ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರಾವತಿ ನೀರಿಗೆ ಸಮುದ್ರದಲ್ಲಿ ಜಲಾಶಯ

ಇಡೀ ರಾಜ್ಯಕ್ಕೆ ಕುಡಿಯುವ ನೀರು ಯೋಜನೆ
Last Updated 6 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೇತ್ರಾವತಿ ನದಿ ಅರಬ್ಬಿ ಸಮುದ್ರ ಸೇರುವ ಜಾಗದಲ್ಲಿ ಅಥವಾ ಸಮುದ್ರದೊಳಗೇ ಅಣೆಕಟ್ಟು ನಿರ್ಮಿಸಿ, ಅಪಾರ ಪ್ರಮಾಣದಲ್ಲಿ  ಸಿಹಿ ನೀರು ಸಂಗ್ರಹಿಸಿ ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯಕ್ಕೆ ಪೂರೈಕೆ ಮಾಡಬಹುದು.

ಇಂತಹದೊಂದು ವಿಶಿಷ್ಟ ಯೋಜನೆಯೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿಜ್ಞಾನಿ ಪ್ರೊ. ಟಿ.ಜಿ.ಸೀತಾರಾಮ್‌ ಅವರು ರೂಪಿಸಿದ್ದಾರೆ.

ಟಿ.ಜಿ.ಸೀತಾರಾಮ್‌ ಅವರು ಈ  ಕುರಿತು ಯೋಜನಾ ವರದಿಯೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ.

ಯೋಜನೆಯ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸೀತಾರಾಮ್‌, ‘ಕಡಿಮೆ ಖರ್ಚಿನಲ್ಲಿ ಅನುಷ್ಠಾನಗೊಳಿಸಬಹುದಾ ವಿಶಿಷ್ಟ ಯೋಜನೆ ಇದು.  ವಿಶ್ವದ ಹಲವು ರಾಷ್ಟ್ರಗಳಲ್ಲಿ ಯಶಸ್ವಿ ಆಗಿರುವ ಯೋಜನೆಯೂ ಹೌದು. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅತ್ಯುತ್ತಮವಾದ ಪರ್ಯಾಯ ಯೋಜನೆ ಇದಾಗಿದೆ’.

‘ಕುಡಿಯುವ ನೀರಿಗಾಗಿ ನೆರೆಯ ರಾಜ್ಯಗಳ ಜೊತೆ ಕದನ, ಜಿಲ್ಲೆ–ಜಿಲ್ಲೆಗಳ ನಡುವೆ ಕಿತ್ತಾಟ ನಡೆಯುತ್ತಿರುವಾಗ ಹೊಸ ಯೋಜನೆ ಕರ್ನಾಟಕದ ಪಾಲಿಗೆ ಆಶಾಕಿರಣವಾಗಿದೆ’ ಎಂದರು.

ತಾಂತ್ರಿಕ ವಿವರ: ‘ಮಳೆಗಾಲದ ನಾಲ್ಕು ತಿಂಗಳಲ್ಲಿ ನೇತ್ರಾವತಿ ನದಿ ಮತ್ತು  ಉಪನದಿಗಳಿಂದ 123 ಟಿಎಂಸಿ ಅಡಿ ನೀರು ಅರಬ್ಬಿ ಸಮುದ್ರ ಸೇರುತ್ತದೆ. ಇದ ಲ್ಲದೇ, ಪಶ್ಚಿಮ ವಾಹಿನಿಯಾಗಿ ಹರಿ ಯುವ  13 ಉಪ ನದಿಗಳಿಂದ ರಾಜ್ಯ ದಲ್ಲಿ ಸಮುದ್ರಕ್ಕೆ ಸೇರುವ ನೀರು 2,200 ಟಿಎಂಸಿ ಅಡಿಗಳು. ಹೀಗಾಗಿ ರಾಜ್ಯದಲ್ಲಿ  ಕುಡಿಯುವ ನೀರಿನ ಕೊರತೆ ಇದೆ ಎಂಬುದನ್ನು  ಒಪ್ಪಲಾಗದು. ಇರುವ ನೀರನ್ನೇ ಸಮರ್ಪಕವಾಗಿ ಬಳಸಿಕೊ ಳ್ಳಲು ಯೋಜನೆ ರೂಪಿಸಿಕೊಳ್ಳುವ ಇಚ್ಛಾಶಕ್ತಿ ತೋರಿಸಿದರೆ ಸಾಕು’ ಎಂಬ ಖಚಿತ ನಿಲುವು ಅವರದು.

‘ಕುಡಿಯುವ ನೀರಿನ ಕೊರತೆ ನೀಗಿಸಲು ಅತ್ಯುತ್ತಮ ಪರಿಹಾರ ವೆಂದರೆ, ಸಮುದ್ರಕ್ಕೆ ಹರಿದುಹೋಗುವ ನದಿಯ ಪ್ರವಾಹದ ನೀರನ್ನು ಸಮುದ್ರದ ತಟದಲ್ಲೇ ಅಣೆಕಟ್ಟು ನಿರ್ಮಿಸಿ ಸಂಗ್ರಹಿಸುವುದು.  ಇದರ ಉಪಯೋಗ ಹಲವು. ಅಣೆಕಟ್ಟು ನಿರ್ಮಿಸಲು ಭೂಮಿ ಬೇಕಿಲ್ಲ, ಹಿನ್ನೀರಿನ ಸಮಸ್ಯೆಯೂ ಇಲ್ಲ, ಪರಿಸರ ನಾಶವೂ ಆಗುವುದಿಲ್ಲ. ಶುದ್ಧ ನೀರನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮೇಲೆತ್ತಿ ಪೂರೈಸಬಹುದು’ ಎಂದರು.

‘ಸಮುದ್ರದಲ್ಲೇ ಅಣೆಕಟ್ಟು ನಿರ್ಮಿಸಿ ನದಿ ನೀರು ಸಂಗ್ರಹಿಸುವುದರಿಂದ ಉಪ್ಪು ನೀರು ಸೇರುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಸಿಹಿನೀರಿನಿಂದ ಉಪ್ಪು ನೀರನ್ನು ಪ್ರತ್ಯೇಕಿಸಲು  ಬ್ರೇಕ್‌ ವಾಟರ್‌ ಮಾದರಿಯ ಬೃಹತ್‌ ತಡೆಗೋಡೆ ನಿರ್ಮಿಸಬೇಕಾಗುತ್ತದೆ. ಇದರ ಒಳಗೆ ಜಿಯೋಸಿಂಥೆಟಿಕ್‌ ಲೈನರ್‌ ಹಾಕಲಾಗುತ್ತದೆ. ಜೊತೆಗೆ  ಜಿಯೋಮೆಂಬ್ರೇನ್‌ ಅಳವಡಿಸುವುದರಿಂದ ಸಿಹಿ ನೀರಿಗೆ ಉಪ್ಪು ನೀರು ಸೇರುವುದಿಲ್ಲ. ಸಮುದ್ರ ನೀರಿನ ಸಾಂದ್ರತೆ ಅಧಿಕವಾಗಿರುವುದರಿಂದ  ಮತ್ತು  ಸಮುದ್ರದೊಳಗೆ ಇಳಿಜಾರು ಇರುವುದರಿಂದ ಉಪ್ಪುನೀರು ಅಣೆಕಟ್ಟು ಪಾರಾಗಿ ಜಲಾಶಯದೊಳಗೆ ಬರುವ ಸಾಧ್ಯತೆ ತೀರಾ ಕಡಿಮೆ’ ಎಂಬ ಅಭಿಪ್ರಾಯ ಸೀತಾರಾಮ್‌ ಅವರದು.

ಜಲಾಶಯದಲ್ಲಿ ವರ್ಷವಿಡೀ ಸಿಹಿ ನೀರನ್ನು ಸಂಗ್ರಹಿಸಿಡಬಹುದು. 85 ಟಿಎಂಸಿ ಅಡಿ ನೀರು ಸಂಗ್ರಹಿಸಿದರೆ ಬೆಂಗಳೂರು ಮಾತ್ರವಲ್ಲದೆ, ಇಡೀ ರಾಜ್ಯಕ್ಕೆ ಕುಡಿಯುವ ಉದ್ದೇಶಕ್ಕೆ ಬಳಸಬಹುದು. ಕುಡಿಯುವ ನೀರಿಗಾಗಿ ತಮಿಳುನಾಡು, ಗೋವಾ ರಾಜ್ಯಗಳ ಮುಂದೆ ಗೋಗರೆಯುವ ಅಗತ್ಯವೇ ಇರುವುದಿಲ್ಲ. ಅಲ್ಲದೆ, ಕರಾವಳಿಯ 1,900 ಹೆಕ್ಟೇರ್‌ಗೆ ಭೂಮಿಗೆ ನೀರಾವರಿ ಉದ್ದೇಶಕ್ಕೂ ಇದೇ ನೀರನ್ನು ಬಳಸಬಹುದಾಗಿದೆ ಎಂದು ವಿವರಿಸಿದರು.

ಮಂಗಳೂರು ನಗರದ ಹೊರಗೆ ನೇತ್ರಾವತಿ, ಕುಮಾರಧಾರಾ ಮತ್ತು ಗುರುಪುರ ನದಿಗಳು ಅರಬ್ಬಿ ಸಮುದ್ರವನ್ನು ಸೇರುತ್ತವೆ. ಹೀಗೆ ನದಿ ಸೇರುವ ಜಾಗದಲ್ಲಿ ಸಮುದ್ರದ ನೀರು ಪ್ರತ್ಯೇಕಿಸಲು 500 ಮೀಟರ್‌ ಅಗಲದ ಬ್ಯಾರೇಜ್‌ ನಿರ್ಮಿಸಬೇಕಾಗುತ್ತದೆ. ಈ ಬ್ಯಾರೇಜ್‌ ಉಪ್ಪು ನೀರು ಪ್ರವೇಶಿಸುವುದನ್ನು ತಡೆಯುವುದರ ಜೊತೆಗೆ ಸಮುದ್ರದ ಅಲೆಯನ್ನೂ ತಡೆಯುತ್ತದೆ.

ನಾಲ್ಕು ಬಗೆಯ ಯೋಜನೆ:
* ನೇತ್ರಾವತಿ, ಕುಮಾರಧಾರಾ ನದಿಗಳು ಸಮುದ್ರ ಸೇರುವ ಜಾಗದಲ್ಲಿ ಸಮುದ್ರ ತಡೆಗೋಡೆ ನಿರ್ಮಿಸಿ ಸಣ್ಣ ಅಣೆಕಟ್ಟು ನಿರ್ಮಿಸಿದರೆ 4 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು.
* ಅಥವಾ ಸಮುದ್ರದೊಳಗೇ ಸಮಾನಾಂತರವಾಗಿ 15 ಕಿ.ಮೀ ಉದ್ದದ ತಡೆಗೋಡೆಗಳನ್ನು ನಿರ್ಮಿಸಿ ಅದನ್ನು ಕೂಡಿಸುವ ಬ್ಯಾರೇಜ್‌ ನಿರ್ಮಿಸಬೇಕು.   100 ಟಿಎಂಸಿ ಅಡಿ ಪ್ರವಾಹದ ನೀರು ಸಂಗ್ರಹಿಸಲು ಸಾಧ್ಯವಿದೆ. ಮಳೆಗಾಲದಲ್ಲಿ ವಿಪರೀತ ಪ್ರವಾಹ ಉಂಟಾಗಿ ಅಣೆಕಟ್ಟು ತುಂಬಿದರೆ ಹೆಚ್ಚುವರಿ ನೀರನ್ನು ಕ್ರಸ್ಟ್‌ ಗೇಟ್‌ಗಳನ್ನು ತೆರೆದು ಸಮುದ್ರಕ್ಕೆ ಬಿಡಬಹುದು.
* ಸಮುದ್ರ ಸೇರುವ ಭಾಗದಿಂದ ತುಸು ದೂರದಲ್ಲಿ ಬ್ಯಾರೇಜ್‌ ನಿರ್ಮಿಸಿಯೂ ನದಿ ನೀರನ್ನು ಸಂಗ್ರಹಿಸಬಹುದು.
* ಸಂಪೂರ್ಣ ಸಮುದ್ರದ ಮಧ್ಯೆಯೇ ನೀರನ್ನು ಸಂಗ್ರಹಿಸಿಡಲು ಜಲಾಶಯ ನಿರ್ಮಿಸುವುದು. ನದಿ ನೀರನ್ನು ಅದರೊಳಗೇ ಸೇರುವಂತೆ ವ್ಯವಸ್ಥೆ ಮಾಡಬಹುದು.

ಬೆಂಗಳೂರು ನಗರ ಸಮುದ್ರ ಮಟ್ಟದಿಂದ ಸುಮಾರು 950 ಮೀಟರ್‌ ಎತ್ತರದಲ್ಲಿ ಇದೆ. ಸಮುದ್ರದ ಜಲಾಶಯದಿಂದ  ಪಂಪ್‌ ಮಾಡಿದ ನೀರನ್ನು ದೊಡ್ಡ ಕೊಳವೆಗಳ ಮೂಲಕ ಎತ್ತಿನ ಹೊಳೆ ಯೋಜನೆಗಾಗಿ ಸಕಲೇಶಪುರ ಬಳಿ ನಿರ್ಮಿಸುತ್ತಿರುವ ನೀರು ಪೂರೈಕೆ ಜಾಲಕ್ಕೆ ಸೇರಿಸಿದರೆ ಅಲ್ಲಿಂದ, ಹಾಸನ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರದವರೆಗೂ ಪೂರೈಸಬಹುದು.

ಎತ್ತಿನ ಹೊಳೆಯಲ್ಲಿ ನೀರಿನ ಇಳುವರಿ ತೀರಾ ಕಡಿಮೆ ಇದೆ ಎಂಬ ಅಭಿಪ್ರಾಯವೂ ಇದೆ. ಈ ಕಾರಣದಿಂದ  ಸಮುದ್ರದಲ್ಲಿ ಅಣೆಕಟ್ಟಿನಿಂದ ನೀರನ್ನು ಪಂಪ್‌ ಮಾಡಿ ಪೈಪ್‌ ಮೂಲಕ ಹಾಯಿಸಿ ತರಬಹುದು ಎನ್ನುತ್ತಾರೆ ಸೀತಾರಾಮ್‌.

ಅಣೆಕಟ್ಟು ನಿರ್ಮಾಣ ಹೇಗೆ?: ಸಮುದ್ರದ ತಟದಿಂದ 10–12 ಕಿ.ಮೀ ವ್ಯಾಪ್ತಿಯಲ್ಲಿ  ಸಮುದ್ರದ ಆಳ 20 ಮೀಟರ್‌ ಇದೆ. ನದಿ ಸಮುದ್ರ ಸೇರುವ ಜಾಗದಲ್ಲಿ ಆಳ 5 ರಿಂದ 6 ಮೀಟರ್‌ ಮಾತ್ರ. ಇಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಜಿಯೋ ಸಿಂಥೆಟಿಕ್‌ ಬಳಸಿಕೊಂಡು ಸಮುದ್ರ ತಡೆಗೋಡೆ ಮತ್ತು ಬ್ಯಾರೇಜ್‌ ಅನ್ನು ಅತ್ಯಂತ ತ್ವರಿತಗತಿಯಲ್ಲಿ ನಿರ್ಮಾಣ ಮಾಡುವ ಆಧುನಿಕ ತಂತ್ರಜ್ಞಾನ ಲಭ್ಯವಿದೆ.

ಈ ವಿಧಾನವು ಲವಣಮುಕ್ತ ನೀರು ಪಡೆಯುವ ತಂತ್ರಜ್ಞಾನಕ್ಕಿಂತ ಕಡಿಮೆ ವೆಚ್ಚದಲ್ಲಿಯೇ ನಿರ್ಮಿಸಬಹುದು ಎನ್ನುತ್ತಾರೆ.

ಎಷ್ಟು ವೆಚ್ಚವಾಗುತ್ತದೆ: 1 ಬಿಸಿಎಂ (ಬಿಲಿಯನ್‌ ಕ್ಯೂಬಿಕ್‌ ಮೀಟರ್‌) ನೀರು ಸಂಗ್ರಹಿಸಲು ₹ 1,500 ರಿಂದ ₹ 2,000 ಕೋಟಿ ವೆಚ್ಚವಾಗುತ್ತದೆ.

ತಲಾ 30 ಕಿಲೊ ಲೀಟರ್‌ ನೀರು ಪಂಪ್‌ ಮಾಡಲು ₹ 20 ವೆಚ್ಚವಾಗುತ್ತದೆ.

* ಚೀನಾ, ದಕ್ಷಿಣ ಕೊರಿಯಾ ಹಲವು ದೇಶಗಳಲ್ಲಿ ಇಂತಹ ಯೋಜನೆ ಯಶಸ್ವಿಯಾಗಿದೆ. ಭಾರತದಲ್ಲಿ ಅನುಷ್ಠಾನವಾದರೆ ರಾಜ್ಯಗಳ ಮಧ್ಯದ ಜಲವ್ಯಾಜ್ಯ ತಪ್ಪಿಸಬಹುದು.
- ಪ್ರೊ.ಟಿ.ಜಿ. ಸೀತಾರಾಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT