ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಇರದಿದ್ದರೂ ತುಂಬಿತೀ ಕೆರೆ...!

Last Updated 12 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಈ ಬಾರಿ ವರುಣ ಏಕೋ ಮುನಿಸಿಕೊಂಡಿದ್ದಾನೆ. ಆತನ ಅವಕೃಪೆಯಿಂದಾಗಿ ಮಲೆನಾಡೂ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಭೀಕರ ಬರಗಾಲ ಆವರಿಸಿದೆ. ಇಂತಿಪ್ಪ ಪರಿಸ್ಥಿತಿಯಲ್ಲಿ ಬರದ ನಾಡು ಎನಿಸಿಕೊಂಡಿರುವ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿರುವ ಕೆರೆಗಳು ಮಾತ್ರ ಮೈದುಂಬಿ ನಿಂತಿವೆ.

ಎಲ್ಲೆಲ್ಲೂ ಜಲಕ್ಷಾಮ ತಲೆದೋರಿರುವಾಗ ಇಲ್ಲಿ ಇಂಥದ್ದೊಂದು ಜಲಕ್ರಾಂತಿಯಾಗಲು ಕಾರಣ ಸಿಂಗಟಾಲೂರ ಏತ ನೀರಾವರಿ ಯೋಜನೆ. ಈ ಯೋಜನೆಯಡಿ ಮೂರು ಏತ ಘಟಕಗಳು ಮತ್ತು ಕಾಲುವೆಗಳು ಸ್ಥಾಪನೆಯಾಗಿವೆ. ತುಂಗಭದ್ರಾ ಜಲಾಶಯದಿಂದ ನಾಲೆಗಳ ಮೂಲಕ ಕೆರೆಗಳನ್ನು ತುಂಬಿಸಿದ್ದರಿಂದ ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಮೂರು ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಐತಿಹಾಸಿಕ ವಿಕ್ಟೋರಿಯಾ ಮಹಾರಾಣಿ ಕೆರೆ ಕೂಡ ನಳನಳಿಸುತ್ತಿದೆ.  ಇತಿಹಾಸ ಮರುಸೃಷ್ಟಿಯಾಗಿ ಇಡೀ ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿದೆ.

ಡಂಬಳ ಕೆರೆ ತುಂಬಿದ್ದರಿಂದ ಅಂತರ್ಜಲ ಪುನಶ್ಚೇತನಗೊಂಡು, ಬತ್ತಿದ ಬಾವಿ, ಕೊಳವೆಬಾವಿಗಳು ಚಿಮ್ಮಿ, ಹಳ್ಳ ಸರೋವರಗಳಿಗೆ ಹರಿಯುತ್ತಿರುವುದರಿಂದ ಪ್ರಾಕೃತಿಕ ಸೊಬಗು  ಮೇಳೈಸಿದೆ. ಐತಿಹಾಸಿಕ, ಧಾರ್ಮಿಕವಾಗಿ ಪ್ರಸಿದ್ಧಿ ಪಡೆದು 10-11ನೇ ಶತಮಾನದ ಸುವರ್ಣ ಯುಗದಲ್ಲಿ ಕಲ್ಯಾಣ ಚಾಲುಕ್ಯರ 6ನೇ ವಿಕ್ರಮಾದಿತ್ಯನ ಕಾಲದಲ್ಲಿನ ಗತ ವೈಭವ ಸೃಷ್ಟಿಯಾಗಿತ್ತು. ಆದರೆ ನೀರಿನ ಅಭಾವದಿಂದ ಗ್ರಾಮದ ಪೇರಲ, ನೀರಲ, ಲಿಂಬೆ, ದಾಳಿಂಬೆ ತೋಟಗಳು ನಾಶವಾಗಿದ್ದವು.

ಇದೀಗ ಅವುಗಳಿಗೆ ಮತ್ತೆ ಜೀವಕಳೆ ತುಂಬುತ್ತಿದೆ. ಕಾಲುವೆ ಮೂಲಕ ಹರಿಸಲಾದ ನೀರಿನಿಂದ ಮುಂಡರಗಿ ತಾಲ್ಲೂಕಿನ ಡಂಬಳ, ಶಿರೋಳ, ತಾಮ್ರಗುಂಡಿ, ಜಂತ್ಲಿಶಿರೂರ, ಮುಂಡವಾಡ, ಹಿರೇವಡ್ಡಟ್ಟಿ, ಗದಗ ನಗರದ ಹೃದಯ ಭಾಗದ ಭೀಷ್ಮ ಕೆರೆ, ಲಕ್ಕುಂಡಿ, ಸಂಭಾಪೂರ ಕೆರೆ, ಕೊಪ್ಪಳ ತಾಲ್ಲೂಕಿನ ಕವಲೂರ ಕೆರೆಯನ್ನು ತುಂಬಿಸಲಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 11 ಕೆರೆಗಳಿದ್ದು, ಎಲ್ಲ ಕೆರೆಗಳ ಒಟ್ಟು ವಿಸ್ತಾರ 776.82 ಹೆಕ್ಟೇರ್. ಈ ಕೆರೆಗಳ ಪೈಕಿ ಈಗ 6 ಕೆರೆಗಳು ತುಂಬಿದ್ದು ಒಟ್ಟು 3127 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಪಡೆಯುವಂತಾಗಿದೆ. ಕಾಲುವೆಗೆ ಒಳಪಡುವ ಜಮೀನುಗಳಲ್ಲಿ ಹತ್ತಿ, ಜೋಳ, ಮೆಕ್ಕೆಜೋಳ, ಈರುಳ್ಳಿ, ಶೇಂಗಾ, ಮೆಣಸಿನಕಾಯಿ ಸೇರಿದಂತೆ ಹಲವಾರು ಬೆಳೆಗಳಿಗೆ ಈಗ ಈ ನೀರೇ ಜೀವನಾಧಾರ.

ಈ ಕೆರೆಗಳ ನೀರಿನಿಂದ ರೈತರ ಜಮೀನುಗಳಿಗೆ ಸದ್ಯ ನೀರು ಹರಿಸುತ್ತಿಲ್ಲ. ಅಂತರ್ಜಲ ಮಟ್ಟ ಹೆಚ್ಚಿಸಲು, ಜಾನುವಾರುಗಳಿಗೆ ನೀರುಣಿಸಲು ಸಹಾಯಕವಾಗಿದೆ. ಮುಂದಿನ ದಿನಗಳಲ್ಲಿ ಬಿಂಕದಕಟ್ಟಿ, ಕಳಸಾಪೂರ, ಹುಲಕೋಟಿ, ಕುತರ್ಕೋಟಿ, ಹಿರೇಹಂದಿಗೋಳ, ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಕುರಿತು ನೀರಾವರಿ ಇಲಾಖೆ ಪ್ರಸ್ತಾವ ಸಲ್ಲಿಸಿದೆ.

ಯೋಜನೆ ಹಿನ್ನೆಲೆ
ಮುಂಡರಗಿ ತಾಲೂಕಿನಲ್ಲಿ ದಶಕದಿಂದ ಮಳೆ ಅಭಾವ. ಆದ್ದರಿಂದ  ಈ ಭಾಗದ ಪ್ರದೇಶಗಳನ್ನು ಸೂಕ್ಷ್ಮ ನೀರಾವರಿಗೆ ಒಳಪಡಿಸಿ 94,993 ಎಕರೆ ಹೆಚ್ಚುವರಿ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಯೋಜನೆ ರೂಪಿಸಲಾಯಿತು. ಇದರ ಪರಿಣಾಮವಾಗಿ ಬಲ ಮತ್ತು ಎಡ ಭಾಗದ ಸುಮಾರು 48 ಎಕರೆ ಪ್ರದೇಶಕ್ಕೆ ‘ಹರಿವು ನೀರಾವರಿ’ ಹಾಗೂ ಎಡಭಾಗದ  ಸುಮಾರು ಎರಡು ಎಕರೆ ಪ್ರದೇಶಕ್ಕೆ ‘ಸೂಕ್ಷ್ಮ ನೀರಾವರಿ’ ಕಲ್ಪಿಸಲಾಗಿದೆ. ಈ ಯೋಜನೆ ಫಲವಾಗಿ ಬಳ್ಳಾರಿ, ಗದಗ, ಕೊಪ್ಪಳ ಜಿಲ್ಲೆಗಳ ಒಟ್ಟು 2 ಲಕ್ಷದ 65 ಸಾವಿರದ 229 ಎಕರೆ ಪ್ರದೇಶಕ್ಕೆ ನೀರಾವರಿ ನೀಡಿದಂತಾಗಿದೆ. ಇದೊಂದು ರೀತಿಯಲ್ಲಿ ದಾಖಲೆ ಎನ್ನುತ್ತಾರೆ ಶಿರಹಟ್ಟಿ ಕ್ಷೇತ್ರದ ಶಾಸಕ ಮತ್ತು ಜಲ ಸಂಪನ್ಮೂಲ ಇಲಾಖೆಯ ಸಂಸದೀಯ ಕಾಯದರ್ಶಿ ರಾಮಕೃಷ್ಣ ದೊಡ್ಡಮನಿ.

‘1992 ರಿಂದ 2013 ರವರೆಗೆ 21 ವರ್ಷಗಳ ಅವಧಿಯಲ್ಲಿ 12,941 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿರುತ್ತದೆ.  ಆದರೆ ಈಗ, ಅಂದರೆ 2013–2016ರ ಅಕ್ಟೋಬರ್‌ವರೆಗೆ ಮೂರೇ ವರ್ಷದಲ್ಲಿ ಒಟ್ಟು ₹813.68 ಕೋಟಿ ಆರ್ಥಿಕ ಪ್ರಗತಿ ಹಾಗೂ 35,440 ಎಕರೆ ಭೌತಿಕ ಪ್ರಗತಿಯನ್ನು ಸಾಧಿಸಲಾಗಿದೆ.

ಈ ಮೂಲಕ ಶಾಶ್ವತ ಬರದ ನಾಡಿನ ಹಣೆಪಟ್ಟಿಯನ್ನು ದೂರ ಮಾಡಲಾಗಿದೆ. ಎರಡು ದಶಕದಿಂದ ಕುಂಟುತ್ತ ಸಾಗಿದ್ದ ಯೋಜನೆಗೆ ಈ ಕಾಯಕಲ್ಪ ದೊರೆತಿದ್ದು ರೈತರಲ್ಲಿ ಆತ್ಮವಿಶ್ವಾಸ ಮೂಡಿದೆ’ ಎನ್ನುತ್ತಾರೆ. ‘ಇದೇ ರೀತಿ ಪ್ರತಿಯೊಂದು ಗ್ರಾಮದಲ್ಲೂ ಯೋಜನೆ ಕೈಗೊಂಡು ರೈತರಿಗೆ ಉಪಯೋಗ ಆಗುವಂತೆ ಮಾಡಿದರೆ ಒಳಿತು’ ಎನ್ನುತ್ತಾರೆ ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾಯದರ್ಶಿ ವಿಠ್ಠಲ ಗಣಾಚಾರಿ.

ಈಜುಪಟುಗಳಿಗೆ ಕಲಿಕೆಯ ತಾಣ
ನಗರ ಪ್ರದೇಶದ ಸೀಮಿತ ಜಾಗದ ಈಜುಕೊಳದಲ್ಲಿ ಹಣ ಪಾವತಿಸಿ ಈಜಾಡುವುದರಿಂದ ಮನಸ್ಸಿಗೆ ಆನಂದ ಸಿಗುವುದಿಲ್ಲ ಎನ್ನುವ ಭಾವನೆಯಿದೆ. ಆದರೆ ಕಪ್ಪತ್ತಗುಡ್ಡದ ಪ್ರಕೃತಿಯ ಸೊಬಗಿನಲ್ಲಿರುವ ಗ್ರಾಮದ ವಿಕ್ಟೋರಿಯಾ ಮಹಾರಾಣಿ ಕೆರೆ ತುಂಬಿ 10–11 ಅಡಿ ನೀರು ಸಂಗ್ರಹ ಆಗಿದ್ದರಿಂದ ಇದು ಈಜುಪಟುಗಳಿಗೆ,  ಈಜು ಕಲಿಯುವವರಿಗೆ ಉತ್ತಮ ತಾಣವಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗಂತೂ ಇದು ಅಚ್ಚುಮೆಚ್ಚಿನ ತಾಣವಾಗಿದೆ.
‘ಮಳೆ ಕೈಕೊಟ್ಟಿದ್ದರಿಂದ ಮಕ್ಕಳಿಗೆ ಈಜಲು ಕೆರೆಗಳೇ ಇರಲಿಲ್ಲ. ಈಗ ಇಂಥದ್ದೊಂದು ಯೋಜನೆಯಿಂದ ಮಕ್ಕಳಲ್ಲಿ ಅತ್ಯುತ್ಸಾಹ ತುಂಬಿದೆ’ ಎನ್ನುತ್ತಾರೆ ಶಾಲಾ ವಿದ್ಯಾರ್ಥಿಗಳಾದ ನಾಗರಾಜ ಜಂತ್ಲಿ ಹಾಗೂ ಮುಜಾಮಿಲ್ ತಾಂಭೋಟಿ.

ಈಗ ಇದೊಂದು ಪ್ರವಾಸಿ ತಾಣವಾದಂತೆ ಭಾಸವಾಗುತ್ತಿದೆ. ಪಕ್ಷಿಗಳೂ ವಲಸೆ ಬರುತ್ತಿವೆ. ಸಮೀಪದಲ್ಲಿಯೇ ಪ್ರಸಿದ್ಧ ದೊಡ್ಡ ಬಸವೇಶ್ವರ ದೇವಸ್ಥಾನ, ಜಗದ್ಗುರು ತೋಂಟದಾರ್ಯ ಮಠ, ಸೋಮೇಶ್ವರ ದೇವಸ್ಥಾನ, ಮರಳಸಿದ್ದೇಶ್ವರ ದೇವಸ್ಥಾನ ಜಮಲಶಾವಲಿ ದುರ್ಗ, ಪ್ರವಾಸಿ ಮಂದಿರ, ಜಪದ ಬಾವಿ, ಡಂಬಳ ಕೋಟೆ ಸೇರಿದಂತೆ ಐತಿಹಾಸಿಕ ತಾಣಗಳು ಇರುವುದರಿಂದ ಇಲ್ಲಿ ಬರುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ.

‘ಇವೆಲ್ಲವನ್ನೂ ಗಮನಿಸಿದರೆ ಇದೊಂದು ಪ್ರವಾಸಿ ತಾಣ ಆಗುವಲ್ಲಿ ಅಚ್ಚರಿಯಿಲ್ಲ. ವಿದೇಶಿಗರನ್ನೂ ಈಗಾಗಲೇ ಈ ಸ್ಥಳ ಆಕರ್ಷಿಸಿದ್ದು, ಅವರೂ ಭೇಟಿ ನೀಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಮನಸ್ಸು ಮಾಡಿ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು’ ಎನ್ನುತ್ತಾರೆ ಗ್ರಾಮದ ಬಾಬುಸಾಬ ಸರ್ಕವಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT