ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಜನಸಂಖ್ಯೆ 2 ಕೋಟಿಗೆ ಹೆಚ್ಚುವ ನಿರೀಕ್ಷೆ

Last Updated 7 ನವೆಂಬರ್ 2016, 20:05 IST
ಅಕ್ಷರ ಗಾತ್ರ

ಬೆಂಗಳೂರು: 2031ರವರೆಗಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗುತ್ತಿರುವ ನಗರ ಮಹಾ ಯೋಜನೆ (ಸಿಡಿಪಿ) ಬಗ್ಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಸೋಮವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ  (ಬಿಡಿಎ) ಅಧಿಕಾರಿಗಳ ಜೊತೆ ಸಭೆ ನಡೆಸಿದರು.

2013ರವರೆಗೆ ನಗರದ  ಜನಸಂಖ್ಯೆ  ಪರಿಸ್ಥಿತಿ  ಹಾಗೂ  ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಸಚಿವರು ಸಮಾಲೋಚನೆ ನಡೆಸಿದರು.

2031ರ ವೇಳೆಗೆ ನಗರದ ಜನಸಂಖ್ಯೆ 2 ಕೋಟಿಗೆ ತಲುಪುವ ನಿರೀಕ್ಷೆ ಇದೆ. ಇಷ್ಟೊಂದು ಜನಸಂಖ್ಯೆಗೆ ವಾರ್ಷಿಕ 50 ಟಿಎಂಸಿ ಅಡಿಗಳಷ್ಟು ನೀರಿನ ಅಗತ್ಯ ಬೀಳಬಹುದು. ಜನಸಂಖ್ಯೆಗೆ ಪೂರಕವಾಗಿ ರಸ್ತೆ, ಸಾರಿಗೆ  ಸಂಪರ್ಕ ರೂಪಿಸಬೇಕಾದ ಅಗತ್ಯವಿದೆ ಎಂದು ಅಧಿಕಾರಿಗಳು ವಿವರಿಸಿದರು.

‘ಘನತ್ಯಾಜ್ಯ ಉತ್ಪಾದನೆಯೂ ಗಣನೀಯವಾಗಿ ಹೆಚ್ಚಲಿದೆ. ನಗರದಲ್ಲಿ ಪ್ರಸ್ತುತ  ನಿತ್ಯ ಸರಾಸರಿ 4 ಸಾವಿರ ಟನ್‌ ಕಸ ಉತ್ಪಾದನೆ ಆಗುತ್ತಿದೆ. 2031ರ ವೇಳೆಗೆ ಈ ಪ್ರಮಾಣವು 18 ಸಾವಿರ ಟನ್‌ಗಳಿಗೆ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಇದರ ವಿಲೇವಾರಿಗೆ ಸೂಕ್ತ ಮೂಲಸೌಕರ್ಯ ಹೊಂದಬೇಕಾದ ಅಗತ್ಯವಿದೆ’ ಎಂದರು.

ಸಚಿವರು, ಹೆಣ್ಣೂರು ಮೇಲ್ಸೇತುವೆ ಕಾಮಗಾರಿ ಹಾಗೂ ಮಲ್ಲತ್ತಹಳ್ಳಿ ಕೆರೆ ಅಭಿವೃದ್ಧಿಯ  ಪ್ರಗತಿ ಪರಿಶೀಲಿಸಿದರು. ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ಬಿಡಿಎ ನಗರ ಯೋಜನೆ ಸದಸ್ಯ ಏಜಾಜ್‌ ಅಹ್ಮದ್‌ ಉಪಸ್ಥಿತರಿದ್ದರು.

ಸಚಿವರಿಂದ ಇಲಾಖೆವಾರು ಪ್ರಗತಿ ಪರಿಶೀಲನೆ

ಸಚಿವ ಜಾರ್ಜ್‌ ಅವರು ಸೋಮವಾರ ಬೆಂಗಳೂರು ನಗರ  ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸರ್ಕಾರಿ ಜಮೀನು ಒತ್ತುವರಿ ತೆರವು, ಅಕ್ರಮ ಸಕ್ರಮ ಸಂಬಂಧ 94 ಸಿ ಮತ್ತು 94ಸಿಸಿ ಅರ್ಜಿಗಳ ವಿಲೇವಾರಿ, ಸಾಮಾಜಿಕ ಭದ್ರತಾ ಯೋಜನೆ ಅನುಷ್ಠಾನ, ಪೋಡಿ, ಪಿಂಚಣಿ ಹಾಗೂ ಕಂದಾಯ ಅದಾಲತ್‌ನಲ್ಲಿ ಆಗಿರುವ ಪ್ರಗತಿ ಬಗ್ಗೆ ಸಚಿವರು ಅಧಿಕಾರಿಗಳಿಂದ ವಿವರಣೆ ಪಡೆದರು. 

ಕುಡಿಯುವ ನೀರಿನ ಸಮಸ್ಯೆ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಕೈಗೊಂಡಿರುವ ಮುನ್ನೆಚ್ಚರಿಕೆ, ವಿವಿಧ ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ಅಧೀನದ ವಿದ್ಯಾರ್ಥಿನಿಲಯಗಳ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದರು. ಜಿಲ್ಲಾಧಿಕಾರಿ ವಿ.ಶಂಕರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಮಂಜುಶ್ರೀ, ಹೆಚ್ಚುವರಿ ಜಿಲ್ಲಾಧಿಕಾರಿ ಕಾಂತರಾಜು ಉಪಸ್ಥಿತರಿದ್ದರು.

* ನಗರ ಮಹಾ ಯೋಜನೆಯ ಕರಡು ಸಿದ್ಧವಾಗಿದೆ. ಇದಕ್ಕೆ ಅಂತಿಮ ರೂಪ ನೀಡುವ ಮುನ್ನ ಹಂತ ಹಂತವಾಗಿ ಸಾರ್ವಜನಿಕರಿಂದ ಸಲಹೆ ಪಡೆಯುತ್ತೇವೆ. ಶೀಘ್ರದಲ್ಲೇ  ಕರಡನ್ನು ಪ್ರಕಟಿಸುತ್ತೇವೆ

-ರಾಜಕುಮಾರ್‌ ಖತ್ರಿ, ಬಿಡಿಎ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT