ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸುಗಳು ಒಡೆದಾಗ... ಕುಟುಂಬವೂ ಒಡೆಯಬೇಕಷ್ಟೆ

Last Updated 18 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಡಾಕ್ಟ್ರೇ, ಮಗನ ಮದುವೆಯಾಯಿತು. ಸೊಸೆ ಮನೆಗೆ ಬಂದಳು. ಮಗಳಿಗೆ ಮದುವೆಯಾಯಿತು. ಗಂಡನ ಮನೆಗೆ ಹೋದಳು. ನನ್ನ ಮಗಳು ಅತ್ತೆ-ಮಾವಂದಿರ ಜೊತೆಗೆ ಆರಾಮವಾಗೇ ಇದ್ದಾಳೆ. ಆದರೆ ನಮ್ಮ ಮನೆ ಮಾತ್ರ ಹಾಗಿಲ್ಲ. ಸೊಸೆಯ ಮಾತನ್ನು ಮಗ ಕೇಳ್ತಾನೆ ಅಂತ ನಮಗೆ ಅನ್ನಿಸುತ್ತೆ. ಮಕ್ಕಳನ್ನು ನಮ್ಮ ಹತ್ತಿರ ಕಳಿಸೊಲ್ಲ. ಜೊತೆಗೇನೋ ಇದ್ದೀವಿ, ಆದ್ರೆ ಸಂತೋಷವಾಗಿಲ್ಲ. ನಮ್ಮ ಸೊಸೆಗೆ ಸ್ವಲ್ಪ ಬುದ್ಧಿ ಹೇಳಿ ಸರಿ ಮಾಡಿ ಡಾಕ್ಟ್ರೇ’.

ಮನೋವೈದ್ಯರ ಬಳಿ ಬರುವ ವಿವಿಧ ರೀತಿಯ ಕೌಟುಂಬಿಕ ಸಮಸ್ಯೆಗಳಲ್ಲಿ ಕೂಡುಕುಟುಂಬ-  Joint familyಯ ಸಮಸ್ಯೆಗಳು ಇಂದು ಇಲ್ಲವಾಗಿವೆ. ಏಕೆಂದರೆ ಕೂಡುಕುಟುಂಬಗಳೇ ಇಂದು ಇಲ್ಲ! ಹೆಚ್ಚಿನ ಕುಟುಂಬಗಳು ಇಂದು ಒಂದೋ ವಿಭಜಿತ - Nuclear ಅಂದರೆ ಅಪ್ಪ-ಅಮ್ಮ-ಮಕ್ಕಳು ಮಾತ್ರ ಇರುವಂಥವು, ಇಲ್ಲವೇ ಅಪ್ಪ-ಅಮ್ಮ-ಮಕ್ಕಳು ಮತ್ತು ಬಹು ಸಮಯ ಅಪ್ಪನ ಅಪ್ಪ-ಅಮ್ಮ ಅಂದರೆ ತಂದೆಯ ಕಡೆಯ ಅಜ್ಜ-ಅಜ್ಜಿ ಇರುವ ಕುಟುಂಬಗಳು. ಇವೆರಡೂ ಕುಟುಂಬಗಳಲ್ಲಿಯೂ ದಾಂಪತ್ಯದ ಕಲಹಗಳು, ಹೊಂದಾಣಿಕೆಯ ಸಮಸ್ಯೆಗಳು  ಸಾಮಾನ್ಯವೇ.
 
ವಿವಾಹವಿಚ್ಛೇದನದ ಬಗೆಗಿನ ಸುಪ್ರೀಂಕೋರ್ಟ್‌ನ ಇತ್ತೀಚೆಗಿನ ತೀರ್ಪಿನ ಸಾರಾಂಶ ಹೇಳಿಕೆ ‘ಮದುವೆಯಾದ ನಂತರ ಪತ್ನಿಯ ಮಾತು ಕೇಳಿ ತಂದೆ-ತಾಯಿಗಳಿಂದ ಪುತ್ರ, ಅದೂ ಕುಟುಂಬದ ಏಕೈಕ ದುಡಿಯುವ ಸದಸ್ಯನಾಗಿದ್ದಾಗ ಬೇರ್ಪಡುವುದು, ಅಪೇಕ್ಷಣೀಯ ಸಂಸ್ಕೃತಿಯಲ್ಲ ಅಥವಾ ಸಾಮಾನ್ಯವಾಗಿ ಅನುಸರಿಸುವ ಆಚರಣೆಯೂ ಅಲ್ಲ’, ನಿರ್ದಿಷ್ಟ ಸಂದರ್ಭಕ್ಕಷ್ಟೇ ಅನ್ವಯವಾಗಲು ಸಾಧ್ಯ. ಈ ಮಾತನ್ನು ಎಲ್ಲರಿಗೂ ಅನ್ವಯಿಸುವುದು, ತೇಲುವ ದೊಡ್ಡ ಮಂಜುಗಡ್ಡೆಯ ತುದಿಯನ್ನಷ್ಟೇ ನೋಡಿ, ನಿರ್ಧಾರ ತೆಗೆದುಕೊಂಡಂತೆ. ತುದಿಯ ಕೆಳಗೆ, ನೀರಿನ ಒಳಗೆ ದೊಡ್ಡ ಭಾಗವಿದೆ ಎನ್ನುವುದನ್ನು ಮರೆತಂತೆ. ಕೂಡುಕುಟುಂಬಗಳಲ್ಲಿ, ವಿಭಜಿತ ಕುಟುಂಬಗಳಲ್ಲಿ, ಯಾವುದೇ ರೀತಿಯ ಕುಟುಂಬಗಳಲ್ಲಿ ಮನೆಯ ಕೆಲಸದ ಹೊರೆಯನ್ನು ಈಗಾಗಲೇ ಹೆಚ್ಚಾಗಿಯೇ ಹೊರುತ್ತಿರುವ ಹೆಣ್ಣುಮಕ್ಕಳ ಹೊರೆಯನ್ನು ಮತ್ತಷ್ಟು ಇದು ಹೆಚ್ಚಿಸಬಲ್ಲದು. ಹಾಗೆಯೇ ಅತ್ತೆ–ಸೊಸೆಯರ ಮಧ್ಯೆ ಈಗಾಗಲೇ ಗೌಣವಾಗಿರುವ ‘ಪುರುಷ’ರ ಜವಾಬ್ದಾರಿ ಪಾತ್ರಗಳನ್ನು ಮತ್ತಷ್ಟು ಇಲ್ಲವಾಗಿಸುವಂಥದ್ದು!
 
ಸಾಮಾಜಿಕ ಪರಿಸ್ಥಿತಿ ಎಷ್ಟೇ ಬದಲಾಗಿರಲಿ, ನಮ್ಮ ರೂಢಿಗತ ಮಾನಸಿಕ ಧೋರಣೆಗಳು ಬದಲಾಗುವುದು ಸುಲಭವಲ್ಲ. ಹೆಣ್ಣುಮಗು ಹುಟ್ಟಿದಾಕ್ಷಣ ಅಪ್ಪ-ಅಮ್ಮ ತಮ್ಮನ್ನು ಮುಂದೆ ಇಳಿವಯಸ್ಸಿನಲ್ಲಿ ನೋಡಿಕೊಳ್ಳುವರಾರು ಎಂಬ ಬಗ್ಗೆ ಆತಂಕ ಪಡುತ್ತಾರೆ. ಎರಡನೇ ಮಗು ‘ಗಂಡೇ ಆಗಲಿ ದೇವರೇ’ ಎಂದು ಬೇಡತೊಡಗುತ್ತಾರೆ. ಗಂಡಾದರೆ ಸಮಾಧಾನದ ನಿಟ್ಟುಸಿರು, ಅಕಸ್ಮಾತ್ ಮತ್ತೊಂದೂ ಹೆಣ್ಣಾದರೆ ಅಪ್ಪ-ಅಮ್ಮನ ಆತಂಕ ಹೆಚ್ಚುತ್ತದೆ. ಸುತ್ತಮುತ್ತಲಿನ ಇತರರ ಕನಿಕರ ಅಪ್ಪ-ಅಮ್ಮನೊಂದಿಗೆ! ಆದರೆ ನಿಜವಾಗಿ ನೋಡಿದರೆ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಗಂಡುಮಕ್ಕಳಷ್ಟೇ ಹೆಣ್ಣುಮಕ್ಕಳೂ ಅಪ್ಪ-ಅಮ್ಮಂದಿರ ಆರೈಕೆ ಮಾಡುವುದೂ ಸಾಧ್ಯವಿದೆ. 
 
ಹಾಗೆ ನೋಡಿದರೆ ಅದೇ ಹೆಚ್ಚು!  ಹೆಣ್ಣುಮಕ್ಕಳಿರದ ತಂದೆ ತಾಯಿಯರನ್ನು ಕನಿಕರಿಸಿ ನೋಡುವ ದಿನಗಳೂ ದೂರವಿಲ್ಲ!  ಆದರೆ ನಮ್ಮ ಬಹು ದಿನಗಳ ‘ಗಂಡುಮಗು ಹುಟ್ಟಿದೊಡನೆ 'Oh boy!’ ಅನ್ನುವ ಅಭ್ಯಾಸ ನಾಲಗೆಯ ಮೇಲೆ ಉಳಿದುಬಿಟ್ಟಿದೆ.  ಅದಷ್ಟೇ ಅಲ್ಲ, ಕಾನೂನಿನ ಪ್ರಕಾರವೂ ಗಂಡುಮಕ್ಕಳಿಗಷ್ಟೇ ಇದ್ದ ಆಸ್ತಿಯ ಹಕ್ಕು ಎಲ್ಲ ಮಕ್ಕಳಿಗೂ ಎಂದಾಗಿ ಬಹು ವರುಷಗಳೇ ಸಂದಿವೆ.
 
‘ಸೊಸೆಯ ಜೊತೆ ಹೊಂದಾಣಿಕೆಯಾಗುತ್ತಿಲ್ಲ, ಮಗಳ ಜೊತೆ ಆರಾಮವಾಗಿರುತ್ತೇವೆ’ ಎನ್ನುವ ಅತ್ತೆ-ಮಾವಂದಿರಿಗೆ ’ನೀವು ಮಗಳ ಜೊತೆಯಲ್ಲಿದ್ದರೂ ಪರವಾಗಿಲ್ಲ’ ಎಂದರೆ ಈಗ ತಪ್ಪೇನಿಲ್ಲ. ಅಂದರೆ ಅಪ್ಪ-ಅಮ್ಮಂದಿರ ಇಳಿವಯಸ್ಸಿನ ಅಗತ್ಯಗಳ ಹೊಣೆ ಕೇವಲ ‘ಮಗ’ನ ಕರ್ತವ್ಯವಾಗಿ ಇಂದು ಉಳಿದಿಲ್ಲ. ಬದಲಾಗಿ ಮಕ್ಕಳೆಲ್ಲರ ಕರ್ತವ್ಯವೂ ಹೌದು!  ಗಂಡುಮಕ್ಕಳನ್ನೇ ಆಗಲಿ ಹೆಣ್ಣುಮಕ್ಕಳನ್ನೇ ಆಗಲಿ ‘ಅಮ್ಮ’ ಒಂಬತ್ತು ತಿಂಗಳು ಹೊತ್ತು-ಹೆತ್ತು-ಸಾಕಿ-ಸಲಹುತ್ತಾಳಷ್ಟೇ. ಹಾಗೆಯೇ ಇಬ್ಬರನ್ನೂ ಅಪ್ಪ-ಅಮ್ಮ ಇಂದಿನ ದಿನಗಳಲ್ಲಿ ಸಮಾನವಾಗಿಯೇ, ಶಿಕ್ಷಣ ನೀಡಿಯೇ ಸಲಹುತ್ತಾರೆ. ಅಂದ ಮೇಲೆ ಅಪ್ಪ-ಅಮ್ಮನಿಗೆ ಕಾಯಿಲೆಯಾದಾಗ, ಅವರಿಗೆ ಭಾವನಾತ್ಮಕವಾಗಿ ಬೇಕಾದಾಗ ಅವರನ್ನು ನೋಡಿಕೊಳ್ಳುವುದು, ಅವರಿಗೆ ಲಭ್ಯವಿರುವುದು ಮಗ-ಮಗಳು ಇಬ್ಬರ ಹೊಣೆಯೂ ಹೌದು. ಅದು ಸೊಸೆಯ/ಅಳಿಯನ ಜವಾಬ್ದಾರಿಯಾಗಲು ಸಾಧ್ಯವಿಲ್ಲ!
 
ಹೆಚ್ಚಿನ ಸಮಯ ಸಮಸ್ಯೆ ಬರುವುದೇ ಇಲ್ಲಿ. ಅತ್ತೆ-ಮಾವಂದಿರ ಹೊಣೆ ‘ಸೊಸೆ’ಯೊಬ್ಬಳ ಮೇಲೆ ಬಿದ್ದಾಗ ‘ಮಗ’ ಸ್ವತಃ ತಾನು ಅಪ್ಪ-ಅಮ್ಮಂದಿರಿಗೆ ಸಮಯ ನೀಡದೆ, ಅವರ ಆರೈಕೆ ಮಾಡದೆ, ತನ್ನ ‘ಹೆಂಡತಿ’ ಅತ್ತೆ-ಮಾವಂದಿರ ಸೇವೆ ಮಾಡಲಿ ಎಂದು ನಿರೀಕ್ಷಿಸಿದಾಗ ಅಥವಾ ಬಹುಜನ ಅತ್ತೆಯಂದಿರು ದೂರುವಂತೆ ‘ನಮ್ಮ ಮಗ ಒಳ್ಳೆಯವನೇ, ಸೊಸೆ ಮಾತ್ರ ಸರೀ ಇಲ್ಲ’ ಎಂದು ಎಲ್ಲ ತಪ್ಪನ್ನೂ ಸೊಸೆಯ ಮೇಲೆ ಹಾಕುವಂತೆ ಮಾಡಿದಾಗ, ಕೋರ್ಟು ವಿಚ್ಛೇದನ ನೀಡುತ್ತದೆಯೋ ಇಲ್ಲವೋ ‘ಸೊಸೆ’ ತಾನೇ ವಿಚ್ಛೇದನಕ್ಕೆ ತಯಾರಾಗುತ್ತಾಳೆ.
 
ಸ್ವಾವಲಂಬನೆಯ ಅಭ್ಯಾಸವಿರದ ಯುವಕ (ಮಗರಾಯ/ ಪತಿರಾಯ) ವಿಚ್ಛೇದನದ ನಂತರ ಮತ್ತೆ ತಾಯಿಯ (ಅಂದರೆ ಮನೆಯ ಅತ್ತೆಯ) ಆರೈಕೆಗೆ ಬೀಳುತ್ತಾನೆ. ಅಲ್ಲಿಯವರೆಗೆ ಅತ್ತೆ-ಸೊಸೆಯರದಾಗಿದ್ದ ಮನೆಯ ಹೊಣೆ ‘ಅತ್ತೆ’ ಒಬ್ಬಳದ್ದೇ ಆಗುತ್ತದೆ! ಇಳಿವಯಸ್ಸಿನಲ್ಲಿ ಮತ್ತಷ್ಟು ಗೃಹಕೃತ್ಯ ಹೆಗಲಿಗೇರುತ್ತದೆ. ಅಂದರೆ ಮತ್ತೆ ಶೋಷಣೆ ಮಹಿಳೆಯದೇ!
 
ಅತ್ತೆ ಎಂದಾಕ್ಷಣ ನಮ್ಮ ಕಣ್ಮುಂದೆ ಬರುವ ದಢೂತಿಯಾದ, ತುರುಬು ಹಾಕಿಕೊಂಡ, ಗೊಡ್ಡು ಸಂಪ್ರದಾಯದ ಮಹಿಳೆಯ ಚಿತ್ರ ಮಾಧ್ಯಮಗಳಿಂದ, ನಮ್ಮದೇ ಕಲ್ಪನೆಯಿಂದ ಹುಟ್ಟಿಕೊಂಡಿರುವಂಥದ್ದು. ಅತ್ತೆ-ಸೊಸೆಯರನ್ನು ಮಾತುಗಳಲ್ಲಾಗಲೀ, ಮಾಧ್ಯಮಗಳಲ್ಲಾಗಲೀ, ಪರಸ್ಪರ ದ್ವೇಷದಿಂದಿರುವ, ಸ್ಪರ್ಧೆ ಮಾಡುತ್ತಿರುವ, ವ್ಯಕ್ತಿಗಳಂತೆ ಚಿತ್ರಿಸುವುದು, ವ್ಯಂಗ್ಯವಾಡುವುದು, ಅವರ ಬಗ್ಗೆ ಹಾಸ್ಯವಾಗಿ ಮಾತನಾಡುವುದೂ ಸಾಮಾನ್ಯ. ಅಂದರೆ ಅತ್ತೆ-ಸೊತೆ ಇಬ್ಬರೂ ಇನ್ನೊಬ್ಬರ ಬಗ್ಗೆ ಪೂರ್ವಗ್ರಹ ಪೀಡಿತರಾಗುವ ಸಂದರ್ಭವನ್ನು ಇದು ಬೆಳೆಸುತ್ತದೆ. ಈ ಪೂರ್ವಗ್ರಹದಿಂದ ಪ್ರತಿಯೊಂದು ಮಾತೂ, ಕ್ರಿಯೆಯೂ ನಮಗೆ  ದುರುದ್ದೇಶಪೂರಿತವಾಗಿಯೇ ತೋರಲು ಸಾಧ್ಯವಿದೆ.
 
ಹಾಗೆಯೇ ಮಾವ-ಮಗ ಈ ಎಲ್ಲ ಸನ್ನಿವೇಶಗಳಿಂದ ಪಲಾಯನವಾದವನ್ನೇ ತಮ್ಮದಾಗಿಸಿ ಕೊಳ್ಳುತ್ತಾರೆ. ಮಗ, ತಾಯಿ-ಹೆಂಡತಿ ಇಬ್ಬರನ್ನೂ ನೋಯಿಸದೆ, ತಾನು ಕೆಟ್ಟವನಾಗದೆ, ಅವರಿಬ್ಬರೇ ಏನಾದರೂ ಮಾಡಿಕೊಳ್ಳಲಿ ಎಂದು ಸುಮ್ಮನಿರುತ್ತಾನೆ. ಇಲ್ಲಿ ಅವರಿಬ್ಬರಿಗೂ ಸಂಬಂಧ ಉಂಟಾದುದೇ ತನ್ನಿಂದ, ತನ್ನನ್ನು ಇಬ್ಬರೂ ಪ್ರೀತಿಸುವುದೇ ಅವರಿಬ್ಬರಲ್ಲಿ ಸಮಾನ ಅಂಶ ಎಂದು ಮರೆಯುತ್ತಾನೆ. ತನ್ನ ತಂದೆ-ತಾಯಿಗಳನ್ನು ತನ್ನ ಹೆಂಡತಿ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ತಾನು ನಿರೀಕ್ಷಿಸುವಂತೆ, ತಾನೂ ಹೆಂಡತಿಯ ಅಪ್ಪ-ಅಮ್ಮನ ಬಗ್ಗೆ ಕಿಂಚಿತ್ ಕಾಳಜಿ ವಹಿಸಬೇಕು ಎಂದು ಗಮನಿಸುವುದಿಲ್ಲ.
 
ಅತ್ತೆ-ಸೊಸೆ-ಮಗ ಮೂವರೂ ‘ತಾಯಿಯನ್ನೂ, ಪತ್ನಿಯನ್ನೂ ಏಕಕಾಲದಲ್ಲಿ, ಭಿನ್ನ ರೀತಿಯಲ್ಲಿ ಪ್ರೀತಿಸಬಹುದಾದ ಸಾಧ್ಯತೆ’ಯನ್ನು ನಿರಾಕರಿಸಿ ಮನೋಕ್ಷೋಭೆಗೆ ಗುರಿಯಾಗುತ್ತಾರೆ. ಮನಸ್ಸುಗಳು ಒಡೆಯುತ್ತವೆ, ಕುಟುಂಬ ಒಡೆಯುವಿಕೆ ತಾನೇ ತಾನಾಗಿ ಹಿಂಬಾಲಿಸುತ್ತದೆ.
 
ಪುರುಷರು ಬಂದು ಕೇಳುತ್ತಾರೆ, ‘ಡಾಕ್ಟ್ರೇ, ಅಮ್ಮನಿಗೆ ೭೦ರ ಹತ್ತಿರ, ಅವರಿಗೆ ಎಲ್ಲಿ ‘ಅಡ್ಜಸ್ಟ್‌’ ಮಾಡಿಕೊಳ್ಳಲು ಸಾಧ್ಯ? ಇವಳಿಗೇ ಸ್ವಲ್ಪ ಹೊಂದಿಕೊಳ್ಳೋಕೆ ಹೇಳಿ ಡಾಕ್ಟ್ರೇ’. ಅದೇ ಮಹಿಳೆ ಹೇಳುವ ಮಾತು? ’ನಮ್ಮ ಅತ್ತೆಗೆ 70ರ ಹತ್ತಿರ ಹೌದು. ಆದರೆ ನನಗೆ? ನನಗೂ 45ರ ಹತ್ತಿರ ಈಗ. ಅದೂ ಅಲ್ಲದೆ, 70 ವರ್ಷ ಆಗಿದೆ ಅಂತ ಅವರ ಬಾಯಿಗೇನೂ ವಯಸ್ಸಾಗಿಲ್ಲ ಡಾಕ್ಟ್ರೇ. ಚುರುಕಾಗಿಯೇ ಇದೆ.
 
ಮದುವೆಯಾಗಿ 20 ವರ್ಷದ ನಂತರವೂ ನಮ್ಮ ಮದುವೆಯಲ್ಲಿ ಅಪ್ಪ-ಅಮ್ಮ ಮಾಡದಿದ್ದ ವಿಷಯದ ಬಗ್ಗೆ ಈಗಲೂ ಮಾತನಾಡ್ತಾರೆ!’ ಹಾಗಾಗಿ ಹೊಂದಾಣಿಕೆ ಎನ್ನುವುದು ಕೇವಲ ಮಹಿಳೆಯರದಲ್ಲ, ಒಬ್ಬ ಮಹಿಳೆಯದೂ ಅಲ್ಲ!  ಅತ್ತೆ, ಸೊಸೆ, ಗಂಡ, ಮಾವ ಇದರ ಜೊತೆಗೆ ಚಿಕ್ಕ ಚಿಕ್ಕ ಜಗಳಗಳನ್ನು, ಅಲ್ಲಿಯೇ ಮರೆತುಬಿಡಬಹುದಾದ ಮಾತುಗಳನ್ನು ಉದ್ಧವಾಗಿಸುವ, ಮತ್ತಷ್ಟು ಹರಡಿಸುವ, ಇನ್ನಷ್ಟು ಮಹಿಳೆಯರು (ಅತ್ತೆಯ ಆತ್ಮೀಯರು, ಸೊಸೆಯ ಗೆಳತಿಯರು, ಗಂಡನ ಅಕ್ಕ-ತಂಗಿ, ಸೊಸೆಯ ತಾಯಿ) ಈ ಎಲ್ಲರೂ ಹೊಂದಾಣಿಕೆಯ ಮಹತ್ವವನ್ನು ಅರಿಯಬೇಕು, ಬಾಯಿ ಬಿಚ್ಚುವಲ್ಲಿ ಸುಮ್ಮನಿರುವುದನ್ನು ಅಭ್ಯಾಸ ಮಾಡಬೇಕು. 
 
ಬೆಳೆದ ವಯಸ್ಸಿಗೆ-ಮನಸ್ಸಿಗೆ ಸಂಗಾತಿಯ ಅಗತ್ಯವುಂಟಷ್ಟೆ. ಹಾಗೆಯೇ ಎಲ್ಲ ಮನಸ್ಸುಗಳಿಗೆ ಸಂಬಂಧಗಳ ಅಗತ್ಯವೂ ಉಂಟು. ಮಗನ ಮದುವೆಯಾದರೂ ಮಗ ಅಪ್ಪ-ಅಮ್ಮಂದಿರ ಮಗನೇ ಆಗಿರುತ್ತಾನೆ. ಆದರೆ ಸೊಸೆಯನ್ನು ಮನೆಯ ಯಾವುದೇ ನಿರ್ಧಾರಗಳಿಂದ ಹೊರಗಿಟ್ಟು, ಗುಪ್ತ ಚಟುವಟಿಕೆಯ ರೀತಿ ಮಗನೊಡನೆ ಮಾತ್ರ ಚರ್ಚಿಸುವುದು, ಮಗ ಏನಾದರೂ ಮಾಡಿಕೊಳ್ಳಲಿ - ಹೇಗಾದರೂ ನಡೆಯಲಿ, ಸೊಸೆ ಮಾತ್ರ ಪದ್ಧತಿಗಳನ್ನು ಸ್ವಲ್ಪವೂ ತಪ್ಪದೆ ನಡೆಸಬೇಕು ಎಂದು ಬಯಸುವುದು ಸಮಸ್ಯೆಗೆ ದಾರಿ.  ಮದುವೆಯ ಮುಂಚೆ, ಮದುವೆಯ ಹೊಸತರಲ್ಲಿ ಸೊಸೆಯಂದಿರ ಅತಿ ವಿನಯ,  ನಂತರ ಅತ್ತೆ-ಮಾವ ಬೇಡವೇ ಬೇಡ ಎನ್ನುವ ಧೋರಣೆ ಎರಡೂ ಅನವಶ್ಯಕ. ಅತ್ತೆ-ಮಾವ-ಗಂಡ-ಹೆಂಡತಿ ಒಟ್ಟಿಗೆ ಬದುಕಬೇಕಾದಾಗ ಮಾನಸಿಕವಾಗಿ ಅದನ್ನು ಒಪ್ಪಿಕೊಳ್ಳುವುದು, ಕೆಲಸಗಳಲ್ಲಿ-ವೈಯಕ್ತಿಕವಾದ ದಾಂಪತ್ಯದ Privacy - ಖಾಸಗೀತನದಲ್ಲಿ, ಸರಿಯಾದ  ಮಿತಿ ಅನುಸರಿಸುವುದು ಅತ್ಯಗತ್ಯ.
 
ಇಂದು ಗೊಡ್ಡು ಸಂಪ್ರದಾಯದ ಧಡೂತಿ ಗಂಡಸು ಅತ್ತೆಯರ ಬದಲು, ತಾವೂ ಹೊಸ ಸೊಸೆಯಷ್ಟೇ ‘ಲತಾಂಗಿ’ ಯರಾಗಿ, ಸ್ವತಃ ವಿದ್ಯಾವಂತರಾಗಿ, ಆಧುನಿಕರಾಗಿರುವ ಅತ್ತೆಯರ ಕಾಲ. ಹಾಗೇ ತಮ್ಮ ಇಳಿವಯಸ್ಸಿನಲ್ಲಿಯೂ ಸೊಸೆಯ ಕೆಲಸದ ಸಲುವಾಗಿ ತಾವೇ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಅತ್ತೆಯರೂ ಇದ್ದಾರೆ. ಅತ್ತೆಯೊಂದಿಗೆ ಅವರ ಅನುಭವದ ನೆರಳಿನಲ್ಲಿ ಹೊಂದಿಕೊಂಡು ಹಾಯಾಗಿರುವ ಜಾಣಸೊಸೆಯರೂ ಸಾಮಾನ್ಯವಾಗಿಯೇ ಕಾಣಸಿಗುತ್ತಾರೆ. ಕಾಯಿಲೆ ಬಿದ್ದ ಅತ್ತೆ-ಮಾವಂದಿರ ಸೇವೆ ಮಾಡಿರುವ-ಮಾಡುತ್ತಿರುವ ಸೊಸೆಯರೂ ಇರುತ್ತಾರೆ.
 
ಇಲ್ಲಿನ ಹೊಂದಾಣಿಕೆ ಸಾಧ್ಯವಾದದ್ದು ಪ್ರತಿಯೊಬ್ಬರ ವೈಯಕ್ತಿಕ ಮಾನಸಿಕ ಸಾಮರ್ಥ್ಯದಿಂದ ಎನ್ನುವುದನ್ನು ನಾವು ನೆನಪಿಡಬೇಕು. ಪುರುಷರೂ ಇಂಥ ಕುಟುಂಬಗಳಲ್ಲಿ ಸಮಾನವಾಗಿ, ಸಮರ್ಥವಾಗಿ ಸಂಬಂಧಗಳಲ್ಲಿ ತಮಗಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂಬುದು ಗಮನಿಸಬೇಕಾದ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT