ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಿನ ಮಕ್ಕಳಿಗೆ ಎಂಥ ಕಥೆಗಳು ಬೇಕು?

Last Updated 12 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಅರವತ್ತು ದಾಟಿದ ನನ್ನ ಓರಗೆಯವರೂ ಕೂಡ ಅದನ್ನೇ ನೆನಪಿಸಿಕೊಳ್ಳುತ್ತಾರೆ. ಬಾಲ್ಯದ ದಿನಗಳಲ್ಲಿ ಹಿರಿಯರು ಹೇಳುತ್ತಿದ್ದ ಕಥೆಗಳು, ಅವು ಹುಟ್ಟಿಸುತ್ತಿದ್ದ ಕುತೂಹಲ, ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದ್ದ ಕಥೆಗಳ ಮುಕ್ತಾಯ. ಅಕ್ಷರ ಕಲಿತ ಮೇಲೆ ಕಥೆ ಕುರಿತು ಅದೇ ಕುತೂಹಲ ಮುಂದುವರಿಯುತ್ತಿತ್ತು.
 
‘ಚಂದಮಾಮ’ ಕೈಸೇರಿದಾಗ ಅದನ್ನು ಮೊದಲು ಓದುತ್ತಿದ್ದವರು ದೊಡ್ಡವರೇ. ಅದರಲ್ಲೂ ತ್ರಿಮಿಕ್ರಮ ಬೇತಾಳದ ಕಥೆ, ಬೇತಾಳದ ಪ್ರಶ್ನೆಗೆ ರಾಜ ಉತ್ತರಿಸದಿದ್ದರೆ ತಲೆ ಸಾವಿರ ಹೋಳು – ನಾವು ಹಾಗಾಗುತ್ತದೆಂದು ನಂಬುತ್ತಿದ್ದೆವು. ಇದರ ನಂತರದ ಪುಟಗಳು ‘ಪರೋಪಕಾರಿ ಪಾಪಣ್ಣ’, ‘ದುರ್ಗೇಶ ನಂದಿನಿ’ ಜೊತೆಗೆ ಎಂ.ಟಿ.ವಿ. ಆಚಾರ್ಯರ ರಾಮಾಯಣ, ಮಹಾಭಾರತದ ಕಥೆಗಳಿಗೆ ಭರ್ಜರಿ ಚಿತ್ರಗಳು. ಸ್ಟಾಂಪು ಗಾತ್ರವಿದ್ದರೂ ಅದೇನು ಘನ, ಗಾಂಭೀರ್ಯ. ಹಿಂದಿನದನ್ನು ನೆನಪಿಸಿಕೊಂಡು ಹಪಹಪಿಸುವ ನನ್ನಂತಹವರು ಲಕ್ಷಾಂತರ ಮಂದಿ ಈಗಲೂ ಇರಬಹುದು. ಆಗ ರಾಜ–ರಾಣಿಯರ ಕಥೆಯೆಂದರೆ ಅದು ಅರ್ಥವಾಗುತ್ತಿತ್ತು.
 
ಬೀರಬಲ್ಲನ ಕಥೆಯಲ್ಲಿ ಅವನ ಬುದ್ಧಿವಂತಿಕೆಯನ್ನು ಮಕ್ಕಳೆಲ್ಲರೂ ಮೆಚ್ಚುತ್ತಿದ್ದರು. ಹಳ್ಳಿಯ ಪರಿಸರವಿರಲಿ, ನಗರ ಪರಿಸರವಿರಲಿ, ಹೇಳಿಕೊಳ್ಳುವ ವ್ಯತ್ಯಾಸವಿರುತ್ತಿರಲಿಲ್ಲ. ಕಥೆ ಹೇಳುತ್ತಿದ್ದ ಬಾಯಿಗಳು ಬೇರೆ ಇರಬಹುದು, ಆದರೆ ಕೇಳುವುದು ಅವೇ ಕಿವಿಗಳು. ಕಥೆಗಳಲ್ಲಿ ನೀತಿಪಾಠ ಇದ್ದೇ ಇರುತ್ತಿತ್ತು. ಕೆಟ್ಟದ್ದು ಮಾಡಿದರೆ ಏನಾಗುತ್ತದೆ ಎಂಬ ಉತ್ತರವೂ ಇರುತ್ತಿತ್ತು. ‘ಪಂಚತಂತ್ರ’ ಕಥೆ ಬರೆದವನು ವಿಷ್ಣುಶರ್ಮ ಎಂದು ಯಾರೂ ಬಾಯಿಪಾಠ ಮಾಡುತ್ತಿರಲಿಲ್ಲ. ಆದರೆ ಪಂಚತಂತ್ರದಲ್ಲಿ ಪ್ರಾಣಿ–ಪಕ್ಷಿಗಳು ಮಾತನಾಡುತ್ತಿದ್ದುದು ವಿಚಿತ್ರ ಸುಖ ಕೊಡುತ್ತಿತ್ತು. ಆ ಕಥೆಗಳ ಉದ್ದೇಶವೂ ನೀತಿಯೇ, ಈಸೋಪನ ಕಥೆಗಳಿದ್ದಂತೆ. ಪ್ರಾಣಿ ಪಕ್ಷಿಗಳು ಹೇಗೆ ಮಾತನಾಡಲು ಸಾಧ್ಯ ಎಂದು ಯೋಚಿಸಿರಲಿಲ್ಲ. ಬೇಕಾಗಿದ್ದುದು ನಮ್ಮ ಕಲ್ಪನೆಗಳಿಗೆ ರೆಕ್ಕೆಪುಕ್ಕ, ಅಷ್ಟೇ.
 
ಈಗಲೂ ಮಕ್ಕಳಿಗೆ ಕಥೆ ಕೇಳುವ ಉತ್ಸಾಹವೇನೂ ಬತ್ತಿಲ್ಲ. ಅಕ್ಷರ ಕಲಿಯುವ ಮೊದಲು ಪ್ರಾಣಿ ಪಕ್ಷಿಗಳು ಮಾತನಾಡುವ ಕಥೆ ಹೇಳಿದರೆ ಕುಕ್ಕರಗಾಲಿನಲ್ಲಿ ಕೂತು, ಕಣ್ಣರಳಿಸಿ ಕೂಡುತ್ತವೆ. ಒಂದು–ಎರಡು ತರಗತಿ ಮೀರಿದರೆ ಮುಗಿಯಿತು ರಾಜ–ರಾಣಿಯರ ಕಥೆಗೆ ವಿದಾಯ ಹೇಳುವ ಹಂತ ಈಗ ಸೃಷ್ಟಿಯಾಗಿದೆ. 
 
ಪಂಚತಂತ್ರದ ಕಥೆಯನ್ನು ಹೇಳಲು ಹೊರಟರೆ ‘ಬುರುಡೆ ಬಿಡಬೇಡಿ, ಪ್ರಾಣಿಗಳು ಮಾತನಾಡುವುದಿಲ್ಲ’ ಎನ್ನುವ ಉತ್ತರ ಪುಟಾಣಿಗಳ ಬಾಯಿಯಿಂದಲೇ ಬರುತ್ತವೆ. ಟೀವಿ ಲಗ್ಗೆ ಇಟ್ಟು ಎರಡು ಮೂರು ದಶಕಗಳೇ ಆಗಿವೆ. ಆಗ ಮಕ್ಕಳು ‘ಮಹಾಭಾರತ’, ‘ರಾಮಾಯಣ’ ಕಥೆ ಓದಲಿಲ್ಲ, ಬದಲು ನೋಡಿದರು. ಭೀಮ ‘ಛೋಟಾ ಭೀಮ’ನಾಗಿ ಮಕ್ಕಳ ಮನಸ್ಸಿಗೆ ಲಗ್ಗೆಹಾಕಿದ. ಕಾರ್ಟೂನ್ ಚಿತ್ರಗಳ ಮೂಲಕ ಹನುಮಾನ್, ರಾಧಾ, ಕೃಷ್ಣ ನವರೂಪದಲ್ಲಿ ಕುಣಿದಾಡಿದರು. ಹಿರಿಯರಿಗೆ ಹೀಗಾದರೂ ಮಕ್ಕಳಿಗೆ ನಮ್ಮ ಪರಂಪರೆ ಪರಿಚಯವಾಗುತ್ತದಲ್ಲ ಎಂಬ ಹುಸಿ ಸಮಾಧಾನ.
 
ಚಂದಮಾಮನನ್ನು ತೋರಿಸಿ ಮಕ್ಕಳ ಬಾಯಿಗೆ ತುತ್ತು ಇಡುತ್ತಿದ್ದ ತಾಯಂದಿರು ಈಗ ಐ–ಪ್ಯಾಡ್‌ಗಳಲ್ಲಿ ‘ಟ್ವಿಂಕಲ್ ಟ್ವಿಂಕಲ್’ ತೋರಿಸಿ ಅಥವಾ ‘ರೊಟ್ಟಿ ಅಂಗಡಿ ಕಿಟ್ಟಪ್ಪ’, ‘ಕರಡಿ ಬೆಟ್ಟಕೆ ಹೋಯಿತು’ ಇಂಥವನ್ನು ತೋರಿಸಿ ಜಯಿಸಬೇಕಾಗಿದೆ. ಮೊಬೈಲ್‌ನಲ್ಲಿ, ಕಂಪ್ಯೂಟರಿನಲ್ಲಿ ವಿಡಿಯೊ ಗೇಮ್ ಬಂದವು. ಮಕ್ಕಳ ಬಾಲ್ಯವನ್ನು ಕಸಿದವು. ಕಲ್ಪನೆ ಅರಳುವುದರ ಬದಲು ದೃಶ್ಯಗಳು ಅರಳಿದವು. ಎಂಟು ದಾಟುವುದರೊಳಗೆ ಅದೆಂಥ ಪ್ರೌಢಿಮೆ? ಬುದ್ಧಿಯ ವಿಕಾಸವೇ ಶಾರ್ಟ್ ಕಟ್ ಆಗಿದೆಯೇನೋ ಎಂದು ದಿಗಿಲು ಹುಟ್ಟಿಸುವ ಪ್ರೌಢಸ್ಥಿತಿ ಮಕ್ಕಳಲ್ಲಿ ಕಾಣುತ್ತಿದೆ. ಜ್ಞಾನಸ್ಫೋಟ ಬಾಲ್ಯದ ಮೇಲೆ ಪ್ರಯೋಗ ಮಾಡುತ್ತಿದೆ, ಮಕ್ಕಳೂ ಅದನ್ನು ಅರಗಿಸಿಕೊಳ್ಳುತ್ತಿದ್ದಾರೆ. 
 
ಹಾಗಾದರೆ ಮಕ್ಕಳಿಗೆ ಎಂಥ ಕಥೆಗಳು ಬೇಕು? ಇದೂ ಕೂಡ ಪೋಷಕರ ಗಮನಕ್ಕೆ ಬರುತ್ತಿದೆ. ಮಕ್ಕಳಿಗೆ ‘ಜುರಾಸಿಕ್ ಪಾರ್ಕ್‌’ನಂತಹ ಚಿತ್ರಗಳು ಬೇಕು. ಆ ಭಯಂಕರ ದೃಶ್ಯಗಳನ್ನು ಅನುಭವಿಸಬೇಕೆಂಬ ತವಕ ಅವರಲ್ಲಿ. ಹೆಚ್.ಜಿ. ವೇಲ್ಸ್ ಬರೆದ ‘ವಾರ್ ಆಫ್ ದಿ ವರ್ಲ್ಡ್ಸ್‌’ ಕಥೆಯಲ್ಲಿ ಮಂಗಳಗ್ರಹದ ಜೀವಿಗಳು, ಭೂಜೀವಿಗಳ ಮೇಲೆ ಆಕ್ರಮಣ ಮಾಡುವ ಪ್ರಸಂಗ ಬರುತ್ತದೆ. ಈಗ ಅದೇ ಕಥೆಯನ್ನು ಮೂರು–ನಾಲ್ಕನೆಯ ತರಗತಿಯ ಮಕ್ಕಳಿಗೆ ಹೇಳಿ ನೋಡಿ. ‘ಮಂಗಳ ಗ್ರಹದಲ್ಲಿ ಒಂದು ಸೊಳ್ಳೆಯೂ ಇಲ್ಲ’ ಎಂದು ನಿಮ್ಮ ಮುಖಕ್ಕೇ ಹೇಳಿ ನಿಮ್ಮ ಕಥನ ಕಲೆಗೆ ಬ್ರೇಕ್ ಹಾಕುತ್ತಾರೆ.
 
‘ಪಾತಾಳದಲ್ಲಿ ಪಾಪಚ್ಚಿ’ (ಅಲೈಸ್ ಇನ್ ವಂಡರ್ ಲ್ಯಾಂಡ್) ಕಥೆ ಹೇಳಿ ಈಗಲೂ ಕಣ್ಣರಳಿಸಿ ಮಕ್ಕಳು ಕೇಳುತ್ತಾರೆ. ಅಲ್ಲಿ ಆಗುವುದು ಅಗೋಚರ ಲೋಕದ ದರ್ಶನ. ಹ್ಯಾರಿ ಪಾಟರ್ ಯಶಸ್ವಿಯಾಗಿದ್ದು ಮ್ಯಾಜಿಕ್ ಪ್ರಸಂಗ ತಂದಿರುವುದರಿಂದ. ಮಕ್ಕಳ ಕನಸಿಗೆ ರೆಕ್ಕೆ ಬರುತ್ತದೆ. ‘ಅಲ್ಲಾವುದ್ದೀನನ ಅದ್ಭುತ ದೀಪ’ದ ಕಥೆ ಹೇಳಿದರೂ ಅದೇ ಹುಮ್ಮಸ್ಸಿನಿಂದ ಮಕ್ಕಳು ಕೇಳುತ್ತಾರೆ. ಕಾಡಿಗೆ ಹೋಗಿ ಸಿಂಹ, ಹುಲಿ, ಕರಡಿಗಳನ್ನು ಬೇಟೆಯಾಡಿದ ಶೂರರ ಕಥೆ ಹೇಳಿ, ಮಕ್ಕಳು ನಕ್ಕು ಬಿಡುತ್ತವೆ – ‘ಹಾಗೆಲ್ಲ ಪ್ರಾಣಿಗಳನ್ನು ಕೊಲ್ಲುವ ಹಾಗಿಲ್ಲ’ ಎಂಬ ನೀತಿಪಾಠ ನಿಮಗೇ ಆಗುತ್ತದೆ. ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಕಥೆ’ 70ರ ದಶಕಕ್ಕೆ ಚೆನ್ನಾಗಿತ್ತು.  
 
ವಿಜ್ಞಾನವನ್ನು ಆಧರಿಸಿ ನಿಮ್ಮ ಕಲ್ಪನೆಗಳನ್ನು ವಿಸ್ತರಿಸಿ ಕಥೆ ಕಟ್ಟಿದರೆ ಮಕ್ಕಳ ಕಿವಿ ನೆಟ್ಟಗಾಗುತ್ತದೆ. ಸ್ಕೂಲುಗಳಲ್ಲಿ ದಂಡಿಯಾಗಿ ಹೋಂವರ್ಕ್ ಕೊಡುವುದೆಲ್ಲ ತೊಂಬತ್ತು ಭಾಗ ವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಗಳೇ. ಈಗಿನ ಪೀಳಿಗೆಗೆ ಸಾಹಸ ಬೇಕು, ಅನ್ಯಗ್ರಹದಾಚೆ ಹೋಗಬೇಕು. ಏಲಿಯನ್ಸ್‌ಗಳ ಜೊತೆ ಮಾತನಾಡಬೇಕು. ಡೈನೋಸಾರ್‌ಗಳನ್ನು ಕೆಡವಿ ಬೀಳಿಸುವ ಆಟ ಬೇಕು. ನಗರವಾಸಿ ಮಕ್ಕಳಿಗಷ್ಟೇ ಅಲ್ಲ, ಟೀವಿಯ ವ್ಯಾಪಕ ಬಳಕೆಯಿಂದಾಗಿ ಹಳ್ಳಿಗಳಲ್ಲೂ ಮಕ್ಕಳು ಅನಿಮಲ್ ಪ್ಲಾನೆಟ್, ನ್ಯಾಷನಲ್ ಜಿಯೋಗ್ರಾಫಿಕ್ ನೋಡುತ್ತಿರುವ ಕಾಲಘಟ್ಟ ಇದು. 
 
ಪೋಷಕರು ಮಾಡಬೇಕಾದ್ದು ಬಹಳಷ್ಟಿದೆ. ನಿಸರ್ಗದ ಹತ್ತು ಹಲವು ಕುತೂಹಲಗಳು ಕಣ್ಣಮುಂದೆ ಪ್ರತ್ಯಕ್ಷವಾಗುವಂತಹ ಘಟನೆಗಳನ್ನು ಆಧರಿಸಿದ ಕಥೆಗಳು ಬೇಕು. ಕಾಲಕ್ಕೆ ತಕ್ಕಂತೆ ಕಥಾವಸ್ತುಗಳನ್ನು ಬದಲಾಯಿಸಿಕೊಳ್ಳಬೇಕು. ಕಾಗೆ, ನರಿ, ಸಿಂಹ ಮುಂತಾದ ಪ್ರಾಣಿಗಳ ಸಹಜ ವರ್ತನೆಗಳನ್ನೇ ಆಧರಿಸಿ ಕಥೆಗಳನ್ನು ವಿಸ್ತರಿಸಬಹುದು. ಹಟಕ್ಕೆ ಬಿದ್ದಂತೆ ಅವುಗಳನ್ನು ಮಾತನಾಡಿಸುವ ತಂತ್ರ ಬಿಡಬೇಕು. ಮುಸ್ಸೋರಿಯಲ್ಲಿ ನೆಲಸಿರುವ ಬ್ರಿಟಿಷ್ ಲೇಖಕ ರಸ್ಕಿನ್‌ಬಾಂಡ್ ಬರೆದಿರುವ ಐವತ್ತಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳಲ್ಲಿ ನಿಸರ್ಗ ಮತ್ತು ಮಕ್ಕಳ ನಡುವಿನ ಸಂಬಂಧವೇ ಕೇಂದ್ರಬಿಂದು. ಕಥಾವಸ್ತು ಎಂದಿಗೂ ಸೀಮಾತೀತ, ಮಕ್ಕಳ ಕಥೆಗಳೂ ಅಷ್ಟೇ. ಚೌಕಟ್ಟುಗಳನ ಕಳಚುವುದೇ ಸೃಜನಶೀಲತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT