ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯಕ್ಕೆ ಕಂಗೆಟ್ಟ ದೆಹಲಿ

ದೆಹಲಿ ಶಾಲೆಗಳಿಗೆ ಮತ್ತೆ 3 ದಿನ ರಜೆ * ಸಮಸ್ಯೆ ಪರಿಹಾರಕ್ಕೆ ಹಲವು ಕ್ರಮ
Last Updated 6 ನವೆಂಬರ್ 2016, 20:29 IST
ಅಕ್ಷರ ಗಾತ್ರ

ನವದೆಹಲಿ: ದಟ್ಟ ಹೊಗೆ ಆವರಿಸಿ, ವಾಯು ಮಾಲಿನ್ಯದ ಪ್ರಮಾಣ ಇನ್ನೂ ಹೆಚ್ಚುತ್ತಲೇ ಇರುವುದರಿಂದ ಇಲ್ಲಿನ ಶಾಲೆಗಳಿಗೆ ಇನ್ನೂ ಮೂರು ದಿನ ರಜೆ ಘೋಷಿಸಲಾಗಿದೆ.

ಭಾನುವಾರ ನಡೆದ ತುರ್ತು ಸಂಪುಟ ಸಭೆಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಸಂಬಂಧ ಹಲವು ಕ್ರಮಗಳನ್ನು ಕೈಗೊಳ್ಳಲು ದೆಹಲಿ ಸರ್ಕಾರ ತೀರ್ಮಾನಿಸಿದೆ.

‘ದಟ್ಟಹೊಗೆಯ ದುಷ್ಪರಿಣಾಮಗಳಿಗೆ ಮಕ್ಕಳು ಸುಲಭವಾಗಿ ತುತ್ತಾಗುವುದರಿಂದ ಶಾಲೆಗಳಿಗೆ ಶನಿವಾರ ರಜೆ ನೀಡಲಾಗಿತ್ತು. ಈಗ ರಜೆಯನ್ನು ಬುಧವಾರದವರೆಗೂ ವಿಸ್ತರಿಸಲಾಗಿದೆ. ಮಕ್ಕಳು ಮನೆಯ ಒಳಗೇ ಇರುವಂತೆ ಪೋಷಕರು ಎಚ್ಚರಿಕೆ ವಹಿಸಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

‘ರಾಜಧಾನಿಯಲ್ಲಿ ಐದು ದಿನಗಳ ಕಾಲ ಎಲ್ಲಾ ಸ್ವರೂಪದ ನಿರ್ಮಾಣ ಕಾಮಗಾರಿಯ ಮೇಲೆ ನಿಷೇಧ ಹೇರಲಾಗಿದೆ. ಜತೆಗೆ ಯಾವುದೇ ಸ್ವರೂಪದ ತ್ಯಾಜ್ಯ ಸುಡುವುದನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಇಂತಹ ಚಟುವಟಿಕೆಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ಧೂಳಿನ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ಎಲ್ಲಾ ರಸ್ತೆಗಳ ಮೇಲೆ ನೀರು ಸಿಂಪಡಿಸಲಾಗುತ್ತದೆ. ‘ಸಮ ಮತ್ತು ಬೆಸ ನೋಂದಣಿ ಸಂಖ್ಯೆಯ ವಾಹನಗಳ ದಿನ ಬಿಟ್ಟು ದಿನ ಸಂಚಾರ’ ವ್ಯವಸ್ಥೆಯನ್ನು ಮತ್ತೆ ಜಾರಿ ಮಾಡುವ ಚಿಂತನೆ ಸರ್ಕಾರಕ್ಕಿದೆ. ತಜ್ಞರ ಅಭಿಪ್ರಾಯದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಕೃತಕ ಮಳೆ; ಕೇಂದ್ರದ ಜತೆ ಚರ್ಚೆ: ‘ವಾತಾವರಣದಲ್ಲಿ ಧೂಳು ಹೆಚ್ಚಿದ್ದಾಗ ಮಳೆ ಬಂದರೆ, ಧೂಳಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಹೀಗಾಗಿ ಮೋಡ ಬಿತ್ತನೆ ತಂತ್ರಜ್ಞಾನದ ಮೂಲಕ ಕೃತಕ ಮಳೆ ಬರಿಸಲು ಸಾಧ್ಯವೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಜತೆ ಚರ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಭದ್ರತಾ ಸಿಬ್ಬಂದಿಗೆ ಮುಖಗವಸು:  ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೊ ನಿಲ್ದಾಣಗಳು ಮತ್ತು ಸರ್ಕಾರಿ ಕಚೇರಿ ಕಟ್ಟಡಗಳ ಭದ್ರತೆಗೆ ನಿಯೋಜನೆ ಆಗಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸುಮಾರು ಏಳು ಸಾವಿರ ಯೋಧರಿಗೆ ಮುಖಗವಸು ನೀಡಲು ತೀರ್ಮಾನಿಸಲಾಗಿದೆ.

ರೋಗ ಉಲ್ಬಣ
ವಾಯು ಮಾಲಿನ್ಯ ಹೆಚ್ಚುತ್ತಿರುವುದರಿಂದ ದೆಹಲಿಯಲ್ಲಿ ಉಸಿರಾಟ ಸಂಬಂಧಿ ರೋಗಗಳಿಂದ ಬಳಲುವವರ ಸಂಖ್ಯೆಯಲ್ಲಿ  ದಿಢೀರ್‌ ಏರಿಕೆ ಕಂಡುಬಂದಿದೆ ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ.

ಈ ಹಿಂದೆ ಆಸ್ತಮಾ ಇದ್ದವರಲ್ಲಿ ಮತ್ತೆ ಆ ಸಮಸ್ಯೆ ಕಾಣಿಸಿಕೊಂಡಿದೆ.  ಎಲ್ಲಕ್ಕಿಂತ ಮುಖ್ಯವಾಗಿ ಶ್ವಾಸನಾಳ ಗಳು ಕಟ್ಟಿಕೊಂಡು ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಇದರಲ್ಲಿ ಮಕ್ಕಳು ಮತ್ತು ವೃದ್ಧರ ಸಂಖ್ಯೆಯೇ ಹೆಚ್ಚಿದೆ ಎಂದು ಇಲಾಖೆ ತಿಳಿಸಿದೆ.

ಕಾಣದ ತಾಜ್‌ ಮಹಲ್
ಆಗ್ರಾದಲ್ಲೂ ದಟ್ಟ ಹೊಗೆ ಮತ್ತು ಮಂಜು ಆವರಿಸಿರುವುದರಿಂದ ತಾಜ್‌ ಮಹಲ್ ಕಾಣದಂತಾಗಿದೆ. ಸಾಮಾನ್ಯವಾಗಿ ನವೆಂಬರ್‌ ತಿಂಗಳಿನಲ್ಲಿ ಈ ಪ್ರೇಮ ಸ್ಮಾರಕಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ.

ತಾಜ್‌ ಮಹಲ್ ಗೋಚರಿಸದ ಕಾರಣ ಬೇಸರದಿಂದ ಹಿಂದಿರುಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿಯಂತ್ರಣ ಕ್ರಮಗಳು

* ಐದು ದಿನ ನಿರ್ಮಾಣ ಕಾಮಗಾರಿ ನಿಷೇಧ: ಸಂಪುಟ ತೀರ್ಮಾನ

* ಧೂಳು ನಿಯಂತ್ರಿಸಲು ಕೃತಕ ಮಳೆ ಬರಿಸುವ ಸಾಧ್ಯತೆ ಬಗ್ಗೆ ಪರಿಶೀಲನೆ
* ಬದರಪುರ ವಿದ್ಯುತ್‌ ಸ್ಥಾವರದ ಹಾರುಬೂದಿ ಮಾಲಿನ್ಯ ಹೆಚ್ಚಲು ಒಂದು ಕಾರಣ
* ಮುಂದಿನ 10 ದಿನ ವಿದ್ಯುತ್‌ ಸ್ಥಾವರ ಬಂದ್‌, ಹಾರು ಬೂದಿ ಮೇಲೆ ನೀರು ಚಿಮುಕಿಸಲು ಕ್ರಮ
* ಸರಿ ಬೆಸ ನೋಂದಣಿ ಸಂಖ್ಯೆ ವಾಹನಗಳಿಗೆ ದಿನ ಬಿಟ್ಟು ದಿನ ಸಂಚಾರಕ್ಕೆ ಅವಕಾಶ  ಯೋಜನೆ ಪುನರಾರಂಭಕ್ಕೆ ಚಿಂತನೆ
* ಡೀಸೆಲ್‌ ಜನರೇಟರ್‌ಗಳಿಂದಾಗುವ ಮಾಲಿನ್ಯ ತಪ್ಪಿಸಲು ಅನಧಿಕೃತ ಕಾಲನಿಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ನಿರ್ಧಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT