ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಟ್ಟಿ ಕಾಪಿ’ಯ ಹೆಗ್ಗಳಿಕೆ...

Last Updated 13 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಇಪ್ಪತ್ತೆರಡನೆ ವಯಸ್ಸಿನಲ್ಲಿ ಓದಿಗೆ ತಿಲಾಂಜಲಿ ನೀಡಿ ಕಾಫಿ ವಹಿವಾಟಿಗೆ ಕಾಲಿಟ್ಟ ಯು. ಎಸ್‌. ಮಹೇಂದರ್‌, ಎರಡು ದಶಕಗಳಲ್ಲಿ ಅನೇಕ ಏಳುಬೀಳುಗಳನ್ನು ಭಂಡ ಧೈರ್ಯದಿಂದ ಎದುರಿಸಿ ‘ಹಟ್ಟಿ ಕಾಪಿ’ ಬ್ರ್ಯಾಂಡ್‌ಗೆ ಜಾಗತಿಕ ಮನ್ನಣೆ ಗಳಿಸಿಕೊಡುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇರಿಸಿರುವುದರ  ಯಶೋಗಾಥೆಯನ್ನು ಕೇಶವ ಜಿ. ಝಿಂಗಾಡೆ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಕೆಲ ವರ್ಷಗಳ ಹಿಂದೆ ಬೈಕ್‌ಗೆ ಪೆಟ್ರೋಲ್‌ಗೂ ದುಡ್ಡಿಲ್ಲದೆ ತಲೆತುಂಬ ಉದ್ದಿಮೆದಾರನಾಗುವ ಕನಸುಗಳನ್ನು ತುಂಬಿಕೊಂಡು ಎಂ.ಜಿ ರಸ್ತೆಯ ಉದ್ದಕ್ಕೂ  ತಿರುಗಾಡುತ್ತಿದ್ದ ಯು. ಎಸ್‌.    ಮಹೇಂದರ್‌ (44), ಮೊನ್ನೆ ‘ಪ್ರಜಾವಾಣಿ’ ಕಚೇರಿಯಲ್ಲಿ ನನ್ನೆದುರು ಕುಳಿತು ಮಾತನಾಡುತ್ತ,  ಯಶಸ್ವಿ ಉದ್ದಿಮೆದಾರನಾಗಿ ಬೆಳೆದು ಬಂದ  ಬಗ್ಗೆ  ಯಾವುದೇ ಹಮ್ಮು–ಬಿಮ್ಮು ಇಲ್ಲದೆ ವಿನಯಪೂರ್ವಕವಾಗಿ ವಿವರ ನೀಡುತ್ತಿದ್ದರು. ಕಾಫಿ ಉದ್ಯಮದಲ್ಲಿ ಹಲವು ಏಳುಬೀಳುಗಳನ್ನು ಕಂಡು, ಯಾವೊತ್ತೂ ಧೃತಿಗೆಡದೆ ಹಿಡಿದ ಛಲ ಬಿಡದೆ ಯಶಸ್ವಿ ಉದ್ದಿಮೆದಾರನಾಗಿರುವ ಅವರ ಸಾಧನೆ ಇತರರಿಗೆ ಸ್ಫೂರ್ತಿಯ ಸೆಲೆಯಾಗಿದೆ.

ಬ್ರಿಗೇಡ್‌ ರಸ್ತೆಯಲ್ಲಿ ಹಟ್ಟಿ ಕಾಪಿಯ  48ನೆ ಮಳಿಗೆ ಆರಂಭಿಸುವ ಸಂಭ್ರಮದಲ್ಲಿದ್ದ ಅವರು,  ಕಾಫಿ ಉದ್ದಿಮೆ ಆರಂಭಿಸುವ ಕನಸು ನನಸಾಗಿಸುವ ಉಮೇದಿನಿಂದ ಬೆಂಗಳೂರಿಗೆ ಬಂದು ಅನೇಕ ಅಡಚಣೆಗಳನ್ನು ಎದುರಿಸಿ ನಗರದ ಜನತೆಗೆ ‘ಹಟ್ಟಿ ಕಾಪಿ’ಯ ರುಚಿ ಪರಿಚಯಿಸಿ ಯಶಸ್ಸಿನ ಒಂದೊಂದೇ ದೃಢ ಹೆಜ್ಜೆ ಇಡುತ್ತಿದ್ದಾರೆ.

ಅಜ್ಜನ ಕಾಲದಲ್ಲಿ ಕಾಫಿ ತೋಟ ಹೊಂದಿದ್ದ ಮಹೇಂದರ್‌ ಕುಟುಂಬಕ್ಕೆ  ಕಾರಣರಾಂತರಗಳಿಂದ ತೋಟ ಕೈತಪ್ಪಿತ್ತು. ಹಾಸನದಲ್ಲಿ ಬಿಎಸ್‌ಸಿ ಎಲೆಕ್ಟ್ರಾನಿಕ್ಸ್‌ ಓದನ್ನು 2ನೆ ವರ್ಷದಲ್ಲಿಯೇ ಮೊಟಕು ಗೊಳಿಸಿ ಕಾಫಿ ವ್ಯಾಪಾರಕ್ಕೆ ಇಳಿದಿದ್ದರು. ಅಪ್ಪ ಓದಲು ಒತ್ತಾಯಿಸಿದ್ದರೂ ಅದನ್ನು ಕಿವಿಗೆ ಹಾಕಿಕೊಳ್ಳದೆ ಕಾಫಿ ವಹಿವಾಟಿನಲ್ಲಿ ಬದುಕು ಕಟ್ಟಿಕೊಳ್ಳುವ ಕನಸು ನನಸಾಗಿಸಲು ಓದಿಗೆ ತಿಲಾಂಜಲಿ ನೀಡಿದ್ದರು.

ಎಸ್ಟೇಟ್‌ಗಳಿಂದ ಕಾಫಿ  ಸಂಗ್ರಹಿಸಿ ಬೆಂಗಳೂರಿನ   ರಫ್ತುದಾರರಿಗೆ ಮಾರಾಟ ಮಾಡುವ ಮೂಲಕ  ಉದ್ದಿಮೆ ವಹಿವಾಟಿಗೆ ಮುನ್ನುಡಿ ಬರೆದಿದ್ದರು. ಮನೆಯ ಪಕ್ಕದಲ್ಲಿಯೇ ಇದ್ದ ನಿರುದ್ಯೋಗಿ ಮಹಾಲಿಂಗೇಗೌಡ್ರ ಅವರನ್ನು ಜತೆ ಮಾಡಿಕೊಂಡು ಕಾಫಿ ಟ್ರೇಡಿಂಗ್‌ ಶುರು ಹಚ್ಚಿಕೊಂಡಿದ್ದರು.

ಕಾಫಿ ಸಂಗ್ರಹಿಸಿ ಸಿಗುತ್ತಿದ್ದ ಅಲ್ಪಸ್ವಲ್ಪ ಲಾಭಕ್ಕೆ ಮಾರಾಟ ಮಾಡುವುದು ಸಣ್ಣಗೆ ನಡೆದಿತ್ತು. ಬಿಸಿ ರಕ್ತದ ಇಬ್ಬರಿಗೂ ಸಹಜವಾಗಿಯೇ ಹೆಚ್ಚು ಲಾಭ ಮಾಡುವ  ಹುಚ್ಚು ತಲೆಗೇರಿತ್ತು. ಕಾಫಿ ಸಂಗ್ರಹಿಸಿ ಇಟ್ಟುಕೊಂಡು ಗರಿಷ್ಠ ಬೆಲೆ ಬಂದಾಗ ಮಾರಾಟ ಮಾಡಲು ತೊಡಗಿದರು. ಅದೊಂದು ಜೂಜಾಟವಾಗಿತ್ತು. 

22ನೆ ವರ್ಷಕ್ಕೆ  ಕಾಫಿ ಮಾರಾಟ ಆರಂಭಿಸಿದ್ದ  ಇವರ ಮನಸ್ಸಿನ  ಒಂದು ಮೂಲೆಯಲ್ಲಿ ನೀನು ಮಾಡುತ್ತಿರುವುದು  ಸರಿಯಲ್ಲ ಎನ್ನುವ ಅಪರಾಧಿ ಮನೋಭಾವ ಕಾಡುತ್ತಿತ್ತು.  ಲಾಭದಾಸೆ ಮುಂದೆ ಅದು ಗೌಣವಾಗಿತ್ತು. ಹಠಾತ್ತಾಗಿ  ಬೆಲೆ ಕುಸಿದು ವಹಿವಾಟಿನಲ್ಲಿ ದೊಡ್ಡ ಪೆಟ್ಟು ತಿಂದಾಗ,  ಕೈಯಲ್ಲಿದ್ದ ಹಣವೆಲ್ಲ ಕರಗಿ ಹೋಗಿತ್ತು.

ಬದುಕಿನಲ್ಲಿ ದೊಡ್ಡ ಪಾಠವೂ ಕಲಿತಾಗಿತ್ತು.  ಹಣ ಕಳೆದುಕೊಂಡಿದ್ದಕ್ಕೆ ವ್ಯಥೆ ಪಡುತ್ತ ಕಾಲ ದೂಡುವ ಬದಲಿಗೆ ಈ ಸೋಲನ್ನೇ ಹೊಸ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಲು ಮುಂದಾದರು.

ವಹಿವಾಟಿನ ಮಗ್ಗಲು ಬದಲಿಸಲು ಇದೇ ಸರಿಯಾದ ಸಮಯ ಎಂದುಕೊಂಡು ಶಾಶ್ವತವಾಗಿ ಏನನ್ನಾದರೂ ಮಾಡಬೇಕೆಂದು ಬೆಂಗಳೂರ್‌ ಬಸ್‌ ಹತ್ತಿದರು. ಕೈ ಬರಿದಾಗಿತ್ತು. ಆದರೆ, ಛಲ ಮಾತ್ರ ಬತ್ತಿರಲಿಲ್ಲ. ಬಳಿಯಲ್ಲಿದ್ದ ₹ 2,000 ಮತ್ತು ತಾಯಿ ಬಳಿ ಇದ್ದ ಅಪ್ಪನ ಪಿಂಚಣಿಯ ₹ 1.85 ಲಕ್ಷ ಹಣವನ್ನು ತಾಯಿಯಿಂದ ಪಡೆದುಕೊಂಡು ಹೊಸ ಬದುಕು ಕಟ್ಟಿಕೊಳ್ಳಬೇಕೆಂಬ ಉಮೇದಿನಲ್ಲಿ ‘ಬಂದದ್ದೆಲ್ಲ ಬರಲಿ, ದೇವರ ದಯೆ ಇರಲಿ’ ಎಂದು ಭಂಡ ಧೈರ್ಯದಿಂದ ಬೆಂಗಳೂರ್‌ ಬಸ್‌ ಹತ್ತಿದರು. 

ಬೆಂಗಳೂರಿನಲ್ಲಿದ್ದ ಕಾಫಿ ಉದ್ದಿಮೆಯ ಸ್ನೇಹಿತರಾದ ಶ್ರೀಕಾಂತ್‌, ಆಗ ಟಾಟಾ ಮತ್ತು ನೆಸ್ಲೆಗೆ ಕಾಫಿ ಬೀಜ ಹುರಿದು ಪೂರೈಕೆ ಮಾಡುತ್ತಿದ್ದರು. ಇವರ ಉತ್ಸಾಹಕ್ಕೆ ಬೆನ್ನೆಲುಬು ಆಗಿ ನಿಂತ ಶ್ರೀಕಾಂತ್‌, 2003ರಲ್ಲಿ ತಮ್ಮ ಬಳಿ ನೆಸ್ಲೆ ವಹಿವಾಟು ಇಟ್ಟುಕೊಂಡು ಮಹೇಂದರ್‌ ಅವರಿಗೆ ಟಾಟಾ ಕಾಫಿ ಪೂರೈಸುವ ಸಣ್ಣ ಕಾರ್ಖಾನೆಯನ್ನು ಒಪ್ಪಿಸಿ ತಮ್ಮ ವಹಿವಾಟನ್ನು ಮೈಸೂರಿಗೆ  ಸ್ಥಳಾಂತರಿಸಿದರು.

ಟಾಟಾ ಕಾಫಿಯ ಆರ್ಡ್‌ರ್‌ ಸಿಗುವ ಹುಮ್ಮಸ್ಸು, ಉದ್ದಿಮೆ ಬೆಳೆಸುವ ಉತ್ಸಾಹದಲ್ಲಿದ್ದ ಮಹೇಂದರ್‌ ಅವರಿಗೆ  ತಕ್ಷಣಕ್ಕೆ ಆರ್ಡರ್‌ ಸಿಗದೇ ಹೋದಾಗ ಆಕಾಶವೇ  ತಲೆ ಮೇಲೆ ಕಳಚಿ ಬಿದ್ದಂತಾಗಿತ್ತು. ದೃತಿಗೆಡದ ಅವರು ತಮ್ಮ ಪ್ರಯತ್ನ ಬಿಟ್ಟಿರಲಿಲ್ಲ. ಎರಡೂವರೆ ವರ್ಷಗಳ ಕಾಲ  ತುಂಬ ಕಷ್ಟಪಟ್ಟರು. ಹಣ ಇದ್ದಾಗ  ಬಳಿಯಲ್ಲಿದ್ದ ಸ್ನೇಹಿತರು ಈಗ ದೂರವಾಗಿದ್ದರು.  ತಾಯಿಯ ಇಬ್ಬರು ಸೋದರಿಯರ ಬೆಂಬಲ ಮಾತ್ರ ಇದ್ದೇ ಇತ್ತು.

ಕೊನೆಗೂ ಟಾಟಾ ಸಂಸ್ಥೆಯವರು ಬಾದಾಮ್‌ ಪ್ರೀಮಿಕ್ಸ್‌ ಕಾಫಿ ಪುಡಿ ಪೂರೈಸಲು ನೀಡಿದ ಆರ್ಡರ್‌ ಇವರ ಬದುಕಿನ ಬಂಡಿಯ ಗತಿಯನ್ನೇ ಬದಲಿಸಿತು. ಮೊದಲಿಗೆ 35 ಕೆಜಿಯ ಆರ್ಡರ್‌ ಸಿಕ್ಕಿತ್ತು. ಆ ಆರ್ಡರ್‌ ಕಾಪಿ ಇವರ ಬಳಿ ಇನ್ನೂ ಜೋಪಾನವಾಗಿ ಇದೆ.

ಸಂಕಷದ ದಿನಗಳಲ್ಲಿ ಸ್ನೇಹಿತರು ದೂರವಾಗಿದ್ದರಿಂದ  ಛಲ ಇನ್ನಷ್ಟು  ಗಟ್ಟಿಗೊಂಡಿತ್ತು. ಎರಡೂವರೆ ವರ್ಷ ತುಂಬ ಕಷ್ಟಪಟ್ಟರು. ದೊಡ್ಡ, ದೊಡ್ಡ ಹೋಟೆಲ್‌ಗಳಿಗೆ ಕಾಫಿ ಪೂರೈಸಲು ಮುಂದಾದರೆ ಸಕಾಲಕ್ಕೆ ಹಣ ದೊರೆಯುತ್ತಿರಲಿಲ್ಲ, ದರ್ಶಿನಿಗಳಿಗೆ ಫಿಲ್ಟರ್ ಕಾಫಿ ಪೂರೈಸಲು ಮುಂದಾದರೆ ಅಲ್ಲಿಯೂ ಪರಿಸ್ಥಿತಿ ಪ್ರತಿಕೂಲವಾಗಿತ್ತು.

ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ ಕಾಫಿ ಪೂರೈಸಲು ಅವಕಾಶ ಮಾಡಿಕೊಟ್ಟ  ಮಾಲೀಕರು, ನಿಮ್ಮ ಕಾಫಿ ರುಚಿಯಾಗಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಕೊಟ್ಟ ಮಾತಿಗೆ ತಕ್ಕಂತೆ ನಡೆಯದೆ ಹೋದಾಗ ಇವರಲ್ಲಿನ ಛಲ ಇನ್ನಷ್ಟು ಗಟ್ಟಿಗೊಂಡಿತು.

‘ಅವರು ಹಾಗೇ ಹೇಳಿದ್ದರಿಂದಲೇ ‘ಹಟ್ಟಿ ಕಾಪಿ’ ಜನ್ಮ ತಳೆಯಿತು. ಕಷ್ಟದ ಕಾಲದಲ್ಲಿ ದೂರವಾದ, ಕಾಫಿನೇ ರುಚಿಯಾಗಿಲ್ಲ ಎಂದು ಹೇಳಿದವರನ್ನು ನಾನು ಯಾವತ್ತೂ ದೂಷಿಸುವುದಿಲ್ಲ, ಅವರ ಇಂತಹ ವರ್ತನೆಯೇ ನಾನು ಈ ಉದ್ದಿಮೆಯಲ್ಲಿ ಗಟ್ಟಿಯಾಗಿ ನೆಲೆಯೂರಲು ಕಾರಣವಾಯಿತು’ ಎಂದು ಮಹೇಂದರ್‌ ಹೇಳುತ್ತಾರೆ.

ಇದೇ ಸಮಯದಲ್ಲಿ ಫಿಲ್ಟರ್‌ ಕಾಫಿ ಮಾಡಬೇಕು, ರೀಟೇಲ್‌ ಮಳಿಗೆ ಮೂಲಕ ಕಾಫಿ ಮಾರಾಟ ಮಾಡಬೇಕು ಎನ್ನುವ ಆಸೆ ಮೊಳಕೆ ಒಡೆದಿತ್ತು. ಅದೇ ಹೊತ್ತಿಗೆ ಎಂಟಿಆರ್‌ನಿಂದ ನಿವೃತ್ತರಾಗಿದ್ದ ಲಕ್ಷ್ಮಣ ಸ್ವಾಮಿ ಇವರನ್ನು ಕೂಡಿಕೊಂಡರು, ಸ್ವಾಮಿ, ವೆಂಕಟರಮಣಗೌಡ್ರು ಮತ್ತು ಮಹೇಂದರ್‌ ಸೇರಿ ಫಿಲ್ಟರ್‌ ಕಾಫಿ ಮಳಿಗೆ ಪರಿಕಲ್ಪನೆಯನ್ನು ಗ್ರಾಫಿಕ್‌ ವಿನ್ಯಾಸಕಾರ ರಾಜೇಶ್‌ ಅವರ ಮುಂದಿಟ್ಟರು. ಅವರು ಪಟ್ಟಿ ಮಾಡಿದ್ದ ಹತ್ತು ಹೆಸರು ಮತ್ತು ಲಾಂಛನಗಳ ಪೈಕಿ ಇವರಿಗೆ ‘ಹಟ್ಟಿ ಕಾಪಿ ’ ತುಂಬ ಇಷ್ಟವಾಯಿತು.

ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು ಸಮರ್ಥವಾಗಿ ಬಿಂಬಿಸುವ ಹಟ್ಟಿ ಕಾಪಿಗೆ ಮೂವರು ಸಮ್ಮತಿಯ ಮುದ್ರೆ ಒತ್ತಿದರು. 2009ರ ನವೆಂಬರ್‌ 29ರಂದು  ಗಾಂಧಿ ಬಜಾರ್‌ನಲ್ಲಿ 30 ಚದರ ಅಡಿಯ ಮಳಿಗೆಯಲ್ಲಿ  ₹ 5 ಫಿಲ್ಟರ್‌ ಕಾಪಿ ಮಳಿಗೆ ತೆರೆಯಲಾಯಿತು. ದಿನಕ್ಕೆ 300 ಕಾಪಿ ಮಾರಾಟ ಮಾಡಿದರೆ ವಹಿವಾಟು ಲಾಭದಾಯಕ ಎನ್ನುವ ಆಲೋಚನೆ ಫಲ ನೀಡಿತ್ತು. ಗ್ರಾಹಕರಿಗೆ ತುಂಬ ಮೆಚ್ಚಿಗೆಯಾಗಿ ‘ಹಟ್ಟಿ ಕಾಪಿ’ ಭಾರಿ ಜನಪ್ರಿಯತೆ ಪಡೆಯಿತು.

ಈ ಜನಪ್ರಿಯತೆ ಅನೇಕರಲ್ಲಿ ಹೊಟ್ಟೆಕಿಚ್ಚಿಗೆ ಕಾರಣವಾಗಿ, ರಾಜಕೀಯ ಒತ್ತಡ ತಂದು, ಲೈಸನ್ಸ್‌ ನವೀಕರಣ ಆಗದಂತೆ ನೋಡಿಕೊಂಡಿದ್ದರಿಂದ ಮಳಿಗೆ ಬಾಗಿಲು ಹಾಕಬೇಕಾಯಿತು. ಆನಂತರ ಕಪಾಲಿ, ನವರಂಗ ಥೇಟರ್‌ ಬಳಿ, ಮಂತ್ರಿ ಸ್ಕ್ವೇರ್‌ನಲ್ಲಿ ಆರಂಭಿಸಿದ ಮಳಿಗೆಗಳು ಕಾಫಿ ಪ್ರಿಯರಿಗೆ ಹಟ್ಟಿ ಕಾಪಿ ರುಚಿ ಪರಿಚಯಿಸಿ ವಹಿವಾಟನ್ನು ಲಾಭದಾಯಕವಾಗಿ ಮುನ್ನಡೆಸಿದವು.

‘2011ರಲ್ಲಿ  ಒಂದು ದಿನ ಸಾಫ್ಟ್‌ವೇರ್ ದೈತ್ಯ ಸಂಸ್ಥೆ ಇನ್ಫೊಸಿಸ್‌ನಿಂದ ಆಹ್ವಾನ ಬರುತ್ತದೆ. ಸಂಸ್ಥೆಯ ಆವರಣದಲ್ಲಿ ಹಟ್ಟಿ ಕಾಪಿ ಮಳಿಗೆ ತೆರೆಯುವ ಅವಕಾಶ ಅದಾಗಿತ್ತು. ಸಂಸ್ಥೆ ಏರ್ಪಡಿಸಿದ್ದ ‘ಬ್ಲೈಂಡ್ ಟೆಸ್ಟ್‌’ನಲ್ಲಿ  ‘ಬಿ ರೇಟಿಂಗ್‌’ ಪಡೆದರೆ ಮಾತ್ರ ಅನುಮತಿ ಸಿಗುವ ಸಾಧ್ಯತೆ ಇತ್ತು. ‘ಹಟ್ಟಿ ಕಾಪಿ’ ಎ ರೇಟಿಂಗ್ ಪಡೆಯಿತು. ವಾರದಲ್ಲಿಯೇ ಮಳಿಗೆ ಆರಂಭಿಸಲಾಯಿತು. ಈಗ ಸಿಸ್ಕೊ, ಕಾಗ್ನಿಜಂಟ್‌, ಡೆಲಾಯಿಟ್‌, ಮೈಕ್ರೊಸಾಫ್ಟ್‌, ಫ್ಲಿಪ್‌ಕಾರ್ಡ್‌, ಇಬೇ ಸಂಸ್ಥೆಗಳ ಫುಡ್‌ಕೋರ್ಟ್‌ನಲ್ಲಿಯೂ   ಹಟ್ಟಿ ಕಾಫಿ  ಪೂರೈಕೆ ಮಾಡಲಾಗುತ್ತಿದೆ. ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿಯೂ ಕಾಪಿ ಲಾಂಜ್‌ ಇದೆ’ ಎಂದು ಮಹೇಂದರ್‌ ಖುಷಿಯಿಂದ ಹೇಳುತ್ತಾರೆ.

ಗುಣಮಟ್ಟ ನಿಯಂತ್ರಣ ಸಮಿತಿಯು ಮಳಿಗೆಗಳ ಸ್ವಚ್ಛತೆ, ಕಾಪಿ ರುಚಿ ಬಗ್ಗೆ ನಿರಂತರ ನಿಗಾ ಇರಿಸಿರುತ್ತದೆ. ಮಹೇಂದರ್‌ ಅವರೂ ಮಳಿಗೆಗೆ ಭೇಟಿ ನೀಡಿದಾಗ ಮಾರಾಟದ ಬಗ್ಗೆ ಗಮನ ನೀಡಿದೆ ಗುಣಮಟ್ಟ, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇದೇ ಕಾರಣಕ್ಕೆ ವಿಲಾಸಿ ಕಾರುಗಳಲ್ಲಿ ಓಡಾಡುವವರೂ ಹಟ್ಟಿ ಕಾಪಿ ಹುಡುಕಿಕೊಂಡು ಬರುತ್ತಾರೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಉದ್ದಿಮೆ ಕುಟುಂಬದ ಹಿನ್ನೆಲೆಯಿಂದ ಬಂದಿರದಿದ್ದರೂ, ವಹಿವಾಟನ್ನು ಯಶಸ್ವಿಯಾಗಿ ಮುನ್ನಡೆಸುತ್ತ ಮ್ಯಾನೇಜ್‌ಮೆಂಟ್‌ ಮಂತ್ರ ಕರಗತ ಮಾಡಿಕೊಂಡಿರುವುದರ ಬಗ್ಗೆ ಮಾತನಾಡಿದ ಅವರು,  ‘ನಾನು ಬರೀ ಲೆಕ್ಕಾಚಾರ ಹಾಕ್ತಾ ಕುತ್ಕೊಳಿಲ್ಲ. ವಹಿವಾಟು ಆರಂಭಿಸಿ ಅದನ್ನು ಯಶಸ್ವಿಯಾಗಿ ಮುನ್ನಡೆಸುವ ಬಗ್ಗೆ ಕಾರ್ಯತಂತ್ರ ರೂಪಿಸುತ್ತ, ಗ್ರಾಹಕರಿಗೆ ರುಚಿಕರ ಫಿಲ್ಟರ್‌ ಕಾಪಿ ಒದಗಿಸುವ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿದ್ದೆ’ ಎಂದು ಹೇಳುತ್ತಾರೆ.

ಕಷ್ಟದ ದಿನಗಳಲ್ಲಿ ನೆರವಾದವರಿಗೆ ಈಗ ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಮಹಾಲಿಂಗೇಗೌಡ್ರು ಈಗಲೂ ಮಹೇಂದರ್‌ ಜತೆ ಇದ್ದಾರೆ.ಸಂಸ್ಥೆಯಲ್ಲಿ ಅವರಿಗೂ ಸಮಾನ ಪಾಲು ಬಂಡವಾಳ ಇದೆ. ತಂಡವಾಗಿ ಕೆಲಸ ಮಾಡಿ ಯಶಸ್ಸು ಕಾಣುವ ತತ್ವದಲ್ಲಿ ಮಹೇಂದರ್‌ ನಂಬಿಕೆ ಇರಿಸಿದ್ದಾರೆ.

ವ್ಯವಹಾರ ಜಾಣ್ಮೆ
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ರೂ 20ಕ್ಕೆ ಕಾಪಿ ಮಾರಾಟ ಮಾಡುವುದರ ಬಗ್ಗೆ ನಿಲ್ದಾಣದ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಡುವಲ್ಲಿಯೂ ಮಹೇಂದರ್‌ ತಮ್ಮ ವ್ಯವಹಾರಿಕ ಜಾಣ್ಮೆ ಮೆರೆದಿದ್ದಾರೆ. ವರಮಾನ  ಹಂಚಿಕೆ ಮಾದರಿಯಲ್ಲಿ ₹ 50ಕ್ಕೆ ಒಂದು ಕಪ್‌ ಕಾಪಿ ಮಾರಾಟ ಮಾಡಬೇಕೆಂಬ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿ, ಮಧ್ಯಮ ವರ್ಗದವರ ಮೆಚ್ಚಿನ ಪೇಯವನ್ನು ತಲಾ ಕಪ್‌ಗೆ ₹ 15ರಲ್ಲಿ  ಮಾರಾಟ ಮಾಡುವುದರಲ್ಲಿಯೇ ಹೆಚ್ಚು ಲಾಭ ಇದೆ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟಿದ್ದರು.  ಈಗ ಅಲ್ಲಿ ₹ 20ಕ್ಕೆ ಕಾಪಿ ಮಾರಾಟ ಮಾಡಲಾಗುತ್ತಿದೆ.

2014ರಲ್ಲಿ  ಭಾರತೀಯ ಕೈಗಾರಿಕಾ ಒಕ್ಕೂಟದಿಂದ (ಸಿಐಐ) ಉದಯೋನ್ಮುಖ ಉದ್ಯಮಿ   ಪ್ರಶಸ್ತಿಗೆ ಭಾಜನರಾಗಿರುವ ಮಹೇಂದರ್‌, ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಹಟ್ಟಿ ಕಾಪಿಯನ್ನು ಜಾಗತಿಕ ಬ್ರ್ಯಾಂಡ್‌ ಆಗಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುವೆ ಎನ್ನುವ ಮಾತು ಕೊಟ್ಟಿದ್ದರು. ಆ ಭರವಸೆ ಈಡೇರಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇರಿಸಿದ್ದಾರೆ. ‘ಅಕ್ಕ’ ಸಮ್ಮೇಳನದಲ್ಲಿ ಪಾನೀಯ ಪ್ರಾಯೋಜಕರಾಗಿ ಭಾಗವಹಿಸಿ ಜಾಗತಿಕ ವಹಿವಾಟಿಗೆ ವೇದಿಕೆ ಕಲ್ಪಿಸಿಕೊಂಡಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಮಳಿಗೆ ತೆರೆಯುವ ಮೂಲಕ,  ಅಮೆರಿಕದವರ ಕೈಯಲ್ಲಿ ದೇಶಿ ಕಾಪಿ ಮಾರಾಟ ಮಾಡುವ ಛಲವನ್ನು ಕಾರ್ಯಗತಗೊಳಿಸಲು ಹೊರಟಿದ್ದಾರೆ. ಸಿಂಗಪುರ, ದುಬೈಗಳಲ್ಲೂ ವಹಿವಾಟು ವಿಸ್ತರಿಸುವ ಆಲೋಚನೆಯೂ ಇದೆ.

ವಿಶೇಷತೆಗಳು...
ನಂದಿನಿಯ ಶುಭಂ ಹಾಲು  (ಹೈಫ್ಯಾಟ್‌ ಮಿಲ್ಕ್‌) ಬಿಸಲೇರಿ ಬ್ರ್ಯಾಂಡ್‌ ನೈಸರ್‌ನ ಸಂಸ್ಕರಿತ ನೀರು, ಸಂಸ್ಥೆಯೇ ತಯಾರಿಸುವ ಕಾಪಿ ಪುಡಿ ಬಳಸಿ ತಯಾರಿಸುವ ಹಟ್ಟಿ ಕಾಪಿಯನ್ನು ಹುಡುಕಿಕೊಂಡು ಹೋಗುವ ಕಾಫಿ ಪ್ರಿಯರು  ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.

ಕಾಪಿ ಗುಟುಕರಿಸುವಾಗ ಹೊಟ್ಟೆ ಭರ್ತಿ ಮಾಡಿಕೊಳ್ಳಲು ಬಯಸುವವರಿಗೆ ನುಚ್ಚಿನ ಉಂಡೆ, ಖಾರಾಭಾತ್‌, ಅಕ್ಕಿ ರೊಟ್ಟಿ ರೋಲ್‌, ಸಾವಯವ ಕಪ್‌  ಕೇಕ್‌ ಕೂಡ ಸಿಗುತ್ತವೆ. ತಿಂಡಿ ಪೂರೈಕೆಗೆ ಪರಿಸರ ಸ್ನೇಹಿ  ಅಡಿಕೆ ಹಾಳೆಯ ದೊಣ್ಣೆ, ಕಬ್ಬಿನ ಉಪ ಉತ್ಪನ್ನ ಬಗಾಸ್‌ನಿಂದ ತಯಾರಿಸಿದ ತಟ್ಟೆಗಳನ್ನು ಬಳಸಲಾಗುತ್ತಿದೆ.  ಸಸ್ಯಗಳಿಗೆ ಉಪಯುಕ್ತ ಗೊಬ್ಬರವಾಗಿರುವ ಕಾಪಿ ಗ್ರೌಂಡ್‌ ಅನ್ನು ಗ್ರಾಹಕರಿಗೆ ಉಚಿತವಾಗಿ ಪೂರೈಸಲಾಗುತ್ತಿದೆ. ‘ಹಟ್ಟಿ ಕಾಪಿ’ ಕಾಫಿಗೆ ಮಾದರಿಯಾಗಿರಬೇಕು.   ಫಿಲ್ಟರ್‌ ಕಾಪಿ ಎಲ್ಲರಿಗೂ ಸಿಗಬೇಕು’ ಎನ್ನುವುದು ಇವರ ಆಶಯವಾಗಿದೆ.

ನಿವೃತ್ತರಿಗೆ ಕೆಲಸ...
ಹಿರಿಯ ನಾಗರಿಕರು ಮತ್ತು  ಅಂಗವಿಕಲರಿಗೂ ಕೆಲಸ ಕೊಟ್ಟಿರುವುದು  ಇವರ ಇನ್ನೊಂದು ಹೆಗ್ಗಳಿಕೆಯಾಗಿದೆ.  ‘ಹಿರಿಯ ನಾಗರಿಕರಲ್ಲಿನ  ಪ್ರಾಮಾಣಿಕತೆ, ಕೆಲಸದ ಶ್ರದ್ಧೆ ಇತರರಿಗೆ ಮಾದರಿಯಾಗಬೇಕು. ಅವರಿಂದ ಕಲಿಯುವುದು ತುಂಬಾ ಇದೆ’ ಎನ್ನುತ್ತಾರೆ ಅವರು.

ಭಾಗಶಃ ದೃಷ್ಟಿಹೀನರು, ಅಂಗವಿಕಲರಿಗೆ   ತರಬೇತಿ ನೀಡಿ ಕೆಲಸಕ್ಕೆ  ನೇಮಿಸಿಕೊಂಡು ಅವರ ಬಾಳಿಗೆ ಆಸರೆಯಾಗಿದ್ದಾರೆ. ಗ್ರಾಮೀಣ ಸೊಗಡಿನ ‘ಹಟ್ಟಿ ಕಾಪಿ’ಯನ್ನು  ಜಾಗತಿಕ ಬ್ರ್ಯಾಂಡ್‌ ಆಗಿ ಬೆಳೆಸುವ ಮಹತ್ವಾಕಾಂಕ್ಷೆಯನ್ನು ನನಸಾಗಿಸಲು ಮಹೇಂದರ್‌, ತಮ್ಮ ತಂಡವನ್ನು ಜತೆಯಾಗಿ ತೆಗೆದುಕೊಂಡು ಹೋಗುವ ಮೂಲಕ ಒಂದೊಂದೇ ದೃಢ ಹೆಜ್ಜೆ ಇರಿಸುತ್ತಿದ್ದಾರೆ. ಮಾಹಿತಿಗೆ 95919 99439. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT