ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರಿಯತೆಯ ಉತ್ತುಂಗದ ವ್ಯಕ್ತಿಕೇಂದ್ರಿತ ರಾಜಕಾರಣಕ್ಕೆ ವಿದಾಯ

Last Updated 6 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯರಾಂ ಜಯಲಲಿತಾ ಅವರ ನಿಧನದೊಂದಿಗೆ ಆ ರಾಜ್ಯದ ರಾಜಕಾರಣದ ಚಾರಿತ್ರಿಕ ಅಧ್ಯಾಯವೊಂದು ಅಂತ್ಯಗೊಂಡಿದೆ.ದೇಶದ ಸ್ವಾತಂತ್ರ್ಯೋತ್ತರ ರಾಜಕೀಯ ಇತಿಹಾಸದಲ್ಲಿ  ಯಾರೂ ಕಡೆಗಣಿಸಲಾಗದ ಛಾಪು ಅವರದು.

ಸಿನಿಮಾ ನಟಿಯಾಗಿದ್ದವರು ರಾಜಕಾರಣದಲ್ಲೂ ಸೈ ಎನಿಸಿಕೊಂಡು ರಾಜ್ಯವೊಂದರ ಚುಕ್ಕಾಣಿ ಹಿಡಿದು  ದಶಕಗಳ ಕಾಲ ಮುನ್ನಡೆಸುವುದು, ಮಹಿಳೆಯರು ಮತ್ತು ಬಡವರ ಪಾಲಿನ ಆರಾಧ್ಯದೈವವಾಗಿ  ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸುವುದು ಸಣ್ಣ ಸಂಗತಿಯಲ್ಲ. ಅವರ ಈ ದಾರಿ ಹೂವಿನ ಹಾಸಿಗೆಯಂತೂ ಆಗಿರಲಿಲ್ಲ.  ಸಾಕಷ್ಟು ಮುಳ್ಳುಗಳೂ ಇದ್ದವು.

ಸಂಕೋಚ, ನೋವು, ಅವಮಾನಗಳನ್ನೆಲ್ಲ ಮೆಟ್ಟಿ ನಿಂತು  ರಾಜಕಾರಣದಲ್ಲಿ ಅವರು ಬೆಳೆದು ಬಂದ ಬಗೆ, ಅವರ ಕಾರ್ಯವೈಖರಿ, ಆಲೋಚನಾ ವಿಧಾನ, ಗುಣಾವಗುಣಗಳು... ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಅವರನ್ನು ಇನ್ನೊಬ್ಬರ ಜತೆ ಹೋಲಿಸಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದಾಗ ರಾಷ್ಟ್ರ ಮಟ್ಟಕ್ಕೂ ಅವರ ಪ್ರಭಾವ ವಿಸ್ತರಿಸಿತು.

ಆದರೆ ಅದನ್ನು ತನ್ನ ರಾಜ್ಯದ ನೆಲ, ಜಲ, ಭಾಷೆಯ ಹಿತ ಕಾಪಾಡಿಕೊಳ್ಳಲು ಸಮರ್ಥವಾಗಿ ಅವರಂತೆ ಬಳಸಿಕೊಂಡವರು ಅಪರೂಪ. ಈ ಸಂದರ್ಭದಲ್ಲಿ ಅವರು ‘ಹಟಮಾರಿ, ಮೊಂಡು ಮಹಿಳೆ’ ಎಂಬ ಟೀಕೆ ಟಿಪ್ಪಣಿಗಳನ್ನು ಕೇಳಬೇಕಾಗಿ ಬಂತು. ಆದರೆ ಅದ್ಯಾವುದನ್ನೂ ಲೆಕ್ಕಿಸದೆ, ತಮಗೆ ಸರಿ ಅನಿಸಿದ್ದನ್ನು ಮಾಡುತ್ತ ಬಂದದ್ದು ಅವರ ವಿಶೇಷ.   

ತಮಿಳುನಾಡಿನ ಜನರಿಗೆ  ‘ಅಮ್ಮ’ನೇ ಆದರು ಜಯಲಲಿತಾ.  ತಮಿಳುನಾಡಿನ ಜನರ ಹೃದಯಾಂತರಾಳಗಳಲ್ಲಿ  ಅವರು ಪ್ರತಿಷ್ಠಾಪಿತರಾದದ್ದು ಕಡಿಮೆ ಸಾಧನೆಯಲ್ಲ.ಹೆಸರಿಗೆ ತಕ್ಕಂತೆ ಬಡವರಿಗಾಗಿ, ಮಹಿಳೆಯರಿಗಾಗಿ  ಮಿಡಿಯುತ್ತಿದ್ದ ಮಾತೃಹೃದಯ ಅವರದು. ಆದರೆ ಅಷ್ಟೇ ಬಲವಾಗಿ ವಿವಾದವನ್ನೂ ಸುತ್ತಿಕೊಂಡವರು ಅವರು. ಒಂದು ಕಡೆ ‘ಅಮ್ಮ’ ಹೆಸರಿನಲ್ಲಿ ಜನಪ್ರಿಯ ಯೋಜನೆಗಳನ್ನು ರೂಪಿಸುತ್ತ ತಮ್ಮ ವೋಟ್‌ ಬ್ಯಾಂಕ್‌ ಭದ್ರಪಡಿಸಿಕೊಂಡರು. ಆದರೆ ಮತ್ತೊಂದು ಕಡೆ ಭ್ರಷ್ಟಾಚಾರದ ಕೆಸರನ್ನು  ಮೆತ್ತಿಸಿಕೊಂಡರು. ಇದೇ ಕಾರಣಕ್ಕಾಗಿ ಬೆಂಗಳೂರಿನ ಕಾರಾಗೃಹದಲ್ಲೂ ಅವರು ಕೆಲ ದಿನಗಳನ್ನು ಕಳೆಯಬೇಕಾಗಿ ಬಂತು.

ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ ರಾಜಕಾರಣ ವಿಶಿಷ್ಟ. ಎರಡೂ ಪಕ್ಷಗಳ ನೇತೃತ್ವವನ್ನು ವಹಿಸಿದವರೂ ಮೇರುನಾಯಕರೇ. ಹೀಗಾಗಿ ತೀವ್ರವಾದ ಪ್ರತಿಸ್ಪರ್ಧಿತನವೂ ಗೋಚರ. ಡಿಎಂಕೆ ನಾಯಕ ಕರುಣಾನಿಧಿ ಮತ್ತು ಎಐಎಡಿಎಂಕೆಯ ಅಧಿನಾಯಕಿಯಾದ ಜಯಲಲಿತಾ ಅವರ ನಡುವಿನ ರಾಜಕೀಯ ದ್ವೇಷಾಸೂಯೆಗಳಂತೂ ತೀರಾ ಕೆಳಮಟ್ಟಕ್ಕೂ ಹೋಗಿದ್ದವು.    ಈ ಇಬ್ಬರು ನಾಯಕರು   ಅನುಯಾಯಿಗಳ ಪಡೆಯನ್ನೇ ಹೊಂದಿದ್ದಾರೆ.  92 ವರ್ಷ ವಯಸ್ಸಿನ ಕರುಣಾನಿಧಿಯವರು ಸದ್ಯಕ್ಕೆ  ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು  ಚೇತರಿಸಿಕೊಳ್ಳುತ್ತಿದ್ದಾರೆ.

ಜಯಲಲಿತಾ ನಿರ್ಗಮನ ಒಂದು ರಾಜಕೀಯ ಪಕ್ಷವಾಗಿ ಎಐಎಡಿಎಂಕೆಯಲ್ಲಿ ಶೂನ್ಯವನ್ನೇ  ಸೃಷ್ಟಿಸಿದಂತಾಗಿದೆ. ಆದರೆ ಆ ಪಕ್ಷದಲ್ಲಿ ಇದೇನೂ ಹೊಸದಲ್ಲ. ಜಯಲಲಿತಾ ಅವರ ರಾಜಕೀಯ ಗುರು ಎಂ.ಜಿ. ರಾಮಚಂದ್ರನ್‌ ನಿಧನರಾದ ಸಂದರ್ಭದಲ್ಲಿಯೂ  ಇಂಥದೇ ಪರಿಸ್ಥಿತಿ ಇತ್ತು. ರಾಜಕೀಯವಾಗಿ ಜಯಲಲಿತಾ ಆಗ ಅಷ್ಟೇನೂ ಬೆಳೆದಿರಲಿಲ್ಲ.

ಮೂರೇ ವರ್ಷದಲ್ಲಿ ಪಕ್ಷವನ್ನು ಜಯಲಲಿತಾ ಗಟ್ಟಿ ಮಾಡಿದರು. ಚುನಾವಣೆಯಲ್ಲಿ ಗೆದ್ದರು. ಅಧಿಕಾರ  ರಾಜಕಾರಣದಲ್ಲಿ ಸಹಜವಾದ ಏಳು ಬೀಳುಗಳನ್ನು ಅನುಭವಿಸಿದರೂ, ಅರಗಿಸಿಕೊಂಡು ಸ್ವತಃ ಕಲಿಯುತ್ತ ಮುಂದೆ ಬಂದದ್ದು ಅವರ ಹೆಚ್ಚುಗಾರಿಕೆ.  ಪನ್ನೀರ್ ಸೆಲ್ವಂ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಈಗ ಅಧಿಕಾರ ವಹಿಸಿಕೊಂಡಿದ್ದಾರೆ.

ಜಯಲಲಿತಾ ಅವರು ಜೈಲು ಸೇರಿದ್ದ ಸಂದರ್ಭದಲ್ಲೂ ಜಯಲಲಿತಾ ಬಂಟರಾಗಿ ಪನ್ನೀರ್‌ ಸೆಲ್ವಂ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಟೀಕೆಗಳನ್ನು ಸಹಿಸದಂತಹ  ಜಯಲಲಿತಾ ಬೆಳೆಸಿದಂತಹ  ರಾಜಕಾರಣದ ಮಾದರಿಯಲ್ಲಿ  ಎರಡನೇ ಹಂತದ ನಾಯಕರನ್ನು ಬೆಳೆಸುವ ಪ್ರಶ್ನೆಯೇ ಇಲ್ಲ ಎನ್ನಬಹುದು.

ಏಕಮೇವಾದ್ವಿತೀಯರಾಗಿ ಏಕಾಂಗಿಯಾಗಿ ಪಕ್ಷವನ್ನು ಮುನ್ನಡೆಸಿದ್ದರು ಜಯಲಲಿತಾ. ಹೀಗಾಗಿ ಅವರ ಸಾಮರ್ಥ್ಯಕ್ಕೆ ಅನುಗುಣವಾದ ಉತ್ತರಾಧಿಕಾರಿ ಗೋಚರಿಸುತ್ತಿಲ್ಲ ಎಂಬುದು ನಿಜ. ಆದರೆ ಇದರಿಂದಾಗಿ ಸ್ಥಗಿತತೆಗೆ ಸಿಲುಕಿರುವ ರಾಜಕಾರಣದಲ್ಲಿ ಹೊಸ ನೀರು ಹರಿಯುವುದೇ?

ತಮಿಳುನಾಡಿನ ರಾಜಕೀಯ ಸ್ವರೂಪದಲ್ಲಿ ಅಪಾರ ಬದಲಾವಣೆಗಳಾಗುವುವೇ? ಭಾವನಾತ್ಮಕವಾಗಿ ಜನರನ್ನು ಸಮ್ಮೋಹನಗೊಳಿಸುವಂತಹ  ನಾಯಕತ್ವ  ಮತ್ತೆ ಸೃಷ್ಟಿಯಾಗುವುದು ಸಾಧ್ಯವೆ? ಅಥವಾ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಅವಕಾಶಗಳು ತೆರೆದುಕೊಳ್ಳುವುವೇ ಎಂಬುದನ್ನು ಕಾಲವೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT