲ್ಲಿ ನಡೆದ ವಿಶ್ವ ಸೈನಿಕರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಬೆಳಗಾವಿ ಜಿಲ್ಲೆ ಯಳ್ಳೂರಿನ ಯಲ್ಲಪ್ಪ ಪೋಟೆ, ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಹೆಸರು ಮಾಡಿದ್ದ ಜಮಖಂಡಿಯ ರತನ್‌ ಕುಮಾರ್‌ ಮಠಪತಿ, ಬೆಳಗಾವಿಯ ವಿನಾಯಕ ದಳವಿ, ಅಂತರರಾಷ್ಟ್ರೀಯ ಮುಕ್ತ ಕುಸ್ತಿಯಲ್ಲಿ ಪಾಲ್ಗೊಂಡ ಮಹೇಶ ದುಕ್ರೆ ಮುಂತಾದವರ ಸಾಲಿಗೆ ಈಗ ಈ ಇಬ್ಬರು ಗಮನ ಸೆಳೆದಿದ್ದಾರೆ.

ಮುಧೋಳ ಪಟ್ಟಣದಲ್ಲಿ ಬೆಳೆದ ಕಾಟೆ ಅವರ ಮನೆಯಲ್ಲಿ ಯಾರೂ ಕುಸ್ತಿಪಟುಗಳು ಇರಲಿಲ್ಲ. ಆದರೆ ಎಲ್ಲರೂ ಕುಸ್ತಿ ಆಸಕ್ತರೇ ಆಗಿದ್ದರು. ಮುಧೋಳ ಮತ್ತು ಜಮಖಂಡಿಯಲ್ಲಿ ಕುಸ್ತಿ ಜನಪ್ರಿಯ ಕ್ರೀಡೆ. ಹೀಗಾಗಿ ಸಂದೀಪ ಕಾಟೆ ಸಹಜವಾಗಿ ಆಸಕ್ತಿ ಬೆಳೆಸಿಕೊಂಡರು. ತಂದೆ ಮತ್ತು ಇಬ್ಬರು ಅಣ್ಣಂದಿರು ಹೊಲದ ಕಡೆಗೆ ಹೆಜ್ಜೆ ಹಾಕಿದಾಗ ಸಂದೀಪ ಹೋಗುತ್ತಿದ್ದದ್ದು ಪಟ್ಟಣದ ಹನುಮಾನ್ ವ್ಯಾಯಾಮ ಶಾಲೆಗೆ. ವಯಸ್ಸು 12 ಆದಾಗಲೇ ಕುಸ್ತಿಯ ಪಟ್ಟುಗಳನ್ನು ಕಲಿತ ಅವರು ಏಳನೇ ತರಗತಿಗೆ ಕಾಲಿಡುತ್ತಿದ್ದಂತೆ ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ವಸತಿ ನಿಲಯ ಸೇರಿ ಕುಸ್ತಿ ಅಭ್ಯಾಸ ಮಾಡಿದರು. ಶಂಕರಪ್ಪ ಮತ್ತು ಶ್ರೀನಿವಾಸ ಗೌಡ ಅವರ ಗರಡಿಯಲ್ಲಿ ಅವರಿಗೆ ಉತ್ತಮ ತರಬೇತಿ ಲಭಿಸಿತು. ಎಂಟು ವರ್ಷ ಧಾರವಾಡದಲ್ಲಿ ಕಳೆದ ಕಾಟೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಹೊಳೆ ಆಲೂರು ಕಲ್ಮೇಶ್ವರ ಕಾಲೇಜು ಸೇರಿದರು. ಪದವಿ ಕಲಿಯಲು ವಾಪಸ್‌ ಧಾರವಾಡಕ್ಕೆ ಬಂದರು.

ಜೆ.ಎಸ್.ಎಸ್ ಕಾಲೇಜಿನಲ್ಲಿ ಜಿನ್ನಪ್ಪ ಅವರ ಜೊತೆಗೂಡಿದಾಗ ಕುಸ್ತಿ ಸಂಸ್ಕಾರ ಹೆಚ್ಚಿತು. ನಂತರ ಮುಂಬೈನ ಸಾಯ್‌ ಕೇಂದ್ರಕ್ಕೆ ತೆರಳಿದರು. ಕಳೆದ ಬಾರಿ ಪಶ್ಚಿಮ ರೈಲ್ವೆಯಲ್ಲಿ ಉದ್ಯೋಗ ಗಳಿಸಿದ ನಂತರವೂ ಕಠಿಣ ಅಭ್ಯಾಸ ಮುಂದುವರಿಯಿತು. ಇದರ ಪರಿಣಾಮ ಈಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವಾಗಿ ಮಾರ್ಪಾಡು ಹೊಂದಿದೆ. ಜೂನಿಯರ್ ಮತ್ತು ಸಬ್‌ ಜೂನಿಯರ್‌ ವಿಭಾಗಗಳಲ್ಲಿ ಒಟ್ಟು ಐದು ರಾಷ್ಟ್ರೀಯ ಪದಕಗಳನ್ನು ಹೊಂದಿರುವ ಕಾಟೆ ರಾಜ್ಯದಲ್ಲಿ ನಡೆಯುವ ಕುಸ್ತಿ ಚಾಂಪಿಯನ್‌ಷಿಪ್‌ಗಳಲ್ಲಿ ತೀರಾ ಪರಿಚಿತ ಹೆಸರು. ಜಮಖಂಡಿಯಲ್ಲಿ ‘ಹಿಂದ್ ಕೇಸರಿ’ಯಾಗಿಯೂ ಹೆಸರು ಮಾಡಿದ್ದಾರೆ. ಮೈಸೂರು ದಸರಾ ಸೇರಿದಂತೆ ವಿವಿಧ ಚಾಂಪಿಯನ್‌ಷಿಪ್‌ನಲ್ಲಿ ‘ಕೇಸರಿ’ಯಾಗಿ ಕಾದಾಡಿದ್ದಾರೆ.

‘ಡಬಲ್ ಲೆಗ್‌ ದಾಳಿ’ಗೆ ಹೆಸರಾಗಿರುವ ಸಂದೀಪ ಸಿಂಗಪುರ ಪ್ರಯಾಣದ ಸಿದ್ಧತೆ ನಡುವೆ ‘ಪ್ರಜಾವಾಣಿ’ ಜೊತೆ ಮಾತನಾಡಿ ಸಣ್ಣಂದಿನಲ್ಲಿ ಕುಸ್ತಿ ಅಭ್ಯಾಸ ಮಾಡಲು ಮನೆ ಮಂದಿ ಅವಕಾಶ ಮಾಡಿಕೊಟ್ಟದ್ದು ನನಗೆ ಸಾಧನೆ ಮಾಡಲು ಪ್ರೇರಣೆಯಾಯಿತು. ತಕ್ಕ ಸಮಯಕ್ಕೆ ಸರಿಯಾದ ತರಬೇತುದಾರರು ಲಭಿಸಿದ್ದು ಬದುಕಿನಲ್ಲಿ ಸಾಕಷ್ಟು ತಿರುವುಗಳು ಉಂಟಾಗಲು ಕಾರಣವಾಯಿತು’ ಎಂದರು.
*
ಇದು ಸಂತಸ, ಸಂಭ್ರಮದ ಕ್ಷಣ
ಅಂತರರಾಷ್ಟ್ರೀಯ ಮಟ್ಟದ ಮಹತ್ವದ ಸ್ಪರ್ಧೆಗೆ ಉತ್ತರ ಕರ್ನಾಟಕದ ಇಬ್ಬರು ಏಕಕಾಲದಲ್ಲಿ ಹೋಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ಹರಿಯಾಣ, ಪಂಜಾಬ್ ಮತ್ತು ದೆಹಲಿಯಲ್ಲಿ ಮಾತ್ರ ಕುಸ್ತಿ ಕಲಿಗಳು ಇದ್ದಾರೆ ಎಂದು ನಂಬಿರುವವರು ಈಗ ಕರ್ನಾಟಕದ ಕಡೆಗೆ, ಅದರಲ್ಲೂ ಉತ್ತರ ಕರ್ನಾಟಕದ ಕಡೆಗೆ ನೋಟ ಬೀರುವಂತೆ ಆಗಿದೆ. ಬಡತನ ಮೆಟ್ಟಿ ನಿಂತು ಅಭ್ಯಾಸ ಮಾಡಿದವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಸಂತಸದ ಸಂಗತಿ.
–ರತನ್ ಕುಮಾರ್ ಮಠಪತಿ
ಮಾಜಿ ಅಂತರರಾಷ್ಟ್ರೀಯ ಕುಸ್ತಿಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT