ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಕಶ್ಯಪ್‌

Last Updated 9 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಜೆಜು, ಕೊರಿಯಾ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಪಿ. ಕಶ್ಯಪ್ ಕೊರಿಯಾ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ಮೊದಲ ಬಾರಿಗೆ ಫಾರ್ಮ್‌ ಕಂಡುಕೊಂಡು ಆಡುತ್ತಿರುವ ಕಶ್ಯಪ್‌ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ 18–21, 21–8, 21–16ರಲ್ಲಿ ಕೊರಿಯಾದ ಜಾನ್‌ ಹೆಯಾಕ್‌ ಜಿನ್ ಎದುರು ಗೆದ್ದರು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದ ಕಶ್ಯಪ್‌ ಆರನೇ ಶ್ರೇಯಾಂಕದ ಜಿನ್‌ ಎದುರು 1 ಗಂಟೆಯಲ್ಲಿ  ಪಂದ್ಯ ಜಯಿಸಿದರು.
ಮುಂದಿನ ಪಂದ್ಯದಲ್ಲಿ ಕಶ್ಯಪ್‌ ಕೊರಿಯಾದ ಅಗ್ರ ಶ್ರೇಯಾಂಕದ ಆಟಗಾರ ಸನ್‌ ವಾನ್‌ ಹೊ ಎದುರು ಆಡಲಿದ್ದಾರೆ.

ಮೊದಲ ಗೇಮ್‌ನಲ್ಲಿ ಕಶ್ಯಪ್‌ 9–5, 11–8ರಲ್ಲಿ ಮುನ್ನಡೆ ಹೊಂದಿದ್ದರು. ಆದರೆ ಜಿನ್‌ 11–11ರಲ್ಲಿ ಸಮಬಲ ಮಾಡಿಕೊಂಡರು. ಇಲ್ಲಿಂದ ಮುಂದೆ ಕೊರಿಯಾದ ಆಟಗಾರ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡು ಕಶ್ಯಪ್‌ಗೆ ಮುನ್ನಡೆಯ ಅವಕಾಶ ನೀಡಲಿಲ್ಲ. 18–19ರಲ್ಲಿ ಮುಂದಿದ್ದ ಜಿನ್ ಅವರನ್ನು ಭಾರತದ ಆಟಗಾರ ಸುಲಭವಾಗಿ ಹಿಂದಿಕ್ಕುವ ಸಾಧ್ಯತೆ ಇತ್ತು. ಆದರೆ ಈ ಅವಕಾಶ ಕಳೆದುಕೊಂಡ ಕಶ್ಯಪ್‌ ಸೋಲು ಅನುಭವಿಸಿದರು. ಎರಡನೇ ಗೇಮ್‌ ನಲ್ಲಿ ಕಶ್ಯಪ್‌ ಸುಲಭವಾಗಿ ಪೈಪೋಟಿ ನೀಡಿದರು. 6–1, 10–3, 15–8ರಲ್ಲಿ ಕ್ರಮವಾಗಿ ಮುನ್ನಡೆ ಹೊಂದಿದ್ದರು. ಬಳಿಕ ಆರು ನೇರ ಪಾಯಿಂಟ್ಸ್ ಗಿಟ್ಟಿಸಿ ಗೆಲುವು ತಮ್ಮದಾಗಿಸಿಕೊಂಡರು.

ನಿರ್ಣಾಯಕ ಪಂದ್ಯದಲ್ಲಿ ಜಿನ್‌ 9–3ರಲ್ಲಿ ಮುನ್ನಡೆ ಪಡೆದು ಗೆಲುವಿನ ಸೂಚನೆ ನೀಡಿದ್ದರು. ಆದರೆ ಕಶ್ಯಪ್ ಅಮೋಘ ಆಟದಿಂದ 11–11ರಲ್ಲಿ ಸಮಬಲ ಮಾಡಿಕೊಂಡು 13–11ರಲ್ಲಿ ಮುನ್ನಡೆ ಗಳಿಸಿದರು. ಬಳಿಕ ಬಿಗಿಯಾದ ರ್‍ಯಾಲಿಗಳಲ್ಲಿ ಕಶ್ಯಪ್‌ ಪಾಯಿಂಟ್ಸ್‌ ಗಿಟ್ಟಿಸುವ ಮೂಲಕ ಗೆಲುವು ಪಡೆದು ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

‘ಆಸ್ಟ್ರೇಲಿಯಾ ಓಪನ್‌ನಲ್ಲಿ ಫೈನಲ್‌ ತಲುಪಿದ್ದ ಆಟಗಾರರನ್ನು ಸೋಲಿಸಿದ್ದು ಖುಷಿ ನೀಡಿತು. ಎರಡು ಹಾಗೂ ಮೂರ ನೇ ಗೇಮ್‌ಗಳಲ್ಲಿ ದೀರ್ಘ ರ್‍ಯಾಲಿ ಆಡಿದ್ದ ರಿಂದ ಗೆಲುವು ಪಡೆಯಲು ಸಾಧ್ಯ ವಾಯಿತು’ ಎಂದು ಕಶ್ಯಪ್‌ ಹೇಳಿದ್ದಾರೆ.

‘ಶನಿವಾರದ ಪಂದ್ಯ ನನಗೆ ಸವಾಲಿನಿಂದ ಕೂಡಿದೆ. ಕೊರಿಯಾದ ಆಟಗಾರನ ವಿರುದ್ಧ ನಾನು ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದೇನೆ. ಆದರೆ ಸನ್‌ ವಾನ್‌ ಐದರಲ್ಲಿ ಜಯಗಳಿಸಿದ್ದಾರೆ. ಈ ಟೂರ್ನಿಯಲ್ಲಿ ನಾನು ಉತ್ತಮವಾಗಿ ಆಡಿದ್ದೇನೆ. ಈ ವಿಶ್ವಾಸ ನನ್ನ ಹುಮ್ಮಸ್ಸು ಹೆಚ್ಚಿಸಿದೆ’ ಎಂದು ಪಂದ್ಯದ ಬಳಿಕ ಕಶ್ಯಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT