ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಕ್ರಾಂತಿ: ಮನಸ್ಸಿದ್ದರೆ ಮಾರ್ಗವೂ ಉಂಟು!

ಕರ್ನಾಟಕದ ನಾಳೆಗಳು
Last Updated 16 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಹತ್ತಾರು ನದಿಗಳು, ಸಾವಿರಾರು ಕೆರೆಗಳಿಂದ ಕನ್ನಡ ನಾಡು ಆವೃತವಾಗಿದ್ದರೂ ರಾಜ್ಯದಲ್ಲಿ ನೀರಿಗೆ ಬರ ತಪ್ಪಿಲ್ಲ. ವರ್ಷದಿಂದ ವರ್ಷಕ್ಕೆ ಬೀಳುವ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಸತತ ಬರಗಾಲಕ್ಕೆ ರಾಜ್ಯ ತುತ್ತಾಗುತ್ತಲೇ ಇದೆ.

ಕಾಲಮಿತಿಯಲ್ಲಿ ನೀರಿನ ಸಮರ್ಪಕ ಬಳಕೆ, ಯೋಜನೆ ಅನುಷ್ಠಾನಕ್ಕೆ ಅಗತ್ಯವಾದ ಸಂಪನ್ಮೂಲ ಕ್ರೋಡೀಕರಣ, ಮೀತಿ ಮಿರಿದ ನೀರಿನ ಬಳಕೆಗೆ ಕಡಿವಾಣ, ಉನ್ನತ ತಾಂತ್ರಿಕತೆ ಅಳವಡಿಕೆ, ವಿಶೇಷ ಪರಿಣತಿ ಹೊಂದಿದ ಅಧಿಕಾರಿ- ಸಿಬ್ಬಂದಿ ನೇಮಕ, ರಾಜ್ಯಕ್ಕೆ ಹಂಚಿಕೆಯಾಗಿರುವ, ಸ್ವಾಭಾವಿಕವಾಗಿ ಹಂಚಿಕೆಯಾಗಲೇ ಬೇಕಾದ ನೀರು ಬಳಸಲು ಅನುವು ಮಾಡಿಕೊಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ, ಸುಪ್ರೀಂಕೋರ್ಟ್‌, ನ್ಯಾಯಮಂಡಳಿಯ ಮೇಲೆ ಬೇಡಿಕೆ ಮಂಡಿಸುವ ಕೆಲಸವನ್ನು ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳು ಮಾಡಬೇಕಾಗಿದೆ.

ಈ ಹಿನ್ನೋಟ, ಮುನ್ನೋಟದ ಬೆಳಕಿನಲ್ಲಿ ಮೇಲ್ಮೈ ಹಾಗೂ ಅಂತರ್ಜಲ ಸೇರಿ ಕರ್ನಾಟಕದಲ್ಲಿ ಲಭ್ಯವಿರುವ, ಲಭ್ಯವಾಗುವ ನೀರನ್ನು 2060ರವರೆಗೆ ಸದ್ಬಳಕೆ ಮಾಡಲು ಇರುವ ಸವಾಲುಗಳು ಮತ್ತು ಪರಿಹಾರಗಳ ಬಗ್ಗೆ  ವಿಶ್ಲೇಷಿಸುವ ಯತ್ನ ಇಲ್ಲಿದೆ.

ಭೂಮಿಯ ಮೇಲ್ಮೈ ಹಾಗೂ ತಳದಲ್ಲಿರುವ ಶೇ 80 ರಷ್ಟು ನೀರು ಕೃಷಿ ಚಟುವಟಿಕೆಗೆ ಬಳಕೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ  ಅಂದಾಜಿಗೂ ನಿಲುಕದಂತೆ ನೀರಿನ ಬಳಕೆ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಆದರೆ, ರಾಜ್ಯದಲ್ಲಿ ಸುರಿಯುತ್ತಿರುವ ವಾಡಿಕೆ ಮಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕಳೆದ 5 ವರ್ಷಗಳಲ್ಲಿ 176 ತಾಲ್ಲೂಕುಗಳ ಪೈಕಿ ಉತ್ತರ ಕರ್ನಾಟಕದ 30 ಹಾಗೂ ದಕ್ಷಿಣ ಕರ್ನಾಟಕದ 40 ತಾಲ್ಲೂಕುಗಳ ಸತತ ಬರಗಾಲದಿಂದ ತತ್ತರಿಸಿವೆ.

ಉತ್ತರ ಕರ್ನಾಟಕದ 11, ದಕ್ಷಿಣ ಕರ್ನಾಟಕದ 16 ತಾಲ್ಲೂಕುಗಳು ಸೇರಿ 27 ತಾಲ್ಲೂಕುಗಳ ಮೇಲೆ ಸರಿ ಸುಮಾರು ಕಳೆದ 11ರಿಂದ 15 ವರ್ಷದ ಬರದ ಸಿಡಿಲು ಅಪ್ಪಳಿಸಿದೆ. ಕರ್ನಾಟಕದಲ್ಲಿ ನದಿಗಳಿಗೆ ಏನೂ ಬರವಿಲ್ಲ. ಪ್ರಮುಖವಾಗಿ ಏಳು  ನದಿಕೊಳ್ಳಗಳ ನೀರನ್ನು ರಾಜ್ಯ  ಅವಲಂಬಿಸಿದೆ. ಕೃಷ್ಣಾ, ಗೋದಾವರಿ, ಕಾವೇರಿ, ಪಶ್ಚಿಮ ವಾಹಿನಿ, ದಕ್ಷಿಣ ಪಿನಾಕಿನಿ, ಉತ್ತರ ಪಿನಾಕಿನಿ ಹಾಗೂ ಪಾಲಾರ್‌ ಕಣಿವೆಗಳು ರಾಜ್ಯವನ್ನು ವ್ಯಾಪಿಸಿವೆ.

ಇಲ್ಲಿಯವರೆಗೆ ನಾಲ್ಕು ಅಂತರರಾಜ್ಯ ಜಲವಿವಾದ ನ್ಯಾಯಮಂಡಳಿ ಅಂತಿಮ ತೀರ್ಪು ನೀಡಿದ್ದು, 1248.36 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಈ ಪೈಕಿ 991.36 ಟಿಎಂಸಿ ಅಡಿ ನೀರನ್ನು ಮಾತ್ರ ಇಲ್ಲಿಯವರೆಗೆ ರಾಜ್ಯ ಬಳಸಿಕೊಂಡಿದೆ.  ಮಹಾದಾಯಿ ನ್ಯಾಯಮಂಡಳಿ ಅಂತಿಮ ತೀರ್ಪು ಇನ್ನೂ ಬರಬೇಕಾಗಿದೆ.

ಮೇಲ್ಮೈ ನೀರಿನ ಪರಿಸ್ಥಿತಿ ಹೀಗಿದ್ದರೆ ರಾಜ್ಯದ ಅಂತರ್ಜಲ ಮಟ್ಟ ತೀವ್ರ ಕಳವಳಕಾರಿಯಾಗಿದೆ. 176 ತಾಲ್ಲೂಕುಗಳ ಪೈಕಿ 30 ತಾಲ್ಲೂಕುಗಳು ಅಂತರ್ಜಲವನ್ನು ಮಿತಿ ಮೀರಿ ಬಳಸಿವೆ. 13 ತಾಲ್ಲೂಕುಗಳ ಶೇ 90ರಷ್ಟು ಅಂತರ್ಜಲ ಕಲುಷಿತ ಮತ್ತು ವಿಷಯುಕ್ತವಾಗಿದ್ದು ಪರಿಸ್ಥಿತಿ ಅಪಾಯಕಾರಿ ಮಟ್ಟ ಮುಟ್ಟಿದೆ. 63 ತಾಲ್ಲೂಕುಗಳಲ್ಲಿ ಅಂತರ್ಜಲದ ಮಟ್ಟ ಮಿಶ್ರ ಸ್ಥಿತಿಯಲ್ಲಿದ್ದು, ಕೆಲವು ಕಡೆಗಳಲ್ಲಿ ಮಾತ್ರ ಬಳಕೆಗೆ ಯೋಗ್ಯವಾಗಿಲ್ಲ. ಉಳಿದ 70 ತಾಲ್ಲೂಕುಗಳಲ್ಲಿ ಅಂತರ್ಜಲದ ಗುಣಮಟ್ಟ ಸುರಕ್ಷಿತವಾಗಿದೆ.

2060ರ ಸವಾಲುಗಳು
ಪಶ್ಚಿಮಮುಖಿ ಕಣಿವೆಯಲ್ಲಿರುವ ನೇತ್ರಾವತಿ, ಸೀತಾನದಿ, ಕುಮಾರಧಾರಾ ಸೇರಿದಂತೆ ಹಲವು ನದಿ, ಉಪನದಿಗಳಲ್ಲಿ ನೀರಿನ ವಾರ್ಷಿಕ ಇಳುವರಿ 1,700 ಟಿಎಂಸಿ ಅಡಿಗಳಷ್ಟಿದೆ. ಆದರೆ, ಕುಡಿಯುವ ನೀರು ಮತ್ತು ವಿದ್ಯುತ್  ಉತ್ಪಾದನೆಗೆ ಬಿಟ್ಟರೆ ಇದರಲ್ಲಿ ಹೆಚ್ಚಿನ ನೀರು ಕೃಷಿ ಬಳಕೆಗೆ ಸಿಗದೆ  ಸಮುದ್ರ ಸೇರುತ್ತಿದೆ.

ಜೈವಿಕ ಅರಣ್ಯ ಪ್ರದೇಶಕ್ಕೆ ಹಾನಿಯಾಗುತ್ತದೆ ಎಂಬ ಕೂಗು ಹಾಗೂ ಸ್ಥಳೀಯರ ಆಕ್ಷೇಪದ ಕಾರಣದಿಂದಾಗಿ ಈ ನೀರನ್ನು ಸದ್ಯ ಬಳಸಲಾಗುತ್ತಿಲ್ಲ. ಅಲ್ಲಿನ ಜನರ ಮನವೊಲಿಸಿ ಪಶ್ಚಿಮಾಭಿಮುಖಿಯಾಗಿ ಹರಿಯುವ ನದಿಗಳನ್ನು  ಪೂರ್ವಾಭಿಮುಖವಾಗಿ  ಹರಿಸಿದರೆ ಸುಮಾರು 100 ಟಿಎಂಸಿ ಅಡಿ ನೀರನ್ನು ಬಯಲುಸೀಮೆಗೆ ಹಾಗೂ ನೀರಿನ ಬೇಡಿಕೆ ಇರುವ ಜಿಲ್ಲೆಗಳಿಗೆ ಹರಿಸಬಹುದು.

ಮಹಾನದಿ ಮತ್ತು ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕಾವೇರಿಗೆ ಹರಿಸಲು ಕೇಂದ್ರ ಸರ್ಕಾರ   ‘ಪೆನಿನ್‌ ಸುಲಾರ್‌ ನದಿ ಅಭಿವೃದ್ಧಿ ಯೋಜನೆ’ ರೂಪಿಸಿದೆ. ಕರ್ನಾಟಕದ  ಬೇಡಿಕೆಯನ್ನು ಮನ್ನಿಸಿರುವ ಕೇಂದ್ರ ಸರ್ಕಾರ 150 ಟಿಎಂಸಿ ಅಡಿ ನೀರನ್ನು ರಾಜ್ಯಕ್ಕೆ ಹಂಚಿಕೆ ಮಾಡಲು ಒಪ್ಪಿಕೊಂಡಿದೆ. ಯೋಜನೆ ಅನುಷ್ಠಾನವಾದರೆ ಹೆಚ್ಚುವರಿ ನೀರು ರಾಜ್ಯಕ್ಕೆ ಲಭ್ಯವಾಗಲಿದೆ.

ಮಹಾದಾಯಿ ನ್ಯಾಯಮಂಡಳಿ ಮುಂದಿರುವ ಜಲ ವ್ಯಾಜ್ಯ ಇತ್ಯರ್ಥವಾದರೆ 36.558 ಟಿಎಂಸಿ ಅಡಿ ನೀರು ರಾಜ್ಯಕ್ಕೆ ಸಿಗಲಿದೆ. ಎತ್ತಿನಹೊಳೆ ಯೋಜನೆಯನ್ನು  ಕಾಲಮಿತಿಯಲ್ಲಿ ಪೂರ್ಣಗೊಳಿಸಿದರೆ 24 ಟಿಎಂಸಿ ಅಡಿ ನೀರು ದೊರೆಯಲಿದೆ.

ಗೋದಾವರಿ ಕಣಿವೆಯಲ್ಲಿ ಹೆಚ್ಚುವರಿ ನೀರನ್ನು ಕೃಷ್ಣಾ ಕೊಳ್ಳದ ಭಾಗೀದಾರ ರಾಜ್ಯಗಳಿಗೆ ಮರು ಹಂಚಿಕೆ ಮಾಡಿದರೆ 15 ಟಿಎಂಸಿ ಅಡಿ ನೀರು ಕರ್ನಾಟಕಕ್ಕೆ ಸಿಗಲಿದೆ.ರಾಜ್ಯದಲ್ಲಿ ಜಲಾನಯನ ಪ್ರದೇಶಾಭಿವೃದ್ಧಿ ಹಾಗೂ ಮಳೆ ನೀರು ಕೊಯ್ಲು ಸಮರ್ಪಕವಾಗಿ ಅನುಷ್ಠಾನವಾದರೆ 182 ಟಿಎಂಸಿ ಅಡಿ ನೀರು ಅಂತರ್ಜಲ ರೂಪದಲ್ಲಿ ಬಳಕೆಗೆ ದೊರೆಯಲಿದೆ.

ಕಾವೇರಿ, ಕೃಷ್ಣಾ ನದಿ ಕಣಿವೆಯ ಕಾಲುವೆ, ವಿತರಣಾ ನಾಲೆಗಳಲ್ಲಿ ಸೋರಿ ಹೋಗಿ, ಅಂತರ್ಜಲ ಸೇರುವ ನೀರಿನ ಬಳಕೆಗೆ ಯೋಜನೆ ರೂಪಿಸಿದರೆ ಸುಮಾರು 100 ಟಿಎಂಸಿ ಅಡಿ ನೀರು ಸಿಗಲಿದೆ.

ಜಲಸಂಪನ್ಮೂಲ ಇಲಾಖೆ ದೂರದೃಷ್ಟಿಯಿಂದ ಯೋಜನೆ ರೂಪಿಸಿದರೆ ಮುಂಬರುವ ದಿನಮಾನಗಳಲ್ಲಿ ಈ ಮೂಲಗಳಿಂದ ಸುಮಾರು 547 ಟಿಎಂಸಿ ಅಡಿ ನೀರು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಿಗಲಿದೆ.

ಕರ್ನಾಟಕದ ಮೂರು ಜಿಲ್ಲೆಗಳು ಸಮುದ್ರಕ್ಕೆ ಚಾಚಿಕೊಂಡಿದ್ದು ಇಲ್ಲಿ ಹೇರಳವಾಗಿ ಸಿಗುವ ಸಮುದ್ರ ನೀರನ್ನು  ಸಿಹಿ ನೀರಾಗಿ ಪರಿವರ್ತಿಸುವ ‘ಲವಣಾಂಶಮುಕ್ತ ವಿಧಾನ’ದಿಂದ ಹೆಚ್ಚಿನ ಪ್ರಮಾಣದ ನೀರು ಬಳಕೆಗೆ ಯೋಗ್ಯವಾಗುವಂತೆ ಮಾಡಬಹುದು.

ಭತ್ತ, ಕಬ್ಬು ಬೆಳೆಗೆ ವಿಪರೀತ ನೀರು ವ್ಯಯವಾಗುತ್ತಿದೆ. ಶ್ರೀ ಪದ್ಧತಿ, ಸೂಕ್ಷ್ಮ ನೀರಾವರಿ ಪದ್ಧತಿ, ಹನಿ ನೀರಾವರಿ ಪದ್ಧತಿಯನ್ನು ಪ್ರೋತ್ಸಾಹಿಸಿದರೆ ನೀರಿನ ಬಳಕೆ ಕಡಿಮೆ
ಯಾಗಲಿದೆ. ರೈತರು ಮನಃಪೂರ್ವಕವಾಗಿ ಒಪ್ಪದೇ ಇದ್ದರೆ ನೀರಿನ ಬಳಕೆ ಕಡಿಮೆ ಮಾಡಲು ನೀರಿನ ಕರ ಪರಿಷ್ಕರಣೆ, ಫಲಾನುಭವಿ ರೈತರಿಂದ ನೀರಿನ ಅಭಿವೃದ್ಧಿಗೆ ಲೆವಿ ವಿಧಿಸುವ ಮೂಲಕ ಬಳಕೆಗೆ ಕಡಿವಾಣ ಹಾಕುವ ಅವಕಾಶವೂ ಇದೆ.

ಕೃಷ್ಣಾ ಕೊಳ್ಳ
ಕೃಷ್ಣಾ ಮೇಲ್ದಂಡೆ ಯೋಜನೆಯ 3 ನೇ ಹಂತದಲ್ಲಿ 130 ಟಿಎಂಸಿ ನೀರು ಬಳಸಿ 5.3 ಲಕ್ಷ ಹೆಕ್ಟೇರ್‌ಗೆ ನೀರಾವರಿ ಕಲ್ಪಿಸಬೇಕಾಗಿದೆ. ಇದರಲ್ಲಿ 18.98 ಟಿಎಂಸಿ ಅಡಿ ನೀರು ನಾರಾಯಣಪುರ ಬಲದಂಡೆ ನಾಲೆ ವಿಸ್ತರಣೆ ಹಾಗೂ 111.02 ಟಿಎಂಸಿ ನೀರು 8 ಏತನೀರಾವರಿ ಯೋಜನೆಯಿಂದ ರೈತರ ಹೊಲಗಳಿಗೆ ತಲುಪಬೇಕಾಗಿದೆ.

ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಎತ್ತರಕ್ಕೆ ಗೇಟ್‌ ನಿರ್ಮಾಣವಾಗಿತ್ತು. ಕೋರ್ಟ್‌ ಆದೇಶದ ಅನುಸಾರ ಈ ಎತ್ತರವನ್ನು 519.6 ಮೀಟರ್‌ಗೆ ಕುಗ್ಗಿಸಿ ಗೇಟ್‌ ಕತ್ತರಿಸಿ, ಸಂಗ್ರಹಿಸಿಡಲಾಗಿತ್ತು. ಇದನ್ನು ಮತ್ತೆ ಜೋಡಣೆ (ವೆಲ್ಡಿಂಗ್) ಮಾಡಿದರೆ ಒಂದು ತಿಂಗಳಲ್ಲಿ ಜಲಾಶಯದ ಎತ್ತರವನ್ನು ಏರಿಸಬಹುದು.

ಈ ಯೋಜನೆಗಾಗಿ 1,34,107 ಎಕರೆ ಭೂಮಿ ಸ್ವಾಧೀನವಾಗಬೇಕಿದೆ. ಈ ಪೈಕಿ 46,778 ಎಕರೆ ಭೂಸ್ವಾಧೀನ ಪ್ರಕ್ರಿಯೆ ಆರಂಭವೇ ಆಗಿಲ್ಲ. ರೈತ ಸ್ನೇಹಿ ಪರಿಹಾರ ಯೋಜನೆ ರೂಪಿಸಿದರೆ ಎರಡು ವರ್ಷದ ಕಾಲಮಿತಿಯಲ್ಲಿ ಭೂಸ್ವಾಧೀನ ಪೂರ್ಣಗೊಳಿಸಲು ಸಾಧ್ಯವಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಏತನೀರಾವರಿ ಯೋಜನೆಗಳಿಗೆ 363 ಮೆಗಾವಾಟ್‌ ವಿದ್ಯುತ್‌ ಅಗತ್ಯವಾಗಿದ್ದು, ಅದನ್ನು ಕೂಡಲೇ ಒದಗಿಸಬೇಕು.ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲಿಸಲು ಹಿಂದೆ ಅಸ್ತಿತ್ವದಲ್ಲಿದ್ದ ಸಚಿವ ಸಂಪುಟ ಉಪಸಮಿತಿಗೆ ಮುಖ್ಯಮಂತ್ರಿಗಳು ಮತ್ತೆ ಜೀವ ನೀಡಿ, ತಿಂಗಳಿಗೊಮ್ಮೆ ಸಭೆ ನಡೆಸಲು ಸೂಚಿಸಬೇಕು.

ಕೃಷ್ಣಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರದ ಮೇಲೆ ಒತ್ತಡ ಹೇರಿ ಅನುದಾನ ಪಡೆಯಬೇಕು. ಸಾಧ್ಯವಾಗದೇ ಇದ್ದರೆ ವಿಶ್ವಬ್ಯಾಂಕ್‌, ಕೃಷ್ಣಾ ಜಲಬಾಂಡ್‌ ಬಿಡುಗಡೆ, ರೈತರಿಂದ ಅಭಿವೃದ್ಧಿ ಲೆವಿ ವಸೂಲಿ ಮಾಡಿ ಸಂಪನ್ಮೂಲ ಕ್ರೋಡೀಕರಣ ಮಾಡಬಹುದು. ಈ ಯೋಜನೆ ಮುಗಿಯವವರೆಗೆ ಬೇರೆ ಯಾವುದೇ ಯೋಜನೆ ಆರಂಭಿಸದಂತೆ ನಿಷ್ಠುರ ನಿರ್ಣಯ ಕೈಗೊಳ್ಳಬೇಕು.

ಇದೇ ರೀತಿ ಭದ್ರಾ ಮೇಲ್ಡಂಡೆಗೆ 200 ಮೆಗಾವಾಟ್‌, ಎತ್ತಿನ ಹೊಳೆ ಯೋಜನೆಗೆ 276 ಮೆಗಾವಾಟ್‌ ಸೇರಿ ಒಟ್ಟಾರೆ 839 ಮೆಗಾವಾಟ್‌ ವಿದ್ಯುತ್‌ ಅಗತ್ಯ. ಆಲಮಟ್ಟಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ಪಾದನೆಯಾಗುವ  297 ಮೆಗಾವಾಟ್‌ ವಿದ್ಯುತ್‌ನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ ಏತ ನೀರಾವರಿಗೆ ಮೀಸಲು ಇಡಬೇಕು.

ಕಾವೇರಿ ಕೊಳ್ಳ
ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪಿನಲ್ಲಿ ಜಲವಿದ್ಯುತ್ ಮತ್ತು ಕುಡಿಯುವ ನೀರನ್ನು ಬಳಸಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ಅವಕಾಶ ಬಳಸಿಕೊಂಡು ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುದಾನ ಪಡೆಯಲು ಯತ್ನಿಸಬೇಕು. ಇಲ್ಲವೇ ಸ್ವಂತ ಅನುದಾನ ಬಳಸಿಯಾದರೂ ತ್ವರಿತವಾಗಿ ಯೋಜನೆ ಅನುಷ್ಠಾನ ಮಾಡಬೇಕು.

ಕರ್ನಾಟಕಕ್ಕೆ ಸಿಗಬೇಕಾದ 30 ಟಿಎಂಸಿ ಅಡಿ ಹೆಚ್ಚುವರಿ ನೀರಿಗೆ ನ್ಯಾಯಮಂಡಳಿ ಮುಂದೆ ಮೊರೆ ಹೋಗಬೇಕು. ಕಬಿನಿ ಉಪ ಕೊಳ್ಳದಿಂದ ಕೇರಳಕ್ಕೆ ಹೆಚ್ಚುವರಿಯಾಗಿ ಹಂಚಿಕೆಯಾಗಿರುವ 30 ಟಿಎಂಸಿ ಅಡಿ ಬಳಸದೇ ಇರುವ ಸದ್ಯ ಕೇರಳ 10 ಟಿಎಂಸಿ ಅಡಿ ಹಾಗೂ ತಮಿಳುನಾಡು 20 ಟಿಎಂಸಿ ಅಡಿ ನೀರು ಬಳಸಲು ಅವಕಾಶವಿದೆ. ಕಬಿನಿ ಜಲಾನಯನ ಪ್ರದೇಶ ಬಹುತೇಕ ಕರ್ನಾಟಕದ ಭಾಗವಾಗಿರುವುದರಿಂದ ಮೂರನೇ ಎರಡರಷ್ಟು ಪಾಲು ಕೇಳಿದರೆ ಹೆಚ್ಚುವರಿಯಾಗಿ  10 ಟಿಎಂಸಿ ಅಡಿ ನೀರು ರಾಜ್ಯಕ್ಕೆ ಸಿಗಲಿದೆ.

ಕಾವೇರಿ ಕೊಳ್ಳದ ಬೆಳೆ ಪದ್ಧತಿಯಲ್ಲಿ ಬದಲಾವಣೆ ಮಾಡಿ, ಕಬ್ಬು ಮತ್ತು ಭತ್ತಕ್ಕೆ ನಿಯಂತ್ರಣ ಹೇರಬೇಕು. ಅಚ್ಚುಕಟ್ಟು ಪ್ರದೇಶ, ನಾಲೆ ಪ್ರದೇಶದಲ್ಲಿ ಅಂತರ್ಜಲ ಸಂಗ್ರಹದ ಮಟ್ಟ ಹೆಚ್ಚಿಸಿದರೆ 10 ರಿಂದ 15 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಸಿಗಲಿದೆ. ಇದರ ಜತೆಗೆ ಕೊಡಗು ಜಿಲ್ಲೆಯ ಕೊಂಗನಹೊಳೆ, ಕೊಕ್ಕಟ್ಟು ಹೊಳೆ, ಲಕ್ಷ್ಮಣತೀರ್ಥ ತಿರುವು ಯೋಜನೆ ಜಾರಿ ಮಾಡಿದರೆ 8 ರಿಂದ 10 ಟಿಎಂಸಿ ಅಡಿ ನೀರು ಸಿಗಲಿದೆ.

ರಾಜ್ಯದ ಗಡಿ ಭಾಗದಲ್ಲಿರುವ ನದಿ ಮತ್ತು ಕಾಲುವೆಗಳಿಗೆ ಸೇತುವೆ ಮತ್ತು ಕಿರು ಅಣೆಕಟ್ಟು (ಬ್ರಿಡ್ಜ್‌ ಕಮ್‌ ಬ್ಯಾರೇಜ್‌) ನಿರ್ಮಿಸಿ ನೀರಿನ ಸಂಗ್ರಹ ಮಾಡಬೇಕು. ಇದರಿಂದ ರಾಜ್ಯದ ಪಾಲು ಬೇರೆ ರಾಜ್ಯಕ್ಕೆ ಹರಿಯುವುದು ತಪ್ಪುತ್ತದೆ. ನಮ್ಮ ರಾಜ್ಯದ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಕಾಲುವೆಯ ಆಸುಪಾಸು ಹಾಗೂ ಗಡಿಯಂಚಿನ ವಿತರಣಾ ನಾಲೆಯ ತುತ್ತತುದಿಯ ರೈತರಿಗೆ ನೀರೂ ಸಿಗಲಿದೆ.

ನಗರ ನೀರು ಬಳಕೆಗೆ ಕಡಿವಾಣ
‘ಮೇಲ್ಮೈನೀರು ಯಥೇಚ್ಛವಾಗಿ ಸಿಗುವುದರಿಂದ ಕುಡಿಯುವ ನೀರನ್ನು ಅನಿರ್ಬಂಧಿತವಾಗಿ ಬಳಸಬಹುದು’ ಎಂಬ ಭಾವನೆ ನಗರ ಮತ್ತು ಪಟ್ಟಣದ ಜನರಿಗೆ ಇದೆ. ಆದರೆ ವಾಸ್ತವ ಹಾಗಿಲ್ಲ. ವಲಸೆ ಪ್ರಮಾಣ ಇದೇ ರೀತಿ ಮುಂದುವರಿದರೆ 2051ಕ್ಕೆ ಬೆಂಗಳೂರಿನ ಜನಸಂಖ್ಯೆ 3,35,63,000ಕ್ಕೆ ಮುಟ್ಟಬಹುದು ಎಂದುಕೊಂಡರೆ ಇಲ್ಲಿಗೆ ನೀರು ಒದಗಿಸಲು ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳ ನೀರೂ ಸಾಕಾಗುವುದಿಲ್ಲ. ಅವರೆಡೂ ಜಲಾಶಯಗಳನ್ನು ಬೆಂಗಳೂರಿಗೆ ಮೀಸಲಿಡಬೇಕಾಗುತ್ತದೆ. ಆದರೆ ವಾಸ್ತವದಲ್ಲಿ ಅದು ಅಸಾಧ್ಯ.

ಹೀಗಾಗಿ ಒಂದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ನಗರಗಳಲ್ಲಿ  ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಮಾಡಿ, ಸಂಸ್ಕರಿಸಿದ  ನೀರು ಬಳಕೆಗೆ ಯೋಜನೆ ರೂಪಿಸಬೇಕು. ಕುಡಿಯುವ ನೀರಿಗೆ ಪ್ರತ್ಯೇಕ ಕೊಳವೆ, ಗೃಹೋಪಯೋಗಿ ಉದ್ದೇಶಕ್ಕೆ ಸಂಸ್ಕರಿಸಿದ ನೀರು ಪೂರೈಸಲು ಪ್ರತ್ಯೇಕ ಕೊಳವೆ ಅಳವಡಿಸಬೇಕು. ಇಲ್ಲದಿದ್ದರೆ ನೀರಿನ ಬೇಡಿಕೆ ಪೂರೈಸಲು ಸಾಧ್ಯವೇ ಇಲ್ಲ.

ಏತ ನೀರಾವರಿ ಯೋಜನೆಗಳಿಗೆ ನೂತನ ನೀತಿ
ನೀರಾವರಿ ವಿಸ್ತರಣೆ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಏತ ನೀರಾವರಿ ಯೋಜನೆಗಳ ಅನುಷ್ಠಾನ, ನಿರ್ವಹಣೆ ಹಾಗೂ ನೀರಿನ ಸದ್ಬಳಕೆಗೆ ಪ್ರತ್ಯೇಕ ನೂತನ ನೀತಿಯನ್ನು ಸರ್ಕಾರ ಜಾರಿಗೆ ತರುವ ತುರ್ತು ಇದೆ.

ಇಲ್ಲಿಯವರೆಗೆ ಅನುಷ್ಠಾನವಾದ ಏತ ನೀರಾವರಿ ಯೋಜನೆಗಳು ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸೂಕ್ತ ಅನುದಾನ, ತರಬೇತಿ ಇಲ್ಲದ ಸಿಬ್ಬಂದಿ ಕೊರತೆಯಿಂದ ನಿರೀಕ್ಷಿತ ಫಲ ನೀಡಿಲ್ಲ.

ಏತನೀರಾವರಿ ಯೋಜನೆಗಳ ಉದ್ದೇಶ ಸಫಲವಾಗಿ, ರೈತರ ಹೊಲಗಳಿಗೆ ನೀರು ಹರಿಯಬೇಕಾದರೆ ಕೆಲವು ಪ್ರಮುಖ ಮಾರ್ಪಾಡುಗಳನ್ನು ಆಡಳಿತ ಮತ್ತು ನಿರ್ವಹಣೆಯಲ್ಲಿ ಅನುಷ್ಠಾನ ಮಾಡಬೇಕಾಗಿದೆ.  ಹೀಗಾಗಿ ಹೊಸ ನೀತಿ ಅವಶ್ಯ.

ನೀತಿಯಲ್ಲಿರಬೇಕಾದ ಅಂಶಗಳು:
* ರೈತರಿಂದ ಬೇಡಿಕೆ ಬಂದರೆ ಮಾತ್ರ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಬೇಕು.

* ಏತ ನೀರಾವರಿಗೆ ತಗಲುವ ವೆಚ್ಚವನ್ನು ಸರ್ಕಾರ ಭರಿಸುವ ಬದಲು, ಭಾಗಶಃ ಬಂಡವಾಳ ಭರಿಸುವಂತೆ ಫಲಾನುಭವಿ ರೈತರ ಮನವೊಲಿಸಬೇಕು.

* ಏತ ನೀರಾವರಿ ಯೋಜನೆಗೆ ವಿದ್ಯುತ್‌ ಕೊರತೆಯಾಗದಂತೆ ಪ್ರತ್ಯೇಕ ಲೇನ್‌ ಅಳವಡಿಸಬೇಕು.

* ಆಯಾ ಪ್ರದೇಶದಲ್ಲಿ ವಿದ್ಯುತ್ ಲಭ್ಯತೆ ಆಧರಿಸಿ ಯೋಜನೆ ಕೈಗೆತ್ತಿಕೊಳ್ಳಬೇಕು.

*ಹೆಚ್ಚು ನೀರು ಬೇಡುವ ಬೆಳೆಗಳಿಗೆ ಅವಕಾಶ ನೀಡಬಾರದು.

ಆಡಳಿತಾತ್ಮಕ ಸುಧಾರಣೆ ಆದ್ಯತೆಯಾಗಲಿ
* ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಪರಿಣತರಾಗಿರುವ ಎಂಜಿನಿಯರ್‌ಗಳ ನೇಮಕಕ್ಕೆ ಒತ್ತು.

* ಲೋಕೋಪಯೋಗಿ ಇಲಾಖೆಯಲ್ಲಿ ನೇಮಕವಾದ ಎಂಜಿನಿಯರ್‌ಗಳು ಜಲಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆ ಬೇರ್ಪಡಿಸಲು ಕ್ರಮವಹಿಸಬೇಕು.

* ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮ ಹಾಗೂ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು.

* ಪ್ರತಿ ಎರಡು ವರ್ಷಕ್ಕೊಮ್ಮೆ ಕಿರಿಯ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೇಮಕ ಕಡ್ಡಾಯ, ವರ್ಗಾವಣೆ ನೀತಿ ಅನುಷ್ಠಾನ.

* ಎಂಜಿನಿಯರ್‌ಗಳ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ನಿರ್ಬಂಧಿಸಬೇಕು.

ರಾಜ್ಯ ಜಲ ಆಯೋಗ ರಚನೆ
ಆಹಾರ ಉತ್ಪಾದನೆ ಮತ್ತು ಬಂಡವಾಳ ಸೃಷ್ಟಿಗೆ ಪೂರಕವಾಗುವಂತೆ ರಾಜ್ಯಕ್ಕೆ ಹಂಚಿಕೆಯಾದ ಮತ್ತು ಲಭ್ಯವಾಗುವ ಪ್ರತಿ ಹನಿ ನೀರನ್ನು ಮೌಲ್ಯಯುತವಾಗಿ ಬಳಸಿಕೊಳ್ಳಬೇಕಾದರೆ ರಾಜ್ಯ ಜಲ ಆಯೋಗ ರಚಿಸಬೇಕಾದ ಅಗತ್ಯವಿದೆ.

ಮುಂದಿನ 50 ವರ್ಷಗಳಲ್ಲಿ ನೀರಾವರಿ ಕ್ಷೇತ್ರದ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಎರಡು ವರ್ಷದಲ್ಲಿ ಸಮಗ್ರ ವರದಿ ನೀಡುವಂತೆ ಆಯೋಗಕ್ಕೆ ಸೂಚಿಸಬೇಕು.ಆಯೋಗದಲ್ಲಿ ಆಡಳಿತ, ಹಣಕಾಸು, ಜಲಸಂಪನ್ಮೂಲ, ಪರಿಸರ, ಇಂಧನ, ಕೃಷಿ, ನಗರಾಭಿವೃದ್ಧಿ, ಮೀನುಗಾರಿಕೆ ಕ್ಷೇತ್ರದ ತಜ್ಞರನ್ನು ಸದಸ್ಯರಾಗಿ ನೇಮಿಸಬೇಕು. ಇದರಿಂದ ರಾಜ್ಯದ ಪಾಲಿನ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯ.

(ಲೇಖಕರು ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT