ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಬ್ಬು ಉಪ ತಾರಾಪುಂಜ ಪತ್ತೆ

Last Updated 24 ನವೆಂಬರ್ 2016, 19:51 IST
ಅಕ್ಷರ ಗಾತ್ರ
ಟೋಕಿಯೊ: ನಮ್ಮ ತಾರಾಪುಂಜ (ಗೆಲಾಕ್ಸಿ) ಆಕಾಶ ಗಂಗೆಯ ಪ್ರಭಾವಲಯದಲ್ಲಿರುವ  ಮಬ್ಬಾದ ಉಪ ಗೆಲಾಕ್ಸಿಯೊಂದನ್ನು (ಸ್ಯಾಟಲೈಟ್‌ ಗೆಲಾಕ್ಸಿ) ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
 
ಆಕಾಶ ಗಂಗೆಯಲ್ಲಿ ಇದುವರೆಗೆ ಪತ್ತೆಯಾಗಿರುವ ಉಪ ಗೆಲಾಕ್ಸಿಗಳಲ್ಲೇ ಇದು ಅತ್ಯಂತ ಮಬ್ಬಾದ (ಟತ್ಯಂತ ಕಡಿಮೆ ಬೆಳಕಿನ) ಕುಬ್ಜ ಗೆಲಾಕ್ಸಿ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ.
 
ವರ್ಗೊ ತಾರಾ ಸಮೂಹವಿರುವ ದಿಕ್ಕಿನಲ್ಲೇ ಈ ಉಪ ಗೆಲಾಕ್ಸಿ ಪತ್ತೆಯಾಗಿದೆ. ಇದಕ್ಕೆ ‘ವರ್ಗೊ–1’ ಎಂದು ಹೆಸರಿಡಲಾಗಿದೆ. ಜಪಾನಿನ ಟೊಹೊಕು ವಿಶ್ವವಿದ್ಯಾಲಯದ ಅಧ್ಯಯನಕಾರರು ಈ ಉಪ ಗೆಲಾಕ್ಸಿಯನ್ನು ಪತ್ತೆ ಮಾಡಿದ್ದಾರೆ.  ಆಕಾಶ ಗಂಗೆಯ ಪ್ರಭಾವಲಯದಲ್ಲಿ ಇನ್ನೂ ಪತ್ತೆಯಾಗದ ಹಲವು ಕುಬ್ಜ ಉಪ ತಾರಾಪುಂಜಗಳು ಇರಬಹುದು ಎಂದು  ಅವರು ಶಂಕಿಸಿದ್ದಾರೆ.
 
ಇತ್ತೀಚೆಗೆ ಪತ್ತೆಹಚ್ಚಲಾಗಿರುವ ಬಹುತೇಕ ಕುಬ್ಜ ಗೆಲಾಕ್ಸಿಗಳು ಹೆಚ್ಚು ಪ್ರಕಾಶಮಾನವಾಗಿಲ್ಲ. ಇವು ಎಷ್ಟು ಮಬ್ಬಾಗಿವೆ ಎಂದರೆ, ಅವುಗಳ ಬೆಳಕಿನ ತರಂಗಪಟ್ಟಿಯ (ಆಪ್ಟಿಕಲ್‌ ವೇವ್‌ಬ್ಯಾಂಡ್‌) ತೀವ್ರತೆ ಮೈನಸ್‌ 8ಕ್ಕಿಂತಲೂ ಕಡಿಮೆ ಇದೆ.
 
ಹಿಂದೆ ಇಂತಹ ನಕ್ಷತ್ರ ಪುಂಜಗಳನ್ನು  ಹುಡುಕುವಾಗ 2.5 ಮೀಟರ್‌ಗಳಿಂದ ನಾಲ್ಕು ಮೀಟರ್‌ಗಳವರೆಗೆ ವ್ಯಾಸ ಹೊಂದಿರುವ ದೂರದರ್ಶಕಗಳನ್ನು ಬಳಸಲಾಗುತ್ತಿತ್ತು. ಹಾಗಾಗಿ ಸೂರ್ಯನಿಗೆ ಸಮೀಪದಲ್ಲಿದ್ದ ಮತ್ತು ಬೆಳಕಿನ ತೀವ್ರತೆ ಹೆಚ್ಚಿದ್ದ  ಉಪ ಗೆಲಾಕ್ಸಿಗಳು ಮಾತ್ರ ಪತ್ತೆಯಾಗುತ್ತಿದ್ದವು.
 
ಆದರೆ, ಜಪಾನಿನ ವಿಜ್ಞಾನಿಗಳು 8.2 ಮೀಟರ್‌ ವ್ಯಾಸ ಹೊಂದಿರುವ ಸುಬರು ದೂರದರ್ಶಕದ ಹೈಪರ್‌ ಸುಪ್ರೈ ಕ್ಯಾಮ್‌ (ಎಚ್‌ಎಸ್‌ಸಿ) ಬಳಸಿದ್ದರಿಂದ ಆಗಸದಲ್ಲಿ ಹೆಚ್ಚು ವಿಸ್ತಾರವಾದ ವ್ಯಾಪ್ತಿಯಲ್ಲಿ ಕುಬ್ಜ ಗೆಲಾಕ್ಸಿಗಳನ್ನು ಹುಡುಕಲು ಸಾಧ್ಯವಾಗಿದೆ.
 
**
ವರ್ಗೊ–1: ಪತ್ತೆಯಾದ ಉಪ ಗೆಲಾಕ್ಸಿ ಹೆಸರು 
 
*
2.8 ಲಕ್ಷ ಜ್ಯೋತಿರ್ವರ್ಷ: ಉಪ ಗೆಲಾಕ್ಸಿಯು ಸೂರ್ಯನಿಂದ ಇರುವ ದೂರ
 
*
‘ಸೇಗ್‌–1’: ಇದುವರೆಗೆ ಕಂಡು ಬಂದಿದ್ದ ಅತಿ ಮಬ್ಬಾದ ಕುಬ್ಜ ಉಪ ಗೆಲಾಕ್ಸಿ
 
*
ಜಪಾನಿನ ಟೊಹೊಕು ವಿ.ವಿಯ ಡೈಸುಕೆ ಹೊಮ್ಮ ಎಂಬ ಪದವಿ ವಿದ್ಯಾರ್ಥಿ  ಮಸಾಶಿ ಚಿಬಾ  ಮಾರ್ಗದರ್ಶನದಲ್ಲಿ  ‘ವರ್ಗೊ–1’ ಪತ್ತೆ ಮಾಡಿದ್ದಾರೆ. 
 
*
ಲಾಭ ಏನು?
ಈ ಸಂಶೋಧನೆಯು ತಾರಾಪುಂಜಗಳ ಸೃಷ್ಟಿ ಮತ್ತು ಅವುಗಳ ಉಗಮಕ್ಕೆ ಕಪ್ಪು ದ್ರವ್ಯಗಳು (ಡಾರ್ಕ್‌ ಮ್ಯಾಟರ್‌) ಹೇಗೆ ನೆರವಾಗುತ್ತವೆ ಎಂಬುದರ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡಲಿವೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
50ಕ್ಕೂ ಹೆಚ್ಚು ಗೆಲಾಕ್ಸಿಗಳು
ಪ್ರಸ್ತುತ, ಆಕಾಶ ಗಂಗೆಯ ವ್ಯಾಪ್ತಿಯಲ್ಲಿ 50 ಉಪ ಗೆಲಾಕ್ಸಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 40 ಗೆಲಾಕ್ಸಿ ಮಬ್ಬಾಗಿವೆ ಮತ್ತು ಚದುರಿಕೊಂಡಿವೆ. ಇವುಗಳೆಲ್ಲ ‘ಕುಬ್ಜ ಅಂಡಗೋಳ (ಪೂರ್ಣವಾಗಿ ಗೋಳಾಕಾರದಲ್ಲಿ ಇಲ್ಲದಿರುವ ಸ್ಥಿತಿ) ಗೆಲಾಕ್ಸಿ’ಗಳಾಗಿವೆ.
 
ಉಪ ಗೆಲಾಕ್ಸಿ ಎಂದರೆ...
ಇವು ಕೂಡ ತಾರಾಪುಂಜಗಳೇ. ಆದರೆ, ತಮಗಿಂತ ದೊಡ್ಡ ತಾರಾಪುಂಜಗಳ ಸುತ್ತ ಸುತ್ತುತ್ತವೆ. ಈ ಸುತ್ತುವಿಕೆಗೆ ದೊಡ್ಡ ತಾರಾಪುಂಜಗಳ ಗುರುತ್ವಾಕರ್ಷಣೆ ಶಕ್ತಿ ಕಾರಣ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT