ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಮನೇಲಿ ಪುಟಾಣಿ ದೆವ್ವಗಳು!

Last Updated 24 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಗಾಳಿ ಬೀಸುವ ಕಡೆಗೇ ದೋಣಿ ನಡೆಸುವ ಚಾಳಿ ಸಿನಿಮಾ–ಕಿರುತೆರೆ ಲೋಕದಲ್ಲಿ ಹೊಸ ಸಂಗತಿಯೇನಲ್ಲ. ‘ಟಿಆರ್‌ಪಿ’ ಅಗ್ನಿಪರೀಕ್ಷೆಯಲ್ಲಿ ಯಾವುದು ಹೆಚ್ಚಿನ ಅಂಕ ಪಡೆದುಕೊಳ್ಳುತ್ತದೆಯೋ ಆ ಮಾದರಿಯ ಕಾರ್ಯಕ್ರಮಗಳು, ರಿಯಾಲಿಟಿ ಷೋಗಳನ್ನು ಎಲ್ಲ ವಾಹಿನಿಗಳೂ ಆರಂಭಿಸುತ್ತವೆ. ಅದರಲ್ಲಿಯೂ ಧಾರಾವಾಹಿಗಳ ವಿಷಯದಲ್ಲಿಯಂತೂ ಇದು ಇನ್ನಷ್ಟು ಸತ್ಯ. ಅದದೇ ಪಾತ್ರ–ಕಥನ ಮಾದರಿಯ ಸೂತ್ರಗಳಿಗೇ ಅವು ಮತ್ತೆ ಮತ್ತೆ ಆತುಕೊಳ್ಳುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಬಹುತೇಕ ಎಲ್ಲ ವಾಹಿನಿಗಳಲ್ಲಿಯೂ ಒಂದೇ ಧಾರಾವಾಹಿ ಬೇರೆ ಬೇರೆ ಹೆಸರುಗಳಲ್ಲಿ ಪ್ರಸಾರವಾಗುತ್ತಿದೆ ಅನಿಸಿದರೂ ಆಶ್ಚರ್ಯವಿಲ್ಲ.

ಸದ್ಯಕ್ಕೆ ಪುಟ್ಟ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ಬರುತ್ತಿರುವ ಧಾರಾವಾಹಿಗಳು ಹೊಸ ಟ್ರೆಂಡ್‌ ಆಗಿ ರೂಪುಗೊಂಡಿರುವುದನ್ನು ಕಾಣಬಹುದು.
ಪ್ರತಿಯೊಂದು ವಾಹಿನಿಯಲ್ಲಿಯೂ ಮಕ್ಕಳನ್ನು ಕೇಂದ್ರೀಕರಿಸಿಕೊಂಡ ಒಂದಿಲ್ಲ ಒಂದು ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿ ಮಕ್ಕಳ ಪ್ರತಿಭೆಗೆ ಒಂದು ವೇದಿಕೆಯಾಗುವುದಾದರೆ – ಆ ಮೂಲಕ ಮಕ್ಕಳ ಬಗ್ಗೆ ಉಪಯುಕ್ತ ಸಂಗತಿಗಳನ್ನು ಪ್ರಸಾರ ಮಾಡುವ ಸಾಧನವಾಗುವುದಾದರೆ ಅದು ಪ್ರಶಂಸಾರ್ಹವೇ. ಆದರೆ ಇಂದು ಕಿರುತೆರೆ ಧಾರಾವಾಹಿಗಳಲ್ಲಿ ಮಕ್ಕಳನ್ನು ತೋರಿಸುತ್ತಿರುವ ರೀತಿಯನ್ನು ನೋಡಿದರೆ ಯಾರಾದರೂ ದಿಗಿಲುಬೀಳುವಂತಿದೆ.

ಇನ್ನೂ ತೊದಲು ಮಾತನಾಡುತ್ತಿರುವ ಮುದ್ದು ಕಂದಮ್ಮಗಳು ವಾಹಿನಿಗಳಲ್ಲಿ ದೆವ್ವಗಳಾಗಿ ಕಾಣಿಸಿಕೊಳ್ಳುತ್ತಿವೆ! ಬಾಲ ವಿಧವೆಯಾಗಿ, ಕಡುಕಷ್ಟದಲ್ಲಿ ಪರಿತಪಿಸುವ ಬಾಲಕಿಯಾಗಿ, ಆತ್ಮದ ರೂಪದಲ್ಲಿ – ಹೀಗೆ ಹಲವು ರೀತಿಗಳಲ್ಲಿ ಮಕ್ಕಳು ಕಿರುತೆರೆಯ ಸರಕಾಗುತ್ತಿದ್ದಾರೆ. ಅದರಲ್ಲಿಯೂ ಬಹುಪಾಲು ಕಲಾವಿದರು ಬಾಲಕಿಯರು ಎನ್ನುವುದು ಗಮನಿಸಬೇಕಾದ ಇನ್ನೊಂದು ಅಂಶ.

ಇಂದಿನ ಸಮಾಜದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ ಬಾಲವಿಧವೆಯ ಬದುಕನ್ನು ತೋರಿಸಲು ಎಳೆಯ ಮಕ್ಕಳನ್ನು ಬಳಸಿಕೊಳ್ಳುವುದು, ಮುದ್ದು ಕಂದಮ್ಮಗಳನ್ನು ದೆವ್ವಗಳನ್ನಾಗಿ ತೋರಿಸುವುದು ಎಷ್ಟು ಸರಿ? ಇಂಥ ಧಾರಾವಾಹಿಗಳು ಅದನ್ನು ನೋಡುವ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ? ಇದಕ್ಕಿಂತ ಭಿನ್ನವಾಗಿ ರಚನಾತ್ಮಕವಾಗಿ ಮಕ್ಕಳನ್ನು ತೋರಿಸಲು ಸಾಧ್ಯವಿಲ್ಲವೇ? ಟಿಆರ್‌ಪಿ ರೇಸ್‌ನಲ್ಲಿ ಎತ್ತರಕ್ಕೇರುವ ಧಾವಂತದಲ್ಲಿ ಸಾಗುವ ದಾರಿಯನ್ನು ಸಂಪೂರ್ಣ ಮರೆತಂತಿರುವ ವಾಹಿನಿಗಳಿಗೆ ಈ ಪ್ರಶ್ನೆಗಳು ಮುಖ್ಯ ಅನಿಸಿದಂತಿಲ್ಲ. ಹಲವು ವಾಹಿನಿಗಳ ಮುಖ್ಯಸ್ಥರಿಗೆ ಈ ವಿಷಯದ ಬಗ್ಗೆ ಮಾತನಾಡುವುದೂ ಇಷ್ಟವಿಲ್ಲ. ಹಾಗೆಯೇ ತಾವು ಮಾಡುತ್ತಿರುವ ಕೆಲಸವನ್ನು ಸಮರ್ಥಿಸಿಕೊಳ್ಳುವವರೂ ಇದ್ದೇ ಇದ್ದಾರೆ.

‘ಮಕ್ಕಳಲ್ಲಿ ಮುಗ್ಧತೆ ಇರುತ್ತದೆ. ಅದು ಜನರಿಗೆ ಬೇಗ ತಟ್ಟುತ್ತದೆ. ಆದ್ದರಿಂದ ಉಪಯುಕ್ತ ಸಂಗತಿಗಳನ್ನು ಹೇಳಲು ಮಕ್ಕಳನ್ನು ಬಳಸಿಕೊಳ್ಳುತ್ತೇವೆಯೇ ವಿನಾ ಮಾರ್ಕೆಟಿಂಗ್‌ ಮಾಡಬೇಕು ಎಂದು ಖಂಡಿತ ಅಲ್ಲ’ ಎನ್ನುತ್ತಾರೆ ಸ್ವಪ್ನಾ ಕೃಷ್ಣ. ‘ಝಿ’ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗಂಗಾ’ ಧಾರಾವಾಹಿಯ ನಿರ್ದೇಶಕಿ ಆಗಿರುವ ಅವರು, ತಮ್ಮ ಧಾರಾವಾಹಿಯ ಕಥೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ.

‘ಗಂಗಾ’ ಬಾಲವಿಧವೆಯ ಕಥೆಯನ್ನು ಹೊಂದಿರುವ ಧಾರಾವಾಹಿ. ಈ ಧಾರಾವಾಹಿ ಮೂಲಕ ಸ್ವಪ್ನಾ ಅವರು ಸಮಾಜದ ಹಿರಿಯರು ಮತ್ತು ಮಕ್ಕಳು – ಇಬ್ಬರಿಗೂ ಪರಿಣಾಮಕಾರಿಯಾದ ಸಂದೇಶ ದಾಟಿಸುತ್ತಿದ್ದಾರಂತೆ.

‘ನಮ್ಮ ಧಾರಾವಾಹಿಯ ನಾಯಕಿ ಗಂಗಾ ಪಾತ್ರದ ಮೂಲಕ ನಾವು ಯಾವ ಹೆಣ್ಣಿಗೂ ಅಂಥ ಪರಿಸ್ಥಿತಿಯನ್ನು ತರಬಾರದು ಎಂದು ಹೇಳುತ್ತಿದ್ದೇವೆ. ಹಾಗೆಯೇ ಅಂಥ ಕಷ್ಟಗಳನ್ನು ಎದುರಿಸಿಯೂ ಅವಳ ಆತ್ಮಸ್ಥೈರ್ಯ, ಸ್ವಾಭಿಮಾನ, ಶಿಕ್ಷಣದ ಕುರಿತಾದ ಒಲವು – ಈ ಎಲ್ಲ ಅಂಶಗಳು ಮಕ್ಕಳಿಗೆ ಪ್ರೇರಕವಾಗುವಂತೆ ನೋಡಿಕೊಳ್ಳುತ್ತಿದ್ದೇವೆ’ ಎನ್ನುವ ಅವರು, ‘ಯಾವುದೇ ಕಥೆಯನ್ನು ಆಧರಿಸಿ ಅದಕ್ಕೆ ಯಾವ ವಯಸ್ಸಿನ ಪಾತ್ರ ಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆಯೇ ಹೊರತು, ಮಕ್ಕಳನ್ನು ಇಟ್ಟುಕೊಂಡೇ ಕಥೆ ಕಟ್ಟುವುದಿಲ್ಲ’ ಎಂದೂ ಸ್ಪಷ್ಟವಾಗಿ ಹೇಳುತ್ತಾರೆ.

ಕಿರುತೆರೆಯ ಜನಪ್ರಿಯ ನಿರ್ದೇಶಕ ಕೆ.ಎಸ್‌. ರಾಮ್‌ಜಿ ಕೂಡ ಮಕ್ಕಳನ್ನು ನಕಾರಾತ್ಮಕವಾಗಿ ತೋರಿಸುವುದನ್ನು ಇಷ್ಟಪಡುವುದಿಲ್ಲ. ‘ಕಲರ್ಸ್‌ ಸೂಪರ್ಸ್‌’ನಲ್ಲಿ  ಪ್ರಸಾರವಾಗುತ್ತಿರುವ ರಾಮ್‌ಜಿ ನಿರ್ದೇಶನದ ‘ಬಂಗಾರಿ’ ಕೂಡ ತಾಯಿಯನ್ನು ಕಳೆದುಕೊಂಡ ಮಗುವನ್ನು ಮಗುವಿನ ಪರಿತಾಪದ ಕಥೆಯನ್ನೇ ಹೊಂದಿದೆ. ಆದರೆ ತಾವು ಇದೀಗ ಕಿರುತೆರೆಯಲ್ಲಿ ನಡೆಯುತ್ತಿರುವ ಟ್ರೆಂಡ್‌ ಅನುಸರಿಸಲು ಈ ಧಾರಾವಾಹಿ ಮಾಡುತ್ತಿರುವುದಲ್ಲ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.

‘ನನ್ನ ಬಳಿ ಆರೇಳು ಕಥೆಗಳಿದ್ದವು. ‘ಅಕ್ಕ’ ಸೇರಿದಂತೆ ಹಲವು ಬೇರೆ ಬೇರೆ ಪ್ರಕಾರದ ಧಾರಾವಾಹಿಗಳನ್ನು ಮಾಡಿದ್ದೇನೆ. ಮಕ್ಕಳನ್ನು ಕೇಂದ್ರೀಕರಿಸಿರುವ ಎರಡು ಕಥೆಗಳೂ ಇದ್ದವು. ವಾಹಿನಿಯವರು ಈ ಕಥೆಯನ್ನು ಇಷ್ಟಪಟ್ಟರು. ಅದಕ್ಕಾಗಿ ಇದನ್ನು ಧಾರಾವಾಹಿ ಮಾಡುತ್ತಿದ್ದೇನೆ. ಇದೇ ಸಮಯದಲ್ಲಿ ಬೇರೆ ವಾಹಿನಿಗಳಲ್ಲಿಯೂ ಮಕ್ಕಳ ಧಾರಾವಾಹಿ ಬರುತ್ತಿರುವುದು ಒಂದು ಆಕಸ್ಮಿಕ ಅಷ್ಟೆ’ ಎನ್ನುತ್ತಾರೆ ರಾಮ್‌ಜಿ.

‘ಮಕ್ಕಳನ್ನು ದೆವ್ವಗಳಾಗಿ ತೋರಿಸುವುದು ತಪ್ಪು. ಮಕ್ಕಳಿರುವಂಥ ಧಾರಾವಾಹಿಗಳನ್ನು ಮಕ್ಕಳೇ ಹೆಚ್ಚು ನೋಡುತ್ತಾರೆ. ಆ ಎಚ್ಚರ ನಮಗಿರಬೇಕು’ ಎನ್ನುತ್ತಾರೆ. ದೆವ್ವಗಳಾಗಿ ತೋರಿಸುವುದು ಹೇಗೆ ತಪ್ಪೋ ಹಾಗೆಯೇ ಮಗುವೊಂದು ಕಷ್ಟಪಡುವ, ಕಿರುಕುಳ ಅನುಭವಿಸುವ ಹಾಗೆ, ವೇಶ್ಯಾವಾಟಿಕೆಗೆ ಮಾರಾಟವಾಗುವ ರೀತಿ ಚಿತ್ರಿಸುವುದೂ ತಪ್ಪಲ್ಲವೇ ಎಂದು ಪ್ರಶ್ನಿಸಿದರೆ ಅವರು ಮಾರುಕಟ್ಟೆ ಲೆಕ್ಕಾಚಾರಗಳನ್ನು ಮುಂದಿಡುತ್ತಾರೆ.

‘ಎಲ್ಲ ವಾಹಿನಿಗಳೂ ಇಂದು ನಂಬರ್‌ ರೇಸ್‌ನಲ್ಲಿ ಓಡುತ್ತಿವೆ. ಅಲ್ಲೊಂದು ಬಿಜಿನೆಸ್‌ ಇರುತ್ತದೆ. ಹಲವು ಜನರ ಜೀವನ ನಿರ್ವಹಣೆ ಪ್ರಶ್ನೆ ಇರುತ್ತದೆ. ಇವೆಲ್ಲವೂ ಒಂದು ಧಾರಾವಾಹಿಯ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತದೆ’ ಎನ್ನುವುದು ಅವರ ಅನುಭವದ ಮಾತು.

ವಾಹಿನಿಗಳ ಹಣಕಾಸಿನ ಲೆಕ್ಕಾಚಾರ ಮತ್ತು ನಿರ್ದೇಶಕರ ಬದುಕಿನ ಅನಿವಾರ್ಯತೆಗಳು ಉದ್ದೇಶರಹಿತ ಧಾರಾವಾಹಿಗಳ ನಿರ್ಮಾಣಕ್ಕೆ ಕಾರಣವಾಗುತ್ತಿವೆ ಎಂಬುದನ್ನು ರಾಮ್‌ಜಿ ಪರೋಕ್ಷವಾಗಿ ಹೇಳುತ್ತಾರೆ.

‘ಉದ್ದೇಶ ಇದ್ದರೆ ಅದು ಒಳ್ಳೆಯದೋ ಕೆಟ್ಟದ್ದೋ ಎಂದು ಚರ್ಚಿಸಬಹುದು. ಆದರೆ ಬದುಕಿನ ಅನಿವಾರ್ಯತೆಯಲ್ಲಿ ರೂಪುಗೊಳ್ಳುತ್ತಿರುವ ಎಷ್ಟೋ ಧಾರಾವಾಹಿಗಳಿಗೆ ಉದ್ದೇಶವೇ ಇರುವುದಿಲ್ಲ’ ಎನ್ನುವ ಅವರ ಮಾತುಗಳು ದೈನಿಕ ಧಾರಾವಾಹಿಗಳ ಹಿಂದಿನ ಕಟು ವಾಸ್ತವದ ಮೇಲೆ ತುಸು ಬೆಳಕು ಚೆಲ್ಲುತ್ತವೆ. ತಮ್ಮ ಮಕ್ಕಳು ಎಂಥ ಕಾರ್ಯಕ್ರಮಗಳನ್ನು ನೋಡಬೇಕು ಎಂದು ನಿರ್ಧರಿಸುವ ಪೋಷಕರು, ದೆವ್ವದ ಕಥೆಗಳ ಬಗ್ಗೆ ಹುಷಾರಾಗಿರುವ ದಿನಗಳು ಬಂದಿವೆ. 

*
ಪುಟಾಣಿ ವಿಲನ್‌ಗಳು ಬೇಕೆ?
ಟೀವಿಯಲ್ಲಿ ಯಾರಾದರೂ ಮಕ್ಕಳು ಕಂಡರೆ ಅತ್ತ ಸರಕ್ಕನೆ ಕಣ್ಣುಹಾಯಿಸೋರು ಮಕ್ಕಳೇ. ಹಾಗಾಗಿ ದೃಶ್ಯ ಮಾಧ್ಯಮದ ದೊಡ್ಡೋರು ಹುಷಾರಾಗಿದ್ದಷ್ಟೂ ಒಳ್ಳೆಯದು. ‘ಕಿನ್ನರಿ’ ಧಾರಾವಾಹಿಯ ಐಶೂ, ‘ಅವನು ಮತ್ತೆ ಶ್ರಾವಣಿ’ಯ ಸಚಿನ್ ಯಾವ ದೊಡ್ಡವರಿಗೂ ಸಮಾನವಾಗಿ ಜೊತೆಗಾರರಿಗೆ ಕಾಟಕೊಡಬಲ್ಲರು. ಒಂಥರಾ ಪುಟಾಣಿ ವಿಲನ್‌ಗಳು. ಆ ವಯಸ್ಸಿನವರ ಮನಸ್ಸಲ್ಲಿ ಖಂಡಿತ ಆ ಪ್ರಮಾಣದ ದುರ್ಬುದ್ಧಿ ತುಂಬಿರೋದಿಲ್ಲ. ಮಕ್ಕಳ ಪ್ರಪಂಚದಲ್ಲಿ ಇರಲಾರದ್ದನ್ನು ಸೃಷ್ಟಿ ಮಾಡಿ, ಅದನ್ನು ಮಕ್ಕಳಿಂದ ಮಾಡಿಸಿ, ಮಕ್ಕಳು ಅದನ್ನು ಕಂಡು ಅದ್ಯಾವ ಉದ್ದೇಶ ಸಾಧನೆ ಆಗಬೇಕಾಗಿದ್ಯೋ?

‘ಸಿಂಹದ ಮರಿ ಸೈನ್ಯ’ ಥರದ ಸಿನಿಮಾಗಳನ್ನು ವರ್ಷಗಳ ಕಾಲ ಮನಸ್ಸಲ್ಲಿ ಜತನ ಮಾಡಿಟ್ಟುಕೊಂಡು ಖುಷಿಪಡುವ ಭಾಗ್ಯ ನಮ್ಮ ಮಕ್ಕಳಿಗಿಲ್ಲ. ಅವರ ಮುಗ್ಧತೆಯನ್ನು ಕಾಪಾಡುವ, ಕುತೂಹಲ ಕೆರಳಿಸಿ ಯೋಚನೆಗೆ, ಯೋಜನೆಗೆ ಹಚ್ಚುವ ಸಿನಿಮಾಗಳು ಈಗ ವಿರಳ.

‘ಡ್ರಾಮಾ ಜ್ಯೂನಿಯರ್ಸ್’ ಥರದ ಕಾರ್ಯಕ್ರಮಗಳಲ್ಲಿ ಆ ಮಕ್ಕಳ ಅಭಿನಯ ವ್ಹಾಹ್... ಆದರೆ ಅವರ ವಯಸ್ಸಿಗೆ ಸರಿಹೊಂದದ, ನಕಾರಾತ್ಮಕವಾಗಿರೋ ಪಾತ್ರ ಮಾಡಿಸುವುದರಿಂದ ಮಾಡುವ ಹಾಗೂ ನೋಡುವ ಮಗುವಿಗೆ ಖಂಡಿತ ಕೆಟ್ಟಪರಿಣಾಮಗಳಾಗತ್ತವೆ. ಅವರ ಮುಗ್ಧತೆಯನ್ನು ಕಾಪಿಡದ ಮೇಲೆ ಅವರು ಮಕ್ಕಳಾಗಿರಬಲ್ಲರೇ? ಕಲರ್ ಕಲರ್ ಬಲೂನಿನ ಬದಲು ಮಗು ಬಂದೂಕು ಕೇಳೋ ಹಾಗಾದ್ರೆ ಅದಕ್ಕೆ ನಾವು ದೊಡ್ಡವರೇ ಹೊಣೆ. ಮಕ್ಕಳನ್ನು ಮಕ್ಕಳಾಗಿ ಇರಲು ಬಿಡೋಣ.
– ಶಿವಲೀಲಾ ಮಲ್ಲಿಕಾರ್ಜುನಪ್ಪ, ಶಿಕ್ಷಕಿ, ಕೊಪ್ಪಳ

*
ಬಾಲ್ಯವನ್ನೂ ಗೋಳಿನಿಂದ ತುಂಬಬೇಕೆ?
ಕಿರುತೆರೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಮತ್ತು ಅವರನ್ನು ತೋರಿಸುತ್ತಿರುವ ರೀತಿ ಒಂದು ಚೂರೂ ಸರಿಯಿಲ್ಲ. ಮಕ್ಕಳನ್ನು ಅಕಸ್ಮಾತ್‌ ಉಪಯೋಗಿಸುವುದಾದರೆ – ಶಾಲೆಗೆ ಹೋಗಿ ಬರುವುದು, ಅವರ ಆಟ ಪಾಠ, ಅವರ ಖುಷಿ, ಮನೆಯಲ್ಲಿ ಗೆಲುವಾಗಿರುವುದು ಇಂಥ ದೃಶ್ಯಗಳಲ್ಲಿ ಬಳಸಿಕೊಳ್ಳಬಹುದು. ಅದನ್ನು ಬಿಟ್ಟು, ತಾಯಿ–ತಂದೆ ಇಲ್ಲದ ಅನಾಥರಾಗಿ, ವಿಧವೆ, ಗೋಳು, ಕಿರುಕುಳಗಳನ್ನು ಅನುಭವಿಸುವ ಪಾತ್ರವಾಗಿ ಖಂಡಿತ ಬಿಂಬಿಸಬಾರದು.


ತಮ್ಮ ಮಗು ಟೀವಿಯಲ್ಲಿ ಅಭಿನಯಿಸುತ್ತಿದೆ ಎಂಬ ಪಾಲಕರ ಸಂಭ್ರಮಕ್ಕೆ ಮಕ್ಕಳು ಟಾರ್ಚರ್‌ ಅನುಭವಿಸುತ್ತಿದ್ದಾರೆ. ಮಕ್ಕಳು–ವೃದ್ಧ ಕಲಾವಿದರಿಗಾಗಿ ವಿಶೇಷ ಕಾಳಜಿ ವಹಿಸುವ ವ್ಯವಸ್ಥೆಯೂ ಧಾರಾವಾಹಿ ಚಿತ್ರೀಕರಣಗಳಲ್ಲಿ ಇಲ್ಲ. ಕೂಲಿ ಕಾರ್ಮಿಕರಿಗೂ ಒಂದು ಕೆಲಸದ ಅವಧಿ ಇದೆ. ಆದರೆ ನಟರಿಗೆ ಅದ್ಯಾವುದೂ ಇಲ್ಲ.

ವಿಶೇಷ ಸಂಚಿಕೆಗಳ ಚಿತ್ರೀಕರಣದಲ್ಲಿಯಂತೂ ಬೆಳಿಗ್ಗೆ ಆರೂವರೆ–ಏಳು ಗಂಟೆಗೆಲ್ಲ ಕರೆದುಕೊಂಡು ಹೋಗಿ ಮೂರು ಗಂಟೆಯವರೆಗೂ ಚಿತ್ರೀಕರಣ ನಡೆಸುತ್ತಾರೆ. ಮಕ್ಕಳು ಇದನ್ನೆಲ್ಲ ಸಹಿಸಿಕೊಳ್ಳುವುದು ಕಷ್ಟ. ಮಕ್ಕಳು ಎನ್ನುವ ಕನಿಷ್ಠ ಕಾಳಜಿಯೂ ಇರುವುದಿಲ್ಲ. ನಿದ್ದೆಗಣ್ಣಿನಲ್ಲಿ ಎಬ್ಬಿಸಿ ಕೆಲಸ ಮಾಡಿಸುತ್ತಾರೆ. ಆಗೆಲ್ಲ ಅವರು ಅಳುವುದನ್ನು ನಾನೇ ನೋಡಿದ್ದೀನಿ. ಇದು ಅವರ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತದೆ.

ಚಿಕ್ಕ ವಯಸ್ಸಿನಲ್ಲಿ ಸಿಗುವ ಅಪಾರ ಪ್ರಚಾರ, ಜನಪ್ರಿಯತೆಗಳಿಂದ ತಾವು ಏನೋ ವಿಶೇಷ ಎಂದುಕೊಂಡುಬಿಡುತ್ತಾರೆ. ಆದರೆ ಆಮೇಲೆ ಅವರನ್ನು ಕೇಳುವವರೇ ಇರುವುದಿಲ್ಲ. ಇದರಿಂದ ಅವರ ಮನಸ್ಸು ಸಹಜವಾಗಿಯೇ ಕುಗ್ಗಿಹೋಗುತ್ತದೆ.

ಇಂಥ ನಕಾರಾತ್ಮಕ ಪಾತ್ರಗಳಲ್ಲಿ ನಟಿಸುವ ಮಕ್ಕಳನ್ನು ನೋಡುವವರೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೇ ಆಗಿರುತ್ತಾರೆ. ಅವರ ಮನಸ್ಸು ಹಸಿ ಗೋಡೆ ಥರ. ಏನೇ ನೋಡಿದರೂ ಮನಸ್ಸಿನಲ್ಲಿ ಕೂತು ಬಿಡುತ್ತದೆ. ಎಷ್ಟೋ ಸಲ ಈ ವಿಷಯಕ್ಕಾಗಿ ನಾನೇ ಜಗಳ ಮಾಡಿದ್ದೇನೆ. ಜಗತ್ತಿನಲ್ಲಿ, ಜೀವನದಲ್ಲಿ ಗೋಳುಗಳೇ ಜಾಸ್ತಿ. ಆದರೆ ಮಕ್ಕಳ ಬಾಲ್ಯವನ್ನಾದರೂ ಅದರಿಂದ ಮುಕ್ತವಾಗಿರಿಸಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT