ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತವೈಭವ ಮರುಕಳಿಸುವ ಭವಿಷ್ಯ ಬೆಂಗಳೂರಿನದಾಗಲಿ

Last Updated 8 ನವೆಂಬರ್ 2016, 19:30 IST
ಅಕ್ಷರ ಗಾತ್ರ

60 ವರ್ಷಗಳಲ್ಲಿ ಬೆಂಗಳೂರು ಸಾಗಿ ಬಂದ ಹಾದಿಯ ಅವಲೋಕನ ತುಸು ಕಷ್ಟವೇ. ನಗರದ ಭವಿಷ್ಯದ ಹಾದಿ ಇನ್ನಷ್ಟು ಸುದೀರ್ಘವಾಗಿದೆ. ಭವಿಷ್ಯದ ಬಗ್ಗೆ ಜನರೂ ಜಾಗೃತರಾಗಿದ್ದಾರೆ. ಬೆಂಗಳೂರಿನ ಗತಕಾಲದ ಬಗ್ಗೆ ಹೆಮ್ಮೆ ಪಡುವ ಅಂಶಗಳು ತುಂಬಾ ಇವೆ. ಅಂತೆಯೇ, ಅದರ ಇಂದಿನ ಸ್ಥಿತಿಯ ಬಗ್ಗೆ ಕಳವಳಪಡಬೇಕಾದ ಅಂಶಗಳೂ ಬಹಳಷ್ಟಿವೆ. ಈ ನಡುವೆ, ಗತವೈಭವ ಮರುಕಳಿಸುವಂತಹ ಭವಿಷ್ಯ ನಮ್ಮದಾಗಲಿ ಎಂದು ಆಶಿಸುವ ಧೈರ್ಯವನ್ನು ನಾವು ಪ್ರದರ್ಶಿಸಬೇಕು.

ನಮ್ಮ ರಾಜ್ಯವು ಅಸ್ತಿತ್ವಕ್ಕೆ ಬಂದ 60 ವರ್ಷಗಳಲ್ಲಿ ಬೆಂಗಳೂರು, ಎಲ್ಲಾ ಅಡ್ಡಿ ಆತಂಕಗಳ ನಡುವೆಯೂ ಭಾರತದಲ್ಲಿ ಜನ ಅತಿ ಹೆಚ್ಚು ಇಷ್ಟಪಡುವ ನಗರವಾಗಿಯೇ ಮುಂದುವರೆದಿದೆ.  ಕನಸಿನ ನಗರಿ, ಪಿಂಚಣಿದಾರರ ಸ್ವರ್ಗ, ವಿಶ್ವವಿದ್ಯಮಾನಕ್ಕೆ ಒಗ್ಗಿಕೊಂಡ ನಗರ, ಕಲೆ ಮತ್ತು ಸಂಸ್ಕೃತಿ ಅರಳುವ ತಾಣ, ಹೇರಳ ಮುಕ್ತ ಪ್ರದೇಶಗಳಿರುವ, ಆಹ್ಲಾದಕರ ಹವಾಮಾನವಿರುವ, ಸುಸಂಸ್ಕೃತ ಜನರಿಂದ ತುಂಬಿರುವ ನಗರ ಎಂಬೆಲ್ಲ ಹೆಗ್ಗಳಿಕೆಗೆ ಬಹಳ ಹಿಂದಿನಿಂದಲೂ ಈ ನಗರ ಪಾತ್ರವಾಗಿದೆ. ಆದರೆ, ಈಗ ಭಾರತದ ಇತರ ಮಹಾನಗರಗಳನ್ನು ಕಾಡುತ್ತಿರುವ ಸಮಸ್ಯೆಗಳಿಂದ ಬೆಂಗಳೂರು ಕೂಡಾ ಹೊರತಾಗಿಲ್ಲ. ದುರ್ಬಲ ಆಡಳಿತ, ಯೋಜನೆ ಇಲ್ಲದ ಅಭಿವೃದ್ಧಿ, ಬೀದಿಬದಿ ಕಸದ ಸಮಸ್ಯೆ, ಸಂಚಾರ ದಟ್ಟಣೆ, ಕೆಟ್ಟ ರಸ್ತೆಗಳು, ಕಲುಷಿತ ಜಲಮೂಲಗಳು, ಕ್ಷೀಣಿಸುತ್ತಿರುವ ಸಾರ್ವಜನಿಕ ತಾಣಗಳು, ಇದ್ಯಾವುದರ ಚಿಂತೆ ಇಲ್ಲದೇ ಹೆಚ್ಚುತ್ತಿರುವ ಅಭಿವೃದ್ಧಿಯ ಒತ್ತಡ... ಈ ನಗರವನ್ನೂ ಕಾಡುತ್ತಿದೆ. ಈ ಹಿಂದೆ ಮಾಡಿರುವ ತಪ್ಪುಗಳಿಂದ ನಾವು ಪಾಠ ಕಲಿತಿದ್ದೇವೆಯೇ? ಈಗಾಗಲೇ ಹುಟ್ಟಿರುವ ಹಾಗೂ ಇನ್ನಷ್ಟೇ ಇಹದ ಬೆಳಕನ್ನು ಕಾಣಬೇಕಿರುವ ಭವಿಷ್ಯದ ನಾಗರಿಕರಾದರೂ ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆಯೇ ಎಂಬುದು ಮುಖ್ಯ ಪ್ರಶ್ನೆ.

ನಾಡಪ್ರಭು ಕೆಂಪೇಗೌಡ ಅವರಿಗೆ ಅವರ ತಾಯಿ ‘ಕೆರೆಗಳಂ ಕಟ್ಟು, ಮರಗಳಂ ನೆಡು’ ಎಂದು ಎರಡು ಮುಖ್ಯ ಸಲಹೆಗಳನ್ನು ನೀಡಿದ್ದರಂತೆ.  ನಗರದ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ನಂತಹ ಉದ್ಯಾನಗಳು, ಜಯನಗರದಂತಹ ಯೋಜಿತ ಬಡಾವಣೆಗಳು, ಸಾರ್ವಜನಿಕ ವಲಯದ ಟೌನ್‌ಷಿಪ್‌ ಹಾಗೂ ಪರಸ್ಪರ ಸಹಬಾಳ್ವೆಯ ನೆರೆಹೊರೆಯನ್ನು ನೋಡಿದಾಗ ಇವುಗಳ ಹಿಂದೆ ಮುಂದಾಲೋಚನೆ ಹೊಂದಿದ್ದ ನಾಯಕರ ಪಾತ್ರವೂ ಇದೆ ಎಂಬುದು ಮನದಟ್ಟಾಗುತ್ತದೆ. ಆದರೂ, ಎಲ್ಲೋ ಒಂದು ಕಡೆ ಈ ನಗರದ ವ್ಯವಸ್ಥಿತ ಅಭಿವೃದ್ಧಿ ಹಳಿ ತಪ್ಪಿದೆ. ನಾವು ದೊಡ್ಡ ಉದ್ಯಾನಗಳನ್ನು ನಿರ್ಮಿಸುವುದನ್ನು, ಸಾರ್ವಜನಿಕ ತಾಣಗಳನ್ನು ಉಳಿಸಿಕೊಳ್ಳುವುದನ್ನು ನಿಲ್ಲಿಸಿದ್ದೇವೆ. ಮುಂಬರುವ ದಿನಗಳಲ್ಲಿ ನಿರ್ಮಾಣಗೊಳ್ಳುವ ಬಡಾವಣೆಗಳಲ್ಲಿ  ಜಯನಗರದ ಪಡಿಯಚ್ಚನ್ನು ಕಾಣುವುದು ದುಸ್ತರ. ಜನರು  ಐಟಿ ಕಚೇರಿಗಳಿಗೆ ತೆರಳಲು, ವಿಮಾನನಿಲ್ದಾಣ ತಲುಪಲು ತಾಸುಗಟ್ಟಲೆ ಪ್ರಯಾಣ ಮಾಡಬೇಕಾದ ಸ್ಥಿತಿ ಇದೆ. ಇವೆಲ್ಲವೂ ಸುಸ್ಥಿರವಲ್ಲದ, ಪರಿಸರದ ಬಗ್ಗೆ ಎಳ್ಳಿನಿತೂ ಕಾಳಜಿ ಇಲ್ಲದ, ಕಾರು ಬಳಕೆಯನ್ನೇ ಪ್ರಮುಖವಾಗಿಸಿರುವ  ಅಭಿವೃದ್ಧಿ ಮಾದರಿಗಳು.

ಬೆಂಗಳೂರನ್ನು ಬದುಕಲು ಯೋಗ್ಯವಾದ  ನಗರವನ್ನಾಗಿ ರೂಪಿಸುವುದು ಹೇಗೆ? ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ,  ನಿಜವಾಗಿ ಅಗತ್ಯವಾಗಿರುವುದು ಯಾವುದು ಹಾಗೂ ಏನೆಲ್ಲ ಸಂಭವಿಸಲಿದೆ ಎಂಬುದನ್ನು ನಾವು ಮೊದಲು ವಿಶ್ಲೇಷಣೆ ಮಾಡಬೇಕು. ಮೊದಲಾಗಿ ಭವಿಷ್ಯದ ಬಗ್ಗೆ ಸ್ಪಷ್ಟ ದೂರದೃಷ್ಟಿ ಹಾಗೂ ಅದರ ನಿರ್ವಹಣೆ ಹಾಗೂ ಆಡಳಿತಕ್ಕಾಗಿ ಖಚಿತ ಮಾರ್ಗಸೂಚಿ ಹೊಂದಬೇಕು.

ಸಮಗ್ರ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಅಭಿವೃದ್ಧಿ ಚಟುವಟಿಕೆ ಹಮ್ಮಿಕೊಂಡರೆ ನಮ್ಮ ನಗರದ ಭವಿಷ್ಯ ಉತ್ತಮವಾಗಿರಲಿದೆ. ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ)    ಎಂಟು ಸಾವಿರ ಚದರ ಕಿಲೋಮೀಟರ್‌ ವ್ಯಾಪ್ತಿಯನ್ನು ಹೊಂದಿದೆ. ಇದು  ಬೆಳೆಯುತ್ತಿರುವ ಈಗಿನ ಬೆಂಗಳೂರಿನ ಒಟ್ಟು ಪ್ರದೇಶ (ಪ್ರಸ್ತುತ 712 ಚದರ ಕಿ.ಮೀ ಇದ್ದು, ಇದು 1200ಚದರ ಕಿ.ಮೀವರೆಗೂ ವಿಸ್ತರಣೆ ಆಗಲಿದೆ), ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ (ಬಿಐಎಎಪಿಎ)  ವ್ಯಾಪ್್ತಿಯ ಅಕ್ಕಪಕ್ಕದ ಪ್ರದೇಶ, ಉಪನಗರಗಳನ್ನು ಒಳಗೊಂಡ ಸಮಗ್ರ ಪ್ರದೇಶಗಳು ಸೇರಿದರೆ ಈಗಿನ ಬೆಂಗಳೂರಿನ ವ್ಯಾಪ್ತಿಗಿಂತ ಬಹಳಷ್ಟು ವಿಸ್ತಾರವಾಗಲಿದೆ. ಈ ಸಮಗ್ರ ಭೂಭಾಗದ ವ್ಯವಸ್ಥಿತ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದೆ. ಬೆಂಗಳೂರಿನ ಒಳಗೂ ಅನೇಕ ಪಾಲಿಕೆಗಳಿರುವ ವಿಕೇಂದ್ರೀಕೃತ ವ್ಯವಸ್ಥೆಯನ್ನು ಹೊಂದಬೇಕು. ನಗರದಾದ್ಯಂತ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನು ರಚಿಸಬೇಕು. ಬಿಬಿಎಂಪಿ ಪುನರ್‌ರಚನೆ ವರದಿ (ಲೇಖಕರೂ ಈ ಸಮಿತಿಯ ಸದಸ್ಯ)  ಈ ಕುರಿತ ಪರಿಹಾರೋಪಾಯಗಳನ್ನು  ಸೂಚಿಸಿದೆ. ಆದರೆ, ಇದರ ಅನುಷ್ಠಾನಕ್ಕೆ  ರಾಜಕೀಯ  ಒಮ್ಮತಾಭಿಪ್ರಾಯವೂ ಅಗತ್ಯ. ಆದರೆ, ಇಂತಹ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ.

ರಸ್ತೆ ಸಂಪರ್ಕದ ವಿಚಾರಕ್ಕೆ ಬರೋಣ. ಪೆರಿಫೆರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ನಿರ್ಮಿಸುವ ಪ್ರಸ್ತಾವನೆ ಇನ್ನೂ ಪರಿಶೀಲನೆ ಹಂತದಲ್ಲೇ ಇದೆ. ಈ ಕುರಿತು ಸರ್ಕಾರ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ಆದರೆ ಯೋಜನೆಯ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ವಿಚಾರದಲ್ಲಿ ಆಗಬೇಕಾದುದಿಷ್ಟೇ–  ಫೆರಿಫೆರಲ್‌ ರಿಂಗ್‌ ರಸ್ತೆಯ  ಇಕ್ಕೆಲಗಳಲ್ಲೂ ತಲಾ ಒಂದು ಕಿ.ಮೀಯಷ್ಟು ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಈ ಯೋಜನೆಗೆ ಜಾಗ ನೀಡುವ ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ಜಾಗವನ್ನು ಬಿಟ್ಟುಕೊಡುವುದು. ಇದರಿಂದ ಅವರಿಗೆ ಕೃಷಿಯಿಂದ ಬರುವ  ಆದಾಯಕ್ಕಿಂತಲೂ ಹೆಚ್ಚು ಆದಾಯ ಸಿಗುವಂತೆ ಮಾಡುವುದು. ಈ ರೀತಿ ಮಾಡುವುದರಿಂದ ಭೂಮಾಲೀಕರಿಗೂ ಒಳ್ಳೆಯದು ನಗರಕ್ಕೂ ಒಳ್ಳೆಯದು.  ಅಹಮದಾಬಾದ್‌ನಲ್ಲಿ ಈ ವಿಧಾನವನ್ನು ಅನುಸರಿಸಲಾಗಿದೆ.  ಆದರೆ, ನಮ್ಮಲ್ಲಿ ಈ ವಿಚಾರಕ್ಕೆ ಸಂಬಂಧಿಸಿ ಭೂಮಾಲೀಕರ ಮನವೊಲಿಸಲು ಬೇಕಾದ ರಾಜಕೀಯ ಉತ್ಸಾಹ ಎಲ್ಲೂ ಕಾಣಿಸುತ್ತಿಲ್ಲ. ಆದರೆ, ನಾವು ಈಗಲೂ 75 ಮೀಟರ್‌ ಅಗಲದ ದುಬಾರಿ ಪೆರಿಫೆರಲ್‌ ರಿಂಗ್‌ ರಸ್ತೆ  ಬಗ್ಗೆ ಚರ್ಚಿಸುವುದರಲ್ಲೇ  ವೃಥಾ ಕಾಲಹರಣ ಮಾಡುತ್ತಿದ್ದೇವೆ.     75 ಮೀಟರ್‌ ಅಗಲದ ಪೆರಿಫೆರಲ್‌ ರಿಂಗ್‌ ರಸ್ತೆಯನ್ನೇ ನಿರ್ಮಿಸಿದ್ದಾದರೆ, ಹೊರವರ್ತುಲ ರಸ್ತೆಯಲ್ಲಿ ಈಗ ಇರುವುದಕ್ಕಿಂತಲೂ ಹೆಚ್ಚು ವಾಹನ ದಟ್ಟಣೆ ಅದರಲ್ಲಿ  ಉಂಟಾಗಲಿದೆ. ಅದರ ಆಸುಪಾಸಿನ ಪ್ರದೇಶ ಇನ್ನಷ್ಟು ಅವ್ಯವಸ್ಥೆಗಳಿಂದ ಕೂಡಿರಲಿದೆ. ಹೊರ ವರ್ತುಲ ರಸ್ತೆ ವಿಚಾರದಲ್ಲಿ ಏನಾಯಿತು ಎಂಬ ಅನುಭವದ ಆಧಾರದಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ. 

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಕಸದ ಸಮಸ್ಯೆಯ ಕಾರಣಕ್ಕಾಗಿ ಅಪಖ್ಯಾತಿ ಗಳಿಸಿದೆ. ಕಸವನ್ನು ಮೂಲದಲ್ಲೇ ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸುವುದು, ಸಂಸ್ಕರಣಾ ಪ್ರಕ್ರಿಯೆಯ ವಿಕೇಂದ್ರೀಕರಣ, ಭೂಭರ್ತಿ ಘಟಕಗಳಿಗೆ ತಲುಪುವ ಕಸದ ಪ್ರಮಾಣವನ್ನು ಕಡಿಮೆ ಮಾಡುವುದು  ಸೇರಿದಂತೆ ಅನೇಕ ಸಲಹೆಗಳನ್ನು ನೀಡುವ ಮೂಲಕ ತಜ್ಞರು ಈ ಸಮಸ್ಯೆಗೆ ಪರಿಹಾರೋಪಾಯಗಳನ್ನು ಸೂಚಿಸಿದ್ದಾರೆ. ಇದನ್ನು ಅನುಷ್ಠಾನಗೊಳಿಸಲು ಕಸ ವಿಲೇವಾರಿ ವ್ಯವಸ್ಥೆ  ಮೇಲೆ ಹಿಡಿತ ಹೊಂದಿರುವ  ಸಾಗಣೆ ಮಾಫಿಯಾ ಅಡ್ಡಿಯಾಗಿದೆ.

ಇನ್ನಷ್ಟು ವೃತ್ತಿಪರವಾಗಿ ಕಾರ್ಯನಿರ್ವಹಿಸಬಲ್ಲ ತ್ಯಾಜ್ಯ ವಿಲೇವಾರಿ ಉದ್ಯಮಕ್ಕೆ ಈ ಮಾಫಿಯಾ ದಾರಿ ಮಾಡಿಕೊಡಬೇಕಿದೆ. ಇದು ಸಾಧ್ಯವಾಗಬೇಕಾದರೆ ಸಾಂಪ್ರದಾಯಿಕ ಮಾದರಿಯನ್ನು ಅನುಸರಿಸುವ ಕುಳಗಳು   ಘನ ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಹೆಚ್ಚಿನ ಪ್ರಯೋಜನ   ಆಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.  ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವುದಕ್ಕೆ ಅಸಂಖ್ಯಾತ ಜನರು ಹಾಗೂ ಸಂಘಟನೆಗಳು ಮುಂದೆ  ಬರುತ್ತಿರುವುದು ಆಶಾದಾಯಕ ಬೆಳವಣಿಗೆ.

ವಿದ್ಯುತ್ ನಿರ್ವಹಣೆ ವಿಚಾರದಲ್ಲೂ ನವೀಕರಿಸಬಲ್ಲ ಮೂಲಗಳು, ಅದರಲ್ಲೂ ಮುಖ್ಯವಾಗಿ ಸೌರವಿದ್ಯುತ್‌ ಬಗ್ಗೆ ಹೆಚ್ಚಿನ ಗಮನವಹಿಸಬೇಕು. ಹೆಚ್ಚು ಬೇಡಿಕೆ ಇರುವ ಅವಧಿಗೆ ತಕ್ಕಂತೆ ವಿದ್ಯುತ್‌ ಮೀಟರಿಂಗ್ ವ್ಯವಸ್ಥೆ ಬರಬೇಕು.

ನಮ್ಮ ಪೂರ್ವಿಕರು ಹಸಿರು ಬೆಳೆಸುವುದಕ್ಕೆ ಆದ್ಯತೆ ನೀಡಿದ್ದರಿಂದ ಬೆಂಗಳೂರು ಉದ್ಯಾನ ನಗರಿಯಾಗಿತ್ತು. ಇಲ್ಲಿ ಉದ್ಯಾನಗಳು, ಬಯಲು ಪ್ರದೇಶಗಳು ಹೇರಳವಾಗಿದ್ದವು.  ಇಂದಿನ ಪೀಳಿಗೆಗೆ  ಬಳುವಳಿಯ ರೂಪದಲ್ಲಿ ಬಂದಿರುವ ಇವುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ವಿಚಾರದಲ್ಲಿ ನಿರ್ಲಕ್ಷ್ಯ ತಾಳಿದ್ದೇವೆ. ಮುಂದಿನ ಪೀಳಿಗೆಗೆ  ಉಕ್ಕಿನ  ಮೇಲ್ಸೇತುವೆ ಜಾಲವನ್ನೊಳಗೊಂಡ  ಕಾಂಕ್ರೀಟ್  ಕಾಡನ್ನು ಬಿಟ್ಟುಹೋಗಲು ನಾವು ಮುಂದಾಗಿದ್ದೇವೆ.   ಎಚ್ಚೆತ್ತುಕೊಂಡಿರುವ ಜಗತ್ತಿನ ಮಹಾನಗರಗಳು ಹೆಚ್ಚು ಹೆಚ್ಚು ಮುಕ್ತ ಪ್ರದೇಶಗಳನ್ನು, ನಡಿಗೆ ಪಥಗಳನ್ನು ಹೊಂದುವತ್ತ ಹೆಜ್ಜೆ ಹಾಕುತ್ತಿವೆ.  ಸಾರ್ವಜನಿಕ ಸಾರಿಗೆಗೆ ಒತ್ತು ನೀಡುತ್ತಿವೆ. ಹೆಚ್ಚು ಹೆಚ್ಚು ಸಾರ್ವಜನಿಕ ತಾಣಗಳನ್ನು ನಿರ್ಮಿಸುತ್ತಿವೆ. ಕಲೆ ಮತ್ತು ಸಂಸ್ಕೃತಿಗೆ  ಆದ್ಯತೆ ನೀಡುತ್ತಿವೆ. ಆದರೆ, ನಾವು ವಿನಾಶದತ್ತ ಹೆಜ್ಜೆ ಹಾಕುತ್ತಿದ್ದೇವೆ.   ನಗರವು ಸದಾ ಬದಲಾವಣೆಯ ಕೇಂದ್ರ. ಇತ್ತೀಚೆಗೆ ಮಧ್ಯಮವರ್ಗದ ಜನ ಹೆಚ್ಚು ಸಕ್ರಿಯವಾಗುತ್ತಿದ್ದಾರೆ. ಇದರಿಂದ ಜಡ್ಡುಗಟ್ಟಿದ ನಮ್ಮ ಸಾರ್ವಜನಿಕ ನೀತಿ ರೂಪಿಸುವ ವ್ಯವಸ್ಥೆ ಇನ್ನಾದರೂ ಕೊನೆಯಾಗಬಹುದು ಎಂಬ ಆಶಾವಾದ ಮೂಡಿದೆ. ಅಭಿವೃದ್ಧಿಯನ್ನು ಸುಸ್ಥಿರ ಪಥದತ್ತ ಒಯ್ಯುವ ಭರವಸೆ ಕಾಣಿಸಿದೆ.

‘ಇನ್ನೊಂದು ಕಾವೇರಿ ಸೃಷ್ಟಿಸಬೇಕು’
ಪ್ರಪಂಚದ ಪ್ರಮುಖ ನಗರಗಳಂತೆ ಬೆಂಗಳೂರು ಯಾವುದೇ ನದಿಯ ದಂಡೆಯಲ್ಲಿಲ್ಲ. ಹಾಗಾಗಿ ಇಲ್ಲಿ ನೀರಿನ ಸುಸ್ಥಿರತೆ ಬಲು ಮುಖ್ಯವಾದುದು. ಗ್ರೇಟರ್‌ ಬಿಎಂಆರ್‌ಡಿಎ ಪ್ರದೇಶದಲ್ಲಿ ಮಳೆ ನೀರಿನ ಸಂಗ್ರಹ, ನೀರಿಗೆ ಸೂಕ್ತ ದರ ವಿಧಿಸುವುದು, ನೀರಿನ ಮೂಲಗಳ ಪೋಷಣೆ ಮೂಲಕ ಬೇಡಿಕೆ ಹಾಗೂ ಪೂರೈಕೆ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ. ಈ ವಿಸ್ತರಿತ ಪ್ರದೇಶದಲ್ಲಿ ಇನ್ನೊಂದು ಕಾವೇರಿಯನ್ನು ಸೃಷ್ಟಿಸಲು ಅವಕಾಶವಿದೆ. ಜಲಾನಯನ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ  ಮೂಲಕ  ಸಮರೋಪಾದಿಯಲ್ಲಿ ಈ ಕಾರ್ಯ ನಡೆಯಬೇಕು. ನೀರಿನ ಪರಿಸರ ವ್ಯವಸ್ಥೆಯನ್ನು ಹದಗೆಡಿಸುವ, ಕೆರೆ ಒತ್ತುವರಿ ಮಾಡುವ ಯಾವುದೇ ಉಲ್ಲಂಘನೆಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕಠಿಣ  ಕ್ರಮ ಕೈಗೊಳ್ಳುವ ನೀತಿಯನ್ನು ತುರ್ತಾಗಿ ರೂಪಿಸಬೇಕು.

ಸಂಚಾರ: ಸಮಸ್ಯೆಯ ಮೂಲಕ್ಕೆ ಪರಿಹಾರ ಬೇಕು

ಈಗಲಂತೂ ಸಂಚಾರ ದಟ್ಟಣೆ ಸಮಸ್ಯೆಯದೇ ಚರ್ಚೆ.  ಹಿಂದಿನಿಂದಲೂ,  ಸಂಚಾರ ದಟ್ಟಣೆ ಸಮಸ್ಯೆ ಎದುರಾದಾಗ ಹಿಂದೆ ಮುಂದೆ ನೋಡದೆ, ನಿರ್ದಿಷ್ಟ ಸಮಸ್ಯೆಯನ್ನು ಮಾತ್ರ ಬಗೆಹರಿಸುವತ್ತ ಗಮನ ಹರಿಸಲಾಗುತ್ತಿದೆ. ದುರದೃಷ್ಟವೆಂದರೆ ಇದರಿಂದ ಯಾವುದೇ ಪ್ರಯೋಜನವೂ ಆಗಿಲ್ಲ.  ನಾವು ಮೂಲ ಸಮಸ್ಯೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಪಾದಚಾರಿಗಳಿಗೆ, ಸಾರ್ವಜನಿಕ ಸಾರಿಗೆಗೆ ಮತ್ತು ಖಾಸಗಿ ವಾಹನಗಳಿಗೆ ಎಷ್ಟೆಷ್ಟು ಮಹತ್ವ   ನೀಡಬೇಕು ಎಂಬ ಸಾರಿಗೆಯ ಮೂಲ ತತ್ವಗಳನ್ನು ಮೊದಲು ಅರಿತುಕೊಳ್ಳಬೇಕು. ಜನ ನಡೆದಾಡಲು ಯೋಗ್ಯವಾದ ಪಾದಚಾರಿ ಮಾರ್ಗಗಳು, ಗುಂಡಿಗಳಿಲ್ಲದ ರಸ್ತೆಗಳು, ಪರ್ಯಾಯ ಬೀದಿ ರಸ್ತೆಗಳು ಹಾಗೂ ಸಂಚಾರ ನಿರ್ವಹಣೆ  ಕುರಿತ ತತ್ವಗಳ ಮಹತ್ವವನ್ನು  ಮೊದಲು ತಿಳಿದುಕೊಳ್ಳಬೇಕು. ಇದನ್ನು ಆಧರಿಸಿ ಯಾವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕು.  ಖಾಸಗಿ ವಾಹನಗಳಿಂದಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಬೆಂಗಳೂರು ಯಾವತ್ತೂ ಪೂರೈಸಲು ಸಾಧ್ಯವಿಲ್ಲ. ಜನ ನಡೆದಾಡಲು ಯೋಗ್ಯವಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವುದರಲ್ಲಿ (ಕನಿಷ್ಠ ಪಕ್ಷ 1,500 ಕಿ.ಮೀ ಉದ್ದದ  ಪಾದಚಾರಿ ಮಾರ್ಗ ಬೇಕು)  ಹಾಗೂ ಬಸ್‌, ಮೆಟ್ರೊ, ಪ್ರಯಾಣಿಕ ರೈಲು, ಟ್ಯಾಕ್ಸಿ ಕ್ಯಾಬ್ ಮತ್ತು ಮಿನಿಬಸ್‌ ಅಗ್ರಿಗೇಟರ್‌, ಕಾರು ಹಂಚಿಕೊಳ್ಳುವಿಕೆ (ಪೂಲಿಂಗ್‌) ಮುಂತಾದ ಅಂಶಗಳನ್ನೊಳಗೊಂಡ ಬಹುಸಾರಿಗೆ ವ್ಯವಸ್ಥೆಯ ಆಯ್ಕೆಗೆ ಉತ್ತೇಜನ ನೀಡುವುದರಲ್ಲಿ ನಗರದ ಭವಿಷ್ಯ ಅಡಗಿದೆ. ನಿರ್ದಿಷ್ಟ ಪಥ (ಲೇನ್‌), ಕೈಗೆಟಕುವಂತಹ ವಾಹನ ನಿಲುಗಡೆ ವ್ಯವಸ್ಥೆ ಖಾಸಗಿ ವಾಹನಗಳಿಗೂ ಬೇಕಾಗಿದೆ. ಆದರೆ, ಅದು   ಸದ್ಯಕ್ಕಂತೂ ಸಾಧ್ಯವಿಲ್ಲ. ಈ ಆಲೋಚನೆಗಳೆಲ್ಲ ಈಡೇರುವ ಸಾಧ್ಯತೆ ಕಡಿಮೆ– ಸ್ಟೇಜ್‌ ಕ್ಯಾರಿಯೇಜ್‌ ಕಾಯ್ದೆಗೆ ತಿದ್ದುಪಡಿ ತರಬೇಕಾಗಿದೆ. ಪಾದಚಾರಿಗಳಿಗೆ, ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವ ನೀತಿಯನ್ನು ಸರ್ಕಾರ ರೂಪಿಸಬೇಕಿದೆ. ಈ ಬಗ್ಗೆ ಭರವಸೆ ಮೂಡುವಂತೆ ನಾಯಕರು ವರ್ತಿಸುತ್ತಿಲ್ಲ.

ಏನು ಆಗಬೇಕಾಗಿದೆ?

* ಬಿಎಂಆರ್‌ಡಿಎ ವ್ಯಾಪ್ತಿಯ ಸಮಗ್ರ ಭೂಭಾಗದ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಯೋಜನೆ ರೂಪಿಸಬೇಕು.

* ಸಾರ್ವಜನಿಕ ಬಹುಸಾರಿಗೆ ವ್ಯವಸ್ಥೆ ಜಾರಿಯಾಗಬೇಕು.
* ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಬೇಕು.
* ನೀರಿನ ಪರಿಸರ ವ್ಯವಸ್ಥೆಯನ್ನು ಹದಗೆಡಿಸುವ, ಕೆರೆ ಒತ್ತುವರಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ  ಕ್ರಮ ಕೈಗೊಳ್ಳುವ ನೀತಿ ರೂಪಿಸಬೇಕು.
* ನಮ್ಮ ಕಾನೂನುಗಳು, ನೀತಿಗಳು  ಜನರಿಗೆ ಸುಲಭದಲ್ಲಿ ಮನೆ ಸಿಗುವುದನ್ನು  ಉತ್ತೇಜಿಸುವಂತಿರಬೇಕು. 
* ಹೆಚ್ಚು ಹೆಚ್ಚು ಸಾರ್ವಜನಿಕ ತಾಣಗಳನ್ನು, ಮುಕ್ತ ವಲಯಗಳನ್ನು ನಿರ್ಮಿಸಬೇಕು.

‘ಸುಲಭದಲ್ಲಿ ಮನೆ ಸಿಗಲಿ’
ವಸತಿ ಬಗ್ಗೆ, ಅದರಲ್ಲೂ ಸಾಮಾನ್ಯ ಜನರ ಕೈಗೆಟುಕುವ ವಸತಿ ಬಗ್ಗೆ ಬಾಯಿ ಮಾತಿನ ಸಹಾನುಭೂತಿ ಮಾತ್ರ ವ್ಯಕ್ತವಾಗುತ್ತಿದೆ. ಸರ್ವರಿಗೂ ಸೂರು ಒದಗಿಸುವ ವಿಚಾರದಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ತುಂಬಾ ಹಿಂದೆ ಬಿದ್ದಿದೆ.  ಮನೆಯ ಮಾಲೀಕತ್ವ ಹೊಂದುವ ಹಾಗೂ ಕೈಗೆಟಕುವ ದರದಲ್ಲಿ ಬಾಡಿಗೆ ಮನೆ ಒದಗಿಸುವ ವಿಚಾರಗಳೆರಡನ್ನೂ ಮುಂದಿಟ್ಟುಕೊಂಡು ವಸತಿ ವಿಚಾರವನ್ನು ನೋಡಬೇಕು.

ನಮ್ಮ ಕಾನೂನುಗಳು, ನೀತಿಗಳು ಹಾಗೂ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ವ್ಯವಸ್ಥೆ ಜನರಿಗೆ ಸುಲಭದಲ್ಲಿ ಮನೆ ಸಿಗುವುದನ್ನು  ಉತ್ತೇಜಿಸುವಂತಿರಬೇಕು.  ಆದರೆ, ಸದ್ಯಕ್ಕೆ, ನಮ್ಮ ನೀತಿ ನಿಯಮಗಳು ಈ ವಿಚಾರದಲ್ಲಿ ಅಡ್ಡಿಗಳಾಗಿಯೇ ಉಳಿದಿವೆ. ಅದರಿಂದಾಗಿ ಕಡಿಮೆ ಆದಾಯದ ವರ್ಗಕ್ಕೆ ವಸತಿ ಮರೀಚಿಕೆಯಾಗಿಯೇ ಉಳಿದಿದೆ. ಕಡಿಮೆ ಆದಾಯದ ವರ್ಗದವರು ಕೆಲಸ ಮಾಡುವ ಸ್ಥಳದ ಸಮೀಪದಲ್ಲೇ ವಸತಿ ವ್ಯವಸ್ಥೆ ಇರಬೇಕು. ಅವರು  ಕೆಲಸದ ಸಲುವಾಗಿ ನಗರದಿಂದ ದೀರ್ಘ ಪ್ರಯಾಣ ಮಾಡಬೇಕಾದ ಸ್ಥಿತಿ ಇರಬಾರದು.
ಅಕ್ರಮ ಸಕ್ರಮ ಯೋಜನೆ ಒಂದು ಕೆಟ್ಟ ಯೋಚನೆ. ಇದು ನಿಯಮ ಉಲ್ಲಂಘನೆ ಮಾಡುವವರಿಗೆ ಉತ್ತೇಜನ ನೀಡುವಂತಿದೆ. ನಿಯಮವನ್ನು ಚಾಚೂ ತಪ್ಪದೆ ಪಾಲಿಸುವ ಜನರು  ಇದಕ್ಕೆ ಬೆಲೆ ತೆರಬೇಕು. ನಿಯಮ ಉಲ್ಲಂಘನೆಗೆ ಅವಕಾಶ ಕಲ್ಪಿಸುವ ಅಧಿಕಾರಿಗಳ ಮೇಲೂ ಯಾವುದೇ ಕ್ರಮ ಜಾರಿಯಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT