ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕರ ಸಮಾಜದ ಆಶಯ ಸರ್ಕಾರದ ಸ್ಪಂದನ ಅಗತ್ಯ

Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸಮಾಜದೊಡನೆ ಸಾಹಿತಿ ಮತ್ತು ಸಾಹಿತ್ಯ ಹೊಂದಿರಬೇಕಾದ ನಿಕಟ ಸಂಬಂಧದ ಕುರಿತು 82ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಬರಗೂರು ರಾಮಚಂದ್ರಪ್ಪಅವರು ಆಡಿರುವ ಮಾತುಗಳು, ಸಾಹಿತ್ಯ ಮತ್ತು ಸಮಾಜದ ನಡುವಣ ನಂಟಿನ ಕುರಿತ ನಂಬಿಕೆಗಳ ವಿಮರ್ಶೆಗೆ ಒತ್ತಾಯಿಸುವಂತಿವೆ.

ಸಾಂಸ್ಕೃತಿಕ ಪ್ರತಿನಿಧಿಗಳಿಂದ ಜನರು ನಿರೀಕ್ಷಿಸುತ್ತಿರುವ ಜವಾಬ್ದಾರಿಯ ಬಗ್ಗೆ ಗಮನಸೆಳೆದಿರುವ ಅವರು, ‘ನಾವು ಜನರಿಗೆ ಜವಾಬ್ದಾರರಾಗಬೇಕು ಎನ್ನುವುದು ಸಮ್ಮೇಳನದಿಂದ ಕಲಿಯಬೇಕಾದ ಪ್ರಥಮ ಪಾಠ’ ಎಂದಿರುವುದು ಸಾಹಿತ್ಯ ಜನಪರ–ಜನಮುಖಿ ಆಗಿರಬೇಕು ಎನ್ನುವ ಆಶಯದ ಅಭಿವ್ಯಕ್ತಿಯಾಗಿದೆ.

ಭಾಷಾ ಚಳವಳಿಗಳಿಗೆ ತಾತ್ವಿಕ ನೆಲೆಗಟ್ಟು ಇರಬೇಕೆನ್ನುವುದು ಹಾಗೂ ಈ ಚಳವಳಿಗಳು ಸಾಮಾಜಿಕ ಚಳವಳಿಗಳಾಗಿ ರೂಪಾಂತರಗೊಳ್ಳಬೇಕು ಎನ್ನುವ ಆಶಯ ಕೂಡ ಭಾಷೆ ಮತ್ತು ಸಮಾಜದ ಅವಿನಾಭಾವ ಸಂಬಂಧದ ಸೂಚನೆಯಾಗಿದೆ. ಬರಗೂರರ ಭಾಷಣ ಸಾಹಿತ್ಯ–ಸಂಸ್ಕೃತಿ ಕ್ಷೇತ್ರಕ್ಕೆ ಸೀಮಿತವಾಗಿರದೆ, ದೇಶ ಹಾಗೂ ರಾಜ್ಯದಲ್ಲಿನ ಈ ಹೊತ್ತಿನ ತವಕತಲ್ಲಣಗಳ ಕುರಿತ ಸೃಜನಶೀಲ ಪ್ರತಿಕ್ರಿಯೆಯ ರೂಪದಲ್ಲಿರುವುದು ಗಮನಾರ್ಹ.

ರಾಷ್ಟ್ರಭಕ್ತಿಯ ಅಪಕಲ್ಪನೆ, ಅನೈತಿಕ ಪೊಲೀಸ್‌ಗಿರಿ, ಮಹಿಳೆಯರ ಮೇಲಿನ ಹಿಂಸೆ, ಖಾಸಗೀಕರಣದ ಅಪಾಯಗಳು, ಮಾತೃಭಾಷಾ ಶಿಕ್ಷಣದ ಅಗತ್ಯ, ದಲಿತರ ಶೋಷಣೆ, ಅಸಹಿಷ್ಣುತೆ, ರಾಜ್ಯಗಳ ಸ್ವಾಯತ್ತತೆಗೆ ಒದಗಿರುವ ಅಪಾಯ, ಅನಾರೋಗ್ಯಕರ ಸೈದ್ಧಾಂತಿಕ ಸಂಘರ್ಷ, ವಿಶ್ವಾಸಾರ್ಹತೆಯ ಬಿಕ್ಕಟ್ಟು – ಹೀಗೆ ವರ್ತಮಾನದ ಹಲವು ಸಂಗತಿಗಳನ್ನು ಪ್ರಸ್ತಾಪಿಸುವ ಮೂಲಕ ನುಡಿಜಾತ್ರೆಗೆ ವೈಚಾರಿಕ ಸಮಕಾಲೀನತೆಯನ್ನು ತಂದುಕೊಡುವ ಪ್ರಯತ್ನ ಅಧ್ಯಕ್ಷರ ಮಾತುಗಳಲ್ಲಿದೆ.

ಪ್ರತ್ಯೇಕ ರಾಜ್ಯದ ಬೇಡಿಕೆಯ ಹಿಂದಿರುವ ಕಾರಣಗಳನ್ನು ಗಮನಿಸದೆ ಹೋದರೆ, ಈ ದನಿಗಳು ಮುಂದಿನ ದಿನಗಳಲ್ಲಿ ಸಮೂಹ ಸನ್ನಿಯ ರೂಪ ತಾಳಬಹುದಾದ ಎಚ್ಚರಿಕೆ ಕರ್ನಾಟಕದ ಜೊತೆಗೆ ಎಲ್ಲ ರಾಜ್ಯಗಳು ಆಲಿಸಬೇಕಾದ ಕಿವಿಮಾತಾಗಿದೆ. ಆರ್ಥಿಕ ಅಸಮತೋಲನದ ಜೊತೆಗೆ ಸಾಂಸ್ಕೃತಿಕ ಪ್ರಾತಿನಿಧ್ಯದ ಕೊರತೆಯ ಕೊರಗನ್ನೂ ಗಮನಿಸಬೇಕಾಗಿದ್ದು; ಈ ನಿಟ್ಟಿನಲ್ಲಿ, ಕರ್ನಾಟಕದ ಪ್ರತಿ ಕಂದಾಯ ವಲಯಕ್ಕೊಂದು ಸಚಿವಾಲಯವನ್ನು ರೂಪಿಸುವ ಮೂಲಕ ಅಭಿವೃದ್ಧಿ ಮತ್ತು ಜನಮುಖಿ ನ್ಯಾಯದ ವೇಗವನ್ನು ಹೆಚ್ಚಿಸಬಹುದು ಎನ್ನುವ ಬರಗೂರರ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕಾಗಿದೆ.

ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳು ಮತ್ತು ಅವುಗಳಿಗೆ ಖರ್ಚು ಮಾಡಿದ ಹಣದ ವಿವರಗಳನ್ನು ಒಳಗೊಂಡಂತೆ ಸರ್ಕಾರ ಪುಸ್ತಕವೊಂದನ್ನು ಪ್ರಕಟಿಸಬೇಕು ಎನ್ನುವ ಒತ್ತಾಯ ಆಡಳಿತ ಸಾಗಬೇಕಾದ ದಿಕ್ಕನ್ನು ಕಂಡುಕೊಳ್ಳಲು ಸಹಕಾರಿ ಆಗಬಲ್ಲದು.

ಶಿಕ್ಷಣ ಕ್ಷೇತ್ರಕ್ಕೆ ಅಧ್ಯಕ್ಷರ ಭಾಷಣದಲ್ಲಿ ಹೆಚ್ಚಿನ ಒತ್ತು ಸಿಕ್ಕಿರುವುದು ಈ ಹೊತ್ತಿನ ಅನಿವಾರ್ಯವೂ ಹೌದು. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮಕ್ಕೆ ಅವಕಾಶವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ರಾಷ್ಟ್ರಮಟ್ಟದಲ್ಲಿ ನಾಯಕತ್ವ ವಹಿಸಬೇಕು ಎನ್ನುವುದು ಬರಗೂರರ ಅಪೇಕ್ಷೆ.

ವಿಲೀನದ ಮೂಲಕ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಒತ್ತಾಯಿಸಿರುವುದು ಹಾಗೂ ಸಮಾನ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿರುವುದು ಸರಿಯಾಗಿಯೇ ಇದೆ. ಉನ್ನತ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಿರುವ ಪ್ರಯತ್ನವನ್ನು ವಿರೋಧಿಸಿರುವ ಅವರು, ಕಾಯಂ ಉಪನ್ಯಾಸಕರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಇರುವುದು ಹಾಗೂ ಮೀಸಲಾತಿ ಮತ್ತು ಸರ್ಕಾರದ ಹಸ್ತಕ್ಷೇಪದಿಂದ ತಪ್ಪಿಸಿಕೊಳ್ಳಲು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಅನುದಾನವನ್ನೇ ಬೇಡ ಎನ್ನುತ್ತಿರುವುದರ ಹಿಂದಿನ ಅಪಾಯಗಳ ಕುರಿತು ಗಮನಸೆಳೆದಿದ್ದಾರೆ. ಉನ್ನತ ಶಿಕ್ಷಣದ ಕಾರ್ಪೊರೇಟರೀಕರಣದ ಬದಲು ಕರ್ನಾಟಕೀಕರಣ ಆಗಬೇಕು, ಬಹುತ್ವದ ಭಾರತೀಕರಣವಾಗಬೇಕು ಎನ್ನುವ ಅವರ ನಿಲುವು ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕನಾಗಿದೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮಾತುಗಳು ವೈಯಕ್ತಿಕ ಚಿಂತನೆಗಳಷ್ಟೇ ಆಗಿರದೆ, ಜನರ ಅಪೇಕ್ಷೆಗಳ ಪ್ರತಿಫಲನವೂ ಆಗಿರುತ್ತವೆ. ಆ ಕಾರಣದಿಂದಲೇ ಬರಗೂರು ರಾಮಚಂದ್ರಪ್ಪನವರ ಮಾತುಗಳನ್ನು ನಾಡಿನ ಜನರ ಅಭಿಪ್ರಾಯದ ರೂಪದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಈ ಆಶೋತ್ತರಗಳ ಈಡೇರಿಕೆಗಾಗಿ ಸಾಹಿತ್ಯ ಪರಿಷತ್ತು ಕೂಡ ನಿರಂತರವಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಮುಂದಿನ ಸಮ್ಮೇಳನದವರೆಗೂ ಪರಿಷತ್ತಿನ ಎಲ್ಲ ಸೃಜನಶೀಲ ಚಟುವಟಿಕೆಗಳ ಪಾಲುದಾರನಾಗಿ ಇರುವುದಾಗಿ ಬರಗೂರರು ಈಗಾಗಲೇ ಹೇಳಿದ್ದಾರೆ. ಅವರ ಮಾತುಗಳಿಗೆ ಬೆಲೆ ತಂದುಕೊಡಬೇಕಾದ ಹೊಣೆಗಾರಿಕೆ ಪರಿಷತ್ತಿನದೂ ಆಗಿದೆ; ಸರ್ಕಾರದ್ದೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT