ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊರನಾಡ ಕನ್ನಡ ಮಕ್ಕಳಿಗೆ ರಾಜ್ಯದಲ್ಲೇ ಪ್ರವೇಶವಿಲ್ಲ’

Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಶಾಂತರಸ ಪ್ರಧಾನ ವೇದಿಕೆ (ರಾಯಚೂರು): ಬೇರೆ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಗೆ ‘ಸಾಹಿತ್ಯ– ಸಂಸ್ಕೃತಿ ಮತ್ತು ಸಾಮರಸ್ಯ’ ಗೋಷ್ಠಿ ವೇದಿಕೆಯಾಯಿತು.

ಧರಣಿದೇವಿ ಮಾಲಗಿತ್ತಿ ಅನುಪಸ್ಥಿತಿಯಲ್ಲಿ ವಿಚಾರ ಮಂಡಿಸಿದ ತೆಲಂಗಾಣದ ಲೇಖಕ ಅಮರ ದೀಕ್ಷಿತ ಅವರು ತಮಗೆ ಕೊಟ್ಟ ವಿಷಯ ಕೈಬಿಟ್ಟು ವಿದ್ಯಾರ್ಥಿಗಳ ಸಮಸ್ಯೆಯನ್ನು ಪ್ರಸ್ತಾಪಿಸಿದರು.

‘ನಮ್ಮ ನೋವಿಗೆ ಪರಿಹಾರ ನೀಡಬೇಕಾದವರು ಹೆಲಿಕಾಪ್ಟರ್‌ನಲ್ಲಿ ಹಾರಿ ಹೋಗಿದ್ದಾರೆ. ನಮ್ಮ ಅಳಲನ್ನು ಈಗ ಯಾರಲ್ಲಿ ಹೇಳಿಕೊಳ್ಳುವುದು’ ಎಂದು ಮಾತು ಆರಂಭಿಸಿದ ಅವರು, ‘ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಒಟ್ಟು ಒಂದು ಸಾವಿರ ಕನ್ನಡ  ಶಾಲೆಗಳಿವೆ. ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿ ವರೆಗೆ 80 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ, ಅವರಿಗೆ ಕರ್ನಾಟಕ ಶಾಲೆಗಳಲ್ಲಿ ಪ್ರವೇಶ ಸಿಗುತ್ತಿಲ್ಲ. ನಮ್ಮ ಕನ್ನಡ ಶಾಲೆಗಳೆಲ್ಲ ಒಂದೊಂದೇ ಮುಚ್ಚಿ ಹೋಗುತ್ತಿವೆ’ ಎಂದರು.

‘ಈ ಮಕ್ಕಳಿಗೆ ನಮ್ಮ ಶಾಲೆಗಳಲ್ಲಿ ಪ್ರವೇಶ ನೀಡಬೇಕು ಎಂದು ಬಿ.ಎಸ್‌. ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಇಲ್ಲಿವರೆಗೆ ಅದು ಅನುಷ್ಠಾನಕ್ಕೆ ಬಂದಿಲ್ಲ’ ಎಂದು ನೋವಿನಿಂದ ಹೇಳಿದರು. ‘ನಾವೇನೂ ನಿಮ್ಮಲ್ಲಿ ಶಾಸಕ, ವಿಧಾನ ಪರಿಷತ್ ಹಾಗೂ ಸಂಸದ ಸ್ಥಾನ ಕೇಳುತ್ತಿಲ್ಲ. ನಮ್ಮ ಮಕ್ಕಳಿಗೆ ಪ್ರವೇಶ ಕೊಡಿ ಎಂದು ವಿನಂತಿ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ನೆಲೆಸಿದ್ದರೂ ನಾವೆಲ್ಲ ಕನ್ನಡಿಗರೇ. ನಮ್ಮ ಮನಸ್ಸಿನಲ್ಲಿ ಕನ್ನಡವೇ ಇದೆ. ಅದನ್ನು ನೀವು ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ’ ಎಂದು ಚಾಟಿ ಬೀಸಿದರು.

‘ನಮ್ಮ ಮಕ್ಕಳು ಐಟಿಐ ಕಲಿಯಲು ರಾಯಚೂರಿಗೆ ಬರುತ್ತಾರೆ. ಆದಾಯ ಪ್ರಮಾಣಪತ್ರ ತನ್ನಿ ಎಂದು ಕಾಲೇಜಿನವರು ಅಟ್ಟುತ್ತಾರೆ. ಆಂಧ್ರದಿಂದ ಪ್ರಮಾಣಪತ್ರ ತಂದರೆ ಅದು ಆಗಲ್ಲ ಎಂದು ನೆಪ ಹೇಳುತ್ತಾರೆ. ಇಲ್ಲಿಯದೇ ಬೇಕು ಎಂದು ಪಟ್ಟು ಹಿಡಿಯುತ್ತಾರೆ. ಇಲ್ಲಿನ ಅಧಿಕಾರಿಗಳ ಮೊರೆ ಹೋದರೆ, ಪ್ರಮಾಣಪತ್ರ ನೀಡಲು ನಮಗೇನು ತಲೆ ಕೆಟ್ಟಿದೆಯಾ ಎನ್ನುತ್ತಾರೆ.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕುಂ. ವೀರಭದ್ರಪ್ಪ, ‘ಚಂದ್ರಲೋಕದಲ್ಲಿ ಯಾರಾದರೂ ಒಂದರಿಂದ ಎಸ್ಸೆಸ್ಸೆಲ್ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತರೆ ಅವರನ್ನೂ ಕನ್ನಡಿಗರೆಂದು ಪರಿಗಣಿಸಬೇಕು. ಹೊರರಾಜ್ಯಗಳ ಕನ್ನಡಿಗರ ವಿಷಯದಲ್ಲಿ ನಾವು ಮಲತಾಯಿ ಧೋರಣೆ ಅನುಸರಿಸುತ್ತಿದ್ದೇವೆ. ಇದು ಕನ್ನಡಕ್ಕೆ ಮಾಡುವ ಅಪಚಾರ’ ಎಂದು ಕಟುವಾಗಿ ಹೇಳಿದರು.

‘ಇಂತಹ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಸಮ್ಮೇಳನದಲ್ಲಿ ಇರಬೇಕಾಗಿತ್ತು. ಅವರು ಎಲ್ಲಿದ್ದಾರೆ’ ಎಂದು ಕೇಳಿ ‘ಅವರೂ ಹೆಲಿಕಾಪ್ಟರ್‌ನಲ್ಲಿ ಪುರ್ರನೆ ಹಾರಿ ಹೋಗಿದ್ದಾರೆ’ ಎಂದು ವ್ಯಂಗ್ಯವಾಗಿ ನುಡಿದರು.

‘ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಭಾವೈಕ್ಯಕ್ಕೆ ಮತ್ತೊಂದು ಹೆಸರು. ಬೇರೆಲ್ಲೂ ಇಂತಹ ವಾತಾವರಣ ಕಾಣುವುದಿಲ್ಲ. ಕನ್ನಡ, ಉರ್ದು, ತೆಲುಗು ಭಾಷೆಗಳನ್ನು ಮಾತನಾಡುವ ಶಕ್ತಿ ಇರುವುದು ಇಲ್ಲಿನ ಕನ್ನಡಿಗರಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸೂಫಿ ಚಿಂತನೆಯ ನೆಲೆಗಳು’ ವಿಷಯದ ಕುರಿತು ರಂಜಾನ್‌ ದರ್ಗಾ ಮಾತನಾಡಿ, ‘ಸೂಫಿಗಳು ಜಗತ್ತಿಗೆ ಸ್ಪಂದಿಸುವ ಸಾಹಿತ್ಯ ರಚನೆ ಮಾಡಿದರು. 21ನೇ ಶತಮಾನದ ಎಲ್ಲ ತುಮುಲಗಳಿಗೆ ಸೂಫಿ ಸಾಹಿತ್ಯದಲ್ಲಿ ಉತ್ತರ ಇದೆ’ ಎಂದರು.

‘ತತ್ವಪದಕಾರರ ಆಧ್ಯಾತ್ಮಿಕತೆ’ ಕುರಿತು ಡಾ. ಶಂಭು ಬಳಿಗಾರ್‌, ‘ಜಾಗತೀಕರಣದ ಸೋಗಿನಲ್ಲಿ ಬಂದಿರುವ ಬಂಡವಾಳಶಾಹಿತನದಿಂದಾಗಿ ನಮ್ಮ ಬದುಕು ಸೊರಗಿ ಹೋಗುತ್ತಿದೆ. ಜಾನುವಾರಿಗೆ ಕರು ಹಾಕುವ ಸ್ವಾತಂತ್ರ್ಯವೂ ಇಲ್ಲವಾಗಿದೆ. ನಮ್ಮ ಆಸ್ಮಿತೆ ಕಳೆದುಕೊಳ್ಳುತ್ತಿದ್ದೇವೆ. ಈ ಎಲ್ಲ ಸವಾಲುಗಳನ್ನು ಎದುರಿಸಲು ತತ್ವಪದಕಾರರು ನಮಗೆ ಪ್ರೇರಣೆಯಾಗಬೇಕು’ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT