ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ರೀತಿಯ ಮೌನವೂ ಖಂಡನಾರ್ಹವೇ?

ಚರ್ಚೆ
Last Updated 24 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಇಂದಿನ ಕಾಲಮಾನದ ಸಂಕಟಗಳಿಗೆ ಮಧ್ಯಮಮಾರ್ಗ ಪರಿಹಾರವೆಂದು ವಿಮರ್ಶಕ ಗಿರಡ್ಡಿ ಗೋವಿಂದರಾಜ   ಹೇಳಿದ್ದಾರೆ. ಡಾ. ಸುಶಿ ಕಾಡನಕುಪ್ಪೆಯವರು ಗಿರಡ್ಡಿಯವರ ವಿಚಾರವನ್ನು ವಿರೋಧಿಸಿ, ಮಧ್ಯಮ ಮಾರ್ಗದ ಹೆಸರಿನಲ್ಲಿ ಅವಕಾಶವಾದಿ ಮೌನ ವಹಿಸುವುದು ಹಾಗೂ ಬಡವರ ಪರ ಚಳವಳಿಗಳನ್ನು ತಿರಸ್ಕರಿಸುವುದು ತಪ್ಪು ಎಂಬ ಅರ್ಥ ಬರುವಂತೆ ‘ಸಂಗತ’ದಲ್ಲಿ (ಪ್ರ.ವಾ., ನ. 24)  ಬರೆದಿದ್ದಾರೆ.  ಅವಕಾಶವಾದಿ ಮೌನ ಖಂಡನಾರ್ಹವೇ ಸರಿ.
 
ಆದರೆ ಮಧ್ಯಮ ಮಾರ್ಗ ಖಂಡನಾರ್ಹವೇ? ಮಧ್ಯಮ ಮಾರ್ಗವು ಮೌನದ ಮಾರ್ಗ.  ಎಲ್ಲ ರೀತಿಯ ಮೌನವೂ ಖಂಡನಾರ್ಹವೇ? ಮಧ್ಯಮ ಮಾರ್ಗವನ್ನು ಮೊದಲು ಬೋಧಿಸಿದ ಬುದ್ಧ ಮೌನಿ. ಬುದ್ಧನ ಮೌನ ಅವಕಾಶವಾದಿ ಮೌನವೇ? ನಾನು ಬುದ್ಧನ ಉದಾಹರಣೆ ತೆಗೆದುಕೊಂಡದ್ದಕ್ಕೆ ಕಾರಣವಿದೆ. ಬುದ್ಧನ ಬದುಕಿನಲ್ಲಿಯೂ, ಅವಕಾಶವಾದಿ ಆತ ಎಂದು ಜರೆಯಬಹುದಾದ ಒಂದು ಘಟನೆ ನಡೆದಿತ್ತು.  
 
ಬುದ್ಧನ ಸ್ನೇಹಿತನೂ ಪಾಟಲೀಪುತ್ರದ ರಾಜನೂ ಆಗಿದ್ದ ಬಿಂಬಸಾರನನ್ನು ಅವನ ಮಗ ಅಜಾತಶತ್ರು ಬಂಧಿಸುತ್ತಾನೆ. ಸಿಂಹಾಸನದ ಆಸೆ ಹಾಗೂ ಬುದ್ಧನ ದಾಯಾದಿಯ ದುರ್ಬೋಧನೆಗೆ ಬಲಿಬಿದ್ದು ಹಾಗೆ ಮಾಡುತ್ತಾನೆ. ಬಿಂಬಸಾರನ ಹೆಂಡತಿ ಹಾಗೂ ಅಜಾತಶತ್ರುವಿನ ತಾಯಿ ಬುದ್ಧನ ಬಳಿಗೆ ಬಂದು ಸಹಾಯ ಯಾಚಿಸುತ್ತಾಳೆ.  ಬುದ್ಧ ಸಹಾಯ ಮಾಡಬಹುದಿತ್ತು, ಮಾಡುವುದಿಲ್ಲ. ಆಕೆಯ ತಮ್ಮನಾದ ಮತ್ತೊಬ್ಬ ರಾಜನತ್ತ ಆಕೆಯನ್ನು ಕಳುಹಿಸುತ್ತಾನೆ. ಮಗನು ತಂದೆಯನ್ನು ಹಿಂಸಿಸಿ ಕೊಲ್ಲುತ್ತಾನೆ.
 
ಕೊಂದ ನಂತರ ಅಜಾತಶತ್ರುವು ತೀವ್ರತರವಾದ ಮಾನಸಿಕ ಕ್ಷೋಭೆಗೆ ಒಳಗಾಗುತ್ತಾನೆ.  ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುತ್ತಾನೆ.  ಸಾಯುವಂತಾಗುತ್ತಾನೆ. ಕಡೆಗೆ ಬುದ್ಧನಲ್ಲಿಯೇ ಬಂದು ಶರಣಾಗುತ್ತಾನೆ. ಬುದ್ಧ ಅಜಾತಶತ್ರುವನ್ನು ದಂಡಿಸಬಹುದಿತ್ತು, ದಂಡಿಸುವುದಿಲ್ಲ. ಮೌನದಿಂದ ಸ್ವೀಕರಿಸುತ್ತಾನೆ. ಮುಂದೆ ಅಜಾತಶತ್ರು ಬೌದ್ಧಧರ್ಮದ ಪ್ರಸಾರಕ್ಕೆ ಬಹುದೊಡ್ಡ ಬೆಂಬಲ ಒದಗಿಸುತ್ತಾನೆ. ಇದೆಲ್ಲವೂ ನಿಜವೇ.  ಆದರೂ ಬುದ್ಧನ ಮೌನ ಅವಕಾಶವಾದಿಯಲ್ಲ. ಹೇಗೆಂದು ವಿವರಿಸುತ್ತೇನೆ.
 
ಬಿಂಬಸಾರನ ಸ್ನೇಹವನ್ನೂ ಬುದ್ಧ ಯಾಚಿಸಿರಲಿಲ್ಲ.  ಬುದ್ಧ ಬುದ್ಧನಾಗುವ ಮೊದಲೇ ಬುದ್ಧನಲ್ಲಿಗೆ ಬರುವ ಬಿಂಬಸಾರನು, ಬುದ್ಧನಿಂದ ಆಕರ್ಷಿತನಾಗಿ, ಸ್ವಂತ ಇಚ್ಛೆಯಿಂದ ಸ್ನೇಹ ಮಾಡಿಕೊಳ್ಳುತ್ತಾನೆ. ‘ನನ್ನ ರಾಜ್ಯದ ಅರ್ಧಭಾಗ ಕೊಡುತ್ತೇನೆ ಬಾ’ ಎಂದು ಕರೆಯುತ್ತಾನೆ.  ಬುದ್ಧ ರಾಜ್ಯ ತಿರಸ್ಕರಿಸುತ್ತಾನೆ.  ಆದರೆ ಸ್ನೇಹ ಸ್ವೀಕರಿಸುತ್ತಾನೆ.  ಬುದ್ಧ ಯಾರ ಸ್ನೇಹವನ್ನೂ ತಿರಸ್ಕರಿಸುವುದಿಲ್ಲ.  ಅಜಾತಶತ್ರು ಆಸೆಗೆ ಬಲಿ ಬೀಳುತ್ತಾನೆ, ತಂದೆಯ ಸ್ನೇಹವನ್ನು ತಿರಸ್ಕರಿಸುತ್ತಾನೆ, ಹಿಂಸೆ ಮಾಡುತ್ತಾನೆ. ಕಡೆಗೊಮ್ಮೆ ಹಿಂಸೆಯ ಫಲ ತಾನೇ ಉಣ್ಣುತ್ತಾನೆ.  ಕೆಟ್ಟ ಮೇಲೆ ಬುದ್ಧಿ ಬಂದು ಬುದ್ಧನಲ್ಲಿಗೆ ಓಡಿಬರುತ್ತಾನೆ.  ಬುದ್ಧ ಯಾರ ಸ್ನೇಹವನ್ನೂ ನಿರಾಕರಿಸುವುದಿಲ್ಲ.
 
ಬುದ್ಧನನ್ನು ವಾದಗಳಿಂದ ಅರಿಯಲಾಗದು. ಒಂದೊಮ್ಮೆ ವಾದವೊಂದನ್ನು ಬುದ್ಧನಿಗೆ ಅಂಟಿಸಬೇಕೆಂದಾದರೆ ಅದು ನಿರವಕಾಶವಾದ. ಬುದ್ಧನಷ್ಟು ನಿರವಕಾಶವಾದಿಯಾಗಿ ಬದುಕುತ್ತಿಲ್ಲ ನಾವು. ಅನಗತ್ಯವಾಗಿ ರಾಜರ ಬಳಿಗೆ, ಅಧಿಕಾರಿಗಳ ಬಳಿಗೆ, ಅಧಿಕಾರದ ಬಳಿಗೆ ಓಡುತ್ತೇವೆ ನಾವು. ಹಾಗೆ ಮಾಡಿ, ನುಡಿಗೆ ಸೂತಕ ಬಡಿಸಿಕೊಳ್ಳುತ್ತೇವೆ.  ಗಿರಡ್ಡಿ ಗೋವಿಂದರಾಜರು ಸತ್ಯ ನುಡಿದಿದ್ದಾರೆ.  ಅವರು ನಿರವಕಾಶವಾದಿಯೇ ಅಲ್ಲವೇ, ಅವರಿಗೆ ಸತ್ಯ ನುಡಿಯುವ ಅರ್ಹತೆ ಇದೆಯೇ  ಇಲ್ಲವೇ ಎಂದು ಪರೀಕ್ಷಿಸಬೇಕಿಲ್ಲ ನಾವು.  ಹಾಗೆ ಪರೀಕ್ಷಿಸುವ ಸಾಮರ್ಥ್ಯವೂ ನಮ್ಮಲ್ಲಿ ಹೆಚ್ಚಿನವರಿಗಿಲ್ಲ. ಇನ್ನು ಮುಂದೆ ನಿರವಕಾಶವಾದಿಯಾಗಿ ನಡೆದುಕೊಳ್ಳುವ ನಿರ್ಧಾರ ತಳೆದರೆ ಸಾಕು ಅವರು ಹಾಗೂ ಅವರೊಟ್ಟಿಗೆ ನಾವು. ಸತ್ಯ ತಂತಾನೆ ಅನಾವರಣಗೊಳ್ಳುತ್ತದೆ.
 
ಸುಶಿ ಅವರು ಎಡ ಮತ್ತು ಬಲಪಂಥಗಳ ಚರ್ಚೆ ಮಾಡಿದ್ದಾರೆ.  ಬಲಪಂಥದ ಬಗೆಗಿನ ಅವರ ಆತಂಕ ಸರಿಯಾದದ್ದೇ ಇದೆ.  ಆದರೆ ಅವರು ಆತಂಕಪಡಬೇಕಾದ ಅಗತ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ.  ತನ್ನ ಅಸಹಿಷ್ಣುತೆಯ ಫಲವನ್ನು ಈಗಾಗಲೇ ಬಲಪಂಥ ಉಣ್ಣತೊಡಗಿದೆ. ಉದಾಹರಣೆಗೆ ಮುಸಲ್ಮಾನರನ್ನು ಭಾರತೀಯರಿಂದ ಬೇರ್ಪಡಿಸಿದರೆ, ಮೊಸರು ಕಡೆದಾಗ ಬೆಣ್ಣೆ ಬೇರ್ಪಡುವಂತೆ ಹಿಂದೂಗಳು ಇಡಿಯಾಗಿ ಮೇಲೆದ್ದು ಬರುತ್ತಾರೆ ಎಂಬ ನಂಬಿಕೆಯಿತ್ತು ಬಲಪಂಥೀಯರಿಗೆ.  ಹಾಗೆಂದೇ ಅವರು ಭಾರತೀಯ ಸಭ್ಯತೆಯನ್ನು ಸಾಕಷ್ಟು ಕಲಕಿದರು.  ಆದರೆ ಬೆಣ್ಣೆ ಬರಲಿಲ್ಲ, ಮೊಸರು ಒಡೆಯಿತು. ಹಿಂದೂಗಳು ಛಿದ್ರರಾಗತೊಡಗಿದ್ದಾರೆ, ಬಲಪಂಥೀಯರಿಂದಲೇ ಛಿದ್ರರಾಗತೊಡಗಿದ್ದಾರೆ.  
 
ಆದರೆ ನಾವು ಸಹ ಕಡೆಗೋಲು ಹಿಡಿದು ಭಾರತೀಯ ಸಭ್ಯತೆಯನ್ನು ಕಲಕುವ ಅಗತ್ಯವಿಲ್ಲ. ಬುದ್ಧನೂ ಎಡಪಂಥೀಯನೇ. ಆದರೆ ಅವನು ಪ್ರಪಂಚ ಬದಲಿಸುವ ಪ್ರಯತ್ನ ಮಾಡಲಿಲ್ಲ.  ಮನುಷ್ಯರನ್ನು ಬದಲಿಸುವ ಪ್ರಯತ್ನ ಮಾಡಿದ. ಗೆದ್ದ ಕೂಡ. ನಾವು, ಎಡಪಂಥೀಯರು ಸಹ, ಅದೇ ಮಾಡಬೇಕಿದೆ, ಹೃದಯ ಪರಿವರ್ತನೆಯ ಪ್ರಯತ್ನ. 
 
ಎಡಪಂಥಕ್ಕೆ ಮಧ್ಯಮಮಾರ್ಗದ ಅಗತ್ಯವಿದೆ, ಮೌನದ ಅಗತ್ಯವಿದೆ, ಆತ್ಮಾವಲೋಕನದ ಅಗತ್ಯವಿದೆ.  ಅದು ಸದ್ದಿಲ್ಲದೆ ನಡೆದಿದೆ ಕೂಡ. ಸುಶಿ ಅವರಂಥ ಯುವಕ ಯುವತಿಯರು ಮೌನ ಕ್ರಾಂತಿಯಲ್ಲಿ ಭಾಗವಹಿಸಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT