ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈದೇಹಿ ಭಾವ ಪ್ರಪಂಚ ಅನನ್ಯ’

Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಖ್ಯಾತ ಲೇಖಕಿ ವೈದೇಹಿ ಅವರ ಸಮಗ್ರ ವಾಙ್ಮಯವನ್ನು  ‘ವೈದೇಹಿ ಕಥನ’ ಕೃತಿ ಆಪ್ತವಾಗಿ ಅವಲೋಕಿಸುತ್ತದೆ. ಈ ಕೃತಿಯ ಇಂಗ್ಲಿಷ್  ಆವೃತ್ತಿ ಇಂದು (ನ.12) ಬಿಡುಗಡೆಯಾಗುತ್ತಿದೆ (ಅನುವಾದ: ಓ.ಎಲ್‌. ನಾಗಭೂಷಣ ಸ್ವಾಮಿ). ಈ ಹಿನ್ನೆಲೆಯಲ್ಲಿ ಕೃತಿಯ ಲೇಖಕ  ಟಿ.ಪಿ.ಅಶೋಕ ಅವರೊಂದಿಗೆ ನಡೆಸಿದ ಮಾತುಕತೆಯ ವಿವರ ಇಲ್ಲಿದೆ

* ‘ವೈದೇಹಿ ಕಥನ’ದ ವೈಶಿಷ್ಟ್ಯ ಏನು?
ಕನ್ನಡ ವಿಮರ್ಶೆಯಲ್ಲಿ ಸಾಮಾನ್ಯವಾಗಿ ಬಿಡಿ ಲೇಖನಗಳ ಸಂಗ್ರಹವೇ ಹೆಚ್ಚು. ಒಬ್ಬ ಲೇಖಕ ಅಥವಾ ಲೇಖಕಿಯನ್ನು ಕುರಿತ ಪೂರ್ಣ ಪ್ರಮಾಣದ ಪುಸ್ತಕ ಕಡಿಮೆ. ಆ ದೃಷ್ಟಿಯಲ್ಲಿ ಲೇಖಕಿ ವೈದೇಹಿ ಅವರ ಸಮಗ್ರ ಸಾಹಿತ್ಯದ ಪೂರ್ಣ ಪ್ರಮಾಣದ ಪುಸ್ತಕವಿದು. ಅವರ ಕಥೆ, ಕಾದಂಬರಿ, ಕವಿತೆ, ಲೇಖನಗಳನ್ನು ಅಭ್ಯಾಸ ಮಾಡಿ ಬರೆದಿರುವ ಪುಸ್ತಕವಿದು. ವೈದೇಹಿ ಅವರ ಸಮಗ್ರ ಸಾಹಿತ್ಯ ಕುರಿತು ಇಂಗ್ಲಿಷಿನಲ್ಲಿ ಪ್ರಕಟವಾಗುತ್ತಿರುವ ಮೊದಲ ಕೃತಿ ಎನ್ನುವುದು ವಿಶೇಷ.

* ಅಂತರಪಠ್ಯೀಯ ಸಂಬಂಧಗಳ  ಶೋಧವನ್ನು ಈ ಕೃತಿಯಲ್ಲಿ ಹೇಗೆ ಜೋಡಿಸಿದ್ದೀರಿ?
ವಿಭಜನೆಯ ತುಡಿತವುಳ್ಳ ಕಥೆಗಳು ಉತ್ತರ ಭಾರತದಲ್ಲೇ ಹೆಚ್ಚಾಗಿವೆ. ದಕ್ಷಿಣ  ಭಾರತದಲ್ಲಿ ವಿಭಜನೆಯ ದುರಂತದ ಕಥೆಗಳು ವಿರಳ. ಏಕೆಂದರೆ  ನಮಗೆ ಆ ದುರಂತ ಅಷ್ಟಾಗಿ ತಟ್ಟಲಿಲ್ಲ. ಆದರೆ, ಅಂಥ ವಿಭಜನೆಯ ದುರಂತವನ್ನು ಹೇಳುವ ‘ಕ್ರೌಂಚ ಪಕ್ಷಿಗಳು’ ಎನ್ನುವ ಕಥೆಯನ್ನು ವೈದೇಹಿ ಬರೆದಿದ್ದಾರೆ.

ಬಡ ಬ್ರಾಹ್ಮಣನೊಬ್ಬ ದಿಲ್ಲಿಯಲ್ಲಿ ಸಣ್ಣದೊಂದು ಹೋಟೆಲ್ ಇಟ್ಟುಕೊಂಡು ಜೀವನ ಮಾಡುತ್ತಿರುತ್ತಾನೆ. ಆದರೆ,  ವಿಭಜನೆಯ ಸಂದರ್ಭ ಪತಿಯ ಎದುರೇ ಪತ್ನಿಯನ್ನು ಅಪಹರಿಸಲಾಗುತ್ತದೆ. ಇಲ್ಲಿ ವಿಭಜನೆಯ ದುರಂತವನ್ನು ವೈದೇಹಿ ಭಿನ್ನವಾಗಿ ಚಿತ್ರಿಸಿದ್ದಾರೆ.

ರಾಜೇಂದ್ರ ಸಿಂಗ್ ಬೇಡಿ ಅವರ ‘ಲಾಜವಂತಿ’, ಅಮೃತಾ ಪ್ರೀತಂ ಅವರ ‘ಪಿಂಜರ್’ ಸೇರಿದಂತೆ ಭಾರತೀಯ ಸಾಹಿತ್ಯದಲ್ಲಿ ಇತರ ಭಾಷೆಯ ವಿಭಜನೆಯ ಕಥೆಗಳ ಜತೆಗೆ ಈ ಕಥೆಯನ್ನು  ಅಭ್ಯಾಸ ಮಾಡಿದಾಗ ಅದು ಅಂತರಪಠ್ಯೀಯ ಶೋಧವಾಗುತ್ತದೆ.

ಹಾಗೆಯೇ ಅಸ್ಪೃಶ್ಯತೆ ವಿಷಯಕ್ಕೆ ಬಂದಾಗ ಅದು  ದಲಿತರು ಸಮಸ್ಯೆ ಮಾತ್ರ ಎಂದುಕೊಳ್ಳಲಾಗುತ್ತದೆ. ಆದರೆ, ವೈದೇಹಿ ಅವರ ‘ವಾಸುದೇವಾಸ್ ಫ್ಯಾಮಿಲಿ’  ಕಥೆ ಅಸ್ಪೃಶ್ಯತೆಯನ್ನು ಭಿನ್ನ ನೆಲೆಯಲ್ಲಿ ಅನಾವರಣ ಮಾಡುತ್ತದೆ.

ವೈದೇಹಿ ತಮ್ಮ ಸಾಹಿತ್ಯದಲ್ಲಿ ಲಿಂಗ ವ್ಯವಸ್ಥೆಯೊಳಗೇ ಇರುವ ಅಸ್ಪೃಶ್ಯತೆಯನ್ನು ಹೇಳುತ್ತಾರೆ. ಅಂತೆಯೇ  ಗಂಡ–ಹೆಂಡತಿ ಸಂಬಂಧದಲ್ಲಿ ಗಂಡ, ಹೆಂಡತಿಯ ಮನಸನ್ನು ಸ್ಪರ್ಶಿಸುವುದೇ ಇಲ್ಲ. ಬರೀ ದೇಹವನ್ನು ಮಾತ್ರ ಆತ ಸ್ಪರ್ಶಿಸುತ್ತಾನೆ.  ಇಲ್ಲೆಲ್ಲಾ ವೈದೇಹಿ ಹೆಣ್ಣಿನ  ಅಸ್ಪೃಶ್ಯತೆಯ ಭಿನ್ನ ನೆಲೆಗಳನ್ನು ತೆರೆದಿಡುತ್ತಾರೆ.

* ವೈದೇಹಿ ಅವರ ಸ್ತ್ರೀಲೋಕದ ನಿಜದ ನೆಲೆ ಯಾವುದು?
ವೈದೇಹಿ ಅವರು ಎಲ್ಲಾ ಜಾತಿ, ವರ್ಗ, ವಯೋಮಾನದ ಸ್ತ್ರೀಯರ ಪ್ರಪಂಚವನ್ನು ಕಟ್ಟಿ ಕೊಡುತ್ತಾರೆ. ಅದರಲ್ಲಿ ಆಧುನಿಕರು, ಗ್ರಾಮೀಣ ಮಹಿಳೆಯರು, ವಯಸ್ಸಾದ ವಿಧವೆಯರು, ಇಕ್ಕಟ್ಟಿನ ಜೀವನದಿಂದ ಆಚೆಗೆ ಬಂದು ಹೊಸ ಜೀವನ ಕಟ್ಟಿಕೊಳ್ಳಲು ಹಂಬಲಿಸುವ ತರುಣಿಯರಿದ್ದಾರೆ. ಎಷ್ಟೇ ಕಷ್ಟ ಬಂದರೂ ಛಲದಿಂದ ಜೀವನವನ್ನು ಮುನ್ನಡೆಸುವ ಮಹಿಳೆಯರಿದ್ದಾರೆ.

ವೈದೇಹಿ ಅವರ ಸ್ತ್ರೀ ಲೋಕದಲ್ಲಿರುವ ವೈವಿಧ್ಯ ರೋಮಾಂಚಕಾರಿಯಾದದ್ದು. ವೈದೇಹಿ ಅವರ ಸಾಹಿತ್ಯದಲ್ಲಿ ಮೇಲ್ವರ್ಗದ ಸ್ತ್ರೀಯರು ಕೆಳವರ್ಗದ ಸ್ತ್ರೀಯರನ್ನು ಶೋಷಣೆ ಮಾಡುವ ಚಿತ್ರಣವೂ ಇದೆ.ಮನುಷ್ಯ ಲೋಕದೊಳಗಿರುವ ಸಂಕೀರ್ಣವಾದ ಶೋಷಿತ ವ್ಯವಸ್ಥೆಯನ್ನು ವೈದೇಹಿ ಸೂಕ್ಷ್ಮವಾಗಿ ಶೋಧಿಸುತ್ತಾರೆ.

* ವೈದೇಹಿ ಅವರ ಕೃತಿಗಳಲ್ಲಿ  ಪುರುಷ ಪ್ರಧಾನ ಸಮಾಜದಲ್ಲಿ ತನ್ನತನ ಉಳಿಸಿಕೊಳ್ಳಲು ಹೆಣಗುವ ಹೆಣ್ಣು ಪಾತ್ರಗಳ ಚಿತ್ರಣವಿದೆಯಲ್ಲಾ...
ಸಾಮಾನ್ಯವಾಗಿ ಪುರುಷ ಲೋಕದ ದಬ್ಬಾಳಿಕೆಯಿಂದ ನುಚ್ಚುನೂರಾಗುವವರೇ ಜಾಸ್ತಿ. ಆದರೆ ವೈದೇಹಿ ಅವರ ಹೆಣ್ಣಿನ ಪಾತ್ರಗಳು ಚೌಕಟ್ಟಿನಾಚೆಗೆ ಬರಲು ಸಾಧ್ಯವಿರದಿದ್ದರೂ ಧೈರ್ಯವಾಗಿ ಬದುಕು ಕಟ್ಟಿಕೊಳ್ಳುವುದನ್ನು ಹೇಳುತ್ತವೆ. ಮತ್ತೆ ಕೆಲ ಪಾತ್ರಗಳು ಚೌಕಟ್ಟಿನೊಳಗೆ ಇದ್ದುಕೊಂಡೇ ಪ್ರತಿಭಟಿಸುತ್ತವೆ. ಇದಕ್ಕೆ ಅಕ್ಕು, ಅಮ್ಮಚ್ಚಿ, ವಾಣಿ ಮಾಯಿಯಂಥ ಪಾತ್ರಗಳು ಅತ್ಯುತ್ತಮ ಉದಾಹರಣೆ.

* ವೈದೇಹಿ ಅವರ ಯಾವ ಸಾಹಿತ್ಯ ಪ್ರಕಾರ ನಿಮಗಿಷ್ಟ?
ವೈದೇಹಿ ಅವರನ್ನು ನಾನು ಮುಖ್ಯವಾಗಿ ಕಥೆಗಾರ್ತಿ ಎಂದೇ ಗುರುತಿಸಲು ಬಯಸುತ್ತೇನೆ. ಅವರು ಹುಟ್ಟು ಕಥೆಗಾರ್ತಿ.  ಕುಶಲತೆಯಿಂದ ಕಥೆ ಕಟ್ಟುವ ಕಲೆ ಅವರಿಗೆ ಸಹಜವಾಗಿ ಸಿದ್ಧಿಸಿದೆ.

* ಭಾರತೀಯ ಇಂಗ್ಲಿಷ್‌ ಸಾಹಿತ್ಯ ವೈದೇಹಿ ಅವರ ಬರವಣಿಗೆಯನ್ನು ಹೇಗೆ ಸ್ವೀಕರಿಸಿದೆ?
ಸಾಹಿತ್ಯವನ್ನು ಹೊಸದಾಗಿ ನೋಡುವ ಪರಿಕ್ರಮ ಈಗ ಭಾರತೀಯ ಸಾಹಿತ್ಯವಲಯದಲ್ಲಿ ಪ್ರವರ್ಧಮಾನಕ್ಕೆ ಬಂದಿದೆ. ಭಾರತದ ಅನೇಕ ಭಾಷೆಗಳಲ್ಲಿ ವೈದೇಹಿ ಅವರ ಕಥನಗಳ   ಗಂಭೀರ ಅಧ್ಯಯನ ನಡೆಯುತ್ತಿದೆ.

ವೈದೇಹಿ ಅವರ ‘ಗುಲಾಬಿ ಟಾಕೀಸ್‌ ಅಂಡ್‌ ಅದರ್ ಸ್ಟೋರಿಸ್‌’ ಅನ್ನು ಪೆಂಗ್ವಿನ್ ಇಂಡಿಯಾ, ‘ಕ್ರೌಂಚ ಪಕ್ಷಿ ಅಂಡ್ ಅದರ್ ಸ್ಟೋರಿಸ್’ ಅನ್ನು ಸಾಹಿತ್ಯ ಅಕಾಡೆಮಿ ಇಂಗ್ಲಿಷ್‌ಗೆ ಅನುವಾದ ಮಾಡಿದೆ. ಅಸ್ಪೃಶ್ಯತೆ ಕುರಿತ ‘ವಾಸುದೇವಸ್‌ ಫ್ಯಾಮಿಲಿ’ ಕೃತಿಯನ್ನು ಆಕ್ಸ್‌ಫರ್ಸ್  ಯೂನಿವರ್ಸಿಟಿ ಪ್ರೆಸ್‌ ಪ್ರಕಟಿಸಿದೆ. ಮತ್ತೀಗ ವೈದೇಹಿ ಅವರ ಸಮಗ್ರ ಸಾಹಿತ್ಯವನ್ನು ಇಂಗ್ಲಿಷಿನಲ್ಲಿ ಮಣಿಪಾಲ  ಯುನಿವರ್ಸಿಟಿ ಪ್ರೆಸ್ ತರುತ್ತಿದೆ. ಇದಕ್ಕೆ ಈಗಾಗಲೇ  ಅನೇಕರು  ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

***
ಕಥೆ ಹೇಳುವುದೇ ವೈದೇಹಿ ಅವರ ಅಭಿವ್ಯಕ್ತಿಯ ಮುಖ್ಯ ಮಾರ್ಗ. ಅವರ ಕಥನಗಳಲ್ಲಿ ಕುಶಲತೆ ಎದ್ದು ಕಾಣುತ್ತದೆ. ಭಾಷೆಯನ್ನು ತುಂಬಾ ಕಾವ್ಯಾತ್ಮಕವಾಗಿ ಬಳಸುತ್ತಾರೆ. ಅವರು ಬರೀ ಕಥೆಗಳನ್ನಷ್ಟೇ ಬರೆದಿದ್ದರೆ, ಭಾರತದ ಮುಖ್ಯ ಕಥೆಗಾರ್ತಿಯಾಗಿರುತ್ತಿದ್ದರು.
–ಟಿ.ಪಿ.ಅಶೋಕ, ಸಾಹಿತ್ಯ ವಿಮರ್ಶಕರು

***
ಕೃತಿ ಲೋಕಾರ್ಪಣೆ

‘ವೈದೇಹಿ ಕಥನ’ (ಕನ್ನಡ ಮೂಲ: ಟಿ.ಪಿ. ಅಶೋಕ, ಇಂಗ್ಲಿಷ್‌ಗೆ: ಓ.ಎಲ್. ನಾಗಭೂಷಣ ಸ್ವಾಮಿ), ‘ಮುಖಮುದ್ರೆ’ (ಲೇಖಕ:ಎ.ಎನ್‌.ಮುಕುಂದ) ಕೃತಿ ಲೋಕಾರ್ಪಣೆ: ಅತಿಥಿ–ಸಿ.ಎನ್. ರಾಮಚಂದ್ರನ್, ಗಿರೀಶ್‌ ಕಾಸರವಳ್ಳಿ, ಆಯೋಜನೆ–ಮಣಿಪಾಲ ಯುನಿವರ್ಸಿಟಿ ಪ್ರೆಸ್‌, ಸ್ಥಳ: ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಶನಿವಾರ ಬೆಳಿಗ್ಗೆ 10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT