ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ಸಾಹಿತ್ಯದ ನಾಯಕತ್ವ ವಹಿಸಲು ಸಿದ್ಧ: ಬರಗೂರು

Last Updated 4 ಡಿಸೆಂಬರ್ 2016, 20:01 IST
ಅಕ್ಷರ ಗಾತ್ರ

ಶಾಂತರಸ ಪ್ರಧಾನ ವೇದಿಕೆ (ರಾಯಚೂರು): ‘ಬಂಡಾಯ ಸಾಹಿತ್ಯ ಚಳವಳಿಯ ನಾಯಕತ್ವವನ್ನು ಮತ್ತೆ ವಹಿಸಲು ಸಿದ್ಧ’ ಎಂದು ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು. ಸಾಹಿತ್ಯ ಸಮ್ಮೇಳನ ಕೊನೆಯ ದಿನವಾದ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಆಳಂದ ಶಾಸಕ ಬಿ.ಆರ್.ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿ, ‘ಈಗಲೂ ಸಿದ್ಧ. ಆದರೆ, ನಾನೇ ನಾಯಕತ್ವ ವಹಿಸಬೇಕಾ? ಯುವಕರು ಈ ಜವಾಬ್ದಾರಿ ವಹಿಸಿದರೆ, ಅವರಿಗೆ ಮಾರ್ಗದರ್ಶನ ನೀಡಲು ಸಿದ್ಧನಿದ್ದೇನೆ' ಎಂದರು.

‘ಬಂಡಾಯ ಸಾಹಿತ್ಯ ಚಳವಳಿ ಸೇರಿದಂತೆ ಎಲ್ಲ ಬಗೆಯ ಪ್ರಗತಿಪರ ಚಳವಳಿಗಳೂ ಈಗ ನಿಷ್ಕ್ರಿಯವಾಗಿವೆ. ಇಂದಿನ ಸನ್ನಿವೇಶದಲ್ಲಿ ಬಂಡಾಯ ಸಾಹಿತ್ಯ ಚಳವಳಿಯನ್ನು ಮತ್ತೆ ಸಕ್ರಿಯಗೊಳಿಸುವ ಪ್ರಯತ್ನಗಳು ನಡೆದಿವೆ. ಅದರ ಫಲಿತಾಂಶವನ್ನು ಇನ್ನು ಕೆಲವೇ ತಿಂಗಳುಗಳಲ್ಲಿ ಕಾಣಬಹುದು. ಇಂದಿನ ಕ್ಲಿಷ್ಟ ಸನ್ನಿವೇಶದಲ್ಲಿ ಪ್ರತಿಗಾಮಿ ಶಕ್ತಿಗಳು ಸಂಘಟಿತರಾಗುತ್ತಿದ್ದರೆ, ಪ್ರಗತಿಶೀಲರು ವಿಘಟಿತರಾಗಿದ್ದಾರೆ. ಪ್ರಗತಿಶೀಲರು ಪುನಃ ಸಕ್ರಿಯರಾಗಬೇಕಾಗಿದೆ’ ಎಂದು ಹೇಳಿದರು.

‘ಹುಸಿ ಕ್ರಾಂತಿ ವೀರರು ಮತ್ತು ಹುಸಿ ಸಂಸ್ಕೃತಿ ವೀರರಿಂದ ದೂರವಿರಬೇಕು. ಇಬ್ಬರೂ ಅಪಾಯಕಾರಿಗಳು. ಜನರ ದಾರಿ ತಪ್ಪಿಸುವ ಇಂತಹವರ ವಿರುದ್ಧ ನಿಲ್ಲಬೇಕು’ ಎಂದು ಹೇಳಿದ ಅವರು, ‘ಮೈಸೂರಿನ ಹುಸಿಕ್ರಾಂತಿಕಾರಿಯೊಬ್ಬ ತಮ್ಮ ಕವಿತೆಯನ್ನು ಓದದೇ ‘ಕಾಂಟೆಸ್ಸಾ ಕಾರಿನಲ್ಲಿ’ ಪದ್ಯದ ಕುರಿತು ವ್ಯಂಗ್ಯವಾಗಿ ಟೀಕೆ ಮಾಡಿದ್ದನ್ನು ನೆನಪಿಸಿಕೊಂಡರು.

‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ, ವಾಹನ ಭತ್ಯೆ ಬಿಟ್ಟು ಬೇರೆ ಯಾವುದೇ ಭತ್ಯೆ ಪಡೆದಿರಲಿಲ್ಲ. ಇಂತಹ ಹುಸಿ ಕ್ರಾಂತಿಕಾರಿಗಳು ಅಪಾಯಕಾರಿಗಳು’ ಎಂದು ಟೀಕಾ ಪ್ರಹಾರ ನಡೆಸಿದರು.

ಬಾಲ್ಯದ ನೆನಪು: ‘ಬಾಲ್ಯದಲ್ಲಿ ನನಗೆ ಡ್ರೈವರ್ ಆಗಬೇಕು ಎಂಬ ಕನಸು ಇತ್ತು. ಇದಕ್ಕೆ ಕಾರಣ ಮನೆಯಲ್ಲಿ ನನ್ನ ತಂದೆ ಅಣ್ಣನನ್ನು ಕಂಡಕ್ಟರ್ ಮಾಡಬೇಕು ಎಂದುಕೊಂಡಿದ್ದರು. ಅಣ್ಣನಿಗಿಂತ ನಾನು ಒಂದು ಹೆಜ್ಜೆ ಮುಂದಕ್ಕೆ ದೊಡ್ಡವನಾಗಬೇಕು ಎಂಬ ಬಯಕೆ ನನ್ನದು. ಹೀಗಾಗಿ ಕೆಂಪು ಬಸ್ಸಿನ ಚಾಲಕನಾಗಬೇಕು ಎಂದು ಕೊಂಡಿದ್ದೆ. ಆದರೆ, ಮನಸ್ಸಿನ ಆಳದಲ್ಲಿ ಅಸ್ಮಿತೆಯ ಭಾವನೆ ಪುಟಿದೆದ್ದಿತ್ತು. ಇದರಿಂದ ಶಾಲೆಯಲ್ಲಿ ಚೆನ್ನಾಗಿ ಓದಲು ಆರಂಭಿಸಿದ್ದು ಮಾತ್ರವಲ್ಲ. ತರಗತಿಯಲ್ಲಿ ಪ್ರತಿ ವರ್ಷವೂ ಮೊದಲಿಗನಾಗಿರುತ್ತಿದ್ದೆ’ ಎಂದು ನೆನಪಿಸಿಕೊಂಡರು.

ಆರೋಗ್ಯದ ಗುಟ್ಟು: ‘ನನ್ನ ಆರೋಗ್ಯ ಚೆನ್ನಾಗಿರಲು ಮುಖ್ಯ ಕಾರಣ ಇನ್ನೊಬ್ಬರ ಕಾಲೆಳೆಯುವ ಗುಣ ನನ್ನಲ್ಲಿ ಇಲ್ಲ. ಹೊಟ್ಟೆಕಿಚ್ಚು ಪಡುವುದಿಲ್ಲ. ಇನ್ನೊಬ್ಬರ ಏಳಿಗೆ ಕಂಡು ಸಂತಸ ಪಡುತ್ತೇನೆ. ಬೆಂಗಳೂರಿನಲ್ಲಿ ಸರಿಯಾದ ಸಮಯದಲ್ಲಿ ಮನೆಗೆ ತಲುಪುವ ಬೆರಳೆಣಿಕೆ ಸಾಹಿತಿಗಳ ಪೈಕಿ ನಾನೂ ಒಬ್ಬ. ಬೇರೆ ಹವ್ಯಾಸಗಳಂತೂ ಇಲ್ಲ. ಕುಟುಂಬದ ಸದಸ್ಯರಿಗೆ ಸಮಯ ಕೊಡುತ್ತೇನೆ.

ರಾತ್ರಿ 9 ಗಂಟೆಯ ಬಳಿಕ ಅಥವಾ ಬೆಳಿಗ್ಗೆ ಮುಂಚೆ ಎದ್ದು ಓದುವ ಅಭ್ಯಾಸವನ್ನು ಇಟ್ಟುಕೊಂಡಿದ್ದೇನೆ. ಸಮಯವನ್ನು ಹೇಗೆ ಬೇಕೊ ಹಾಗೆ ನಿರ್ವಹಿಸುತ್ತೇನೆ. ಇವೆಲ್ಲದರ ಜೊತೆಗೆ ಸಾಹಿತಿಯೂ ಹೌದು, ಚಳವಳಿಗಾರನೂ ಹೌದು ಮತ್ತು ಸಿನಿಮಾಗಳನ್ನೂ ಮಾಡಿದ್ದೇನೆ. ಒಳ್ಳೆ ಸಾಹಿತಿ ಹೌದೊ ಅಲ್ಲವೋ ಎಂಬುದನ್ನು ವಿಮರ್ಶಕರು ನಿರ್ಧರಿಸುತ್ತಾರೆ. ಆದರೆ, ಒಳ್ಳೆಯ ಮನುಷ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ' ಎಂದು ಹೇಳಿದರು.

ವ್ಯಕ್ತಿ ಶ್ರೇಷ್ಠ ಅನ್ನೋದು ಬಿಡಬೇಕು: ‘ಸಮಾಜ ಮತ್ತು ಸಾಹಿತ್ಯದ ನಡುವೆ ನಿಕಟ ಸಂಬಂಧ ಇರಬೇಕು. ದಲಿತ ಬಂಡಾಯ ಸಾಹಿತ್ಯಗಳಿಂದ ಅದು ಸಾಧ್ಯವಾಯಿತು.ಸಾಹಿತಿಗಳ ಅಂತರಂಗ ಮತ್ತು ಬಹಿರಂಗ ಬೇರೆ ಇರಬಾರದು. ಏಕೆಂದರೆ ಇವೆರಡೂ ಬೇರೆ ಅಲ್ಲ. ಅಂತರಂಗದ ಕುಲುಮೆಯಲ್ಲಿ ಇದ್ದದ್ದು ಬಹಿರಂಗಕ್ಕೆ ಬರಬೇಕು. ಅದು ಬರಹದ, ಚಿತ್ರದ ಮೂಲಕ ವ್ಯಕ್ತಗೊಳ್ಳಬೇಕು. ವ್ಯಕ್ತಿ ಶ್ರೇಷ್ಠ ಎನ್ನೋದನ್ನು ಬಿಡಬೇಕು.

ಸಾಹಿತಿ ಸಮಾಜದಿಂದ ವಿಮುಖಗೊಳ್ಳಬಾರದು. ಹಿಂದೊಮ್ಮೆ ಸಾಹಿತಿಗಳು ಬೀದಿಗೆ ಬರಬೇಕು ಎಂದು ಹೇಳಿದ್ದೆ. ಇದರ ಅರ್ಥ ಮುಜುಗರ ಬಿಟ್ಟು ಜನರ ಜೊತೆ ಬೆರೆಯಬೇಕು ಎಂಬುದಾಗಿತ್ತು. ಆದರೆ, ಬೀದಿಗೆ ಬಂದ ಕೆಲವು ಸಾಹಿತಿಗಳು ಮನೆಗೆ ಹೋಗಲೇ ಇಲ್ಲ’ ಎಂದು ಚಟಾಕಿ ಹಾರಿಸಿದರು.

ಸಾಹಿತಿಗಳ ಕುರಿತು ಅಪನಂಬಿಕೆ: ‘ಒಂದು ಕಾಲದಲ್ಲಿ ಶಿಕ್ಷಕರು, ಸಾಹಿತಿಗಳ ಬಗ್ಗೆ ಜನರಲ್ಲಿ ಗೌರವ ಇತ್ತು ಈಗ ಅದು ಕಡಿಮೆ ಆಗಿದೆ. ಸಾಹಿತಿಗಳಲ್ಲಿ ಅಪನಂಬಿಕೆ ಮೂಡಲು ಸಾಹಿತಿಗಳೇ ಕಾರಣರು. ಅದಕ್ಕೆ ಮುಖ್ಯವಾಗಿ ಅವರ ಚರಿತ್ರೆಯೂ ಕಾರಣ’ ಎಂದರು.

ಕನಸು ಕಾಣುವುದನ್ನು ಬಿಡಬೇಡಿ: ‘ಏಕಲವ್ಯನಂತೆ ಬೆಳೆದು ಬಂದ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವ ಕನಸು ಎಂದೂ ಕಂಡಿರಲಿಲ್ಲ. ಬೆವರಿನ ಸಂಸ್ಕೃತಿಯ ಹಿನ್ನೆಲೆಯಿಂದ ನಾವೂ ಕೂಡ ಇಂತಹ ಸ್ಥಾನ ಏರಬಹುದು ಎಂಬುದಕ್ಕೆ ನಾನೇ ಉದಾಹರಣೆ. ಹೀಗಾಗಿ ಕನಸು ಕಾಣುವುದನ್ನು ಯಾರೂ ಬಿಡಬಾರದು. ಮೂರನೇ ತರಗತಿಯಷ್ಟೇ ಓದಿದ್ದ ಡಾ. ರಾಜ್‌ಕುಮಾರ್‌ ಅವರಿಗೆ ಜಾತಿ ಹಿನ್ನೆಲೆ ಇರಲಿಲ್ಲ, ಹಣವೂ ಇರಲಿಲ್ಲ. ಆದರೆ, ಅವರ ಶ್ರಮ, ಶ್ರದ್ಧೆ ಮತ್ತು ಸವಾಲುಗಳನ್ನು ಎದುರಿಸಿದ ರೀತಿಯೇ ಅವರು ಅತ್ಯಂತ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು' ಎಂದು ಬರಗೂರು ರಾಮಚಂದ್ರಪ್ಪ  ಅವರು ಹೇಳಿದರು.

ಅಧ್ಯಕ್ಷರಿಗೆ ಮಗುವನ್ನು ಮುಟ್ಟಿಸಿದ ಕ್ಷಣ!
ಶುಕ್ರವಾರ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಂದರ್ಭದಲ್ಲಿ ಅಜ್ಜಿಯೊಬ್ಬಳು ತನ್ನ ಎರಡೂವರೆ ವರ್ಷದ ಮೊಮ್ಮಗುವನ್ನು ಬರಗೂರು ರಾಮಚಂದ್ರಪ್ಪ ಅವರಿಂದ ಮುಟ್ಟಿಸಲು ತುಂಬಾ ಪ್ರಯತ್ನಿಸಿದ್ದಳು. ಆದರೆ, ಜನಜಂಗುಳಿ ಇದ್ದ ಕಾರಣ ಅದು ಸಾಧ್ಯವಾಗದೇ ಹತಾಶೆಗೊಂಡಿದ್ದಳು. ಆಗ ಬರಗೂರು ಅವರ ಗೆಳೆಯರು ಈ ವಿಷಯ ತಿಳಿದುಕೊಂಡು ಮಗುವನ್ನು  ಅವರ ಬಳಿ ಒಯ್ದು ಮುಟ್ಟಿಸುವಲ್ಲಿ ಸಫಲರಾದರು. ಅದರಿಂದ ಅಜ್ಜಿ ಮತ್ತು ಮಗುವಿನ ತಾಯಿ ಸಂತಸಗೊಂಡಿದ್ದನ್ನು ಕಾರ್ಯಕ್ರಮ ನಿರ್ವಹಣೆ ಮಾಡಿದ ಸರಜೂ ಕಾಟ್ಕರ್ ಸ್ಮರಿಸಿದರು.

ಸಿನಿಮಾ ಟಿಕೆಟ್ ದರ ನಿಯಂತ್ರಣಕ್ಕೆ ಒತ್ತಾಯ
ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು ನಿಯಂತ್ರಿಸಲು ಸಿನಿಮಾಟೋಗ್ರಫಿಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
ಪತ್ರಕರ್ತ ಜೋಗಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು ‘ಮಲ್ಟಿಪ್ಲೆಕ್ಸ್‌ಗಳಿಗೆ ಮಧ್ಯಮ ವರ್ಗದ ಕುಟುಂಬಗಳು ಹೋಗಿ ಸಿನಿಮಾ ನೋಡಲು ಸಾಧ್ಯವಿಲ್ಲ. ಕನಿಷ್ಠ ಒಂದು ಸಾವಿರ ರೂಪಾಯಿ ಬೇಕಾಗುತ್ತದೆ. ತಮಿಳುನಾಡಿನಲ್ಲಿ ಪ್ರವೇಶ ದರವನ್ನು ನಿಯಂತ್ರಿಸಲಾಗಿದೆ. ಅದೇ ರೀತಿ ನಮ್ಮಲ್ಲೂ ನಿಯಂತ್ರಣ ಏತಕ್ಕೆ ತರಬಾರದು’ ಎಂದು ಅವರು ಪ್ರಶ್ನಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT