ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಧನಕ್ಕೆ ಶೇ 85 ತೆರಿಗೆ

ದಾಖಲೆರಹಿತ ಹಣ ಸಕ್ರಮಕ್ಕೆ ಕಾಯ್ದೆ * ಲೋಕಸಭೆಯಲ್ಲಿ ಮಸೂದೆ ಮಂಡನೆ
Last Updated 28 ನವೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ : ಕಪ್ಪುಹಣ ಹೊಂದಿರುವವರು ಭಾರಿ ತೆರಿಗೆ ಮತ್ತು ದಂಡ ಪಾವತಿಸುವ ಮೂಲಕ ಅದನ್ನು ಸಕ್ರಮಗೊಳಿಸಲು ಸಾಧ್ಯವಾಗುವಂತೆ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆ ಯಲ್ಲಿ ಮಂಡಿಸಲಾಗಿದೆ.

ನೋಟು ರದ್ದತಿಯ ನಂತರ ಬ್ಯಾಂಕುಗಳಲ್ಲಿ ಜಮೆ ಮಾಡಲಾದ ದಾಖಲೆರಹಿತ ಅಥವಾ ಕಪ್ಪುಹಣಕ್ಕೆ ದಂಡ ಮತ್ತು ಮೇಲ್ತೆರಿಗೆ ಸೇರಿ ಶೇ 50ರಷ್ಟು ತೆರಿಗೆ ವಿಧಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ. ದಾಖಲೆರಹಿತ ಹಣವನ್ನು ಘೋಷಣೆ ಮಾಡದೆ ನಂತರ ಸಿಕ್ಕಿಬಿದ್ದರೆ ಅವರಿಂದ ಗರಿಷ್ಠ ಶೇ 85ರಷ್ಟು ತೆರಿಗೆ ವಸೂಲು ಮಾಡಲು ಯೋಜಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದತಿ ಘೋಷಣೆ ಮಾಡಿ ಸುಮಾರು ಮೂರು ವಾರಗಳ ನಂತರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.

ತಮ್ಮಲ್ಲಿರುವ ಕಪ್ಪುಹಣವನ್ನು ಬದಲಾಯಿಸುವುದಕ್ಕೆ ಜನರು ಕಾನೂನುಬಾಹಿರ ದಾರಿ ಹುಡುಕಿಕೊಳ್ಳುವುದನ್ನು ತಪ್ಪಿಸಲು  ಸರ್ಕಾರವೇ ಕಾನೂನುಬದ್ಧ ಅವಕಾಶ ನೀಡಬೇಕು ಎಂದು ಪರಿಣತರು ಸಲಹೆ ನೀಡಿದ್ದಾರೆ. ಇಂತಹ ಹಣಕ್ಕೆ ಭಾರಿ ತೆರಿಗೆ ಮತ್ತು ದಂಡ ವಿಧಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರ ಆಧಾರದಲ್ಲಿ ಈ ಮಸೂದೆ ಸಿದ್ಧಪಡಿಸಲಾಗಿದೆ ಎಂದು ಲೋಕಸಭೆಯಲ್ಲಿ  ಜೇಟ್ಲಿ ಹೇಳಿದ್ದಾರೆ.

ಇದರಿಂದಾಗಿ ಬಡವರ ಕಲ್ಯಾಣಕ್ಕಾಗಿ ಕಾರ್ಯಕ್ರಮ ಹಾಕಿಕೊಳ್ಳಲು ಸರ್ಕಾರಕ್ಕೆ ಹೆಚ್ಚುವರಿ ಹಣ ದೊರೆಯುತ್ತದೆ ಎಂದೂ ಅವರು ತಿಳಿಸಿದ್ದಾರೆ.

ರಾಜ್ಯಸಭೆ ಒಪ್ಪಿಗೆ ಬೇಕಿಲ್ಲ: ತಿದ್ದುಪಡಿ ಮಸೂದೆಯನ್ನು ಹಣಕಾಸು ಮಸೂದೆ ಯಾಗಿ ಮಂಡಿಸಲಾಗಿದೆ. ಹಣಕಾಸು ಮಸೂದೆಗೆ ರಾಜ್ಯಸಭೆಯ ಒಪ್ಪಿಗೆ ಅಗತ್ಯ ವಿಲ್ಲ. ಹಾಗಾಗಿ ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲ ಎಂಬುದು ಇಲ್ಲಿ ಸಮಸ್ಯೆ ಆಗುವುದಿಲ್ಲ.

ಸಮಿತಿ ರಚನೆ
ನೋಟು ರದ್ದತಿ ನಂತರದ ಸಮಸ್ಯೆಗಳ ಪರಿಹಾರಕ್ಕೆ ಸಲಹೆ ನೀಡಲು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಐವರು ಮುಖ್ಯಮಂತ್ರಿಗಳ ಸಮಿತಿ ರಚನೆಗೆ ಕೇಂದ್ರ ನಿರ್ಧರಿಸಿದೆ.

ಸಮಿತಿಯ ಸದಸ್ಯರಾಗುವಂತೆ ಬಿಹಾರ ಸಿ.ಎಂ ನಿತೀಶ್‌ ಕುಮಾರ್‌  ಅವರನ್ನು ಅರುಣ್‌ ಜೇಟ್ಲಿ ಕೋರಿದ್ದಾರೆ. ಒಡಿಶಾದ ನವೀನ್‌ ಪಟ್ನಾ ಯಕ್‌, ತೆಲಂಗಾಣದ ಕೆ. ಚಂದ್ರ ಶೇಖರರಾವ್‌, ಪಂಜಾಬ್‌ನ ಪ್ರಕಾಶ್‌ ಸಿಂಗ್‌ ಬಾದಲ್‌ ಸದಸ್ಯರು.

ಸಕ್ರಮ ಪ್ರಸ್ತಾವಗಳು
ಕಪ್ಪುಹಣ ಘೋಷಿಸಿದರೆ ತೆರಿಗೆ ಎಷ್ಟು

* 30% ತೆರಿಗೆ
* 10% ದಂಡ
* 50% ಒಟ್ಟು ಪಾವತಿಸಬೇಕಾದ ಪ್ರಮಾಣ
* ತೆರಿಗೆಯ ಮೇಲೆ 33% ಸೆಸ್‌ (ಒಟ್ಟು ಕಪ್ಪುಹಣದ ಶೇ 10ರಷ್ಟು)
* ಒಟ್ಟು ಕಪ್ಪುಹಣದ ಶೇ 25ರಷ್ಟನ್ನು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಲ್ಲಿ (ಪಿಎಂಜಿವೈ) ಠೇವಣಿ ಇರಿಸಬೇಕು
* ನಾಲ್ಕು ವರ್ಷ ಅವಧಿಯ ಈ ಠೇವಣಿಗೆ ಬಡ್ಡಿ ಇಲ್ಲ
* ಈ ನಿಧಿ ಯಾವುದಕ್ಕೆ ಬಳಕೆ: ನೀರಾವರಿ, ಮನೆ, ಶೌಚಾಲಯ ನಿರ್ಮಾಣ, ಪ್ರಾಥಮಿಕ ಆರೋಗ್ಯ, ಪ್ರಾಥಮಿಕ ಶಿಕ್ಷಣ
* ಕಪ್ಪುಹಣ ಇರಿಸಿದವರಿಗೆ ದೊರೆಯುವ ಹಣದ ಪ್ರಮಾಣ: 25%

ಘೋಷಿಸದೆ ಸಿಕ್ಕಿಬಿದ್ದವರಿಗೆ ಏನು ದಂಡ
* 60% ತೆರಿಗೆ ತೆರಿಗೆಯ ಮೇಲೆ ಶೇ 25 ರಷ್ಟು ಮೇಲ್ತೆರಿಗೆ (ಇದು ಒಟ್ಟು ಮೊತ್ತದ ಶೇ 15ರಷ್ಟಾಗುತ್ತದೆ)
* ಪರಿಶೋಧನೆ ನಡೆಸಿದ ಅಧಿಕಾರಿ ಹೆಚ್ಚುವರಿ ಶೇ 10 ತೆರಿಗೆ ವಿಧಿಸುವುದಕ್ಕೂ ಅವಕಾಶ ಇದೆ
* 85% ಪಾವತಿಸಬೇಕಾದ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT