ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಮು ಚುಮು ಚಳಿಗೆ ಮುದುಡಿದ ನಗರ

ಹೇಮಂತ ಋತುವಿನ ಹವಾಮಾನ; ಜೀವನ ಶೈಲಿ ವ್ಯತ್ಯಯ
Last Updated 5 ಡಿಸೆಂಬರ್ 2016, 9:21 IST
ಅಕ್ಷರ ಗಾತ್ರ

ಕೊಪ್ಪಳ:  ನಗರದಲ್ಲಿ ಚುಮುಚುಮು ಚಳಿ ಏರಿಬಿಟ್ಟಿದೆ. ಒಟ್ಟಾರೆ ಉಷ್ಣಾಂಶವೂ ಗಣನೀಯವಾಗಿ ಕುಸಿದಿದೆ. ಸುಮಾರು 19ರಿಂದ 21 ಡಿಗ್ರಿ ಆಸುಪಾಸಿನಲ್ಲಿದೆ. ಬೆಳಗಿನ ಜಾವ, ಸಂಜೆ ವೇಳೆ ತಂಪು ಹವೆ ಇದೆ.

ಈ ಭಾಗದ ಹವಾಮಾನವೇ ಭಿನ್ನವಾದದ್ದು. ಬೇಸಗೆಯಲ್ಲಿ  ಉರಿಬಿಸಿಲು, ಚಳಿಗಾಲದಲ್ಲಿ ಅತಿ ಎನಿಸುವಷ್ಟು ಚಳಿ. ಆದರೆ, ಈ ಬಾರಿ ಪೂರ್ಣ ಪ್ರಮಾಣದ ಮಳೆಯೂ ಇಲ್ಲ ಅದೇ ರೀತಿ ಚಳಿಯೂ ಕಾಣಿಸಿಲ್ಲ. ಈ ವರ್ಷವಂತೂ ಹವಾಮಾನವೇ ವಿಚಿತ್ರವಾಗಿದೆ ಎಂದು ನಗರದ ಹಿರಿಯ ನಾಗರಿಕರೊಬ್ಬರು ಹೇಳಿದರು. ಬೆಳಗಿನ ಜಾವ ವಿಹಾರಕ್ಕೆ ಬರುವವರು ಸ್ವಲ್ಪ ತಡವಾಗಿ ಬರುತ್ತಿದ್ದಾರೆ.

ಸಂಜೆ ಚಳಿ ಏರುವ ಮುನ್ನ ಗೂಡು ಸೇರುವ ತವಕ ಎಲ್ಲರದ್ದು. ಸಹಜವಾಗಿ ಸ್ವೆಟರ್‌, ಚಳಿ ಉಡುಗೆಗಳಿಗೆ, ಮಾಂಸಾಹಾರಕ್ಕೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ವ್ಯಾಪಾರಿಗಳು.

ಮದ್ಯ ಮಾರಾಟದಲ್ಲಿಯೂ ಅಲ್ಪ ಪ್ರಮಾಣದ ಏರಿಕೆ ಆಗಿದೆ ಎನ್ನಬಹುದಾದರೂ ನಗದು ಚಲಾವಣೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಮದ್ಯ ವ್ಯಾಪಾರಿಯೊಬ್ಬರು ವಿವರಿಸಿದರು.

ಬದಲಾದ ಹವಾಮಾನಕ್ಕೆ ತಕ್ಕಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳೂ ಕಾಣಿಸಿವೆ. ನೆಗಡಿ, ಕೆಮ್ಮು, ಅಲ್ಪ ಪ್ರಮಾಣದ ಮೈ,ಕೈ ನೋವು ಈ ಕಾಲದ ಸಹಜ ಸಮಸ್ಯೆಗಳು ಎನ್ನುತ್ತಾರೆ ವೈದ್ಯರು. 

ಸಂಜೆ ವೇಳೆ ಬಿಸಿ ಬಿಸಿಯಾಗಿ ಕರಿದ ತಿನಿಸುಗಳಿಗೆ ಬೇಡಿಕೆ ಹೆಚ್ಚಿದೆ. ಮಿರ್ಚಿ, ಆಲೂ ಬೋಂಡಾ, ಗಿರ್ಮಿಟ್‌ ಅಂಗಡಿಗಳ ಮುಂದೆ ಜನದಟ್ಟಣೆ ಇದೆ.
ಟೀ ಪಾಯಿಂಟ್‌ಗಳು ನಸುಕಿನಿಂದಲೇ ಭರ್ತಿಯಾಗುತ್ತಿವೆ. ಪಕ್ಕದಲ್ಲಿಯೇ ಸಣ್ಣ ಪ್ರಮಾಣದ ಅಗ್ಗಿಷ್ಟಿಕೆ ಹಾಕಿ ಬೆಂಕಿ ಮುಂದೆ ಕುಳಿತು ಬಿಸಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯ.

ಎಲ್ಲರ ಜೀವನ ಶೈಲಿ ಅಲ್ಪ ಪ್ರಮಾಣದ ಬದಲಾವಣೆ ಕಂಡಿದೆ. ಆದರೆ, ಪೌರಕಾರ್ಮಿಕರು, ಎಪಿಎಂಸಿ ಹಮಾಲರು, ತರಕಾರಿ ವ್ಯಾಪಾರಿಗಳು, ನಿತ್ಯ ಕೂಲಿ ಅವಲಂಬಿಸಿ ಬದುಕುವವರ ದಿನಚರಿ  ಮಾತ್ರ ಸೂರ್ಯೋದಯಕ್ಕೆ ಮುನ್ನವೇ ಆರಂಭವಾಗಿಬಿಡುತ್ತದೆ.

ಚಳಿ ಏನಿದ್ದರೂ ಬೆಳಿಗ್ಗೆ 7ರವರೆಗೆ ಮಾತ್ರ, ಸೂರ್ಯ ಮೇಲೇರುತ್ತಿದ್ದಂತೆಯೇ ಜನ ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ನಿರತರಾಗುವುದನ್ನು                ಕಾಣಬಹುದು. ಫೆಬ್ರುವರಿ ಮೊದಲ ವಾರದವರೆಗೆ ಇದು ಸಾಮಾನ್ಯ ನೋಟ. ನಂತರ ಬಿಸಿಲು ಎದುರಿಸಲು ಸಿದ್ಧರಾಗುವುದು ಜನರ ಬದುಕಿನ ಅನಿವಾರ್ಯತೆ.

*
ಹವಾಮಾನ ವೈಪರಿತ್ಯ ಜಾಗತಿಕ ಮಟ್ಟದ ಸಮಸ್ಯೆ. ಚಳಿಗಾಲದಲ್ಲಾಗಿರುವ ವಾತಾವರಣ ವ್ಯತ್ಯಾಸದಲ್ಲೂ ಇದನ್ನು ಗುರುತಿಸಬಹುದು.
-ಗೋವಿಂದರಾವ್‌,
ಹಿರಿಯ ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT