ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಸಿಂಧು ಲಗ್ಗೆ

ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಸೈನಾಗೆ ಮತ್ತೆ ಕಾಡಿದ ನಿರಾಸೆ
Last Updated 25 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಕೌಲೂನ್‌, ಹಾಂಕಾಂಗ್‌: ಗೆಲುವಿನ ಓಟ ಮುಂದುವರಿಸಿರುವ ಪಿ.ವಿ ಸಿಂಧು ಹಾಂಕಾಂಗ್‌ ಓಪನ್‌ ಸೂಪರ್ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್‌ಗೆ ಲಗ್ಗೆಯಿಡುವ ಮೂಲಕ ಮತ್ತೊಂದು ಪ್ರಶಸ್ತಿ ಗೆಲ್ಲುವ ಸೂಚನೆ ನೀಡಿದ್ದಾರೆ.
 
ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ ಚೀನಾ ಓಪನ್‌ನಲ್ಲಿ ಚಿನ್ನ ಗೆದ್ದು ಅಮೋಘ ಫಾರ್ಮ್‌ ಉಳಿಸಿಕೊಂಡಿ ರುವ ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ 21–17, 21–23, 21–18ರಲ್ಲಿ ಸಿಂಗಪುರದ ಕ್ಸಿಯಾವ್‌ ಲಿಯಾಂಗ್ ಎದುರು ಗೆಲುವು ಖಚಿತಪಡಿಸಿಕೊಂಡರು. 
 
1 ಗಂಟೆ 19 ನಿಮಿಷದ ಪೈಪೋಟಿ ಯಲ್ಲಿ ಸಿಂಧು ಪ್ರಾಬಲ್ಯ ಮೆರೆದರು.
 
‘ಮೊದಲ ಗೇಮ್‌ನಲ್ಲಿ ಸುಲಭ ಗೆಲುವು ದಾಖಲಿಸಿದ್ದರೂ ಎರಡನೇ ಗೇಮ್‌ನಲ್ಲಿ ಲಿಯಾಂಗ್ ಅತ್ಯುತ್ತಮ ಪೈಪೋಟಿ ನೀಡಿದರು. 
 
ಆದರೆ ಮೂರ ನೇ ಗೇಮ್‌ನಲ್ಲಿ ನಾನು ಒತ್ತಡದಲ್ಲೇ ಆಡಿದೆ. ಇದರಿಂದ 7–15ರಲ್ಲಿ ಹಿನ್ನಡೆ ಕಂಡೆ. ರಿಟರ್ನ್ಸ್‌ಗಳ ವೇಳೆ ಎಡವಿದೆ. ಈ ವೇಳೆ ರಕ್ಷಣಾತ್ಮಕ ಆಟದ ಮೊರೆಹೋದೆ. ಆದರೆ ಅಂತಿಮವಾಗಿ ಗೆಲುವು ನನ್ನ ಕಡೆ ಒಲಿಯಿತು’ ಎಂದು ಸಿಂಧು ಪಂದ್ಯದ ಬಳಿಕ ಹೇಳಿದ್ದಾರೆ.
 
ಸೈನಾಗೆ ಆಘಾತ: ಗಾಯದ ಸಮಸ್ಯೆಯಿಂದ ಹೊರಬಂದ ಬಳಿಕ ನಡೆದ ಎರಡನೇ ಟೂರ್ನಿಯಲ್ಲೂ ಸತತವಾಗಿ ಸೈನಾ ನೆಹ್ವಾಲ್‌ ಹಿನ್ನಡೆ ಅನುಭವಿಸಿದ್ದಾರೆ. ಚೀನಾ ಓಪನ್‌ ನಲ್ಲಿ ಅವರು ಎರಡನೇ ಸುತ್ತಿನಲ್ಲೇ ಸೋಲು ಕಂಡಿದ್ದರು.
 
ಐದನೇ ಶ್ರೇಯಾಂಕದ ಸೈನಾ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 8–21, 21–18, 19–21ರಲ್ಲಿ ಶ್ರೇಯಾಂಕ ರಹಿತ ಸ್ಥಳೀಯ ಆಟ ಗಾರ್ತಿ ಚೆವುಂಗ್‌ ನಗಾನ್‌ ಯಿ ಎದುರು ಆಘಾತ ಅನುಭವಿಸಿ ದರು. 
 
ವಿಶ್ವ ಚಾಂಪಿಯನ್‌ ಷಿಪ್‌ನಲ್ಲಿ ಚೆವುಂಗ್ ಎದುರು ಜಯದಾಖಲಿಸಿದ್ದ ಸೈನಾ ಇಲ್ಲಿ ಒಂದು ಗಂಟೆ 11 ನಿಮಿಷದ ಹಣಾಹಣಿಯಲ್ಲಿ ಸೋಲು ಒಪ್ಪಿಕೊಂಡರು. 
 
‘ಇಂದಿನ ಪಂದ್ಯ ಕಠಿಣ ಸವಾಲುಗಳಿಂದ ಕೂಡಿತ್ತು. ಪಾಯಿಂಟ್ಸ್ ಪಡೆಯುವ ಹಂತ ದಲ್ಲಿ ನಗಾನ್‌ ಅತ್ಯಂತ ಚುರುಕುತನ ತೋರುತ್ತಿದ್ದರು. ನಾನು ಸಂಪೂರ್ಣವಾಗಿ ಫಿಟ್‌ ಆಗಿಲ್ಲ. ಆದ್ದರಿಂದ ಹೆಚ್ಚು ನಿರೀಕ್ಷೆ ಇಟ್ಟು ಕೊಳ್ಳಲೂ ಆಗುತ್ತಿಲ್ಲ. ಆದಷ್ಟು ಬೇಗ ಗೆಲುವಿನ ಹಾದಿಗೆ ಮರಳುತ್ತೇನೆ’ ಎಂದು ಸೈನಾ ಅಭಿಪ್ರಾಯಪಟ್ಟಿದ್ದಾರೆ.
 
ಸೆಮಿಗೆ ಸಮೀರ್‌: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ  21–17, 23–21ರಲ್ಲಿ ಮಲೇಷ್ಯಾದ ಚೆಂಗ್‌ ವಿ ಫೆಂಗ್ ಎದುರು ಗೆದ್ದು ಸೆಮಿಗೆ ಲಗ್ಗೆಯಿಟ್ಟರು. ಆದರೆ ಕ್ವಾರ್ಟರ್‌ಫೈನಲ್‌ ಆಡಿದ ಅಜಯ್‌ ಜಯರಾಮ್‌ 15–21, 14–21ರಲ್ಲಿ ಹಾಂಕಾಂಗ್‌ನ ಲಾಂಗ್‌ ಆ್ಯಂಗಸ್ ಎದುರು 32 ನಿಮಿಷಗಳಲ್ಲಿ ಸೋಲು ಕಂಡರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT