ಬೆಂಗಳೂರು: ಕೇಂದ್ರ ಸರ್ಕಾರವು ದೊಡ್ಡ ಮುಖ ಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆದಿರುವುದು ಕಟ್ಟಡ ಕಾರ್ಮಿಕರ ತುತ್ತಿನ ಚೀಲಕ್ಕೂ ಕುತ್ತು ತಂದಿದೆ. ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಬಟವಾಡೆ ಮಾಡಲು ಹಣದ ಕೊರತೆ ಎದುರಾಗಿರುವುದರಿಂದ ನಿರ್ಮಾಣ ಚಟುವಟಿಕೆ ಕುಂಠಿತಗೊಂಡಿದೆ. ನಗರಕ್ಕೆ ವಲಸೆ ಬಂದಿರುವ ಕಟ್ಟಡ ಕಾರ್ಮಿಕರು ಹಳ್ಳಿಗಳಿಗೆ ಮರಳುತ್ತಿದ್ದಾರೆ.

‘ನನ್ನ ಬಳಿ 35ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೆಲಸಕ್ಕಿದ್ದಾರೆ. ಕಟ್ಟಡ ಕಟ್ಟಿಸುವ ಮಾಲೀಕರು ನಮಗೆ ₹ 500 ಹಾಗೂ ₹ 1 ಸಾವಿರ ಮುಖಬೆಲೆಯ ಹಳೆಯ ನೋಟುಗಳನ್ನೇ ನೀಡಿದ್ದರು. ನಾವೂ ಕಾರ್ಮಿಕರಿಗೆ ಅದನ್ನೇ ನೀಡಿದ್ದೇವೆ. ಆದರೆ, ಈಗ ಹಳೆ ನೋಟುಗಳು ಎಲ್ಲೂ ಚಲಾವಣೆ ಆಗುತ್ತಿಲ್ಲ. ನಮಗೆ ಕಾರ್ಮಿಕರಿಗೆ ಬಟವಾಡೆ ಮಾಡಲು ಹೊಸ ನೋಟು ಸಿಗುತ್ತಿಲ್ಲ. ಮುಂದೇನು ಎಂಬುದು ಚಿಂತೆಯಾಗಿದೆ’ ಎನ್ನುತ್ತಾರೆ ತಮಿಳುನಾಡು ಮೂಲದ ಮೇಸ್ತ್ರಿ ಮಣಿ.

‘ನಮ್ಮ ಬಳಿಯೇನೂ ಲಕ್ಷಗಟ್ಟಲೆ ಹಣ ಇರುವುದಿಲ್ಲ. ಕಟ್ಟಡ ಕಟ್ಟಿಸುವರು ನೀಡಿದ ಹಣವನ್ನು ಬ್ಯಾಂಕಿನಲ್ಲಿ ಹಾಕಿ, ಹತ್ತಿಪ್ಪತ್ತು ಸಾವಿರ ಹಣವನ್ನು ಇಟ್ಟುಕೊಂಡು ಅದನ್ನು ಕೆಲಸಗಾರರಿಗೆ ಸಂಬಳ ನೀಡಲು ಬಳಸುತ್ತಿದ್ದೆವು. ಆದರೆ, ಈಗ ಬ್ಯಾಂಕಿನಲ್ಲಿ ಇದ್ದ ಹಣವನ್ನು ಪಡೆಯುವುದೂ ದುಸ್ತರವಾಗಿದೆ. ಕೆಲವರು ನಮಗೆ ಚೆಕ್ ರೂಪದಲ್ಲಿ ಹಣ ನೀಡುತ್ತಾರೆ. ಅದನ್ನು ನಗದು ಮಾಡಿಸಿಕೊಳ್ಳುವುದೂ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದು ವಿವರಿಸಿದರು.

ಕಾರ್ಮಿಕರಿಗಿಲ್ಲ ಬ್ಯಾಂಕ್ ಖಾತೆ: ‘ನನ್ನ ಬಳಿ ಕೆಲಸ ಮಾಡುವ ಕಾರ್ಮಿಕರ ಪೈಕಿ 15 ಮಂದಿ ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದಾರೆ. ಉಳಿದವರು ಬ್ಯಾಂಕ್‌ನತ್ತ ಸುಳಿದವರಲ್ಲ. ಅವರಿಗೆ ನಾನು ನಗದು ರೂಪದಲ್ಲೇ ಕೂಲಿ ಕೊಡಬೇಕು. ನನಗೇ ಹಣ ಸಿಗದಿದ್ದರೆ ಕೂಲಿ ನೀಡುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಮಣಿ.

‘ರಿಸರ್ವ್ ಬ್ಯಾಂಕ್ ದಿನಕ್ಕೊಂದು ಸುತ್ತೋಲೆ ಹೊರಡಿಸುತ್ತಿದೆ. ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಈಗ ₹ 2000 ಮಿತಿ ನಿಗದಿಪಡಿಸಿದೆ. ನಗದನ್ನೇ ನಂಬಿ ವ್ಯವಹಾರ ನಡೆಸುವ ನಮ್ಮಂತಹವರು ಬದುಕುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಅವರು.

‘ಕಟ್ಟಡ ನಿರ್ಮಾಣದ ಬಹುತೇಕ ವ್ಯವಹಾರ ನಗದು ರೂಪದಲ್ಲೇ ನಡೆಯುತ್ತಿತ್ತು. ನೋಟು ಹಿಂದಕ್ಕೆ ಪಡೆಯುವ ನಿರ್ಧಾರ ಕಟ್ಟಡ ನಿರ್ಮಾಣವನ್ನು ನೆಚ್ಚಿಕೊಂಡು ಬದುಕುತ್ತಿರುವ ಅನೇಕರಿಗೆ ಹೊಡೆತ ನೀಡಿದೆ. ಸಣ್ಣಪುಟ್ಟ ಪರಿಕರಗಳನ್ನು ಖರೀದಿಸುವುದಕ್ಕೂ ದುಡ್ಡಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಲ್ಲು, ಇಟ್ಟಿಗೆಯಂತಹ ಪರಿಕರಗಳ ಖರೀದಿಗೆ ಚೆಕ್ ನೀಡುವ ಪರಿಪಾಠ ಇಲ್ಲ. ಮನೆ ನಿರ್ಮಿಸಲು ಗುತ್ತಿಗೆ ನೀಡಿದ್ದ ಅನೇಕರು ಈಗ ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿರುವ ವಸಂತಪುರದ ನಾಗರಾಜ್ ಕೋಳ್ಕೆರೆ.

‘₹100 ಕಡಿತ ಮಾಡುತ್ತಾರೆ’
‘ಕೆಲವು ದಿನಸಿ ಅಂಗಡಿಗಳಲ್ಲಿ ₹ 500 ಹಾಗೂ ₹ 1ಸಾವಿರ ಮುಖ ಬೆಲೆಯ ನೋಟು ಸ್ವೀಕರಿಸುತ್ತಿದ್ದಾರೆ. ಆದರೆ ₹500 ನೋಟು ನೀಡಿದರೆ ಅದರಲ್ಲಿ ₹ 100 ಕಡಿತ ಮಾಡುತ್ತಾರೆ.

ನೋಟು ರದ್ದುಪಡಿಸಿದ್ದು ದಿನಗೂಲಿಯನ್ನೇ ನೆಚ್ಚಿಕೊಂಡಿರುವ ಬಡ ಕಾರ್ಮಿಕರ ಪಾಲಿಗಂತೂ ಕರಾಳ ನಿರ್ಧಾರ. ನಾವೇನೋ ಚೆಕ್ ರೂಪದಲ್ಲಿ ಹಣವನ್ನು ಸ್ವೀಕರಿಸಬಹುದು.
ಆದರೆ, ಕಾರ್ಮಿಕರಿಗೆ ಸಂಬಳ ನೀಡುವುದೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ’ ಎಂದು ಗುತ್ತಿಗೆದಾರ ನಾಗರಾಜ್ ಕೋಳ್ಕೆರೆ ಬೇಸರ ವ್ಯಕ್ತಪಡಿಸಿದರು.

‘ದುಡ್ಡು ಊರಿಗೆ ಕಳುಹಿಸಲಾಗುತ್ತಿಲ್ಲ’
ಉತ್ತರ ಪ್ರದೇಶದ ಬಿಹಾರ, ಪಶ್ಚಿಮ ಬಂಗಾಳ, ಬಿಹಾದ ಮೊದಲಾದ ರಾಜ್ಯಗಳಿಂದ ವಲಸೆ ಬಂದಿರುವ ಕಟ್ಟಡ ಕಾರ್ಮಿಕರು ಊರಿಗೆ ಹಣ ಕಳುಹಿಸಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ.

‘ನಾವು ಕಳುಹಿಸುವ ದುಡ್ಡಿನಿಂದಲೇ ನಮ್ಮ ಊರಿನಲ್ಲಿರುವ ಕುಟುಂಬ ನಿರ್ವಹಣೆ ಆಗಬೇಕು. ಒಂದು ವಾರದಿಂದ ಊರಿಗೆ ಹಣ ಕಳುಹಿಸಲು ಸಾಧ್ಯವಾಗಿಲ್ಲ. ಬ್ಯಾಂಕ್‌ನಲ್ಲಿ ನಿತ್ಯ ಫರ್ಲಾಂಗ್ ಉದ್ದದ ಸಾಲು ಇರುತ್ತದೆ’ ಎಂದು ಉತ್ತರಪ್ರದೇಶದ ಗೌರಾ ಚೌಕಿಯ ಸುನಿಲ್ ಅಳಲು ತೋಡಿಕೊಂಡರು.

‘ನಮಗೆ ನಗದು ರೂಪದ ಬದಲು ಚೆಕ್ ರೂಪದಲ್ಲಿ ಸಂಬಳ ನೀಡಿದ್ದಾರೆ. ಅದನ್ನು ಬ್ಯಾಂಕಿಗೆ ಹಾಕಲು ಸಾಧ್ಯವಾಗುತ್ತಿಲ್ಲ. ದಿನವಿಡೀ ಬ್ಯಾಂಕ್ ಎದುರು ಕಾದು ನಿಂತರೆ ನಮ್ಮ ಕೆಲಸ ಕೆಡುತ್ತದೆ’ ಎಂದು ಮುರ್ಸಿದಾಬಾದ್‌ನ ಬಿಲಾಲ್ ಹಸನ್ ಹೇಳಿದರು.

ಜನ ಏನನ್ನುತ್ತಾರೆ?
ನನ್ನ ತಂಗಿ ನ್ಯೂಮೋನಿಯಾದಿಂದ ಬಳಲುತ್ತಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಹೋದರೆ ರದ್ದಾದ ನೋಟುಗಳನ್ನು ಪಡೆಯುತ್ತಿಲ್ಲ. ನಾನು ಡೆಬಿಟ್ ಕಾರ್ಡ್ ಮಾಡಿಸಿಕೊಂಡಿಲ್ಲ. ಹೀಗೆ ಆಸ್ಪತ್ರೆಗಳು ಹಣ ಪಡೆಯಲು ಹಿಂದೇಟು ಹಾಕಿದರೆ ರೋಗಿಗಳು ಏನು ಮಾಡಬೇಕು. ಸೇವೆಯನ್ನು ಮರೆತು ಕೇವಲ ಹಣಕ್ಕೆ ಬೆಲೆ ಕೊಡಲಾಗುತ್ತಿದೆ.

ನಾಲ್ಕು ಹೋಟೆಲ್‌ಗಳನ್ನು ತಿರುಗಿದರೂ ಎಲ್ಲಿಯೂ ಊಟ ನೀಡಲಿಲ್ಲ. ಈ ಒಂದು ವಾರದ ಸ್ಥಿತಿಯನ್ನು ನೆನಪು ಮಾಡಿಕೊಂಡರೆ ಮನಸ್ಸಿಗೆ ನೋವಾಗುತ್ತದೆ. ವಾರಕ್ಕೆ ಕೇವಲ ₹ 10 ಸಾವಿರ ಅಷ್ಟೇ ತೆಗೆಯಲು ಸಾಧ್ಯ. ಮನೆಗೆ, ಆಸ್ಪತ್ರೆಗೆ, ಊಟಕ್ಕೆ ಏನು ಮಾಡುವುದು? ಈ ಸಂಕಷ್ಟ ಯಾವಾಗ ಕೊನೆಗೊಳ್ಳುತ್ತದೋ ಗೊತ್ತಿಲ್ಲ.

ಮನೆಯಲ್ಲಿ ಮದುವೆ ಸಮಾರಂಭ ಇಟ್ಟುಕೊಂಡಿರುವ ಪರಿಚಯದವರೊಬ್ಬರು, ಎಲ್ಲಿಂದರಾದರೂ ಕಾಫಿ ಪುಡಿಯನ್ನು ಸಾಲ ಕೊಡಿಸು ಎಂದು ಕೇಳಿಕೊಂಡು ಬಂದಿದ್ದರು. ನನ್ನ ಸುತ್ತಮುತ್ತಲಿನ ಅನೇಕ ಮಂದಿ ಇದೇ ರೀತಿ ನೋವು ಅನುಭವಿಸುತ್ತಿದ್ದಾರೆ
-ಕೆ.ಚಂದ್ರಶೇಖರ್, ಮಾಜಿ ಮೇಯರ್

ನಾನು ಪ್ಲಾಸ್ಟಿಕ್ ಹಣವನ್ನೇ (ಡೆಬಿಟ್ ಕಾರ್ಡ್) ಬಳಸುವುದರಿಂದ ನನಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಿಲ್ಲ. ಒಮ್ಮೆ ಕಿರಾಣಿ ಅಂಗಡಿಗೆ ಹೋದಾಗ, ಅವರ ಬಳಿ ಸ್ವೈಪಿಂಗ್ ಯಂತ್ರ ಇರಲಿಲ್ಲ. ನನ್ನ ಬಳಿ ₹500 ನೋಟು ಇತ್ತು. ನನಗೆ ಪರಿಚಯವಿದ್ದುದರಿಂದ ಚಿಲ್ಲರೆ ಸಿಕ್ಕಾಗ ನೀಡಿ ಎಂದು ಸಾಲ ಕೊಟ್ಟರು.

ಹಾಗೆ ನನ್ನ ಮನೆ ಕೆಲಸದವರಿಗೆ ತಿಂಗಳ ಸಂಬಳ ನೀಡಲು ಹಣ ಇರಲಿಲ್ಲ. ಅವರೂ ಸಹ ಮುಂದಿನ ತಿಂಗಳು ನೀಡಿದರೆ ಸಾಕು ಎಂದಿದ್ದಾರೆ. ಆದರೆ ಇನ್ನೂ ಹೊಸ ₹500 ನೋಟು ಚಲಾವಣೆಗೆ ಬಂದಿಲ್ಲ. ಈ ಪರಿಸ್ಠಿತಿಯನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂಬುದು ನನ್ನಲ್ಲಿ ಕುತೂಹಲ ಸೃಷ್ಟಿಸಿದೆ.
-ವಸುಧೇಂದ್ರ, ಕಥೆಗಾರ

ನನ್ನ ಎಲ್ಲಾ ಕೆಲಸವೂ ಆನ್‌ಲೈನ್ ಮೂಲಕ ನಡೆಯುತ್ತದೆ. ದಿನಸಿ, ತರಕಾರಿ ಸೇರಿ ನನ್ನ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಡೆಬಿಟ್ ಕಾರ್ಡ್ ಬಳಸುತ್ತೇನೆ. ಪ್ರೊಡಕ್ಷನ್ ತಂಡದವರ ಊಟ ನಮ್ಮ ಮನೆಯಲ್ಲಿಯೇ ಆಗುತ್ತದೆ. ಅವರಿಗೆ ಆನ್‌ಲೈನ್ ಮೂಲಕವೇ ಸಂಬಳ ನೀಡುತ್ತೇನೆ.

-ರಕ್ಷಿತ್ ಶೆಟ್ಟಿ, ನಟ

ವಲಸೆ ಕಾರ್ಮಿಕರು ಏನನ್ನುತ್ತಾರೆ?
ಸಾವ್ಕಾರ್ರ ಬಳಿ ರೊಕ್ಕ ಇದ್ದರೆ ಮಾತ್ರ ನಮ್ಮಂಥ ಬಡವರಿಗೆ ಕೆಲಸ ಗಿಲಸ ಸಿಕ್ತೈತಿ. ಕಪ್ಪು ಹಣ ಮಡಗಿಕೊಂಡಿರುವ ಸಾವ್ಕಾರ್‌ರಿಗೆ ಅದನ್ನು ಬಳಸಲು ನೂರಾರು ದಾರಿಗಳಿವೆ. ಆದರೆ, ನಮ್ಮಂತಹ ಬಡವರೇನು ಮಾಡಬೇಕು.
-ಚಾಂದ್ ಪಾಷಾ, ಯಾದಗಿರಿ ಜಿಲ್ಲೆ

ಊರಿನಲ್ಲಿರುವ ನನ್ನ ಕುಟುಂಬದ ಸದಸ್ಯರು ನನ್ನ ಆದಾಯವನ್ನೇ ನೆಚ್ಚಿಕೊಂಡಿದ್ದಾರೆ. ನಾನು ಒಂದು ವಾರ ಹಣ ಕಳುಹಿಸದಿದ್ದರೂ ಮನೆಯವರು ಕಷ್ಟ ಅನುಭವಿಸಬೇಕಾಗುತ್ತದೆ. ನನ್ನ ಬಳಿ ಹಣವಿದ್ದರೂ ಊರಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ.
-ಬಾಬೂಲಾಲ್, ಗೌರಾಚೌಕಿ, ಉತ್ತರಪ್ರದೇಶ

ನನ್ನ ಬಳಿ ಇರುವ 500ರ ನೋಟುಗಳನ್ನು ಬದಲಿಸಲು ಬ್ಯಾಂಕ್‌ನಲ್ಲಿ ಒಂದು ದಿನ ಸಾಲು ನಿಂತಿದ್ದೆ. ಅವತ್ತು ಸಾಧ್ಯವಾಗಲಿಲ್ಲ. ಮತ್ತೆ ಬ್ಯಾಂಕಿನೆದುರು ಕಾಯುತ್ತಾ ನಿಂತರೆ ನಾನು ದಿನದ ಸಂಬಳವನ್ನು ಕಳೆದುಕೊಳ್ಳಬೇಕು.
-ಬಿಲಾಲ್ ಹಸನ್, ಮುರ್ಸಿದಾಬಾದ್, ಪಶ್ಚಿಮ ಬಂಗಾಳ

ನನ್ನ ಕುಟುಂಬದವರು ನಾನು ಕಳುಹಿಸುವ ಹಣವನ್ನೇ ನೆಚ್ಚಿಕೊಂಡಿದ್ದಾರೆ. ನಾನು ಇಲ್ಲಿಂದ ಊರಿಗೆ ಹಣವನ್ನು ಕಳುಹಿಸಲೂ ಸಾಧ್ಯವಾಗುತ್ತಿಲ್ಲ. ಅಲ್ಲಿನ ಬ್ಯಾಂಕ್‌ನಿಂದ ನನ್ನ ಮನೆಯವರು ಹಣ ಪಡೆಯುವುದಕ್ಕೂ ಆಗುತ್ತಿಲ್ಲ
-ನಾನುಲ್ ಶೇಖ್, ಕೋಲ್ಕತ್ತ

ಇನ್ನು ಮುಂದೆ ಚೆಕ್ ರೂಪದಲ್ಲಿ ಸಂಬಳ ನೀಡುವುದಾಗಿ ಹೇಳಿದ್ದಾರೆ. ನನಗೆ ಬ್ಯಾಂಕ್ ವ್ಯವಹಾರ ಅಷ್ಟಾಗಿ ತಿಳಿಯದು. ಚಿಲ್ಲರೆ ಹಣದ ಸಮಸ್ಯೆಯಿಂದಾಗಿ ನಮ್ಮ ದೈನಂದಿನ ಆಗುಹೋಗುಗಳಿಗೂ ಸಮಸ್ಯೆ ಎದುರಾಗಿದೆ.
-ಸಫಿಯುಲ್ ಶೇಖ್

₹100ರ ನೋಟು ಸಿಗುತ್ತಿಲ್ಲ
‘ನಮಗೆ ದಿನಕ್ಕೆ ₹ 400 ಕೂಲಿ ಕೊಡುತ್ತಾರೆ. ನೋಟು ನಿಷೇಧದ ಬಳಿಕ ನಮಗೆ ₹ 100ರ ನೋಟು ಎಲ್ಲೂ ಸಿಗುತ್ತಿಲ್ಲ. ಎಟಿಎಂಗಳಿಗೆ ಹೋದರೆ ನಗದು ಇಲ್ಲ ಎಂಬ ಫಲಕ ನೇತುಹಾಕಿರುತ್ತಾರೆ. ಬ್ಯಾಂಕಿನೆದುರು ಸಾಲು ನಿಂತರೆ ಕೆಲಸಕ್ಕೆ ಹೋಗಲು ಸಾಧ್ಯವಾಗದು’ ಎಂದು ಅವರು ಅಳಲು ತೋಡಿಕೊಂಡರು.

‘ನಮಗೆ ಊರಿನಲ್ಲಿ ನಾಲ್ಕು ಎಕರೆ ಜಮೀನಿದೆ. ಈಗ ಶೇಂಗಾ ಫಸಲು ಬರುವ ಸಮಯ. ಶೇಂಗಾ ಬೆಳೆಯ ದುಡ್ಡು ಇನ್ನೇನು ಕೈಗೆ ಬರಲಿದೆ ಎಂಬಷ್ಟರಲ್ಲಿ ಹಳೆ ನೋಟು ರದ್ದಾಗಿದೆ. ಅದನ್ನು ಮಾರಾಟ ಮಾಡುವುದಕ್ಕೂ ಸಮಸ್ಯೆ ಎದುರಾಗಿದೆ.

ನಮ್ಮ ಹಳ್ಳಿಯ ನೂರಾರು ರೈತರು ನಮ್ಮಂತೆಯೇ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರು ಏನಾದ್ರೂ ತಿರುಗಿ ಬಿದ್ದರೆ ಯಾವ ಮೋದೀನೂ ಇರಲ್ಲ. ಯಾವ ಸಿದ್ದರಾಮಯ್ಯನೂ ಇರಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಕೆಲವು ಕಾರ್ಮಿಕರು ಊರಿಗೆ ಮರಳುವುದಕ್ಕೂ ಹಣ ಸಿಗದೆ ಪಡಿಪಾಟಲು ಎದುರಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ಹಳ್ಳಿಗಳಿಗೆ ಮರಳಿದ ಕಾರ್ಮಿಕರು
‘ನಮಗೆ ಕಾಯಂ ಕೆಲಸ ಎಂಬುದಿಲ್ಲ. ಒಂದಿಷ್ಟು ದಿನ ಒಂದು ಕಡೆ ಕೆಲಸ ಮಾಡಿದರೆ, ಮತ್ತೊಂದಿಷ್ಟು ದಿನ ಬೇರೆ ಕಡೆ ಕೆಲಸ. ಹಳೆ ನೋಟು ಚಲಾವಣೆ ನಿರ್ಬಂಧಿಸಿದ ಬಳಿಕ ಕಟ್ಟಡ ನಿರ್ಮಾಣ ಚಟುವಟಿಕೆ ಕುಂಠಿತವಾಗಿದೆ. ಕಟ್ಟಡದ ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಉತ್ತರ ಕರ್ನಾಟಕದ ಸಾಕಷ್ಟು ಕಾರ್ಮಿಕರು ಊರಿಗೆ ಮರಳಿದ್ದಾರೆ’ ಎನ್ನುತ್ತಾರೆ ಯಾದಗಿರಿ ಜಿಲ್ಲೆಯ ಕಟ್ಟಡ ಕಾರ್ಮಿಕ ಚಾಂದ್ ಪಾಷಾ.

‘ನಾವು ದುಡಿದ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಇಲ್ಲಿ ₹ 4 ಸಾವಿರಕ್ಕಿಂತ ಹೆಚ್ಚು ಹಳೆ ನೋಟುಗಳನ್ನು ವಿನಿಮಯ ಮಾಡುವುದಕ್ಕೆ ಆಗುತ್ತಿಲ್ಲ. ಅದಕ್ಕಿಂತ ಹೆಚ್ಚು ಹಣವಿದ್ದರೆ, ಅದನ್ನು ಬ್ಯಾಂಕ್ ಖಾತೆಗೆ ಹಾಕಬೇಕು. ಕೆಲವು ಕಾರ್ಮಿಕರು ಸ್ವಂತ ಬ್ಯಾಂಕ್ ಖಾತೆಯನ್ನೂ ಹೊಂದಿಲ್ಲ. ಹಾಗಾಗಿ ಅನೇಕ ಕಾರ್ಮಿಕರು ಹಳೆ ನೋಟು ಬದಲಾಯಿಸಲು ಊರಿಗೆ ತೆರಳಿದ್ದಾರೆ’ ಎಂದು ಅವರು ತಿಳಿಸಿದರು.

‘ಹಳೇ ನೋಟನ್ನೇ ನೀಡುತ್ತಿದ್ದಾರೆ’
‘ನವೆಂಬರ್ 8ರಂದೇ ದೊಡ್ಡ ಮುಖಬೆಲೆಯ ನೋಟು ರದ್ದುಪಡಿಸಿದ್ದರೂ ನಮಗೆ ಹಳೆಯ ನೋಟುಗಳನ್ನೇ ನೀಡಿದ್ದಾರೆ. ಆಕ್ಷೇಪಿಸಿದ್ದಕ್ಕೆ, ಬೇಕಿದ್ದರೆ ಸ್ವೀಕರಿಸಿ ಎಂದು ಧಮಕಿ ಹಾಕಿದ್ದಾರೆ. ಈ ಶನಿವಾರವೂ ಹಳೆಯ ನೋಟನ್ನೇ ನೀಡುವುದಾಗಿ ಹೇಳಿದ್ದಾರೆ.

ಈ ನೋಟುಗಳನ್ನು ಯಾರೂ ಸ್ವೀಕರಿಸುವುದಿಲ್ಲ. ಅವುಗಳನ್ನು ಏನು ಮಾಡಬೇಕೆಂದೇ ತೋಚುತ್ತಿಲ್ಲ. ಹಳೆ ನೋಟುಗಳನ್ನು ಬ್ಯಾಂಕ್‌ನಲ್ಲಿ ವಿನಿಮಯ ಮಾಡಿಕೊಳ್ಳಲು ರಜೆಯನ್ನೂ ನೀಡುತ್ತಿಲ್ಲ’ ಎಂದು ಕಾಮಾಕ್ಷಿಪಾಳ್ಯದ ಕಾರ್ಖಾನೆಯೊಂದರ ಕಾರ್ಮಿಕರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.