ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕತೆ: ಪಂಥಗಳನ್ನು ಮೀರಿದ್ದು

Last Updated 28 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬಹುತ್ವವನ್ನು ಪುರಸ್ಕರಿಸಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಎರಡು ಧ್ರುವಗಳಂತಿರುವ ಎಡ–ಬಲ ಪಂಥಗಳ ವಿಜೃಂಭಣೆಯಿಂದ ಸದ್ಯ ಬಂದೊದಗಿರುವ ಪರಿಸ್ಥಿತಿಯಲ್ಲಿ ಇವೆರಡರ ಅತಿಗಳನ್ನು ನೀಗಿಕೊಂಡ  ಮಧ್ಯಮ ಮಾರ್ಗದವರು ಕ್ರಿಯಾಶಿಲರಾಗಬೇಕಾದ ಬಗ್ಗೆ ಸರಿಯಾಗಿಯೇ ಹೇಳಿರುವ ಡಾ. ಗಿರಡ್ಡಿ ಗೋವಿಂದರಾಜ ಮಾತಿಗೆ ಪ್ರತಿಕ್ರಿಯೆಯಾಗಿ ಡಾ. ಸುಶಿ ಕಾಡನಕುಪ್ಪೆ ‘ಯಾವುದೇ ವಿಷಯವನ್ನು ವಿರೋಧಿಸಲು ಸಾಧ್ಯವಾಗುವುದು ಆ ವಿಷಯದ ಬಗ್ಗೆ ಸ್ಪಷ್ಟ ಅರಿವು ಮತ್ತು ನಿಲುವು ಇದ್ದಾಗ...’ ಎಂದು ಹೇಳಿ ‘ವೈಚಾರಿಕ ಚಿಂತನೆಗೆ ಅವಕಾಶವಿರುವುದು ಎಡಪಂಥೀಯ ಮಾರ್ಗದಲ್ಲಿ’ ಎಂದು ವಾದಿಸಿದ್ದಾರೆ.

ವೈಚಾರಿಕ ಚಿಂತನೆಯೆಂಬುದು ಎಡಪಂಥೀಯರ ಸ್ವತ್ತು ಮಾತ್ರ ಎನ್ನುವ ಅರ್ಥ ಅವರ ಮಾತಿನಲ್ಲಿ ಪರೋಕ್ಷವಾಗಿ ಹೊರಡುತ್ತದೆ. ಇದೇ ಅವೈಚಾರಿಕ. ರಾಷ್ಟ್ರ ಹಿತ ಅಥವಾ ಜನರ ಹಿತ ಎಂಬ ಯೋಚನೆಯಷ್ಟೇ ಮುಖ್ಯವಾದಾಗ ಎಡ ಅಥವಾ ಬಲ ಎಂಬ ಸಿದ್ಧಾಂತದ ಗೊಡವೆ ಬೇಕಾಗುವುದಿಲ್ಲ.

ಬರೀ ಸಿದ್ಧಾಂತವೊಂದೇ ಮುಖ್ಯವಾಗಿ ಜನರ ಹಿತ ಅಥವಾ ನಿಜವಾದ ಸತ್ಯ ಅಮುಖ್ಯವಾದಾಗ ಏನೆಲ್ಲ ಅನರ್ಥಗಳಾಗಬಹುದು ಎಂಬುದಕ್ಕೆ ಎಡಪಂಥೀಯ ವಿಚಾರಗಳನ್ನೇ ಹಾಸಿಹೊದ್ದ ರಾಜಕೀಯ ಪಕ್ಷಗಳಿಂದ ರಷ್ಯಾ, ಚೀನಾಗೆ  ಅಥವಾ ನಮ್ಮದೇ ದೇಶದ ಕೇರಳ ಮತ್ತು ಪಶ್ಚಿಮ ಬಂಗಾಳಕ್ಕೆ ಬಂದೊದಗಿದ ಸ್ಥಿತಿಯನ್ನು  ನೋಡಿದರೆ ತಿಳಿಯುತ್ತದೆ.

ಎಡ, ಬಲ ಪಂಥೀಯರಿಗೆ ತಮ್ಮ ಸಿದ್ಧಾಂತವೇ ಮುಖ್ಯವಾಗುತ್ತದೆ. ಹಾಗೆ ಸಿದ್ಧಾಂತವಷ್ಟೇ ಮುಖ್ಯವಾದಾಗ ತಮ್ಮ ವಿರೋಧಿಗಳಾದವರು ಅಧಿಕಾರದಲ್ಲಿದ್ದಾಗ ಏನೆಲ್ಲಾ ಒಳ್ಳೆಯದನ್ನು ಮಾಡಿದರೂ ಅದನ್ನು ಕಟು ಟೀಕೆಗೆ ಗುರಿಮಾಡುವುದು ಬಿಟ್ಟರೆ ಮೆಚ್ಚಿದ ಸಂದರ್ಭ ಎಡ ಅಥವಾ ಬಲಕ್ಕೆ ಸೇರಿದ ಯಾವುದೇ ತೀವ್ರವಾದಿ ಬುದ್ಧಿಜೀವಿಗಳಲ್ಲಾಗಲಿ ಅಥವಾ ಅವರು ಬೆಂಬಲಿಸುವ ಆಯಾ ಪಂಥದ ರಾಜಕೀಯ ಪಕ್ಷ ಅಥವಾ ಸರ್ಕಾರಗಳಲ್ಲಾಗಲಿ ಇರುವುದಿಲ್ಲ ಎಂಬುದಕ್ಕೆ ನಮ್ಮ ದೇಶದ ರಾಜಕೀಯ ಇತಿಹಾಸದತ್ತ ಸುಮ್ಮನೆ ಕಣ್ಣು ಹಾಯಿಸಿದರೂ ಸಾಕು; ಸೂರ್ಯಸ್ಪಷ್ಟವಾಗುತ್ತದೆ.

ಎಡಪಂಥವನ್ನು ಬೆಂಬಲಿಸುವ ಸರ್ಕಾರ ಅಸ್ತಿತ್ವದಲ್ಲಿದ್ದಾಗ ತಮ್ಮ ಮೂಗಿನ ನೇರಕ್ಕೆ ಈ ದೇಶದ ಇತಿಹಾಸವನ್ನು ಆ ಪಂಥದ ವಿಚಾರಗಳನ್ನು ಪುರಸ್ಕರಿಸುವವರಿಂದ ಬರೆಸುವ ಉಮೇದು ತೋರಿದರೆ, ಬಲಪಂಥೀಯರು ತಮಗೆ ಅಧಿಕಾರ ದೊರೆತಾಗ ಮಾಡಿದ್ದು, ಮಾಡುವುದು  ಅದನ್ನೇ. ಅವಕಾಶವಾದಿಗಳು ಮಧ್ಯಮ ಮಾರ್ಗಿಗಳೇ ಆಗಬೇಕಿಲ್ಲ. ಎಡಪಂಥೀಯರು ಅವಕಾಶವಾದಿಗಳಾಗಿದ್ದುದಕ್ಕೆ, ಆಗಿರುವುದಕ್ಕೆ ನಮ್ಮ ಕಣ್ಣೆದುರೇ ಬೇಕಾದಷ್ಟು ಉದಾಹರಣೆಗಳು ನಿಚ್ಚಳವಾಗಿ ಗೋಚರಿಸುತ್ತವೆ. ಹಾಗೆಯೇ ಬಲಪಂಥೀಯರಲ್ಲೂ ಅವಕಾಶವಾದಿತನ ಹೇರಳವಾಗಿಯೇ ಇದೆ. ಅವಕಾಶವಾದಿತನವೆಂಬುದು ಪಂಥಾತೀತ!

ನಮ್ಮ ದೇಶದಲ್ಲಂತೂ ಸ್ವಾತಂತ್ರ ಚಳವಳಿಯ ಕಾಲ. ತುರ್ತು ಪರಿಸ್ಥಿತಿಯ ಸಂದರ್ಭ, ಆನಂತರ ಯುಪಿಎ ಸರ್ಕಾರದ ಅವಧಿ ಹೀಗೆ ಯಾವ ಮುಖ್ಯ ಸಂದರ್ಭವನ್ನೇ ತೆಗೆದುಕೊಂಡರೂ ಎಡಪಕ್ಷಗಳು ದೇಶದ ಹಿತ ಕಡೆಗಣಿಸಿದ್ದು ಇಲ್ಲವೇ ಪ್ರಭುತ್ವವನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಂಡದ್ದು ಇತಿಹಾಸದ ಅಚ್ಚಳಿಯದ ಸತ್ಯ. ವ್ಯಕ್ತಿಯಲ್ಲಿ ನೈತಿಕತೆ ಎಂಬುದು ಇಲ್ಲದಿದ್ದಾಗ ಯಾರು ಬೇಕಾದರೂ ಅವಕಾಶವಾದಿಗಳಾಗಬಹುದು. ಆಗಿದ್ದಾರೆ.

ತತ್ವಜ್ಞಾನಿ ಬರ್ಟ್ರೆಂಡ್ ರಸೆಲ್ ಅವರನ್ನು ಒಮ್ಮೆ ‘ನೀವು ನಂಬಿದ ಸಿದ್ಧಾಂತಕ್ಕಾಗಿ ಜೀವ ಕೊಡಲು ಸಿದ್ಧರಿದ್ದೀರಾ’ ಎಂದು ಕೇಳಿದಾಗ, ಅವರು ಪ್ರಾಂಜಲವಾಗಿ ‘ಇಲ್ಲ, ನಾಳೆ ಬೇರೊಬ್ಬ ಬುದ್ಧಿವಂತ ಬಂದು ನನ್ನ ಸಿದ್ಧಾಂತ ತಪ್ಪು ಎಂದು ತೋರಿಸಿಕೊಡಬಹುದು. ಅದಕ್ಕಾಗಿ ನಾನೇಕೆ ಅಮೂಲ್ಯವಾದ ಜೀವ ಬಲಿಕೊಡಬೇಕು’ ಎಂದರಂತೆ.

ನಿಜವಾದ ವೈಚಾರಿಕತೆ ಎಂದರೆ ಅದು. ಅದು ಪಂಥೀಯ ತತ್ವ, ಸಿದ್ಧಾಂತಗಳನ್ನು ಮೀರಿದ್ದು. ಎಡ-ಬಲ ಎಂದು ಪಂಥೀಯವಾಗಿ ಗುರುತಿಸಿಕೊಂಡುಬಿಟ್ಟಾಗ ಕುರುಡು ಕುರುಡಾಗಿ ಆ ಪಂಥದ ವಿಚಾರ ಸಿದ್ಧಾಂತಗಳನ್ನು ಸಮರ್ಥಿಸುತ್ತ ಅನ್ಯ ಪಂಥದಲ್ಲಿ ಇರುವ ಬೆಟ್ಟದಷ್ಟು ಒಳಿತಿಗೂ ಕುರುಡಾಗುತ್ತ, ಅವರ ರಾಗಿ ಕಾಳಿನಷ್ಟು ತಪ್ಪಿಗೂ ಭೂತಗನ್ನಡಿ ಹಿಡಿಯುವ ಚಾಳಿಗೆ ಬಿದ್ದುಬಿಡುತ್ತೇವೆ.

ಹೀಗೆ ಪಂಥಗಳ ಕೆಸರಿನ ಉಸುಬಿನಲ್ಲಿ ಸಿಲುಕಿಕೊಂಡು ಕಣ್ಣುಪಟ್ಟಿ ಕಟ್ಟಿಕೊಂಡ ಕುದುರೆಗಳಂತಾದಾಗ ಅದನ್ನು ಸರಿಪಡಿಸುವುದು ಈ ಎರಡೂ ಪಂಥಕ್ಕೆ ಸೇರಿಲ್ಲದವರಿಂದ ಮಾತ್ರ ಸಾಧ್ಯ. ಅವರನ್ನು ಮಧ್ಯಮ ಮಾರ್ಗಿಗಳೆನ್ನಿ ಅಥವಾ ಮುಕ್ತ ಚಿಂತಕರೆನ್ನಿ. ನಿಜ; ಅವರು ಸಂಘಟಿತರಾಗಿಲ್ಲದೆ ಇರಬಹುದು. ಆದರೆ ಸಂಘಟಿತ ಪಂಥ, ಪಕ್ಷಗಳ ಬಂಡೆಗಳನ್ನು ಸದಾ ಬೆನ್ನಿಗೆ ಕಟ್ಟಿಕೊಂಡು  ಅವು ತೋಡುವ ಹೊಂಡಗಳಲ್ಲಿ ಮುಳುಗಲು ಇಷ್ಟವಿಲ್ಲದಿದ್ದಾಗಲೂ ಅನಿವಾರ್ಯವಾಗಿ ಬೀಳಬೇಕಾದವರ ದಯನೀಯ ಸ್ಥಿತಿಗಿಂತ ಇದು ಎಷ್ಟೋ ವಾಸಿ.

ಮಧ್ಯಮ ಮಾರ್ಗವೆಂಬುದು ಒಂದು ವಿಷಯ ಸಂಗತಿಗೆ ಸೀಮಿತವಾದದ್ದೇನಲ್ಲ. ಧರ್ಮ, ರಾಜಕೀಯ, ಸಾಮಾಜಿಕ, ವೈಚಾರಿಕ ಹೀಗೆ ಯಾವುದೇ ವಿಷಯದಲ್ಲಿ ಎರಡು ಅತಿಗಳು ಬೆಳೆದು ನಿಂತಾಗೆಲ್ಲ ಆ ಅತಿಗಳನ್ನು ನೀಗಿ ಸಮತಲಕ್ಕೆ ತರುವ ಪ್ರಕ್ರಿಯೆಯಾಗಿ ಮಧ್ಯಮ ಮಾರ್ಗ ಹುಟ್ಟಿಕೊಳ್ಳುತ್ತದೆ.
ಪಂಥವೊಂದರ ಸಿದ್ಧಾಂತಕ್ಕೆ ಕಟ್ಟುಬಿದ್ದಾಗ ಬಹುಸಂಖ್ಯಾತ ಬಲಪಂಥೀಯರದು ಮಾತ್ರ ಧಾರ್ಮಿಕ ಮೂಲಭೂತವಾದವಾಗಿ ಕಾಣುತ್ತದೆ. ಅದೇ ಅಲ್ಪಸಂಖ್ಯಾತರ ಧಾರ್ಮಿಕ ಮೂಲಭೂತವಾದ ಅವರ ಕಣ್ಣಿಗೆ ಬೀಳುವುದಿಲ್ಲ ಅಥವಾ ಬಿದ್ದರೂ ಅದನ್ನು ಕಡೆಗಣಿಸಲಾಗುತ್ತದೆ.

ಕೆಲವೇಳೆ ಅವರ ಪರವಾಗಿ ನಿಲ್ಲುವುದೇ ವೈಚಾರಿಕತೆಯಾಗಿಬಿಡುವಂಥ ಸಂದರ್ಭಗಳನ್ನೂ ನಾವು ಕಾಣುತ್ತಿದ್ದೇವೆ. ಸುಶಿಯವರು ಅನುಮಾನಿಸುವಂತೆ ಮಧ್ಯಮಮಾರ್ಗ ಒಂದು ಸಮಾಜದ ಸ್ಪಷ್ಟ ಅಭಿಪ್ರಾಯವನ್ನು ಕೊಲ್ಲುವುದಿಲ್ಲ; ಬದಲಿಗೆ ಬಹುಮುಖೀ ಸಮಾಜದಲ್ಲಿ  ಪಂಥೀಯ ಅತಿರೇಕಗಳ ಬಿರುಗಾಳಿಯಿಂದ ತೂರಿಹೋಗದೆ ತಮ್ಮ ಸ್ವಂತ ಆಲೋಚನೆಗಳನ್ನು ದೃಢವಾಗಿ ಹಾಗೂ ಸ್ವಚ್ಛವಾಗಿಟ್ಟುಕೊಂಡಿರುವ ಅನೇಕರ ನಾಲಗೆಗೆ  ದನಿಯಾಗುತ್ತದೆ.

ಇನ್ನು ಧರ್ಮ ಮತ್ತು ದೇವರನ್ನು ಮೀರಿದ ಅಧ್ಯಾತ್ಮಕ್ಕೆ ಎಡಪಂಥೀಯ ವಿಚಾರಸರಣಿಯಲ್ಲಿ ಸ್ಥಳವಿದೆಯೆಂದು ನನಗನಿಸುವುದಿಲ್ಲ. ಧರ್ಮ ದೇವರನ್ನು ಮೀರಿದ ನೈತಿಕತೆಯೊಂದಿದೆ. ಇಂದು ಧಾರ್ಮಿಕ ಮೂಲಭೂತವಾದದ ಅತಿರೇಕಗಳಿಂದಾಗಿ ನಮಗೆ ಆ ನೈತಿಕತೆಯ ಸುಭದ್ರ ತಳಹದಿಯಾದ ಧರ್ಮದ ಬಗ್ಗೆಯೂ ಅಸಹ್ಯ ಮೂಡುವಂತಾಗಿದೆ. ಅದಕ್ಕೆ ಕಾರಣ ಧರ್ಮವಲ್ಲ; ಧರ್ಮದ ಅಂತಃಸತ್ವವನ್ನು ಸರಿಯಾಗಿ ತಿಳಿಯದ ನಮ್ಮ ಅಜ್ಞಾನ.

ದೇವರೇ ಇಲ್ಲ; ಈ ಲೋಕವೇ ಎಲ್ಲ ಎಂಬ ಅತಿ ಒಂದುಕಡೆಯಾದರೆ ದೇವರೊಬ್ಬನೇ ಸತ್ಯ; ಅತ್ಯುಗ್ರ ಸಾಧನೆಗಳ ಅನುಷ್ಠಾನಗಳಿಂದಾದರೂ ಸರಿ ದೇವರನ್ನು ಸಾಧಿಸದಿದ್ದರೆ ಜೀವನವೇ ವ್ಯರ್ಥ ಎಂಬ ಅತಿಯೊಂದು ಕಡೆ ವಿಜೃಂಭಿಸುತ್ತಿದ್ದಾಗ, ದೇವರ ಬಗ್ಗೆ ಏನೂ ಹೇಳದೆ ಸರಿಯಾಗಿ ಬದುಕುವುದೇ ವಿಹಿತ ಎಂದು ಹೇಳಿ ಅದೇ ದೇವರತ್ತ ಕೊಂಡೊಯ್ಯಬಹುದು ಎಂದು ಅನುಕ್ತವಾಗಿಯೇ ಸೂಚಿಸಿದ ಬುದ್ಧನದು ಮಧ್ಯಮ ಮಾರ್ಗ ಎನಿಸಿಕೊಂಡಿತು.

ಜನಹಿತದ ಸಲುವಾಗಿಯೇ ಹುಟ್ಟಿಕೊಂಡ ತೀವ್ರ ‘ಬಲ’ವಾದ ಬಂಡವಾಳಶಾಹಿ ಮತ್ತು ತೀವ್ರ ‘ಎಡ’ವಾದ ಕಮ್ಯುನಿಸಂಗಳು ಅತಿಗೆ ಹೋದಾಗ ಅವುಗಳ ನಡುವಿನ ಸುವರ್ಣ ಮಾಧ್ಯಮವಾಗಿ ಸಮಾಜವಾದ ಕಾಣಿಸಿಕೊಂಡದ್ದು ಎಲ್ಲರಿಗೂ ತಿಳಿದಿರುವುದೇ. ಆದ್ದರಿಂದ ಎಡಪಂಥೀಯ ಮಾರ್ಗದ ಹೊರತಾಗಿಯೂ ವೈಚಾರಿಕ ಚಿಂತನೆ ಸಾಧ್ಯ ಎಂಬುದೇ ವಾಸ್ತವ ಸತ್ಯ. ಉಳಿದಿರುವುದು ಎಡವೊಂದೇ ಎಂಬ ಕಂಗಾಲುತನ ಅನಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT