ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲಕ್ರಾಂತಿಗೆ ಸಾಹಿತ್ಯ ವಲಯ ಒತ್ತಾಸೆಯಾಗಲಿ’

Last Updated 2 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಶಾಂತರಸ ಪ್ರಧಾನ ವೇದಿಕೆ (ರಾಯಚೂರು): ‘ರಾಜ್ಯದ 17 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ  ಇನ್ನೂ ನೀರಾವರಿ ಸೌಲಭ್ಯ ಕಲ್ಪಿಸಬೇಕಿದೆ. ಮುಂದಿನ ಹತ್ತು ವರ್ಷಗಳನ್ನು ನೀರಾವರಿ ದಶಕ ಎಂದು ಘೋಷಿಸಿ, ನೀರಾವರಿ ಯೋಜನೆಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಈ ಜಲಕ್ರಾಂತಿಗೆ ಸಾಹಿತ್ಯ ವಲಯ ಒತ್ತಾಸೆಯಾಗಿ ನಿಲ್ಲಬೇಕು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.

‘ರಾಜ್ಯದ ನೀರು–ನೀರಾವರಿ: ಸಮಸ್ಯೆಗಳು–ಪರಿಹಾರಗಳು’ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಅವರು, ‘ಎರಡನೇ ಹಸಿರು ಕ್ರಾಂತಿ ಆಗಬೇಕಾದರೆ ಜಲಕ್ರಾಂತಿಯ ಹಕ್ಕೊತ್ತಾಯಕ್ಕೆ  ಈ ಸಮ್ಮೇಳನವೇ ಮುನ್ನುಡಿ ಬರೆಯಬೇಕು. ಜಲಸಾಹಿತ್ಯದ ಮೂಲಕ ಜನ–ಸರ್ಕಾರಕ್ಕೆ ಜಾಗೃತಿ ಮೂಡಿಸಬೇಕು. ನಾಡಗೀತೆಯಲ್ಲಿ ಜಲ ಸೇರ್ಪಡೆಯಾಗಬೇಕು’ ಎಂದು ವಿನಂತಿಸಿದರು.

‘ಆಂಧ್ರಪ್ರದೇಶ, ತೆಲಂಗಾಣದ ಜನರಲ್ಲಿ ಇರುವಷ್ಟು ಜಲಜಾಗೃತಿ ನಮ್ಮ ಜನರಲ್ಲಿ ಇಲ್ಲ. ನೀರು ಮಿತಬಳಕೆ ಮತ್ತು ನೀರು ನಿರ್ವಹಣೆಯ ವಿಷಯದಲ್ಲಿ ಜಾಗೃತಿ ಮೂಡಿಸಬೇಕು. ಕಬ್ಬು–ಭತ್ತ ಬೆಳೆಯಲು ಹನಿ ನೀರಾವರಿ ಕಡ್ಡಾಯಗೊಳಿಸಬೇಕು. ತುಂಗಭದ್ರಾ ಜಲಾಶಯದಲ್ಲಿ 20 ಟಿಎಂಸಿ ಅಡಿ ಹೂಳು ತುಂಬಿದ್ದು, ನವಿಲೆ ಬಳಿ ಸಮಾನಾಂತರ ಜಲಾಶಯ ಹಾಗೂ ರಾಯಚೂರು ಜಿಲ್ಲೆ ತಿಂಥಣಿ ಬಳಿ ಕೃಷ್ಣಾ ನದಿಗೆ ಹೊಸ ಜಲಾಶಯ ನಿರ್ಮಿಸಬೇಕು. ಪಶ್ಚಿಮಘಟ್ಟದಲ್ಲಿ ನದಿಗಳ ಜೋಡಣೆಯಂತಹ ಪರಿಸರ ಸ್ನೇಹಿ ಯೋಜನೆ ಕಾರ್ಯಗತಗೊಳ್ಳಬೇಕು. ಬೇಡ್ತಿ–ವರದಾ ನದಿ ಜೋಡಿಸಬೇಕು. ನಾನು ಜಲಸಂಪನ್ಮೂಲ ಸಚಿವನಿದ್ದಾಗ ರೂಪಿಸಿದ್ದ 7 ಲಕ್ಷ ಎಕರೆಗೆ ಸೂಕ್ಷ್ಮ ನೀರಾವರಿ ಕಲ್ಪಿಸುವ ಯೋಜನೆ ಪೂರ್ಣಗೊಳಿಸಬೇಕು’ ಎಂದರು.

‘ಜಲವಿವಾದ ನ್ಯಾಯಮಂಡಳಿಗಳಿಗೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಾಗುತ್ತದೆ. ತಾವು ಈ ಜಮೀನಿನಿಂದ ನಿವೃತ್ತಿಯಾಗುವವರೆಗೂ ಸದಸ್ಯರಾಗಿರಬೇಕು ಎಂದು ಅವರು ಬಯಸುತ್ತಾರೆ. ಹೀಗಾಗಿ ನ್ಯಾಯಮಂಡಳಿಗಳಿಂದ ಯಾವುದೇ ಜಲ ವಿವಾದ ಪರಿಹರಿಸಲು ಸಾಧ್ಯವಿಲ್ಲ. 1956 ಅಂತರರಾಜ್ಯ ನದಿ ವಿವಾದ ಕಾಯ್ದೆ ರದ್ದು ಪಡಿಸಿ, ಹೊಸ ರಾಷ್ಟ್ರೀಯ ಜಲ ನೀತಿ ರೂಪಿಸಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿ ಒಟ್ಟಾರೆ 3,800ಕ್ಕೂ ಹೆಚ್ಚು ಟಿಎಂಸಿ ಅಡಿ ನೀರು ಲಭ್ಯವಿದ್ದರೂ, ಅದರಲ್ಲಿ 1,186 ಟಿಎಂಸಿ ಅಡಿ ಮಾತ್ರ ನಮಗೆ ಲಭ್ಯ. ಸಾವಿರ ಟಿಎಂಸಿ ಅಡಿಗೆ ನಾವು ಯೋಜನೆ ರೂಪಿಸಿದ್ದು, ಇನ್ನೂ 2 ಸಾವಿರ ಟಿಎಂಸಿ ನೀರು ಬಳಕೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕೃಷಿಯೋಗ್ಯ ಭೂಮಿ 105 ಲಕ್ಷ ಹೆಕ್ಟೇರ್‌ ಇದೆ. ಅದರಲ್ಲಿ 65 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅವಕಾಶ ಇದೆ. ಆದರೆ, ಈ ವರೆಗೆ ನಾವು ಎಲ್ಲ ಮೂಲಗಳಿಂದ ನೀರಾವರಿ ಸೌಲಭ್ಯ ಕಲ್ಪಿಸಿರುವುದು 48 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಮಾತ್ರ’ ಎಂದು ಅವರು ಹೇಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ಇಂದು
ಗೋಷ್ಠಿಗಳು- ಕನ್ನಡ ಸಾಹಿತ್ಯ ಪರಿಷತ್‌:
82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ  (ಶಾಂತರಸ ಪ್ರಧಾನ ವೇದಿಕೆ): ಗೋಷ್ಠಿ–3– ಸಂಸ್ಕೃತಿ ಮತ್ತು  ರಾಜಕಾರಣ; ವಿಷಯ ಮಂಡನೆ– ಅಡಗೂರು ಎಚ್.ವಿಶ್ವನಾಥ, ವೈ.ಎಸ್.ವಿ.ದತ್ತಾ, ಡಾ.ಬಂಜಗೆರೆ ಜಯಪ್ರಕಾಶ, ಅಧ್ಯಕ್ಷತೆ– ಡಾ.ಮಲ್ಲಿಕಾಘಂಟೆ ಬೆಳಿಗ್ಗೆ 9.30.

ಗೋಷ್ಠಿ–4 ಕೃಷಿ ಸಂಸ್ಕೃತಿ; ವಿಷಯ ಮಂಡನೆ– ಕೋಡಿಹಳ್ಳಿ ಚಂದ್ರಶೇಖರ, ಕೆ.ಪುಟ್ಟಸ್ವಾಮಿ, ಡಾ.ಬಸವರಾಜ ಡೋಣೂರ, ಅಧ್ಯಕ್ಷತೆ–  ಡಾ.ಎಂ.ಮಹಾದೇವಪ್ಪ, ಬೆ.11.
ವಿಶೇಷ ಉಪನ್ಯಾಸ– ವಿಷಯ: ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ;  ಡಾ.ಗಿರಡ್ಡಿ ಗೋವಿಂದರಾಜ ಮಧ್ಯಾಹ್ನ 12.30.

ಗೋಷ್ಠಿ–5 ಪ್ರಾದೇಶಿಕ ಅಸಮಾನತೆ, ಅಭಿವೃದ್ಧಿಯ ಸವಾಲುಗಳು; ವಿಷಯ ಮಂಡನೆ– ಬಿ.ಆರ್.ಪಾಟೀಲ, ಎಂ.ಕೆ.ಭಾಸ್ಕರರಾವ್, ಡಾ.ಭೀಮಸೇನರಾವ್ ಸಿಂಧೆ, ಅಧ್ಯಕ್ಷತೆ – ಬಸವರಾಜ ಪಾಟೀಲ ಸೇಡಂ ಮಧ್ಯಾಹ್ನ 2.30.

ಗೋಷ್ಠಿ–6 ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ; ಆಶಯ ನುಡಿ– ಹರಿಪ್ರಕಾಶ ಕೋಣೆಮನೆ, ವಿಷಯ ಮಂಡನೆ– ಬಿ.ಸಮೀಉಲ್ಲಾ, ರವಿಹೆಗಡೆ, ವಸುಧೇಂದ್ರ, ಅಧ್ಯಕ್ಷತೆ– ಪದ್ಮರಾಜ ದಂಡಾವತಿ  ಸಂಜೆ–4.30.

ಸಮಾನಂತರ ವೇದಿಕೆ (ಘನಮಠ ಶಿವಯೋಗಿ ವೇದಿಕೆ): ಗೋಷ್ಠಿ–3 ಕನ್ನಡ ಮತ್ತು ಹೊಸ ತಲೆಮಾರು; ವಿಷಯ ಮಂಡನೆ– ಎಸ್.ಆರ್.ವಿಜಯಶಂಕರ್, ಬೇಳೂರು ಸುದರ್ಶನ್, ಅರುಣಕುಮಾರ ಖನ್ನೂರ, ಅಧ್ಯಕ್ಷತೆ– ಡಾ.ಶ್ರೀಕಂಠ ಕೂಡಿಗೆ ಬೆ.10.

ಗೋಷ್ಠಿ–4 ರಾಯಚೂರು ಜಿಲ್ಲಾ ದರ್ಶನ; ವಿಷಯ ಮಂಡನೆ– ಡಾ.ಅಮರೇಶ ಯಾತಗಲ್, ವೀರನಗೌಡ ಗುಮಗೇರಿ, ಬಸವಂತರಾಯಕುರಿ ಅಧ್ಯಕ್ಷತೆ– ಡಾ. ಬಸವಲಿಂಗ ಸೊಪ್ಪಿಮಠ ಮಧ್ಯಾಹ್ನ 12.

ಗೋಷ್ಠಿ–5 ಪುಸ್ತಕ ಸಂಸ್ಕೃತಿ, ಸವಾಲುಗಳು; ವಿಷಯ ಮಂಡನೆ– ಡಾ.ಸತೀಶಕುಮಾರ ಹೊಸಮನಿ, ವೆಂಕಟೇಶ ಮಾಚಕನೂರ, ಡಾ. ಬೈರಮಂಗಲ ರಾಮೇಗೌಡ, ಅಧ್ಯಕ್ಷತೆ– ಡಾ.ವಸಂತ ಕುಷ್ಟಗಿ ಮಧ್ಯಾಹ್ನ 2.30.

ಗೋಷ್ಠಿ–6– ಕವಿಗೋಷ್ಠಿ:ಆಶಯ ಭಾಷಣ– ಜರಗನಹಳ್ಳಿ ಶಿವಶಂಕರ, ಅಧ್ಯಕ್ಷತೆ– ಬಿ.ಆರ್.ಲಕ್ಷ್ಮಣರಾವ್, ಸಂಜೆ 4.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT