ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರೂರು... ನಾಡಗೀತೆ... ಮಧ್ವಾಚಾರ್ಯ...

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕನ್ನಡ ಕುಲಕೋಟಿಯ ಮೇಲೆ ಆಣೆ ಇಟ್ಟು ಕರ್ನಾಟಕ ಏಕೀಕರಣದ ಶಪಥ ಮಾಡಿದ್ದವರು ಜಗದ ಕವಿ, ಯುಗದ ಕವಿ, ರಸಋಷಿ ಕುವೆಂಪು. ‘ತನ್ನ ತಾನ್ ಇಲ್ಲಗೈವುದೇ ಎಲ್ಲ ಸಾಧನೆಗಳ ಪರಮಗುರಿ’ ಎಂದು ಸಾರಿದಂತೆ ಬಾಳಿದ ರಾಷ್ಟ್ರಕವಿ ಇವರು.

ಇಂಥ ಕವಿಗೊಂದು ನಮನ ಸಲ್ಲಿಸಲು 2004ರಂದು ಸರ್ಕಾರ ಕುವೆಂಪು ಜನ್ಮಶತಮಾನೋತ್ಸವ ವರ್ಷಾಚರಣೆ ಘೋಷಿಸಿತ್ತು. ಆ ನಿಮಿತ್ತ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ (ಕಸಾಪ) ಕೃಷ್ಣರಾಜ ಪರಿಷನ್ಮಂದಿರದಲ್ಲಿ ಶತಮಾನೋತ್ಸವ ಆಚರಿಸುತ್ತಿತ್ತು. ಅವರಿಗೆ ಗೌರವ ತೋರುವ ಸಲುವಾಗಿ ಅವರು ರಚಿಸಿರುವ ‘ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಗೀತೆಯನ್ನು ‘ರಾಜ್ಯದ  ಅಧಿಕೃತ ನಾಡಗೀತೆ’ ಎಂದು ಸರ್ಕಾರ ಘೋಷಿಸಿತು.

ಜನ್ಮಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಕಲಾವಿದರು ಈ ಹಾಡನ್ನು ಹಾಡಿದರು. ಹಾಡಿನಲ್ಲಿ ‘ಶಂಕರ, ರಾಮಾನುಜ, ವಿದ್ಯಾರಣ್ಯ’ ಇವರ ಹೆಸರುಗಳ ಜೊತೆಗೆ ಮಧ್ವಾಚಾರ್ಯರ ಹೆಸರು ಸೇರಿಲ್ಲದುದಕ್ಕೆ ಕಸಾಪದ ಅಂದಿನ ಅಧ್ಯಕ್ಷರಾಗಿದ್ದ ಹರಿಕೃಷ್ಣ ಪುನರೂರು ಆರಂಭದಲ್ಲಿಯೇ ತಕರಾರು ತೆಗೆದರು. ಉದ್ಘಾಟನಾ ಸಮಾರಂಭ ಮುಗಿದ ಬಳಿಕವೂ ಇದೇ ವಿಷಯಕ್ಕೆ ಗೊಂದಲ ಸೃಷ್ಟಿಸಿದರು. ಕನ್ನಡಪರ ಸಂಘಟನೆಗಳು ಪುನರೂರು ಅವರ ನಿಲುವನ್ನು ಉಗ್ರವಾಗಿ ಪ್ರತಿಭಟಿಸತೊಡಗಿದವು.

ಕನ್ನಡ ಸಂಘರ್ಷ ಸಮಿತಿ, ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ವೇದಿಕೆ, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಶಾಂತವೇರಿ ಗೋಪಾಲ ಗೌಡ ವೇದಿಕೆ, ರಂಗೋತ್ರಿ ಸಂಸ್ಥೆ ಮುಂತಾದವು ಪ್ರತಿಭಟನೆಯ ಮುಂಚೂಣಿಯಲ್ಲಿದ್ದವು. ಹೋರಾಟವು ದಿನಕಳೆದಂತೆ ಹೆಚ್ಚು ಹೆಚ್ಚು ಕಾವು ಪಡೆದುಕೊಳ್ಳುತ್ತಿತ್ತು.

ಅಂದೇ ಇದೇ ವೇದಿಕೆಯಲ್ಲಿ ಪದ್ಮಭೂಷಣ ಡಾ. ಬಿ.ಸರೋಜಾದೇವಿ ಅವರಿಗೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತು. ಆ ಸಭೆಯಲ್ಲಿ  ಪುನರೂರು ಅಧ್ಯಕ್ಷತೆ ವಹಿಸಿದ್ದರು. ನಾಡಗೀತೆಯ ವಿಷಯದಲ್ಲಿ ಇವರ ವಿರುದ್ಧ ಪ್ರತಿಭಟನೆ ನಡೆಸಿದ್ದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರೂ ಭಾಗವಹಿಸಿದ್ದರು. ವೇದಿಕೆಯ ಮೇಲೆ ಅಧ್ಯಕ್ಷರ ಒಂದು ಬದಿಯಲ್ಲಿ ಲೇಖಕಿ ಡಾ. ಕಮಲಾ ಹಂಪನಾ, ಇನ್ನೊಂದು ಕಡೆ ಡಾ. ಬಿ.ಸರೋಜಾ ದೇವಿ ಸೇರಿದಂತೆ ಗಣ್ಯವ್ಯಕ್ತಿಗಳು ಕುಳಿತಿದ್ದರು. 

ಸಭಾಂಗಣ ಹೋರಾಟಗಾರರಿಂದ ತುಂಬಿತ್ತು. ಪುನರೂರು ಅವರು ಅಧ್ಯಕ್ಷ ಭಾಷಣ ಮಾಡಲು ಮೈಕ್ ಮುಂದೆ ಬಂದು ನಿಲ್ಲುತ್ತಿದ್ದಂತೆ ಪ್ರತಿಭಟನಾಕಾರರಲ್ಲಿ ಕೆಲವರು ಕ್ಷಣಾರ್ಧದಲ್ಲಿ ಮುನ್ನುಗ್ಗಿ ಅವರ  ಪಂಚೆಯನ್ನು ಕಿತ್ತುಬಿಟ್ಟರು! ಇದರಿಂದ ಕಕ್ಕಾಬಿಕ್ಕಿಯಾದ ಪುನರೂರು ಅವರಿಗೆ ಎತ್ತನೋಡಬೇಕೆಂದು ತೋಚಲಿಲ್ಲ. ಅಷ್ಟರಲ್ಲಿ ಕೆಲವರು ಅವರನ್ನು ಸುತ್ತುವರಿದು ತೆರೆಯ ಹಿಂಭಾಗಕ್ಕೆ ಕರೆದೊಯ್ದರು. ಸಭಾಂಗಣದಲ್ಲಿ ಅವರ ವಿರುದ್ಧ ಆಕ್ರೋಶಭರಿತ ಘೋಷಣೆಗಳು ಮೊಳಗತೊಡಗಿದವು.

ಪುನರೂರು ಅವರು ಈ ಬಗ್ಗೆ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಕನ್ನಡ ಹೋರಾಟಗಾರರಾದ ಕೋಡಿಹಳ್ಳಿ ರಾಮಣ್ಣ, ಕೋ.ವೆಂ.ರಾಮಕೃಷ್ಣ ಗೌಡ, ಪಾರ್ಶ್ವನಾಥ್, ಸಮೀಉಲ್ಲಾಖಾನ್, ನರಸಿಂಹಶೆಟ್ಟಿ ಮುಂತಾದವರು ಈ ಪ್ರಕರಣಕ್ಕೆ ಕಾರಣರು ಎಂದು ಅವರು ತಿಳಿಸಿದ್ದರು.
ಈ ಪ್ರಕರಣದ ವಿಚಾರಣೆ ಬೆಂಗಳೂರಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ  ನಡೆಯಿತು. ಕೋರ್ಟ್‌ ಆದೇಶ ಹೊರಬಿದ್ದ ಮೇಲೆ ಮುಖಭಂಗದಿಂದ ಅದೆಷ್ಟೋ ದಿನಗಳವರೆಗೆ ಪುನರೂರು ಅವರು ಬಡಬಡಿಸುತ್ತಿದ್ದರು.  ಆರೋಪಿಗಳ ಪರವಾಗಿ ವಕಾಲತ್ತು ವಹಿಸಿದ್ದ ನಾನು, ಆ ಬಡಬಡಿಕೆಯ ಹಿಂದಿನ ರಹಸ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.

***
ಹಲ್ಲೆಗೆ ಸಂಬಂಧಿಸಿದಂತೆ ಪುನರೂರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ಅವರು ತಿಳಿಸಿದ ಎಲ್ಲಾ ಆರೋಪಿಗಳ ವಿರುದ್ಧ ಕೋರ್ಟ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದರು. ವಿಚಾರಣೆಯ ಕಾಲದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರು, ಡಾ. ಕಮಲಾ ಹಂಪನಾ, ಬಿ.ಸರೋಜಾ ದೇವಿ ಸೇರಿದಂತೆ ಹಲವರಿಂದ ಸಾಕ್ಷಿ  ಪಡೆದರು. ‘ಆರೋಪಿ ಸ್ಥಾನದಲ್ಲಿದ್ದ ಐದೂ ಮಂದಿಯನ್ನು ನಾನು ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬಲ್ಲೆ. ಅವರು ಸಂಘಟಿಸಿದ್ದ ಹಲವಾರು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ’ ಎಂದು ಡಾ. ಕಮಲಾ ಹಂಪನಾ ಹೇಳಿದರು. ಇಂಥ ಕೃತ್ಯ ಎಸಗುವ  ಜಾಯಮಾನ ಆರೋಪಿಗಳದ್ದಲ್ಲ ಎಂದು ಉದಾಹರಣೆಗಳ ಸಹಿತ ತಿಳಿಸಿದರು.

ಪ್ರಾಸಿಕ್ಯೂಷನ್‌ ಪರ ವಕೀಲರು ಕಮಲಾ ಹಂಪನಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಿದರು. ಈ ಪಾಟಿ ಸವಾಲಿನಲ್ಲಿ ಆರೋಪಿಗಳ ಸನ್ನಡತೆಯನ್ನು ಬೆಂಬಲಿಸುವ ಹತ್ತಾರು ಅಂಶಗಳು ಹೊರಬಿದ್ದವೇ ಹೊರತು ಆರೋಪಗಳನ್ನು ಬೆಂಬಲಿಸುವ ಯಾವುದೇ ಅಂಶವನ್ನು ಪ್ರಾಸಿಕ್ಯೂಟರ್‌ ಅವರಿಗೆ ಪಡೆಯಲಾಗಲಿಲ್ಲ. ಪಾಟಿ ಸವಾಲು ಮುಂದುವರಿಸಿದರೆ ತಮಗೇ ಹೆಚ್ಚಿನ ಹೊಡೆತ ಬೀಳಬಹುದೆಂದು ಅಂಜಿದ ಅವರು ಅದನ್ನು ಅರ್ಧಕ್ಕೇ ಕೈಬಿಟ್ಟರು.
ಘಟನೆಗೆ ಇನ್ನೊಬ್ಬ ಪ್ರಮುಖ ಸಾಕ್ಷಿದಾರರು ಎಂದರೆ ಡಾ. ಬಿ.ಸರೋಜಾ ದೇವಿ.  ಕೋರ್ಟ್‌ಗೆ ಹಾಜರಾಗಲು ಅವರಿಗೆ ತಿಳಿಸಲಾಯಿತು.

ಸಿನಿಮಾ ತಾರೆಯಾದ ಸರೋಜಾ ದೇವಿ ಅವರನ್ನು ನೋಡುವುದಕ್ಕಾಗಿಯೇ ಕೋರ್ಟ್‌ನಲ್ಲಿ ಹೆಚ್ಚಿನ ಜನರು ಜಮಾಯಿಸಿದ್ದರು. ಕೋರ್ಟ್‌ನ ಸಿಬ್ಬಂದಿ ಕೂಡ ಸರೋಜಾ ದೇವಿ ಆವರನ್ನು ಹತ್ತಿರದಿಂದ ನೋಡುವ ಸೌಭಾಗ್ಯವನ್ನು ತಪ್ಪಿಸಿಕೊಳ್ಳಬಾರದೆಂಬ ಹಟಕ್ಕೆ ಬಿದ್ದವರಂತೆ ಕಾಣುತ್ತಿತ್ತು. ಅವತ್ತು ವಕೀಲರಂತೂ ಕೋರ್ಟ್ ವೇಳೆಗಿಂತ ಅರ್ಧ ಗಂಟೆ ಮೊದಲೇ ಸಭಾಂಗಣಕ್ಕೆ ಬಂದು ಸ್ಥಳಾವಕಾಶ ಸಿಗದೆ ತುದಿಗಾಲಲ್ಲೇ ನಿಂತರು. ಸರೋಜಾ ದೇವಿಯವರು ಸಮಯಕ್ಕೆ ಸರಿಯಾಗಿ, ಬೀಗುವ ಶೈಲಿಯಲ್ಲಿ ಬಂದೇಬಿಟ್ಟರು. ಎಲ್ಲರ ಗಮನವು ಅವರ ಮೇಲೆಯೇ ನಾಟಿತ್ತು.

ಬರೀ ಸಿನಿಮಾಗಳಲ್ಲಿ ಅವರನ್ನು ನೋಡಿದ್ದ, ಅವರ ಸಂಭಾಷಣೆ ಕೇಳಿದ್ದ  ಜನರು ಅವರ ಮಾತನ್ನು ಕೇಳಲು ಉತ್ಸುಕರಾಗತೊಡಗಿದರು. ಈ ಘಟನೆಗೆ ಸಂಬಂಧಿಸಿದಂತೆ ಅವರು ಏನು ಹೇಳುತ್ತಾರೆ ಎನ್ನುವುದಕ್ಕಿಂತ ಹೇಗೆ ಹೇಳುತ್ತಾರೆ ಎನ್ನುವುದೇ ಎಲ್ಲರಿಗೂ ಮುಖ್ಯವಾಗಿದ್ದಂತೆ ನನಗೆ ಭಾಸವಾಯಿತು.
ಸರೋಜಾ ದೇವಿಯವರು ಅಂದು ನಡೆದ ಘಟನೆಯ ಬಗ್ಗೆ ವಿವರಿಸುತ್ತಾ, ‘ಪುನರೂರು ಅವರ ಪಂಚೆಯನ್ನು ಯಾರೋ ಎಳೆದು ಕೆಳಗೆ ಬೀಳಿಸಿದರು. ನಾನು ಮುಂದೆ ಸಂಭವಿಸಬಹುದಾದ ದೃಶ್ಯ ಕಲ್ಪಿಸಿಕೊಂಡು ನೋಡಲು ಧೈರ್ಯವಿಲ್ಲದೆ ಮುಖವನ್ನು ಇನ್ನೊಂದು ದಿಕ್ಕಿಗೆ ತಿರುಗಿಸಿಕೊಂಡೆ’ ಎಂದರು.

ಪ್ರಾಸಿಕ್ಯೂಟರ್ ಶತಪ್ರಯತ್ನಪಟ್ಟರೂ ಆರೋಪಿಗಳ ವಿರುದ್ಧ ಅವರಿಗೆ ಬೇಕಾಗಿದ್ದ ಮಾಹಿತಿಯನ್ನು ಸರೋಜಾ ದೇವಿ ಅವರಿಂದ ಪಡೆಯಲಾಗಲಿಲ್ಲ. ನಂತರ ನಾನು ಅವರನ್ನು ಪಾಟಿಸವಾಲಿಗೆ ಒಳಪಡಿಸಿದೆ. ಆದರೆ ನನ್ನ ಪ್ರಶ್ನೆಗಳಿಗೆ ಅವರು ಹಾರಿಕೆ ಉತ್ತರ ಕೊಡತೊಡಗಿದರು. ಅವರ ಹಾವಭಾವ ಥೇಟ್ ಸಿನಿಮೀಯ ರೀತಿಯಲ್ಲಿತ್ತು. ನಾನು ಹಗುರವಾಗಿ, ‘ಮೇಡಂ, ನೀವು ಕೋರ್ಟ್‌ನಲ್ಲಿ ಸಾಕ್ಷಿದಾರರಾಗಿ ಬಂದಿದ್ದೀರಿ, ಪರ್ಫಾಮ್ ಮಾಡಲು ಅಲ್ಲ, ಪ್ಲೀಸ್’ ಎಂದೆ. ಇಡೀ ಸಭಾಂಗಣ ನಗೆಗಡಲಲ್ಲಿ ಮುಳುಗಿ ಹೋಯಿತೇ ವಿನಾ ಅವರಿಂದ ಸ್ಪಷ್ಟವಾದ ಮಾಹಿತಿ ಸಿಗಲಿಲ್ಲ.

ನಂತರ ಇನ್ನಿತರ ಸಾಕ್ಷಿದಾರರನ್ನು ಪಾಟಿಸವಾಲಿಗೆ ಒಳಪಡಿಸಿದಾಗ ಅಂದು ನಡೆದ ಘಟನೆಗೆ ಸಂಬಂಧಿಸಿದಂತೆ ಮುಖ್ಯವಾದ ಅಂಶಗಳು ಹೊರಬಿದ್ದವು. ‘ಪುನರೂರು ಅವರು ಅಂದು ಸಭಾಂಗಣ ಪ್ರವೇಶ ಮಾಡುವ ಮುನ್ನವೇ ಆರೋಪಿಗಳು   ಹೊರಗಡೆ ನಿಂತುಕೊಂಡು ಅವರನ್ನು ಕಾಯುತ್ತಿದ್ದರು. ಕುವೆಂಪು ಅವರಿಗಾದ ಅವಮಾನದ ಬಗ್ಗೆ ಕ್ಷಮೆ ಕೇಳಬೇಕೆಂದು  ಅವರೆಲ್ಲಾ ಒತ್ತಾಯಿಸಿದ್ದರು. ಅದಕ್ಕೆ ಪುನರೂರು, ತಾವು ಕುವೆಂಪು ಅವರಿಗೆ ಅವಮಾನವಾಗುವ ರೀತಿಯಲ್ಲಿ ಯಾವ ಮಾತನ್ನೂ ಆಡಿಲ್ಲ, ಪತ್ರಿಕೆಗಳಲ್ಲಿ ತಪ್ಪಾಗಿ ವರದಿಯಾಗಿದೆ, ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡುತ್ತೇನೆ. ಅಲ್ಲದೆ, ನನ್ನ ಮಾತುಗಳಿಂದ ಕುವೆಂಪು ಅಭಿಮಾನಿಗಳಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಹೇಳಿದ್ದರು. ಇದರಿಂದ ಆರೋಪಿಗಳು ಸಮಾಧಾನಗೊಂಡರು.

ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಿರಲಿ ಎಂಬ ಕಾರಣದಿಂದಲೇ ಸಭಾಂಗಣದ ಹೊರಗಡೆಯೇ ಪುನರೂರು ಅವರನ್ನು ತಡೆದು ಆರೋಪಿಗಳು ಸ್ಪಷ್ಟನೆ ಕೇಳಿದ್ದರು’ ಎಂಬ ಅಂಶ ತಿಳಿಯಿತು. ಅಷ್ಟೇ ಅಲ್ಲದೆ, ಕನ್ನಡ ಸಂಘರ್ಷ ಸಮಿತಿ ಪದಾಧಿಕಾರಿಗಳ ವಿರುದ್ಧ ಪುನರೂರು ದೂರು ನೀಡಿರುವುದರ ಹಿಂದೆ ಸೇಡಿನ ಮನೋಭಾವವಿದೆ ಎಂದು ನಿರೂಪಿಸಿದೆ. ‘ಪುನರೂರು ಅವರು ಪರಿಷತ್ ನಿಬಂಧನೆಗಳ ತಿದ್ದುಪಡಿ ಮಾಡಹೊರಟಿದ್ದರು. ಆದರೆ  ಇದು ಭವಿಷ್ಯತ್ತಿನಲ್ಲಿ ಪರಿಷತ್ತಿಗೆ ಮಾರಕವಾಗಲಿದೆ ಎಂಬುದು ಕನ್ನಡ ಪರ ಹೋರಾಟಗಾರರ ಆಕ್ಷೇಪವಾಗಿತ್ತು. ಆದ್ದರಿಂದಲೇ ತಿದ್ದುಪಡಿ ಸಂಬಂಧ ಉಡುಪಿ ಹಾಗೂ ಮಂಡ್ಯದಲ್ಲಿ ಪುನರೂರು ಅವರು ಕರೆದಿದ್ದ ವಿಶೇಷ ಸಕಲ ಸದಸ್ಯರ ಸಭೆ ನಡೆಯದಂತೆ ಕನ್ನಡ ಸಂಘರ್ಷ ಸಮಿತಿಯು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿತ್ತು. ಇದು ಕೂಡ ಪುನರೂರು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು’ ಎಂದೆ.

‘ಪುನರೂರು ಅವರು ಅಧ್ಯಕ್ಷರಾಗುವ ಮುನ್ನ ಪರಿಷತ್ತಿನ ಸದಸ್ಯರ ಪಟ್ಟಿಯಲ್ಲಿ ಅವರ ಹೆಸರು ಹರಿಕೃಷ್ಣ ಪುನರೂರು ಎಂದು ಮಾತ್ರ ಇತ್ತು. ಹಿಂದೆ ನಾಲ್ಕು ಬಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾಗಲೂ ಇದೇ ಹೆಸರು ಇತ್ತು. ಆದರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮೇಲೆ ‘ಧರ್ಮದರ್ಶಿ’ ಎಂದು ಸೇರ್ಪಡೆ ಮಾಡಿಕೊಂಡರು. ಪರಿಷತ್ತಿನ ಶೀರ್ಷಿಕೆ ಪತ್ರ, ಸಂದರ್ಶನದ ಗುರುತಿನ ಪತ್ರ, ಕನ್ನಡ ನುಡಿ, ಪರಿಷತ್ತಿನ ಪ್ರಕಟಣೆ ಎಲ್ಲ ಕಡೆ ಹೆಸರಿನ ಹಿಂದೆ ‘ಧರ್ಮದರ್ಶಿ’ ಎಂದು ಸೇರಿಸಿಕೊಳ್ಳುತ್ತಿದ್ದರು. ಕನ್ನಡ ಸಂಘರ್ಷ ಸಮಿತಿ ಇದನ್ನು ತೀವ್ರವಾಗಿ ವಿರೋಧಿಸಿತ್ತು.

ಯಾವುದೋ ದೇವಸ್ಥಾನಕ್ಕೆ ಧರ್ಮದರ್ಶಿಯಾದವರು ಪರಿಷತ್ತಿಗೆ ಧರ್ಮದರ್ಶಿ ಅಲ್ಲ ಎಂಬುದು ಸಮಿತಿಯ ಆಕ್ಷೇಪವಾಗಿತ್ತು.  ಇದರ ಜೊತೆಗೆ ಮುಲ್ಕಿಯಲ್ಲಿರುವ ತಮ್ಮ ಮನೆಯ ಹೆಸರು ‘ಶುಭವಾಗಲಿ’ ಎಂಬುದನ್ನು ಪರಿಷತ್ತಿನ ನಾಮಫಲಕ ಮತ್ತು ಪ್ರಕಟಣೆಗಳಲ್ಲೂ ಬಳಸತೊಡಗಿದ್ದರು ಪುನರೂರು. ಅದಕ್ಕೂ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಇವೆಲ್ಲಾ ಕಾರಣಗಳಿಂದ ಸಮಿತಿಯ ಸದಸ್ಯರ ಮೇಲೆ ಪುನರೂರು ಅವರಿಗೆ ವೈಮನಸ್ಸು ಇತ್ತು’ ಎಂದು ವಾದಿಸಿದೆ.

‘ಜಿ.ನಾರಾಯಣ ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗಲೇ ನಾಡಗೀತೆಯಲ್ಲಿ ಮಧ್ವರು ಹಾಗೂ ಕುಮಾರವ್ಯಾಸರ ಹೆಸರುಗಳನ್ನು ಸೇರಿಸಿದ್ದರು. ಈ ಗೀತೆಯನ್ನು ನಾಡಗೀತೆಯಾಗಿ ಅಂಗೀಕರಿಸಿ ಪರಿಷತ್ತಿನ ಸಮ್ಮೇಳನ, ಸಭೆ ಸಮಾರಂಭಗಳ ಆರಂಭದಲ್ಲಿ ಪ್ರಾರ್ಥನೆಯ ಬದಲಿಗೆ ಹಾಡಿಸುವುದನ್ನು ಆಗಲೇ ರೂಢಿಗೆ ತಂದಿದ್ದರು. ಅವರ ಕಾಲದಲ್ಲಿ ಪ್ರಕಟವಾಗಿದ್ದ ‘ಕನ್ನಡ ರತ್ನಕೋಶ’ದಲ್ಲಿ ಮುದ್ರಿಸಿದ್ದ ನಾಡಗೀತೆಯಲ್ಲಿ ಈ ಸೇರ್ಪಡೆಯನ್ನು ಕಾಣಿಸಿದ್ದರು. ಆದರೆ ಮುಂದೆ ಪರಿಷತ್ತು ಪ್ರಕಟಿಸಿದ್ದ ‘ರತ್ನಕೋಶ’ದಲ್ಲಿ ಹಾಗೂ ಹೊರತಂದ ಧ್ವನಿಸುರುಳಿಯಲ್ಲೂ ಈ ಹೆಸರುಗಳು ಬಿಟ್ಟುಹೋಗಿದ್ದವು.

ಈ ಎಲ್ಲಾ ಸಂದರ್ಭಗಳಲ್ಲಿ ದಕ್ಷಿಣ ಕನ್ನಡ ಘಟಕದ ಅಧ್ಯಕ್ಷರಾಗಿ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಪುನರೂರು ಅವರು ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಶತಮಾನೋತ್ಸವ ವರ್ಷಾಚರಣೆ ಸಮಿತಿಯ ಸದಸ್ಯರಾದ ಸಂದರ್ಭದಲ್ಲಿ ‘ಜೈ ಭಾರತ...’ ಗೀತೆಯನ್ನು ನಾಡಗೀತೆಯನ್ನಾಗಿ ಅಂಗೀಕರಿಸುವ ಸಂದರ್ಭದಲ್ಲಿಯೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ, ಉದ್ಘಾಟನಾ ಸಮಾರಂಭದಲ್ಲಿ ಗೊಂದಲ ಸೃಷ್ಟಿಸಿದ್ದು ಕುವೆಂಪು ವರ್ಷಾಚರಣೆ ಯಶಸ್ವಿಯಾಗಿ ಹಾಗೂ ಸಾಂಗವಾಗಿ ನಡೆಯಬಾರದೆಂಬ ದುರುದ್ದೇಶದಿಂದ ಎಂದು ಸಾಬೀತಾಗುತ್ತದೆ’ ಎಂದೆ.

ಹಲವು ಸೈದ್ಧಾಂತಿಕ ಕಾರಣಗಳಿಗಾಗಿ ಪ್ರತಿಭಟಿಸುತ್ತಿದ್ದ ಸಂಘರ್ಷ ಸಮಿತಿಯ ಪದಾಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಪುನರೂರು ಅವರು ಸುಳ್ಳು ದೂರನ್ನು ನೀಡಿದ್ದರು. ಇದರ ಬಗ್ಗೆ ಎಲ್ಲಾ ಸಾಕ್ಷ್ಯಾಧಾರ ಕಲೆ ಹಾಕಿದ್ದೆ. ಅವುಗಳನ್ನು ಸಾಬೀತುಪಡಿಸಲು ತಕ್ಕ ಸಿದ್ಧತೆಯೊಂದಿಗೆ ಕಾತರನಾಗಿ ಅವಕಾಶಕ್ಕೆ ಕಾಯುತ್ತಿದ್ದೆ. ಆದರೆ ನನಗೆ ಅವಕಾಶವೇ ಸಿಗಲಿಲ್ಲ. ಏಕೆಂದರೆ ಪುನರೂರು ಅವರಿಗೆ ನ್ಯಾಯಾಲಯ ಅನೇಕ ಬಾರಿ ಸಮನ್ಸ್ ಮತ್ತು ವಾರಂಟ್‌ ಜಾರಿ ಮಾಡಿದ್ದರೂ ಪೊಲೀಸರು ಅವರನ್ನು ಕೋರ್ಟ್ ಮುಂದೆ ಕರೆತರಲು ವಿಫಲರಾಗಿದ್ದರು. ವಿಚಾರಣೆ ಮುಗಿಯುವವರೆಗೂ ಅವರು ಕೋರ್ಟ್‌ಗೆ ಬರಲೇ ಇಲ್ಲ!

ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಾಂಬ್ರಾಣಿ, ಆರೋಪಿಗಳನ್ನು ಆರೋಪದಿಂದ ಮುಕ್ತಗೊಳಿಸಿದರು. ಈ ಆದೇಶದಿಂದ ಪುನರೂರು ಸ್ವಲ್ಪ ಶಾಕ್‌ ಆಗಿದ್ದರೇನೊ. ಅದಕ್ಕಾಗಿ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ, ಎಲ್ಲ ಆರೋಪಿಗಳಿಗೂ ಶಿಕ್ಷೆಯಾಗುವಂತೆ ಮಾಡುವುದಾಗಿ ಬಡಬಡಿಸುತ್ತಿದ್ದರು ಎಂಬ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ನಾನೂ ಎಲ್ಲಾ ಸಾಕ್ಷ್ಯಾಧಾರ ಇಟ್ಟುಕೊಂಡು ಸಮಯಕ್ಕಾಗಿ ಕಾಯುತ್ತಿದ್ದೆ.

ಆದರೆ ನನಗೆ ಆ ಅವಕಾಶ ಸಿಗಲೇ ಇಲ್ಲ. ಏಕೆಂದರೆ ಪುನರೂರು ಅವರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಧೈರ್ಯ ಮಾಡಲೇ ಇಲ್ಲ...!
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT